ಪದ್ಮಪ್ರಭೆ/ ಮಿದುಳಿಗೆ ಮಾರ್ಗದರ್ಶಕಿ ಡಾ. ವಿಜಯಲಕ್ಷ್ಮಿ ರವೀಂದ್ರನಾಥ್- ಡಾ. ಗೀತಾ ಕೃಷ್ಣಮೂರ್ತಿ

ಮಿದುಳಿಗೆ ಸಂಬಂಧಿಸಿದ ಸಂಶೋಧನಾ ಸಂಸ್ಥೆಯನ್ನು ಕಟ್ಟಿ, ಬೆಳೆಸಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ‘ಶ್ರೇಷ್ಠತೆಯ ಕೇಂದ್ರ’ದ ಮಾನ್ಯತೆ ದೊರೆಕಿಸಿಕೊಟ್ಟ, ಡಾ. ವಿಜಯಲಕ್ಷ್ಮಿ ರವೀಂದ್ರನಾಥ್ ಅವರ ಸಂಶೋಧನಾ ಪ್ರತಿಭೆ, ದೂರದೃಷ್ಟಿ, ವಿಶಿಷ್ಟ ನಾಯಕತ್ವಗಳನ್ನು ಮನ್ನಣೆ ಮಾಡಿದ ಭಾರತ ಸರ್ಕಾರ 2010 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನಿತ್ತು ಗೌರವಿಸಿತು. ಮಿದುಳನ್ನು ಹಿಂದಿನ ಆರೋಗ್ಯ ಸ್ಥಿತಿಗೆ ತರುವ ದಿಕ್ಕಿನಲ್ಲಿ ಸಂಶೋಧನೆ ಪ್ರಯತ್ನಗಳ ಬೆನ್ನೆಲುಬಾಗಿರುವ ಡಾ.ವಿಜಯಲಕ್ಷ್ಮಿ ಅವರು ತಮ್ಮ ಸಂಶೋಧನೆಯ ವೃತ್ತಿ ಜೀವನದಲ್ಲಿ ಇದುವರೆವಿಗೂ 199 ಸಂಶೋಧನಾ ಲೇಖನಗಳನ್ನು ಪ್ರತಿಷ್ಟಿತ ಜರ್ನಲ್‍ಗಳಲ್ಲಿ ಪ್ರಕಟಿಸಿದ್ದಾರೆ. ಅವರ ಸಂಶೋಧನೆಯ ಫಲಿತಾಂಶಗಳನ್ನು ವಿವಿಧ ಪ್ರಕಟಣೆಗಳಲ್ಲಿ 5012 ಬಾರಿ ಉದ್ಧರಿಸಲಾಗಿದೆ.

1995 ನೆಯ ವರ್ಷ. ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಹೊಸ ಯೋಜನೆಯೊಂದರ ಬಗ್ಗೆ ಚಿಂತನೆ ಪ್ರಾರಂಭಿಸಿತ್ತು. ನಮ್ಮ ದೇಶದ ಹಲವಾರು ಪ್ರತಿಷ್ಠಿತ ವೈಜ್ಞಾನಿಕ ಸಂಶೋಧನಾಲಯಗಳಲ್ಲಿ ಮಿದುಳಿಗೆ ಸಂಬಂಧಪಟ್ಟಂತೆ ನಡೆಯುತ್ತಿದ್ದ ವಿವಿಧ ಸ್ವರೂಪದ ಸಂಶೋಧನೆಗಳನ್ನು ಒಂದೇ ಸೂರಿನೆಡೆಯಲ್ಲಿ ತಂದು, ಸಂಶೋಧಕರ ನಡುವೆ ಸಹಕಾರ, ಸಹಯೋಗಗಳನ್ನು ತರುವುದು ಈ ಯೋಜನೆಯ ಉದ್ದೇಶವಾಗಿತ್ತು. ಅದಕ್ಕಾಗಿ ‘ ನ್ಯಾಷನಲ್ ಬ್ರೈನ್ ರಿಸರ್ಚ್ ಸೆಂಟರ್’ ಎಂಬ ಶೃಂಗ ಸಂಸ್ಥೆಯ ರೂಪು ರೇಷೆಗಳು ಸಿದ್ಧಗೊಳ್ಳುತ್ತಿದ್ದವು. 1997 ರ ನವೆಂಬರ್ ನಲ್ಲಿ ಅಂತಹ ಸಂಸ್ಥೆ ಹೆಸರಿನ ಮಟ್ಟಿಗೆ ಅಸ್ತಿತ್ವಕ್ಕೂ ಬಂದಿತು. ಆದರೆ ಸರ್ಕಾರದ ಮುಂದಿದ್ದ ಅತಿ ಮುಖ್ಯ ಸವಾಲೆಂದರೆ ಅಂತಹ ವಿಶಿಷ್ಟ ಕಲ್ಪನೆಯ, ರಾಷ್ಟ್ರಮಟ್ಟದ, ಸಂಶೋಧನಾ ಸಂಸ್ಥೆಯನ್ನು ಬುಡಮಟ್ಟದಿಂದ ಕಟ್ಟಿ ಬೆಳಸಬಲ್ಲ ದೂರದೃಷ್ಟಿ, ಸಾಮರ್ಥ್ಯ, ಪ್ರತಿಭೆಗಳಿರುವ ವಿಜ್ಞಾನಿಯನ್ನು ಹುಡುಕಿ ಕರೆತರುವುದು.

ಹಲವಾರು ತಿಂಗಳ ನಿರಂತರ ಪ್ರಯತ್ನದ ನಂತರ, ಕಟ್ಟಕಡೆಗೆ ಸರ್ಕಾರ ಆಯ್ಕೆಮಾಡಿದ್ದು, ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್ ) ಪ್ರಾಧ್ಯಾಪಕರಾಗಿದ್ದ ಡಾ. ವಿಜಯಲಕ್ಷ್ಮಿ ರವೀಂದ್ರನಾಥ್ ಅವರನ್ನು. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವ್ಯಾಪ್ತಿಯಲ್ಲಿದ್ದ 65 ಸಂಶೋಧನಾ ಸಂಸ್ಥೆಗಳಲ್ಲಿ, ದೇಶದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಮಹಿಳಾ ವಿಜ್ಞಾನಿಯೊಬ್ಬರು, ಸಂಶೋಧನಾ ಸಂಸ್ಥೆಯನ್ನು ಕಟ್ಟುವ, ಸಂಸ್ಥಾಪಕ ನಿರ್ದೇಶಕರ, ಅಸಾಧಾರಣ ಸವಾಲಿನ ಜವಾಬ್ದಾರಿಗೆ ಆಯ್ಕೆಯಾಗಿದ್ದರು.

1953 ರ ಅಕ್ಟೋಬರ್ ನಲ್ಲಿ ಚೆನ್ನೈನಲ್ಲಿ ಜನಿಸಿದ ಡಾ. ವಿಜಯಲಕ್ಷ್ಮಿ ರವೀಂದ್ರನಾಥ್, ಆಂಧ್ರ ವಿಶ್ವವಿದ್ಯಾಲಯದಿಂದ ಆರ್ಗಾನಿಕ್ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮೈಸೂರಿನ ಸಿ.ಎಫ್.ಟಿ.ಆರ್.ಐ. ಸಂಸ್ಥೆಯಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಅಲ್ಲಿ ಕೆಲಸಮಾಡುತ್ತಿರುವಾಗಲೇ, ಜೈವಿಕ ಮಹತ್ವವಿರುವ ರಸಾಯನ ವಿಜ್ಞಾನ ಕ್ಷೇತ್ರದ ಸಮಸ್ಯೆಯನ್ನು ಆಯ್ಕೆಮಾಡಿಕೊಂಡು, ಮೈಸೂರು ವಿಶ್ವವಿದ್ಯಾಲಯದಿಂದ 1981 ರಲ್ಲಿ ಪಿಎಚ್‍.ಡಿ ಪದವಿ ಪಡೆದರು. ಅಲ್ಲಿಂದ ಮುಂದೆ ಅಮೆರಿಕದ ನ್ಯಾಷನಲ್ ಕ್ಯಾನ್ಸರ್ ಇನ್ಸಿಟಿಟ್ಯೂಟ್‍ನಲ್ಲಿ ಆಳವಾದ ಸಂಶೋಧನೆಯ ಅನುಭವ ಪಡೆದು, ಭಾರತಕ್ಕೆ ಹಿಂದಿರುಗಿ, ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯಲ್ಲಿ ಸಹ ಪ್ರಾಧ್ಯಾಪಕರಾಗಿ ಬೋಧನೆ, ಸಂಶೋಧನೆಗಳನ್ನು ಮುಂದುವರೆಸಿದರು. ಮಿದುಳಿಗೆ ಸಂಭಂದಿಸಿದ, ಅದರಲ್ಲೂ ಮುಖ್ಯವಾಗಿ ಅಲ್ಜೀಮರ್ ಮತ್ತು ಪಾರ್ಕಿನ್ಸನ್ ಕಾಯಿಲೆಗಳು ಅವರ ತೀವ್ರ ಆಸಕ್ತಿ, ಅಧ್ಯಯನಗಳ ವಿಷಯವಾಗಿತ್ತು. 1996 ರಲ್ಲಿ, ಭಾರತ ಸರ್ಕಾರದ, ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿ ( ಕೌನ್ನಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್) ನೀಡುವ, ದೇಶದ ಅತ್ಯನ್ನುತ ಶಾಂತಿ ಸ್ವರೂಪ್ ಭಾಟ್‍ನಗರ್ ಪ್ರಶಸ್ತಿ, ಮಿದುಳಿಗೆ ಸಂಬಂಧಿಸಿದ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿನ ಅನುಪಮ ಕೊಡುಗೆಗಾಗಿ ಡಾ.ವಿಜಯಲಕ್ಷ್ಮಿ ಅವರಿಗೆ ದೊರೆಯಿತು.

ಭಾರತ ಸರ್ಕಾರದ ಆಹ್ವಾನದ ಮೇರೆಗೆ, 1999 ರಲ್ಲಿ ಹರಿಯಾಣದ ಗುರುಗಾವ್ ಸಮೀಪದ ಮನೇಸರದಲ್ಲಿ, ನ್ಯಾಷನಲ್ ಬ್ರೈನ್ ರಿಸರ್ಚ್ ಸೆಂಟರ್ ಸಂಸ್ಥಾಪಕ ನಿರ್ದೇಶಕರಾಗಿ ಡಾ. ವಿಜಯಲಕ್ಷ್ಮಿ ರವೀಂದ್ರನಾಥ್ ಅವರು ಅಧಿಕಾರ ವಹಿಸಿಕೊಂಡರು. ಅವರ ಮುಂದೆ ಎರಡು ಮುಖ್ಯವಾದ ಸವಾಲುಗಳಿದ್ದವು. ಮೊದಲನೆಯದು ಆಡಳಿತಾತ್ಮಕವಾದದ್ದು. ಸಂಸ್ಥೆಗೆ ಅಗತ್ಯವಾದ ಕಟ್ಟಡ, ಪ್ರಯೋಗಾಲಯಗಳು, ಆಧುನಿಕ ಉಪಕರಣಗಳು ಮುಂತಾದವುಗಳನ್ನು ಸಿದ್ಧಗೊಳಿಸುವುದು. ಎರಡನೆಯದು, ಅದಕ್ಕಿಂತ ಮುಖ್ಯವಾಗಿ ಆ ಸಂಸ್ಥೆಯನ್ನು ವಿಶಿಷ್ಟವಾದ ರಾಷ್ಟ್ರೀಯ ಸಂಶೋಧನಾ ಕೇಂದ್ರವನ್ನಾಗಿ ರೂಪಿಸುವ ಪ್ರತಿಭೆ, ಸಾಮಥ್ರ್ಯಗಳಿರುವ ವಿಜ್ಞಾನಿಗಳನ್ನು ಹುಡುಕಿ ಕರೆತರುವುದು. ಮಿದುಳಿನಂತಹ ಸಂಕೀರ್ಣವಾದ ಜೈವಿಕ ವ್ಯವಸ್ಥೆಯನ್ನು, ಅತ್ಯಂತ ನಿಖರವಾದ ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನಗಳ ನೆರವಿಲ್ಲದೇ ಅಧ್ಯಯನ ಮಾಡುವುದು ಸಾಧ್ಯವೇ ಇಲ್ಲವೆಂಬುದು ಅವರಿಗೆ ತಿಳಿದಿತ್ತು. ಈ ಎರಡೂ ಜವಾಬ್ದಾರಿಗಳನ್ನು ಅವರು ಸಮರ್ಥವಾಗಿ ನಿರ್ವಹಿಸಿದರು.

ಸಂಶೋಧನೆಗೆ ಪೂರ್ವಭಾವಿಯಾಗಿ ಅಗತ್ಯವಾದ ಶಿಕ್ಷಣವನ್ನು ನೀಡಲು ಹಲವಾರು ಸಂಬಂಧಿತ ಕೋರ್ಸ್‍ಗಳನ್ನೂ ಅವರು ಪ್ರಾರಂಭಿಸಿದರು. ಆದರೆ ಶೈಕ್ಷಣಿಕ ಸಂಸ್ಥೆಯಾಗಿ ಈ ಕೇಂದ್ರಕ್ಕೆ ವಿಶ್ವವಿದ್ಯಾಲಯದ ಅಫಿಲಿಯೇಶನ್ ದೊರೆಯಲಿಲ್ಲ. ಡಾ. ವಿಜಯಲಕ್ಷ್ಮಿ ಅವರ ನಿರಂತರ ಪ್ರಯತ್ನದಿಂದಾಗಿ, 2002 ರಲ್ಲಿ ಈ ಕೇಂದ್ರಕ್ಕೆ ಸ್ವತಂತ್ರ ವಿಶ್ವವಿದ್ಯಾಲಯದ ಸ್ಥಾನ ದೊರೆಯಿತು. ಅದಾದ ನಂತರ ಪದವಿಯ ಹಂತದಲ್ಲಿ ಗಣಿತ, ಕಂಪ್ಯೂಟರ್ ವಿಜ್ಞಾನ, ಇಂಜಿನಿಯರಿಂಗ್, ಜೀವ ವಿಜ್ಞಾನ, ರೇಡಿಯಾಲಜಿ ಮುಂತಾದ ವಿವಿಧ ವಿಷಯಗಳ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ, ಶಿಕ್ಷಣದ ನಂತರ ಅವರಿಗೆ ‘ನ್ಯೂರೋ ಸೈನ್ಸಸ್’ ವಿಷಯದಲ್ಲಿ ಸ್ನಾತಕೋತ್ತರ ಪದವಿ ನೀಡುವ ಕಾರ್ಯಕ್ರಮ ಪ್ರಾರಂಭವಾಯಿತು. ಮಿದುಳಿನಂತಹ ಸಂಕೀರ್ಣ ಜೈವಿಕ ವ್ಯವಸ್ಥೆಯನ್ನು ಬಹುಶಿಸ್ತೀಯ ಮಾರ್ಗಗಳಿಂದ ಅಧ್ಯಯನ ಮಾಡುವ ಹೊಸ ಪರಿಪಾಠ ಮೊದಲಾಯಿತು. ಈ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಪಡೆದ ಅನೇಕ ವಿದ್ಯಾರ್ಥಿಗಳು ವಿದೇಶಗಳಲ್ಲಿ ಹೆಚ್ಚಿನ ವ್ಯಾಸಂಗ ಮುಗಿಸಿ, ಸಂಶೋಧನೆಯಲ್ಲಿ ಅನುಭವ ಪಡೆದು, ಮತ್ತೆ ಇದೇ ಸಂಸ್ಥೆಗೆ ಹಿಂದಿರುಗಿ ಬಂದು ಸಂಶೋಧನೆಯಲ್ಲಿ ತೊಡಗಿದ್ದಾರೆ. ಮೂಲಭೂತ ನ್ಯೂರೋಸೈನ್ಸಸ್ ಕ್ಷೇತ್ರದಲ್ಲಿ, 2006 ರಿಂದ 2010 ರ ಅವಧಿಯಲ್ಲಿ, ಸತತವಾಗಿ ನಾಲ್ಕು ವರ್ಷಗಳ ಕಾಲ ಅತಿ ಹೆಚ್ಚಿನ ಸಂಶೋಧನಾ ಲೇಖನಗಳನ್ನು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಜರ್ನಲ್‍ಗಳಲ್ಲಿ ಪ್ರಕಟಿಸಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ. ಇದರೊಂದಿಗೆ ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್, ಕೆನಡಾ ಮತ್ತು ನೆದರ್ ಲ್ಯಾಂಡ್ ಪ್ರತಿಷ್ಠಿತ ನ್ಯೂರೋ ಸೈನ್ಸಸ್ ಸಂಶೋಧನಾ ಸಂಸ್ಥೆಗಳೊಂದಿಗೆ ಅನೇಕ ಸಂಶೋಧನಾ ಯೋಜನೆಗಳಲ್ಲಿ ಈ ಸಂಸ್ಥೆ ಸಹಭಾಗಿಯಾಗಿ ಕೆಲಸಮಾಡಿದೆ.

ಈ ಎಲ್ಲ ಸಾಧನೆಗಳ ಫಲವಾಗಿ ಇಂದು ‘ನ್ಯಾಷನಲ್ ಬ್ರೈನ್ ರಿಸರ್ಚ್ ಸೆಂಟರ್’ ಗೆ ರಾಷ್ಟ್ರೀಯ, ಅಂತಾರಾಷ್ಟ್ರಿಯ ಮಟ್ಟದಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್’ ಕೇಂದ್ರವೆಂಬ ಮಾನ್ಯತೆ ದೊರೆತಿದೆ. 2003 ರ ಡಿಸೆಂಬರ್ ಅಂತ್ಯದಲ್ಲಿ ಈ ಕೇಂದ್ರವನ್ನು ದೇಶಕ್ಕೆ ಸಮರ್ಪಿಸುವ ಸಂದರ್ಭದಲ್ಲಿ, ಅಂದಿನ ರಾಷ್ಟ್ರಾಧ್ಯಕ್ಷ ಡಾ.ಅಬ್ದುಲ್ ಕಲಾಮ್ ಅವರು, ಡಾ. ವಿಜಯಲಕ್ಷ್ಮಿ ರವೀಂದ್ರನಾಥ್ ಅವರ ಬಗ್ಗೆ ಅತೀವ ಮೆಚ್ಚುಗೆಯ ಮಾತುಗಳನ್ನಾಡಿದುದು ಅತಿಶಯೋಕ್ತಿ ಅಲ್ಲವೆನಿಸುತ್ತದೆ. ಮಿದುಳಿಗೆ ಸಂಬಂಧಿಸಿದ ಸಂಶೋಧನಾ ಸಂಸ್ಥೆಯನ್ನು ಕಟ್ಟಿ, ಬೆಳೆಸಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ‘ಶ್ರೇಷ್ಠತೆಯ ಕೇಂದ್ರ’ದ ಮಾನ್ಯತೆ ದೊರೆಕಿಸಿಕೊಟ್ಟ, ಡಾ.ವಿಜಯಲಕ್ಷ್ಮಿ ಅವರ ಸಂಶೋಧನಾ ಪ್ರತಿಭೆ, ದೂರದೃಷ್ಟಿ, ವಿಶಿಷ್ಟ ನಾಯಕತ್ವಗಳನ್ನು ಮನ್ನಣೆ ಮಾಡಿದ ಭಾರತ ಸರ್ಕಾರ 2010 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನಿತ್ತು ಗೌರವಿಸಿತು.

ಹೊಸ ಸವಾಲು! : 1999-2009 ರ ಹತ್ತು ವರ್ಷಗಳ ಅವಧಿಯಲ್ಲಿ ನ್ಯಾಷನಲ್ ಬ್ರೈನ್ ಸೆಂಟರ್‍ನ ಬೆಳವಣಿಗೆ ಮತ್ತು ಸಾಧನೆಗಳು ಡಾ. ವಿಜಯಲಕ್ಷ್ಮಿ ಅವರಿಗೆ ಹೆಮ್ಮೆ, ತೃಪ್ತಿಗಳನ್ನು ತಂದಿತ್ತು ನಿಜ. ಆದರೆ ಸಂಸ್ಥೆಯನ್ನು ಕಟ್ಟುವ ಭರದಲ್ಲಿ, ವೈಯಕ್ತಿಕವಾಗಿ ತಮ್ಮ ಸಂಶೋಧನೆಗಳು ಕುಂಟುತ್ತ ನಡೆಯುತ್ತಿದ್ದ ಬಗ್ಗೆ ಅವರಿಗೆ ಕೊರಗಿತ್ತು. ಈ ಬಗ್ಗೆ ಹಲವಾರು ಬಾರಿ ಗಂಭೀರವಾಗಿ ಚಿಂತಿಸಿದ್ದ ಅವರು ಕಡೆಗೊಮ್ಮೆ ಸಂಸ್ಥೆಯಿಂದ ಹೊರಗೆ ಬಂದು ತಮ್ಮ ಸಂಶೋಧನೆಗಳನ್ನು ಮುಂದುವರೆಸುವ ಕಠಿಣ ನಿರ್ಧಾರವನ್ನು ಕೈಗೊಂಡರು. ಮುಂದಿನ ದಾರಿಯ ಬಗ್ಗೆ ಚಿಂತಿಸುತ್ತಿರುವಾಗಲೇ, ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಅಂದಿನ ನಿರ್ದೇಶಕ ಡಾ.ಪಿ. ಬಲರಾಮ್ ಅವರಿಂದ ಅನಿರೀಕ್ಷಿತ ಆಹ್ವಾನವೊಂದು ಬಂದಿತು. ಭಾರತೀಯ ವಿಜ್ಞಾನ ಮಂದಿರದಲ್ಲಿ ನ್ಯೂರೋಸೈನ್ಸಸ್ ಕೇಂದ್ರವೊಂದನ್ನು ಸ್ಥಾಪಿಸುವ ಯೋಚನೆಯಿದ್ದು, ಅದರ ನಾಯಕತ್ವವನ್ನು ವಹಿಸುವಂತೆ ಡಾ. ಬಲರಾಮ್ ಅವರು ಕೇಳಿದ್ದರು. ಡಾ. ವಿಜಯಲಕ್ಷ್ಮಿ ಅವರ ಮುಂದೆ ಮತ್ತೊಂದು ಹೊಸ ಸಂಸ್ಥೆಯನ್ನು ಕಟ್ಟುವ ಹೊಸ ಸವಾಲು! ಆದರೆ ಇಲ್ಲಿ ಮೊದಲಿನಿಂದ ಹೊಸ ಕೇಂದ್ರವನ್ನು ಕಟ್ಟ ಬೇಕಿರಲಿಲ್ಲ. ಜಗದ್ವಿಖ್ಯಾತವಾದ ಭಾರತೀಯ ವಿಜ್ಞಾನ ಮಂದಿರದಲ್ಲಿ ನರವಿಜ್ಞಾನಗಳ ಅಧ್ಯಯನ, ಸಂಶೋಧನೆಗಳಿಗೆ ಅಗತ್ಯವಾದ ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನಗಳ ಬಲಿಷ್ಠ ವಿಭಾಗಳಿದ್ದವು. ತಮ್ಮ ಸಂಶೋಧನೆಗಳಿಗೆ ಸಾಕಷ್ಟು ಸಮಯ, ಅವಕಾಶಗಳು ದೊರೆಯುವುದನ್ನು ಖಚಿತಪಡಿಸಿಕೊಂಡ ಡಾ. ವಿಜಯಲಕ್ಷ್ಮಿ ಅವರು ಉತ್ಸಾಹದಿಂದ ಪ್ರಾಧ್ಯಾಪಕರಾಗಿ ಹೊಸ ಸವಾಲನ್ನು ಸ್ವೀಕರಿಸಿದರು.

ಮಿದುಳಿನ ರಚನೆ ಮತ್ತು ಕೆಲಸ ಕಾರ್ಯಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಆಧುನಿಕ ವಿಜ್ಞಾನದ ಮುಂದಿರುವ ಬಹು ದೊಡ್ಡ ಸವಾಲು. ಭಾರತವೂ ಸೇರಿದಂತೆ, ಅಭಿವೃದ್ಧಿಶೀಲ ದೇಶಗಳಲ್ಲಿ ಕುಟುಂಬ, ಸಮಾಜಗಳಿಗೆ ಹೊರೆಯಾಗಿರುವ ಮಿದುಳಿನ ಕಾಯಿಲೆಗಳಿಗೆ ಕಾರಣಗಳನ್ನು ಗುರುತಿಸಿ, ಚಿಕಿತ್ಸೆ ನೀಡಿ, ಗುಣ ಪಡಿಸಬೇಕಾದರೆ ಮಿದುಳಿನ ರಚನೆ, ಕೆಲಸ ಕಾರ್ಯಗಳನ್ನು ಆರೋಗ್ಯ, ಅನಾರೋಗ್ಯ-ಎರಡೂ ಪರಿಸ್ಥಿತಿಗಳಲ್ಲಿ ಅಧ್ಯಯನ ಮಾಡಬೇಕಿತ್ತು. ಮಿದುಳನ್ನು ಅಣುಗಳ, ಜೀವಕೋಶಗಳ ಹಂತದಲ್ಲಿ ಅಧ್ಯಯನಮಾಡುವುದರ ಜೊತೆಗೆ, ಒಂದು ವ್ಯವಸ್ಥೆಯಾಗಿ ಪರಿಶೀಲಿಸುವ ಸಂಶೋಧನೆಗಳು ಪ್ರಾರಂಭವಾದವು. ಸಾಮಾನ್ಯ ವಿಷಯ, ಘಟನೆಗಳನ್ನು ಅತಿ ಶೀಘ್ರವಾಗಿ ಮರೆಯುವ, ನಿತ್ಯ ಜೀವನದಲ್ಲಿ ಅಸಹಜವಾಗಿ ವರ್ತಿಸುವ, ಮಾತು, ಚಿಂತನೆ, ಕೆಲಸಗಳಲ್ಲಿ ಗೋಜು-ಗೊಂದಲಗಳು ಎದ್ದು ಕಾಣುವ ಅಲ್ಜೀಮರ್ ಕಾಯಿಲೆ. ಕೇಂದ್ರ ನರಮಂಡಲ ನಿಯಂತ್ರಿತ ಚಟುವಟಿಕೆಗಳೆಲ್ಲವುಗಳಲ್ಲಿ ತೋರುವ ಕ್ಷೀಣತೆ, ಕಲಿಕೆ ಸಾಮಥ್ರ್ಯ, ಸ್ಮರಣ ಶಕ್ತಿ ಮುಂತಾದವುಗಳು ಕುಂದುವ ಡಿಮೆನ್ಷಿಯಾ, ಶರೀರದ ಸ್ನಾಯುಗಳು ನಮ್ಯತೆ ಕಳೆದುಕೊಂಡು, ಮುಖ ಗಡಸು ಭಾವ ತಳೆದು, ಕೈಗಳು ಅದುರ ತೊಡಗುವ ಪಾರ್ಕಿನ್ಸನ್ ರೋಗ ಮುಂತಾದವುಗಳನ್ನು ವಿವಿಧ ಮಾರ್ಗಗಳಿಂದ ಅರ್ಥಮಾಡಿಕೊಂಡು ಅವುಗಳಿಗೆ ಚಿಕಿತ್ಸೆಯನ್ನು ರೂಪಿಸಿ, ಕೇವಲ ಬಾಹ್ಯ ಲಕ್ಷಣಗಳನ್ನು ಹೋಗಲಾಡಿಸದೇ ಮಿದುಳನ್ನು ಹಿಂದಿನ ಆರೋಗ್ಯ ಸ್ಥಿತಿಗೆ ತರುವ ದಿಕ್ಕಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಈ ಪ್ರಯತ್ನಗಳ ಬೆನ್ನೆಲುಬಾಗಿರುವ ಡಾ.ವಿಜಯಲಕ್ಷ್ಮಿ ಅವರು ತಮ್ಮ ಸಂಶೋಧನೆಯ ವೃತ್ತಿ ಜೀವನದಲ್ಲಿ ಇದುವರೆವಿಗೂ 199 ಸಂಶೋಧನಾ ಲೇಖನಗಳನ್ನು ಪ್ರತಿಷ್ಟಿತ ಜರ್ನಲ್‍ಗಳಲ್ಲಿ ಪ್ರಕಟಿಸಿದ್ದಾರೆ. ಅವರ ಸಂಶೋಧನೆಯ ಫಲಿತಾಂಶಗಳನ್ನು ವಿವಿಧ ಪ್ರಕಟಣೆಗಳಲ್ಲಿ 5012 ಬಾರಿ ಉದ್ಧರಿಸಲಾಗಿದೆ.

ಮಿದುಳಿನ ಕಾಯಿಲೆಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡಿರುವ ಡಾ. ವಿಜಯಲಕ್ಷ್ಮಿ ಅವರಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಬಂದಿವೆ. ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಗಳ ಗೌರವ ಸದಸ್ಯತ್ವ, ಕೆ.ಪಿ. ಭಾರ್ಗವ ಪದಕ, ಓಮ್ ಪ್ರಕಾಶ್ ಭಾಸಿನ್ ಪ್ರಶಸ್ತಿ, ಜೆ.ಸಿ. ಬೋಸ್ ಫೆಲೋಶಿಪ್, ಎಸ್ ಎಸ್ ಭಾಟ್‍ನಗರ್ ಪ್ರಶಸ್ತಿ ಮತ್ತು ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗಳು ಮುಖ್ಯವಾದವು.

68 ರ ವಯಸ್ಸಿನಲ್ಲಿಯೂ ಸಂಶೋಧನೆಯಲ್ಲಿ ಸಕ್ರಿಯರಾಗಿರುವ ಡಾ. ವಿಜಯಲಕ್ಷ್ಮಿ ತಮ್ಮ ವೃತ್ತಿ ಜೀವನದ ಹಲವಾರು ನಿರ್ಣಾಯಕ ಘಟ್ಟಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ. ಬಿಎಸ್ಸೀ ಪದವಿ ಬಂದ ಕೂಡಲೇ ಅವರ ಕುಟುಂಬದ ಹಿರಿಯರು ಅವರಿಗೆ ಮದುವೆ ಮಾಡುವ ಯೋಚನೆಯಲ್ಲಿದ್ದರಂತೆ. ಆದರೆ ವಿದ್ಯೆಯ ಮಹತ್ವ ಅರಿತಿದ್ದ ಅವರ ತಂದೆ ಅದನ್ನು ಸಂಪೂರ್ಣವಾಗಿ ವಿರೋಧಿಸಿ, ಮಗಳ ಹೆಚ್ಚಿನ ವ್ಯಾಸಂಗವನ್ನು ಅವಕಾಶಮಾಡಿಕೊಟ್ಟರಂತೆ. ಅಧ್ಯಯನ ಶ್ರದ್ಧೆ, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮುಂತಾದ ಮೌಲ್ಯಗಳೆಲ್ಲವೂ ತನ್ನ ತಂದೆಯ ಕೊಡುಗೆಯೆಂದು ಹೇಳುವ ಡಾ. ವಿಜಯಲಕ್ಷ್ಮಿ, ಸಿ.ಎಫ್.ಟಿ.ಆರ್.ಐ ಸಂಸ್ಥೆಯ ಡಾ. ರಾಘವೇಂದ್ರರಾವ್ ಹಾಗೂ ಅಮೆರಿಕದ ನ್ಯಾಷನಲ್ ಕ್ಯಾನ್ಸರ್ ಇನ್ಸಿಟಿಟ್ಯೂಟ್‍ನ ಡಾ.ಮೈಕೇಲ್ ಬಾಯ್ಡ್ ಅವರ ಮಾರ್ಗದರ್ಶನವನ್ನು ಸದಾ ನೆನೆಯುತ್ತಾರೆ. ಭಾರತೀಯ ವಿಜ್ಞಾನ ಮಂದಿರದಲ್ಲೇ ಪ್ರಾಧ್ಯಾಪಕರಾಗಿರುವ ಅವರ ಪತಿ ಡಾ. ರವೀಂದ್ರನಾಥ್ ಅವರ ನೆರವು, ಬೆಂಬಲಗಳನ್ನು ಸ್ಮರಿಸುತ್ತಾರೆ.

ವಿಜ್ಞಾನ ಕ್ಷೇತ್ರದಲ್ಲಿ ಯಶಸ್ವಿಯಾದ ಕೆರಿಯರ್ ಒಂದನ್ನು ಕಟ್ಟಿಕೊಳ್ಳಲು ಮಹಿಳೆಯರಿಗೆ ವಿಶ್ವಸನೀಯವಾದ, ಅನುಭವಶಾಲಿಯಾದ, ನಂಬಿಕೆಯ ಸಲಹೆಗಾರ, ಮಾರ್ಗದರ್ಶಿಯ ಅಗತ್ತವಿದೆಯೆನ್ನುವ ಡಾ.ವಿಜಯಲಕ್ಷ್ಮಿ ಅವರು ವೈಜ್ಞಾನಿಕ ಸಂಶೋಧನೆಯ ವೃತ್ತಿಯಲ್ಲಂತೂ ಇದು ತೀರಾ ಅಗತ್ಯವೆನ್ನುತ್ತಾರೆ. ಮನೆಯ, ಕುಟುಂಬದ ಜವಾಬ್ದಾರಿಯಿರುವ ಮಹಿಳಾ ವಿಜ್ಞಾನಿಗಳಿಗೆ, ತಮ್ಮ ಸಮಾನಾಸಕ್ತ ಸಂಶೋಧಕರೊಂದಿಗೆ ಸದಾಕಾಲ ಸಂಪರ್ಕಹೊಂದಿ, ಸಂಶೋಧನೆಯ ವಿಷಯಗಳನ್ನು ಚರ್ಚಿಸಿ, ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವುದು ಸಮಯದ ಅಭಾವದಿಂದ ಸಾಧ್ಯವಾಗದಿರುವುದನ್ನು ಮುಖ್ಯ ಸಮಸ್ಯೆಯೆಂದು ಗುರುತಿಸುವ ಡಾ. ವಿಜಯಲಕ್ಷ್ಮಿ, ವಿವಿಧ ಸಂಸ್ಥೆಗಳಲ್ಲಿ ಕೆಲಸಮಾಡುತ್ತಿರುವ ಎಲ್ಲ ಮಹಿಳಾ ವಿಜ್ಞಾನಿಗಳೂ ಈ ಸಮಸ್ಯೆಯನ್ನು ಬಗೆಹರಿಸಲು ಅಗತ್ಯವಾದ ಬೆಂಬಲ ವ್ಯವಸ್ಥೆಯನ್ನು ರೂಪಿಸುವ ದಿಕ್ಕಿನಲ್ಲಿ ಯೋಚಿಸಬೇಕೆನ್ನುತ್ತಾರೆ. ಇದರೊಂದಿಗೆ ಪ್ರತಿಭೆ, ಪರಿಶ್ರಮ, ಅರ್ಹತೆಗಳಿದ್ದರೂ ಯಾವುದೇ ಸಂಸ್ಥೆಯಲ್ಲಿ ಮಹಿಳೆ ಅತ್ಯುನ್ನತ ಸ್ಥಾನಕ್ಕೆ ಬರುವುದು ಇಂದಿಗೂ ಅಪರೂಪದ ವಿಷಯವೆನ್ನುವ ಡಾ. ವಿಜಯಲಕ್ಷ್ಮಿ ಅವರು, ನಮ್ಮೆಲ್ಲ ವೈಜ್ಞಾನಿಕ ಸಂಸ್ಥೆಗಳೂ ಹೆಚ್ಚು ಹೆಚ್ಚು ‘ಜೆಂಡರ್ ಫ್ರೆಂಡ್ಲಿ’ಯಾದಾಗ ಮಾತ್ರ ಈ ಸಮಸ್ಯೆಯ ಪರಿಹಾರ ಸಾಧ್ಯವೆನ್ನುತ್ತಾರೆ.

ಜೀವನವಿಡೀ ನಮ್ಮೆಲ್ಲ ಆಲೋಚನೆ, ಕೆಲಸ, ಕಾರ್ಯಗಳನ್ನು ನಿಯಂತ್ರಿಸುವ ಮಿದುಳಿನ ಬಗೆಗೇ ಸದಾಕಾಲ ಚಿಂತಿಸುತ್ತ ಬಂದಿರುವ ಡಾ. ವಿಜಯಲಕ್ಷ್ಮಿ ಅವರಿಗೆ ಮಿದುಳಿನ ಬಗ್ಗೆ ಇನ್ನಿಲ್ಲದ ಆಕರ್ಷಣೆಯಿದೆ. ಅದು ಅತ್ಯಂತ ಸಂಕೀರ್ಣ ಅಂಗವಾದರೂ, ಅದರ ಕಾರ್ಯಾಚರಣೆ ಮಾತ್ರ ‘ಬಳಸು, ಇಲ್ಲವೇ ಕಳೆದುಕೋ’ (ಯೂಸ್ ಆರ್ ಲೂಸ್) ಎಂಬ ಸರಳ ತತ್ವದ ಮೇಲೆ ಕೆಲಸಮಾಡುತ್ತದೆ ಎನ್ನುವ ಡಾ. ವಿಜಯಲಕ್ಷ್ಮಿ ಅವರು ಮಿದುಳನ್ನು ಬಳಸಿದಷ್ಟೂ ಅದು ಹೆಚ್ಚು ಚುರುಕಾಗುತ್ತದೆ ಎನ್ನುತ್ತಾರೆ. ಜೀವನದ ಯಾವ ಹಂತದಲ್ಲೂ, ಯಾವ ವಯಸ್ಸಿನಲ್ಲೂ, ಬದುಕಿನಿಂದ ವಿಮುಖರಾಗಿ, ಮಾನಸಿಕ ಚಟುಚಟಿಕೆಯಿಲ್ಲದ ಬದುಕನ್ನು ಬಾಳಬಾರದೆಂದು ಎಚ್ಚರಿಸುವ ಈ ಹಿರಿಯ ವಿಜ್ಞಾನಿ ಹೊಸ ಸವಾಲುಗಳನ್ನು ಸ್ವೀಕರಿಸುವುದು, ಹೊಸಬಾಷೆ ಕಲಿಯುವುದು, ಹೊಸ ಕೌಶಲ್ಯಗಳನ್ನು ಕರಗತಮಾಡಿಕೊಳ್ಳುವುದು, ಮುಂತಾದ ಚಟುವಟಿಕೆಗಳು ಮಿದುಳನ್ನು ಆರೋಗ್ಯ ಸ್ಥಿತಿಯಲ್ಲಿಡುತ್ತದೆ ಎಂಬುದನ್ನು ನೂರಾರು ಸಂಶೋಧನೆಗಳು ಮತ್ತೆ ಮತ್ತೆ ಸಾಬೀತು ಮಾಡಿರುವುದರತ್ತ ನಮ್ಮೆಲ್ಲರ ಗಮನ ಸೆಳೆಯುತ್ತಾರೆ. ಅದರಷ್ಟೇ ಮುಖ್ಯವಾಗಿ ಅದೇ ರೀತಿ ಬದುಕುತ್ತಿದ್ದಾರೆ.


Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *