ಪದ್ಮಿನಿ ಪಾಠ/ತೃತೀಯ ಲಿಂಗಿಗಳೆಡೆ ತಾರತಮ್ಯ ಬೇಡ – ಡಾ. ಪದ್ಮಿನಿ ಪ್ರಸಾದ್

ಹಿಜಿಡಾಗಳು, ಸಲಿಂಗಕಾಮಿಗಳು ಬೇಕೆಂದೇ ಆಗುವುದಲ್ಲ. ಭ್ರೂಣದ ಹಂತದಲ್ಲಿ ಆಗುವ ವರ್ಣತಂತುಗಳ ವ್ಯತ್ಯಾಸದಿಂದ ಈ ಭಿನ್ನತೆ ಹೆಣ್ಣು ಗಂಡುಗಳಲ್ಲಿ ಕಾಣಿಸಿಕೊಳ್ಳುತ್ತದೆ. ತಮ್ಮ ತಪ್ಪಿಲ್ಲದಿದ್ದರೂ ಈ ವ್ಯಕ್ತಿಗಳು ಜೀವನದ ಉದ್ದಕ್ಕೂ  ಸಮಾಜದ ಅನಾದರಕ್ಕೆ ತುತ್ತಾಗುತ್ತಾರೆ. ಈ ಬಗ್ಗೆ ಇಲ್ಲಿ ವಿಶ್ಲೇಷಿಸಲಾಗಿದೆ

ಚಾಂದಿನಿ, ಅಪ್ಸರಾ, ಕಾಜಲ್ ಎಷ್ಟೊಂದು ಸುಂದರ ಹೆಸರುಗಳು. ಆದರೆ ಇವು ಒಂದು ವಿಭಿನ್ನ ಸಾಮಾಜಿಕ ಗುಂಪಿಗೆ ಸೇರಿದ ವ್ಯಕ್ತಿಗಳ ಹೆಸರುಗಳು. ಗಂಡು ದೇಹದಲ್ಲಿ ಬಂದಿಯಾಗಿರುವ ಹೆಣ್ಣಿನ ಹೆಸರುಗಳಿವು. ಆ ಹೆಣ್ಣುಗಳನ್ನು ನೋಡಿದವರಿಗೆ, ಅವರು ಯಾರು, ಅವರ ನೋವು ಸಂಕಟಗಳೇನು, ಅವರ ತೊಂದರೆಗಳೇನು ಎಂದು ಊಹಿಸಲೂ ಸಾಧ್ಯವಾಗುವುದಿಲ್ಲ. ಅವರೂ ಬೇರೆಲ್ಲರಂತೆಯೇ ಮನುಷ್ಯರೇ, ಅವರಿಗೂ ಮನಸ್ಸಿದೆ, ಭಾವನೆಗಳಿವೆ, ಬುದ್ಧಿವಂತಿಕೆ ಇದೆ, ವಿದ್ಯೆ ಪ್ರತಿಭೆಗಳಿವೆ. ಆದರೂ ಅವರನ್ನು ಮನುಷ್ಯರಂತೆ ಕಾಣಲು ಜನರು ಹಿಂದೆಗೆಯುತ್ತಾರೆ ಏಕೆ? ಅವರೂ  ಸಹಜವಾಗಿ ಸಹಬಾಳ್ವೆ ನಡೆಸಲು ನಾಗರಿಕ ಸಮಾಜ ಒಪ್ಪುತ್ತಿಲ್ಲ ಏಕೆ? ಅವರ ಬಗೆಗಿನ ತಪ್ಪು ತಿಳಿವಳಿಕೆಯೇ ಅಥವಾ ಅವರ ಬಗೆಗಿನ ಅವ್ಯಕ್ತ ಭಯವೇ?

ಪ್ರತಿಯೊಬ್ಬ ವ್ಯಕ್ತಿಗೂ (ಹೆಣ್ಣಿರಲಿ, ಗಂಡಿರಲಿ) ತನ್ನದೇ ಆದ ಲೈಂಗಿಕ ಭಾವನೆಗಳು, ವರ್ತನೆಗಳು, ನಂಬಿಕೆಗಳು ಮತ್ತು ಅವುಗಳ ಅಭಿವ್ಯಕ್ತಿಯ ಸ್ವಾತಂತ್ರ್ಯವಿರುತ್ತದೆ ಮತ್ತು ಪ್ರತಿ ವ್ಯಕ್ತಿಯ ಲೈಂಗಿಕ ರೀತಿ ವಿಭಿನ್ನವಾಗಿರುತ್ತದೆ. ಇದು ಆ ವ್ಯಕ್ತಿಯ ವ್ಯಕ್ತಿಗತ ವೈಯುಕ್ತಿಕ ಅನುಭವಗಳು ಹಾಗೂ ಸುತ್ತಮುತ್ತಲಿನ ಪರಿಸರದ, ಸಮಾಜದ ಪ್ರಭಾವವನ್ನು ಅವಲಂಬಿಸಿರುತ್ತದೆ. ಮಗು ಹುಟ್ಟಿದಾಗ ಹೆಣ್ಣು ಅಥವಾ ಗಂಡು ಎಂದು ಲಿಂಗ ನಿರ್ಧಾರವಾದ ಅನಂತರ ಅದು ಹೆಣ್ಣಾಗಿ ಅಥವಾ ಗಂಡಾಗಿ ಬೆಳೆಯಲು ತಂದೆ-ತಾಯಿ, ಪೋಷಕರು, ಸ್ನೇಹಿತರು, ಶಿಕ್ಷಕರು ಮತ್ತು ಸುತ್ತಲಿನ ಸಮಾಜ ಮುಖ್ಯ ಪಾತ್ರ ವಹಿಸುತ್ತದೆ. ಆ ವರ್ಗಕ್ಕೆ (ಹೆಣ್ಣು ಅಥವಾ ಗಂಡು) ಸಂಬಂಧಪಟ್ಟಂತೆ ಮಾತುಕತೆ, ಉಡುಗೆ-ತೊಡುಗೆ, ಆಟಗಳು, ನಡೆವಳಿಕೆ ಇವೆಲ್ಲದರ ಪ್ರಭಾವವೂ ಇರುತ್ತದೆ. ಮಗುವು ಕಿಶೋರಾವಸ್ಥೆ, ಬಾಲ್ಯಾವಸ್ಥೆ, ಪ್ರೌಢಾವಸ್ಥೆಗಳಿಗೆ ಕಾಲಿಟ್ಟಾಗ, ಸಂದರ್ಭಕ್ಕೆ ತಕ್ಕಂತೆ ಶಾರೀರಿಕ, ಮಾನಸಿಕ ಬದಲಾವಣೆಗಳಾಗಿ ಅದರ ಲೈಂಗಿಕತೆಗೆ, ಲಿಂಗ ಸಂಬಂಧಿತ ನಡವಳಿಕೆ, ಭಾವನೆಗಳಿಗೆ ಸರಿಯಾದ ಆಯಾಮ ದೊರೆಯುತ್ತದೆ. ಇದು ಮಗುವು ಸ್ತ್ರೀ ಅಥವಾ ಪುರುಷನಾಗಿ ಮಾರ್ಪಾಡಾಗುವ ರೀತಿ, ಈ ರೀತಿಯಲ್ಲಿ ಸಮಾಜ ಎರಡು ಲಿಂಗಗಳನ್ನು ಮಾತ್ರ ಗುರುತಿಸುತ್ತದೆ. ಇವಲ್ಲದೆ ಮೂರನೆಯ ಲೈಂಗಿಕ ವಿಭಾಗವೊಂದು ಇರಬಹುದು ಎನ್ನುವುದನ್ನು ಜನಸಾಮಾನ್ಯರು ಒಪ್ಪಿಕೊಳ್ಳಲಾರರು. ಹಾಗೆ ಒಪ್ಪಿಕೊಳ್ಳಲು ಸಮಾಜವೂ ಹಿಂಜರಿಯುತ್ತದೆ.

ಲೈಂಗಿಕತೆಗೆ ಶಾರೀರಿಕ, ಮಾನಸಿಕ ಹಾಗೂ ಭಾವನಾತ್ಮಕ ಆಯಾಮಗಳಿವೆ. ಇವುಗಳಲ್ಲಿ ಯಾವ ರೀತಿಯ ಏರುಪೇರು ಉಂಟಾದರೂ ವ್ಯಕ್ತಿಯ ಲೈಂಗಿಕತೆ ವಿಭಿನ್ನಅಥವಾ ವಿಕೃತಗೊಳ್ಳುತ್ತದೆ.

ಜೈವಿಕ ಲಿಂಗ ಪ್ರಭೇದ (ಬಯೋಲಾಜಿಕಲ್ ಸೆಕ್ಸ್) :ಸ್ತ್ರೀ ಅಥವಾ ಪುರುಷ ಜನನಾಂಗಗಳನ್ನು ಹೊಂದಿದ್ದು ಸ್ತ್ರೀ ಅಥವಾ ಪುರುಷ ಹಾರ್ಮೋನುಗಳ (ಅಂತಃಸ್ರಾವ, ಚೋದಿನಿ ಸ್ರಾವ) ಪ್ರಭಾವಕ್ಕೊಳಪಟ್ಟಿರುತ್ತದೆ.

ವರ್ಣತಂತುಗಳ ಲಿಂಗ ಪ್ರಭೇದ (ಕ್ರೊಮೋಸೋಮ್ ಸೆಕ್ಸ್) : ವ್ಯಕ್ತಿ ಹೆಣ್ಣಾಗಿದ್ದರೆ ಜೀವಕೋಶಗಳಲ್ಲಿ ‘xx’ ವರ್ಣತಂತುಗಳೂ, ಗಂಡಾಗಿದ್ದರೆ ‘xಥಿ’ ವರ್ಣತಂತುಗಳೂ ಇರುತ್ತವೆ.

ದೈಹಿಕ ಲಿಂಗ ಪ್ರಭೇದ ಜನನಾಂಗಗಳ ಬೆಳವಣಿಗೆಯಲ್ಲಿ ವ್ಯಕ್ತವಾಗುತ್ತದೆ.

ಕೆಲವೊಮ್ಮೆ ತಮ್ಮದಲ್ಲದ ತಪ್ಪಿಗೆ, ಜನನಾಂಗಗಳ ಬೆಳವಣಿಗೆಯ ನ್ಯೂನತೆಯಿಂದಾಗಿಯೋ, ಲೈಂಗಿಕ ಅಭಿವ್ಯಕ್ತತೆಯ ತೊಂದರೆಯಿಂದಲೋ, ವರ್ಣತಂತುವಿನ ತೊಂದರೆಯ ಪರಿಣಾಮದಿಂದಲೋ ಅಥವಾ ಮಾನಸಿಕ ಅಸ್ವಸ್ಥತೆಯ ಕಾರಣದಿಂದಾಗಿಯೋ, ಕೆಲವರಿಗೆ ಮಾತ್ರ ಪರಿಪೂರ್ಣ ಹೆಣ್ಣು ಅಥವಾ ಪರಿಪೂರ್ಣ ಗಂಡಾಗಿರಲು ಸಾಧ್ಯವಾಗುವುದಿಲ್ಲ. ಇಂಥ ಗುಂಪಿಗೆ ಸೇರಿದ, ಶಾರೀರಿಕವಾಗಿ ಗಂಡಸಾಗಿದ್ದು, ಹೆಣ್ಣಾಗುವ ಆಸೆ, ಮನಃಸ್ಥಿತಿ ಹೊಂದಿರುವ (ಗಂಡಿನ ದೇಹದಲ್ಲಿ ಸೆರೆಯಾಗಿರುವ ಹೆಣ್ಣು) ವ್ಯಕ್ತಿಗಳು ಮತ್ತು ಜನನಾಂಗಗಳ ನ್ಯೂನತೆ ಇರುವ ವ್ಯಕ್ತಿಗಳು ತಮ್ಮದೇ ಆದ ಒಂದು ಗುಂಪಾಗಿ ಬದುಕು ನಡೆಸಿದ್ದಾರೆ. ಇವರೇ ಹಿಜಿಡಾಗಳು.

ಹಿಜಿಡಾಗಳಲ್ಲಿ ಬಹಳಷ್ಟು ಜನ ವೃಷಣ, ಶಿಶ್ನಗಳ ಛೇದವಾಗಿರುವ ಮತ್ತು ಹೆಣ್ಣಿನಂತೆ ವೇಷ ಧರಿಸುವ ಆಸೆಯುಳ್ಳ ಗಂಡಸರು. ಕೆಲವರು ಅಪರೂಪವೆನ್ನಿಸುವ ಉಭಯಲಿಂಗಗಳಾಗಿರುತ್ತಾರೆ. ಕೆಳವರ್ಗ, ಮಧ್ಯಮವರ್ಗಗಳಿಂದ ಬಂದ ಹಿಜಿಡಾಗಳು ಮನೆಬಿಟ್ಟು ಹೊರಬಂದು ಅವರದೇ ಒಂದು ಜನಾಂಗವಾಗಿ ಬದುಕತೊಡಗಿದಾಗ ಅವರಿಗೆ ಜೀವನ ನಿರ್ವಹಣೆಗೆ, ಹಣ ಸಂಪಾದನೆಗೆ ಇರುವ ಮಾರ್ಗ ಭಿಕ್ಷಾಟನೆ ಅಥವಾ ವೇಶ್ಯಾವೃತ್ತಿಯಾಗಿರುತ್ತದೆ. ಏಕೆಂದರೆ, ಅವರಿಗೆ ಯಾರೂ ಸಾಮಾನ್ಯವಾಗಿ ಉದ್ಯೋಗ ನೀಡುವುದಿಲ್ಲ. ಮನೆಯವರೂ ತಮ್ಮಲ್ಲಿ ಒಬ್ಬರೆಂದು ಒಪ್ಪಿಕೊಳ್ಳಲೂ ಸಿದ್ಧರಿರುವುದಿಲ್ಲ. ವೈಜ್ಞಾನಿಕವಾಗಿ, ವೈದ್ಯಕೀಯವಾಗಿ ಒಬ್ಬ ವ್ಯಕ್ತಿ ಹಿಜಿಡಾ ಆಗಲು ಮೂರು ಕಾರಣಗಳಿವೆ. ಅವೆಂದರೆ: (1) ಬೆಳವಣಿಗೆಯಲ್ಲಿನ ನ್ಯೂನತೆ, (2)ಬದಲುಡುಗೆಯ ಮೂಲಕ ಲೈಂಗಿಕ ಅಭಿವ್ಯಕ್ತತೆ, (3)ಬದಲೀ ಲಿಂಗದ ಅಭಿವ್ಯಕ್ತತೆ.

ಕೆಲವು ಕಾರಣಗಳಿಂದಾಗಿ, ಉದಾಹರಣೆಗೆ, ವಂಶವಾಹಿನಿಯಲ್ಲಿನ ತೊಂದರೆ. ವರ್ಣತಂತುವಿನ ತೊಂದರೆ. ಗರ್ಭಿಣಿಯಾದವಳು ಕೆಲವು ರಾಸಾಯನಿಕ ಔಷಧಗಳ ಸೇವನೆಯಿಂದ ಅಥವಾ ಎಕ್ಸ್–ರೇಯಿಂದಾಗಿ, ನ್ಯೂನತೆಯುಳ್ಳ ಗರ್ಭವನ್ನು ಹೊಂದಿದ್ದರೆ, ಕೆಲವು ಸಂದರ್ಭಗಳಲ್ಲಿ ಹುಟ್ಟಿದ ಮಗು ಹೆಣ್ಣು ಅಥವಾ ಗಂಡು ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಇದರಿಂದ ಲಿಂಗ ನಿರ್ಧಾರ ತಪ್ಪಾಗಬಹುದು. ಅಂಥ ಮಕ್ಕಳಲ್ಲಿ ಹೆಣ್ಣು ಮತ್ತು ಗಂಡಿಗೆ ಸಂಬಂಧಿಸಿದ ಅವಯವಗಳೆಲ್ಲವೂ ಇರಬಹುದು. ಇಂಥ ಮಕ್ಕಳನ್ನೇ ಮುಂದೆ ನಪುಂಸಕ, ಶಿಖಂಡಿ, ಉಭಯಲಿಂಗಿ, ನಿರಿಂದ್ರಿಯ ಎಂದೆಲ್ಲಾ ಕರೆಯುವುದು.

ಈ ಪರಿಸ್ಥಿತಿ ಸೃಷ್ಟಿಯಾಗಲು ಕಾರಣವೆಂದರೆ ಅಂಡಾಣು ಅಥವಾ ವೀರ್ಯಾಣುವಿನೊಂದಿಗೆ ಫಲಿತಗೊಂಡ ಅಂಡಾಣುವಿನ ವಿಭಜನೆಯ ಸಮಯದಲ್ಲಿ, ಜೀವಕೋಶಗಳಲ್ಲಿ ವರ್ಣತಂತುವಿನ ಸಂಖ್ಯೆಗಳಲ್ಲಿ ಏರುಪೇರು ಉಂಟಾಗಿ ಲಿಂಗ ನಿರ್ಧಾರಕ ಅವಯವಗಳ ಬೆಳವಣಿಗೆಯಲ್ಲಿ ಪಲ್ಲಟ ಉಂಟಾಗುತ್ತದೆ. ಹಾಗಾಗಿ, ಅಂಡಾಶಯ, ಗರ್ಭಕೋಶ ಅಥವಾ ವೃಷಣಗಳ ಬೆಳವಣಿಗೆ ಒಟ್ಟೊಟ್ಟಿಗೆ ಆಗಬಹುದು ಅಥವಾ ಏರುಪೇರಾಗಬಹುದು. ಮಗುವಿನ ದೇಹದಲ್ಲಿ ಅಂಡಾಶಯ, ವೃಷಣ ಎರಡೂ ಇರಬಹುದು.

ಮಗು ಹುಟ್ಟಿದ ಮೇಲೆ ಅದರ ಜನನಾಂಗಗಳ ಪರೀಕ್ಷೆ ಬಹಳ ಮುಖ್ಯ. ತೊಂದರೆ ಏನಾದರೂ ಕಂಡು ಬಂದರೆ ವರ್ಣತಂತುವಿನ ಪರೀಕ್ಷೆ, ಹಾರ್ಮೋನಿನ ಪರೀಕ್ಷೆ, ಸ್ಕ್ಯಾನಿಂಗ್ ಮುಂತಾದ ಪರೀಕ್ಷೆಗಳನ್ನು ಮಾಡಿ ಲಿಂಗ ನಿರ್ಧಾರ ಮಾಡಬೇಕಾಗುತ್ತದೆ. ಹುಟ್ಟಿದಾಗ ತಪ್ಪಾದ ಲಿಂಗ ನಿರ್ಧಾರದಿಂದ ಮಗುವಿನ ಹದಿಹರೆಯದಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ವೃಷಣಗಳು, ವೃಷಣ ಚೀಲದಲ್ಲಿಲ್ಲದಿದ್ದರೆ, ಮೂತ್ರರಂಧ್ರ ಶಿಶ್ನದ ತುದಿಯಲ್ಲಿಲ್ಲದಿದ್ದರೆ, ಯೋನಿಯ ಬೆಳವಣಿಗೆ ಆಗಿಲ್ಲದಿದ್ದರೆ, ಮಗುವನ್ನು ಕೂಲಂಕುಷವಾಗಿ ಪರೀಕ್ಷಿಸಬೇಕು.

ಶರೀರದ ಇತರ ಅಂಗಗಳ ನ್ಯೂನತೆಗಳನ್ನು ಒಪ್ಪಿಕೊಂಡು ಅವರೊಡನೆ ಸಹಕರಿಸುವ ಸಮಾಜ, ಲೈಂಗಿಕ ನ್ಯೂನತೆಗಳಿರುವವರನ್ನೂ ಒಪ್ಪಿಕೊಂಡು ಅವರ ದೈಹಿಕ, ಮಾನಸಿಕ, ಲೈಂಗಿಕ ಬೆಳವಣಿಗೆಗಳಿಗೆ ಅನುಕೂಲವಾಗುವಂತೆ ಸಹಕರಿಸುವುದು ಕಷ್ಟವಾದರೂ ಮುಖ್ಯವಾದದ್ದಾಗಿದೆ. ಶಾರೀರಿಕವಾಗಿ ಗಂಡಾಗಿದ್ದರೂ ಕೆಲವರಲಿ ್ಲತಾವು ಹೆಣ್ಣಾಗಿರಬೇಕೆಂಬ ತೀವ್ರವಾದ ಹಂಬಲ ಮನಸ್ಸಿನಲ್ಲಿ ಬೇರೂರಿರುತ್ತದೆ. ಅವರು ‘ಗಂಡುದೇಹದಲ್ಲಿ ಬಂದಿಯಾದ ಹೆಣ್ಣು’ ಆಗಿರುತ್ತಾರೆ. ಈ ಭಾವನೆ 12-13 ವರ್ಷ ವಯಸ್ಸಿನಲ್ಲಿ ಪ್ರಾರಂಭವಾಗಿ 18-20 ವರ್ಷಗಳ ವೇಳೆಗೆ ಮನಸ್ಸಿನಲ್ಲಿ ಬಲವಾಗಿ ಬೇರೂರಬಹುದು. ಆ ಸಮಯದಲ್ಲಿ ಅವರು ಹೆಣ್ಣಿನಂತೆ ಅಲಂಕರಿಸಿಕೊಳ್ಳುವುದು ಅವರಂತೆ ಹಾವ ಭಾವತೋರುವುದು, ಹೆಣ್ಣಿನಂತೆಯೇ ಇದ್ದು ಗಂಡಸರೊಡನೆ ಲೈಂಗಿಕ ಆಕರ್ಷಣೆಯನ್ನು ಹೊಂದುವುದು ಮುಂತಾದ ಲೈಂಗಿಕ ಅಭಿವ್ಯಕ್ತತೆಯನ್ನು ತೋರಬಹುದು, ಈ ರೀತಿ ಹೆಣ್ಣು ವೇಷ ಧರಿಸುವುದನ್ನು ‘ಟ್ರಾನ್ಸ್‍ವೆಸ್ಟಿಸಮ್’ ಎನ್ನುತ್ತಾರೆ. ಒಂದು ಸಮಯದಲ್ಲಿಇಂಥ ವ್ಯಕ್ತಿಗೆ ತಾನು ಹೆಣ್ಣಾಗಬೇಕೆಂಬ ಬಯಕೆ ಎಷ್ಟು ತೀವ್ರವಾಗಿರುತ್ತದೆಯೆಂದರೆ, ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ಮುಂದಾಗುತ್ತಾನೆ (ಟ್ರಾನ್ಸ್‍ಜೆಂಡರ್ ಅಥವಾ ಟ್ರಾನ್ಸ್ ಸೆಕ್ಸ್ಯುವಲ್). ಇದರಲ್ಲಿ ಪ್ರಮುಖವಾದ ಘಟ್ಟವೆಂದರೆ ‘ನಿರ್ವಾಣ’ ಅಥವಾ ವೃಷಣಗಳನ್ನು ಛೇದಿಸಿಕೊಳ್ಳುವುದು ಮತ್ತು ಶಿಶ್ನವನ್ನು ತೆಗೆಸಿಹಾಕುವುದು. ಕೆಲವರು ಸ್ತನಗಳ ಕಸಿ ಮಾಡಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಸ್ತ್ರೀ ಹಾರ್ಮೋನುಗಳನ್ನು ಸೇವಿಸುತ್ತಾರೆ. ಇದು ಸ್ತನಗಳ ಗಾತ್ರವನ್ನು ಹೆಚ್ಚಿಸುತ್ತದೆ. ಇಂಥ ಪುರುಷ ಜನನಾಂಗಗಳ ಛೇದನ ಮಾಡಿಸಿಕೊಂಡು ಹೆಣ್ಣಿನಂತೆ ವೇಷ ಭೂಷಣಗಳನ್ನು ತೊಟ್ಟು ಜೀವನ ನಡೆಸುವವರೇ ಹಿಜಿಡಾಗಳು. ಬರಿಯ ಜನನಾಂಗಗಳ ಛೇದನ ಮಾಡಿಸಿ ಸ್ತ್ರೀ ವೇಷ ಧರಿಸದೇ ಇರುವವರಿಗೆ ಶಿಖಂಡಿಗಳು ಎನ್ನುತ್ತಾರೆ.

ಒಟ್ಟಾರೆಯಾಗಿ ಹಿಜಿಡಾಗಳಲ್ಲಿ ಕಾಣುವ ಲೈಂಗಿಕ ಬದಲಾವಣೆಗಳೆಂದರೆ :

ಪುರುಷ ಶರೀರದಲ್ಲಿ ಬಂಧಿತಳಾಗಿರುವ ಸ್ತ್ರೀ; ಶಿಶ್ನ, ವೃಷಣಗಳನ್ನು ಛೇದನ ಮಾಡಿಸಿಕೊಂಡು ಸ್ತ್ರೀಯಂತೆ ಇರ ಬಯಸುವ ಪುರುಷ; ಬದಲುಡುಗೆ ಧರಿಸುವವ; ಸಲಿಂಗ ಸಂಬಂಧವಿಟ್ಟುಕೊಂಡಿರುವವ ಸಹಜ ಸಂಭೋಗ ಅಥವಾ ಯೋನಿ-ಶಿಶ್ನ ಸಮಾಗಮವಲ್ಲದೇ ಅಸಹಜ ಲೈಂಗಿಕ ಸಂಬಂಧ ಅಥವಾ ಸಾಮಾನ್ಯವಾಗಿ ವಿಕೃತಕಾಮವೆಂದು ಸಾಮಾಜಿಕವಾಗಿ ಹಾಗೂ ಕಾನೂನುರೀತ್ಯಾ ಪರಿಗಣಿತವಾದ ‘ಮುಖ ಮೈಥುನ’, ‘ಗುದ ಮೈಥುನ’ ಇವು ಹಿಜಿಡಾಗಳ ಲೈಂಗಿಕ ಸಂಬಂಧದ ರೀತಿ. ಇವರು ಸಾಮಾನ್ಯವಾಗಿ ಸಲಿಂಗಿಗಳು ಅಥವಾ ದ್ವಿಲಿಂಗಿಗಳಾಗಿರುತ್ತಾರೆ. ನಿರ್ವೀರ್ಯಗೊಳಿಸಲ್ಪಟ್ಟವರು (ವೃಷಣಗಳನ್ನು ತೆಗೆಸಿಕೊಂಡವರು), ಸಲಿಂಗ ಸಂಬಂಧವುಳ್ಳವರು ಕೆಲವರು ದ್ವಿಲಿಂಗಿಗಳಾಗಿರಬಹುದು. ಹೊರಗೆ ಸಲಿಂಗ ಸಂಬಂಧವಿಟ್ಟುಕೊಂಡು, ವಿವಾಹವಾದ ಪತ್ನಿಯೊಡನೆಯೂ ಲೈಂಗಿಕ ಸಂಬಂಧವಿಟ್ಟುಕೊಂಡು ಮಕ್ಕಳನ್ನು ಪಡೆದಿರುವವರು ಉಭಯ ಲಿಂಗಿಗಳು ಅಥವಾ ದ್ವಿಲಿಂಗಿಗಳು. ಒಂದೇ ಲಿಂಗದವರಲ್ಲಿ ಲೈಂಗಿಕ ಸಂಬಂಧ ಇರುವವರನ್ನು ಸಲಿಂಗ ಕಾಮಿಗಳು (ಹೋಮೋಸೆಕ್ಸ್ಯುವಲ್) ಎನ್ನುತ್ತಾರೆ. ಗಂಡು ಗಂಡಿನಲ್ಲಿ ಅಥವಾ ಹೆಣ್ಣು ಇನ್ನೊಂದು ಹೆಣ್ಣಿನಲ್ಲಿ ಲೈಂಗಿಕ ಸಂಬಂಧವಿಟ್ಟುಕೊಳ್ಳುವವರು ಈ ಗುಂಪಿಗೆ ಸೇರುತ್ತಾರೆ.

ಭಾರತದಲ್ಲಿ 1.35 ಕೋಟಿ ಸಲಿಂಗ ಕಾಮಿಗಳಿದ್ದಾರೆಂದು ಒಂದು ಅಂದಾಜಿದೆ. ಸಾಮಾನ್ಯವಾಗಿ ಒಟ್ಟು ಜನಸಂಖ್ಯೆಯ ಶೇಕಡ 5ರಷ್ಟು ಜನ ಸಲಿಂಗ ಸಂಬಂಧ ಹೊಂದಿರುವವರು ಹೆಚ್ಚು. ಜನನಾಂಗಗಳ ಛೇದನ ಮಾಡಿಸಿಕೊಂಡಿಲ್ಲದವರಲ್ಲಿ ಕೆಲವರು ದ್ವಿಲಿಂಗಿಗಳೂ ಇದ್ದಾರೆ. ಸಲಿಂಗ ವರ್ತನೆಯನ್ನು ಪಾಶ್ಚಾತ್ಯರಲ್ಲಿ ಹಾಗೂ ನಮ್ಮಲ್ಲಿ ಮೇಲ್ಮಟ್ಟದ ವರ್ಗದ ಜನಗಳ ಒಂದು ನಡವಳಿಕೆ ಎಂದು ತಿಳಿದಿದ್ದಾರೆ. ಕೆಲವರು ಇದನ್ನು ಒಂದು ಕಾಯಿಲೆ, ವಿಕೃತಿ ಎಂದೂ, ಇನ್ನೂ ಕೆಲವರು ಇದನ್ನು ಅಪರಾಧ ಎಂದೂ ತಿಳಿದಿದ್ದಾರೆ. ವೈಜ್ಞಾನಿಕವಾಗಿ ಸಲಿಂಗ ಕಾಮದ ಬಗ್ಗೆ ಬಹಳಷ್ಟು ಅಧ್ಯಯನಗಳು, ಪ್ರಯೋಗಗಳನ್ನು ನಡೆಸಲಾಗಿದೆ. ಮನೋರೋಗತಜ್ಞರ ಸಂಘಗಳು ಸಲಿಂಗ ವರ್ತನೆಯನ್ನು ಕಾಯಿಲೆಗಳ ಗುಂಪಿನಿಂದ ತೆಗೆದುಹಾಕಿವೆ. ಏಕೆಂದರೆ, ಅದು ಒಂದು ಮಾನಸಿಕ, ಭಾವಾನಾತ್ಮಕ ಸ್ಥಿತಿ ಮತ್ತು ಲೈಂಗಿಕ ಅಭಿವ್ಯಕ್ತತೆಯ ಒಂದು ಕ್ರಮ. ಇದಕ್ಕೆ ಸ್ಪಷ್ಟವಾದ ಕಾರಣ ಇದುವರೆಗೂ ತಿಳಿದಿಲ್ಲ. ವಂಶವಾಹಿನಿ ತೊಂದರೆ, ಲೈಂಗಿಕ ಬೆಳವಣಿಗೆಯಲ್ಲಿರುವ ನ್ಯೂನತೆ, ಭದ್ರತೆಯಿಲ್ಲದ ಜೀವನಕ್ರಮ, ಸ್ತ್ರೀಯರೊಡನೆ ಹೆಚ್ಚಿನ ಒಡನಾಟ, ಚಿಕ್ಕವಯಸ್ಸಿನಿಂದಲೇ ಬದಲುಡುಗೆಗಳನ್ನು ಹಾಕುವುದು (ತಂದೆತಾಯಂದಿರುಗಂಡು ಮಕ್ಕಳಿಗೆ ಹುಡುಗಿಯಂತೆ ವೇಷ ಹಾಕಿ ಸಂತೋಷಪಡುವುದು). ಹುಡುಗಿಯರ ಆಟ-ಪಾಠಗಳಲ್ಲಿ ಆಸಕ್ತಿ ತೋರಿಸುವುದು ಇತ್ಯಾದಿ. ಮನೆಯವರ ಛೇಡಿಕೆ, ಕೀಟಲೆ ಮುಂತಾದವುಗಳು ಇಂಥ ನಡವಳಿಕೆಗೆ ಕೆಲವರಲ್ಲಿ ಕಾರಣವಾದರೂ ನೇರಕಾರಣ, ವೈಜ್ಞಾನಿಕ ಸ್ಪಷ್ಟನೆ ಇದುವರೆಗೆ ದೊರೆತಿಲ್ಲ.

ಈ ರೀತಿ ಮಾನಸಿಕವಾಗಿ, ಭಾವಾನಾತ್ಮಕವಾಗಿ ಭಿನ್ನವಾಗಿರುವುದು ಆ ವ್ಯಕ್ತಿಯ ತಪ್ಪಲ್ಲ. ತನ್ನ ಲೈಂಗಿಕತೆಯ ಬಗ್ಗೆ ಎಷ್ಟು ಒತ್ತಡ ಇರುತ್ತದೆ ಎಂದರೆ, ಅದನ್ನು ಬಹಳ ಕಾಲ ನಿಗ್ರಹಿಸಲಾರ. ಕೆಲವರು ಬದಲುಡುಗೆಗೆ ಶರಣಾದರೆ, ಕೆಲವರು ಲಿಂಗಚ್ಛೇದ ಮಾಡಿಸಿಕೊಂಡು ಹಿಜಿಡಾಗಳಾಗುತ್ತಾರೆ. ಸಲಿಂಗ ವರ್ತನೆ ಹದಿಹರೆಯದಕ್ಕೆ ಕಾಲಿಡುವಾಗಲೇ ಆ ವ್ಯಕ್ತಿಗೆ ಮನವರಿಕೆಯಾಗುತ್ತದೆ. ಆದರೆ, ಆತನ ಮನಸ್ಸಿನ ಭಾವನೆಯಂತೆ ವರ್ತಿಸಲು ಅವನಿಗೆ ಆತನ ಕುಟುಂಬ ಹಾಗೂ ಸುತ್ತಲಿನ ಸಮಾಜ ಬಿಡುವುದಿಲ್ಲ. ತನ್ನ ಲೈಂಗಿಕತೆಯನ್ನು ಬಹಳ ಕಾಲ ನಿಗ್ರಹಿಸಿ ಕೊನೆಗೊಮ್ಮೆ ಆತನ ರೀತಿಯಲ್ಲಿ ಹೊರಹಾಕಿದಾಗ ಅವನ ಕುಟುಂಬ ಅದನ್ನು ಒಪ್ಪದಾದಾಗ, ಅವನು ಹೊರಹಾಕಲ್ಪಡುತ್ತಾನೆ. ಸುತ್ತಲಿನ ಸಮಾಜ ಆತನನ್ನು ತಿರಸ್ಕರಿಸುತ್ತದೆ. ಶಾಲಾ-ಕಾಲೇಜುಗಳಲ್ಲಿ ಜತೆಗಾರರ ಗೇಲಿಗೊಳಗಾಗಿ ಶಿಕ್ಷಣ ಮುಂದುವರಿಸಲಾಗುವುದಿಲ್ಲ. ಉದ್ಯೋಗ ಸ್ಥಳಗಳಲ್ಲಿ ಸಹೋದ್ಯೋಗಿಗಳ ಮೂದಲಿಕೆ, ತಾತ್ಸಾರಗಳಿಂದಾಗಿ ಕೆಲಸ ಮಾಡಲಾಗುವುದಿಲ್ಲ. ಹೀಗಾಗಿ ಅನೇಕರುಜೀವನ ನಿರ್ವಹಣೆಗಾಗಿ ವೇಶ್ಯಾವೃತ್ತಿ, ಭಿಕ್ಷಾಟನೆಗಳಿಗೆ ಇಳಿಯಬೇಕಾಗುತ್ತದೆ.

ಸಲಿಂಗ ವರ್ತನೆಯುಳ್ಳ ಅನೇಕರು ವಿವಾಹವಾಗಲು ಇಷ್ಟಪಡದಿದ್ದರೂ ಮನೆಯವರ ಒತ್ತಾಯಕ್ಕಾಗಿಯೋ, ತನ್ನ ಪುರುಷತ್ವವನ್ನು ತೋರ್ಪಡಿಸಿಕೊಳ್ಳಲೋ ವಿವಾಹವಾಗಬಹುದು. ಆದರೆ ಇವರ ವರ್ತನೆಯಿಂದ ಇವರನ್ನು ಮದುವೆಯಾದ ಹೆಣ್ಣು ಮಾನಸಿಕವಾಗಿ ಬಹಳಷ್ಟು ತೊಂದರೆಯನ್ನುಅನುಭವಿಸಬೇಕಾಗಬಹುದು. ಕೆಲವು ಸಲ ವಿವಾಹ ವಿಚ್ಛೇದನದಲ್ಲಿ ಕೊನೆಗೊಳ್ಳಬಹುದು.

ಹಿಜಿಡಾಗಳೂ ನಮ್ಮ-ನಿಮ್ಮಂತೆಯೇ ಮನುಷ್ಯರು. ದೈಹಿಕವಾಗಿ ಅಸ್ವಾಭಾವಿಕ ಲೈಂಗಿಕ ರಚನೆ ಹೊಂದಿರುವರೆಂದೂ, ಭಿನ್ನ ನಡವಳಿಕೆಯುಳ್ಳವರೆಂದೂ ಅವರನ್ನು ಬೇರೆಯಾಗಿ, ಕೀಳಾಗಿ, ಕೆಲವೊಮ್ಮೆ ಮನುಷ್ಯರೇ ಅಲ್ಲವೆನ್ನುವ ರೀತಿಯಲ್ಲಿ ನಡೆಸಿಕೊಳ್ಳವುದು ಸರಿಯೆ? ಬಹಳ ಹಿಂದಿನಿಂದಲೂ ಅವರ ಬಗೆಗೆ ಎಲ್ಲರೀತಿಯ ತಾರತಮ್ಯವನ್ನು ಸಮಾಜವಷ್ಟೇ ಅಲ್ಲ, ಸರಕಾರ ಸಹ ತೋರುತ್ತಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಕೇವಲ ಇತ್ತೀಚೆಗೆ, ಅಂದರೆ 20ನೆಯ ಶತಮಾನದ ಅಂತ್ಯದಲ್ಲಿ ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಹಿಜಿಡಾ ಹಾಗೂ ಇನ್ನಿತರ ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸಲು ತೊಡಗಿದವು. ಆದರೆ ಜಾಗತಿಕ ಮಟ್ಟದಲ್ಲಿ, ಅವರ ಹಕ್ಕು ಬಾಧ್ಯತೆಗಳ ಬಗ್ಗೆ ಆಸಕ್ತಿ ತೋರಿಸಲು ಪ್ರಾರಂಭವಾದರೂ, ರಾಷ್ಟ್ರೀಯ ಮಟ್ಟದಲ್ಲಿ ಅವರ ಬಗೆಗೆ ಯಾವ ಬದಲಾವಣೆಗಳೂ ಆಗುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ಹಿಜಿಡಾಗಳನ್ನೊಳಗೊಂಡ ಲೈಂಗಿಕ ಅಲ್ಪಸಂಖ್ಯಾತರ ಬಗೆಗೆ ಬದಲಾವಣೆಗಳಾಗಲೀ ಬಿಡಲೀ, ಅವರು ಸಾಮಾಜಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಶೋಷಣೆಗಳಿಗೊಳಗಾಗುವುದನ್ನು ತಪ್ಪಿಸಲು ಪ್ರತಿಯೊಬ್ಬರೂ ಪ್ರಯತ್ನಪಡಬೇಕು.

ಅವರು ಕೇಳುವ ಪ್ರಶ್ನೆ ಒಂದೇ : “ಗಂಡಸರು, ಹೆಂಗಸರಂತೆ ನಾವೂ ಸೃಷ್ಟಿಯಿಂದಲೇ ಬಂದವರು. ನಮ್ಮದು ಕಡಿಮೆ ಸಂಖ್ಯೆ ಎಂಬ ಕಾರಣಕ್ಕೆ ನಮಗೆ ಬದುಕುವ ಅವಕಾಶವೇ ಇಲ್ಲ ಎಂದರೆ ಹೇಗೆ?”

ಸಮಾಜ ತುಂಬ ಗಂಭೀರವಾಗಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಏಕೆಂದರೆ ಇದು ನಮ್ಮ ನಿಮ್ಮಂತೆಯೇ ರಕ್ತ, ಮಾಂಸಗಳಿಂದ ತುಂಬಿದ ಮನುಷ್ಯರು ಕೇಳುತ್ತಿರುವ ಪ್ರಶ್ನೆಯಾಗಿದೆ.

ಡಾ. ಪದ್ಮಿನಿ ಪ್ರಸಾದ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *