ಪದ್ಮಿನಿ ಪಾಠ/ಸಂವೇದನೆಯಿಂದ ಸಾಮಾಜಿಕ ಆರೋಗ್ಯ- ಡಾ. ಪದ್ಮಿನಿ ಪ್ರಸಾದ್

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಪ್ಪಿಸಲು ಹಿರಿಯರು ಸೂಕ್ಷ್ಮವಾಗಿ ಆಲೋಚಿಸಬೇಕು. ಮಕ್ಕಳನ್ನು ಬೆಳೆಸುವಾಗ ಇಬ್ಬರಲ್ಲೂ ಸಮಾನತೆಯ ಸಂವೇದನೆಯನ್ನು ಬಿತ್ತುವುದು ಬಹಳ ಅಗತ್ಯ. ಮನೆ, ಶಾಲೆ ಮತ್ತು ಮಾಧ್ಯಮ ಎಲ್ಲವೂ ಈ ಬಹುಮುಖ್ಯ ಜವಾಬ್ದಾರಿಯನ್ನು ಎಚ್ಚರದಿಂದ ನಿರ್ವಹಿಸಿದರೆ ಆರೋಗ್ಯಕರ ಸಮಾಜದ ಕನಸು ನನಸಾಗಬಹುದು.

`ಮಕ್ಕಳು ದೇವರ ಸಮಾನ’ ಎಂಬ ಮಾತನ್ನು ನಮ್ಮ ಜೀವನದಲ್ಲಿ ಬಹಳ ಬಾರಿ ಕೇಳುತ್ತೇವೆ. ಆದರೆ ನಮ್ಮ ಸಮಾಜದಲ್ಲಿ ಎಲ್ಲರೂ ಹಾಗೆ ಅಂದುಕೊಂಡಿಲ್ಲ ಎಂಬುದನ್ನು ಅವರ ಮೇಲೆ ನಡೆಯುವ ಅಮಾನುಷ ಊಹಾತೀತ ದೌರ್ಜನ್ಯವೇ ಹೇಳುತ್ತದೆ. ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ ಮತ್ತು ಅದರಲ್ಲಿ ಸ್ವಲ್ಪಭಾಗ ಮಾತ್ರ ಬೆಳಕಿಗೆ ಬರುತ್ತದೆ. ಎಲ್ಲ ಪ್ರಕರಣಗಳಲ್ಲಿ ಮಕ್ಕಳು ನೋವು ನರಳಿಕೆಯನ್ನು ಜೀವಮಾನವಿಡೀ ಒಂದಲ್ಲ ಒಂದು ರೀತಿಯಲ್ಲಿ ಅನುಭವಿಸುತ್ತಾರೆ. ಮಕ್ಕಳ ಮೇಲಿನ ಅತ್ಯಾಚಾರ ನಡೆಯುತ್ತಿದೆ ಎಂಬ ಸತ್ಯವನ್ನು ಮೊದಲು ನಾವು ಒಪ್ಪಿಕೊಳ್ಳಬೇಕು. ಸಮಸ್ಯೆ ಇದೆ ಎಂದು ಒಪ್ಪಿಕೊಂಡರೆ, ಅದರ ಪರಿಹಾರದತ್ತ ಗುಣಾತ್ಮಕವಾಗಿ ಚಿಂತನೆ ಮತ್ತು ಕ್ರಿಯೆ ಸಾಧ್ಯವಾಗುತ್ತದೆ. ಇದೇ ಪರಿಹಾರದತ್ತ ಮೊದಲ ಹೆಜ್ಜೆ. ಸಮಸ್ಯೆಯೇ ಇಲ್ಲ ಎನ್ನುವುದು ಪಲಾಯನವಾದವಲ್ಲದೆ ಬೇರೆ ಅಲ್ಲ.

ಮಕ್ಕಳ ಮೇಲಿನ ಅತ್ಯಾಚಾರ ಇಲ್ಲವಾಗಬೇಕಾದರೆ ಮೊದಲಿಗೆ ತಂದೆತಾಯಿಗಳು, ಶಿಕ್ಷಕರು, ಮನೆಯಲ್ಲಿರುವ ಹಿರಿಯರು, ಸಮಾಜದ ನಾಗರಿಕರು ಎಲ್ಲರೂ ಅದು ಆಗದಂತೆ ಎಚ್ಚರ ವಹಿಸಬೇಕು. ಮಕ್ಕಳಿಗೆ ಯಾರೊಂದಿಗೆ ಒಡನಾಟ ಇದ್ದರೂ ಎಚ್ಚರದಿಂದ ಗಮನಿಸಬೇಕು. ಮಗುವಿಗೆ ತಿಳಿಯುವಂತೆ ಎಚ್ಚರಿಕೆಯ ಪಾಠಗಳನ್ನು ಕಲಿಸಬೇಕು. ನಿಜ ಹೇಳಬೇಕೆಂದರೆ ಮಗು ಹೆಣ್ಣಾಗಲೀ ಗಂಡಾಗಲೀ ಕೆಲವು ಸಮಾನ ಅಂಶಗಳನ್ನು ಅದಕ್ಕೆ ತಿಳಿಹೇಳಬೇಕು. ಮನೆಯಲ್ಲಿ ಮಕ್ಕಳಿಗೆ ಮುಕ್ತವಾದ, ಸಹಜವಾದ, ಹೆದರಿಕೆ ಬೆದರಿಕೆಗಳಿಲ್ಲದ ವಾತಾವರಣ ಇದ್ದರೆ ಅವರು ನಿರಾತಂಕವಾಗಿ, ಮುಕ್ತವಾಗಿ ಪ್ರಶ್ನೆಗಳನ್ನು ಕೇಳುತ್ತಾರೆ. ತಮಗೆ ಏನು ಅನ್ನಿಸಿದರೂ ಹೇಳುತ್ತಾರೆ. ಆದ್ದರಿಂದ ಬೆಳೆಯುವ ಮಕ್ಕಳಿಗೆ ಭಯಮುಕ್ತ ವಾತಾವರಣ ತುಂಬಾ ಅಗತ್ಯ.

ಪ್ರತಿಯೊಂದು ಮಗುವಿಗೂ ತನ್ನ ದೇಹದ ಅಂಗಗಳ ಬಗ್ಗೆ ನಿರ್ಮಲವಾದ ಕುತೂಹಲ ಇರುತ್ತದೆ. ಹಿರಿಯರು ಮಗುವಿಗೆ ಅದರ ದೇಹದ ಬಗ್ಗೆ, ಅಂಗಾಂಗಗಳ ಬಗ್ಗೆ, ಅಂಗಗಳ ಕೆಲಸದ ಬಗ್ಗೆ ಮಗುವಿಗೆ ತಿಳಿಯುವ ರೀತಿಯಲ್ಲಿ ಸರಳವಾಗಿ ಅರ್ಥಮಾಡಿಸಬೇಕು. ಮಗು ತನ್ನ ದೇಹದ ಬಗ್ಗೆ ತಾನು ತಿಳಿದುಕೊಳ್ಳುವುದು ತಪ್ಪಲ್ಲ. ಗಂಡುಮಗು ಹೆಣ್ಣುಮಗು ನಡುವೆ ಇರುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ ತಿಳಿಸಿಕೊಡುವುದೂ ಅಗತ್ಯವಾಗಿ ಆಗಬೇಕು.

ಸ್ವತಃ ಹುಟ್ಟಿಸಿದ ತಂದೆಯೇ ಮಗಳ ಮೇಲೆ ಅತ್ಯಾಚಾರ ಮಾಡುವಂಥ ಸುದ್ದಿಗಳನ್ನು ಎಲ್ಲ ಸಮಾಜಗಳಲ್ಲಿ ಕೇಳುತ್ತೇವೆ. ಹಾಗಿದ್ದಮೇಲೆ, ಇತರ ಗಂಡಸರ ದುರ್ವರ್ತನೆ ಕೂಡ ಸಾಮಾನ್ಯವಾಗಿದ್ದು ಹೆಣ್ಣುಮಕ್ಕಳ ಬಾಲ್ಯವನ್ನು ನರಕವಾಗಿಸುತ್ತದೆ. ಹೆಣ್ಣುಮಕ್ಕಳನ್ನು ಮುದ್ದಾಡುವ ನೆಪದಲ್ಲಿ ಕೆಲವು ವಿಕೃತ ಗಂಡಸರು ಅವರನ್ನು ಹಿಂಸಿಸುತ್ತಾರೆ. ಆದ್ದರಿಂದ ಮಕ್ಕಳಿಗೆ ಬಾಲ್ಯದಲ್ಲೇ `ಒಳ್ಳೆಯ ಸ್ಪರ್ಶ’ – `ಕೆಟ್ಟ ಸ್ಪರ್ಶ’ (ಗುಡ್ ಟಚ್ – ಬ್ಯಾಡ್ ಟಚ್) ಇವುಗಳನ್ನು ತಿಳಿಸಿಕೊಡುವ ಮೂಲಕ, ಹಿತಕರ ಮತ್ತು ಅಹಿತಕರ ಸ್ಪರ್ಶಗಳ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳನ್ನು ಮುದ್ದು ಮಾಡಲು ಕೆಟ್ಟದಾಗಿ ಮುಟ್ಟಬೇಕಿಲ್ಲ. ಆದರೆ ಅದು ಮನೆಯ ಪರಿಸರ, ಶಾಲೆಯ ಪರಿಸರ ಎಲ್ಲಾದರೂ ಆಗಬಹುದು. ತನ್ನ ದೇಹದ ಬಗ್ಗೆ ಯಾರಾದರೂ ಅಗತ್ಯಕ್ಕಿಂದ ಹೆಚ್ಚು ಗಮನ ಹರಿಸಿದರೆ, ಮುಜುಗರ ಬರಿಸುವಷ್ಟು ಮುಟ್ಟಿದರೆ, ಜನನಾಂಗಗಳನ್ನು ಸ್ಪರ್ಶಿಸಿದರೆ ಅದು ಸರಿಯಲ್ಲ ಎಂದು ಮಗುವಿಗೆ ಗೊತ್ತಾಗಬೇಕು. ಆದ್ದರಿಂದ ಮಕ್ಕಳಿಗೆ ಮೂರು `ಆರ್’ ಗಳ ಬಗ್ಗೆ ಹೇಳುವುದು ಒಳ್ಳೆಯದು. ರೆಕಗ್ನೈಸ್ (ಅಹಿತಕರ ಸ್ಪರ್ಶವನ್ನು ಗುರುತಿಸುವುದು), ರೆಸಿಸ್ಟ್ (ಅದನ್ನು ಪ್ರತಿಭಟಿಸುವುದು) ಮತ್ತು ರಿಪೋರ್ಟ್ (ಅದರ ಬಗ್ಗೆ ಮನೆಯಲ್ಲಿ ದೊಡ್ಡವರಿಗೆ ಹೇಳುವುದು) ಇವುಗಳನ್ನು ಕಲಿಸಲೇಬೇಕು.

ಯಾರಾದರೂ ಮಗುವಿಗೆ ಮುಜುಗರ ಆಗುವಂತೆ, ಹಿಂಸೆ ಆಗುವಂತೆ ವರ್ತಿಸುತ್ತಿದ್ದರೆ `ಯಾಕೆ ಹೀಗೆ ಮಾಡುವುದು? ನನಗೆ ಇಷ್ಟವಿಲ್ಲ’ ಎಂದು ಹೇಳುವುದನ್ನು ಮಗು ಕಲಿಯಬೇಕು. ಪ್ರತಿಯೊಂದು ಮಗುವಿಗೂ ಅದರ ದೇಹದ ಮೇಲೆ ಹಕ್ಕಿರುತ್ತದೆ. ಅದನ್ನು ಯಾರೂ ತಮಗೆ ಇಷ್ಟಬಂದಂತೆ ಮುಟ್ಟಲು ಸಾಧ್ಯವಿಲ್ಲ. ಈ ಭಾವನೆಯನ್ನು ಬಾಲ್ಯದಿಂದಲೇ ಮಗುವಿಗೆ ಕಲಿಸುವುದು ಬಹಳ ಒಳ್ಳೆಯದು.

ಅಕಸ್ಮಾತ್ ಮಗುವಿಗೆ ಅಹಿತಕರ ಅನುಭವ ಆಗಿದ್ದು ಅದನ್ನು ಮನೆಯಲ್ಲಿ ಹೇಳಿದಾಗ ತಂದೆತಾಯಿ ಅದನ್ನು ಮೊದಲು ಸಮಾಧಾನದಿಂದ ಕೇಳಿಸಿಕೊಳ್ಳಬೇಕು. ಈ ಪ್ರಕರಣದಲ್ಲಿ ಮಗುವಿನ ತಪ್ಪೇನೂ ಇಲ್ಲ, ಅದು ಹೆದರುವುದು ಬೇಡ ಎಂದು ನಂಬಿಕೆ ಮೂಡಿಸಬೇಕು. ಮಗುವಿನ ಮುಂದೆ ಆಕ್ರೋಶ ವ್ಯಕ್ತಪಡಿಸುವುದರ ಬದಲು, ಅದನ್ನು ಪ್ರತಿಭಟಿಸಲು, ಕ್ರಮ ಕೈಗೊಳ್ಳಲು ಹಿರಿಯರು ಆಲೋಚಿಸಬೇಕು ಅಹಿತಕರ ಅನುಭವ ಕೊಟ್ಟ ಅದೇ ವ್ಯಕ್ತಿಯನ್ನು ಮಗು ಮತ್ತೆ ಮತ್ತೆ ಭೇಟಿ ಆಗುವುದನ್ನು ಸಾಧ್ಯವಾದಷ್ಟೂ ತಪ್ಪಿಸಬೇಕು. ಆದರೆ ಮಗುವನ್ನು ಮಾತ್ರ ಅದೇ ಮೊದಲಿನ ಪ್ರೀತಿ ವಿಶ್ವಾಸಗಳಿಂದ ಕಾಣುವುದು ಅಗತ್ಯ.

ಇನ್ನೊಬ್ಬರಿಗೆ ಮುತ್ತು ಕೊಡಲು, ಆಲಂಗಿಸಲು ಮಗುವನ್ನು ಒತ್ತಾಯಿಸದಿರುವುದೇ ಒಂದು ರೀತಿಯಲ್ಲಿ ಒಳ್ಳೆಯದು. ಮಗು ಅಪರಿಚಿತರೊಡನೆ ದೈಹಿಕವಾಗಿ ಸಮೀಪ ಸಂಪರ್ಕಕ್ಕೆ ಬರದಿದ್ದರೆ ನಷ್ಟವೇನಿಲ್ಲ. ಎಲ್ಲ ಗಂಡಸರೂ ಕೆಟ್ಟವರೆಂದು ಇದರರ್ಥವಲ್ಲ. ಆದರೆ ಮಗುವಿಗೆ ಅನವಶ್ಯಕ ಕಿರಿಕಿರಿಗಳನ್ನು ತಪ್ಪಿಸಲು ಅನ್ಯಮಾರ್ಗವಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೆ ತಪ್ಪೇನಿಲ್ಲ. ಹಾಗೆಯೇ ಮಗು ಎಲ್ಲಿಗೆ ಹೋಗುತ್ತದೆ, ಏನು ಮಾಡುತ್ತದೆ, ಯಾರ್ಯಾರೊಂದಿಗೆ ಸಂಪರ್ಕಕ್ಕೆ ಬರುತ್ತದೆ ಎನ್ನುವುದರ ಬಗ್ಗೆ ನಿಗಾ ಇದ್ದರೆ ಒಳ್ಳೆಯದು.

ಹೆಣ್ಣು ಅಥವಾ ಗಂಡುಮಗುವಿಗೆ ಏನಾದರೂ ಅಹಿತಕರ ಅನುಭವ ಆಗಿ, ಅಪ್ಪ ಅಮ್ಮನೊಡನೆ ಹೇಳಿಕೊಂಡಲ್ಲಿ ಅಪಮಾನ, ದುಃಖ, ಕೋಪ, ಅಪನಂಬಿಕೆ, ಉದ್ರೇಕ ಇವುಗಳನ್ನು ಪ್ರದರ್ಶಿಸಿ, ಮಗು ಇನ್ನಷ್ಟು ಕುಗ್ಗಿ ಹೋಗುವಂತೆ ಮಾಡಬಾರದು. ಬದಲಿಗೆ ಮಗುವನ್ನು ನಂಬಿ, ಅದರೊಂದಿಗೆ ವಿಶ್ವಾಸದಿಂದ ಮಾತನಾಡಿ ಸಂತೈಸುವುದು ವಿಹಿತ. ಅದನ್ನು ಬೈದು, ದಂಡಿಸಿ, ಅದು ಮಾಡಿರುವುದೇ ತಪ್ಪೆಂದು ಶಿಕ್ಷೆ ನೀಡಬಾರದು.

ಇನ್ನೊಂದು ಬಹಳ ಮುಖ್ಯ ವಿಚಾರವೆಂದರೆ, ಮಗುವಿನ ನಡವಳಿಕೆಯಲ್ಲಿ ಮಾತಿನಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದರೆ ಅದನ್ನು ಉದಾಸೀನ ಮಾಡಲೇ ಬಾರದು. ಪ್ರೀತಿಯಿಂದ ವಿಚಾರಿಸಿ ಕಾರಣಗಳನ್ನು ತಿಳಿದುಕೊಂಡು ಅವುಗಳನ್ನು ಬಗೆಹರಿಸಬೇಕು. ಹಾಗೆಯೇ ಯಾವುದಾದರೂ ವ್ಯಕ್ತಿ ಮಗುವಿನ ಬಗ್ಗೆ ಅನಗತ್ಯ ವಿಶ್ವಾಸ ತೋರಿಸಿದರೆ, ವಿಪರೀತ ಮಾತನಾಡಿಸಿದರೆ, ಅನುಮಾನ ಪಡುವ ಹಾಗೆ ಉಡುಗೊರೆಗಳನ್ನು ತರುತ್ತಿದ್ದರೆ, ಆ ವ್ಯಕ್ತಿಯ ಬಗ್ಗೆ ಗಮನ ಕೊಟ್ಟರೆ ಒಳ್ಳೆಯದು. ಗುರುತಿಲ್ಲದ ವ್ಯಕ್ತಿಗಳೊಡನೆ ಹೋಗುವುದು, ಅವರು ಒಡ್ಡುವ ಆಟಿಕೆ, ಸಿಹಿತಿಂಡಿಗಳ ಆಮಿಷಗಳನ್ನು ಒಪ್ಪಿಕೊಳ್ಳುವುದು ಮುಂತಾದ್ದರ ಬಗ್ಗೆ ಮಗುವಿಗೆ ಎಚ್ಚರಿಕೆ ಹೇಳದೆ ಇರಬಾರದು. ಅಂಥ ಆಮಿಷಗಳನ್ನೇ ಪಿಂಕಿ ವೀರಾನಿ ಅವರು `ಬಿಟ್ಟರ್ ಚಾಕೊಲೇಟ್’ ಎಂದು ಕರೆಯುತ್ತಾರೆ.

ಚಿಕ್ಕಮಗುವಿಗೂ ಕೂಡ ಮನೆಯ ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆಗಳು ಬಾಯಿಪಾಠ ಆಗುವಂತೆ ಮಾಡುವುದು ಈಗಿನ ಕಾಲದ ಅಗತ್ಯ. ಹಾಗೆಯೇ ಮಕ್ಕಳಿಗೆ ಸ್ವಯಂ ರಕ್ಷಣೆಯ ವಿಧಾನಗಳನ್ನು ಕಲಿಸುವುದೂ ಬೇಕು. ಯಾರಾದರೂ ಮುಜುಗರ ಮಾಡಿದೊಡನೆ, ಕೂಗುವುದು, ಕಿರಿಚುವುದು, ಇತರರ ಗಮನ ಸೆಳೆಯುವುದು ಅಗತ್ಯ ಎಂಬುದನ್ನೂ ಹೇಳಿಕೊಡಬೇಕು. ಹದಿಹರೆಯದ ಹುಡುಗಿಯರಿಗೆ ಇದು ವಿಶೇಷವಾಗಿ ಉಪಯೋಗಕ್ಕೆ ಬರಬಹುದು. ಸಹಾಯವಾಣಿ 1098 ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳನ್ನು ಬೆಳೆಸುವಾಗ ಗಂಡು ಹೆಣ್ಣು ಸಮಾನತೆಯ ಸಂವೇದನೆಯೊಂದಿಗೆ ಬೆಳೆಸುವುದು ತೀರಾ ಮುಖ್ಯ. ಗಂಡುಮಕ್ಕಳೆಂದರೆ ಹೆಚ್ಚು ಹೆಣ್ಣುಮಕ್ಕಳೆಂದರೆ ಕಡಿಮೆ ಎಂಬ ಭಾವನೆ ನಮ್ಮ ಸಮಾಜದಲ್ಲಿ ವ್ಯಾಪಕವಾಗಿ ಇರುವುದರಿಂದ ಮಕ್ಕಳ ಮನಸ್ಸಿನಲ್ಲೂ ಅದು ಸೇರಿಹೋಗುತ್ತದೆ. ಇದನ್ನು ಪ್ರಜ್ಞಾಪೂರ್ವಕವಾಗಿ ದೂರವಿಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಮನೆಯಲ್ಲಿ ಅಪ್ಪ ಅಮ್ಮಂದಿರು, ಶಾಲೆಗಳಲ್ಲಿ ಶಿಕ್ಷಕರು ಸಮಾನತೆಯ ಭಾವವನ್ನು ಎಲ್ಲ ಸಂದರ್ಭಗಳಲ್ಲೂ ಬಿತ್ತಬೇಕು. ಇದು ಗಂಡುಮಕ್ಕಳು ಬೆಳೆಯುತ್ತ ಬಂದಂತೆ ಹೆಣ್ಣುಮಕ್ಕಳನ್ನು ಸಹಜವಾಗಿ, ಗೌರವದಿಂದ ಕಾಣಲು ಸಾಧ್ಯವಾಗುತ್ತದೆ; ಹಾಗೇ ಹೆಣ್ಣುಮಕ್ಕಳು ಆತ್ಮವಿಶ್ವಾಸದಿಂದ ಬದುಕನ್ನು ಎದುರಿಸಲು ಅನುವು ಮಾಡಿಕೊಡುತ್ತದೆ.

ಮಕ್ಕಳು ಬೆಳೆಯುತ್ತಿರುವಾಗ ಅವರ ವಯಸ್ಸಿಗೆ ಅನುಗುಣವಾಗಿ ಮೌಲ್ಯಾಧಾರಿತ ಲೈಂಗಿಕ ಶಿಕ್ಷಣ, ವೈಜ್ಞಾನಿಕ ಲೈಂಗಿಕ ಜ್ಞಾನ ನೀಡುವುದು ಕುಟುಂಬದ ಮತ್ತು ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿ. ಇದರಷ್ಟೇ ಜವಾಬ್ದಾರಿ ಸಮೂಹ ಮಾಧ್ಯಮಗಳಿಗೂ ಇದೆ. ಗಂಡನ್ನು ಮೇಲೇರಿಸುವ ಮತ್ತು ಹೆಣ್ಣನ್ನು ಕೀಳಾಗಿ ಕಾಣುವ ಸುದ್ದಿ, ಕಾರ್ಯಕ್ರಮ, ಚಲನಚಿತ್ರ, ಭಾಷಣ ಇವುಗಳಿಗೆ ಆಸ್ಪದ ನೀಡದೆ ಸಮಾನತೆಯನ್ನು ಸಾರುವುದು ಅವುಗಳ ಧ್ಯೇಯವಾದರೆ ಬಹಳ ಚೆನ್ನ. ಮುಂದಿನ ತಲೆಮಾರಿನ ಮಾನಸಿಕ ಆರೋಗ್ಯವನ್ನು ರೂಪಿಸುವುದು ಇಂದಿನವರ ಕೈಯಲ್ಲೇ ಇದೆ ಎನ್ನುವುದನ್ನು ಮರೆಯುವಂತೆಯೇ ಇಲ್ಲ.

ಡಾ. ಪದ್ಮಿನಿ ಪ್ರಸಾದ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *