ಪದ್ಮಿನಿ ಪಾಠ/ ಅವಳನ್ನು ಸರಿಯಾಗಿ ಬೆಳೆಸಿ- ಡಾ. ಪದ್ಮಿನಿ ಪ್ರಸಾದ್
ಹೆಣ್ಣಿನ ಆರೋಗ್ಯ ರಕ್ಷಣೆ ಪ್ರಾರಂಭವಾಗುವುದು ಅವಳ ಹುಟ್ಟಿನಿಂದಲೇ ಹೊರತು ಬಸುರಿ ಆದ ನಂತರದಿಂದ ಅಲ್ಲ ಎಂಬ ಅಂಶವನ್ನು ಎಲ್ಲರೂ ಅರಿಯಬೇಕು
ನಮ್ಮ ಸಮಾಜದಲ್ಲಿ ಕುಟುಂಬಗಳು ಹೆಣ್ಣಿನ ಆರೋಗ್ಯದ ಬಗ್ಗೆ ಒಂದಿಷ್ಟಾದರೂ ಕಾಳಜಿ ವಹಿಸುವುದು ಸಾಮಾನ್ಯವಾಗಿ ಎರಡು ಸಂದರ್ಭಗಳಲ್ಲಿ- ಅವಳು ಹದಿಹರೆಯದಲ್ಲಿ ಮೈನೆರೆದಾಗ ಮತ್ತು ಬಸುರಿ-ಬಾಣಂತಿ ಆದಾಗ. ಹಾಗಿದ್ದೂ ನಮ್ಮ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಮತ್ತು ಬಸುರಿ-ಬಾಣಂತಿಯರಲ್ಲಿ ಅಪೌಷ್ಟಿಕತೆ ಸರ್ವೇಸಾಮಾನ್ಯವಾಗಿ ಇರುತ್ತದೆ ಎಂಬುದನ್ನು ಹೇಳಬೇಕಿಲ್ಲ. ಇಲ್ಲಿ ನಾವು ಮುಖ್ಯವಾಗಿ ತಿಳಿಯಬೇಕಾದದ್ದು, ಹೆಣ್ಣಿನ ಆರೋಗ್ಯ ರಕ್ಷಣೆ ಪ್ರಾರಂಭವಾಗುವುದು ಅವಳ ಹುಟ್ಟಿನಿಂದಲೇ ಹೊರತು ಬಸುರಿ ಆದ ನಂತರದಿಂದ ಅಲ್ಲ ಎಂಬ ಅಂಶವನ್ನು ಎಲ್ಲರೂ ಅರಿಯಬೇಕು. ಆರೋಗ್ಯವಂತ ಹೆಣ್ಣುಮಗು, ಆರೋಗ್ಯವಂತ ಹುಡುಗಿಯಾಗಿ, ಮುಂದೆ ಆರೋಗ್ಯವಂತ ತಾಯಿಯಾಗಬಲ್ಲಳು ಹಾಗೂ ಆರೋಗ್ಯವಂತ ಸಮಾಜ ಬೆಳೆಯಲು ಕಾರಣವಾಗಬಲ್ಲಳು. ಆರೋಗ್ಯ ರಕ್ಷಣೆ ಮತ್ತು ಅದಕ್ಕೆ ಅಗತ್ಯವಾದ ಆರೋಗ್ಯ ಪ್ರಜ್ಞೆ ಇವೆರಡನ್ನೂ ಹೆಣ್ಣುಗಂಡು ಮಕ್ಕಳಿಬ್ಬರಿಗೂ ಆರಂಭದಿಂದಲೇ ಒದಗಿಸಬೇಕಾದದ್ದು ಬಹಳ ಅಗತ್ಯ.
ಆದರೆ ಖೇದದ ಸಂಗತಿ ಎಂದರೆ, ಭಾರತೀಯ ಸಮಾಜವೂ ಸೇರಿ ಅನೇಕ ದೇಶಗಳಲ್ಲಿ ಹೆಣ್ಣಿನ ಆರೋಗ್ಯಕ್ಕೆ ಯಾವ ಪ್ರಾಶಸ್ತ್ಯವೂ ಇರುವುದಿಲ್ಲ. ಸರ್ಕಾರದ ಹಲವಾರು ಕಾನೂನುಗಳು, ಯೋಜನೆಗಳು ಅವಳ ಆರೋಗ್ಯಕ್ಕೆ ಒತ್ತು ಕೊಟ್ಟಿದ್ದರೂ ಅವು ಬೇರುಮಟ್ಟದ ಜಾಗೃತಿಗೆ ಇಳಿದಿರುವುದಿಲ್ಲ. ಅನುಕೂಲವಿಲ್ಲದ ಕುಟುಂಬಗಳಲ್ಲಂತೂ ಬಾಲಕಿಯರಿಗೆ ಪೌಷ್ಟಿಕ ಆಹಾರದ ಕೊರತೆ ಕಾಡುವುದು ಸಾಮಾನ್ಯ. ಸುಶಿಕ್ಷಿತ ಕುಟುಂಬಗಳಲ್ಲಿಯೂ ಮಕ್ಕಳಲ್ಲಿ ಗಂಡು ಹೆಣ್ಣು ನಡುವೆ ಬಹಳ ತಾರತಮ್ಯ ಕಾಣುವುದುಂಟು. ಹೆಣ್ಣುಮಕ್ಕಳಿಗೆ ನಿಯಮಿತ ವೇಳೆಯಲ್ಲಿ ಸರಿಯಾದ ಪ್ರಮಾಣದಲ್ಲಿ ಆಹಾರ ದೊರಕುವುದೂ ಕಷ್ಟವಾಗಿರುತ್ತದೆ. ಇನ್ನು ಸಣ್ಣ ವಯಸ್ಸಿನಲ್ಲಿಯೇ ಅವರ ಲೈಂಗಿಕ ಶೋಷಣೆ ಮತ್ತು ಬಾಲ್ಯ ವಿವಾಹದ ಪೀಡೆಗಳು ಬಾಧಿಸುತ್ತವೆ.
ಈ ಎಲ್ಲ ಕೊರತೆಗಳ ಜೊತೆ ಆರೋಗ್ಯ ಪ್ರಜ್ಞೆಯನ್ನು ಬಾಲ್ಯದಿಂದಲೇ ಬಿತ್ತದಿದ್ದರೆ ಅವರನ್ನು ಆತ್ಮವಿಶ್ವಾಸದ ಕೊರತೆ, ದೇಹ ರಕ್ಷಣೆ ಕುರಿತ ಅಜ್ಞಾನ ಎಲ್ಲವೂ ಅವರನ್ನು ಮತ್ತಷ್ಟು ದುಃಸ್ಥಿತಿಗೆ ತಳ್ಳುತ್ತದೆ. ಹೆಣ್ಣು ಮಕ್ಕಳು ತಮ್ಮನ್ನು ತಾವೇ ಕಾಪಾಡಿಕೊಳ್ಳಲು ಅನರ್ಹರಾಗಿ ಅನಾದರಕ್ಕೆ ಒಳಪಡುತ್ತಾರೆ. ಆದ್ದರಿಂದ ಆರೋಗ್ಯವಂತ ನಾಗರಿಕ ಸಮಾಜ ಎನ್ನುವುದು ನಿಜ ಅರ್ಥದಲ್ಲಿ ರೂಪುಗೊಳ್ಳಬೇಕಾದರೆ ಎಲ್ಲ ಮಕ್ಕಳಲ್ಲಿ ಬಾಲ್ಯದಿಂದಲೇ ಆರೋಗ್ಯ ಪ್ರಜ್ಞೆಯನ್ನು ಬೆಳೆಸುವುದು ಅತ್ಯವಶ್ಯಕ.
ಕುಟುಂಬಗಳಲ್ಲಿ ಮಕ್ಕಳನ್ನು ಬೆಳೆಸುವಾಗ ನಾನಾ ರೀತಿಯ ಒತ್ತಡಗಳು ಸುತ್ತಿಕೊಳ್ಳುವುದುಂಟು. ಹಾಗಿದ್ದೂ ಕೆಲವು ಅಂಶಗಳನ್ನು ಅಪ್ಪ ಅಮ್ಮಂದಿರು ಗಮನಿಸಿದರೆ ಒಳ್ಳೆಯದು. ಮೊದಲನೆಯದಾಗಿ ಲಿಂಗಭೇದ ಯಾವ ರೀತಿಯಲ್ಲೂ ವ್ಯಕ್ತವಾಗಬಾರದು. ಹೆಣ್ಣು ಮಗು ಎಂದರೆ ಕಡಿಮೆ, ಗಂಡು ಮಗು ಎಂದರೆ ಹೆಚ್ಚುಗಾರಿಕೆ ಎಂಬ ಭಾವನೆ ಎಂದಿಗೂ ಮಕ್ಕಳ ಮುಂದೆ ಪ್ರದರ್ಶಿತವಾಗಬಾರದು. ಭ್ರೂಣದಲ್ಲಿರುವ ಮಗು ಹೆಣ್ಣು ಎಂದು ತಿಳಿದೊಡನೆ ಹತ್ಯೆ ಮಾಡಿಸುವುದರ ಹಿಂದೆ ನಮ್ಮ ಸಮಾಜದಲ್ಲಿ ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಕಾಣುವ ದೊಡ್ಡ ಅಪರಾಧ ಈ ತಾರತಮ್ಯವೇ ಆಗಿದೆ.
ಅನ್ನ, ಅಕ್ಷರ ಮತ್ತು ಆರೋಗ್ಯ ಈ ಮೂರೂ ಯಾವುದೇ ಸಮಾಜದಲ್ಲಿ ಹುಟ್ಟುವ ಮಕ್ಕಳ ಬೆಳವಣಿಗೆಗೆ ಅವಶ್ಯಕ ಎಂಬ ನೆಲೆಯಲ್ಲಿ ಹೇಳುವುದಾದರೆ ಇದರಲ್ಲಿ ಒಂದರಲ್ಲಿ ಲೋಪವಾದರೂ ಅಷ್ಟರಮಟ್ಟಿಗೆ ಹೆಣ್ಣು ಮಕ್ಕಳ ಬೆಳವಣಿಗೆ ಕುಂಠಿತವಾದಂತೆ. ಇದು ಮುಂದೆ ಅವರ ಜೀವನದ ಎಲ್ಲ ಹಂತಗಳಲ್ಲೂ ಪರಿಣಾಮ ಬೀರದೆ ಇರುವುದಿಲ್ಲ. ಆಮೇಲೆ ಅವರೇ ಸಂಸಾರದ ನೊಗ ಹೊತ್ತಾಗ, ಮಕ್ಕಳನ್ನು ಬೆಳೆಸುವಾಗ, ಕಚೇರಿಗಳಲ್ಲಿ ಕಾರ್ಯನಿರ್ವಹಿಸುವಾಗ, ಒಟ್ಟಾರೆ ಸಮಾಜವನ್ನು ನೋಡುವಾಗ ದೃಷ್ಟಿಕೋನದಲ್ಲಿ ಈ ಕೊರತೆ ಈ ಲೋಪ ಕಾಣಿಸಿಕೊಳ್ಳದೇ ಇರುವುದಿಲ್ಲ. ಹಾಗೆಯೇ, ಇದು ಮುಂದಿನ ತಲೆಮಾರನ್ನು ರೂಪಿಸುವಾಗ ಪರಿಣಾಮ ಬೀರದೇ ಇರುವುದಿಲ್ಲ. ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಮಾತು ಎಷ್ಟು ಅರ್ಥಪೂರ್ಣವೋ ಅಷ್ಟೇ ಮುಖ್ಯವಾದದ್ದೂ ಹೆಣ್ಣು ಮಕ್ಕಳಲ್ಲಿ ಹೆಣ್ಣು ಮಕ್ಕಳಿಗೆ ಕಲಿಸುವ ಆರೋಗ್ಯ ಕುರಿತ ಕಾಳಜಿ.
ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಬಹಳ ಮುಖ್ಯವಾದ ಈ ಆರೋಗ್ಯ ಪ್ರಜ್ಞೆಯ ಬಿತ್ತುವಿಕೆ ದೈಹಿಕ ಆರೋಗ್ಯದಷ್ಟೇ, ಮಾನಸಿಕ ಆರೋಗ್ಯವನ್ನೂ ಒಳಗೊಳ್ಳಬೇಕು. ಹೆಣ್ಣಿನ ಮಾನಸಿಕ ಆರೋಗ್ಯ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅವಳ ದೈಹಿಕ ಆರೋಗ್ಯವನ್ನು ಬಹುಪಾಲು ಅವಲಂಬಿಸಿರುತ್ತದೆ. ಹದಿಹರೆಯಕ್ಕೆ ಪ್ರವೇಶ, ಋತುಚಕ್ರ ಆರಂಭ, ಪ್ರತೀ ತಿಂಗಳು ಮುಟ್ಟಾಗುವುದು, ಗರ್ಭಧಾರಣೆ, ಹೆರಿಗೆ, ಮಗುವಿನ ಲಾಲನೆ ಪಾಲನೆ, ಮಕ್ಕಳ ಬಾಲ್ಯದ ರಕ್ಷಣೆ, ಇವೆಲ್ಲವೂ ಅವಳ ಮೇಲೆ ಇನ್ನಿಲ್ಲದ ಒತ್ತಡವನ್ನು ಹಾಕುತ್ತದೆ. ಆ ಕಾರಣ ಮಾನಸಿಕ ಆರೋಗ್ಯ ವಿಪರೀತ ಏರುಪೇರು ಕಂಡರೆ ಆಶ್ಚರ್ಯವಿಲ್ಲ.
ಹೆಣ್ಣು ಮಗುವಿನ ಆರೋಗ್ಯ ಕುರಿತು ಇಷ್ಟು ಕಾಳಜಿ ಅಗತ್ಯವನ್ನು ಹೇಳಿದ ಮಾತ್ರಕ್ಕೆ ಗಂಡು ಮಗುವಿನ ಆರೋಗ್ಯ ತನ್ನಿಂದ ತಾನೇ ಸರಿಯಾಗಿದ್ದು ಬಿಡುತ್ತದೆ ಎಂದು ಭಾವಿಸಲೇ ಕೂಡದು. ಒಟ್ಟಾರೆ ಮಕ್ಕಳನ್ನು ಎಲ್ಲ ವಿಷಯಗಳಲ್ಲಿ ಸಮಾನ ಭಾವನೆಯಿಂದ ಬೆಳೆಸುವುದು ಅತ್ಯಗತ್ಯ. ಗಂಡು ಮಕ್ಕಳಿಗೆ ಸಮಾನತೆಯ ಅರ್ಥವನ್ನು ಬಾಲ್ಯದಿಂದಲೇ ಕಲಿಸಿದರೆ ಮುಂದೆ ಅವರು ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಕೋನ, ದಾಂಪತ್ಯದಲ್ಲಿ ಸಮರಸ ಭಾವನೆ, ಲೈಂಗಿಕ ಜೀವನದಲ್ಲಿ ಅವಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಇವೆಲ್ಲವೂ ರೂಪು ಗೊಳ್ಳುವುದು ಸುಲಭವಾಗುತ್ತದೆ. ಅದು ಸಮಾಜದ ಮೇಲೆ ಪರಿಣಾಮವನ್ನೇ ಬೀರುತ್ತದೆ. ನಮ್ಮಲ್ಲಿ ವಿಪರೀತವಾಗಿ ವರದಿಯಾಗುತ್ತಿರುವ ಬಾಲಕಿಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ಅವರ ಕೊಲೆ ಇವುಗಳ ಮೂಲದಲ್ಲಿ ಗಂಡು ಮಕ್ಕಳಲ್ಲಿ ಸಮತೆಯ ಬಗ್ಗೆ ಆರೋಗ್ಯಪೂರ್ಣವಾದ ಬೆಳವಣಿಗೆಯ ಕೊರತೆಯೇ ಎದ್ದು ಕಾಣುತ್ತದೆ ಎಂದು ಅನ್ನಿಸಿದರೆ ಆಶ್ಚರ್ಯವಿಲ್ಲ. ಹೆಣ್ಣಿನ ಶಕ್ತಿ ಸಂವರ್ಧನೆಗೆ ಇಂಥ ಅಡಿಪಾಯಗಳು ಬೇಕೇ ಬೇಕು.

ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ಮಕ್ಕಳ ಬೆಳವಣಿಗೆಗೆ ಒಂದಷ್ಟು ಒಳ್ಳೆಯ ಸಲಹೆಗಳು.
ಅಭಿನಂದನೆಗಳು.
ಧನ್ಯವಾದ.