ಪದ್ಮಪ್ರಭೆ/ ವೃಕ್ಷದೇವತೆ ಎನಿಸಿದ ತುಳಸಿ ಗೌಡ- ಡಾ. ಗೀತಾ ಕೃಷ್ಣಮೂರ್ತಿ
ಬರಿಗಾಲಿನಲ್ಲಿಯೇ ಅರಣ್ಯದೊಳಗೆ ಸಂಚರಿಸುವ ವೃಕ್ಷಜೀವಿ ತುಳಸಿ ಗೌಡ ಅವರಿಗೆ, ಅರಣ್ಯಗಳ ಬಗ್ಗೆ ಮತ್ತು ಅರಣ್ಯಗಳಲ್ಲಿರುವ ಮರಗಳ ಬಗ್ಗೆ ಸರಿಸಾಟಿಯಿಲ್ಲದ ಜ್ಞಾನ. ತಮಗೆ ಇರುವ ಅರಿವನ್ನು ಇತರರಿಗೆ ತಲುಪಿಸುವ ಮತ್ತು ಅವರಲ್ಲಿ ಅರಣ್ಯ ಸಂರಕ್ಷಣೆಯ ಮಹತ್ವದ ಬಗ್ಗೆ ತಿಳಿವಳಿಕೆ ನೀಡುವ ಕೆಲಸವನ್ನೂ ಅವರು ಮಾಡುತ್ತಿದ್ದಾರೆ. ಯಾವುದೇ ಮರವಾಗಿರಲಿ ಅದು ಹೂಬಿಡುವ ಕಾಲ, ಮೊಳಕೆಯೊಡೆಯುವ ಸಮಯ ಮತ್ತು ಬೀಜಗಳನ್ನು ಯಾವಾಗ ಸಂಗ್ರಹಿಸಬೇಕು ಎಂಬ ಬಗ್ಗೆ ಅವರಿಗೆ ನಿಖರವಾದ ಜ್ಞಾನವಿದೆ. ಅರಣ್ಯಗಳ ಹಾಗೂ ಮರಗಳ ಭಾಷೆಯನ್ನು ಹಾಗೂ ಅವು ಮೊಳಕೆಯೊಡೆಯುವ ಮತ್ತು ಹೂಬಿಡುವ ತಂತ್ರವನ್ನು ಅವರು ಅರ್ಥ ಮಾಡಿಕೊಂಡಿರುವ ರೀತಿ ಬೆರಗು ಮೂಡಿಸುತ್ತದೆ. ಅವರ ವಲಯದಲ್ಲಿ ಅರಣ್ಯ ವಿಶ್ವಕೋಶ ಖ್ಯಾತರಾದ ತುಳಸಿ ಗೌಡ ಅವರಿಗೆ ಪದ್ಮಶ್ರೀ ಗೌರವ ಸಂದಿದೆ.
ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಅವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿರಂತರ ಆರು ದಶಕಗಳ ಕಾಲ ಒಂದು ವ್ರತದಂತೆ ಮಾಡಿದ ಗಿಡ ನೆಡುವ, ಗಿಡಗಳನ್ನು ಪೋಷಿಸುವ ಕಾಯಕ ಇಂದು ಅವರನ್ನು ಅಂತಾರಾಷ್ಟ್ರೀಯ ಮಟ್ಟದ ಪರಿಸರ ಪ್ರೇಮಿ ಎಂದು ಗುರುತಿಸುವುದಕ್ಕೆ ಕಾರಣವಾಗಿದೆ. ಆರು ದಶಕಗಳಲ್ಲಿ ಅವರು ನೆಟ್ಟು ಪೋಷಿಸಿರುವ ಗಿಡಗಳ ಸಂಖ್ಯೆ 40,000 ವನ್ನೂ ದಾಟುತ್ತದೆ.
ತುಳಸಿ ಅವರು ಹುಟ್ಟಿದ್ದು 1944 ರಲ್ಲಿ, ಗುಡ್ಡಗಾಡು ಜನಾಂಗದ ಕಡುಬಡತನದ ಹಾಲಕ್ಕಿ ಕುಟುಂಬದಲ್ಲಿ. ತಂದೆಯ ಹೆಸರು ನಾರಾಯಣ ಮತ್ತು ತಾಯಿಯ ಹೆಸರು ನೀಲಿ. ಎರಡು ವರ್ಷದ ಮಗುವಿದ್ದಾಗಲೇ ತಂದೆಯನ್ನು ಕಳೆದುಕೊಂಡ ನತದೃಷ್ಟೆ. ಯಾವುದೇ ಔಪಚಾರಿಕ ಶಿಕ್ಷಣವನ್ನೂ ಪಡೆದವರಲ್ಲ. ಬಡತನವನ್ನು ನೀಗಿಸಿಕೊಂಡು ಎರಡು ಹೊತ್ತಿನ ಊಟ ಕಾಣಲು ಚಿಕ್ಕ ವಯಸ್ಸಿನಿಂದ ತಾಯಿಯ ಜೊತೆ ದುಡಿಯುವುದು ಅನಿವಾರ್ಯವಾಗಿತ್ತು ಅವರಿಗೆ. ಚಿಕ್ಕ ವಯಸ್ಸಿನಲ್ಲೇ ಅವರಿಗೆ ಗೋವಿಂದೇಗೌಡ ಎನ್ನುವವರ ಜೊತೆ ಮದುವೆಯಾಯಿತು. ಮದುವೆಯಾದ ಕೆಲವು ವರ್ಷಗಳಲ್ಲೇ ಗಂಡನನ್ನೂ ಕಳೆದುಕೊಂಡರು. ಅವರ ಮುಂದಿನ ಜೀವನ ಕಡುಕಷ್ಟದಲ್ಲಿಯೇ, ಇತರರ ಟೀಕೆ, ತಿರಸ್ಕಾರಗಳ ನಡುವೆಯೇ ಕಳೆದುಹೋಗುವಂತಾಗಿತ್ತು. ಇಂದಿಗೂ, ಭಾರತದ ಎಷ್ಟೋ ಸಹಸ್ರ ಹೆಣ್ಣು ಮಕ್ಕಳ ಕತೆ ಇಲ್ಲಿಗೇ ನಿಂತು ಬಿಡುತ್ತದೆ. ಯಾವುದೇ ಅಸ್ಮಿತೆಯಿಲ್ಲದೆ ಅವರು ಕಳೆದು ಹೋಗುತ್ತಾರೆ. ಸಹಸ್ರಾರು ತಾರೆಗಳ ನಡುವೆ ದಿಕ್ಕು ತೋರುವ ಒಂದು ತಾರೆಯಂತೆ ಎಲ್ಲೋ ಒಬ್ಬರು ಅವರಿಗೇ ಅರಿವಿಲ್ಲದಂತೆ, ತಮ್ಮ ಕ್ರಿಯೆಯಿಂದಲೇ, ಬೆಳಗುತ್ತಾರೆ, ಬೆಳಕಾಗುತ್ತಾರೆ, ಮಾರ್ಗದರ್ಶಕರಾಗುತ್ತಾರೆ. ತುಳಸಿ ಗೌಡ ಅಂಥ ಒಬ್ಬರು.
ತುಳಸಿ ಗೌಡ ಅವರ ಬದುಕು ದಿಕ್ಕು ಕಂಡುಕೊಂಡದ್ದು ಅವರು ಅರಣ್ಯ ಇಲಾಖೆಯ ಅರಣ್ಯ ನೆಡುವ ಒಂದು ಯೋಜನೆಯಲ್ಲಿ ಸ್ವಯಂಸೇವಕಿಯಾಗಿ ಪಾಲ್ಗೊಂಡ ಸಂದರ್ಭದಲ್ಲಿ. ಆಕೆಗೆ ಕೆಲಸದಲ್ಲಿರುವ ಬದ್ಧತೆಯನ್ನು ಹಾಗೂ ಅವರ ಆಸಕ್ತಿಯನ್ನು ಗಮನಿಸಿ, ಮತ್ತು ಪರಿಸರದ ಮೇಲೆ ಅವರಿಗಿದ್ದ ಪ್ರೀತಿಯನ್ನು ಗಮನಿಸಿ, ಅಂದಿನ ಅರಣ್ಯಾಧಿಕಾರಿಯಾಗಿದ್ದ ಅ.ನಾ. ಯಲ್ಲಪ್ಪ ರೆಡ್ಡಿ ಅವರು ಈಕೆಗೆ ಮಾಸ್ತಿಕಟ್ಟೆ ಅರಣ್ಯ ವಲಯದಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸ ಕೊಡಿಸಿದರು. ಅರಣ್ಯ ಇಲಾಖೆ, ಅನೇಕ ವರ್ಷಗಳ ನಂತರ, ಸಸಿ ನೆಡುವ ಕೆಲಸಕ್ಕಾಗಿ ಆಕೆಯ ಸೇವೆಯನ್ನು ಕಾಯಂಗೊಳಿಸಿತು. ಅವರು ತಾವು ನೆಟ್ಟ ಪ್ರತಿಯೊಂದು ಗಿಡವನ್ನೂ ಸ್ವಂತ ಮಗುವಿನಂತೆ ಕಾಪಾಡಿ ಪೋಷಿಸಿದ್ದಾರೆ. ಇವರು ನೆಟ್ಟ ಸಸಿಗಳು ಬೆಳೆದು ಮರಗಳಾಗಿ, ಹೊನ್ನಾಳಿ, ಮಸ್ತಿಗಟ್ಟ, ಹೆಗ್ಗೂರು, ಹೊಲಿಗೆ, ವಜ್ರಹಳ್ಳಿ, ದೊಂಗ್ರಿ, ಕಲ್ಲೇಶ್ವರ, ಅಡಗೂರು, ಅಗಸೂರು, ಸಿಗುಂಜಿ, ಎಲೊಗಡ್ಡೆಗಳ ಸುತ್ತಮುತ್ತ ಸುಮಾರು 30,000 ಮರಗಳು ಭೂಮಿಯನ್ನು ಫಲವತ್ತು ಮಾಡಿ, ವಾತಾವರಣದ ಮಾಲಿನ್ಯವನ್ನು ಕಡಿಮೆ ಮಾಡುತ್ತಾ ಸಾವಿರಾರು ಪಕ್ಷಿಗಳಿಗೆ ಮನೆಯಾಗಿ ನೆರಳು ಕೊಡುತ್ತ ನಳನಳಿಸುತ್ತಿವೆ. ಅಷ್ಟೇ ಅಲ್ಲ ಅವರು ನೆಟ್ಟ ಪ್ರತಿಯೊಂದು ಗಿಡದ ಸಮಸ್ತ ವಿವರಗಳೂ ಅವರಿಗೆ ತಿಳಿದಿದೆ. ಗಿಡ ಯಾವ ಕುಟುಂಬಕ್ಕೆ ಸೇರುತ್ತದೆ, ಅದರ ಬೆಳವಣಿಗೆಯ ಯಾವ ಯಾವ ಹಂತದಲ್ಲಿ ಎಷ್ಟು ಎಷ್ಟು ಪ್ರಮಾಣದ ಪೋಷಕಾಂಶಗಳನ್ನು ಮಣ್ಣಿಗೆ ಸೇರಿಸಬೇಕು, ಯಾವ ಪ್ರಮಾಣದಲ್ಲಿ ನೀರು ಪೂರೈಸಬೇಕು ಎಲ್ಲವೂ ಅವರಿಗೆ ಕರತಲಾಮಲಕ! ಅವರು ಜೊತೆಯಲ್ಲಿ ಇದ್ದರೆ ಒಬ್ಬ ನುರಿತ ಸಸ್ಯಶಾಸ್ತ್ರಜ್ಞರಿದ್ದಂತೆ ಎನ್ನುತ್ತಾರೆ ಅವರ ಜ್ಞಾನದ ಆಳವನ್ನು ಅರಿತವರು. ಗಿಡ ಬಳ್ಳಿ ಮರಗಳಲ್ಲಿ ಆಸಕ್ತಿ ಇರುವ ಯುವಜನರು ಇವರ ಬಳಿ ಮಾಹಿತಿ ಪಡೆಯುತ್ತಾರೆ. ಹೇಗೆ ಸಸಿ ನೆಟ್ಟು ಬೆಳಸಬೇಕೆಂದು ಸಲಹೆ ಪಡೆಯುತ್ತಾರೆ. ಜನರು ಪ್ರೀತಿಯಿಂದ ಇವರನ್ನು ‘ವೃಕ್ಷ ದೇವಿ’ ಎಂದು ಕರೆಯುತ್ತಾರೆ.
ಅವರ ಕಾಯಕ ಇಷ್ಟಕ್ಕೇ ನಿಲ್ಲುವುದಿಲ್ಲ. ತಮಗೆ ಇರುವ ಅರಿವನ್ನು ಇತರರಿಗೆ ತಲುಪಿಸುವ ಮತ್ತು ಅವರಲ್ಲಿ ಅರಣ್ಯ ಸಂರಕ್ಷಣೆಯ ಮಹತ್ವದ ಬಗ್ಗೆ ತಿಳಿವಳಿಕೆ ನೀಡುವ ಕೆಲಸವನ್ನೂ ಅವರು ಮಾಡುತ್ತಿದ್ದಾರೆ. ಅವರ ವಲಯದಲ್ಲಿ ಅವರನ್ನು ಅರಣ್ಯ ವಿಶ್ವಕೋಶ ಎಂದೇ ಪರಿಭಾವಿಸುತ್ತಾರೆ!
ನಿಖರವಾದ ಜ್ಞಾನ
ಬರಿಗಾಲಿನಲ್ಲಿಯೇ ಅರಣ್ಯದೊಳಗೆ ಸಂಚರಿಸುವ ಇವರು ಸುತ್ತಮುತ್ತೆಲ್ಲ ‘ತುಳಸಿ ಅಜ್ಜಿ’ ಎಂದೇ ಪರಿಚಿತರು. ಅರಣ್ಯಗಳ ಬಗ್ಗೆ ಮತ್ತು ಅರಣ್ಯಗಳಲ್ಲಿರುವ ಮರಗಳ ಬಗ್ಗೆ ಇವರಿಗೆ ಸರಿಸಾಟಿಯಿಲ್ಲದ ಜ್ಞಾನ. ‘ಅರಣ್ಯಗಳಲ್ಲಿ ಸಹಜವಾಗಿ ಬೆಳೆಯುವ ಮರಗಳ ಬಗ್ಗೆ ಎಷ್ಟೇ ಸಂಶೋಧನೆಗಳು ನಡೆದಿದ್ದರೂ ಆ ಮರಗಳ ಪೈಕಿ ಶೇಕಡಾ 90 ಕ್ಕಿಂತ ಹೆಚ್ಚು ಮರಗಳನ್ನು ಮತ್ತೆ ಬೆಳೆಸುವುದು ಒಂದು ಸವಾಲು. ಆದರೆ ತುಳಸಿ ಗೌಡ ಅವರು ಯಾವುದೇ ಮರದ ತಾಯಿ ಮರವನ್ನು ಅರಣ್ಯದಲ್ಲಿ ಎಲ್ಲೇ ಇದ್ದರೂ ಗುರುತಿಸಬಲ್ಲರು’ ಎಂಬುದು ಅರಣ್ಯಗಳಲ್ಲಿ ಮರಗಳನ್ನು ಬೆಳೆಸುವ ವಿಧಾನ, ಅವುಗಳ ಪಾಲನೆ ಪೋಷಣೆಯ ಬಗ್ಗೆಯೇ ಸಂಶೋಧನೆ ನಡೆಸಿ, ಅರಣ್ಯ ಇಲಾಖೆಯಲ್ಲಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿ ನಿವೃತ್ತರಾಗಿರುವ ಯಲ್ಲಪ್ಪ ರೆಡ್ಡಿ ಅವರು ಹೇಳುವ ಮಾತು. ಅರಣ್ಯದಲ್ಲಿ, ತಾಯಿ ಮರದಿಂದ ದೊರೆವ ಬೀಜಗಳಿಂದ ಮರಗಳ ಪುನರುತ್ಪಾದನೆ ಮಾಡುವುದು ಅತ್ಯುತ್ತಮ ವಿಧಾನ. ತುಳಸಿ ಗೌಡ ಅವರಿಗೆ, ಯಾವುದೇ ಮರವಾಗಿರಲಿ ಅದು ಹೂಬಿಡುವ ಕಾಲ, ಮೊಳಕೆಯೊಡೆಯುವ ಸಮಯ ಮತ್ತು ಬೀಜಗಳನ್ನು ಯಾವಾಗ ಸಂಗ್ರಹಿಸಬೇಕು ಎಂಬ ಬಗ್ಗೆ ನಿಖರವಾದ ಜ್ಞಾನವಿದೆ. ಅರಣ್ಯಗಳ ಹಾಗೂ ಮರಗಳ ಭಾಷೆಯನ್ನು ಹಾಗೂ ಅವು ಮೊಳಕೆಯೊಡೆಯುವ ಮತ್ತು ಹೂಬಿಡುವ ತಂತ್ರವನ್ನು ಅವರು ಅರ್ಥ ಮಾಡಿಕೊಂಡಿರುವ ರೀತಿ ಬೆರಗು ಮೂಡಿಸುತ್ತದೆ ಎನ್ನುತ್ತಾರೆ ಅವರು. ತುಳಸಿ ಗೌಡ ಅವರು ಸುಮಾರು 300 ಬಗೆಯ ವೈದ್ಯಕೀಯ ಗಿಡಗಳನ್ನು ಗುರುತಿಸಬಲ್ಲರು. ಹಾಲಕ್ಕಿ ಒಕ್ಕಲಿಗರು ವೈದ್ಯಕೀಯ ಗಿಡಗಳ ಬಗ್ಗೆ ಅಸಾಧಾರಣ ಜ್ಞಾನ ಹೊಂದಿರುತ್ತಾರೆ. ಅದನ್ನು ಚಿಕಿತ್ಸೆಗಿಂತ ಹೆಚ್ಚಾಗಿ ರೋಗ ಬರದಂತೆ ತಡೆಯಲು ಉಪಯೋಗಿಸುತ್ತಾರೆ. ಇದು ಅವರಿಗೆ ಪರಂಪರಾನುಗತವಾಗಿ ಬಂದ ಜ್ಞಾನ ಎನ್ನುತ್ತಾರೆ.
ಪ್ರಶಸ್ತಿ ಪುರಸ್ಕಾರಗಳ ಹಂಬಲವಿರದ ಇವರಿಗೆ ಸಂದಿರುವ ಪ್ರಶಸ್ತಿಗಳು ಹಲವಾರು. ಇವರಿಗೆ, 1986 ರಲ್ಲಿ ‘ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ’ ಪ್ರಶಸ್ತಿ, 1999 ರಲ್ಲಿ ‘ಕನ್ನಡ ರಾಜ್ಯೋತ್ಸವ’ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಅಜ್ಜಿಯ 83 ನೇ ವರ್ಷದಲ್ಲಿ, 2020 ರಲ್ಲಿ, ರಾಷ್ಟ್ರದ ನಾಲ್ಕನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಆದರೆ, ಈ ಪ್ರಶಸ್ತಿಗಳಾವುದೂ ನೆಲದ ನಂಟಿನ ಈ ಅಜ್ಜಿಯ ಜೀವನವನ್ನು ಒಂದಿನಿತೂ ಬದಲಾಯಿಸಿಲ್ಲ.
‘ನಮಗೆ ಅರಣ್ಯಗಳು ಬೇಕು, ಅರಣ್ಯಗಳಿಲ್ಲದೆ ನೀರಿಲ್ಲ, ಅರಣ್ಯಗಳಿಲ್ಲದಿದ್ದರೆ ಬೆಳೆಗಳಿಲ್ಲ,್ಥರಣ್ಯಗಳು ನಾಶವಾದರೆ ಸೂರ್ಯನ ಶಾಖ ತಡೆಯಲಾರದಷ್ಟು ಏರುತ್ತದೆ, ಕಾಡುಗಳಿದ್ದರೆ ನಾಡು’ ಎಂಬುದು ಇವರ ಮೂಲ ಮಂತ್ರ.
ವಾತಾವರಣದ ಬದಲಾವಣೆಯ ಬಗ್ಗೆ ಭಾಷಣಗಳನ್ನು ಮಾಡುತ್ತಾ ಪ್ರಪಂಚದಾದ್ಯಂತ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಎಚ್ಚರಿಕೆ ನೀಡುತ್ತಿರುವ ಗ್ರೆಟಾ ಥನ್‍ಬರ್ಗ್ ಅವರಿಗಿಂತ ಐವತ್ತು ಅರವತ್ತು ವರ್ಷಗಳಿಗೂ ಮುಂಚೆಯೇ, ವ್ಯಕ್ತಿ ಮಟ್ಟದಲ್ಲಿ ಕೈಗೊಳ್ಳಬಹುದಾದ ಕ್ರಮವನ್ನು ತುಳಸಿ ಗೌಡ ಅವರು ತೆಗೆದುಕೊಂಡಿದ್ದಾರೆ. ಗಮನಕ್ಕೆ ಬಂದದ್ದು ಮಾತ್ರ ತಡವಾಗಿ. ಇವರ ಕೆಲಸ ತಳಮಟ್ಟದಲ್ಲಿ ಸಾವಿರಾರು, ಲಕ್ಷಾಂತರ ಭಾರತೀಯರಿಗೆ ಪ್ರೇರಣೆಯಾಗಬೇಕು. ಹಾಗೆ ಆಗುವ ರೀತಿಯಲ್ಲಿ ತುಳಸಿ ಗೌಡ ಅವರ ಈ ಕಾರ್ಯಕ್ಕೆ ಪ್ರಚಾರ ಸಿಗಬೇಕು.
ಸ್ಥಳೀಯ ಜನರ ಈ ಜ್ಞಾನ ಭಂಡಾರವನ್ನು ಬಳಸಿಕೊಳ್ಳುವ ಮೂಲಕ ಸಂಪನ್ಮೂಲಗಳ ಸಂರಕ್ಷಣೆಯ ಕೌಶಲಗಳನ್ನು ಅಳವಡಿಸಿಕೊಳ್ಳುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ ಮತ್ತು ದೂರಗಾಮೀ ಪರಿಣಾಮವನ್ನು ಹೊಂದಿರುತ್ತದೆ ಎಂಬುದಕ್ಕೆ ತುಳಸಿ ಗೌಡ ಅವರು ಜೀವಂತ ಉದಾಹರಣೆ.
ಡಾ. ಗೀತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.