Latestಅಂಕಣ

ಪದ್ಮ ಪ್ರಭೆ / ಪ್ರಕಾಂಡ ಮಹಿಳಾವಾದಿ ದೇವಕಿ ಜೈನ್ – ಡಾ. ಗೀತಾ ಕೃಷ್ಣಮೂರ್ತಿ


ದೇವಕಿ ಜೈನ್ ಮೂಲತಃ ಅರ್ಥಶಾಸ್ತ್ರಜ್ಞೆ, ಮಹಿಳಾವಾದಿ. ವ್ಯಾವಹಾರಿಕ ಬುದ್ಧವಂತಿಕೆ ಹಾಗೂ ದಾರ್ಶನಿಕತೆಗಳು ಸಮ್ಮಿಳನಗೊಂಡ, ಮಹಿಳಾವಾದೀ ಅರ್ಥಶಾಸ್ತ್ರಜ್ಞೆ. ಭಾರತದಲ್ಲಿನ ಮಹಿಳಾ ಅಧ್ಯಯನ ಕ್ಷೇತ್ರದ ಆದ್ಯ ಪ್ರವರ್ತಕಿ, ಸಂಸ್ಥೆಗಳ ಸಂಸ್ಥಾಪಕಿ. ಅವರ ಕಾರ್ಯ ವ್ಯಾಪ್ತಿ ವೈಶಾಲ್ಯ, ಸ್ಥಾಪಿಸಿದ ಸಂಸ್ಥೆಗಳು, ಅಧ್ಯಯನ, ಅನುಭವಗಳ ಮೂಸೆಯಲ್ಲಿ ಮೂಡಿಬಂದ ಕೃತಿಗಳ ಬಾಹುಳ್ಯ, ಬಡ ಮಹಿಳಾ ವರ್ಗದ ಉನ್ನತೀಕರಣಕ್ಕೆ ಅವರು ಕೈಗೊಂಡ ಪ್ರಯತ್ನಗಳು ಅಚ್ಚರಿ ಮೂಡಿಸುತ್ತವೆ. ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿನ ಅವರ ಅನುಪಮ ಕೆಲಸಕ್ಕಾಗಿ ಭಾರತ ಸರ್ಕಾರ ಅವರಿಗೆ 2006 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ.

ದೇವಕಿ ಜೈನ್ ಅವರು ಜನಿಸಿದ್ದು ಮೈಸೂರಿನಲ್ಲಿ, 1933 ರಲ್ಲಿ. ತಂದೆ ಎಂ.ಎ.ಶ್ರೀನಿವಾಸನ್, ನಾಗರಿಕ ಸೇವೆಯಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಮೈಸೂರಿನ ಪ್ರಿನ್ಸ್‍ಲಿ ಸ್ಟೇಟ್‍ನಲ್ಲಿ ಸಚಿವರಾಗಿ ಕೆಲಸ ಮಾಡಿದವರು. ವಿದ್ಯೆಗೆ ಅತಿ ಹೆಚ್ಚಿನ ಪ್ರಾಮುಖ್ಯ ನೀಡುತ್ತಿದ್ದ ಕುಟುಂಬದಲ್ಲಿ ಹುಟ್ಟಿದ ದೇವಕಿ ತಮ್ಮ ಪ್ರಾರಂಭಿಕ ವಿದ್ಯಾಭ್ಯಾಸವನ್ನು ಭಾರತದ ಅತ್ಯುತ್ತಮ ಕಾನ್ವೆಂಟ್ ಶಾಲೆಗಳಲ್ಲಿ ಪಡೆದರು. ಮೈಸೂರು ವಿಶ್ವವಿದ್ಯಾಲಯದಿಂದ ಗಣಿತ ಮತ್ತು ಅರ್ಥಶಾಸ್ತ್ರದಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದು ಪದವಿ ಪೂರೈಸಿದರು. ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯುವುದೇ ಕಠಿಣವಾಗಿದ್ದ ಕಾಲದಲ್ಲಿ ಈಕೆ ಆಕ್ಸ್‍ಫರ್ಡಿನ ಸೇಂಟ್ ಆೈನೆಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ಪದವಿ ಪಡೆದು ದೆಹಲಿ ವಿಶ್ವವಿದ್ಯಾಲಯದಲ್ಲಿ 1969 ರ ವರೆಗೆ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ, ವಿದ್ಯಾವಂತ ಕುಟುಂಬದಲ್ಲಿ ಜನಿಸಿದ ಇವರಿಗೆ ಸಿಕ್ಕ ಶಿಕ್ಷಣ, ಕುಟುಂಬದ ಪ್ರೋತ್ಸಾಹ, ದೊರೆತ ಹೊರಗಿನ ಪ್ರಪಂಚದ ಸಂಪರ್ಕಗಳು ಇವರ ಎಲ್ಲ ಕೆಲಸಕ್ಕೆ ಪೂರಕವಾಗಿ ಒದಗಿ ಬಂದವು.

ಭಾರತದಲ್ಲಿ ಮಹಿಳಾ ಅಧ್ಯಯನವನ್ನು ಒಂದು ಶಿಸ್ತಿಗೆ ಒಳಪಡಿಸಿ, ತಮ್ಮ ಜೀವನದುದ್ದಕ್ಕೂ ಮಹಿಳಾವಾದಿಯಾಗಿ ಮಹಿಳಾಪರ ಗಟ್ಟಿ ದನಿಯಾದ ದೇವಕಿ ಜೈನ್ ಅವರು, ‘ನಾನು ತುಂಬಾ ಸಂಪ್ರದಾಯಿಕ ರೀತಿಯಲ್ಲಿ ಬೆಳೆದವಳು. ಮಹಿಳೆಯರಿಗಿರುವ ಎಲ್ಲ ನಿರ್ಬಂಧಗಳೂ ನನಗೂ ಇದ್ದವು. ನನಗೆ ಉದೋಗಕ್ಕೆ ಸೇರಬೇಕೆಂಬ ಹಂಬಲವಿತ್ತು. ನನ್ನಕ್ಕನಂತೆ ನಾನು ಮದುವೆಗೆ ತಯಾರಿರಲಿಲ್ಲ. ಆ ಬಗ್ಗೆ ನನ್ನ ಕುಟುಂಬದಿಂದ ನನಗೆ ಒತ್ತಡವಿರಲಿಲ್ಲ. ಹಾಗಾಗಿ ನಾನು ಹೋರಾಡಬೇಕಾಗಿ ಬರಲಿಲ್ಲ. ನನ್ನ ದಾರಿಯನ್ನು ನಾನೇ ನಿರ್ಧರಿಸಿದೆ.’ ಎನ್ನುತ್ತಾರೆ. ‘ಎಲ್ಲ ಶಾಲಾ ಮಕ್ಕಳಿಗೂ ಆ ಎಳೆಯ ವಯಸ್ಸಿನಲ್ಲಿ ಒಂದೊಂದು ಆಸೆಯಿರುತ್ತದೆ. ಹಾಗೆಯೇ ನನಗೆ ನ್ಯೂರೋ ಸರ್ಜನ್ ಆಗಬೇಕು ಎಂದು ಆಸೆ ಇತ್ತು. ಆದರೆ 1950 ರಲ್ಲಿ ಬೆಂಗಳೂರಿನ ಎಲ್ಲ ಉನ್ನತ ಶಿಕ್ಷಣ ಕಾಲೇಜುಗಳಲ್ಲಿ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳಿಬ್ಬರೂ ಒಟ್ಟಿಗೆ ವ್ಯಾಸಂಗ ಮಾಡಬೇಕಾಗಿತ್ತು. ಆದ್ದರಿಂದ, ಅದನ್ನು ಬಿಟ್ಟು ಮಹಿಳಾ ಕಾಲೇಜು ಸೇರಬೇಕಾಯಿತು. ಆ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಮಾತ್ರ ಪದವಿ ಕೊಡುತ್ತಿದ್ದರು. ಹಾಗಾಗಿ ನಾನು ಅರ್ಥಶಾಸ್ತ್ರ ಆಯ್ದುಕೊಂಡೆ’ ಎನ್ನುತ್ತಾರೆ.

ಆದರೆ ತಾನು ಹೇಗೆ ಮಹಿಳಾವಾದಿಯಾದೆ ಎಂಬ ಬಗ್ಗೆ ಅವರೇ ಅಚ್ಚರಿ ಪಡುತ್ತಾರೆ. 70 ರ ದಶಕದ ಮಧ್ಯ ಬಾಗದಲ್ಲಿ, ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್ ಎಂಬ ಮಹಿಳಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪಾಠ ಮಾಡುತ್ತಿದ್ದ ಸಂದರ್ಭ. 1975 ರಲ್ಲಿ ವಿಶ್ವ ಸಂಸ್ಥೆಯಲ್ಲಿ ಮಹಿಳೆಯರ ಬಗ್ಗೆ ನಡೆಯಲಿರುವ ಪ್ರಥಮ ಸಮ್ಮೇಳನದ ಸಂದರ್ಭದಲ್ಲಿ ಹೊರತರುವುದಕ್ಕಾಗಿ, ಭಾರತೀಯ ಮಹಿಳೆಯರ ದೃಷ್ಟಿಕೋನ ಮತ್ತು ಸಮಗ್ರ ಚಿತ್ರಣ ನೀಡುವ ‘ಭಾರತೀಯ ಮಹಿಳೆ’ ಎಂಬ ಪುಸ್ತಕ ಬರೆಯುವಂತೆ ಭಾರತ ಸರ್ಕಾರ ಅವರನ್ನು ಕೋರಿತು. ಅಲ್ಲಿಯವರೆಗೆ ಅವರು ಮಹಿಳಾ ಸಮಸ್ಯೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿರಲಿಲ್ಲ. ಆ ಪುಸ್ತಕ ಬರೆಯುವ ಅವಕಾಶ ಅವರಿಗೆ ಸಿಕ್ಕದ್ದೂ ಒಂದು ಆಕಸ್ಮಿಕವೇ! ‘ಸೆಮಿನಾರ್’ ಪತ್ರಿಕೆಯಲ್ಲಿ, ಪುರುಷರಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಪುರಾಣಗಳಲ್ಲಿನ ಮಹಿಳಾ ಪಾತ್ರಗಳ ಸಿದ್ಧ ಮಾದರಿಗಳನ್ನು ವಿರೋಧಿಸಿ, ಚರಿತ್ರೆಯಲ್ಲಿ ಈ ಸಿದ್ಧ ಪಾತ್ರಗಳಿಂದ ಭಿನ್ನವಾಗಿ ನಿಂತು ಹೋರಾಡಿದ ಮಹಿಳೆಯರ ಪಾತ್ರಗಳ ಉದಾಹರಣೆಗಳನ್ನು ನೀಡಿ ಲೇಖನವನ್ನು ಬರೆದಿದ್ದರು. ಈ ಲೇಖನ ‘ಭಾರತೀಯ ಮಹಿಳೆ’ ಎಂಬ ಮಹತ್ವದ ಪುಸ್ತಕ ಬರೆಯುವ ಅವಕಾಶವನ್ನು ಅವರಿಗೆ ತಂದುಕೊಡುವುದಕ್ಕೆ ಕಾರಣವಾಯಿತು. ಅಂತೆಯೇ ಅವರ ಜೀವನದ ಆಸಕ್ತಿಯ ಕೇಂದ್ರ ಕ್ಷೇತ್ರವನ್ನು ನಿರ್ಧರಿಸುವುದಕ್ಕೂ ಕಾರಣವಾಯಿತು. ಇದರಿಂದ, ಅರ್ಥಶಾಸ್ತ್ರದಲ್ಲಿ ಅಗಾಧ ಜ್ಞಾನ ಹಾಗೂ ಅಸೀಮ ಮಹಿಳಾಪರ ಕಾಳಜಿಗಳೆರಡೂ ಸೇರಿದ ದೇವಕಿ ಜೈನ್ ಎಂಬ ಒಬ್ಬ ಅಸಾಮಾನ್ಯ ಮಹಿಳಾವಾದೀ ಅರ್ಥಶಾಸ್ತ್ರಜ್ಞೆ ಭಾರತಕ್ಕೆ ದೊರೆತರು!

ಗಾಂಧಿಜೀ ಅವರ ಆದರ್ಶಗಳು ಮತ್ತು ತತ್ವಗಳು ಅವರ ಮೇಲೆ ಆಳವಾದ ಪ್ರಭಾವ ಬೀರಿದ್ದವು. ಹಾಗಾಗಿ, ಅವರ ಸಂಶೋಧನೆ ಮತ್ತು ಅಧ್ಯಯನಗಳೆಲ್ಲವೂ ನ್ಯಾಯ ಸಮ್ಮತತೆ, ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ, ಜನ ಕೇಂದ್ರಿತ ಅಭಿವೃದ್ಧಿ ಮತ್ತು ಮಹಿಳೆಯರ ಹಕ್ಕುಗಳನ್ನು ಕೇಂದ್ರವಾಗಿರಿಸಿಕೊಂಡು ಮಾಡಿದವುಗಳಾಗಿವೆ. ‘ಭಾರತೀಯ ಮಹಿಳೆ’ ಎಂಬ ಪುಸ್ತಕ ಬರೆಯುವಾಗ ಮಹಿಳಾ ಸಮಸ್ಯೆಗಳ ಬಗೆಗಿನ ಒಳನೋಟವನ್ನು ಗ್ರಹಿಸಲು ಅವರಿಗೆ ಸಾಧ್ಯವಾಯಿತು. ಮಹಿಳೆಯರ ಬಗ್ಗೆ ಮತ್ತು ಅವರ ಸಮಸ್ಯೆಗಳ ಬಗ್ಗೆ ಬರವಣಿಗೆ, ಉಪನ್ಯಾಸ, ಸಂವಹನ ಜಾಲ ಸೃಜನೆ, ನೇತೃತ್ವ ಮತ್ತು ಬೆಂಬಲಿಸುವ ಕಾರ್ಯಗಳಲ್ಲಿ ತೊಡಗಿಕೊಂಡರು. ಅವರ ಅಧ್ಯಯನ, ಚಿಂತನೆ ಮತ್ತು ವಿಶ್ಲೇಷಣಾ ಕೌಶಲಗಳು ಅವರ ಎಲ್ಲ ಕೆಲಸಗಳಲ್ಲಿ ಬಿಂಬಿತವಾಗಿದ್ದು ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಸಾಮಾನ್ಯ ರೀತಿಯ ಮನ್ನಣೆಯನ್ನು ತಂದುಕೊಟ್ಟಿದೆ. ಭಾರತ ಸರ್ಕಾರದ ಅನೇಕ ಕಾರ್ಯಕ್ರಮಗಳಲ್ಲಿ ಕೈ ಜೋಡಿಸಿರುವುದೇ ಅಲ್ಲದೆ, ಗ್ರಾಮೀಣ ಮಹಿಳೆಯರಿಗೆ ಸಾಲ ನೀಡಿಕೆ ಕಾರ್ಯಕ್ರಮವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಮತ್ತು ಭಾರತದ ಲಕ್ಷಾಂತರ ಮಹಿಳೆಯರ ಜೀವನ ಸ್ಥಿತಿಯನ್ನು ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಮೌಲಿಕ ಸಲಹೆಗಳನ್ನು ನೀಡಿದ್ದಾರೆ.

ಭಾರತದ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುವುದಕ್ಕೆ ಅವರು ತಮ್ಮ ಅರ್ಥಶಾಸ್ತ್ರದ ನಮೂನೆಯನ್ನು ಬಳಸಿದುದಾಗಿ ಹೇಳುತ್ತಾರೆ. “ಅರ್ಥಶಾಸ್ತ್ರದಲ್ಲಿ, ಒಬ್ಬ ‘ಕಾರ್ಮಿಕ’ ಯಾರು ಎಂಬುದನ್ನು ಪರಿಭಾಷಿಸುವಾಗ ಮೂರು ವರ್ಗಗಳನ್ನಾಗಿ ವಿಂಗಡಿಸಲಾಗುತ್ತದೆ- ಮುಖ್ಯ, ಸಹಾಯಕ, ಪೂರಕ,.. ಮುಂತಾದುದಾಗಿ., ಮಹಿಳೆಯರನ್ನು ಸಾಮಾನ್ಯವಾಗಿ ಪೂರಕ ವರ್ಗಕ್ಕೆ ಸೇರಿಸಲಾಗುತ್ತದೆ. ಆದರೆ, ಬಡವರ ಪೈಕಿ ಮಹಿಳೆಯರನ್ನು ಮುಖ್ಯ ವರ್ಗಕ್ಕೆ ಸೇರಿಸಬೇಕು. ಏಕೆಂದರೆ, ಜೀವನಾಧಾರಕ್ಕೆ ಅಗತ್ಯವಿರುವ ಹಣವನ್ನು ಸಂಪಾದಿಸುವವರು ಅವರೇ! ಹಮ್ಮು ಬಿಮ್ಮುಗಳನ್ನು ಬಿಟ್ಟು, ಯಾವ ಕೆಲಸವನ್ನು ಬೇಕಾದರೂ ಮಾಡಲು ಅವರು ಸಿದ್ಧರಿರುತ್ತಾರೆ. ಅದು ಕಸಗುಡಿಸುವ, ಸ್ವಚ್ಛಗೊಳಿಸುವ, ಗುಜರಿ ಭಾಗಗಳನ್ನು ಮಾರುವ ಕೆಲಸಗಳಂಥ ಯಾವುದೇ ಕೆಲಸವಿರಬಹುದು. ಇದಕ್ಕೆ ಕಾರಣ, ತಮ್ಮ ಕುಟುಂಬದ ಮಂದಿಗೆ ಎರಡು ಹೊತ್ತಿನ ಊಟ ಒದಗಿಸುವುದಷ್ಟೇ ಅವರ ಗುರಿಯಾಗಿರುತ್ತದೆ. ಈ ದೃಷ್ಟಿಕೋನದಿಂದ, ಮಹಿಳೆಯರನ್ನು ಆರ್ಥಿಕ ಏಜೆಂಟರನ್ನಾಗಿ ಮನಗಾಣುವುದು ಅಗತ್ಯ ಎಂದು ರಾಷ್ಟ್ರೀಯ ಮಟ್ಟದಲ್ಲಿ ವಾದಿಸಲು ನನಗೆ ಸಾಧ್ಯವಾಯಿತು.” ಎನ್ನುತ್ತಾರೆ.

ದೇವಕಿ ಜೈನ್ ಅವರು ಕೇವಲ ಅರ್ಥ ಶಾಸ್ತ್ರದ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಭಾರತದ ಮಹಿಳೆಯರ ಸ್ಥಾನಮಾನವನ್ನು ಅಧ್ಯಯನ ಮಾಡುವುದಷ್ಟಕ್ಕೇ ತಮ್ಮ ಚಟುವಟಿಕೆಗಳನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಬಡ ಹಾಗೂ ನಿರ್ಲಕ್ಷಿತ ಮಹಿಳೆಯರ ಸ್ಥಾನಮಾನವನ್ನು ಸುಧಾರಿಸಲು ಅಗತ್ಯವಾದ ಚಟುವಟಿಕೆಗಳಲ್ಲಿಯೂ ತೊಡಗಿಕೊಂಡರು. 1975-77 ರ ಅವಧಿಗೆ, ಆರು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಗ್ರಾಮೀಣ ಕುಟುಂಬಗಳಲ್ಲಿ ಸ್ತ್ರೀ ಪುರುಷರು ಉದ್ಯೋಗ/ಕೆಲಸದಲ್ಲಿ ತೊಡಗಿಕೊಳ್ಳುವ ಸಮಯಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ಅಂಕಿ ಅಂಶಗಳನ್ನು ಸಂಗ್ರಹಿಸಲಾಯಿತು. ಬಡ ಕುಟುಂಬಗಳಲ್ಲಿ, ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಮಯ ಕೆಲಸದಲ್ಲಿ ತೊಡಗುತ್ತಾರೆ ಮತ್ತು 8 ಮತ್ತು 12 ವಯೋಮಾನದ ಮಕ್ಕಳು, ವಿಶೇಷವಾಗಿ, ಹೆಣ್ಣು ಮಕ್ಕಳು, ಹಣ ಗಳಿಸುವ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂಬುದನ್ನು ಈ ಅಧ್ಯಯನ ತೋರಿಸಿಕೊಟ್ಟಿತು. ಅಗೋಚರವಾಗಿ ಉಳಿದಿದ್ದ ಮಹಿಳಾ ಕಾರ್ಮಿಕರನ್ನು ಈ ಅಧ್ಯಯನ ಮುನ್ನೆಲೆಗೆ ತರಲು ನೆರವಾಯಿತು. ಆ ಮೂಲಕ ಹಿನ್ನೆಲೆಯಲ್ಲಿಯೇ ಅಗೋಚರರಾಗಿ ಉಳಿದವರಿಗೆ ತಲುಪುವ ಹಾಗೆ ಕಾರ್ಯ ನೀತಿ ತತ್ವಗಳನ್ನು ರೂಪಿಸಲು ಅನುವಾಗುವ ರೀತಿಯಲ್ಲಿ ಅಂಕಿ ಅಂಶಗಳನ್ನು ಹೊರತರಲು ಸಮೀಕ್ಷಾ ವಿಧಾನದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳನ್ನು ಸಹ ಸೂಚಿಸಿತು.

ಅಷ್ಟೇ ಅಲ್ಲದೆ, ಮಹಿಳಾ ಸಮಸ್ಯೆಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗಳನ್ನು ಕೈಗೊಳ್ಳುವುದಕ್ಕಾಗಿ 1980 ರಲ್ಲಿ ‘ಸಾಮಾಜಿಕ ಅಧ್ಯಯನ ಸಂಸ್ಥೆ ಟ್ರಸ್ಟ್’ (ಇನ್‍ಸ್ಟಿಟ್ಯೂಟ್ ಆಫ್ ಸೋಷಿಯಲ್ ಸ್ಟಡೀಸ್ ಟ್ರಸ್ಟ್) ಎಂಬ ಸಂಸ್ಥೆಯನ್ನು ದೇವಕಿ ಜೈನ್ ಸ್ಥಾಪಿಸಿದರು. ಬಡ ಮಹಿಳಾ ಕಾರ್ಮಿಕರು ಮಾಡುವ ಯಾವುದೇ ಕೆಲಸಕ್ಕೆ ಹಣದ ರೂಪದಲ್ಲಿ ಪ್ರತಿಫಲ ದೊರೆಯಬೇಕಾದದ್ದು ಮೊದಲ ಆದ್ಯತೆ ಎಂದು ಮನಗಂಡರು. ಅದಕ್ಕಾಗಿ ಆ ವೇಳೆಗಾಗಲೇ ಸಣ್ಣ ಪುಟ್ಟ ಉದ್ಯಮದಲ್ಲಿ ತೊಡಗಿಕೊಂಡವರಿಗೆ ಮಾರುಕಟ್ಟೆ ಒದಗಿಸಲು ‘ಮಹಿಳಾ ಹಾಟ್’ ಎಂಬ ಮಾರುಕಟ್ಟೆ ವೇದಿಕೆಯನ್ನು ಸೃಷ್ಟಿಸಿದರು. ‘ಕಾಲಿ’ ಎಂಬ ಮಹಿಳಾ ಪ್ರಕಟಣ ಸಂಸ್ಥೆಯನ್ನು ಸ್ಥಾಪಿಸಲು ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಅಭಿವೃದ್ಧಿಶೀಲ ರಾಷ್ಟ್ರಗಳ ಮಹಿಳೆಯರಿಗಾಗಿ, ‘ಹೊಸ ಯುಗದ ಮಹಿಳೆಯರಿಗೆ ಪರ್ಯಾಯ ಅಭಿವೃದ್ಧಿ ಯೋಜನೆಗಳು’ (ಡಿ ಎ ಡಬ್ಲ್ಯು ಎನ್) ಎಂಬ ಸಂಪರ್ಕ ಜಾಲವನ್ನು ಸೃಜಿಸಲು ಬೆಂಬಲ ನೀಡಿದ್ದಾರೆ.

“ಸ್ತ್ರೀವಾದೀ ಬಡತನ” : ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ, ಬಡತನದ ನಿವಾರಣೆಯ ಬಗ್ಗೆ ಕೈಗೊಂಡ ಮಾನವ ಅಭಿವೃದ್ಧಿಯ 1997ರ ವರದಿಯನ್ನು ಹಾಗೂ ಆಡಳಿತ ವ್ಯವಸ್ಥೆಯ ಬಗೆಗಿನ 2002 ರ ವರದಿಯನ್ನು ಸಿದ್ಧಪಡಿಸಲು ಸ್ಥಾಪಿಸಿದ ಸಲಹಾ ಸಮಿತಿಯ ಸದಸ್ಯೆಯಾಗಿ ದೇವಕಿ ಜೈನ್ ಮೌಲಿಕ ಸಲಹೆಗಳನ್ನು ನೀಡಿದ್ದಾರೆ. ‘ಮಹಿಳೆ, ಅಭಿವೃದ್ಧಿ ಮತ್ತು ವಿಶ್ವ ಸಂಸ್ಥೆ-ಸಮಾನತೆ ಮತ್ತು ನ್ಯಾಯಕ್ಕಾಗಿ ಆರು ವರ್ಷಗಳ ಅನ್ವೇಷಣೆ’ ಎಂಬ ಅಧ್ಯಯನಪೂರ್ವಕ ಲೇಖನದಲ್ಲಿ, ಮಹಿಳೆಯರ ಕೊಡುಗೆಗಳು ವಿಶ್ವ ಸಂಸ್ಥೆಯ ಅಭಿವೃದ್ಧಿ ಪರಿಕಲ್ಪನೆಗಳನ್ನು ಮತ್ತು ಕಾರ್ಯ ವಿಧಾನಗಳನ್ನು ಹೇಗೆ ಬದಲಾಯಿಸಿವೆ ಮತ್ತು ರೂಪಿಸಿವೆ ಎಂಬುದನ್ನು ವಿವರವಾಗಿ ತೆರೆದಿಡುತ್ತದೆ. ಸ್ತ್ರೀವಾದೀ ಅರ್ಥ ಶಾಸ್ತ್ರದ ದೃಷ್ಟಿಕೋನದಿಂದ ಬಡತನವನ್ನು ವಿಶ್ಲೇಷಿಸುವ “ಸ್ತ್ರೀವಾದೀ ಬಡತನ” ಎಂಬ ಪದಗಳನ್ನು ಮೊದಲಬಾರಿಗೆ ಪ್ರಯೋಗಿಸಿದವರು ಇವರು. ಮಹಿಳೆ ಮತ್ತು ಬಡತನದ ಮೂರು ನಿರ್ದಿಷ್ಟ ಆಯಾಮಗಳನ್ನು ಅಭಿವ್ಯಕ್ತಿಸುವುದಕ್ಕಾಗಿ ಇದನ್ನು ಬಳಸಿರುವುದಾಗಿ ತಿಳಿಸುತ್ತಾರೆ. – * ಪುರುಷರಿಗಿಂತ ಮಹಿಳೆಯರು ಹೆಚ್ಚು ಬಡತನದಲ್ಲಿದ್ದಾರೆ, * ಪುರುಷರು ಅನುಭವಿಸುವ ಬಡತನದ ತೀವ್ರತೆಗಿಂತ ಮಹಿಳೆಯರು ಅನುಭವಿಸುವ ಬಡತನದ ತೀವ್ರತೆ ಹೆಚ್ಚು, * ಮಹಿಳೆಯರಲ್ಲಿ ಬಡತನ ಹೆಚ್ಚಾಗುತ್ತಿರುವುದಕ್ಕೆ ಕಾರಣ ಮಹಿಳೆಯರು ಮುಖ್ಯಸ್ಥರಾಗಿರುವ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿರುವುದು-ಎಂದು ಅಂಕಿ ಅಂಶಗಳ ಸಹಿತವಾಗಿ ಆ ಬಗ್ಗೆ ವಿವರಣೆಯನ್ನು ಕೊಡುತ್ತಾರೆ. ಇತರ ಉದ್ಯೋಗಸ್ಥ ಮಹಿಳೆಯರಂತೆ ತಾನೂ ತನ್ನ ಕೆಲಸದಲ್ಲಿ ಪುರುಷರ ತಾರತಮ್ಯ ಮನೋಭಾವ ಮತ್ತು ಮೇಲರಿಮೆಯ ಮನೋಭಾವವನ್ನು ಎದುರಿಸಬೇಕಾಯಿತು. ಆದರೆ ತಮಗೆ ಕುಟುಂಬದ ಬೆಂಬಲವಿದ್ದುದರಿಂದ ಅದನ್ನು ಮೆಟ್ಟಿ ತನ್ನ ಕಾರ್ಯದಲ್ಲಿ ತಾದಾತ್ಮ್ಯತೆಯಿಂದ ತೊಡಗಿಕೊಳ್ಳಲು ಸಾಧ್ಯವಾಯಿತು ಎನ್ನುತ್ತಾರೆ.

ದೇವಕಿ ಜೈನ್ ಅವರ ಪತಿ ಲಕ್ಷ್ಮಿ ಚಂದ್ ಜೈನ್ ಮಹಾತ್ಮ ಗಾಂಧಿ ಅವರ ತತ್ವಾನುಸಾರಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದವರು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದವರು. 2011 ರಲ್ಲಿ ಭಾರತ ಸರ್ಕಾರ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿತು. ಆದರೆ ಅವರು ಅಂಥ ಪ್ರಶಸ್ತಿ ನೀಡಿಕೆಯ ಪರಿಕಲ್ಪನೆಯನ್ನೇ ವಿರೋಧಿಸುತ್ತಿದ್ದರು. ಹಾಗಾಗಿ ಅವರ ಕುಟುಂಬ ಈ ಪ್ರಶಸ್ತಿಯನ್ನು ನಿರಾಕರಿಸಿತು. ಸಾರ್ವಜನಿಕ ಸೇವೆಯ ಕ್ಷೇತ್ರದಲ್ಲಿನ ಅವರ ಸೇವೆಗಾಗಿ ಅವರು 1989 ರಲ್ಲಿ ರೇಮನ್ ಮ್ಯಾಗ್‍ಸೆಸೆ ಪ್ರಶಸ್ತಿಗೂ ಭಾಜನರಾಗಿದ್ದರು. ದೇವಕಿ ಅವರ ಸಹೋದರ ಎಂ.ಎ.ಪಾರ್ಥಸಾರಥಿ ಅವರು ಬೆಂಗಳೂರು ನಗರ ಕಲಾ ಆಯೋಗದ ಅಧ್ಯಕ್ಷರಾಗಿದ್ದರು.

ದೇವಕಿ ಜೈನ್ ಅವರ ಕಾರ್ಯ ಚಟುವಟಿಕೆಗಳ ವ್ಯಾಪ್ತಿಗೆ ದೇಶಗಳ ಮಿತಿಯಿಲ್ಲ. ಅವರು ಸುತ್ತಾಡಿ ಸಂಸ್ಥಾಪಿಸಿದ ಸಂಸ್ಥೆಗಳಿಗೆ ಲೆಕ್ಕವಿಲ್ಲ ಮತ್ತು ಗಳಿಸಿದ ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳಿಗೆ ಲಕ್ಕವಿಲ್ಲ. ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿನ ಅವರ ಅನುಪಮ ಕೆಲಸಕ್ಕಾಗಿ ಭಾರತ ಸರ್ಕಾರ ಅವರಿಗೆ 2006 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ. ಪ್ರಸ್ತುತ, ದೇವಕಿ ಜೈನ್ ಅವರು, ವೈದ್ಯಕೀಯ ಸಸ್ಯಗಳನ್ನು ಬೆಳೆಯಲು ಮತ್ತು ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟಮಾಡಲು ಗ್ರಾಮೀಣ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದಾರೆ. ‘ಸಿಂಗಮ್ಮ ಶ್ರೀನಿವಾಸನ್ ಪ್ರತಿಷ್ಠಾನ’ವನ್ನು ಸ್ಥಾಪಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *