ಪದ್ಮ ಪ್ರಭೆ / ಚತುರ್ಭಾಷಾ ತಾರೆ ಬಿ. ಸರೋಜಾದೇವಿ – ಡಾ. ಗೀತಾ ಕೃಷ್ಣಮೂರ್ತಿ

`ಪದ್ಮಭೂಷಣ’ ಗೌರವ ಪಡೆದ (1992) ಕರ್ನಾಟಕದ ಐವರು ಸಾಧಕಿಯರಲ್ಲಿ ಒಬ್ಬರಾದ ಚತುರ್ಭಾಷಾ ತಾರೆ ಬಿ. ಸರೋಜಾದೇವಿ ಅವರು ಭಾರತೀಯ ಸಿನಿಮಾ ರಂಗದ ಅತ್ಯಂತ ಯಶಸ್ವೀ ನಾಯಕ ನಟಿ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದ ಮೇರುನಟರಿಗೆ ನಾಯಕಿಯಾಗಿ ನಟಿಸಿರುವ ಸರೋಜಾದೇವಿ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಾವು ನಟಿಸಿದ ಚಿತ್ರಗಳ ಭಾಷೆ ಕಲಿತು ನಾಯಕರಿಗೆ ಸರಿಸಮನಾಗಿ ಸಂಭಾಷಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಳಿರುವ, 161 ಚಿತ್ರಗಳಲ್ಲಿ ಸತತವಾಗಿ ನಾಯಕಿಯ ಪಾತ್ರ ಮಾಡಿರುವ ಕಲಾವಿದೆಯಾಗಿ ಪ್ರತಿಭೆ ಮೆರೆದಿದ್ದಾರೆ.

ಬಿ. ಸರೋಜಾದೇವಿ ಎಂದ ಕೂಡಲೇ ಕನ್ನಡಿಗರ ಕಣ್ಮುಂದೆ ಬರುವುದು, ‘ಕಿತ್ತೂರು ರಾಣಿ ಚೆನ್ನಮ್ಮ’ ಚಲನಚಿತ್ರದಲ್ಲಿ ‘ನಿಮಗ್ಯಾಕೆ ಕೊಡಬೇಕು ಕಪ್ಪ’ ಎಂದು ರೋಷಭರಿತರಾಗಿ ಬ್ರಿಟಿಷ್ ಅಧಿಕಾರಿಯನ್ನು ಪ್ರಶ್ನಿಸುವ ಅವರ ಅಭಿನಯ. ಆ ಸಂದರ್ಭದಲ್ಲಿನ ಅವರ ಮುಖಭಾವ, ಕಣ್ಣುಗಳಲ್ಲಿನ ರೋಷ, ದನಿಯಲ್ಲಿನ ಏರಿಳಿತ, ನಿಂತ ಭಂಗಿ ಪ್ರತಿಯೊಂದೂ ಆ ಪಾತ್ರಕ್ಕೆ, ಆ ಸನ್ನಿವೇಶಕ್ಕೆ ಪೂರಕವಾಗಿ ಅಭಿನಯ ಪರಿಪಕ್ವತೆಯನ್ನು ಪಡೆಯುತ್ತದೆ. ಪ್ರತಿಯೊಂದು ಪಾತ್ರವನ್ನೂ ಅವರು ಇದೇ ತಾದಾತ್ಮ್ಯತೆಯಿಂದ ಅಭಿನಯಿಸುತ್ತಿದ್ದರು. ಅಷ್ಟಲ್ಲದೆ ಅವರು ‘ಅಭಿನಯ ಶಾರದೆ’ ಎನಿಸಿಕೊಳ್ಳುತ್ತಾರೆಯೇ? ಚತುರ್ಭಾಷೆಗಳಲ್ಲಿಯೂ ಬೇಡಿಕೆಯ ನಟಿಯಾಗಿ ಕನ್ನಡ ಚಿತ್ರ ರಂಗವನ್ನು ಮೂರು ದಶಕಗಳ ಕಾಲ ಆಳುತ್ತಿದ್ದರೆ? ಈ ಅಪ್ರತಿಮ ಪ್ರತಿಭೆಗೆ ಭಾರತ ಸರ್ಕಾರ 1969 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು, 1992 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದುವರೆಗೆ ಕರ್ನಾಟಕ ರಾಜ್ಯದಿಂದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದ ಐವರು ಮಹಿಳೆಯರಲ್ಲಿ ಇವರು ಒಬ್ಬರು.

ಚತುರ್ಭಾಷಾ ತಾರೆಯಾಗಿ, ಅತ್ಯಂತ ಯಶಸ್ವೀ ನಾಯಕ ನಟಿಯಾಗಿ, ಭಾರತೀಯ ಸಿನಿಮಾ ರಂಗವನ್ನು ಅಕ್ಷರಶಃ ಅನಭಿಷಕ್ತ ಸಾಮ್ರಾಜ್ಞಿಯಾಗಿ ಆಳಿದ ಬಿ. ಸರೋಜಾದೇವಿ ಅವರನ್ನು ‘ಹಿಂತಿರುಗಿ ನೋಡಿದಾಗ ನಿಮ್ಮ ಸಾಧನೆಯ ಬಗ್ಗೆ ನಿಮಗೆ ಏನೆನಿಸುತ್ತದೆ?’ ಎಂದು ಕೇಳಿದಾಗ ಅವರು ನೀಡಿದ ಉತ್ತರ ಅವರ ವಿನಮ್ರತೆಗೆ ಹಿಡಿದ ಕನ್ನಡಿಯಾಗಿದೆ.
ಪ್ರಶಸ್ತಿ ಪುರಸ್ಕಾರಗಳು ನಶೆಯೇರಿಸದೆ ವ್ಯಕ್ತಿಯಲ್ಲಿ ಇನ್ನಷ್ಟು ಜವಾಬ್ದಾರಿಯ ಭಾವ ಮೂಡಿಸಿದಾಗ ಮಾತ್ರ, ಆ ವ್ಯಕ್ತಿ ಇನ್ನಷ್ಟು ಮೇಲೇರಲು ಸಾಧ್ಯ ಎಂಬುದು ಅನೇಕ ಸಾಧಕರ ಜೀವನ ಗಾಥೆಗಳು ತೆರೆದಿಟ್ಟಿರುವ ಸತ್ಯ. ಸರೋಜಾದೇವಿಯವರ ಜೀವನ ಮತ್ತು ಮಾತುಗಳು ಈ ವಿನಯವಂತಿಕೆಯನ್ನು ಪ್ರದರ್ಶಿಸುತ್ತವೆ. ‘ಇದೆಲ್ಲ ನನ್ನ ಸಾಧನೆ ಎಂದುಕೊಂಡಿದ್ದೀರಾ? ನಾನು ವಿಧಿಯನ್ನು ನಂಬುತ್ತೇನೆ. ಆ ಕಾಲಕ್ಕೆ ಬೆಂಗಳೂರಿನಲ್ಲಿ ನನ್ನಂಥ ಅನೇಕ ಸರೋಜಾದೇವಿಯರಿದ್ದರು. ಆದರೆ ನಾನೇ ಏಕೆ ಸಿನಿಮಾಗೆ ಬಂದೆ? ನನಗೆ ಅತ್ಯುತ್ತಮ ಪಾತ್ರಗಳು ದೊರೆತವು, ಅತ್ಯುತ್ತಮ ನಿರ್ದೇಶಕರು, ಅತ್ಯುತ್ತಮ ನಿರ್ಮಾಪಕರು ದೊರೆತರು. ಇಂದಿಗೆ ದಂತ ಕಥೆ ಎನಿಸುವ ನಾಯಕ ನಟರೊಡನೆ ನಾಯಕಿಯಾಗಿ ಅಭಿನಯಿಸುವ ಅವಕಾಶ ದೊರೆಯಿತು. ನಾನು ಅತ್ಯುತ್ತಮ ಅಭಿನೇತ್ರಿ ಎನ್ನಿಸಿಕೊಳ್ಳುವುದಕ್ಕೆ ಇವೆಲ್ಲವೂ ಕಾರಣ’ ಎನ್ನುತ್ತಾರೆ. (ಸ್ಟಾರ್ ಆಫ್ ಮೈಸೂರ್ ಫೀಚರ್ ಎಡಿಟರ್ ಎನ್. ನಿರಂಜನ್ ನಿಕ್ಕಂ ಅವರಿಗೆ ನೀಡಿದ ಸಂದರ್ಶನ) ಜೊತೆಗೇ, ದೊರೆತ ಅವಕಾಶವನ್ನು ಬಳಸಿಕೊಂಡು ಈ ಮಟ್ಟದ ಯಶಸ್ಸನ್ನು ಗಳಿಸಲು ತನ್ನ ಶ್ರಮ ಮತ್ತು ತನ್ನ ಛಲ ಕಾರಣ ಎಂದು ಹೇಳುವುದನ್ನು ಮರೆಯುವುದಿಲ್ಲ. ಚತುರ್ಭಾಷೆಗಳಲ್ಲಿ ತಾನು ನಿರ್ವಹಿಸಿದ ಎಲ್ಲ ಪಾತ್ರಗಳಿಗೂ ತಾನೇ ಕಂಠದಾನ ಮಾಡಬೇಕೆಂಬ ಛಲದಿಂದ ಆ ಎಲ್ಲ ಭಾಷೆಗಳನ್ನೂ ಶ್ರಮವಹಿಸಿ ಕಲಿತು ಅಭಿನಯಿಸಿದುದಾಗಿ ತಿಳಿಸುತ್ತಾರೆ. ಉದಾಹರಣೆಯಾಗಿ, ‘ನಿಮಗ್ಯಾಕೆ ಕೊಡಬೇಕು ಕಪ್ಪ’ ಎಂದಾಗ ಪಾತ್ರವೇ ತಾವಾಗಿ ಅನುಭವಿಸಿದ ಅವಿನಾಭಾವ ಸಂಬಂಧವನ್ನು ವಿವರಿಸುತ್ತಾರೆ. ನಾನೇ ಆ ಮಾತುಗಳನ್ನು ಹೇಳುವುದಕ್ಕೂ ಬೇರೊಬ್ಬರು ಆ ಮಾತುಗಳನ್ನು ಹೇಳುವುದಕ್ಕೂ ವ್ಯತ್ಯಾಸವಿದೆ ಎನ್ನುತ್ತಾರೆ.

ಸರೋಜಾದೇವಿ ಜನಿಸಿದ್ದು 1938 ರ ಜನವರಿ 7 ರಂದು. ತಂದೆ ಬೈರಪ್ಪ, ಪೊಲೀಸು ಇಲಾಖೆಯಲ್ಲಿ ಕೆಲಸಮಾಡುತ್ತಿದ್ದರು. ತಾಯಿ ರುದ್ರಮ್ಮ. ಸರೋಜಾದೇವಿ ಈ ದಂಪತಿಯ ನಾಲ್ಕನೇ ಮಗು. ಆಕೆಯ ತಾತ ಮಾಯಣ್ಣಗೌಡರು ಆಕೆಯನ್ನು ದತ್ತು ನೀಡಬೇಕೆಂದು ಯೋಚಿಸಿದ್ದರಂತೆ, ಆದರೆ ತಂದೆ ಇದಕ್ಕೆ ಒಪ್ಪಲಿಲ್ಲವಂತೆ. ತಂದೆಯ ನಿರಾಕರಣೆ ಭಾರತೀಯ ಸಿನಿಮಾ ರಂಗಕ್ಕೆ ಮತ್ತು ಕನ್ನಡ ನಾಡಿಗೆ ಅಪ್ರತಿಮ ಕಲಾವಿದೆಯನ್ನು ಕೊಡುಗೆಯಾಗಿ ನೀಡಿತು. ಆಕೆಗೆ ನೃತ್ಯಾಭ್ಯಾಸಕ್ಕೆ ಬೆಂಬಲ ನೀಡಿ ಅಭಿನಯವನ್ನು ವೃತ್ತಿಯಾಗಿ ಸ್ವೀಕರಿಸುವಂತೆ ಪ್ರೋತ್ಸಾಹ ನೀಡಿದುದೇ ಅವರ ತಂದೆಯವರಂತೆ. ಸ್ಟುಡಿಯೋಗಳಿಗೆ ಕರೆದೊಯ್ದು, ಕರೆತಂದು, ನೃತ್ಯಾಭ್ಯಾಸ ಮಾಡಿ ದಣಿದ ಕಾಲುಗಳನ್ನು ಒತ್ತಿ ಆರೈಕೆ ಮಾಡುತ್ತಿದ್ದರಂತೆ. ಆದರೆ ಸಿನಿಮಾ ರಂಗವನ್ನು ಪ್ರವೇಶಿಸಲು ಅವರ ತಾಯಿಯವರು ಒಂದು ಷರತ್ತನ್ನು ಹಾಕಿದ್ದರು. ಈಜುಡುಗೆಯನ್ನು ಮತ್ತು ತೋಳಿಲ್ಲದ ರವಿಕೆಯನ್ನು ತೊಡುವಂತಿಲ್ಲ ಎಂದು. ಅದನ್ನು ಅಕ್ಷರಶಃ ಪಾಲಿಸಿದುದಾಗಿ ಹೇಳುತ್ತಾರೆ.

ಸಿನಿಮಾ ರಂಗ ಗೌರವಸ್ಥರಿಗಲ್ಲ ಎಂಬ ಭಾವನೆಯಿದ್ದ ಆ ಕಾಲದಲ್ಲಿ ಸಿನಿಮಾ ರಂಗವನ್ನು ಪ್ರವೇಶಿಸಿ, ತಮ್ಮ ಉಡುಗೆ ತೊಡುಗೆ ಮತ್ತು ತಮ್ಮ ನಡೆ ನುಡಿಗಳಿಂದ, ಆ ವೃತ್ತಿಗೆ ಮತ್ತು ಆ ವೃತ್ತಿ ಕಲಾವಿದೆಯರಿಗೆ ಘನತೆಯನ್ನು ಹಾಗೂ ಗೌರವವನ್ನು ತಂದುಕೊಟ್ಟ ಅಪರೂಪದ ಕಲಾವಿದೆ, ಅಭಿನೇತ್ರಿ ಬಿ. ಸರೋಜಾದೇವಿ ಅವರು. ಅವರು ಮೊದಲ ಬಾರಿಗೆ, 1955 ರಲ್ಲಿ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟಾಗ ಆಕೆಗೆ ಕೇವಲ 17 ವರ್ಷಗಳು. ಆಕೆ ಅಭಿನಯಿಸಿದ ಮೊದಲ ಸಿನಿಮಾ ಕನ್ನಡದ, ಹೊನ್ನಪ್ಪ ಭಾಗವತರ ಮಹಾಕವಿ ಕಾಳಿದಾಸ (1955). ಆಕೆ ಮಾಡಿದ ಮೊದಲ ಚಿತ್ರವೇ ಅತ್ಯುತ್ತಮ ಚಲನ ಚಿತ್ರವೆಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ತೆಲುಗಿನಲ್ಲಿ ಆಕೆ ಅಭಿನಯಿಸಿದ ಮೊದಲ ಚಿತ್ರ ಪಾಂಡುರಂಗ ಮಹಾತ್ಮ್ಯಂ, 1959ರಲ್ಲಿ. ತಮಿಳಿನಲ್ಲಿ ಅವರ ಮೊದಲ ಚಿತ್ರ ನಾಡೋಡಿ ಮನ್ನನ್, 1958 ರಲ್ಲಿ. ಹಿಂದಿಯಲ್ಲಿ ಅವರ ಚಿತ್ರ ಪಯಣ ಪ್ರಾರಂಭವಾದದ್ದು 1959 ರಲ್ಲಿ, ಪೈಗಮ್‍ನೊಂದಿಗೆ. ಅದಾದ ನಂತರ ಆಕೆ ಹಿಂತಿರುಗಿ ನೋಡಿದುದೇ ಇಲ್ಲ. ಕನ್ನಡ ಚಿತ್ರ ರಂಗದ ಮೇರು ನಟ ನಟಸಾರ್ವಭೌಮ ರಾಜ್‍ಕುಮಾರ್ ಅವರೊಡನೆ, ಕಲ್ಯಾಣ ಕುಮಾರ್, ಉದಯ ಕುಮಾರ್ ಮುಂತಾದ ಅಪ್ರತಿಮ ನಟರೊಡನೆ, ತಮಿಳು ಚಿತ್ರರಂಗದ ಅತ್ಯುತ್ತಮ ಹಾಗೂ ಅತ್ಯಂತ ಜನಪ್ರಿಯ ನಟರಾದ ಎಂ.ಜಿ.ರಾಮಚಂದ್ರನ್, ಶಿವಾಜಿಗಣೇಶನ್ ಅವರ ಎದುರು, ತೆಲುಗು ಚಿತ್ರರಂಗದ ದಂತ ಕಥೆಗಳಾದ ಎನ್.ಟಿ. ರಾಮರಾವ್, ಎ. ನಾಗೇಶ್ವರ ರಾವ್, ಹಿಂದಿಯ ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಸುನಿಲ್‍ದತ್, ಶಮ್ಮಿಕಪೂರ್ ಅವರುಗಳೊಡನೆ, ನಾಲ್ಕೂ ಭಾಷೆಗಳ ಅನೇಕ ಚಿತ್ರಗಳಲ್ಲಿ ನಾಯಕ ನಟಿಯಾಗಿ ನಟಿಸಿ ಚತುರ್ಭಾಷಾ ತಾರೆ ಎಂಬ ಅಭಿದಾನವನ್ನು ಮುಡಿಗೇರಿಸಿಕೊಂಡರು.

50ಕ್ಕೂ ಹೆಚ್ಚು ವರ್ಷಗಳು, ನಾಲ್ಕೂ ಭಾಷೆಗಳಲ್ಲಿ ಸರೋಜಾದೇವಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆಕೆಯ 13 ನೇ ವಯಸ್ಸಿನಲ್ಲಿಯೇ ಒಂದು ಸಮಾರಂಭದಲ್ಲಿ ಹಾಡುತ್ತಿದ್ದಾಗ, ಆಕೆಯನ್ನು ಗುರುತಿಸಿ ಚಿತ್ರದಲ್ಲಿ ನಟಿಸುವಂತೆ ಆಹ್ವಾನಿಸಲಾಗಿತ್ತಂತೆ. ಆ ವಯಸ್ಸಿನಲ್ಲಿ ಚಿತ್ರರಂಗವನ್ನು ಪ್ರವೇಶಿಸಲು ಒಪ್ಪಲಿಲ್ಲವಾದರೂ ಚಿತ್ರರಂಗ ಆಕೆಯನ್ನು ಬಿಡಲಿಲ್ಲ. ಮುಂದೆ, 1955 ರಲ್ಲಿ, ಆಕೆಯ 17 ನೇ ವಯಸ್ಸಿನಲ್ಲಿ ಆಕೆ ಚಿತ್ರರಂಗವನ್ನು ಪ್ರವೇಶಿಸಿಯೇ ಬಿಟ್ಟರು. 1955ರಿಂದ 1985ರ ವರೆಗಿನ ಅವಧಿ ಅವರ ವೃತ್ತಿ ಜೀವನದ ಉಚ್ಛ್ರಾಯ ಕಾಲ. ಈ 30 ವರ್ಷಗಳೂ ಆಕೆ ಭಾರತೀಯ ಚಿತ್ರಗಳಲ್ಲಿ ನಾಯಕ ನಟಿಯಾಗಿ ಮೆರೆದರು. 1955 ರಿಂದ 2015ರ ವರೆಗೆ ಅವರು ನಟಿಸಿದ 190 ಚಿತ್ರಗಳ ಪೈಕಿ 165 ಚಿತ್ರಗಳು ಅತ್ಯಂತ ಯಶಸ್ವೀ ಚಿತ್ರಗಳು (Box office hits). 1955 ರಿಂದ 1984 ರ ವರೆಗೆ 161 ಚಿತ್ರಗಳಲ್ಲಿ ಒಂದಾದ ಮೇಲೊಂದರಂತೆ (ಪೋಷಕ ನಟಿಯಾಗಿ ನಟಿಸದೆ) ಪ್ರಮುಖ ನಾಯಕಿಯಾಗಿ ನಟಿಸಿರುವ ಏಕೈಕ ನಟಿ ಎಂಬ ವಿಶ್ವ ದಾಖಲೆ ಇವರದು! ತಮ್ಮ ಅಷ್ಟೂ ಪಾತ್ರಗಳಿಗೆ ತಾವೇ ಕಂಠದಾನ ಮಾಡಿದ್ದಾರೆ ಎಂಬುದು ಇವರ ವಿಶೇಷ. ಹಿಂದಿಯಾದರೆ ಶಾಲೆಯಲ್ಲಿ ಅಷ್ಟಿಷ್ಟು ಓದಿದ್ದರು. ಆದರೆ ತೆಲುಗು ಮತ್ತು ತಮಿಳು ಭಾಷೆಗಳ ಪರಿಚಯವೇ ಇಲ್ಲ. ಅಂಥಹುದರಲ್ಲಿ ಆ ಭಾಷೆಯ ಚಿತ್ರಗಳ ತಮ್ಮ ಪಾತ್ರಗಳಿಗೂ ತಾವೇ ಕಂಠದಾನ ಮಾಡಿದ್ದಾರೆಂದರೆ! ಇದಕ್ಕಾಗಿ ಅವರು ಪಟ್ಟಿರುವ ಶ್ರಮವೇನು ಕಡಿಮೆಯೆ?

ತೆಲುಗಿನಲ್ಲಿ ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್, ತಮಿಳಿನಲ್ಲಿ ಎಂ.ಜಿ.ರಾಮಚಂದ್ರನ್, ಜೆಮಿನಿ ಗಣೇಶನ್, ಶಿವಾಜಿ ಗಣೇಶನ್ ಅವರಂಥ ಅಭಿನಯ ಸಾಮ್ರಾಟರೆನಿಸಿಕೊಂಡವರ ಎದುರಿನಲ್ಲಿ, ಅವರ ಮಾತೃಭಾಷೆಯಲ್ಲಿ, ಅವರಿಗೆ ಸರಿಸಮವೆನಿಸುವ ರೀತಿಯಲ್ಲಿ ಸಂಭಾಷಣೆಯನ್ನು ಹೇಳಬೇಕಿತ್ತು. ಪೌರಾಣಿಕ ಪಾತ್ರಗಳಾದರಂತೂ ಸರಿಯೇ ಸರಿ. ಸಂಸ್ಕøತ ಹಾಗೂ ಶಿಷ್ಟ ಪದಗಳ ಜೋಡಣೆಯುಳ್ಳ ಉದ್ದುದ್ದ ವಾಕ್ಯಗಳ ಸಂಭಾಷಣೆಯಿರುತ್ತಿತ್ತು. ಅದನ್ನು ಹೇಳುವುದು ಒಂದು ಸವಾಲೇ ಆಗಿತ್ತು ಎನ್ನುತ್ತಾರೆ ಸರೋಜಾದೇವಿ. ಆದರೆ ಅವರಿಗಿದ್ದ ಛಲ ಸೋಲೊಪ್ಪಲು ಬಿಡಲಿಲ್ಲ. ತೆಲುಗಿನ ‘ಸೀತಾರಾಮ ಕಲ್ಯಾಣಂ’, ‘ಜಗದೇಕ ವೀರನ ಕಥಾ’, ತಮಿಳಿನ ‘ನಾಡೋಡಿ ಮನ್ನನ್’, ಹಿಂದಿಯ ‘ಪೈಗಮ್’ ‘ಸಸುರಾಲ್’ ‘ಪ್ಯಾರ್ ಕಿಯಾ ತೋ ಡರ್‍ನಾ ಕ್ಯಾ’ ಮುಂತಾದ ಚಿತ್ರಗಳ ದೊಡ್ಡಪಟ್ಟಿಯೇ ಇದೆ. ಎಲ್ಲ ಚಿತ್ರಗಳಲ್ಲಿಯೂ ಇವರ ಪಾತ್ರಕ್ಕೆ ಇವರದೇ ಕಂಠ!

1958 ರಲ್ಲಿ ನಾಡೋಡಿ ಮನ್ನನ್ ಚಿತ್ರದಿಂದ ಪ್ರಾರಂಭವಾದ ಅವರ ತಮಿಳು ಚಿತ್ರ ರಂಗದ ಪಯಣ 1966 ರ ವರೆಗೆ ಮುಂದುವರಿದು, ಗಲ್ಲಾಪೆಟ್ಟಿಗೆ ಸೂರೆ ಹೊಡೆದ, 27 ಚಿತ್ರಗಳನ್ನು ನೀಡಲು ಕಾರಣವಾಯಿತು. ಎಂಜಿಆರ್ ಮತ್ತು ಸರೋಜಾದೇವಿ ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ಜೋಡಿ ಎನಿಸಿದ್ದರು. ಕನ್ನಡದ ಮೊಟ್ಟ ಮೊದಲ ವರ್ಣ ಚಿತ್ರ ಅಮರಶಿಲ್ಪಿ ಜಕಣಾಚಾರಿಯಲ್ಲಿ ಇವರೇ ನಾಯಕಿ. ಡಾ. ರಾಜ್‍ಕುಮಾರ್ ಅವರೊಡನೆ ಮಾಡಿದ ಮಲ್ಲಮ್ಮನ ಪವಾಡ(1969), ನ್ಯಾಯವೇ ದೇವರು(1971), ಶ್ರೀ ಶ್ರೀನಿವಾಸ ಕಲ್ಯಾಣ(1974), ಬಭ್ರುವಾಹನ(1977), ಭಾಗ್ಯವಂತರು(1977) ಮುಂತಾದ ಚಿತ್ರಗಳಲ್ಲಿನ ಅವರ ಅಭಿನಯವನ್ನು ಮರೆಯಲುಂಟೆ, ಯಾವುದನ್ನು ಹೆಸರಿಸಬೇಕು, ಯಾವುದನ್ನು ಬಿಡಬೇಕು ಎನ್ನುವಂತೆ. ಕನ್ನಡದ ಎಲ್ಲ ಯಶಸ್ವೀ ನಾಯಕರೊಡನೆಯೂ ಸರೋಜಾದೇವಿ ನಟಿಸಿದ್ದಾರೆ.

ಸರೋಜಾದೇವಿ ವಿವಾಹ ಜೀವನಕ್ಕೆ ಕಾಲಿಟ್ಟುದುದು1967 ರಲ್ಲಿ. ಅವರು ಆಗ ತಮ್ಮ ವೃತ್ತಿ ಜೀವನದ ಉಚ್ಛ್ರಾಯ ಕಾಲದಲ್ಲಿದ್ದರು. ಆದರೆ ಮದುವೆ ಅವರ ವೃತ್ತಿ ಜೀವನಕ್ಕೆ ಅಡ್ಡಿಯಾಗಲಿಲ್ಲ. ಅವರ ಪತಿ ಶ್ರೀಹರ್ಷ ಅವರು ಸರೋಜಾದೇವಿ ಅವರ ಅಭಿನಯ ಕಲೆಯನ್ನು ಗೌರವಿಸಿ ಪ್ರೋತ್ಸಾಹಿಸಿದರು. ಹಾಗಾಗಿ ಅವರು ವಿವಾಹಾನಂತರವೂ ಅತ್ಯಂತ ಬೇಡಿಕೆಯ ನಟಿಯಾಗಿಯೇ ಮುಂದುವರಿದರು. ವಿವಾಹವಾದ ನಂತರ, ತಮಿಳಿಗಿಂತ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿದರು. 1985 ರಲ್ಲಿ ಅವರ ಪತಿ ಅನಾರೋಗ್ಯ ಪೀಡಿತರಾಗುವವರೆಗೆ ಅವರು ಅಭಿನಯವನ್ನು ಮುಂದುವರಿಸಿದರು. ಅವರ ಪತಿ ಶ್ರೀಹರ್ಷ 1987 ರಲ್ಲಿ ಇಹಲೋಕ ತ್ಯಜಿಸಿದರು. ಪತಿ ಅನಾರೋಗ್ಯ ಪೀಡಿತರಾಗುವುದಕ್ಕೆ ಮುನ್ನ ಒಪ್ಪಿಕೊಂಡ ಚಿತ್ರಗಳನ್ನು 1987 ರ ನಂತರ ಪೂರ್ಣಗೊಳಿಸಿದರು. ಆನಂತರದಲ್ಲಿ, ಚಿತ್ರಗಳನ್ನು ಒಪ್ಪಿಕೊಳ್ಳಬಾರದೆಂದು ನಿರ್ಧರಿಸಿದ್ದರೂ, ಚಿತ್ರ ತಯಾರಕರ ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ಅಭಿನಯಿಸಲು ಪ್ರಾರಂಭಿಸಿದರು. ಕೆಲವು ಚಿತ್ರಗಳಲ್ಲಿ ಪೋಷಕ ನಟಿಯಾಗಿಯೂ ಅಭಿನಯಿಸಿದರು.

ಇಂದು, ಗಾಡ್ ಫಾದರ್ ಇಲ್ಲದಿದ್ದರೆ ಚಿತ್ರ ರಂಗದಲ್ಲಿ ಭವಿಷ್ಯವೇ ಇಲ್ಲ ಎಂಬಂಥ ವಾತಾವರಣ ಸೃಷ್ಟಿಯಾಗಿದೆ. ಈಗ ಪ್ರತಿಭೆ, ಅದೃಷ್ಟ ಎಷ್ಟು ಮುಖ್ಯವೋ ಹಾಗೆಯೇ ಕೈಹಿಡಿದು ಮುಂತಳ್ಳುವ ಗಾಡ್ ಫಾದರ್ ಇರಬೇಕಾದ್ದೂ ಅಷ್ಟೇ ಮುಖ್ಯ ಎಂಬುದು ರಹಸ್ಯವೇನೂ ಅಲ್ಲ. ಆದರೆ ಸರೋಜಾದೇವಿ ಅವರು ಚಿತ್ರರಂಗಕ್ಕೆ ಪ್ರವೇಶ ಮಾಡಿದಾಗ ಇದ್ದ ಪರಿಸ್ಥಿತಿ ಇದಕ್ಕಿಂತ ತೀರ ಭಿನ್ನ. ಹೀಗೂ ಒಂದು ಕಾಲ ಇತ್ತೆ ಎನ್ನುವಮಟ್ಟಿಗೆ ಮುಕ್ತ ಮನಸ್ಸಿನ ಮುಕ್ತ ವಾತಾವರಣ. 2019 ರಲ್ಲಿ ಮೈಸೂರಿಗೆ ಭೇಟಿ ಕೊಟ್ಟಾಗ ಸ್ಟಾರ್ ಆಫ್ ಮೈಸೂರ್ ಗೆ ನೀಡಿದ ಸಂದರ್ಶನದಲ್ಲಿ ಸರೋಜಾದೇವಿ ಅವರು ಇದನ್ನು ತೆರೆದಿಡುತ್ತಾರೆ. ಅವರ ಮಾತುಗಳಲ್ಲೇ ಹೇಳಬೇಕೆಂದರೆ, “ಶೂಟಿಂಗ್ ನಡೆಯುವ ಸ್ಟುಡಿಯೋಗಳೆಲ್ಲವೂ ಬಹು ದೊಡ್ಡವು. ಅವುಗಳಲ್ಲಿ ವಾಹಿನಿ ಸ್ಟುಡಿಯೋ ಅತಿ ದೊಡ್ಡದು. ಕಟ್ಟಡದ ಎಂಟು ಮಹಡಿಗಳಲ್ಲೂ ಒಂದಲ್ಲ ಒಂದು ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ನಾನು ಒಂದು ಮಹಡಿಯಲ್ಲಿ ಶೂಟಿಂಗ್‍ನಲ್ಲಿ ತೊಡಗಿದ್ದರೆ ಅದೇ ಕಟ್ಟಡದ ಇನ್ನೊಂದು ಮಹಡಿಯಲ್ಲಿ ಎನ್‍ಟಿಆರ್ ಅಥವಾ ನಾಗೇಶ್ವರ ರಾವ್ ಅಥವಾ ಎಂಜಿಆರ್ ಶೂಟಿಂಗ್‍ನಲ್ಲಿ ತೊಡಗಿರುತ್ತಿದ್ದರು. ಶೂಟಿಂಗ್‍ನಲ್ಲಿ ಬಿಡುವು ದೊರೆತಾಗ ಇನ್ನೊಂದು ಮಹಡಿಗೆ ಬಂದು, ಅಲ್ಲಿ ನಡೆಯುತ್ತಿದ್ದ ಶೂಟಿಂಗ್ ಅನ್ನು ವೀಕ್ಷಿಸುತ್ತಿದ್ದರು. ಚೆನ್ನಾಗಿ ನಟಿಸುತ್ತಿದ್ದಾರೆ ಎಂದೆನಿಸಿದ ಕೂಡಲೇ ‘ಯಾರದು’ ಎಂದು ವಿಚಾರಿಸಿ ತಮ್ಮ ಮುಂದಿನ ಚಿತ್ರಕ್ಕೆ ಬುಕ್ ಮಾಡಿ ಬಿಡುತ್ತಿದ್ದರು. ಅಲ್ಲಿ ಮುಖ್ಯವಾಗುತ್ತಿದ್ದುದು ಪ್ರತಿಭೆ ಒಂದೇ” ಒಮ್ಮೆ ತಮ್ಮ ಅಭಿನಯವನ್ನು ನೋಡಿದ ಎನ್‍ಟಿಆರ್ ಅವರು ತಮ್ಮ ಮುಂದಿನ `ಸೀತಾರಾಮಕಲ್ಯಾಣ’ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟರು. ಮತ್ತೊಮ್ಮೆ ತಮ್ಮ ಅಭಿನಯವನ್ನು ನೋಡಿದ ಎಂಜಿಆರ್, ‘ಯಾರೀ ಹುಡುಗಿ’ ಎಂದು ವಿಚಾರಿಸಿ, ತಾವು ಮಾಡುತ್ತಿದ್ದ ‘ನಾಡೋಡಿ ಮನ್ನನ್’ ಚಿತ್ರದಲ್ಲಿ ನಾಯಕಿಯ ಪಾತ್ರ ನೀಡಿದರು. ಅಲ್ಲಿ ಯಾವುದೇ ಶಿಫಾರಸಿನ ಅಗತ್ಯವೇ ಇರುತ್ತಿರಲಿಲ್ಲ ಎನ್ನುತ್ತಾರೆ. ಹಿರಿಯ ನಟ ನಟಿಯರ ಮಾತುಗಳಿಂದ, ಚಿತ್ರ ರಂಗದಲ್ಲಿ ಆಗಿರುವ ಬೆಳವಣಿಗೆಗಳನ್ನು ಗುರುತಿಸುವಂತೆಯೇ, ಆದ್ಯತೆಗಳಲ್ಲಿ ಆಗಿರುವ ಬದಲಾವಣೆಗಳನ್ನು ಹಾಗೂ ಮೌಲ್ಯಗಳಲ್ಲಿ ಆಗಿರುವ ಪಲ್ಲಟಗಳನ್ನೂ ಗುರುತಿಸಬಹುದು.

`ರಾಜಕೀಯ ನನ್ನ ಕ್ಷೇತ್ರವಲ್ಲ’ : ಅತ್ಯಂತ ಜನಪ್ರಿಯ ತಾರೆಯರು ಚಿತ್ರರಂಗದ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ನಂತರ ರಾಜಕೀಯವನ್ನು ಪ್ರವೇಶಿಸುವುದು ಸಾಮಾನ್ಯ. ರಾಜಕೀಯ ಜೀವನದಲ್ಲಿ ಬಹು ಬೇಗ ಪ್ರವರ್ಧಮಾನಕ್ಕೆ ಬರಲು ಚಿತ್ರರಂಗದಲ್ಲಿ ಅವರಿಗೆ ಇದ್ದ ಜನಪ್ರಿಯತೆಯೇ ಕಾರಣವಾಗುತ್ತದೆ. ಆದರೆ, ಬಿ.ಸರೋಜಾದೇವಿ ಅವರಿಗೆ ರಾಜಕೀಯವನ್ನು ಪ್ರವೇಶಿಸಬೇಕೆಂದು ಮಾಜಿ ಪ್ರಧಾನಮಂತ್ರಿ ರಾಜೀವ್‍ಗಾಂಧಿ ಅವರಿಂದಲೇ ಆಹ್ವಾನ ಬಂದಾಗಲೂ ‘ಅದು ನನ್ನ ಕ್ಷೇತ್ರವಲ್ಲ’ ಎಂದು ನಯವಾಗಿ ನಿರಾಕರಿಸಿರಂತೆ. ಆಗ ಅವರು ‘ಹಾಗಾದರೆ ನೀವು ತಮಿಳುನಾಡಿನಲ್ಲಿ ಯಾರ ಪರವಾಗಿಯೂ ಚುನಾವಣಾ ಪ್ರಚಾರ ಮಾಡಬಾರದು’ ಎಂದು ವಿನಂತಿಸಿದರಂತೆ. ಅಂತೆಯೇ ರಾಜೀವ್ ಗಾಂಧಿ ಅವರು, ಚುನಾವಣಾ ಪ್ರಚಾರಕ್ಕಾಗಿ ತಮಿಳುನಾಡಿನ ಶ್ರೀಪೆರಂಬದೂರಿಗೆ ಹೋದಾಗ ಅವರು ದೂರವೇ ಉಳಿದಿದ್ದರು. ಅಲ್ಲಿಯೇ, ಆ ಸಂದರ್ಭದಲ್ಲಿಯೇ, ರಾಜೀವ್ ಗಾಂಧಿ ಅವರು ಹಂತಕ ಬಲಿಯಾದದ್ದು. ಚುನಾವಣಾ ಪ್ರಚಾರದಿಂದ ದೂರ ಉಳಿಯುವ ನಿರ್ಧಾರವೇ ಸರೋಜಾದೇವಿ ಅವರನ್ನು ಅಂದು ಸಾವಿನ ದವಡೆಯಿಂದ ಪಾರು ಮಾಡಿತು.

ಇಂದಿಗೂ ಸರೋಜಾದೇವಿ ಅವರು ಜನಾನುರಾಗಿಯಾಗಿಯೇ ಉಳಿದಿದ್ದಾರೆ ಎಂದರೆ ಅದಕ್ಕೆ ಸರೋಜಾದೇವಿಯವರ ವಿನಯವಂತಿಕೆ, ನಮ್ರತೆ ಮತ್ತು ವಿನೀತ ಭಾವಗಳೇ ಕಾರಣ ಎಂದರೆ ತಪ್ಪಾಗಲಾರದು. ಈಗಲೂ ಅವರು ಅನೇಕ ಸಮಾಜಮುಖೀ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಗಲಿದ ತಮ್ಮ ಪತಿ ಶ್ರೀಹರ್ಷ ಅವರ ಜನ್ಮ ದಿನ ಮತ್ತು ಅವರ ನಿಧನರಾದ ದಿನಗಳಂದು ತಮಿಳುನಾಡಿನ ಶಂಕರ ನೇತ್ರಾಲಯದಲ್ಲಿ ಉಚಿತ ಕಣ್ಣು ಶಸ್ತ್ರಚಿಕಿತ್ಸೆಯ ಶಿಬಿರಗಳನ್ನು ಏರ್ಪಡಿಸುತ್ತಾರೆ. ಅವರ ತಾಯಿಯವರ ಹೆಸರಿನಲ್ಲಿ 300 ರಿಂದ 400 ಹೆಣ್ಣುಮಕ್ಕಳು ಶಿಕ್ಷಣ ಪಡೆಯಬಹುದಾದ ಶಾಲೆಯನ್ನು ಚೆನ್ನಪಟ್ಟಣದಲ್ಲಿ ಸ್ಥಾಪಿಸಿದ್ದಾರೆ. ನಮ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಿರುವ ಒಬ್ಬರನ್ನು ಗುರುತಿಸಿ ಪ್ರತಿ ವರ್ಷ ಪ್ರಶಸ್ತಿ ಕೊಡುವ ಉದ್ದೇಶದಿಂದ ಭಾರತೀಯ ವಿದ್ಯಾ ಭವನದಲ್ಲಿ ಡಾ. ಬಿ. ಸರೋಜಾದೇವಿ ದತ್ತಿ ನಿಧಿ ಎಂದು ತಮ್ಮ ಹೆಸರಿನಲ್ಲಿ ಒಂದು ದತ್ತಿನಿಧಿಯನ್ನು ಸ್ಥಾಪಿಸಿದ್ದಾರೆ.

1998ರಲ್ಲಿ ಒಮ್ಮೆ ಮತ್ತು 2005 ರಲ್ಲಿ ಮತ್ತೊಮ್ಮೆ ಎರಡು ಬಾರಿ 45ನೇ ಮತ್ತು 53 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿ ಸರೋಜಾದೇವಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ಚಲನಚಿತ್ರ ಸಂಘದ ಉಪಾಧ್ಯಕ್ಷರಾಗಿ, ತಿರುಪತಿ ತಿರುಮಲ ದೇವಸ್ಥಾನದ ಸ್ಥಳೀಯ ಸಲಹಾ ಸಮಿತಿಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. 54 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ, ದಿಲೀಪ್ ಕುಮಾರ್, ಲತಾ ಮಂಗೇಶ್ಕರ್ ಮತ್ತು ತಪನ್ ಸಿನ್ಹಾ ಅವರೊಡನೆ ಜೀವಮಾನ ಸಾಧನೆಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಎಂ.ಜಿ.ಆರ್ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಿವೆ. ಸರೋಜಾದೇವಿ ಅವರ ಮಕ್ಕಳು ಭುವನೇಶ್ವರಿ, ಇಂದಿರಾ ಹಾಗೂ ಗೌತಮ್ ರಾಮಚಂದ್ರ. ಮಗಳು ಭುವನೇಶ್ವರಿಯ ಅಕಾಲಿಕ ಮರಣ ಅವರಿಗೆ ಅಗಾಧ ನೋವುಂಟು ಮಾಡಿದ ಘಟನೆ. ಅವಳ ನೆನಪಿನಲ್ಲಿ, ‘ಭುವನೇಶ್ವರಿ ಪ್ರಶಸ್ತಿ’ ಯನ್ನು ಸ್ಥಾಪಿಸಿ, ಉತ್ತಮ ಸಾಹಿತ್ಯ ಕೃತಿಗೆ ನೀಡಲಾಗುತ್ತಿದೆ.

ಭಾರತ ಸರ್ಕಾರ ನೀಡಿದ ಪದ್ಮ ಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳಲ್ಲದೆ ಅವರಿಗೆ ಬಂದ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ. ತಮಿಳುನಾಡು ಸರ್ಕಾರ, ಆಂಧ್ರಪ್ರದೇಶ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಸರೋಜಾದೇವಿ ಅವರಿಗೆ ಸಂದಿವೆ.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *