ಪದ್ಮಪ್ರಭೆ/ ಸಾವಿರಾರು ಮರಗಳ ತಾಯಿ ತಿಮ್ಮಕ್ಕ- ಡಾ. ಗೀತಾ ಕೃಷ್ಣಮೂರ್ತಿ


ನೆರಳಿಲ್ಲದ ಹೆದ್ದಾರಿಯ ಎರಡೂ ಬದಿಗಳಲ್ಲಿ ಗಿಡಮರಗಳನ್ನು ಅಕ್ಕರೆಯಿಂದ ಬೆಳೆಸಿದ ಸಾಲುಮರದ ತಿಮ್ಮಕ್ಕ, ಶಾಲೆಗೆ ಹೋಗದಿದ್ದರೂ ಶಾಲಾ ಪಠ್ಯದಲ್ಲಿ ಸೇರುವಂತಹ ಸಾಧನೆ ಮಾಡಿದರು. ಮರಗಳಿಂದ ದೊರೆಯುವ ಪ್ರಯೋಜನ ಇಡೀ ಸಮಾಜಕ್ಕೆ ಲಭಿಸುವಂತಹುದು. ಸಸಿಗಳನ್ನು ನೆಟ್ಟು, ಕಾಪಾಡಿ, ಬೆಳೆಸುವುದಕ್ಕಿಂತ ಉತ್ತಮ ಸಮಾಜ ಸೇವೆ ಇನ್ನೊಂದಿಲ್ಲ ಎಂಬ ಮಾದರಿಯನ್ನು ಅವರು ನಿರ್ಮಿಸಿದರು. ತಿಮ್ಮಕ್ಕ ಅವರ ಸೇವೆಗೆ ಭಾರತ ಸರ್ಕಾರ 2019 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಹುಟ್ಟಿದ, ಶಾಲೆಗೇ ಹೋಗದ ತಿಮ್ಮಕ್ಕ ಇಂದು ಅಂತರ ರಾಷ್ಟ್ರೀಯ ಮಟ್ಟದಲ್ಲಿ, ಪರಿಸರಾಸಕ್ತರಿಗಷ್ಟೇ ಅಲ್ಲದೆ ಎಲ್ಲರಿಗೂ ಚಿರಪರಿಚಿತರಾಗಿರುವುದು, ಶಾಲಾ ಪುಸ್ತಕಗಳಲ್ಲಿ ಸೇರ್ಪಡೆಯಾಗಿ ಮಕ್ಕಳಿಗೆ ಮಾದರಿಯಾಗಿರುವುದು, ಕೇವಲ ಅವರ ನಿಃಸ್ವಾರ್ಥ ಕಾಯಕದಿಂದ, ದಣಿವರಿಯದ ಶ್ರಮದಿಂದ, ಮಕ್ಕಳಂತೆ ಪೋಷಿಸಿಕೊಂಡು ಬಂದ ಸಾಲುಮರಗಳಿಂದ.

ತಿಮ್ಮಕ್ಕ, ನಮ್ಮ ಹಳ್ಳಿಯ ಅನೇಕ ಬಡ ಹೆಣ್ಣು ಮಕ್ಕಳಂತೆ ಶಾಲೆಗೆ ಹೋಗುವುದರಿಂದ ವಂಚಿತರಾದವರು. ಸಣ್ಣ ವಯಸ್ಸಿನಲ್ಲೇ ಕುರಿ ಕಾಯಲು ಹೋಗಬೇಕಾಗಿತ್ತು, ಜೊತೆಗೆ ಕೂಲಿ ಕೆಲಸವನ್ನೂ ಮಾಡಬೇಕಿತ್ತು. ಬೆಳೆದಂತೆ, ಹನ್ನೆರಡನೇ ವಯಸ್ಸಿನಲ್ಲೇ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದ ಚಿಕ್ಕಯ್ಯ ಅವರೊಂದಿಗೆ ಮದುವೆಯಾಯಿತು. ತಿಮ್ಮಕ್ಕ ಆ ನಂತರ ನೆಲೆಸಿದ್ದು ಹುಲಿಕಲ್ ಗ್ರಾಮದಲ್ಲಿ. ಹತ್ತಿರದ ಕಲ್ಲುಗಣಿಯಲ್ಲಿ ದಿನಗೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಹೆಚ್ಚು ಆಸೆಗಳಿಲ್ಲದ ಅವರ ನೆಮ್ಮದಿಯ ಬಾಳಿನಲ್ಲಿದ್ದ ದೊಡ್ಡ ಕೊರತೆಯೆಂದರೆ ಮಕ್ಕಳಿಲ್ಲದಿದ್ದುದು. ಅವರಿಗೆ ನಲವತ್ತು ವರ್ಷ ವಯಸ್ಸಾದರೂ ಮಕ್ಕಳಾಗದಿದ್ದಾಗ ಜೀವ ಕಳೆದುಕೊಳ್ಳುವ ಪ್ರಯತ್ನವನ್ನೂ ಮಾಡಿದ್ದರಂತೆ.

ಆದರೆ, ಮುಂದೆ, ಆ ಕೊರತೆಯನ್ನು ನೀಗಿಕೊಳ್ಳಲು ಗಂಡನೊಡನೆ ಸೇರಿ ಗಿಡಗಳನ್ನು ನೆಡುತ್ತಾ ಹೋದರು. ಅವುಗಳನ್ನು ಮಕ್ಕಳಂತೆಯೇ ಪ್ರೀತಿಯಿಂದ ನೋಡಿಕೊಂಡರು. ಪುಟ್ಟ ಸಸಿಗಳು ಬಿರುಗಾಳಿ ಮಳೆಗೆ ನಲುಗಿ ಧರಾಶಾಯಿಯಾಗದಂತೆ ನೋಡಿಕೊಂಡರು. ಬೇಲಿ ಕಟ್ಟಿದರು, ದೂರದೂರದಿಂದ ನೀರನ್ನು ಹೊತ್ತು ತಂದು ಪೋಷಿಸಿದರು. ಅವು ದೊಡ್ಡದಾಗಿ ಮೈತುಂಬಿ ಬೆಳೆಯುವುದನ್ನು ನೋಡುತ್ತಾ ಆನಂದಿಸಿದರು. ಮಕ್ಕಳಿಲ್ಲವೆಂಬ ಕೊರಗನ್ನು ತುಂಬಿಕೊಂಡರು. ಮಕ್ಕಳಿಲ್ಲದ ಕೊರಗನ್ನು ಅವರು ತುಂಬಿಕೊಂಡ ಈ ಪರಿ ಮಾತ್ರ ಯಾರೂ ಊಹಿಸಲಾಗದ್ದು ಮತ್ತು ಅನನ್ಯವಾದದ್ದು.

ತಿಮ್ಮಕ್ಕ ಅವರ ಹಳ್ಳಿಯಿಂದ ಕಡೂರು ಗ್ರಾಮದವರೆಗಿನ ಹೆದ್ದಾರಿ ಯಾವುದೇ ಮರಗಳಿಲ್ಲದೆ ಅಕ್ಷರಶಃ ಬರಡಾಗಿತ್ತು. ತಿಮ್ಮಕ್ಕ ದಂಪತಿ ಗಿಡ ನೆಡಲು ಆಯ್ದುಕೊಂಡದ್ದು ಈ ಹೆದ್ದಾರಿಯ ಎರಡೂ ಬದಿಗಳನ್ನು.
ತಿಮ್ಮಕ್ಕ ಅವರ ಗ್ರಾಮದ ಬಳಿ ಆಲದ ಮರಗಳು ಅಧಿಕ ಸಂಖ್ಯೆಯಲ್ಲಿ ಇದ್ದವು. ಹಾಗಾಗಿ ಮರಗಳನ್ನು ನೆಡುವ ಯೋಚನೆ ಬಂದಾಗ ಸಹಜವಾಗಿಯೇ ಅವರ ಆಯ್ಕೆ ಆಲದ ಮರವನ್ನು ನೆಡುವುದೇ ಆಗಿತ್ತು. ಮೊದಲ ವರ್ಷ ಹತ್ತು ಸಸಿಗಳನ್ನು ಕಸಿ ಮಾಡುವ ಮೂಲಕ ಪಕ್ಕದ ಕಡೂರು ಗ್ರಾಮದ ಬಳಿ ನೆಟ್ಟರು. ಮರು ವರ್ಷ 15 ಸಸಿಗಳನ್ನು, ಅದರ ಮುಂದಿನ ವರ್ಷ 20 ಸಸಿಗಳನ್ನು ನೆಟ್ಟರು ಹೀಗೆಯೇ ಮುಂದುವರಿಯಿತು ಅವರ ಗಿಡ ನೆಡುವ ಕಾಯಕ. ಆದರೆ ಹತ್ತಿರದಲ್ಲೆಲ್ಲೂ ನೀರು ದೊರೆಯುತ್ತಿರಲಿಲ್ಲವಾದ್ದರಿಂದ, ಆ ಸಸಿಗಳು ಸಾಯದಂತೆ, ಅವುಗಳಿಗೆ ನೀರುಣಿಸಲು ಸುಮಾರು ನಾಲ್ಕು ಕಿಲೋ ಮೀಟರುಗಳಷ್ಟು ದೂರದಿಂದ ನೀರನ್ನು ಹೊತ್ತು ತರಬೇಕಾಗಿತ್ತು. ಆದರೆ ಈ ಯಾವ ಕಷ್ಟವೂ ಅವರನ್ನು ಗಿಡ ನೆಟ್ಟು ಪೋಷಿಸುವ ಕಾಯಕದಿಂದ ವಿಮುಖರನ್ನಾಗಿಸಲಿಲ್ಲ. ಬೇಸರಿಸದೆ, ಕಿಂಚಿತ್ತೂ ಲೋಪವಾಗದಂತೆ, ನೀರನ್ನು ಕಿಲೋಮೀಟರುಗಟ್ಟಲೆ ಹೊತ್ತೊಯ್ದು ಪೋಷಿಸಿ ಪೊರೆದರು. ಗಿಡಗಳಿಗೆ ನೀರಿನ ಕೊರತೆ ಉಂಟಾಗಿ ಬೇರೂರದೆ ಹೋದರೆ ಎಂಬ ಭಯದಿಂದ ಮುಂಗಾರು ಮಳೆ ಪ್ರಾರಂಭವಾಗುವ ವೇಳೆಗೆ ಸಸಿಗಳನ್ನು ನೆಡುತ್ತಿದ್ದರು. ಮುಂಗಾರಿನ ಮಳೆ ಆ ಸಸಿಗಳಿಗೆ ಜೀವ ತುಂಬುತ್ತಿತ್ತು. ಹೆದ್ದಾರಿಯ ಎರಡೂ ಬದಿಗಳಲ್ಲಿ ಸಾಲಾಗಿ ಮರ ನೆಟ್ಟು ಬೆಳೆಸಿದುದರಿಂದ ಅವರಿಗೆ ಸಂದ ಅನ್ವರ್ಥ ನಾಮ ‘ಸಾಲುಮರದ ತಿಮ್ಮಕ್ಕ’.

1991ರಲ್ಲಿ ತಿಮ್ಮಕ್ಕ ಅವರ ಪತಿ ಚಿಕ್ಕಯ್ಯ ಅವರು ಮರಣ ಹೊಂದಿದರು. ಆ ನಂತರವೂ ಅವರ ಕಾಯಕ ಮುಂದುವರಿಯಿತು. ಒಂದು ಬೆಳೆದು ನಿಂತ ಮರದಿಂದ ಪರಿಸರಕ್ಕೆ ಏನೆಲ್ಲ ಪ್ರಯೋಜನಗಳಾಗುತ್ತವೆ ಎಂಬ ಅರಿವಿದ್ದಾಗ ಮಾತ್ರ ಸಾಲು ಮರದ ತಿಮ್ಮಕ್ಕ ಅವರು ಸಮಾಜಕ್ಕೆ ನೀಡಿದ ಕೊಡುಗೆ ಎಷ್ಟು ಅಮೂಲ್ಯವಾದುದು ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಬೆಳೆದು ನಿಂತ ಒಂದು ಮರ ಪರಿಸರಕ್ಕೆ ಕೊಡುವ ಕೊಡುಗೆ ಅಪಾರ. ಮರವೊಂದರಿಂದ ದೊರೆಯುವ ಪ್ರಯೋಜನಗಳನ್ನು ಲೆಕ್ಕ ಹಾಕಿ ಜೀವಂತ ಮರವೊಂದರ ಬೆಲೆ ಕಟ್ಟಲು ಸಾಧ್ಯ. ಈ ಕೆಲಸವನ್ನು ಕಲ್ಕತ್ತ ಕೃಷಿ ವಿಶ್ವವಿದ್ಯಾಲಯದ ಡಾ.ಟಿ.ಎಂ. ದಾಸ್ ಎಂಬ ವಿಜ್ಞಾನಿ ಮಾಡಿದ್ದಾರೆ. ಮರವೊಂದು ಸಕ್ಕರೆ, ಮೇದಸ್ಸು, ಪ್ರೊಟೀನು, ಆಮ್ಲಜನಕ ಮುಂತಾದುವುಗಳನ್ನು ತಯಾರಿಸುತ್ತದೆ. ವಾಯು ಮಾಲಿನ್ಯವನ್ನು ನಿಯಂತ್ರಿಸುತ್ತದೆ, ಮಣ್ಣಿನ ಸವೆತವನ್ನು ಕಡಿಮೆ ಮಾಡುತ್ತದೆ, ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ, ಮಳೆ ತರಿಸಿ, ನೀರನ್ನು ನೆಲದೊಳಗೆ ಇಂಗಿಸಿ ತೇವಾಂಶವನ್ನು ಕಾಪಾಡುತ್ತದೆ, ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ, ಪ್ರಾಣಿ ಪಕ್ಷಿಗಳಿಗೆ ರಕ್ಷಣೆ ನೀಡಿ ಪರಿಸರದ ಸಮತೋಲನವನ್ನು ಕಾಪಾಡುತ್ತದೆ. ಈ ಉಪಯೋಗಗಳನ್ನು ಪರಿಗಣಿಸಿ, ಐವತ್ತು ವರ್ಷಗಳು ತುಂಬಿರುವ ಒಂದು ಮರಕ್ಕೆ ವಿಜ್ಞಾನಿಗಳು ಕಟ್ಟಿರುವ ಬೆಲೆ ಹದಿನೈದು ಲಕ್ಷದ ಎಪ್ಪತ್ತು ಸಾವಿರ ರೂಪಾಯಿಗಳು! ಮರಗಳಿಂದ ದೊರೆಯುವ ಪ್ರಯೋಜನ ಇಡೀ ಸಮಾಜಕ್ಕೆ ಲಭಿಸುವಂತಹುದು. ಸಸಿಗಳನ್ನು ನೆಟ್ಟು, ಕಾಪಾಡಿ, ಬೆಳೆಸುವುದಕ್ಕಿಂತ ಉತ್ತಮ ಸಮಾಜ ಸೇವೆ ಇನ್ನೊಂದಿಲ್ಲ.

ತಿಮ್ಮಕ್ಕ ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯದಿದ್ದರೂ, ಅವರ ಈ ನಿಃಸ್ವಾರ್ಥ ಕೆಲಸವನ್ನು ಗುರುತಿಸಿ ಅವರಿಗೆ, ‘ಭಾರತದ ರಾಷ್ಟ್ರೀಯ ನಾಗರಿಕ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಅಮೆರಿಕಾದಲ್ಲಿ, ‘ಪರಿಸರ ಶಿಕ್ಷಣಕ್ಕೆ ಸಂಪನ್ಮೂಲಗಳು’ ಎಂಬ ಪರಿಸರ ಸಂಸ್ಥೆಗೆ ತಿಮ್ಮಕ್ಕನವರ ಹೆಸರಿಡಲಾಗಿದೆ. 2019 ರಲ್ಲಿ ಭಾರತ ಸರ್ಕಾರ ಅವರಿಗೆ ನಾಲ್ಕನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಅತ್ಯಮೂಲ್ಯ ಕೊಡುಗೆ

ಯಾವುದೇ ಪ್ರತಿಫಲವನ್ನೂ ಅಪೇಕ್ಷಿಸದೆ ತನ್ನ ಸಂತೋಷಕ್ಕಾಗಿ ತಿಮ್ಮಕ್ಕನವರು ನೆಟ್ಟು ಪೋಷಿಸಿದ ನೂರಾರು ಆಲದ ಮರದ ಸಸಿಗಳು ಇಂದು ದೊಡ್ಡ ಮರಗಳಾಗಿ ಬೆಳೆದು ನಿಂತಿವೆ. ಈ ಮರಗಳು ಪರಿಸರಕ್ಕೆ ನೀಡುತ್ತಿರುವ ಕೊಡುಗೆ ಎಂಥದ್ದು ಎಂದು ಯಾರಾದರೂ ಕಲ್ಪಿಸಿಕೊಳ್ಳಬಹುದು. ಇದು ವ್ಯಕ್ತಿಯೊಬ್ಬ ಸಮಾಜಕ್ಕೆ, ಪರಿಸರಕ್ಕೆ ನೀಡಬಹುದಾದ ಬೆಲೆಕಟ್ಟಲಾಗದ ಅತ್ಯಮೂಲ್ಯ ಕೊಡುಗೆ.

ಮೈಸೂರಿನಲ್ಲಿ ಶ್ರೀರಾಮಪುರದ ಲಿಂಗಾಂಬುಧಿ ಕೆರೆಯ ಹತ್ತಿರ ಸುಮಾರು 88 ಹೆಕ್ಟೇರ್ ಪ್ರದೇಶದಲ್ಲಿ ಕೇಂದ್ರ ಸರ್ಕಾರದ 1.4 ಕೋಟಿ ನೆರವಿನಿಂದ ಸಾಲುಮರದ ತಿಮ್ಮಕ್ಕನವರ ಹೆಸರಿನಲ್ಲಿ ಒಂದು ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗಿದೆ.

1991 ರಲ್ಲಿ ಮರಣಹೊಂದಿದ ತಮ್ಮ ಪತಿಯ ನೆನಪಿನಲ್ಲಿ, ತಮ್ಮ ಹಳ್ಳಿಯಲ್ಲಿ ಆಸ್ಪತ್ರೆಯನ್ನು ಕಟ್ಟಿಸಬೇಕೆಂಬುದು ತಿಮ್ಮಕ್ಕ ಅವರ ಅಪೇಕ್ಷೆ. ಅದಕ್ಕಾಗಿ ಸತತ ಪ್ರಯತ್ನ ನಡೆಸಿದ್ದಾರೆ. ವೈದ್ಯಕೀಯ ಸಹಾಯ ಕೂಡಲೇ ದೊರಕದಂಥ ಆ ಸ್ಥಳದಲ್ಲಿ ಭೂಮಿಯನ್ನು ಖರೀದಿಸಿ ಆಸ್ಪತ್ರೆಯೊಂದನ್ನು ಕಟ್ಟಿಸಬೇಕೆಂದು ಟ್ರಸ್ಟ್ ಅನ್ನು ಸಹ ಸ್ಥಾಪಿಸಿದ್ದಾರೆ. ತಿಮ್ಮಕ್ಕ ತಮಗೆ ಬಂದ ಅನೇಕಾನೇಕ ಪ್ರಶಸ್ತಿ ಪುರಸ್ಕಾರಗಳನ್ನು ನಮ್ರರಾಗಿಯೇ ಸ್ವೀಕರಿಸಿದ್ದಾರೆ. ವಯಸ್ಸು ದೇಹಕ್ಕಷ್ಟೇ ಮನಸ್ಸಿಗಲ್ಲ ಎಂಬುದನ್ನು ರುಜುವಾತು ಪಡಿಸುವಂತೆ ಈ ಇಳಿ ವಯಸ್ಸಿನಲ್ಲಿಯೂ ತಮ್ಮ ಕಾಯಕವನ್ನು ಮುಂದುವರಿಸುವ ಉತ್ಸಾಹವನ್ನು ಅವರು ಕಳೆದುಕೊಂಡಿಲ್ಲ.
ಪ್ರತಿಯೊಬ್ಬ ವ್ಯಕ್ತಿಯೂ ಒಂದು ಗಿಡವನ್ನು ನೆಟ್ಟರೂ ಸಾಕು ಪರಿಸರವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಬಹುದು ಎಂಬುದು ಅವರ ನಂಬಿಕೆ. ಈ ಪರಿಸರ ಸಾಕ್ಷರತೆ, ಇಂದು, ಎಲ್ಲ ವಯೋಮಾನದವರಲ್ಲಿಯೂ ಉಂಟಾಗಬೇಕು, ಮುಖ್ಯವಾಗಿ, ಇಂದಿನ ಮಕ್ಕಳಲ್ಲಿ, ಯುವ ಜನತೆಯಲ್ಲಿ ಇದರ ಅರಿವು ಮೂಡಬೇಕು. ಈ ದೃಷ್ಟಿಯಿಂದ ಕಲಿಕೆಯ ಎಲ್ಲ ಹಂತಗಳಲ್ಲಿ, ಪಠ್ಯ ಕ್ರಮದ ಭಾಗವಾಗಿ ತಿಮ್ಮಕ್ಕ ಅವರ ಈ ಕಾಯಕಗಾಥೆಯನ್ನು ಸೇರ್ಪಡೆ ಮಾಡಲಾಗಿದೆ.

ಇವರಿಗೆ ದೊರೆತ ಅನೇಕ ಪ್ರಶಸ್ತಿಗಳ ಪೈಕಿ ಮುಖ್ಯವಾದವು- 2010 ರಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ; 2000 ದಲ್ಲಿ ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ; ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ; 1997 ರಲ್ಲಿ ಭಾರತ ಸರ್ಕಾರದ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ; ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಮಾನ್ಯತೆ; ರಾಜ್ಯೋತ್ಸವ ಪ್ರಶಸ್ತಿ; 1995 ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ ಮುಂತಾದವು. 2016 ರಲ್ಲಿ ಬಿಬಿಸಿಯ ಪ್ರಪಂಚದ 100 ಅತ್ಯುತ್ತಮ ಪ್ರಭಾವಶಾಲಿ ಮತ್ತು ಸ್ಫೂರ್ತಿದಾಯಕ ಮಹಿಳೆಯರ ಪಟ್ಟಿಯಲ್ಲಿ ಇವರ ಹೆಸರು ಸೇರ್ಪಡೆಯಾಗಿರುವ ಗೌರವ.

-ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *