ಪದ್ಮ ಪ್ರಭೆ / ಅದ್ಭುತ ನೃತ್ಯ ಪ್ರತಿಭೆ ಶಾಂತಾ ರಾವ್ – ಡಾ. ಗೀತಾ ಕೃಷ್ಣಮೂರ್ತಿ


ಶಾಂತಾ ರಾವ್ ಅವರು ನೃತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ತಿಳಿಯದಿದ್ದಲ್ಲಿ, ಭಾರತದ ಭವ್ಯ ಪರಂಪರೆಯೊಂದರ ಪ್ರಮುಖ ಪ್ರತಿನಿಧಿಯಾಗಿ ಪ್ರಖ್ಯಾತರಾದ ಬಹುಮುಖ ಪ್ರತಿಭೆಯ ಅನನ್ಯ ಕಲಾವಿದೆಯ ಪರಿಚಯದಿಂದ ವಂಚಿತರಾದಂತೆ. ಹುಡುಗಿಯೊಬ್ಬಳು ಕಥಕ್ಕಳಿಯನ್ನು ಕಲಿಯುವುದನ್ನು ಊಹಿಸಲೂ ಸಾಧ್ಯವಿಲ್ಲದಂಥ ಕಾಲದಲ್ಲಿ ಅವರು ಕಥಕ್ಕಳಿ, ಭರತನಾಟ್ಯ, ಮೋಹಿನಿ ಆಟ್ಟಂ ನೃತ್ಯ ಪ್ರಕಾರಗಳನ್ನು ಕಲಿತರು. ಭಾರತ ಸರ್ಕಾರ ಇವರಿಗೆ 1971 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅವರ `ಭಾಮಾ ನೃತ್ಯ’ ಪ್ರದರ್ಶನಕ್ಕೆ ‘ಪಿಕಾಸೋಗೆ ಹೋಲಿಸಬಹುದಾದ ನೃತ್ಯ ಪ್ರಸ್ತುತಿ’ ಎಂಬ ಮೆಚ್ಚುಗೆ ದೊರೆತಿತ್ತು.

ಶಾಂತಾ ರಾವ್ ಭಾರತೀಯ ನೃತ್ಯ ಕ್ಷೇತ್ರದಲ್ಲಿ ಒಂದು ಮರೆಯಲಾಗದ, ಮರೆಯಾಗಿಹೋದ ದೈತ್ಯ ಪ್ರತಿಭೆ. ಭರತನಾಟ್ಯ, ಕಥಕ್ಕಳಿ, ಮೋಹಿನಿ ಆಟ್ಟಂ ನೃತ್ಯ ಪ್ರಕಾರಗಳನ್ನು ಕಲಿತವರು, ಕರಗತವಾಗಿಸಿಕೊಂಡವರು. ಕಥಕ್ಕಳಿಗೇ ವಿಶಿಷ್ಟವಾದ ಕೊರೆದಂಥ ಖಚಿತ ಅಂಗ ವಿನ್ಯಾಸವನ್ನು ಭರತನಾಟ್ಯದ ಲಲಿತ ಲಾಸ್ಯ ಅಂಗವಿನ್ಯಾಸದೊಂದಿಗೆ ಮೇಳೈಸಿ ಭರತನಾಟ್ಯದ ವಿಶಿಷ್ಟ ಸಂಮೋಹಕ ಅನುಭವವನ್ನು ಕಲಾ ರಸಿಕರಿಗೆ ಉಣಬಡಿಸುತ್ತಿದ್ದರೆಂಬ ಪ್ರಶಂಸೆಗೆ ಒಳಗಾದವರು. ಭಾರತ ಸರ್ಕಾರ ಇವರಿಗೆ 1971 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಶಾಂತಾ ರಾವ್ ಎಂಬ ಈ ಅಸೀಮ ಪ್ರತಿಭೆಯ ನೃತ್ಯ ಕಲಾವಿದೆ, ಅವರ ಬೆರೆಯದ, ತೆರೆದುಕೊಳ್ಳದ, ಯಾರನ್ನೂ ಸಮೀಪಕ್ಕೆ ಬಿಟ್ಟುಕೊಳ್ಳದ ಗುಣದಿಂದ ಇದ್ದಾಗ ಪ್ರಖರವಾಗಿ ಬೆಳಗಿ ಹಿನ್ನೆಲೆಗೆ ಸರಿದು ಹೋದರು. ಶಾಂತಾ ರಾವ್ ಭಾರತೀಯ ನೃತ್ಯ ಕ್ಷೇತ್ರದಲ್ಲಿನ ಅಪೂರ್ವ ಹಾಗೂ ವಿಶಿಷ್ಟ ವಿಸ್ಮಯಕಾರೀ ಪ್ರತಿಭೆ ಎಂಬೆಲ್ಲ ವಿಶೇಷಣಗಳನ್ನು ಬಳಸಲು ಕಾರಣವಿದೆ.

ಶಾಂತಾ ರಾವ್ ಅವರದ್ದು ಮಂಗಳೂರು ಮೂಲದ ಸಾರಸ್ವತ ಬ್ರಾಹ್ಮಣ ಕುಟುಂಬ. ತಂದೆ ತಾಯಿಯರಿಬ್ಬರೂ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿ ಕೊಂಡಿದ್ದವರು. ಮೂವತ್ತರ ದಶಕದ ಆರಂಭದಲ್ಲಿ, ಮುಂಬಯಿಯಲ್ಲಿನ ಅವರ ಮನೆ ಅಸಹಕಾರ ಚಳವಳಿಯ ದೇಶಪ್ರೇಮಿಗಳ ಭೇಟಿಯ ತಾಣವಾಗಿತ್ತು. ಶಾಲೆಯ ದಿನಗಳಲ್ಲಿ ಆಕೆ ಅತ್ಯಂತ ಚಟುವಟಿಕೆಯ ಹುಡುಗಿ. ಆಕೆಯನ್ನು ಆರು ವರ್ಷದ ಹುಡುಗಿಯಾಗಿದ್ದಾಗಿನಿಂದ ಬಲ್ಲ, ಕಲಾ ವಿಮರ್ಶಕ ಜಿ. ವೆಂಕಟಾಚಲಂ ಅವರು, ‘ಅವಳು ಗಂಡುಬೀರಿ ಹುಡುಗಿಯಾಗಿದ್ದಳು, ಮರ ಹತ್ತುವುದು, ಹುಡುಗರಂತೆ ಬಟ್ಟೆ ಹಾಕಿಕೊಳ್ಳುವುದು, ಪ್ರಾಣಿಗಳನ್ನು ಗೋಳು ಹೊಯ್ದುಕೊಳ್ಳುವುದು.. ಹೀಗೆ. ಅವಳೊಡನೆ ಆಡಲು ಇತರರು ಭಯ ಪಡುತ್ತಿದ್ದರು’ ಎಂದು ಅವಳ ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇಂಥ ಹುಡುಗಿ, ಕಾಲೇಜು ಸೇರದೆ ನೃತ್ಯ ಕಲಿಕೆಯನ್ನು ಆಯ್ದುಕೊಳ್ಳುತ್ತಾಳೆ. ಅವಳ ಆಯ್ಕೆಗೆ ಮನೆಯಿಂದ ಸಾಕಷ್ಟು ವಿರೋಧವಿತ್ತು. ವಿರೋಧ ಹೆಚ್ಚಿದಷ್ಟೂ ನೃತ್ಯ ಕಲಿಕೆಗೆ ಅವಳಿಗಿದ್ದ ಆಸಕ್ತಿ ತೀವ್ರಗೊಳ್ಳುತ್ತಾ ಹೋಯಿತು. ಅವಳ ಹಠದ ಮುಂದೆ ಮನೆಯವರು ಮಣಿಯಬೇಕಾಗುತ್ತದೆ.
1939 ರಲ್ಲಿ, ಶಾಂತಾ ನೃತ್ಯ ಕಲಿಕೆಗಾಗಿ ಕೇರಳದ ಕಲಾಮಂಡಲಕ್ಕೆ ಬರುತ್ತಾಳೆ. ಆಗ ಅವಳಿಗಿನ್ನೂ 15 ವರ್ಷ ವಯಸ್ಸು. ಯಾರನ್ನಾದರೂ ಸಮ್ಮೋಹನಗೊಳಿಸುವ ಸೌಂದರ್ಯ ಮತ್ತು ಜಾಣ್ಮೆ! ಅಲ್ಲಿ ಕಲಿತದ್ದು, ಹೆಣ್ಣು ಮಕ್ಕಳು ಆಯ್ದುಕೊಳ್ಳದ, ಆದರೆ ಅವಳಿಗೆ ಒಪ್ಪುವಂಥ, ಪುರುಷರು ಮಾತ್ರ ಕಲಿಯುತ್ತಿದ್ದ ಕಥಕ್ಕಳಿಯನ್ನು, ಅದೂ ಅತ್ಯಂತ ಕಠಿಣ ಗುರು ಎಂದೇ ಖ್ಯಾತರಾಗಿದ್ದ ಕಥಕ್ಕಳಿಯ ರೇವುಣ್ಣಿ ಮೆನನ್ ಗುರುಗಳಿಂದ. ಹುಡುಗಿಯೊಬ್ಬಳು ಕಥಕ್ಕಳಿಯನ್ನು ಕಲಿಯುವುದನ್ನು ಊಹಿಸಲೂ ಸಾಧ್ಯವಿಲ್ಲದಂಥ ಕಾಲ ಅದು. ಹಾಗಾಗಿ ಅಲ್ಲಿಯೂ ಅವಳು ಗುರುಗಳನ್ನು ಮಣಿಸಿ ಕಥಕ್ಕಳಿಯನ್ನು ಕಲಿತದ್ದು ತನ್ನ ಹಠದಿಂದಲೇ! ಕೊನೆಗೂ, ಕಲಾಮಂಡಲಂ ಈ ಹಠಮಾರಿ ಯುವತಿಯನ್ನು ತನ್ನ ಮೊತ್ತಮೊದಲ ಮಹಿಳಾ ವಿದ್ಯಾರ್ಥಿಯಾಗಿ ಸ್ವೀಕರಿಸಿಯೇ ಬಿಟ್ಟಿತು! ಕಥಕ್ಕಳಿಯ ಇತಿಹಾಸದಲ್ಲಿ ಶಾಂತಾ ಫ್ರಥಮವನ್ನು ಸೃಷ್ಟಿಸಿದ್ದಳು! 1940 ರಲ್ಲಿ, ತ್ರಿಸ್ಸೂರಿನಲ್ಲಿ, ನಂಬೂದರಿಗಳು ಮತ್ತು ಕಥಕ್ಕಳಿ ನೃತ್ಯ ವಿಮರ್ಶಕರು ತುಂಬಿದ್ದ ಸಭೆಯಲ್ಲಿ ಮೊದಲ ಕಥಕ್ಕಳಿ ನೃತ್ಯ ಪ್ರದರ್ಶನವನ್ನು ನೀಡಿ ಮೆಚ್ಚುಗೆಯನ್ನು ಗಳಿಸಿದಳು.

1940 ರಲ್ಲಿಯೇ, ಶ್ರೀಲಂಕಾಗೆ ಹೋಗಿ ಅಲ್ಲಿ ಗುರು ಗುಣಾಯ ಅವರಿಂದ ಕಾಂಡ್ಯನ್ ನೃತ್ಯವನ್ನು ಕಲಿತಳು. ಇವಳ ಪ್ರತಿಭೆಗೆ ಮಾರುಹೋದ ಅಲ್ಲಿನ ಪತ್ರಿಕೆಗಳು ಇವಳನ್ನು ‘ಆಧುನಿಕ ಆಮ್ರಪಾಲಿ’ ಎಂದು ಹೊಗಳಿದವು.

ಮೋಹಿನಿ ಆಟ್ಟಂ ನೃತ್ಯ ಪ್ರಕಾರದ ಕೊನೆಯ ಮಹಾಗುರು ಎಂದೇ ಹೆಸರಾದ ಕೃಷ್ಣನ್ ಪಣಿಕ್ಕರ್ ಅವರನ್ನು ಶಾಂತಾ ಭೇಟಿಯಾದದ್ದು ಕಲಾಮಂಡಲಂನಲ್ಲಿಯೇ. ಅವರಿಂದ ಮೋಹಿನಿ ಆಟ್ಟಂ ನೃತ್ಯವನ್ನು ಕಲಿತು ತನ್ನದಾಗಿಸಿಕೊಂಡಳು. ಅಂಗಚಲನಾವಿನ್ಯಾಸ ಮತ್ತು ಸಂಗೀತ ಮೇಳೈಸಿದ ಈ ನೃತ್ಯ ಪ್ರಕಾರವನ್ನು ಮುಂದುವರಿಸುವ ಜವಾಬ್ದಾರಿಯನ್ನು ಪಣಿಕ್ಕರ್ ಅವರು ನೀಡಿದ್ದು ಶಾಂತಾಳಿಗೆ ಮಾತ್ರ. ಪಣಿಕ್ಕರ್ ಅವರು ದೈವಾಧೀನರಾದ ನಂತರ, ಮೋಹಿನಿ ಆಟ್ಟಂ ಇತರ ರೂಪಗಳನ್ನು ಪಡೆಯಿತು. ಪ್ರತಿಯೊಂದೂ ಅದೇ ಮೋಹಿನಿ ಆಟ್ಟಂನ ಅಧಿಕೃತ ರೂಪವೆಂದೂ ಘೋಷಿಸಿಕೊಂಡವು.

ಕಲಾಮಂಡಲಂನಲ್ಲಿ ಕಲಿಯುತ್ತಿದ್ದ ಅವಧಿಯಲ್ಲಿ, ಸಮಯ ದೊರೆತಾಗಲೆಲ್ಲ ಶಾಂತಾ ತಂಜಾವೂರಿನ ಪಂಡನಲ್ಲೂರು ಗ್ರಾಮಕ್ಕೆ ತೆರಳಿ, ಅಲ್ಲಿ, ಭರತನಾಟ್ಯದ ಶ್ರೇಷ್ಟ ಗುರುಗಳಾದ ಮೀನಾಕ್ಷಿ ಸುಂದರಂ ಪಿಳ್ಳೈ ಅವರಿಂದ ಭರತನಾಟ್ಯವನ್ನು ಕಲಿತರು. ಶಾಂತಾ ರಾವ್ ಅವರ ಸಮಕಾಲೀನರಾದ ರುಕ್ಮಿಣೀ ದೇವಿ, ರಾಮ್ ಗೋಪಾಲ್, ಯು.ಎಸ್. ಕೃಷ್ಣರಾವ್, ಮೃಣಾಲಿನಿ ಸಾರಾಭಾಯಿ ಅವರಿಗೆಲ್ಲ ಭರತ ನಾಟ್ಯ ಕಲಿಸಿದ ಗುರುಗಳು ಇವರು. ಶಾಂತಾ ಎಲ್ಲ ಬಗೆಯ ನೃತ್ಯಗಳನ್ನು ಕಲಿತಿದ್ದರೂ ಕೊನೆಗೆ ಆಯ್ದುಕೊಂಟದ್ದು ಭರತನಾಟ್ಯವನ್ನು. ಆ ವೇಳೆಗೆ ಒಳ್ಳೆಯ ಮನೆತನದ ಹೆಣ್ಣುಮಕ್ಕಳು ಭರತನಾಟ್ಯವನ್ನು ಕಲಿಯುವುದು ಫ್ಯಾಷನ್ ಆಗಿತ್ತು. ‘ಇವಳ ಹಾಗೆ ಭಕ್ತಿಯಿಂದ, ತಾದಾತ್ಮ್ಯತೆಯಿಂದ, ಜಾಣ್ಮೆಯಿಂದ, ಅರ್ಥೈಸಿಕೊಂಡು ಕಲಿತಂಥ ಶಿಷ್ಯೆ ನನಗೆ ಹಿಂದೆಂದೂ ದೊರೆತಿರಲಿಲ್ಲ. ಭರತನಾಟ್ಯದ ನಿಜವಾದ ಸಂಪ್ರದಾಯವನ್ನು ಮತ್ತು ಅದರ ತಾಂತ್ರಿಕತೆಯನ್ನು ಅರಿತು ಕಲಿತು ಮುಂದುವರಿಸಬಲ್ಲಂಥ ಇಂಥ ಪ್ರತಿಭಾವಂತ ಶಿಷ್ಯೆ ದೊರೆತದ್ದು ನನಗೆ ಅತ್ಯಂತ ಸಂತೋಷ ನೀಡಿದೆ’ ಎಂದಿದ್ದಾರೆ ಮೀನಾಕ್ಷಿ ಸುಂದರಂ ಪಿಳ್ಳೈ ಅವರು. ಒಬ್ಬ ಅಸಾಮಾನ್ಯ ಗುರುವಿನಿಂದ ಪಡೆದ ಈ ಮೆಚ್ಚುಗೆ ಅವರಿಗೆ ಸಂದ ಯಾವುದೇ ಪ್ರಶಸ್ತಿಗಿಂತ ಹಿರಿದಾದ ಪ್ರಶಸ್ತಿ.

1942 ರಲ್ಲಿ ಮ್ಯೂಸಿಕ್ ಅಕಾಡೆಮಿಯಲ್ಲಿ ಶಾಂತಾ ತಮ್ಮ ಮೊದಲ ಭರತನಾಟ್ಯ ಪ್ರದರ್ಶನವನ್ನು ನೀಡುತ್ತಾರೆ. ಶಾಂತಾ ರಾವ್ ಅವರ ಭರತನಾಟ್ಯ ಪ್ರದರ್ಶನವನ್ನು ನೋಡಿದವರೆಲ್ಲ ಅವರ ವಿಶಿಷ್ಟ ಶೈಲಿಗೆ ಮಾರು ಹೋಗುತ್ತಿದ್ದರು. ಅಲ್ಲಿ ಲಾಲಿತ್ಯಕ್ಕಿಂತ ಹೆಚ್ಚಾಗಿ ಒಂದು ರೀತಿಯ ಗಡಸುತನವನ್ನು ಕಾಣುತ್ತಿದ್ದರು. ಅಂಗ ಚಲನೆಯ ಮೇಲೆ ಕಥಕ್ಕಳಿಯ ಪ್ರಭಾವ ಢಾಳಾಗಿ ಎದ್ದು ಕಾಣುತ್ತಿತ್ತು. ‘ಭರತನಾಟ್ಯವನ್ನು ಅದರ ಸಾಂಪ್ರದಾಯಿಕ ಶೈಲಿಯಲ್ಲಿ ನೋಡಿ ಸವಿದವರಿಗೆ ಶಾಂತಾ ರಾವ್ ಅವರ ಶೈಲಿ ಮೊದಲಿಗೆ ಇರುಸುಮುರಿಸು ಉಂಟು ಮಾಡಿದರೂ ಅದರ ಸಮ್ಮೋಹಕತೆಯಿಂದ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ’ ಎಂದಿದ್ದಾರೆ ಅವರ ಭರತನಾಟ್ಯ ವೈಭವವನ್ನು ನೋಡಿದ ಕಲಾ ವಿಮರ್ಶಕರು.

1960 ರಲ್ಲಿ ಶಾಂತಾ ಆಂಧ್ರಪ್ರದೇಶಕ್ಕೇ ವಿಶಿಷ್ಟವಾದ ಕುಚಿಪುಡಿ ನೃತ್ಯ ಪ್ರಕಾರದ ಬಗ್ಗೆ ಅಧ್ಯಯನ ಕೈಗೊಳ್ಳುತ್ತಾರೆ. ಅಲ್ಲಿ ಪರಿಚಯವಾದ ಅತ್ಯಂತ ಪ್ರತಿಭಾವಂತ ಯುವ ಅಧ್ಯಾಪಕ ವೇಂಪಟಿ ಚಿನ್ನ ಸತ್ಯಂ ಅವರ ಸಹಯೋಗದಲ್ಲಿ ಆ ಬಗ್ಗೆ ಸಂಶೋಧನೆಯಲ್ಲಿ ತೊಡಗುತ್ತಾರೆ. ಆ ನಂತರ, ಆಂಧ್ರ ಪುರೋಹಿತ ವೆಂಕಟ ಚಲಪತಿ ಶಾಸ್ತ್ರಿ ಅವರ ಕರೆಯ ಮೇರೆಗೆ ಅವರಲ್ಲಿಗೆ ತೆರಳುತ್ತಾರೆ. ವೆಂಕಟ ಚಲಪತಿ ಶಾಸ್ತ್ರಿ ಅವರನ್ನು ‘ಭಾಮಾ ಸೂತ್ರಂ’ ಎಂಬ ನೃತ್ಯ ಪಂಥದ ಕೊನೆಯ ತಲೆಮಾರು ಎಂದು ಗುರುತಿಸಲಾಗುತ್ತದೆ. ಈ ‘ಭಾಮಾ ಸೂತ್ರಂ’ ನೃತ್ಯದ ಸಾರವನ್ನು ಶಾಂತಾ ಅವರಿಗೆ ಧಾರೆ ಎರೆಯಲು ವೆಂಕಟಚಲಪತಿ ಶಾಸ್ತ್ರಿ ಅವರು ನಿರ್ಧರಿಸುತ್ತಾರೆ. ‘ಭಾಮಾ ಸೂತ್ರಂ’ ನೃತ್ಯದ ಕಲಿಕೆಯ ಅವಧಿಯಲ್ಲಿ, ಅತ್ಯಂತ ಕಠಿಣ ನಿಯಮಗಳನ್ನು ಮತ್ತು ಗೌಪ್ಯತೆಯನ್ನು ಕಾಪಾಡಬೇಕೆಂಬ ಷರತ್ತನ್ನು ಶಾಂತಾ ಮೂರು ವರ್ಷಗಳ ಕಾಲ ಕಟ್ಟುನಿಟ್ಟಾಗಿ ಪಾಲಿಸಿ ಅವರಿಂದ ‘ಭಾಮಾಸೂತ್ರಂ’ ನೃತ್ಯವನ್ನು ಕಲಿಯುತ್ತಾರೆ. 1965ರಲ್ಲಿ, ಸಾಂಪ್ರದಾಯಿಕ ನೃತ್ಯ ಶೈಲಿಗೆ ಬದ್ಧರಾಗಿಯೇ ಹೊಸದೊಂದು ನೃತ್ಯವನ್ನು ಪ್ರಸ್ತುತಪಡಿಸುವುದಾಗಿ ಘೋಷಿಸುತ್ತಾರೆ. ಈ ಪ್ರಸ್ತುತಿಗೆ ಅವರು ಆಯ್ದುಕೊಂಡದ್ದು, ಮುಂಬಯಿಯ ಇಂಡಿಯನ್ ನ್ಯಾಷನಲ್ ಥಿಯೇಟರ್ ವೇದಿಕೆಯನ್ನು. ಪಸ್ತುತ ಪಡಿಸಿದ್ದು ಭಾಮಾ ನೃತ್ಯವನ್ನು. ಮರುದಿನ ನಗರದ ಪ್ರಸಿದ್ಧ ಪತ್ರಿಕೆ, ‘ಪಿಕಾಸೋಗೆ ಹೋಲಿಸಬಹುದಾದ ನೃತ್ಯ ಪ್ರಸ್ತುತಿ’ ಎಂಬ ಮೆಚ್ಚುಗೆ ಭರಿತ ವಿಮರ್ಶೆಯನ್ನು ಪ್ರಕಟಿಸಿತು. 2006 ರಲ್ಲಿ, ಅವರು ಕೊನೆಯ ನೃತ್ಯ ಪ್ರದರ್ಶನ ನೀಡಿದರು. ಶ್ರೀ ಕೃಷ್ಣನ ಎಂಟು ಭಾಮೆಯರ ಆಖ್ಯಾಯಿಕೆಗಳನ್ನು ನೃತ್ಯದಲ್ಲಿ ಮರು ಸೃಷ್ಟಿಸುವ ‘ಅಷ್ಟ ಮಹಿಷಿ’ ಎಂಬ ಭಾಮಾ ನೃತ್ಯ ಅದು. ಆ ವಯಸ್ಸಿನಲ್ಲಿ, ಎರಡು ಗಂಟೆಗಳ ಕಾಲ ವಿರಾಮವಿಲ್ಲದೆ ಅವರು ಪ್ರಸ್ತುತ ಪಡಿಸಿದ ರೀತಿ ನೋಡುಗರನ್ನು ದಿಙ್ಮೂಢರನ್ನಾಗಿಸಿತ್ತು.

ಶಾಂತಾ ಏಕೆ ಅವರ ಎಲ್ಲ ಸಮಕಾಲೀನರಿಗಿಂತ ಭಿನ್ನರಾಗಿ ನಿಲ್ಲುತ್ತಾರೆ, ತಮ್ಮದೇ ಆದ ಒಂದು ವೈಷಿಷ್ಟ್ಯವನ್ನು ಮೆರೆಯುತ್ತಾರೆ ಎಂಬುದಕ್ಕೆ ಅವರ ಒಂದೊಂದು ಪ್ರದರ್ಶನವೂ ಉತ್ತರವಾಗುತ್ತಿತ್ತು. ‘ವರ್ಷಗಳು ಉರುಳುತ್ತವೆ, ನೆನಪುಗಳ ಪದರಗಳ ನಡುವೆ ಎಲ್ಲೋ ಅಡಗಿದ್ದ, ಉಳಿದೆಲ್ಲ ನೃತ್ಯ ಕಲಾವಿದರು ಮೂಡಿಸಿದ ಚಿತ್ರ-ಚಿತ್ರಣಗಳ ಅನುಭವವನ್ನು ಮೀರಿಸಿದ ಒಂದು ಅಭೂತಪೂರ್ವ ನೃತ್ಯ ಅನುಭವದ ನೆನಪು ಮುನ್ನಲೆಗೆ ಮತ್ತೆ ಮತ್ತೆ ಬರುತ್ತದೆ. ಅದು ಮತ್ತಾವುದೂ ಅಲ್ಲ, ಮತ್ತೆ ಮತ್ತೆ ಸಂಮೋಹಿಸುವ ಸೌಂದರ್ಯದ, ಅಂಗ ಚಲನೆಯ ಮೋಡಿಗೊಳಿಸುವ ಲಾಸ್ಯದ, ಗಡುಸು ಎನಿಸುವ ದೇಹ ಸೌಷ್ಟವದಿಂದ ಒಂದು ಅಸಾಮಾನ್ಯವಾದ ನೃತ್ಯ ವಲಯವನ್ನು ಮೂಡಿಸುತ್ತಿದ್ದ ಶಾಂತಾ ರಾವ್ ಅವರ ನೃತ್ಯ’ ಇದು ನೃತ್ಯ ವಿಮರ್ಶಕ ಮತ್ತು ಶಾಂತಾ ರಾವ್ ಅವರ ಸಂಮೋಹಕ ನೃತ್ಯ ವೈಭವವನ್ನು ಕಣ್ತುಂಬಿಕೊಂಡ ಅಶೋಕ್ ಚಟರ್ಜಿ (ಅಹಮದಾಬಾದಿನ ರಾಷ್ಟ್ರೀಯ ವಿನ್ಯಾಸ ಸಂಸ್ಥೆಯ ನಿರ್ದೇಶಕರಾಗಿದ್ದವರು) ಅವರ ಮಾತು. ಅವರ ನೃತ್ಯ ಏಕೆ ಅಷ್ಟು ವಿಶಿಷ್ಟ ಎಂಬುದಕ್ಕೆ ಅವರೇ ಉತ್ತರವನ್ನೂ ನೀಡುತ್ತಾರೆ, ‘ಶಾಂತಾ ರಾವ್ ಅವರಿಗೆ ನೃತ್ಯ ಒಂದು ಸೃಜನಶೀಲ ಕ್ರಿಯೆಯಾಗಿತ್ತು, ಅವರ ಅಸ್ತಿತ್ವದ ಆಳದೊಳಗಿಂದ ಸಂಭ್ರಮಿಸಿ ಹೊರಹೊಮ್ಮಿ ಹೊಳೆಯುವ, ನೃತ್ಯ ಧರ್ಮದ ಪ್ರಭಾವಳಿಯನ್ನು ಮತ್ತು ಪರಿಸರವನ್ನು ಸೃಜಿಸುವ ವಿಶಿಷ್ಟ ಸೃಷ್ಟಿ ಕ್ರಿಯೆಯಾಗಿತ್ತು. ಆದ್ದರಿಂದಲೇ ವರ್ಷಗಳುರುಳಿದರೂ ಶಾಂತಾ ಉಳಿಯುತ್ತಾರೆ, ಅವರ ಕಲೆ ಉಳಿಯುತ್ತದೆ, ಎಂದೆಂದಿಗೂ’ ಎನ್ನುತ್ತಾರೆ. ಶಾಂತಾ ಪ್ರಪಂಚದಾದ್ಯಂತ ಸಂಚರಿಸಿ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಅವರು ತಮ್ಮನ್ನು ಕೇವಲ ನೃತ್ಯ ಪ್ರಸ್ತುತಿಗೆ ಸೀಮಿತಗೊಳಿಸಿಕೊಳ್ಳದೆ ಕಲೆಯನ್ನು ಉಳಿಸಿ ಬೆಳೆಸುವುದಕ್ಕೂ ಪ್ರೋತ್ಸಾಹ ನೀಡುತ್ತಿದ್ದರು.

ಶಾಂತಾ ಅವರದು ಬಹುಮುಖ ಪ್ರತಿಭೆಯಾದರೂ ಅವರ ವೃತ್ತಿ ಜೀವನ ದೀರ್ಘ ಕಾಲ ಮುಂದುವರಿಯಲಿಲ್ಲ. 70 ರ ದಶಕದ ವೇಳೆಗಾಗಲೇ ಅವರು ಜನ ಸಂಪರ್ಕದಿಂದ ದೂರವೇ ಉಳಿಯಲಾರಂಭಿಸಿದ್ದರು. ಕೆಲವೇ ಮಂದಿ ಆತ್ಮೀಯರು ಮತ್ತು ನಂಬಿಕಸ್ಥರನ್ನು ಹೊರತುಪಡಿಸಿದರೆ ಬೇರಾರನ್ನೂ ಭೇಟಿಯಾಗುತ್ತಿರಲಿಲ್ಲ. ಅವರ ನೃತ್ಯಗಳನ್ನು ದೃಶ್ಯೀಕರಣ ಮಾಡಲಾಗಲೀ ಅವರ ಭಾವಚಿತ್ರಗಳನ್ನು ತೆಗೆಯಲಾಗಲೀ ಅವರು ಅವಕಾಶವನ್ನೇ ಕೊಡುತ್ತಿರಲಿಲ್ಲ. ಹಾಗಾಗಿ ಈಗಿನ ಪೀಳಿಗೆಯವರಿಗೆ ಅವರ ಕುರಿತಾದ ಹೆಚ್ಚಿನ ವಿವರಗಳು ದೊರೆಯುವುದಿಲ್ಲ. ಖ್ಯಾತ ಕಲಾ ವಿಮರ್ಶಕ ಸುನಿಲ್ ಕೊಥಾರಿ ಅವರು, ಶಾಂತಾ ಅವರ ಸಾಕ್ಷ್ಯ ಚಿತ್ರವನ್ನು ಚಲನಚಿತ್ರ ವಿಭಾಗದವರು ಸಿದ್ಧಪಡಿಸಿದ್ದು ಅದನ್ನು ಅವರು ನ್ಯೂಯಾರ್ಕ್‍ನ ಭಾರತದ ರಾಯಭಾರಿ ಕಚೇರಿಯಲ್ಲಿ ವೀಕ್ಷಿಸಿದುದಾಗಿ ಹೇಳುತ್ತಾರೆ, ಈಗ ಅದೂ ನಾಪತ್ತೆಯಾಗಿದೆ ಎಂದು ವಿಷಾದಿಸುತ್ತಾರೆ. ಅವರ ಬಗ್ಗೆ ಬಿಬಿಸಿ ಒಂದು ಸಾಕ್ಷ್ಯ ಚಿತ್ರವನ್ನು ತಯಾರಿಸಿತ್ತು. ಅದನ್ನು ಒಂದೇ ಒಂದು ಬಾರಿ ಮಾತ್ರ ಪ್ರಸಾರ ಮಾಡಿದೆ ಎನ್ನುತ್ತಾರೆ. 1997 ರಲ್ಲಿ, ಭಾರತ ಸ್ವಾತಂತ್ರ್ಯೋತ್ಸವದ ಸ್ವರ್ಣ ಸಮಾರೋಹ ಸಮಾರಂಭವನ್ನು ಆಚರಿಸುವ ಸಂದರ್ಭದಲ್ಲಿ, ಸಂಗೀತ ನಾಟಕ ಅಕಾಡೆಮಿ ಶಾಂತಾ ಅವರ ನೃತ್ಯ ಪ್ರದರ್ಶನವನ್ನು ದೆಹಲಿಯಲ್ಲಿ ಏರ್ಪಡಿಸಿತ್ತು. ಅದು ಅವರು ಕೊಟ್ಟ ಕೊನೆಯ ಭರತನಾಟ್ಯ ಪ್ರದರ್ಶನ. ಆ ಸಂದರ್ಭದಲ್ಲಿ ತಮ್ಮ ನೃತ್ಯದ ಕೆಲವು ಭಾಗಗಳ ಚಿತ್ರೀಕರಣಕ್ಕೆ ಅಕಾಡೆಮಿಗೆ ಶಾಂತಾ ಅನುಮತಿ ನೀಡಿದ್ದರು. ಬಹುಶಃ ನಮಗೆ ದೊರೆಯುವ ಅವರ ನೃತ್ಯದ ದೃಶ್ಯೀಕರಣ ಅದೊಂದೇ ಎನ್ನುತ್ತಾರೆ ಕೊಥಾರಿ ಅವರು.

ಸಮಗ್ರ ತೌಲನಿಕ ಅಧ್ಯಯನ : ಬೆಂಗಳೂರಿನಲ್ಲಿಯೂ ಅವರು ಅಪರೂಪವಾಗಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ನ ಪೂರ್ವ ನಿರ್ದೇಶಕರಾದ ಅಶೋಕ್ ಚಟರ್ಜಿ ಅವರು ‘ಡ್ಯಾನ್ಸೆಸ್ ಆಫ್ ಗೋಲ್ಡನ್ ಹಾಲ್’ ಎಂಬ ಶೀರ್ಷಿಕೆಯ ಶಾಂತಾ ಅವರ ಜೀವನ ಚರಿತ್ರೆಯನ್ನು ಬರೆದಿದ್ದು ಅದನ್ನು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ 1979 ರಲ್ಲಿ ಪ್ರಕಟಿಸಿದೆ. ಅದರಲ್ಲಿ ಖ್ಯಾತ ಛಾಯಾಗ್ರಾಹಕ ಸುನಿಲ್ ಜಾನಾ ಅವರು ತೆಗೆದ ಶಾಂತಾ ಅವರ ಅಪರೂಪದ ಚಿತ್ರಗಳಿವೆ. ಖ್ಯಾತ ಕಲಾವಿದ ಕೆ.ಕೆ. ಹೆಬ್ಬಾರ್ ಅವರು ಬಿಡಿಸಿದ ಶಾಂತಾ ಅವರ ಕೆಲವು ಅಪರೂಪದ ರೇಖಾ ಚಿತ್ರಗಳು ಲಭ್ಯವಿವೆ. ‘ತಮ್ಮ ಕಲೆ ದುರುಪಯೋಗವಾಗಬಾರದು ಅಥವಾ ಸತ್ವ ಕಳೆದುಕೊಳ್ಳಬಾರದು ಎಂಬ ಬಗ್ಗೆ ಅವರಿಗೆ ಅತೀವ ಕಾಳಜಿಯಿತ್ತು. ಹಾಗಾಗದಂತೆ ನೋಡಿಕೊಳ್ಳಲು ಅವರು ತೆರೆಯ ಮರೆಯಲ್ಲಿ ಉಳಿಯಲು ಇಚ್ಛಿಸುತ್ತಿದ್ದರು’ ಎನ್ನುತ್ತಾರೆ ಅಶೋಕ್ ಚಟರ್ಜಿ ಅವರು. ವಿವಿಧ ನೃತ್ಯ ಪ್ರಕಾರಗಳ ಬಗ್ಗೆ ಅವರು ಮಾಡಿದ ಸಮಗ್ರ ತೌಲನಿಕ ಅಧ್ಯಯನವನ್ನು ಶಾಂತಾ ದಾಖಲು ಮಾಡಿದ್ದಾರೆ. ಇದು ಯಾವ ಕಾಲಕ್ಕೂ ರಾಷ್ಟ್ರೀಯ ನಿಧಿ ಎನ್ನಿಸಿಕೊಳ್ಳುವಷ್ಟು ಮೌಲಿಕವಾದವು ಎನ್ನುತ್ತಾರೆ ಚಟರ್ಜಿಯವರು.

ಅಂದಿನ, ಕಲೆಗೆ ಮೀಸಲಾದ ‘ಮಾರ್ಗ್’ ಪತ್ರಿಕೆಯ ಸಂಪಾದಕರಾಗಿದ್ದ ಮುಲ್ಕ್‍ರಾಜ್ ಆನಂದ್ ಅವರು ಭರತನಾಟ್ಯದ ಬಗೆಗೆ ತರಲಿದ್ದ ಪುಸ್ತಕವನ್ನು ಸಂಪಾದಿಸುವಂತೆ ಕೊಥಾರಿ ಅವರನ್ನು ಕೋರುತ್ತಾರೆ. ಆ ಪುಸ್ತಕಕ್ಕಾಗಿ ಬೇಕಿದ್ದ ತಮ್ಮ ಫೋಟೋಗಳನ್ನು ಕೊಡಲು ಮತ್ತು ಬಳಸಿಕೊಳ್ಳಲು ಅನುಮತಿ ನೀಡಲು ಶಾಂತಾ ನಿರಾಕರಿಸುತ್ತಾರೆ. ಬೇರೆ ದಾರಿ ಇಲ್ಲದೇ, ಪುಸ್ತಕವನ್ನು ಅವರ ಚಿತ್ರಗಳಿಲ್ಲದೆಯೇ ಹೊರತರಲಾಗುತ್ತದೆ. ಆ ಪುಸ್ತಕವನ್ನು ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರ ಕೈಗಿಟ್ಟಾಗ, ಶಾಂತಾ ಅವರ ಚಿತ್ರಗಳಿಲ್ಲದ ಲೋಪವನ್ನು ಅವರು ಗಮನಿಸಿಯೇ ಬಿಡುತ್ತಾರೆ. ಅಷ್ಟರಮಟ್ಟಿಗೆ ಇಂದಿರಾಗಾಂಧಿ ಅವರು ಶಾಂತಾ ಅವರ ಕಲೆಯ ಅಭಿಮಾನಿಯಾಗಿದ್ದರು!

ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಹಾಗೂ ಕಲಾ ಪೋಷಕರಾಗಿದ್ದ ಅಂದಿನ ಕರ್ನಾಟಕದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು, ಮಲ್ಲೇಶ್ವರದಲ್ಲಿ 250 ಮಂದಿ ಕುಳಿತು ವೀಕ್ಷಿಸಬಹುದಾದಷ್ಟು ವಿಶಾಲವಾದ ಸಭಾಂಗಣವುಳ್ಳ ಭವ್ಯ ಗೃಹ ನಿರ್ಮಾಣಕ್ಕೆ ಅಗತ್ಯವಿದ್ದ ಸ್ಥಳ ಮತ್ತು ಅನುದಾನವನ್ನು ನೀಡುತ್ತಾರೆ. ಮಲ್ಲೇಶ್ವರಂನ 12ನೇ ಅಡ್ಡ ರಸ್ತೆಯಲ್ಲಿ ಸಭಾಂಗಣ, ಅಭ್ಯಾಸದ ಕೊಠಡಿ, ಗ್ರಂಥಾಲಯಗಳನ್ನು ಒಳಗೊಂಡ ಮೂರು ಮಹಡಿಗಳಿದ್ದ ಭವ್ಯ ‘ಶಾಂತಾ ರಾವ್ ಕಲಾ ಕೇಂದ್ರ’ ಹಾಗೆ ನಿರ್ಮಾಣವಾದದ್ದು. ಅದು ಇಂದು ಖಾಸಗಿ ಬಿಲ್ಡರ್ ಒಬ್ಬರ ಕೈ ಸೇರಿ ಕಲ್ಯಾಣ ಮಂಟಪವಾಗಿ ಮಾರ್ಪಟ್ಟಿದೆ.

ಇಂಥ ಅನನ್ಯ ಕಲಾವಿದೆ ತನ್ನ ಶಿಷ್ಯ ಪರಂಪರೆಯನ್ನು ತಯಾರು ಮಾಡಲಿಲ್ಲ ಮತ್ತು ತಾನು ನೆಲೆಸಿದ ಮನೆಯನ್ನು ತನ್ನ ನಂತರವೂ ಕಲೆ ಮತ್ತು ಕಲಾ ಪ್ರದರ್ಶನದ ಕೇಂದ್ರವಾಗಿ ಮುಂದುವರಿಯುವಂತೆ ಮಾಡಲು, ಕೈಗೊಳ್ಳಬೇಕಾದ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂಬುದು ತುಂಬ ವಿಷಾದನೀಯ. ಇಂದಿನ ತಲೆಮಾರಿನ ಕಲಾ ವಿಮರ್ಶಕರಿಗಿರಲಿ ಭರತನಾಟ್ಯ ಕಲಾವಿದರಲ್ಲಿಯೇ ಅನೇಕರಿಗೆ ಶಾಂತಾ ರಾವ್ ಅವರ ಸಾಧನೆ ಹಾಗೂ ಪ್ರತಿಭೆಗಳು ತಿಳಿಯದಿರುವ ಸಾಧ್ಯತೆಗಳೇ ಹೆಚ್ಚು. ಅಂತೆಯೇ 2007 ರ ಡಿಸೆಂಬರ್ 28 ರಂದು ಅವರು ಇಹಲೋಕ ತ್ಯಜಿಸಿದ ವಿಷಯ ಸ್ಥಳೀಯ ವೃತ್ತ ಪತ್ರಿಕೆಯ ಮೂಲೆಯೊಂದರಲ್ಲಿ ಸುದ್ದಿಯಾಗಿ ಪ್ರಕಟವಾದದ್ದು ಬಿಟ್ಟರೆ, ಅವರ ಸಾವೂ ಸದ್ದು ಮಾಡಲೇ ಇಲ್ಲ. ಶಾಂತಾರಾವ್ ಅವರು ನೃತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ತಿಳಿಯದಿದ್ದಲ್ಲಿ, ಭಾರತದ ಭವ್ಯ ಪರಂಪರೆಯೊಂದರ ಪ್ರಮುಖ ಪ್ರತಿನಿಧಿಯಾಗಿ ಪ್ರಖ್ಯಾತರಾದ ಬಹುಮುಖ ಪ್ರತಿಭೆಯ ಅನನ್ಯ ಕಲಾವಿದೆಯ ಪರಿಚಯದಿಂದ ವಂಚಿತರಾದಂತೆ.

1970 ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ, ಮಧ್ಯಪ್ರದೇಶದ 1993-94 ರ ‘ಕಾಳಿದಾಸ ಸಮ್ಮಾನ್’ ಪ್ರಶಸ್ತಿಗಳೂ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಸಂದಿವೆ.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

2 thoughts on “ಪದ್ಮ ಪ್ರಭೆ / ಅದ್ಭುತ ನೃತ್ಯ ಪ್ರತಿಭೆ ಶಾಂತಾ ರಾವ್ – ಡಾ. ಗೀತಾ ಕೃಷ್ಣಮೂರ್ತಿ

 • September 28, 2020 at 1:52 pm
  Permalink

  Nenapugala padaragala naduve…sogasaada lekhana bareda dr.geetha avarige namana..murli

  Reply
 • September 28, 2020 at 2:24 pm
  Permalink

  ಫೋಟೋ ಸೋನಾಲ್ Mansingh ಅವರಂತೆ ಕಾಣುತ್ತದೆ.

  Reply

Leave a Reply

Your email address will not be published. Required fields are marked *