ಪದ್ಮಪ್ರಭೆ / ಸ್ವಾತಂತ್ರ್ಯ ಹೋರಾಟಗಾರ್ತಿ ಯಶೋಧರಮ್ಮ ದಾಸಪ್ಪ- ಡಾ. ಗೀತಾ ಕೃಷ್ಣಮೂರ್ತಿ

ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪುರುಷರಿಗೆ ಹೋಲಿಸಿದರೆ, ಮಹಿಳೆಯರ ಸಂಖ್ಯೆ ನಗಣ್ಯ ಎನಿಸುವಷ್ಟರ ಮಟ್ಟಿಗೆ ಕಡಿಮೆಯಾದರೂ ದಾಖಲಾಗಬೇಕಾದುದು ಅವಶ್ಯಕ. ಯಶೋಧರಮ್ಮ ದಾಸಪ್ಪ ರಾಜಕಾರಣಿಯಷ್ಟೇ ಆಗಿರದೆ ಸಮಾಜ ಸೇವೆಯಲ್ಲಿಯೂ ನಿರತರಾಗಿದ್ದರು. ಕರ್ನಾಟಕದ ಪ್ರಥಮ ಸಂಪುಟ ಸಚಿವೆಯಾದ ಇವರು, ಸರ್ಕಾರ ಮದ್ಯಪಾನ ನಿಷೇಧವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದಾಗ ಅದನ್ನು ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. 1973 ರಲ್ಲಿ ಭಾರತ ಸರ್ಕಾರ ಅವರಿಗೆ ‘ಪದ್ಮ ಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು.


ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣ ಮಾಡುವಾಗ, ಮಂಡ್ಯದ ಮದ್ದೂರು ತಾಲೂಕಿನ ಶಿವಪುರದ ಬಳಿ ಹೆದ್ದಾರಿಗೆ ಕಾಣುವಂತೆಯೇ ಸದಾಕಾಲ ರಾಷ್ಟ್ರ ಧ್ವಜವನ್ನು ಹೆಮ್ಮೆಯಿಂದ ಹಾರಿಸುತ್ತಾ ನಿಂತಿರುವ ವಿಶಿಷ್ಟ ಕಟ್ಟಡ ಕಣ್ಸೆಳೆಯುತ್ತದೆ. ಇದೇ ‘ಸತ್ಯಾಗ್ರಹ ಸೌಧ’. ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿರುವ ‘ಧ್ವಜ ಸತ್ಯಾಗ್ರಹ’ದಲ್ಲಿ ಕರ್ನಾಟಕದ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಿ ನಿಂತಿರುವ ಹೆಮ್ಮೆಯ ಕಟ್ಟಡ.

ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ದಾಖಲಾಗದೇ ಹೋದ ಅದೆಷ್ಟು ಮಹಿಳೆಯರ ಕಥಾನಕಗಳು ಹುದುಗಿಹೋಗಿವೆಯೋ ಹೇಳಲಾಗದು. ಅಂಥ ಹೋರಾಟಗಾರರ ವಿವರಗಳನ್ನು, ಅಲ್ಲಲ್ಲಿ ದೊರೆಯುವ ಉಲ್ಲೇಖಗಳಿಂದ ಹೆಕ್ಕಿ ತೆಗೆಯುವ, ಜೋಡಿಸುವ ಅಗತ್ಯವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪುರುಷರ ಸಂಖ್ಯೆಗೆ ಹೋಲಿಸಿದರೆ, ಮಹಿಳೆಯರ ಸಂಖ್ಯೆ ನಗಣ್ಯ ಎನಿಸುವಷ್ಟರ ಮಟ್ಟಿಗೆ ಕಡಿಮೆಯಾದರೂ, ದಾಖಲಾಗಬೇಕಾದುದು ಹೆಚ್ಚು ಅವಶ್ಯಕ. ಹಾಗೆಂದ ಮಾತ್ರಕ್ಕೆ ಮಹಿಳಾ ಹೋರಾಟಗಾರರ ಪಾಲ್ಗೊಳ್ಳುವಿಕೆ ದಾಖಲಾಗಿಯೇ ಇಲ್ಲ ಎಂದೇನೂ ಇಲ್ಲ.

ದಾಖಲು ಮಾಡದೆ ಉಳಿಯಲಾಗದು ಎಂಬಂಥ, ನೇರ ಪಾಲ್ಗೊಳ್ಳುವಿಕೆಯಿದ್ದ ಕೆಲವು ಮಹಿಳಾ ಹೋರಾಟಗಾರರು ಚರಿತ್ರೆಯಲ್ಲಿ ದಾಖಲಾಗಿದ್ದಾರೆ. ಅವರ ಬಾಗವಹಿಸುವಿಕೆಯ ವಿವರಗಳು, ಅವರು ಕೊಟ್ಟ ಬೆಂಬಲ, ಇತರ ಮಹಿಳೆಯರಿಗೆ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕೊಟ್ಟ ಪ್ರೋತ್ಸಾಹದ ಬಗ್ಗೆ ವಿವರಗಳು ದೊರೆಯುತ್ತದೆ. ಕಮಲಾದೇವಿ ಚಟ್ಟೋ ಧ್ಯಾಯ, ಉಮಾಬಾಯಿ ಕುಂದಾಪುರ್, ಕೃಷ್ಣಾಬಾಯಿ ಪಂಜೇಕರ್, ಬಳ್ಳಾರಿ ಸಿದ್ದಮ್ಮ, ಯಶೋಧರಾ ದಾಸಪ್ಪ, ಗೌರಮ್ಮ ವೆಂಕಟರಾಮಯ್ಯ, ಜಯಲಕ್ಷ್ಮಿ ಕೇಶವರಾವ್ ಮುಂತಾದವರು ಉಲ್ಲೇಖಾರ್ಹರು.

ಯಶೋಧರಾ ದಾಸಪ್ಪ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಬಗೆ ಅನನ್ಯವಾದದ್ದು. 1973 ರಲ್ಲಿ ಅವರ ಸಮಾಜ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಅವರಿಗೆ ‘ಪದ್ಮ ಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಪದ್ಮ ಪ್ರಶಸ್ತಿಗಳನ್ನು ಪ್ರಾರಂಭಿಸಿದ 66 ವರ್ಷಗಳಲ್ಲಿ 1254 ಮಂದಿ ಪದ್ಮ ಭೂಷಣ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರಲ್ಲಿ ಒಟ್ಟು 92 ಮಂದಿ ಮಹಿಳೆಯರು. ಕರ್ನಾಟಕದಿಂದ 139 ಮಂದಿ ಈ ಪ್ರಶಸ್ತಿಯನ್ನು ಪಡೆದಿದ್ದು ಅವರಲ್ಲಿ ಮಹಿಳೆಯರು ಕೇವಲ ಐವರು. ಆ ಐವರು ಮಹಿಳೆಯರಲ್ಲಿ ಯಶೋಧರಾ ದಾಸಪ್ಪ ಅವರೂ ಒಬ್ಬ ಹೆಮ್ಮೆಯ ಕನ್ನಡಿಗರು.

ಯಶೋಧರಾ ದಾಸಪ್ಪ ಅವರು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೂ ಅವರು ಆಯ್ದುಕೊಂಡದ್ದು ಸಿರಿವಂತಿಕೆಯ ಜೀವನವನ್ನಲ್ಲ, ಬದಲಿಗೆ ಸಮಾಜ ಸೇವೆಯನ್ನು. ಗಾಂಧೀಜೀಯವರ ಪ್ರಭಾವಕ್ಕೆ ಒಳಗಾಗಿ, ಸಮಾಜದ ಶೋಷಿತ ವರ್ಗದವರ ಬದುಕನ್ನು ಹಸನಾಗಿಸುವ ಉದಾತ್ತ ಧ್ಯೇಯದ ಬದುಕನ್ನು. ಸಮಾಜಸೇವಾ ಕಾರ್ಯಕರ್ತೆಯಾಗಿ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಅವರು ಮಾಡಿದ ಕೆಲಸಗಳು ಮತ್ತು ತೊಡಗಿಸಿಕೊಂಡ ರೀತಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಉಲ್ಲೇಖನಾರ್ಹ.

ಯಶೋಧರಮ್ಮ ದಾಸಪ್ಪ ಹುಟ್ಟಿದ್ದು 1905 ರ ಮೇ 28 ರಂದು. ತಂದೆ ಕೆ.ಎಚ್.ರಾಮಯ್ಯ ಖ್ಯಾತ ಸಮಾಜ ಸೇವಕರು, ಬೆಂಗಳೂರಿನಲ್ಲಿ 1906 ರಲ್ಲಿ ವಕ್ಕಲಿಗರ ಸಂಘದ ಸಂಸ್ಥಾಪಕರು. ತಾಯಿ ಶ್ರೀಮತಿ ರೇವಮ್ಮ, ಸಂಪ್ರದಾಯಿಕ ಮನೆತನದ ಮಹಿಳೆಯಾಗಿದ್ದರೂ ಮುಂದೆ ಸಾಮಾಜಿಕ ಸುಧಾರಣೆಗೆ ತೆರೆದುಕೊಂಡು, ಬದಲಾವಣೆಗಳಿಗೆ ಹೊಂದಿಕೊಂಡವರು. ಯಶೋಧರಮ್ಮ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಪೂರೈಸಿದರು. ಲಂಡನ್ ಮಿಷನ್ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಆ ಶಾಲೆಯ ಪ್ರಾಂಶುಪಾಲರಾಗಿದ್ದ ಮಿಸ್.ಬಟ್ಲರ್ ಅವರ ಮೇಲೆ ಗಾಢವಾದ ಪ್ರಭಾವ ಬೀರಿದರು. ಮುಂದೆ ಅವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಆವರೇ ಸ್ಫೂರ್ತಿ. ನಂತರದ ವಿದ್ಯಾಭ್ಯಾಸಕ್ಕಾಗಿ ಅವರು ಮದ್ರಾಸಿನ ಕ್ವೀನ್ ಮೇರಿ ಕಾಲೇಜನ್ನು ಸೇರಿದರು. ಬೆಂಗಳೂರಿಗೆ ಹಿಂತಿರುಗಿ ಬಂದ ನಂತರ ತಂದೆಯವರ ಇಚ್ಛೆಯಂತೆ ಅವರೊಂದಿಗೆ ಸಮಾಜ ಸೇವೆಯಲ್ಲಿ ಕೈ ಜೋಡಿಸಿದರು. ಯಶೋಧರಾ ದಾಸಪ್ಪ ಅವರು ವಿದ್ಯಾಭ್ಯಾಸ ಮುಗಿಸಿ, ತಂದೆಯವರ ಜೊತೆಯಲ್ಲಿ ಸಮಾಜಸೇವೆ ಕಾರ್ಯಕ್ಕೆ ತೊಡಗುವ ವೇಳೆಗೆ ದೇಶಾದ್ಯಂತ ಸ್ವಾತಂತ್ರ್ಯದ ಕಿಚ್ಚು ವ್ಯಾಪಿಸತೊಡಗಿತ್ತು. ಮನೆಯಲ್ಲಿ ಸಿರಿವಂತಿಕೆಯಿದ್ದರೂ ಮನೆಯವರಿಗೆ ಸಮಾಜದ ಶೋಷಿತ ವರ್ಗಗಳವರ ಕಷ್ಟಕ್ಕೆ ಮಿಡಿಯುವ ಹೃದಯಗಳಿದ್ದವು.

1926 ರಲ್ಲಿ ಖ್ಯಾತ ವಕೀಲ ಶ್ರೀ. ಎಚ್.ಸಿ. ದಾಸಪ್ಪ ಅವರೊಂದಿಗೆ ಯಶೋಧರಮ್ಮ ಅವರ ವಿವಾಹ ನೆರವೇರುತ್ತದೆ. ದಾಸಪ್ಪ ಅವರು, ಪ್ರಜಾಪಕ್ಷ ಎಂಬ ಪಕ್ಷದಿಂದ ಮೈಸೂರು ಪುರಸಭೆಯ, ವಿಧಾನ ಸಭೆಯ ಮತ್ತು ವಿಧಾನ ಪರಿಷತ್ತಿನ ಸದಸ್ಯರಾಗಿದ್ದವರು. ಹಿಂದುಳಿದ ವರ್ಗಗಳ ಏಳ್ಗೆಗಾಗಿ ಶ್ರಮಿಸುತ್ತಿದ್ದವರು. ಇವರಿಬ್ಬರ ವಿವಾಹ ಇಬ್ಬರು ಸಮಾನ ಮನಸ್ಕರ ವಿವಾಹವಾಗಿತ್ತು. ಇದರಿಂದಾಗಿ ಇಬ್ಬರೂ ಪರಸ್ಪರ ಪೂರಕವಾಗಿ ಸಮಾಜ ಸೇವಾ ಕಾರ್ಯದಲ್ಲಿ ನಿರತರಾಗಲು ಸಾಧ್ಯವಾಯಿತು.

ಗಾಂಧೀಜೀ ಅವರು ಕರ್ನಾಟಕಕ್ಕೆ ನೀಡಿದ ಭೇಟಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಹುರುಪು ಮತ್ತು ಚಾಲನೆಯನ್ನು ನೀಡಿದುದರಲ್ಲಿ ಸಂದೇಹವಿಲ್ಲ. ಅನೇಕ ಸ್ಥಳೀಯ ಆಂದೋಳನಗಳು, ನಿರಂತರ ಪ್ರಯತ್ನಗಳು ಹಾಗೂ ಬಲಿದಾನಗಳು ಸ್ವಾತಂತ್ರ್ಯ ಹೋರಾಟಕ್ಕೆ ಕಸುವು ತುಂಬಿದವು. ಆ ಕಾಲದಲ್ಲಿ ನಡೆದ ಪ್ರಮುಖವಾದ ಚಳವಳಿಗಳು ಮತ್ತು ಆಂದೋಳನಗಳ ಬಗ್ಗೆ ದಾಖಲೆಗಳು ದೊರೆಯುತ್ತವೆ. ಆದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ಅನೇಕ ಪ್ರಾದೇಶಿಕ ಚಳವಳಿಗಳು ದಾಖಲಾಗದೆ ಜನ ಮಾನಸದಿಂದ ಅಳಿಸಿ ಹೋಗಿವೆ. 1930 ರ ದಶಕದಲ್ಲಿ ನಡೆದ ಅಂಥ ಅನೇಕ ಪ್ರದೇಶಿಕ ಆಂದೋಲನಗಳಲ್ಲಿ ಹಾಗೂ ಚಳವಳಿಗಳಲ್ಲಿ ಯಶೋಧರ ದಾಸಪ್ಪ ಅವರು ಕ್ರಿಯಾತ್ಮಕವಾಗಿ ಪಾಲ್ಗೊಂಡು ಮುನ್ನಡೆಸಿದ್ದಾರೆ.

1937 ರ ಸಮಯ. ಸ್ವಾತಂತ್ರ್ಯ ಹೋರಾಟದ ಕಿಚ್ಚು ಎಲ್ಲೆಡೆ ವ್ಯಾಪಿಸಿತ್ತು. ಪ್ರಜಾಪಕ್ಷದಲ್ಲಿದ್ದ ದಾಸಪ್ಪ ಅವರೂ ಗಾಂಧೀಜೀಯವರ ಪ್ರಭಾವ ವಲಯಕ್ಕೆ ಸೆಳೆಯಲ್ಪಟ್ಟು 1937 ರಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾದರು. ದಾಸಪ್ಪ ದಂಪತಿಗಳಿಬ್ಬರೂ ಸಿರಿವಂತಿಕೆಯ ಜೀವನ ಶೈಲಿಯನ್ನು ತೊರೆದು, ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 1947 ರಲ್ಲಿ, ಮೈಸೂರು ರಾಜ್ಯಕ್ಕೆ ಸ್ವಾತಂತ್ರ್ಯ ಬರುವವರೆಗೆ ಮುಂದಿಟ್ಟ ಹೆಜ್ಜೆ ಹಿಂದಿಡಲಿಲ್ಲ.

ಶಿವಪುರದ ಧ್ವಜಾರೋಹಣ :ರಾಜಪ್ರಭುತ್ವಕ್ಕೆ ಒಳಪಟ್ಟಿದ್ದ ಮೈಸೂರಿನ ಆಧುನಿಕ ಇತಿಹಾಸದಲ್ಲಿ ಶಿವಪುರದ ಧ್ವಜಾರೋಹಣ ಘಟನೆ ಒಂದು ಮೈಲುಗಲ್ಲು. 1938 ರ ಏಪ್ರಿಲ್ 9 ರಂದು ಮಂಡ್ಯ ಬಳಿ ಶಿವಪುರ ಎಂಬ ಹಳ್ಳಿಯಲ್ಲಿ ತಿರುಮಲೆ ಗೌಡ ಎಂಬುವರ ಜಮೀನಿನಲ್ಲಿ, ಪ್ರಥಮ ಮೈಸೂರು ಕಾಂಗ್ರೆಸ್ ಸಮಾವೇಶವನ್ನು ಸಂಘಟಿಸಲಾಯಿತು. ಸುಮಾರು 10,000 ಜನ ಸಮಾವೇಶಗೊಂಡರು. ಕಾಂಗ್ರೆಸ್ಸಿನ ತ್ರಿವರ್ಣ ಧ್ವಜವನ್ನು ಹಾರಿಸಬಾರದು ಎಂಬ ಬ್ರಿಟಿಷರ ಆಜ್ಞೆಯನ್ನು ಉಲ್ಲಂಘಿಸಿ, ಧ್ವಜಾರೋಹಣ ಮಾಡಿದ ಸಂದರ್ಭ ಅದು. ಅದರಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವಂತೆ ಅವರಲ್ಲಿ ಹುರುಪು ತುಂಬಿ, ‘ಶಿವಪುರದ ಧ್ವಜ ಸತ್ಯಾಗ್ರಹ’ವೆಂದೇ ಹೆಸರಾದ ಆ ಸತ್ಯಾಗ್ರಹದಲ್ಲಿ, ಮೈಸೂರು ಕಾಂಗ್ರೆಸ್ ಅಧ್ಯಕ್ಷ ಟಿ. ಸಿದ್ದಲಿಂಗಯ್ಯ, ಎಂ.ಎನ್ ಜೋಯಿಸ್ ಮತ್ತು ಇತರ ಪ್ರಮುಖ ನಾಯಕರ ಜೊತೆ ಮುಂಚೂಣಿಯಲ್ಲಿದ್ದು, ದಸ್ತಗಿರಿಯಾಗಿ ಸೆರೆಮನೆ ಸೇರಿದ ದಿಟ್ಟೆ ಯಶೋಧರಾ ದಾಸಪ್ಪ ಅವರು.

1938ರ ಏಪ್ರಿಲ್ 25 ರಂದು ವಿದುರಾಶ್ವತ್ಥದಲ್ಲಿ ಸಂಘಟಿಸಿದ್ದ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಸತ್ಯಾಗ್ರಹಿಗಳನ್ನು ಚದುರಿಸಲು ಪೊಲೀಸರು ಮಾಡಿದ ಗುಂಡಿನ ದಾಳಿಯಲ್ಲಿ ಸುಮಾರು 35 ಮಂದಿ ಮೃತಪಟ್ಟರು. ಕರ್ನಾಟಕದ ‘ಜಲಿಯನ್‍ವಾಲಾಬಾಗ್’ ಎಂದೇ ಅದನ್ನು ಉಲ್ಲೇಖಿಸಲಾಗುತ್ತದೆ. ಆ ಸಂದರ್ಭದಲ್ಲಿ ಯಶೋಧರಾ ದಾಸಪ್ಪ ಹಾಗೂ ಅವರ ಪತಿ ಇಬ್ಬರೂ ದಸ್ತಗಿರಿಯಾಗಿ ಜೈಲು ಸೇರಿದರು.
1939 ರಲ್ಲಿ ಅರಣ್ಯ ಸತ್ಯಾಗ್ರಹ ಆಂದೋಲನವನ್ನು ಹಮ್ಮಿಕೊಂಡರು. ಇದರ ಉದ್ದೇಶ ರಾಜಪ್ರಭುತ್ವವಿರುವ ರಾಜ್ಯದಲ್ಲಿ ಜವಾಬ್ದಾರಿಯುತ ಸರ್ಕಾರವನ್ನು ರಚಿಸಬೇಕೆಂದು ಪ್ರಭುತ್ವವನ್ನು ಒತ್ತಾಯಿಸುವುದಾಗಿತ್ತು. ಇದರಲ್ಲಿ 1200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಓ.ಸಿದ್ದಲಿಂಗಯ್ಯ, ಕೆ.ಸಿ.ರೆಡ್ಡಿ, ಕೆ.ಹನುಮಂತಯ್ಯ, ನಿಜಲಿಂಗಪ್ಪ, ಎಚ್.ಸಿ.ದಾಸಪ್ಪ, ಮುಂತಾದವರೊಡನೆ ಅನೇಕ ಮಹಿಳೆಯರೂ ಪಾಲ್ಗೊಂಡಿದ್ದರು. ‘ಫೈರ್ ಬ್ರ್ಯಾಂಡ್’ ಎಂದೇ ಹೆಸರಾದ ಯಶೋಧರಾ ದಾಸಪ್ಪ ಅವರೂ ಮುಂಚೂಣಿಯಲ್ಲಿದ್ದು ಮಹಿಳೆಯರು ಸತ್ಯಾಗ್ರಹಗಳಲ್ಲಿ ಪಾಲ್ಗೊಳ್ಳಬೇಕೆಂದು ಪ್ರೋತ್ಸಾಹ ನೀಡುತ್ತಿದ್ದರು. ಅವರ ಮನೆಯೇ ಭೂಗತ ಸತ್ಯಾಗ್ರಹಿಗಳ ಭೇಟಿಯ ತಾಣವಾಗಿತ್ತು.

ಗಾಂಧೀಜೀಯವರು, 1940 ರ ಜುಲೈ 13ರ ತಮ್ಮ ‘ಹರಿಜನ’ ಪತ್ರಿಕೆಯಲ್ಲಿ ದಾಸಪ್ಪ ಅವರ ಕಾರ್ಯದ ಬಗ್ಗೆ ಉಲ್ಲೇಖಿಸಿದ್ದರು. ಯಶೋಧರಮ್ಮ ದಾಸಪ್ಪ ಅವರು ರಾಜಕಾರಣಿಯಷ್ಟೇ ಆಗಿರದೆ, ಕಸ್ತೂರ್ ಬಾ ಸ್ಮಾರಕ ಸಂಸ್ಥೆ, ಗಾಂಧಿ ಸ್ಮಾರಕ ಟ್ರಸ್ಟ್ ಮತ್ತು ಹಿಂದೀ ಪ್ರಚಾರ ಸಭಾ ಮುಂತಾದವುಗಳೊಡನೆ ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿಯೂ ನಿರತರಾಗಿದ್ದರು.

1942 ರಲ್ಲಿ ಗಾಂಧೀಜೀಯವರು ‘ಕ್ವಿಟ್ ಇಂಡಿಯಾ’ ಚಳವಳಿಗೆ ಕರೆಕೊಟ್ಟಾಗ ದೇಶಕ್ಕೆ ದೇಶವೇ ಒಂದಾಗಿ ಚಳವಳಿಯಲ್ಲಿ ಭಾಗವಹಿಸಿತು. ಹೋರಾಟದ ಕಿಚ್ಚು ಕಾಳ್ಗಿಚ್ಚಿನಂತೆ ಎಲ್ಲೆಡೆ ವ್ಯಾಪಿಸಿತು. ಇಡೀ ರಾಜ್ಯದಲ್ಲಿ ಹರತಾಳವನ್ನು ಆಚರಿಸಿದರು. ವಿದ್ಯಾರ್ಥಿಗಳು ಶಾಲೆ ಕಾಲೇಜುಗಳನ್ನು ತೊರೆದು ಚಳವಳಿಯಲ್ಲಿ ತೊಡಗಿಕೊಂಡರು. ಅನೇಕ ಕ್ರಾಂತಿಕಾರಿಗಳು ಮೈಸೂರು ಚಲೋ ಚಳವಳಿಯಲ್ಲಿ ಭಾಗವಹಿಸಿದರು. ಇವರೆಲ್ಲರಿಗೂ ಯಶೋಧರಾ ದಾಸಪ್ಪನವರ ಮನೆಯೇ ಅಡಗು ತಾಣವಾಗಿತ್ತು. ಭೂಗತ ಕಾರ್ಯಕರ್ತರನ್ನು ಬೆಂಬಲಿಸಿದ್ದ ಕಾರಣಕ್ಕೆ ದಾಸಪ್ಪ ದಂಪತಿಯನ್ನು ಮತ್ತು ಇತರ ಕೆಲವರನ್ನು ದಸ್ತಗಿರಿ ಮಾಡಲಾಗಿತ್ತು.

ಮಹಾತ್ಮ ಗಾಂಧೀಜೀ ಅವರು ಕಸ್ತೂರ್ ಬಾ ಸ್ಮರಣಾರ್ಥ 1948 ರಲ್ಲಿ ಇಂದೋರ್‍ನಲ್ಲಿ ಕಸ್ತೂರ್ ಬಾ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಒಂದನ್ನು ಸ್ಥಾಪಿಸಿದರು. ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಸಬಲೀಕರಣ ಈ ಟ್ರಸ್ಟಿನ ಉದ್ದೇಶ. 20 ರಾಜ್ಯಗಳು ಇದೇ ಉದ್ದೇಶದಿಂದ ಇದರ ಶಾಖೆಗಳನ್ನು ತೆರೆದವು. ಕರ್ನಾಟಕದಲ್ಲಿ ಈ ಟ್ರಸ್ಟಿನ ಶಾಖೆಯನ್ನು ಪ್ರಾರಂಭಿಸುವ ಜವಾಬ್ದಾರಿಯನ್ನು ಗಾಂಧೀಜೀಯವರು ಯಶೋಧರಾ ದಾಸಪ್ಪ ಅವರಿಗೆ ನೀಡಿದರು. ಅಷ್ಟೇ ಅಲ್ಲದೆ ಅದನ್ನು ಸ್ಥಾಪಿಸಲು ಅಗತ್ಯವಾದ ತರಬೇತಿಯನ್ನೂ ಸಹ ಸ್ವತಃ ಅವರೇ ನೀಡಿದರು.

ಆ ಸಮಯದಲ್ಲಿ ಯಶೋಧರಾ ದಾಸಪ್ಪ ಅವರು ಹಳೆಯ ಮೈಸೂರು ಪ್ರಾವಿನ್ಸಿನ ಜ್ಯುಡಿಷಿಯಲ್ ಕೌನ್ಸಿಲ್‍ನ ಸದಸ್ಯರಾಗಿದ್ದರು. ಆದರೆ ಗಾಂಧೀಜಿಯವರ ಸಲಹೆಯ ಮೇರೆಗೆ ಆ ಹುದ್ದೆಗೆ ರಾಜೀನಾಮೆ ನೀಡಿ, ಕಸ್ತೂರ್‍ಬಾ ರಾಷ್ಟ್ರೀಯ ಟ್ರಸ್ಟನ್ನು ಸ್ಥಾಪಿಸಲು ಮುಂದಾದರು. ಟ್ರಸ್ಟಿನ ಮೈಸೂರು ಪ್ರಾವಿನ್ಸಿನ ಪ್ರತಿನಿಧಿಯಾಗಿ ನೇಮಕಗೊಂಡ ಅವರು ಹಳ್ಳಿಗಳಲ್ಲಿ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿದರು, ಗ್ರಾಮಾಂತರ ಪ್ರದೇಶಗಳಲ್ಲಿ ಮಹಿಳೆಯರಿಗಾಗಿ ಶಿಕ್ಷಣ ಸಂಸ್ಥೆಗಳನ್ನು, ಕೈಗಾರಿಕಾ ತರಬೇತಿ ಕೇಂದ್ರಗಳನ್ನು, ಪ್ರಸೂತಿ ಗೃಹಗಳನ್ನು ತೆರೆದರು. ಈ ಸಂಸ್ಥೆಗಳನ್ನು ಸ್ವಾವಲಂಬಿ ಸಂಸ್ಥೆಗಳನ್ನಾಗಿಸಲು ಭೂಮಿಯನ್ನು ಪಡೆದರು. ಮಹಿಳಾ ಸಮಾಜ ಸೇವಕಿಯರನ್ನು ತರಬೇತುಗೊಳಿಸಲು ಅರಸೀಕೆರೆಯ ಬಳಿಯ ಮಾಲೇಕಲ್ ತಿರುಪತಿಯಲ್ಲಿ ಕಸ್ತೂರ್ ಬಾ ಗ್ರಾಮವನ್ನು ಪ್ರಾರಂಭಿಸಿದರು. ಏಕೀಕರಣದ ನಂತರ ಅದು ಕಸ್ತೂರ್ ಬಾ ರಾಷ್ಟ್ರೀಯ ಟ್ರಸ್ಟ್ ಎನಿಸಿಕೊಂಡಿತು.

1958 ರಲ್ಲಿ ಕೇಂದ್ರ ಸರ್ಕಾರ, ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ದೇಶಾದ್ಯಂತ ‘ಭಾರತೀಯ ಗ್ರಾಮೀಣ ಮಹಿಳಾ ಸಂಘ’ ಗಳನ್ನು ಸ್ಥಾಪಿಸುವ ಯೋಜನೆಗಳನ್ನು ಹಾಕಿಕೊಂಡಿತು. ಆ ಯೋಜನೆಯ ಅಡಿಯಲ್ಲಿ, ಯಶೋಧರಾ ದಾಸಪ್ಪ ಅವರು ಬೆಂಗಳೂರಿನಲ್ಲಿ ಒಂದು ಕೇಂದ್ರವನ್ನು ಸ್ಥಾಪಿಸಿದರು. ಇಂದಿಗೂ ಅದು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು, ಸರ್ಕಾರದ ಅನುದಾನ ಮತ್ತು ದಾನಿಗಳಿಂದ ಪಡೆದ ನೆರವಿನಿಂದ 300 ಮಕ್ಕಳಿಗೆ ಉಚಿತ ಶಿಕ್ಷಣ, ಕೌಟುಂಬಿಕ ಹಾಗೂ ಇತರ ಹಿಂಸಾಚಾರಕ್ಕೆ ಗುರಿಯಾಗಿರುವ ಮಹಿಳೆಯರಿಗೆ, ಅದರ ‘ಸ್ವಾಧಾರ ಯೋಜನೆಯ ಅಡಿಯಲ್ಲಿ ತಂಗಲು ತಾಣ, ‘ಸಾಂತ್ವನ’ ಯೋಜನೆಯ ಅಡಿಯಲ್ಲಿ ನೊಂದ ಮಹಿಳೆಯರಿಗೆ ಆಪ್ತ ಸಮಾಲೋಚನೆ ಮುಂತಾದ ಸಮಾಜ ಕಲ್ಯಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ವಿವಿಧ ಬಗೆಯ ಯೋಜನೆ : ಮಹಿಳೆಯರ ಉನ್ನತೀಕರಣಕ್ಕಾಗಿ ಯಶೋಧರಾ ದಾಸಪ್ಪನವರು ಸದಾಕಾಲ ಚಿಂತಿಸುತ್ತಿದ್ದರು. ಅದಕ್ಕಾಗಿ ಅವರು ಹಮ್ಮಿಕೊಂಡ ವಿವಿಧ ಬಗೆಯ ಯೋಜನೆಗಳೇ ಈ ಮಾತಿಗೆ ಸಾಕ್ಷಿ. ಬಡ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ‘ಗೀತಾ ಕೈಗಾರಿಕಾ ಸಹಕಾರೀ ಸಂಘ’ವನ್ನು ಸ್ಥಾಪಿಸಿದರು, ಭಾರತೀಯ ದೂರವಾಣಿ ಉದ್ಯಮದ ಸಹಯೋಗದೊಡನೆ ಟೆಲಿಫೋನ್ ಜೋಡಣೆಯ ಅಧೀನ ಘಟಕವನ್ನು ಸ್ಥಾಪಿಸಿದರು. ಇದಲ್ಲದೆ, ಶಿಕ್ಷಿತ ಬಡ ಹರಿಜನ ಮಹಿಳೆಯರಿಗಾಗಿ ಬೆಂಗಳೂರಿನ ತಮ್ಮ ಮನೆಯಲ್ಲಿಯೇ ಒಂದು ಹೆಚ್‍ಎಂಟಿ ವಾಚ್ ಜೋಡಣಾ ಸಹಾಯಕ ಘಟಕವನ್ನು ಸ್ಥಾಪಿಸಲು ಅನುಮತಿ ನೀಡಿದರು. ಅಷ್ಟೇ ಅಲ್ಲದೆ, ಗಾಂಧಿ ಸ್ಮಾರಕ ಟ್ರಸ್ಟ್‍ನಲ್ಲಿ, ಹರಿಜನ ಸೇವಾ ಸಂಘ, ಗ್ರಾಮೀಣ ಮಹಿಳಾ ಸಂಘ, ಸಮಾಜ ಕಲ್ಯಾಣ ಮಂಡಲಿ, ಖಾದೀ ಗ್ರಾಮೋದ್ಯೋಗ ಆಯೋಗಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಇವಕ್ಕೆಲ್ಲ ಮುಕುಟ ಪ್ರಾಯವೆಂಬಂತೆ ಅವರು, ಮೈಸೂರು ಕಾಂಗ್ರೆಸ್‍ನ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದರು.

1956 ರಲ್ಲಿ ಸ್ಥಾಪನೆಯಾದ ಗಾಂಧಿ ಸ್ಮಾರಕ ನಿಧಿಯ ಖಾಯಂ ಟ್ರಸ್ಟಿಯಾಗಿ ನೇಮಕಗೊಂಡರು.. ಅಷ್ಟೇ ಅಲ್ಲದೆ ಅವರು ಅನೇಕ ಮಂಡಳಿಗಳು, ಅನೇಕ ಪರಿಷತ್ತುಗಳು, ಅನೇಕ ಟ್ರಸ್ಟ್‍ಗಳಲ್ಲಿ ಅನೇಕ ಸಾಮಥ್ರ್ಯಗಳಲ್ಲಿ ಕೆಲಸ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು, ಸಚಿವರಾಗಿದ್ದರು. 1962 ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಫರ್ಧಿಸಿ ಮೈಸೂರು ರಾಜ್ಯದ ವಿಧಾನಸಭೆಗೆ ಚುನಾಯಿತರಾದರು, ನಿಜಲಿಂಗಪ್ಪ ಅವರ ಸಚಿವ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವೆಯಾಗಿ ಸೇವೆ ಸಲ್ಲಿಸಿದರು. ಸಂಪುಟ ಸಚಿವೆಯಾದ ಪ್ರಥಮ ಮಹಿಳೆ ಇವರು. ತತ್ವಗಳೊಂದಿಗೆ ಯಾವುದೇ ಕಾಣಕ್ಕೂ ರಾಜಿ ಮಾಡಿಕೊಳ್ಳಲು ಒಪ್ಪುತ್ತಿರಲಿಲ್ಲ. ಹಾಗಾಗಿ ‘ಫೈರ್‍ಬ್ರಾಂಡ್’ ಎಂದೇ ಹೆಸರಾಗಿದ್ದರು. ಕರ್ನಾಟಕ ಸರ್ಕಾರ ಮದ್ಯಪಾನ ನಿಷೇಧವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದಾಗ ಅದನ್ನು ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸುದ್ದಿಯಾಗಿದ್ದದ್ದು ಇವರ ತತ್ವ ನಿಷ್ಠೆಗೆ ಒಂದು ಉದಾಹರಣೆ.
ಇವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳು. ಸ್ವಾತಂತ್ರ್ಯಾನಂತರ, ಇವರ ಪತಿ ದಾಸಪ್ಪ ನೆಹರೂ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು. ಚರಣ್ ಸಿಂಗ್ ಸರ್ಕಾರದಲ್ಲಿ ಇವರ ಮಗ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 1980ರಲ್ಲಿ, ತಮ್ಮ 75 ನೇ ವಯಸ್ಸಿನಲ್ಲಿ ಇವರು ರಾದರು.

ಕನ್ನಡದ ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಯಶೋಧರಾ ದಾಸಪ್ಪ ಅವರನ್ನು ಕರ್ನಾಟಕದ ಕಸ್ತೂರ್ ಬಾ ಎಂದು ಬಣ್ಣಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಮತ್ತು ‘ಲಯನ್ ಆಫ್ ಮೈಸೂರ್’ ಎಂದೇ ಬಿರುದಾಂಕಿತರಾದ ಎಂ.ಎನ್.ಜೋಷಿ ಅವರೂ ಯಶೋಧರಾ ದಾಸಪ್ಪ ಅವರ ಅವಿರತ ಸೇವೆ ಹಾಗೂ ಯಾರಲ್ಲೂ ತಾರತಮ್ಯವೆಸಗದ ಅವರ ಕಾರ್ಯ ವೈಖರಿಯನ್ನು ಗಮನಿಸಿ ರಾಮಸ್ವಾಮಿ ಅಯ್ಯಂಗಾರರ ಅಭಿಪ್ರಾಯವನ್ನು ಒಪ್ಪುತ್ತಾರೆ.

ಡಾ. ಗೀತಾ ಕೃಷ್ಣಮೂರ್ತಿ

                

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *