ಪದ್ಮ ಪ್ರಭೆ/ ಕಣ ಭೌತವಿಜ್ಞಾನ ಕ್ಷೇತ್ರದ ಖನಿ: ಡಾ. ರೋಹಿಣಿ ಗೋಡ್‍ಬೋಲೆ – ಡಾ. ಗೀತಾ ಕೃಷ್ಣಮೂರ್ತಿ

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ನಿಂತಿರುವ ಪ್ರಖ್ಯಾತ ಸೈದ್ಧಾಂತಿಕ ಭೌತವಿಜ್ಞಾನಿ ಡಾ. ರೋಹಿಣಿ ಗೋಡ್‍ಬೋಲೆ ವಿಜ್ಞಾನ ಮತ್ತು ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮುಂದೆ ಬಂದು ಪಾಲ್ಗೊಳ್ಳಬೇಕೆಂಬ ಆಶಯದಿಂದ ನಿರಂತರವಾಗಿ ಶ್ರಮಿಸುತ್ತಿರುವ ವಿದ್ವನ್ಮಣಿ. ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಲಿಂಗ ಪಕ್ಷಪಾತ, ಲಿಂಗ ತಾರತಮ್ಯಗಳ ವಿರುದ್ಧ ಸದ್ದಿಲ್ಲದೆ ಸೆಣೆಸುತ್ತಿರುವ ಅಪರೂಪದ ವಿಜ್ಞಾನಿ. 2019 ರಲ್ಲಿ ಪದ್ಮಶ್ರೀ ಪ್ರಶಸ್ತಿ ಗೌರವ ಪಡೆದ ಅವರು, ವಿಜ್ಞಾನ ಕ್ಷೇತ್ರದಲ್ಲಿ ಸಾವಿರಾರು ಯುವತಿಯರನ್ನು ಪ್ರೋತ್ಸಾಹಿಸುತ್ತ ಬಂದಿದ್ದಾರೆ. ನೂರಾರು ಮಹಿಳಾ ವಿಜ್ಞಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ.

ನಮ್ಮ ದೇಶದ ಕೆಲವು ಪ್ರಸಿದ್ಧ ವಿಜ್ಞಾನಿಗಳ ಹೆಸರುಗಳನ್ನು ನೀವು ಹೇಳಬಲ್ಲಿರಾ? ಈ ಪ್ರಶ್ನೆಗೆ ಉತ್ತರವಾಗಿ ಸಾಮಾನ್ಯವಾಗಿ ನಿಮ್ಮ ನೆನಪಿಗೆ ಬರುವ ಹೆಸರುಗಳೆಂದರೆ ಸರ್ ಸಿ.ವಿ. ರಾಮನ್, ಮೇಘನಾದ್ ಸಹಾ, ಸತ್ಯೇಂದ್ರನಾಥ್ ಬೋಸ್, ಜೆ.ಸಿ. ಬೋಸ್, ಸಿ. ಎನ್.ಆರ್. ರಾವ್ ಇತ್ಯಾದಿ. ಅಪ್ಪಿತಪ್ಪಿಯೂ ಈ ಪಟ್ಟಿಯಲ್ಲಿ ಮಹಿಳಾ ವಿಜ್ಞಾನಿಗಳ ಹೆಸರು ಬರುವುದಿಲ್ಲ. ಈ ಪ್ರಶ್ನೆಯನ್ನು ಸ್ವಲ್ಪ ಬದಲಿಸಿ ಕೆಲವು ಮಹಿಳಾ ವಿಜ್ಞಾನಿಗಳ ಹೆಸರು ಹೇಳಿ ಎಂದಾಗ ತಬ್ಬಿಬ್ಬಾಗುವವರೇ ಹೆಚ್ಚು. ಈಗ ಇದೇ ಪ್ರಶ್ನೆಯನ್ನು ಡಾ. ರೋಹಿಣಿ ಗೋಡ್‍ಬೋಲೆ ಅವರನ್ನು ಕೇಳಿ ನೋಡಿ. ಒಂದೆರಡೇಕೆ, ಭರ್ತಿ ನೂರು ಪ್ರತಿಭಾವಂತ ಮಹಿಳಾ ವಿಜ್ಞಾನಿಗಳ ಸರ್ವ ಸಮಸ್ತ ವಿವರಗಳನ್ನೂ ಅವರು ನಿಮ್ಮ ಮುಂದಿಡುತ್ತಾರೆ. ಬೊಟಾನಿಕಲ್ ಸರ್ವೇ ಆಫ್ ಇಂಡಿಯಾದ ಮೊಟ್ಟ ಮೊದಲ ನಿರ್ದೇಶಕಿ ಡಾ. ಜಾನಕಿ ಅಮ್ಮಾಳ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯ ನಿರ್ದೇಶಕಿ ಡಾ. ಸತ್ಯವತಿ, ದೇಶದ ಮೊಟ್ಟಮೊದಲ ಮಹಿಳಾ ವೈದ್ಯವಿಜ್ಞಾನಿ ಡಾ. ಆನಂದೀ ಬಾಯಿ ಜೋಶಿ, ಮಾನವ ವಿಜ್ಞಾನಿ ಇರಾವತಿ ಕರ್ವೆ, ಪ್ರಖ್ಯಾತ ಪವನ ವಿಜ್ಞಾನಿ ಡಾ. ಅಣ್ಣಾಮಣಿ, ಕರ್ನಾಟಕದ ಮೊಟ್ಟಮೊದಲ ಮಹಿಳಾ ಇಂಜಿನಿಯರ್ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ರಾಜೇಶ್ವರಿ ಚಟರ್ಜಿ ಮುಂತಾದವರು ಇರುವ ಈ ಪಟ್ಟಿ ಹೀಗೆಯೇ ಮುಂದುವರೆಯುತ್ತದೆ.

ನೂರು ಅನನ್ಯ ಪ್ರತಿಭೆಯ ಮಹಿಳಾ ವಿಜ್ಞಾನಿಗಳ ಜೀವನಗಾಥೆಯನ್ನು ಸಂಪಾದಿಸಿರುವ ಡಾ. ರೋಹಿಣಿ ಗೋಡ್‍ಬೋಲೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಹೈ ಎನರ್ಜಿ ಫಿಸಿಕ್ಸ್ ಕೇಂದ್ರದಲ್ಲಿ ಪ್ರಾಧ್ಯಾಪಕರು. ಕಣ ಭೌತವಿಜ್ಞಾನ (ಪಾರ್ಟಿಕಲ್ ಫಿಸಿಕ್ಸ್) ಕ್ಷೇತ್ರದಲ್ಲಿ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ನಿಂತಿರುವ ಪ್ರಖ್ಯಾತ ಸೈದ್ಧಾಂತಿಕ ಭೌತವಿಜ್ಞಾನಿ. ವಿಜ್ಞಾನ ಮತ್ತು ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮುಂದೆ ಬಂದು ಪಾಲ್ಗೊಳ್ಳಬೇಕೆಂಬ ಆಶಯದಿಂದ ನಿರಂತರವಾಗಿ ಶ್ರಮಿಸುತ್ತಿರುವ ವಿದ್ವನ್ಮಣಿ. ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಲಿಂಗ ಪಕ್ಷಪಾತ, ಲಿಂಗ ತಾರತಮ್ಯಗಳ ವಿರುದ್ಧ ಸದ್ದಿಲ್ಲದೆ ಸೆಣೆಸುತ್ತಿರುವ ಅಪರೂಪದ ಮಹಿಳೆ.

ಡಾ. ರೋಹಿಣಿ ಗೋಡ್‍ಬೋಲೆ ಜನಿಸಿದ್ದು ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವ ನೀಡಿದ್ದ ಪುಣೆಯಲ್ಲಿನ ಕುಟುಂಬದಲ್ಲಿ, (12-11-1952). ಅವರ ಮೂವರು ಸಹೋದರಿಯರಲ್ಲಿ ಒಬ್ಬರು ವೈದ್ಯರಾದರೆ ಉಳಿದ ಇಬ್ಬರು ವಿಜ್ಞಾನ ಶಿಕ್ಷಕರು. ಪ್ರಾರಂಭಿಕ ಶಿಕ್ಷಣ ನಡೆದದ್ದು, ಏಳನೆಯ ತರಗತಿಯವರೆಗೂ ಕೇವಲ ಗೃಹವಿಜ್ಞಾನ ಮಾತ್ರ ಇದ್ದ ಚಿಂತಾಮಣ್‍ರಾವ್ ಪ್ರೌಢಶಾಲೆಯಲ್ಲಿ. ಹೀಗಾಗಿ ಬಾಲಕಿ ರೋಹಿಣಿ ವಿಜ್ಞಾನವನ್ನು ಕಲಿತದ್ದು, ಶಾಲೆಯಾದ ನಂತರ ಶಿಕ್ಷಕರ ಮನೆಯಲ್ಲಿ. ಅವರು ರಾಜ್ಯಮಟ್ಟದಲ್ಲಿ ಆ ಶಾಲೆಯಿಂದ ವಿದ್ಯಾರ್ಥಿ ವೇತನ ಪಡೆದ ಮೊದಲ ವಿದ್ಯಾರ್ಥಿನಿಯಾದರು. 11 ನೆಯ ತರಗತಿಯಲ್ಲಿ ಉತ್ತೀರ್ಣರಾದಾಗ, ಇಡೀ ರಾಜ್ಯಕ್ಕೆ ಮೊದಲ ಹತ್ತು ಸ್ಥಾನಗಳಲ್ಲಿ ಅವರು ಒಬ್ಬರಾಗಿದ್ದರು. ನ್ಯಾಷನಲ್ ಸೈನ್ಸ್ ಟ್ಯಾಲೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿ ವೇತನ ಪಡೆದದ್ದು ಅವರ ಜೀವನದಲ್ಲಿ ಒಂದು ಮುಖ್ಯ ತಿರುವು. ಬಿ.ಎಸ್ಸಿ. ಪದವಿಯ ನಂತರ ಮುಂಬಯಿಯ ಐ.ಐ.ಟಿ. ಯಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು, 1974 ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದ ಸ್ಟೋನಿಬ್ರೂಕ್‍ನಲ್ಲಿರುವ ನ್ಯೂಯಾರ್ಕ್ ರಾಜ್ಯ ವಿಶ್ವವಿದ್ಯಾಲಯವನ್ನು ಸೇರಿದರು. ಪಿಎಚ್.ಡಿ ಪದವಿಯನ್ನು ಪಡೆದು, 1979 ರಲ್ಲಿ ಭಾರತಕ್ಕೆ ಹಿಂದಿರುಗಿದ ನಂತರ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ, ಮುಂಬಯಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ, ಸಂಶೋಧಕರಾಗಿ ಕೆಲಸ ಮಾಡಿ, 1995 ರಲ್ಲಿ ಬೆಂಗಳೂರಿಗೆ ಬಂದು, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ, ಹೈ ಎನರ್ಜಿ ಫಿಸಿಕ್ಸ್ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ರೋಹಿಣಿ ಗೋಡ್‍ಬೋಲೆ ಅವರ ಸಂಶೋಧನೆಯ ಕ್ಷೇತ್ರ ಸೈದ್ಧಾಂತಿಕ ಕಣ ಭೌತವಿಜ್ಞಾನ. ಎಲ್ಲ ವಸ್ತುಗಳೂ ಪರಮಾಣುಗಳಿಂದ ಆಗಿದ್ದು, ಪ್ರತಿಯೊಂದು ಪರಮಾಣುವಿನಲ್ಲೂ ಪ್ರೋಟಾನ್ ಮತ್ತು ನ್ಯೂಟ್ರಾನ್‍ಗಳಿರುತ್ತವೆ. ಪ್ರೋಟಾನನ್ನು ಭೇದಿಸಿ ಒಳಹೊಕ್ಕರೆ ನಮಗೆ ದೊರೆಯುವುದು ಮೂಲಕಣಗಳ (ಎಲಿಮೆಂಟರಿ ಪಾರ್ಟಿಕಲ್, ಫಂಡಮೆಂಟಲ್ ಪಾರ್ಟಿಕಲ್) ಅನೂಹ್ಯವಾದ, ಸೂಕ್ಷ್ಮಾತಿಸೂಕ್ಷ್ಮ ಲೋಕ. ಕಣ ಭೌತವಿಜ್ಞಾನ, ಅತಿ ನಿಶಿತವಾದ ಗಣಿತದ ನೆರವಿನಿಂದ ಈ ಮೂಲಕಣಗಳ ರಚನೆ, ಗುಣಗಳು, ವರ್ತನೆ, ಅಂತರಕ್ರಿಯೆ ಮುಂತಾದವುಗಳನ್ನು ಅಧ್ಯಯನ ಮಾಡುವ ವಿಜ್ಞಾನದ ಶಾಖೆ. ಉನ್ನತ ಶಕ್ತಿ ಭೌತವಿಜ್ಞಾನ (ಹೈ ಎನರ್ಜಿ ಫಿಸಿಕ್ಸ್) ಎಂಬ ಹೆಸರೂ ಇದಕ್ಕಿದೆ.

ಪರಮಾಣುವೊಂದರ ಒಳಗಿನ ಬಿಡಿಭಾಗಗಳು ಹೇಗೆ ಪರಸ್ಪರವಾಗಿ ವರ್ತಿಸುತ್ತವೆ ಎಂಬುದನ್ನು ನಿರೂಪಿಸುವ ಗಣಿತೀಯ ಮಾದರಿಯೇ ಕಣ ಭೌತವಿಜ್ಞಾನದ ಸ್ಟ್ಯಾಂಡರ್ಡ್ ಮಾಡೆಲ್. ಭೌತಿಕ ವಿಶ್ವದ ಬಹುತೇಕ ವಿದ್ಯಮಾನಗಳನ್ನು ಈ ಮಾದರಿಯಿಂದ ವಿವರಿಸಬಹುದು. ಇಂತಹ ವಿಶಿಷ್ಟ ಮಾದರಿ, ಜಗತ್ತಿನಾದ್ಯಂತದ ಕಣ ಭೌತವಿಜ್ಞಾನಿಗಳ ಮೂರೂವರೆ ದಶಕಗಳ ಅವಿರತ ಶ್ರಮದ ಫಲ. ಈ ಸಮುದಾಯದಲ್ಲಿ ಡಾ. ರೋಹಿಣಿ ಗೋಡ್‍ಬೋಲೆ ಅವರ ಹೆಸರು ಎದ್ದು ಕಾಣುತ್ತದೆ. ಈ ಸ್ಟ್ಯಾಂಡರ್ಡ್ ಮಾಡೆಲ್ ಆಚೆಯಿರುವ ಭೌತವಿಜ್ಞಾನ ಮತ್ತು ಆ ಮಾಡೆಲ್ ಸೂಚಿಸಿದ ಹಿಗ್ಸ್ ಬೋಸಾನ್' (ದೇವ ಕಣ, ಗಾಡ್ ಪಾರ್ಟಿಕಲ್) ಎಂಬ ಕಣವನ್ನು ಪತ್ತೆ ಹಚ್ಚಲು ಜಾಗತಿಕ ವಿಜ್ಞಾನಿಗಳ ಸಹಯೋಗದಲ್ಲಿ ನಡೆದ ಪ್ರಯತ್ನಗಳಲ್ಲೂ ಡಾ. ರೋಹಿಣಿ ಅವರ ಕೊಡುಗೆಯಿದೆ. ಮೂರು ದಶಕಗಳ ಕಾಲ, ಯೂರೋಪಿನ ನ್ಯೂಕ್ಲಿಯರ್ ರಿಸರ್ಚ್ ಕೌನ್ಸಿಲ್ (ಸರ್ನ್) ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿ, ಸಂಶೋಧನೆಯಲ್ಲಿ ಪಾಲುಗೊಂಡಿದ್ದ ಡಾ. ರೋಹಿಣಿ ಗೋಡ್‍ಬೋಲೆ, 2012 ರ ಜುಲೈ ತಿಂಗಳಿನಲ್ಲಿ ದೇವಕಣದ ಪತ್ತೆಯನ್ನು ಜಗತ್ತಿಗೆ ಸಾರಿದ ಐತಿಹಾಸಿಕ ಸಭೆಯಲ್ಲಿ ಭಾಗವಹಿಸಿದ್ದರು.

ಕಣ ಭೌತವಿಜ್ಞಾನ ಕ್ಷೇತ್ರದಲ್ಲಿ 150 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದು ಮೂರು ದಶಕಗಳ ಅವಧಿಯಲ್ಲಿ ಅವರು ನೀಡಿರುವ ಅಸದೃಶ ಕೊಡುಗೆಗಾಗಿ ಡಾ. ರೋಹಿಣಿ ಗೋಡ್‍ಬೋಲೆ ಅವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ದೊರೆತಿವೆ. ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆಯ ಯಂಗ್ ಅಸೋಸಿಯೇಟ್ ಪ್ರಶಸ್ತಿ, ಎಲೆಕ್ಟೆಡ್ ಫೆಲೋ ಗೌರವ, ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಫೆಲೋ ಗೌರವ, ಅದೇ ಸಂಸ್ಥೆಯ ಜವಹರಲಾಲ್ ನೆಹರೂ ವಿಸಿಟಿಂಗ್ ಫೆಲೋಶಿಪ್, ಅತ್ಯುತ್ತಮ ಸಂಶೋಧನೆಗಾಗಿ ರುಸ್ತುಮ್ ಚೋಕ್ಸಿ ಪ್ರಶಸ್ತಿ, ಏಷ್ಯಾಟಿಕ್ ಸೊಸೈಟಿ ಸೈದ್ಧಾಂತಿಕ ಭೌದ್ಧವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗೆ ನೀಡುವ ಮೇಘನಾದ ಸಹಾ ಪದಕ, ಎಸ್.ಎನ್.ಬೋಸ್ ಪದಕ, ಜೆ. ಸಿ ಬೋಸ್ ಫೆಲೋಶಿಪ್, ಸರ್ ಸಿ ವಿ ರಾಮನ್ ಮಹಿಳಾ ವಿಜ್ಞಾನಿ ಪುರಸ್ಕಾರ, ಇಟಲಿಯ ಅಬ್ದುಸ್ ಸಲಾಂ ಅಂತಾರಾಷ್ಟ್ರೀಯ ಸೈದ್ಧಾಂತಿಕ ಭೌತವಿಜ್ಞಾನ ಕೇಂದ್ರದ ಪ್ರಶಸ್ತಿಗಳು ಮುಖ್ಯವಾದವುಗಳು. ಡಾ. ರೋಹಿಣಿ ಗೋಡ್‍ಬೋಲೆ ಅವರಿಗೆ ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ನಾಗರಿಕ ಪ್ರಶಸ್ತಿ ದೊರೆತದ್ದು 2019 ರಲ್ಲಿ.

ಈ ಎಲ್ಲ ಪ್ರಶಸ್ತಿ, ಗೌರವಗಳಿಗೆ ಕಲಶ ಪ್ರಾಯದಂತೆ. ಫ್ರಾನ್ಸ್ ದೇಶದ' ಆದ್ರ್ರ್ ನ್ಯಾಸ್ಯೋನಾಲ್ ದ್ಯು ಮೆರೀತ್' ಎಂಬ ಶ್ರೇಷ್ಠ ನಾಗರಿಕ ಪ್ರಶಸ್ತಿ ಈ ವರ್ಷದ ಜನವರಿಯಲ್ಲಿ ದೊರೆತಿದೆ. ಭಾರತ ಮತ್ತು ಫ್ರಾನ್ಸ್ ದೇಶಗಳ ವೈಜ್ಞಾನಿಕ ಸಮುದಾಯಗಳ ನಡುವೆ ಅತ್ಯುತ್ತಮ ಸಹಯೋಗದ ಸಾಧನೆ ಹಾಗೂ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಲಿಂಗ ತಾರತಮ್ಯವನ್ನು ನಿವಾರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವ ದಿಕ್ಕಿನಲ್ಲಿ ಅವರ ನಿರಂತರ ಪ್ರಯತ್ನಗಳಿಗಾಗಿ ಡಾ. ರೋಹಿಣಿಯವರ ಮೌಲಿಕ ಕೊಡುಗೆಗಾಗಿ ಈ ಗೌರವ ಸಂದಿದೆ.

ಗಂಭೀರ ಚಿಂತನೆ

2012, ಡಾ. ರೋಹಿಣಿ ಗೋಡ್‍ಬೋಲೆ ಅವರ ದೃಷ್ಟಿಕೋನದಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದ ವರ್ಷ. ಆ ವರ್ಷ,ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಪ್ಯೂರ್ ಅಂಡ್ ಅಪ್ಲೈಡ್ ಫಿಸಿಕ್ಸ್’ ಸಂಸ್ಥೆ, ಪ್ಯಾರಿಸ್ ನಗರದಲ್ಲಿ ಭೌತ ವಿಜ್ಞಾನದಲ್ಲಿ ಮಹಿಳೆ' ಎಂಬ ಶೀರ್ಷಿಕೆಯ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸಿತು. ಆಗ ನಮ್ಮ ದೇಶದಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‍ನಲ್ಲಿದ್ದ ಏಕೈಕ ಮಹಿಳಾ ಫೆಲೋ ಎಂದರೆ ಡಾ. ರೋಹಿಣಿ ಗೋಡ್‍ಬೋಲೆ ಅವರು.

ಸಮ್ಮೇಳನದಲ್ಲಿ ಭಾಗವಹಿಸಲು ಪ್ಯಾರಿಸ್‍ಗೆ ತೆರಳುವ ಪ್ರಯಾಣದುದ್ದಕ್ಕೂ ಅವರು ವಿಜ್ಞಾನ ಕ್ಷೇತ್ರದಲ್ಲಿನ ಮಹಿಳೆಯರ ಬಗೆಗೇ ಚಿಂತಿಸಿದರು. ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ 744 ಪ್ರತಿಷ್ಠಿತ ಫೆಲೋಶಿಪ್‍ಗಳಲ್ಲಿ ಮಹಿಳಾ ವಿಜ್ಞಾನಿಗಳಿಗೆ ದೊರೆತಿದ್ದು ಕೇವಲ 24. ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‍ನ 841 ಫೆಲೋಶಿಪ್‍ಗಳಲ್ಲಿ ಮಹಿಳೆಯರ ಪಾಲು 38. ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸ್‍ನ 395 ಫೆಲೋಶಿಪಗಳಲ್ಲಿ ಮಹಿಳೆಯರಿಗೆ ಸಿಕ್ಕಿದ್ದು 16. ನಮ್ಮ ದೇಶದಲ್ಲಿ ವೈಜ್ಞಾನಿಕ ಸಂಶೋಧನಾ ಕ್ಷೇತ್ರದ ಅತ್ಯುನ್ನತ ಗೌರವವೆಂದರೆ ಶಾಂತಿ ಸ್ವರೂಪ್ ಭಾಟ್‍ನಗರ್ ಪ್ರಶಸ್ತಿ. 1958 ರಿಂದ ನೀಡಲಾಗಿರುವ 500 ಪ್ರಶಸ್ತಿಗಳಲ್ಲಿ ಮಹಿಳೆಯರ ಸಂಖ್ಯೆ 75. ಪ್ಯಾರಿಸ್ ಸಮಾವೇಶದಲ್ಲಿ ಭಾಗವಹಿಸಿ ಬಂದ ನಂತರ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಮಹಿಳೆಯರ ಅತ್ಯಲ್ಪ ಸಂಖ್ಯೆ, ಅವರು ಎದುರಿಸಬೇಕಾಗಿ ಬರುವ ಹಲವಾರು ಸಮಸ್ಯೆಗಳು, ಲಿಂಗ ಪಕ್ಷಪಾತ, ಲಿಂಗ ತಾರತಮ್ಯಗಳ ಬಗ್ಗೆ ಡಾ. ರೋಹಿಣಿ ಗೋಡ್‍ಬೋಲೆ ಗಂಭೀರ ಚಿಂತನೆ ನಡೆಸಿದರು.

2004 ರಲ್ಲಿ, ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ, ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳು ಮತ್ತು ವೃತ್ತಿ ಜೀವನಕ್ಕೆ ಸಂಬಂಧಿಸಿದ ವರದಿಯೊಂದನ್ನು ಹೊರತಂದಿತು. ಅದರೊಂದಿಗೆ ವಿದ್ಯಾರ್ಥಿನಿಯರು ವಿಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆಯ ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳಲು ಬೇಕಾದ ಮಾರ್ಗದರ್ಶನ ಮತ್ತು ಪ್ರೇರಣೆಗಳನ್ನು ಒದಗಿಸಲು ಮಹಿಳಾ ವಿಜ್ಞಾನಿಗಳ ವಿಶೇಷ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಡಾ. ರೋಹಿಣಿ ಗೋಡ್‍ಬೋಲೆ ಅವರು, ಇತರ ಸದಸ್ಯರೊಡನೆ ದೇಶದಾದ್ಯಂತ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿನಿಯರೊಡನೆ ಸಂವಾದ ನಡೆಸಿ, ಅವರಿಗಿರುವ ವಿಪುಲ ಅವಕಾಶಗಳ ಬಗ್ಗೆ ಮಾಹಿತಿ ನೀಡಿ, ಅವರ ಅನುಮಾನಗಳನ್ನು ಬಗೆಹರಿಸಿ, ಮಾರ್ಗದರ್ಶನ ನೀಡಿ ಹುರಿದುಂಬಿಸಿದರು. ಅದರೊಂದಿಗೆ ನಮ್ಮ ದೇಶದಲ್ಲಿ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ವಿಜ್ಞಾನಿಗಳ ಆಧಾರ ದತ್ತಾಂಶ (ಡಾಟಾ ಬೇಸ್) ಸಿದ್ಧವಾಯಿತು. ಪಿಎಚ್.ಡಿ ಪದವಿ ಪಡೆದ ನಂತರ ಉದ್ಯೋಗ ತ್ಯಜಿಸುತ್ತಿದ್ದ ಅನೇಕ ಮಹಿಳಾ ವಿಜ್ಞಾನಿಗಳನ್ನು ಸಂಪರ್ಕಿಸಿ ಅವರ ನಿರ್ಧಾರಕ್ಕೆ ಕಾರಣಗಳನ್ನು ತಿಳಿಯುವ ಅಧ್ಯಯನವನ್ನೂ ಈ ಸಮಿತಿ ಕೈಗೊಂಡಿತು.

ಹೀಗೆ ಹೊರಗೆ ಹೋದ ಮಹಿಳಾ ವಿಜ್ಞಾನಿಗಳಿಗೆ ತಮ್ಮ ಕೆಲಸವನ್ನು ತ್ಯಜಿಸುವುದು ಬೇಕಿರಲಿಲ್ಲ. ಆದರೆ ಅವರ ಪರಿಣತಿ, ಅರ್ಹತೆ, ಕೌಶಲಗಳಿಗೆ ತಕ್ಕ ಕೆಲಸ ಅವರಿಗೆ ದೊರೆಯುತ್ತಿರಲಿಲ್ಲ. ಅವರು ಪಿಎಚ್.ಡಿ ಪಡೆದ ಸಂಸ್ಥೆಯಾಗಲೀ, ವೈಜ್ಞಾನಿಕ ಸಮುದಾಯವಾಗಲೀ ಅವರಿಗೆ ಸೂಕ್ತ ಕೆಲಸವನ್ನು ಕೊಡಿಸುವುದರಲ್ಲಿ ಯಾವ ನೆರವನ್ನೂ ನೀಡುತ್ತಿರಲಿಲ್ಲ. ಇದೀಗ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಂಶೋಧನಾ ಕ್ಷೇತ್ರವನ್ನು ತೊರೆದ ಮಹಿಳಾ ವಿಜ್ಞಾನಿಗಳನ್ನು ಹಿಂತಿರುಗಿ ಕರೆದು ತರಲು ಹಲವಾರು ವೀಶೇಷ ಯೋಜನೆಗಳನ್ನು ಜಾರಿಮಾಡಿದೆ. ಇಂಥ ಯೋಜನೆಗಳನ್ನು ಡಾ. ರೋಹಿಣಿ ಗೋಡ್‍ಬೋಲೆ ಅವರು ಸ್ವಾಗತಿಸಿದರೂ, ಅದಕ್ಕಿಂತ ಮುಖ್ಯವಾಗಿ ಮಹಿಳಾ ವಿಜ್ಞಾನಿಗಳು ಕೆಲಸ ತ್ಯಜಿಸಿ ಹೊರಹೋಗುವಂತಹ ಪರಿಸ್ಥಿತಿ ಉದ್ಭವಿಸದಂತೆ ಎಚ್ಚರ ವಹಿಸುವುದು ಜಾಣತನ ಎನ್ನುತ್ತಾರೆ. ಈ ಕ್ರಮ ಮಹಿಳೆಯರಿಗೆ ಸಹಾಯ ಮಾಡುವ ಉದಾರತನದ ನಿದರ್ಶನವಲ್ಲ. ಅದರ ಬದಲಿಗೆ ಮಹಿಳೆಯರ ಶಿಕ್ಷಣ, ತರಬೇತಿ, ಸಂಶೋಧನಾ ಕ್ಷೇತ್ರದಲ್ಲಿ ಅವರ ಮೇಲೆ ಹೂಡಿರುವ ಸಂಪನ್ಮೂಲದ ಸದುಪಯೋಗ ಎಂಬುದನ್ನು ಸಮಾಜ, ಸರ್ಕಾರಗಳು ನೆನಪಿಡಬೇಕೆಂಬುದು ಅವರ ವಾದ.

“ಲೀಲಾವತೀಸ್ ಡಾಟರ್ಸ್: ವುಮೆನ್ ಸೈಂಟಿಸ್ಟ್ಸ್ ಆಫ್ ಇಂಡಿಯಾ” ಎನ್ನುವುದು ರೋಹಿಣಿ ಅವರು ರಾಮಕೃಷ್ಣ ರಾಮಸ್ವಾಮಿ ಅವರೊಡನೆ ಸಂಪಾದಿಸಿರುವ ಪ್ರಸಿದ್ಧ ಕೃತಿ. (ಎರಡನೆಯ ಭಾಸ್ಕರಾಚಾರ್ಯ- ಕರ್ನಾಟಕದ ಇಂದಿನ ಬಿಜಾಪುರದಲ್ಲಿ ಕ್ರಿ.ಶ. 1114 ರಲ್ಲಿ ಜನಿಸಿದ ಪ್ರಸಿದ್ಧ ಗಣಿತಜ್ಞ ಮತ್ತು ಖಗೋಳ ವಿಜ್ಞಾನಿ. ಲೀಲಾವತಿ ಆತನ ಮಗಳು.) ಬೆಂಗಳೂರಿನ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಪ್ರಕಟಿಸಿರುವ ಈ ಕೃತಿಯಲ್ಲಿ ಭಾರತದ ನೂರು ಪ್ರಸಿದ್ಧ ಮಹಿಳಾ ವಿಜ್ಞಾನಿಗಳ ಜೀವನ ವೃತ್ತಾಂತವಿದೆ. ಅತ್ಯಂತ ಕಷ್ಟದ ಸಂದರ್ಭಗಳಲ್ಲೂ ಎದೆಗುಂದದೇ, ಹಿಡಿದ ಗುರಿ ಸಾಧಿಸಿ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮಹಿಳಾ ವಿಜ್ಞಾನಿಗಳು ಇಂದಿನ ಯುವತಿಯರಿಗೆ ರೋಲ್ ಮಾಡೆಲ್' ಗಳಾಗಬೇಕೆಂಬುದು ಈ ಕೃತಿಯ ಉದ್ದೇಶ. ಈ ಕೃತಿಯಲ್ಲಿರುವ ಮಹಿಳಾ ವಿಜ್ಞಾನಿಗಳ ಬಗ್ಗೆ, ವಿಜ್ಞಾನ ಕ್ಷೇತ್ರದಲ್ಲಿ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾದ ಅಗತ್ಯದ ಬಗ್ಗೆ, ವಿಜ್ಞಾನ ಕ್ಷೇತ್ರದಲ್ಲಿನ ಅವಕಾಶಗಳ ಬಗ್ಗೆ ಡಾ. ರೋಹಿಣಿ ಗೋಡ್‍ಬೋಲೆ ಅವರು ನಿರಂತರವಾಗಿ ಬರೆಯುತ್ತ, ಉಪನ್ಯಾಸಗಳನ್ನು ನೀಡುತ್ತ, ಸಾವಿರಾರು ಯುವತಿಯರನ್ನು ಪ್ರೋತ್ಸಾಹಿಸುತ್ತ ಬಂದಿದ್ದಾರೆ. ನೂರಾರು ಮಹಿಳಾ ವಿಜ್ಞಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ.

"ನಮ್ಮ ಸಮಾಜ ನಮ್ಮನ್ನು ಮೊದಲು ವಿಜ್ಞಾನಿಗಳೆಂದು ಗುರುತಿಸಬೇಕು. ಅನಂತರ ನಾವು ಪ್ರಾಸಂಗಿಕವಾಗಿ ಮಹಿಳೆಯರೇ ಹೊರತೂ ನಾವು ಮಹಿಳಾ ವಿಜ್ಞಾನಿಗಳಲ್ಲ. ಮಹಿಳಾ ವಿಜ್ಞಾನಿಗಳೆಂಬ ವರ್ಗೀಕರಣವೇ ಸರಿಯಲ್ಲ'' ಎಂಬುದು ಅವರ ದೃಢವಾದ ನಿಲುವು. ಅಂತಾರಾಷ್ಟ್ರೀಯ ಸಮ್ಮೇಳನವೊಂದಕ್ಕೆ ಜರ್ಮನಿಗೆ ಹೋದಾಗ, ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಿದ ಆತಿಥೇಯ ವಿಜ್ಞಾನಿ, "ನಿಮ್ಮ ಪತಿಯ ಸಂಶೋಧನಾ ಲೇಖನವನ್ನು ನಾನು ಓದಿದ್ದೇನೆ. ಅದು ಅತ್ಯದ್ಭುತವಾಗಿದೆ'' ಎಂದರಂತೆ. ಮಹಿಳೆಯೊಬ್ಬಳು ವಿಜ್ಞಾನಿಯಾಗಿ, ಉತ್ಕøಷ್ಟ ಮಟ್ಟದ ಸಂಶೋಧನಾ ಪ್ರಬಂಧವೊಂದನ್ನು ಬರೆಯಬಹುದೆಂಬುದೇ ಅನೇಕರಿಗೆ ಒಗ್ಗದ ಸಂಗತಿ ಎನ್ನುವ ಡಾ. ರೋಹಿಣಿ ಗೋಡ್‍ಬೋಲೆ, ಅಂತಹ ಪರಿಸ್ಥಿತಿ ಬಹಳ ನಿಧಾನವಾಗಿ ಬದಲಾಗುತ್ತಿದೆ ಎನ್ನುತ್ತಾರೆ. “ಮಹಿಳೆಯೊಬ್ಬಳು ವೃತ್ತಿಪರ ವಿಜ್ಞಾನಿಯಾಗಿ ಬೆಳೆದು, ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಗೇರುವುದು ಇಂದಿಗೂ ಬಹಳ ಕಷ್ಟ. ಅನೇಕ ಸಂಶೋಧನಾ ಸಂಸ್ಥೆಗಳಲ್ಲಿ ಹೊರಗಡೆಯವರಿಗೆ ತಿಳಿಯದಂತೆ ಅತಿ ಸೂಕ್ಷ್ಮವಾಗಿ ಲಿಂಗ ತಾರತಮ್ಯ, ಪಕ್ಷಪಾತ, ಕಿರುಕುಳಗಳು ಇಂದಿಗೂ ನಡೆಯುತ್ತಿವೆ. ಎಲ್ಲ ಮಹಿಳಾ ವಿಜ್ಞಾನಿಗಳಿಗೆ ಒಂದಲ್ಲ ಒಂದು ಬಾರಿ ವೃತ್ತಿ ಮತ್ತು ಕುಟುಂಬಗಳ ನಡುವೆ ಒಂದನ್ನು ಆಯ್ಕೆಮಾಡಿಕೊಳ್ಳಬೇಕಾದ ಸಂದಿಗ್ಧ ಪರಿಸ್ಥಿತಿ ಬರುತ್ತದೆ. ಅದು ಬರದಂತಹ ಪರಿಸರವನ್ನು ವೈಜ್ಞಾನಿಕ ಸಂಸ್ಥೆಗಳು ಸೃಷ್ಟಿಸಬೇಕು. ಮಹಿಳಾ ವಿಜ್ಞಾನಿಗಳಿಗೆ ಕುಟುಂಬದ ಜವಾಬ್ದಾರಿಯೂ ಇರುವುದರಿಂದ ಸಂಶೋಧನೆಗೆ ತೀರಾ ಅಗತ್ಯವಾದ, ಇತರ ಸಂಶೋಧಕರೊಡನೆ ನಿರಂತರವಾದ ಸಂಪರ್ಕ (ಪೀರ್ ನೆಟ್ ವರ್ಕಿಂಗ್) ಸಾಧ್ಯವಾಗುವುದಿಲ್ಲ. ಈ ಎಲ್ಲ ಸಮಸ್ಯೆಗಳ ಜೊತೆಗೆ ಯುವ ಮಹಿಳಾ ವಿಜ್ಞಾನಿಗಳಿಗೆ ನಿರಂತರವಾಗಿ ಮಾರ್ಗದರ್ಶನ ಮಾಡುವಮೆಂಟರಿಂಗ್ ವ್ಯವಸ್ಥೆ’ ಮಹಿಳಾ ವಿಜ್ಞಾನಿಗಳ ಸಮುದಾಯದಲ್ಲಿ ಬಹಳ ಅಪರೂಪ. ಈ ಪರಿಸ್ಥಿತಿ ಬದಲಾಬೇಕು” ಎಂಬುದು ಡಾ. ರೋಹಿಣಿ ಗೋಡ್‍ಬೋಲೆ ಅವರ ಖಚಿತ ಅಭಿಪ್ರಾಯ.

ಡಾ. ರೋಹಿಣಿ ಗೋಡ್‍ಬೋಲೆ, ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಸದಾಕಾಲ ಪಾದರಸದಂತೆ ಚುರುಕಾಗಿ, ಕ್ರಿಯಾಶೀಲವಾಗಿರುವ ಮಹಿಳೆ. ಕಣ ಭೌತವಿಜ್ಞಾನದ ಭವಿಷ್ಯದ ಚಟುವಟಿಕೆಗಳನ್ನು ರೂಪಿಸಲು ನಡೆಸಬೇಕಾದ ಅಂತಾರಾಷ್ಟ್ರಿಯ ಸಮ್ಮೇಳನ, ಯೂರೋಪ್, ಅಮೆರಿಕ. ಜಪಾನ್, ಚೀನಾಗಳಲ್ಲಿ ಮುಂದಿನ ತಲೆಮಾರಿನ ಕಣ ವೇಗೋತ್ಕರ್ಷಕಗಳನ್ನು ನಿರ್ಮಿಸುವ ಸಲಹಾ ಸಮಿತಿಯ ಸಭೆಗಳು, ಭಾರತೀಯ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಇರುವ ಅಸಮತೋಲ, ತಾರತಮ್ಯದ ಪರಿಸ್ಥಿತಿಗಳನ್ನು ನಿವಾರಿಸುವ ಕೆಲಸಗಳು – ಹೀಗೆ, ಡಾ. ರೋಹಿಣಿ ಅವರು ಹತ್ತಾರು ಕೆಲಸಗಳನ್ನು ಏಕಕಾಲದಲ್ಲಿ ಸಮರ್ಥವಾಗಿ ನಿರ್ವಹಿಸಬಲ್ಲ ವಿಜ್ಞಾನ ಕ್ಷೇತ್ರದ ಅಸಾಧಾರಣ ಮಹಿಳೆ. ಈ ವರ್ಷದ ಜುಲೈ ತಿಂಗಳ ಅಂತ್ಯದಲ್ಲಿ ಅವರು ಭಾರತೀಯ ವಿಜ್ಞಾನ ಮಂದಿರದಿಂದ ಅಧಿಕೃತವಾಗಿ ನಿವೃತ್ತಿ ಹೊಂದಲಿದ್ದಾರೆ. ಆದರೆ ವೃತ್ತಿನಿರತ ವಿಜ್ಞಾನಿಗೆ ನಿವೃತ್ತಿಯೆಂಬುದಿಲ್ಲ. ಅಲ್ಲಿನ ಹೈ ಎನರ್ಜಿ ಫಿಸಿಕ್ಸ್ ಕೇಂದ್ರದಲ್ಲಿ ಗೌರವ ಪ್ರಾಧ್ಯಾಪಕರಾಗಿ, ಅವರು ತಮ್ಮೆಲ್ಲ ಚಟುವಟಿಕೆಗಳನ್ನು ಮುಂದುವರಿಸಲಿದ್ದಾರೆ.

-ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *