ಪದ್ಮಪ್ರಭೆ/ ‘ಸುಧರ್ಮ’ ಪತ್ರಿಕೆಯನ್ನು ಮುನ್ನಡೆಸುತ್ತಿರುವ ವಿಜಯಲಕ್ಷ್ಮಿ – ಡಾ. ಗೀತಾ ಕೃಷ್ಣಮೂರ್ತಿ
ವಿದುಷಿ ವಿಜಯಲಕ್ಷ್ಮಿ ಮತ್ತು ದಿವಂಗತ ಕೆ.ವಿ. ಸಂಪತ್‍ಕುಮಾರ್ ದಂಪತಿ 2020 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತದ ಅತ್ಯಂತ ಹಳೆಯ ಸಂಸ್ಕøತ ವೃತ್ತ ಪತ್ರಿಕೆ `ಸುಧರ್ಮ’ ವನ್ನು ಈಗ ಮುನ್ನಡೆಸುತ್ತಿರುವ ವಿಜಯಲಕ್ಷ್ಮಿ, ಪತ್ರಿಕೋದ್ಯಮದಲ್ಲಿರುವ ಆಸಕ್ತಿ ಮತ್ತು ಸಂಸ್ಕøತದ ಮೇಲಿನ ಪ್ರೀತಿಯ ಕಾರಣ ಅದರಲ್ಲಿ ವೈವಿಧ್ಯ ತುಂಬಲು ಶ್ರಮಿಸುತ್ತಿದ್ದಾರೆ. ಸಮಕಾಲೀನ ಬೆಳವಣಿಗೆಗಳನ್ನು ಬಿಂಬಿಸಲು ಸಂಸ್ಕøತದಲ್ಲಿ ಪದಗಳಿಲ್ಲ ಎಂಬ ವಾದವನ್ನು ಒಪ್ಪದೆ, ವರ್ತಮಾನ ಪತ್ರಿಕೆಯನ್ನು ಪ್ರಕಟಿಸುತ್ತಿದ್ದಾರೆ.
ವಿದುಷಿ ವಿಜಯಲಕ್ಷ್ಮಿ, ಕೆ.ವಿ ಸಂಪತ್‍ಕುಮಾರ್ ದಂಪತಿ- ಯಾರಿವರು ಎಂಬ ಪ್ರಶ್ನೆ ಏಳುವುದು ಸಹಜ. ಎಲೆ ಮರೆಯ ಕಾಯಿಯಂತೆ ಸದ್ದಿಲ್ಲದೆ, ತಾವು ನಂಬಿದ, ತಮಗೆ ಶ್ರದ್ಧೆ ಇರುವ ಕಾಯಕದಲ್ಲಿ ಮನಸ್ಸಿಟ್ಟು, ಪ್ರಶಸ್ತಿ ಪುರಸ್ಕಾರಗಳ ಆಸೆಯಿಲ್ಲದೆ, ನಿರೀಕ್ಷೆಯೂ ಇಲ್ಲದೆ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಯಾರಿಗೇ ಪ್ರಶಸ್ತಿ ಬಂದಾಗಲೂ ಇಂಥ ಪ್ರಶ್ನೆ ಏಳುವುದು ಸಹಜ. ಈ ದಂಪತಿಯ ಸಾಧನೆಯೆಂದರೆ, ಮೈಸೂರು ನಗರದಿಂದ ಪ್ರತಿನಿತ್ಯ ಪ್ರಕಟವಾಗುತ್ತಿರುವ ‘ಸುಧರ್ಮ’ ಎಂಬ ಸಂಸ್ಕøತ ಪತ್ರಿಕೆಯನ್ನು ಸದ್ದು ಗದ್ದಲವಿಲ್ಲದೆ, ಯಾವುದೇ ಲಾಭಾಕಾಂಕ್ಷೆಯಿಲ್ಲದೆ, ಹೊರಗಿನ ಹಣಕಾಸು ನೆರವಿಲ್ಲದೆ, ಇಂದಿಗೂ ನಡೆಸಿಕೊಂಡು ಬರುತ್ತಿರುವುದು. ಸಂಸ್ಕøತ ಭಾಷೆಯ ಪತ್ರಿಕೆಯನ್ನು ನಡೆಸುತ್ತಿದ್ದಾರೆಂದರೆ ನಿಜಕ್ಕೂ ಸಾಧನೆಯೇ. ಇಂಥ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವುದು ಪ್ರಶಸ್ತಿಯ ಗರಿಮೆಯನ್ನು ಹೆಚ್ಚಿಸುತ್ತದೆ.
ಈ ಎರಡು ಪುಟಗಳ ‘ಸುಧರ್ಮ’ ಎಂಬ ಪತ್ರಿಕೆ, ಕಳೆದ ವರ್ಷ, 2020ರಲ್ಲಿ, ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಯಿತು. ಇಂದು ಪ್ರಕಟವಾಗುವ ಅನೇಕಾನೇಕ ಸಣ್ಣ ಪತ್ರಿಕೆಗಳ ನಡುವೆ ಇದು ಭಿನ್ನವಾಗಿ ಗಮನ ಸೆಳೆದದ್ದು ಅದು ‘ಸಂಸ್ಕøತ ಭಾಷೆ’ಯ ಪತ್ರಿಕೆ ಎಂಬುದರಿಂದ ಮತ್ತು ಭಾರತದಲ್ಲಿ ಪ್ರಕಟವಾಗುತ್ತಿರುವ ಅತ್ಯಂತ ಹಳೆಯ ಸಂಸ್ಕøತದ ದಿನ ಪತ್ರಿಕೆ ಎಂಬುದರಿಂದ. ಇದನ್ನು ನಡೆಸಿಕೊಂಡು ಬರುತ್ತಿರುವವರು, ಕೆ.ವಿ. ಸಂಪತ್‍ಕುಮಾರ್ ಮತ್ತು ವಿಜಯಲಕ್ಷ್ಮಿ ದಂಪತಿ. ಸುಧರ್ಮ ಪತ್ರಿಕೆಯನ್ನು ಪ್ರಾರಂಭಿಸಿದವರು ಮೈಸೂರಿನ ಸಂಸ್ಕøತ ಪಂಡಿತರಾಗಿದ್ದ, ಕಳಲೆ ನಾಡದೂರು ವರದರಾಜ ಅಯ್ಯಂಗಾರ್ ಅವರು. ಸಂಸ್ಕøತ ಭಾಷೆಯನ್ನು ಹೆಚ್ಚು ಜನಪ್ರಿಯಗೊಳಿಸಬೇಕು ಎಂಬುದು ಅವರ ಉದ್ದೇಶವಾಗಿತ್ತು. ಆ ವೇಳೆಗಾಗಲೇ ಅವರು ಕೆಲವು ಸಂಸ್ಕøತ ಪುಸ್ತಕಗಳನ್ನೂ ಪ್ರಕಟಿಸಿದ್ದರು ಮತ್ತು ಸಂಸ್ಕøತ ಅಕ್ಷರಗಳ ಅಚ್ಚುಗಳು ಸಹ ಅವರ ಬಳಿ ಇತ್ತು. ಆದರೆ ಅವರು ಈ ಸಾಹಸವನ್ನು ಪ್ರಾರಂಭ ಮಾಡಲು ಯೋಚಿಸಿದಾಗ ಅವರನ್ನು ಟೀಕೆ ಮಾಡಿದವರೇ ಹೆಚ್ಚು. ಅಲ್ಲದೆ ವರ್ತಮಾನದ ವಿದ್ಯಮಾನಗಳ ಬಗ್ಗೆ ಬರೆಯಲು ಸಂಸ್ಕøತದಲ್ಲಿ ಪದ ಸಂಪತ್ತು ಇಲ್ಲ ಎಂಬುದು ಈ ಟೀಕಾಕಾರರ ಅಭಿಪ್ರಾಯವೂ ಆಗಿತ್ತು.
1990 ರಲ್ಲಿ, ಇವರ ನಿಧನಾನಂತರ ಅವರ ಮಗ, ಸಂಪತ್‍ಕುಮಾರ್ ಅವರು ಅದರ ಸಾರಥ್ಯವನ್ನು ವಹಿಸಿಕೊಂಡರು. ಪತ್ರಿಕೆಯನ್ನು ಪ್ರಾರಂಭ ಮಾಡಿದಾಗ ಸಂಪತ್‍ಕುಮಾರ್ ಅವರು ಇನ್ನೂ ಪ್ರೌಢಶಾಲೆಯ ವಿದ್ಯಾರ್ಥಿ. ಆ ನಂತರದಲ್ಲಿ, ಬಿ.ಕಾಂ. ಮತ್ತು ಕಾನೂನು ಪದವಿ ಪಡೆದರು. ಅವರ ತಂದೆಯ ಮರಣಾನಂತರ ಆ ಕಾಯಕವನ್ನು ಮುಂದುವರಿಸಿದರು. 1992 ರಲ್ಲಿ ವಿಜಯಲಕ್ಷ್ಮಿ ಅವರನ್ನು ವಿವಾಹವಾದರು. ವಿಜಯಲಕ್ಷ್ಮಿ ಅವರು ವಿವಾಹವಾದ ನಂತರ, ಸಂಸ್ಕøತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು, ಅಲಂಕಾರದಲ್ಲಿ ವಿದ್ವತ್ ಮಾಡಿದರು ಮತ್ತು ತಮ್ಮನ್ನು ಸಂಪೂರ್ಣವಾಗಿ ಪತ್ರಿಕೆಯ ಕೆಲಸದಲ್ಲಿ ತೊಡಗಿಸಿಕೊಂಡು, ಪತಿ ಸಂಪತ್‍ಕುಮಾರ್ ಅವರಿಗೆ ಬೆಂಬಲವಾಗಿ ನಿಂತರು.
ಆದರೆ ಈ ಯಾವ ಟೀಕೆಗಳೂ ಅವರನ್ನು ಅಧೀರರನ್ನಾಗಿಸಲಿಲ್ಲ ಮತ್ತು ಅವರಿಗೆ, ಈ ಎಲ್ಲ ಟೀಕೆಗಳೂ ಸುಳ್ಳು ಎಂಬುದನ್ನು ಟೀಕಾಕಾರರಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಇವರಿಗೆ, ಅಂದಿನ ಕನ್ನಡ ವೃತ್ತ ಪತ್ರಿಕೆಯೊಂದರ ಸಂಪಾದಕರಾಗಿದ್ದ ಅಗರಂ ರಂಗಯ್ಯ ಮತ್ತು ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಪಿ. ನಾಗಾಚಾರ್ ಬೆಂಬಲ ಮತ್ತು ಪ್ರೋತ್ಸಾಹ ನೀಡಿದರು. ಹೀಗೆ, ಭಾರತದಲ್ಲಿ ಪ್ರಕಟವಾಗುತ್ತಿರುವ ಅತಿ ಹಳೆಯ ಸಂಸ್ಕøತ ವೃತ್ತ ಪತ್ರಿಕೆ ಎನಿಸಿಕೊಂಡಿರುವ ‘ಸುಧರ್ಮ’ ವಾರ್ತಾ ಪತ್ರಿಕೆ, ಮಹಾರಾಜರ ಸಂಸ್ಕøತ ಕಾಲೇಜಿನ ‘ಗಣಪತಿ ತೊಟ್ಟಿ’ಯಲ್ಲಿ 1970 ರ ಜುಲೈ 14 ರಂದು ಪ್ರಾರಂಭವಾಯಿತು. ಇವರ ಸಂಸ್ಕøತ ಪ್ರೀತಿಯಿಂದಾಗಿ, ಇಂದಿಗೂ, ಪ್ರತಿ ನಿತ್ಯ ಬೆಳಿಗ್ಗೆ ಆಕಾಶವಾಣಿಯಲ್ಲಿ, ಸಂಸ್ಕøತ ವಾರ್ತಾ ಪ್ರಸಾರವನ್ನು ಕೇಳಬಹುದು. ಆಗ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಕೇಂದ್ರ ಮಂತ್ರಿಗಳಾಗಿದ್ದ ಐ.ಕೆ.ಗುಜರಾಲ್ ಅವರ ಮನವೊಲಿಸಿ, ಆಕಾಶವಾಣಿಯಲ್ಲಿ ಸಂಸ್ಕøತ ವಾರ್ತೆಗಳನ್ನು ಬಿತ್ತರಿಸಲು ಇವರು ಕಾಣರಾದವರು.

ಪ್ರತಿನಿತ್ಯ ಪತ್ರಿಕೆಯ 3500 ಪ್ರತಿಗಳು ಅಚ್ಚಾಗುತ್ತವೆ. ಈ ಪತ್ರಿಕೆಯ ವಂತಿಗೆದಾರರೆಲ್ಲ ಸಂಸ್ಕøತ ಪಂಡಿತರು ಮತ್ತು ವಿದ್ಯಾರ್ಥಿಗಳು. ಈ ಪತ್ರಿಕೆಯ ಬೆಲೆ ವಾರ್ಷಿಕ ಆರು ನೂರು ರೂಗಳು. ನೋಂದಾಯಿತ ಅಂಚೆಯ ಮೂಲಕ ಬೇಕಾಗಿದ್ದರೆ ಇದರ ವಂತಿಗೆ, 1200 ರೂಗಳು. ಭಾರತದಾದ್ಯಂತ ಇರುವ ಅನೇಕ ಶಿಕ್ಷಣ ಸಂಸ್ಥೆಗಳಿಗೆ, ಸಾರ್ವಜನಿಕ ಗ್ರಂಥಾಲಯಗಳಿಗೆ ಮತ್ತು ಓದುಗರಿಗೆ ಈ ಪತ್ರಿಕೆ ತಲುಪುತ್ತದೆ. ಅಲ್ಲದೆ, ಜಪಾನ್ ಹಾಗೂ ಅಮೇರಿಕಾ ದೇಶದಲ್ಲಿರುವ ಹಲವರು ಈ ಪತ್ರಿಕೆಯ ಚಂದಾದಾರರು. ಪತ್ರಿಕೆಯನ್ನು ನಡೆಸಲು ಅಗತ್ಯವಾದ ಹಣಕಾಸಿನ ಬೆಂಬಲವಿಲ್ಲದಿದ್ದರೂ ಪತ್ರಿಕೋದ್ಯಮದಲ್ಲಿರುವ ಆಸಕ್ತಿ ಮತ್ತು ಸಂಸ್ಕøತ ಭಾಷೆಯ ಮೇಲಿನ ಪ್ರೀತಿಯಿಂದ ಇದನ್ನು ನಡೆಸಿಕೊಂಡು ಹೋಗುತ್ತಿರುವುದಾಗಿ ಹೇಳುತ್ತಾರೆ. ಇಂದಿಗೂ ಅತಿ ಕಡಿಮೆ ಸಂಖ್ಯೆಯ ಸಿಬ್ಬಂದಿ, ಕನಿಷ್ಠ ಮೂಲ ಸೌಕರ್ಯಗಳೊಂದಿಗೆ ಪತ್ರಿಕೆಯ ಪ್ರಕಟಣೆಯನ್ನು ನಡೆಸಲಾಗುತ್ತಿದೆ ಎಂದು ಪತ್ರಿಕೆಯ ಜೀವನಾಡಿಯಾಗಿರುವ ವಿಜಯಲಕ್ಷ್ಮಿ ಅವರು ಮಾಸದ ನಗೆಯೊಡನೆ ಹೇಳುತ್ತಾರೆ ಎಂದಾಗ, ಮಾಡುವ ಕೆಲಸದಲ್ಲಿನ ಪ್ರೀತಿ, ಬದ್ಧತೆ, ಭಾಷೆಯ ಬಗೆಗೆ ಇರುವ ಅಭಿಮಾನ ಎಂಥವರಿಗೂ ಅರಿವಾಗುತ್ತದೆ. ಇತ್ತೀಚೆಗೆ ನಿಧನರಾದ ಸಂಪತ್‍ಕುಮಾರ್ ಅವರಿಗೆ ತಮ್ಮ ತಂದೆಗೆ ಕೊಟ್ಟ ಮಾತಿನಂತೆ ಪತ್ರಿಕೆಯನ್ನು ಮುಂದುವರಿಸುತ್ತಿದ್ದೇನೆ ಎಂಬ ತೃಪ್ತಿ ಹೆಮ್ಮೆ ಇತ್ತು. ಸಂಪತ್‍ಕುಮಾರ್ ಅವರನ್ನು ವಿವಾಹವಾಗಿ ಬಂದ ನಂತರ, ಪತ್ರಿಕೆಯ ಕಾರ್ಯದಲ್ಲಿ ಕೈಜೋಡಿಸಿದ ವಿಜಯಲಕ್ಷ್ಮಿ ಅವರಿಗೆ ತಾವೂ ಇದರಲ್ಲಿ ಭಾಗಿಯಾದುದರ ಬಗ್ಗೆ ಹೆಮ್ಮೆ ಇದೆ.
ಸಂಸ್ಕøತ ಭಾಷೆಯ ಬಗ್ಗೆ ಪ್ರಶಂಸೆಗಳ ಸುರಿಮಳೆಯಾಗಿರುವಂತೆಯೇ ಅದು ತೀವ್ರವಾದ ವಾದವಿವಾದಗಳಿಗೆ ಕಾರಣವಾಗಿಯೂ ಇದೆ. ಅದರ ಪ್ರಸ್ತುತತೆಯ ಬಗ್ಗೆಯೂ ಭಿನ್ನಾಭಿಪ್ರಾಯಗಳಿವೆ. ಇವುಗಳ ನಡುವೆಯೇ ಉತ್ತರಾಖಂಡ ಸರ್ಕಾರ ಸಂಸ್ಕøತ ಭಾಷೆಯನ್ನು ತನ್ನ ರಾಜ್ಯದ ಎರಡನೇ ಆಡಳಿತ ಭಾಷೆಯನ್ನಾಗಿ ಘೋಷಿಸಿದೆ. ‘ವಿಶ್ವ ಸಂಸ್ಕøತ ದಿನ’ವನ್ನು ಶ್ರಾವಣ ಮಾಸದ ಪೂರ್ಣಿಮೆಯಂದು ಆಚರಿಸಲಾಗುತ್ತದೆ. 1969 ರಲ್ಲಿ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ, ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಸಂಸ್ಕøತ ದಿನವನ್ನು ಆಚರಿಸುವಂತೆ ಸೂಚನೆಗಳನ್ನು ನೀಡಿತ್ತು. ಇತ್ತೀಚೆಗೆ, ಭಾರತದಲ್ಲಷ್ಟೇ ಅಲ್ಲದೆ ಅನೇಕ ದೇಶಗಳಲ್ಲಿ ಸಂಸ್ಕøತ ದಿನವನ್ನು ಆಚರಿಸಲಾಗುತ್ತದೆ. ಈ ಎಲ್ಲ ಪ್ರಯತ್ನಗಳ ಉದ್ದೇಶ ಸಂಸ್ಕøತ ಭಾಷೆಯನ್ನು ಜನಪ್ರಿಯಗೊಳಿಸುವುದು, ಅದರ ಮಹತ್ವವನ್ನು ಮನಗಾಣಿಸುವುದು, ಅದರ ಪ್ರಸ್ತುತತೆಯ ಬಗ್ಗೆ ಅರಿವು ಮೂಡಿಸುವುದು, ದಿನ ನಿತ್ಯದ ವ್ಯವಹಾರಗಳಿಗೆ ಅಗತ್ಯವಾದ ಸಮೃದ್ಧ ಭಾಷಾ ಸಂಪತ್ತನ್ನು ಈ ಭಾಷೆ ಹೊಂದಿದೆ ಎಂಬುದನ್ನು ಪ್ರಚುರ ಪಡಿಸುವುದು. ಸಂಸ್ಕøತ ಅತ್ಯಂತ ಕಂಪ್ಯೂಟರ್ ಸ್ನೇಹಿ ಭಾಷೆಯೂ ಆಗಿದೆ.
ಸುಧರ್ಮ ವಾರ್ತಾ ಪತ್ರಿಕೆ ಆರಂಭವಾದಂದಿನಿಂದಲೂ ಅದರ ಗೌರವ ಸಂಪಾದಕರಾಗಿ ಸಂಸ್ಕøತ ವಿದ್ವಾಂಸರಾದ ಪ್ರೊ. ಎಚ್.ವಿ ನಾಗರಾಜರಾವ್ ಅವರು ಕಾರ್ಯ ನಿರ್ವಹಿಸಿದ್ದಾರೆ. ಸುಮಾರು 4000 ಓದುಗರನ್ನು ಹೊಂದಿರುವ ಈ ಪತ್ರಿಕೆ ಈಗ ಅಂತರಜಾಲದಲ್ಲಿಯೂ ಲಭ್ಯವಿದೆ. (www.sudharma.com).
ಸುಧರ್ಮ ದಿನ ಪತ್ರಿಕೆಯ ಚಾಲಕ ಶಕ್ತಿ, ಕೆ.ವಿ. ಸಂಪತ್‍ಕುಮಾರ್ ಅವರು, ತಮ್ಮ 64 ನೇ ವಯಸ್ಸಿನಲ್ಲೇ ಜೂನ್ 30 ರಂದು, ಹೃದಯಾಘಾತದಿಂದ ನಿಧನರಾದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಾ, “ಕೆ.ವಿ.ಸಂಪತ್‍ಕುಮಾರ್ ಅವರದು ಇತರರಿಗೆ ಪ್ರೇರಣೆ ತುಂಬುವಂಥ ವ್ಯಕ್ತಿತ್ವ. ಸಂಸ್ಕøತವನ್ನು ಸಂರಕ್ಷಿಸಲು ಮತ್ತು ಜನಪ್ರಿಯಗೊಳಿಸಲು, ಅದರಲ್ಲೂ, ಯುವಜನತೆಯಲ್ಲಿ ಅದನ್ನು ಜನಪ್ರಿಯಗೊಳಿಸಲು, ಅವರು ದಣಿವರಿಯದೆ ಶ್ರಮಿಸಿದ್ದಾರೆ” ಎಂದು ಶ್ಲಾಘಿಸಿದ್ದಾರೆ. ಈಗ ಪತ್ರಿಕೆಯನ್ನು ವಿಜಯಲಕ್ಷ್ಮಿ ಅವರು ಮುನ್ನಡೆಸುತ್ತಿದ್ದಾರೆ.

- ಡಾ.ಗೀತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.