ಪದ್ಮಪ್ರಭೆ/ ವಿಶಿಷ್ಟ ಕೌಶಲದ ಸೂಲಗಿತ್ತಿ ನರಸಮ್ಮ- ಡಾ. ಗೀತಾ ಕೃಷ್ಣಮೂರ್ತಿ

ಗಳಲ್ಲಿ ದಲ್ಲಿ

ಸುಮಾರು ಎಪ್ಪತ್ತು ವರ್ಷಗಳ ಕಾಲ ಬೆಳಕಿಗೇ ಬಾರದೆ, ತನ್ನ ಪಾಡಿಗೆ ತಾನು, ವೈದ್ಯಕೀಯ ನೆರವೇ ಇಲ್ಲದ ಹಳ್ಳಿಗಾಡುಗಳಲ್ಲಿ, ಹೆಣ್ಣು ಮಕ್ಕಳ ಹೆರಿಗೆ ಮಾಡಿಸಿ, ಎಳೆಯ ಕಂದಮ್ಮಗಳನ್ನು ಸುರಕ್ಷಿತವಾಗಿ ಭೂಮಿಗೆ ತರುವ ಉದಾತ್ತ ಕೈಂಕರ್ಯದಲ್ಲಿ ತೊಡಗಿದ್ದಾಕೆ ಸೂಲಗಿತ್ತಿ ನರಸಮ್ಮ. ಅವರು ತಮ್ಮ ಬಳಿ ಬರುವ ಗುಡ್ಡಗಾಡು ಜನಾಂಗದ ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿ ಹೆರಿಗೆ ಮಾಡಿಸುತ್ತಿದ್ದರು. ಅದಕ್ಕೆ ಪ್ರತಿಫಲವಾಗಿ ಅವರಿಗೆ ತಿಳಿದ, ಗರ್ಭಿಣಿ ಹೆಣ್ಣು ಮಕ್ಕಳಿಗೆ ಕೊಡಬೇಕಾದ, ಮನೆ ಮದ್ದುಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಹೀಗೆ ಪಡೆದ ಜ್ಞಾನ ಅವರಿಗೆ ಸೂಲಗಿತ್ತಿಯ ಕೆಲಸದಲ್ಲಿ ಸಹಾಯಕ್ಕೆ ಬರುತ್ತಿತ್ತು. ಹೆರಿಗೆ ಮಾಡಿಸುವುದರಲ್ಲಿ ಔಪಚಾರಿಕ ತರಬೇತಿ ಪಡೆಯದಿದ್ದರೂ, ನರಸಮ್ಮ ಸೂಲಗಿತ್ತಿಯಾಗಿ ಮಾಡಿಸಿದ ಹೆರಿಗೆಗಳು, ಅವುಗಳ ಸಂಖ್ಯೆ, ಅವುಗಳ ಯಶಸ್ವಿ ಕತೆಗಳು, ಸೂಲಗಿತ್ತಿ ನರಸಮ್ಮನ ಸೇವೆಯ ಮಹತ್ವವನ್ನು ಮನದಟ್ಟು ಮಾಡಿಸುತ್ತವೆ. 2020ರ ಮಾರ್ಚ್ ನಲ್ಲಿ ಅವರಿಗೆ ರಾಷ್ಟ್ರದ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.


ತಾಯಿ ಮಗುವಿನ ಆರೋಗ್ಯಕ್ಕೆ ತೊಂದರೆಯಾಗದಂತೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವುದೊಂದು ವಿಶಿಷ್ಟ ಕೌಶಲ. ಭಾರತ ಗ್ರಾಮಗಳ ದೇಶ. ಸ್ವಾತಂತ್ರ್ಯ ಬಂದು ಏಳು ದಶಕಗಳೇ ಸಂದರೂ, ಆರೋಗ್ಯ ಸೇವೆಯ ಮೂಲ ಸೌಕರ್ಯಗಳು ಎಲ್ಲ ಗ್ರಾಮಗಳಿಗೂ ತಲುಪಿಲ್ಲವೆಂದೇ ಹೇಳಬೇಕು. ಆಧುನಿಕ ವಿಜ್ಞಾನದ ಆರೋಗ್ಯ ಸೇವೆಗಳು ಗ್ರಾಮಗಳಿಗೆ ತಲುಪುವ ಮುನ್ನ, ಜನರ ಆರೋಗ್ಯವನ್ನು ಕಾಪಾಡುತ್ತಿದ್ದುದು ತಲೆಮಾರಿನಿಂದ ತಲೆಮಾರಿಗೆ ಪರಂಪರಾಗತವಾಗಿ ವರ್ಗಾವಣೆಯಾಗುತ್ತಿದ್ದ ಅನುಭವ ಜನ್ಯ ಜ್ಞಾನಭಂಡಾರ. ಹೆರಿಗೆ ಮಾಡಿಸುವುದು ವಿಶಿಷ್ಟ ಕಲೆ. ಆ ಕಲೆಯಲ್ಲಿ ನರಸಮ್ಮ ನುರಿತವರಾಗಿದ್ದರು. ಹೆರಿಗೆ ಮಾಡಿಸುವುದನ್ನು ನೋಡುತ್ತಾ, ತಾನೂ ಮಾಡಿಸುತ್ತಾ, ಜೊತೆಯಲ್ಲಿ ಪ್ರಸೂತಿ ಕಲೆಗೆ ತಳುಕು ಹಾಕಿಕೊಂಡಿರುವ ಸೂಕ್ಷ್ಮತೆಗಳನ್ನು ಮೈಗೂಡಿಸಿಕೊಳ್ಳತ್ತಾ, ಪರಿಣತಿಯನ್ನು ಪಡೆಯುತ್ತಾ ಬೆಳೆದವರು ನರಸಮ್ಮ.

ನರಸಮ್ಮ, ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿಮ್ಮನಾಯಕಪೇಟೆ ಗ್ರಾಮದವರು. ಅಲೆಮಾರಿ ಜನಾಂಗದ ಕದಿರಪ್ಪ ಮತ್ತು ಬಾವಮ್ಮನವರ ಏಳು ಮಕ್ಕಳಲ್ಲಿ ಎರಡನೆಯವರು. ಕೃಷ್ಣಾಪುರದ ಅಂಜಿನಪ್ಪ ಅವರೊಂದಿಗೆ ಅವರ ವಿವಾಹವಾದಾಗ ಅವರಿಗೆ ಕೇವಲ ಹನ್ನೆರಡು ವರ್ಷ. ನರಸಮ್ಮ ಹುಟ್ಟುವಾಗ ಹೆರಿಗೆ ಮಾಡಿಸಿದ ನರಸಮ್ಮನ ಅಜ್ಜಿ, ತಾಯಿ ತಾಯಿ, ಮರಿಗೆಮ್ಮ ಅವರೇ ನರಸಮ್ಮ ಅವರ ಗುರು. ಹನ್ನೆರಡು ಮಕ್ಕಳು, ಮೂವತ್ತಾರು ಮೊಮ್ಮಕ್ಕಳು, ಮರಿಮೊಮ್ಮಕ್ಕಳ ತುಂಬು ಕುಟುಂಬ ಅವರದು.

ನರಸಮ್ಮ ಅವರು 20 ವರ್ಷದವರಿದ್ದಾಗಲೇ, ಅಜ್ಜಿಯ ಮಾರ್ಗದರ್ಶನದಲ್ಲಿ ಮೊದಲ ಹೆರಿಗೆ ಮಾಡಿಸಿದರಂತೆ! ಅಂದಿನಿಂದ, ದಣಿವರಿಯದೆ, ಉಚಿತವಾಗಿ, ಅವರ ಸಹಾಯ ಕೋರಿ ಬರುವ ಹೆಣ್ಣು ಮಕ್ಕಳಿಗೆ ಹೆರಿಗೆ ಮಾಡಿಸುತ್ತಿದ್ದಾರೆ. ಅವರ ಕುಟುಂಬದ ಸದಸ್ಯರು ಹೇಳುವಂತೆ, ನರಸಮ್ಮ ಅವರು ತಮ್ಮ ಬಳಿ ಬರುವ ಗುಡ್ಡಗಾಡು ಜನಾಂಗದ ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿ ಹೆರಿಗೆ ಮಾಡಿಸುತ್ತಿದ್ದರು. ಅದಕ್ಕೆ ಪ್ರತಿಫಲವಾಗಿ ಅವರಿಗೆ ತಿಳಿದ, ಗರ್ಭಿಣಿ ಹೆಣ್ಣು ಮಕ್ಕಳಿಗೆ ಕೊಡಬೇಕಾದ, ಮನೆ ಮದ್ದುಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಹೀಗೆ ಪಡೆದ ಜ್ಞಾನ ಅವರಿಗೆ ಸೂಲಗಿತ್ತಿಯ ಕೆಲಸದಲ್ಲಿ ಸಹಾಯಕ್ಕೆ ಬರುತ್ತಿತ್ತು. ಅವರು ಅನುಭವದಿಂದಲೇ ಹೊಟ್ಟೆಯಲ್ಲಿರುವ ಶಿಶುವಿನ ನಾಡಿಯನ್ನು ಮತ್ತು ಮಗುವಿನ ತಲೆ ಸರಿಯಾದ ದಿಕ್ಕಿಗೆ ತಿರುಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಬಲ್ಲವರಾಗಿದ್ದರಂತೆ. ಅವರು ಮಾಡಿಸಿದ ಹೆರಿಗೆಗಳ ಸಂಖ್ಯೆ ಸುಮಾರು 15,000 ಎನ್ನುತ್ತಾರೆ. ತಾವು ಮಾಡಿಸಿದ ಎಲ್ಲ ಹೆರಿಗೆಗಳೂ ಯಶಸ್ವಿಯಾಗಿವೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಮಹತ್ವದ ಸೇವೆ

ಅನೇಕ ಗ್ರಾಮಗಳಲ್ಲಿ ಸೂಕ್ತ ಆರೋಗ್ಯ ಕೇಂದ್ರಗಳ, ವೈದ್ಯರ ಹಾಗೂ ತರಬೇತಿ ಹೊಂದಿದ ಹೆರಿಗೆ ಸಹಾಯಕರ ಕೊರತೆ ಇದೆ. ಈ ಎಲ್ಲ ಸೌಕರ್ಯಗಳೂ ಇರುವ ಸ್ಥಳ ಸಮೀಪದಲ್ಲಿಯೇ ಇದ್ದರೂ ಅದನ್ನು ತಲುಪಲು ಸೂಕ್ತ ರಸ್ತೆಗಳ ಕೊರತೆ ಇರುವ ಗ್ರಾಮಗಳಿವೆ. ಇವೆಲ್ಲ ಇದ್ದರೂ ಗ್ರಾಮದ ಬಹುತೇಕರಲ್ಲಿ ಕಂಗೆಡಿಸುವಷ್ಟು ಅರಿವಿನ ಕೊರತೆ ಇದೆ. ಹೀಗಾಗಿ, ನವಜಾತ ಶಿಶುಗಳ ಮರಣ ಸಂಖ್ಯೆ ಹೆಚ್ಚಿತ್ತು. ಹೆರಿಗೆಯಾದ ನಂತರದಲ್ಲಿ ತಾಯಂದಿರ ಪ್ರಾಣ, ಅರಿವಿನ ಕೊರತೆ ಹಾಗೂ ವೈದ್ಯಕೀಯ ನೆರವು ಕೂಡಲೇ ದೊರೆಯದ ಕಾರಣದಿಂದಾಗಿ ಅಪಾಯದಲ್ಲಿರುತ್ತಿತ್ತು. ಅಂಥ ಒಂದು ಕಾಲಮಾನದಲ್ಲಿ, ಹೆರಿಗೆ ಮಾಡಿಸುವುದರಲ್ಲಿ ಔಪಚಾರಿಕ ತರಬೇತಿ ಪಡೆಯದಿದ್ದರೂ, ನರಸಮ್ಮ ಸೂಲಗಿತ್ತಿಯಾಗಿ ಮಾಡಿಸಿದ ಹೆರಿಗೆಗಳು, ಅವುಗಳ ಸಂಖ್ಯೆ, ಅವುಗಳ ಯಶಸ್ವಿ ಕತೆಗಳು, ಸೂಲಗಿತ್ತಿ ನರಸಮ್ಮನ ಸೇವೆಯ ಮಹತ್ವವನ್ನು ಮನದಟ್ಟು ಮಾಡಿಸುತ್ತವೆ.

2007 ರ ವರೆಗೆ ನರಸಮ್ಮನ ಈ ಸೇವೆ ತೆರೆಮರೆಯಲ್ಲಿಯೇ ಇತ್ತು. ಒಮ್ಮೆ, ಹೆಂಡತಿಯನ್ನು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಿದ ಮಗನನ್ನು ಗದರುತ್ತಿದ್ದ ನರಸಮ್ಮ ಲೇಖಕಿಯರಾದ ಅನ್ನಪೂರ್ಣ ವೆಂಕಟನಂಜಪ್ಪ ಹಾಗೂ ಬಾ.ಹ. ರಮಾಕುಮಾರಿ ಅವರು ಗಮನಿಸಿ ಆಸಕ್ತಿವಹಿಸಿ ವಿಚಾರಿಸಿದರು. ಅಲ್ಲಿಂದ ಸೂಲಗಿತ್ತಿ ನರಸಮ್ಮ ಎಂಬ ಹೆಸರು ಸುರಕ್ಷಿತ ಹೆರಿಗೆಗೆ ಪರ್ಯಾಯ ಪದವಾಗುವಷ್ಟರ ಮಟ್ಟಿಗೆ ಅವರು ಚಿರಪರಿಚಿತರಾದರು. ಈ ಇಬ್ಬರು ಲೇಖಕಿಯರು ನರಸಮ್ಮ ಅವರ ಕಾರ್ಯದ ಮಹತ್ವವನ್ನು ಅರಿತು ಅವರ ಹೆಸರನ್ನು ಜಿಲ್ಲಾ ಮಟ್ಟದ ಮಹಿಳಾ ಸಾಧಕಿ ಪ್ರಶಸ್ತಿಗೆ ಶಿಫಾರಸು ಮಾಡಿದರು. ಅಲ್ಲಿಂದ ಮುಂದೆ ಅವರಿಗೆ ಅನೇಕ ಪ್ರಶಸ್ತಿಗಳು ಬಂದವು.

2012 ರಲ್ಲಿ ಕರ್ನಾಟಕ ಸರ್ಕಾರ ಡಿ.ದೇವರಾಜ ಅರಸು ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅದರ ನಂತರದ ವರ್ಷದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾದರು. ಭಾರತ ಸರ್ಕಾರದಿಂದ ‘ವಯೋಶ್ರೇಷ್ಠ ಸಮ್ಮಾನ’ ದೊರೆಯಿತು. 2014 ರಲ್ಲಿ ತುಮಕೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. 2020ರ ಮಾರ್ಚ್ ನಲ್ಲಿ ಅವರಿಗೆ ರಾಷ್ಟ್ರದ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇಂಥ ಸ್ವಾರ್ಥರಹಿತ ಸೇವೆಗೆ ನೀಡಿದ ಸಮ್ಮಾನಗಳು ಅವುಗಳ ಶ್ರೇಷ್ಠತೆಯನ್ನು ಹೆಚ್ಚಿಸಿಕೊಂಡವು! 2018 ರ ಡಿಸೆಂಬರ್ 25 ರಂದು, ತಮ್ಮ 98 ನೇ ವರ್ಷದಲ್ಲಿ, ಅವರು ತಮ್ಮ ಸಾರ್ಥಕ ಜೀವನಕ್ಕೆ ವಿದಾಯ ಹೇಳಿದರು.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಪದ್ಮಪ್ರಭೆ/ ವಿಶಿಷ್ಟ ಕೌಶಲದ ಸೂಲಗಿತ್ತಿ ನರಸಮ್ಮ- ಡಾ. ಗೀತಾ ಕೃಷ್ಣಮೂರ್ತಿ

Leave a Reply

Your email address will not be published. Required fields are marked *