ಪದ್ಮಪ್ರಭೆ/ ಮಹಿಳಾ ಸಬಲೀಕರಣಕ್ಕೆ ಆದ್ಯತೆ ಕೊಟ್ಟ ಅನಿತಾ ರೆಡ್ಡಿ- ಡಾ. ಗೀತಾ ಕೃಷ್ಣಮೂರ್ತಿ

ಬಡತನದಲ್ಲಿ ನರಳುವ ಜನರಿಗೆ ಆ ಹೊತ್ತಿನ ಸೌಲಭ್ಯಗಳನ್ನು ಮಾತ್ರ ಒದಗಿಸಿದರೆ ಸಾಲದು, ಅವರು ಜೀವನದುದ್ದಕ್ಕೂ ಆತ್ಮವಿಶ್ವಾಸದಿಂದ ಬದುಕಲು ಅಗತ್ಯವಾದ ಕಸುಬು, ತರಬೇತಿ ಅವಕಾಶ, ಕಚ್ಚಾ ಸಾಮಗ್ರಿ, ಮಾರುಕಟ್ಟೆ ಇವೆಲ್ಲವನ್ನೂ ಕಲ್ಪಿಸುವುದು ಅತ್ಯಗತ್ಯ ಎಂಬುದನ್ನು `ಸಬಲೀಕರಣ'ದ ಮೂಲಮಂತ್ರವಾಗಿ ಅನುಸರಿಸಿದವರು ಅನಿತಾ ರೆಡ್ಡಿ. ಅವರ ಸಮಾಜಸೇವಾ ಕಾರ್ಯಗಳಿಗೆಪದ್ಮಶ್ರೀ’ ಗೌರವ ಸಂದಿದೆ.

ಬೆಂಗಳೂರಿನಲ್ಲಿ ಸಮಾಜ ಸೇವೆ ಮತ್ತು ಮಹಿಳಾ ಸಬಲೀಕರಣದಲ್ಲಿ ತೊಡಗಿಸಿಕೊಂಡವರು, ‘ಆವಾಸ್’ ಸಂಸ್ಥೆಯ ಹೆಸರನ್ನು ಕೇಳದಿರಲು ಸಾಧ್ಯವೇ ಇಲ್ಲ. ಆವಾಸ್ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಕೊಳೆಗೇರಿ ನಿವಾಸಿಗಳ ಪುನರ್ವಸತಿ ಮತ್ತು ಅವರ ಉನ್ನತೀಕರಣಕ್ಕಾಗಿ ದುಡಿಯುತ್ತಿರುವ ಸಂಸ್ಥೆ. ಈ ಸಂಸ್ಥೆಯ ಸಂಸ್ಥಾಪನೆಯ ಹಿಂದಿನ ಪ್ರೇರಕ ಮತ್ತು ಚಾಲಕ ಶಕ್ತಿ ಅನಿತಾ ರೆಡ್ಡಿ. ಇವರು ಮಕ್ಕಳ ಶಿಕ್ಷಣ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿರುವ ದ್ವಾರಕಾ ಮತ್ತು ಡ್ರಿಕ್ ಪ್ರತಿಷ್ಠಾನಗಳ ವ್ಯವಸ್ಥಾಪಕ ಟ್ರಸ್ಟಿ. ಅನೇಕ ರೀತಿಯ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡು ಬಿಡುವಿಲ್ಲದೆ ದಣಿವರಿಯದೆ ದುಡಿಯುವ ಆದ್ರ್ರ ಹೃದಯಿ.

ಅನಿತಾ ಹುಟ್ಟಿದುದು 1954 ರ ಅಕ್ಟೋಬರ್ 14 ರಂದು, ತಮಿಳು ನಾಡಿನ ಚೆನ್ನೈನ ಶ್ರೀಮಂತ ಕುಟುಂಬದಲ್ಲಿ, ತಂದೆ ದ್ವಾರಕಾನಾಥ ರೆಡ್ಡಿ ಮತ್ತು ತಾಯಿ ರಜಿನಿ ರೆಡ್ಡಿ ಅವರ ಮಗಳಾಗಿ. ತಂದೆ, ಖ್ಯಾತ ಉದ್ಯಮಿ. ಆ ಕಾಲದಲ್ಲಿ ಮನೆ ಮಾತಾಗಿದ್ದ ನ್ಯೂಟ್ರಿನ್ ಸಿಹಿತಿನಿಸು ತಯಾರಿಕಾ ಕಂಪೆನಿಯ ಮಾಲೀಕರು. ಮಾವ ಕೆ.ಸಿ. ರೆಡ್ಡಿ, ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ. ಕೆ.ಸಿ. ರೆಡ್ಡಿ ಅವರ ಪುತ್ರ ಪ್ರತಾಪ್ ರೆಡ್ಡಿ ಅನಿತಾ ಅವರ ಪತಿ. ಇವರೂ ಸಹ ಯಶಸ್ವೀ ಉದ್ಯಮಿ. ಶ್ರೀಮಂತ ಮಕ್ಕಳು ಮಾತ್ರ ಸೇರಲು ಸಾಧ್ಯವಿದ್ದ ರಿಷಿ ವ್ಯಾಲಿ ಶಾಲೆಯಲ್ಲಿ ಇವರ ಶಾಲಾಭ್ಯಾಸ. ಕಾಲೇಜು ವಿದ್ಯಾಭ್ಯಾಸ ಡಬ್ಲ್ಯುಸಿಸಿ ಕಾಲೇಜಿನಲ್ಲಿ. ಆನಂತರ ಆಕೆ ಅಮೆರಿಕಾದ ಕ್ಯಾಲಿಫೋರ್ನಿಯಾಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿದರು. ಅಲ್ಲಿಂದ ಬಂದ ನಂತರ, ಅವರಿಗಿದ್ದ ಸಂಪತ್ತಿನಲ್ಲಿ ಅನುಕೂಲಕರ ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ ಹಾಗಿರಲು ಅವರ ಮನಸ್ಸು ಒಪ್ಪಲಿಲ್ಲ. ಇದಕ್ಕೆ ಕಾರಣ ಸ್ವತಃ ಶ್ರೀಮಂತರಾಗಿದ್ದ ಅವರ ತಂದೆ ಅವರಲ್ಲಿ ಬಿತ್ತಿದ ಮೌಲ್ಯಗಳು ಹಾಗೂ ಹಾಕಿಕೊಟ್ಟ ಮೇಲ್ಪಂಕ್ತಿ. ಜೊತೆಗೆ ಬೆನ್ನಿಗಿದ್ದ ಕೆ.ಸಿ. ರೆಡ್ಡಿ ಅವರ ಆದರ್ಶಗಳು.

ಇವರ ಸಮಾಜ ಸೇವೆಯ ಕೇಂದ್ರವೇ ಸಮಾಜದಿಂದ ನಿರ್ಲಕ್ಷ್ಯಕ್ಕೆ ಗುರಿಯಾದ, ಸಮಾಜದ ತುಳಿತಕ್ಕೆ ಒಳಗಾಗಿ ಅವಕಾಶ ವಂಚಿತರಾದ ಕೊಳಚೆ ಪ್ರದೇಶಗಳು, ಮುಖ್ಯವಾಗಿ ನಗರದಲ್ಲಿನ ಕೊಳಚೆ ಪ್ರದೇಶಗಳು ಮತ್ತು ಅಲ್ಲಿಯ ನಿವಾಸಿಗಳು. ನಗರದ ಹೊಲಸನ್ನು ತೊಡೆದು ನಗರವನ್ನು ಸುಂದರಗೊಳಿಸುವ ಇವರಿಗೆ ಸುಂದರವಾದ ಬದುಕಿರಲಿ ಜೀವಿಸಲು ಯೋಗ್ಯವಾದ ತಾಣವಿಲ್ಲ, ಗಗನಚುಂಬಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಸುಡುವ ಬಿಸಿಲನ್ನು ಲೆಕ್ಕಿಸದೆ ದುಡಿಯುವ ಇವರಿಗೆ ನೆತ್ತಿಯ ಮೇಲೊಂದು ಸೂರಿಲ್ಲ. ಇವರ ಪಾಲಿಗೆ ಇರುವುದು, ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ, ಯಾರದೋ ನೆಲದ ಮೇಲೆ, ಯಾರ ಕೃಪೆಯಿಂದಲೋ, ಯಾರ ಲಾಭಕ್ಕಾಗಿಯೋ ತಲೆಯೆತ್ತಿದ ಜೋಪಡಿಗಳು. ಆ ಜೋಪಡಿಗಳಾದರೂ ಎಂಥವು?! ಮಳೆಗೆ ನೆನೆಯುವ, ಉರಿ ಬಿಸಿಲಿಗೆ ಸುಟ್ಟು ಕರಕಲಾಗುವ ಭಯವಿರುವ, ಅವಕೃಪೆಗೆ ಪಾತ್ರರಾದರೆ ನೆಲಸಮವಾಗುವ ಆತಂಕವನ್ನೆದುರಿಸುವ ‘ನಿರ್ಮಾಣ’ಗಳು. ಅದರೊಳಗಿನ ಜೀವಿಗಳದು ನಿತ್ಯ ಕಿತ್ತು ತಿನ್ನುವ ಬಡತನವಿರುವ, ಅಸಹಾಯಕತೆ, ಆಕ್ರೋಶಗಳನ್ನು ಒಡಲಲ್ಲಿ ತುಂಬಿಕೊಂಡಿರುವ ಬದುಕು. ಬದುಕಲು ಅಗತ್ಯವಾದ ಕನಿಷ್ಠ ಸೌಲಭ್ಯಗಳಿಂದಲೂ ವಂಚಿತರಾದವರು ಇವರು. ಇವೆಲ್ಲದರ ತಾಪದ ತೀವ್ರತೆ ಮಹಿಳೆಯರು ಮತ್ತು ಮಕ್ಕಳ ಮೇಲೆ ದುಪ್ಪಟ್ಟು ಹೆಚ್ಚು. ಇಡೀ ಸಮಾಜದ ಮೂಲ ಸೌಕರ್ಯಗಳ ನಿರ್ಮಾಣಕ್ಕಾಗಿ ದುಡಿಯುವ ಇವರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ದೊರಕಿಸಿಕೊಡಲು ಕಾರ್ಯನೀತಿಗಳನ್ನು ರೂಪಿಸುವವರು ಏಕೆ ಕುರುಡಾಗಿದ್ದಾರೆ? ಅವರಿಗೂ ಎಲ್ಲರಂತೆ ಬಾಳುವ ಹಕ್ಕಿಲ್ಲವೇ? ಮೊದಲ ಬಾರಿಗೆ, ಕೊಳಚೆ ಪ್ರದೇಶವನ್ನು ಹೊಕ್ಕು ಬಂದ ಅನಿತಾ ರೆಡ್ಡಿ ಅವರನ್ನು ಪದೇ ಪದೇ ಕಾಡಿದ ಪ್ರಶ್ನೆ ಇದು.

ಕೊಳಚೆ ಪ್ರದೇಶ ನಿವಾಸಿಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕಗಳನ್ನು, ಪಡಿತರ ಚೀಟಿಗಳನ್ನು, ಪಿಂಚಣಿಗಳನ್ನು ಮತ್ತು ಸರ್ಕಾರದಿಂದ ಪ್ರಾಯೋಜಿತವಾದ ಪೌಷ್ಟಿಕ ಆಹಾರ ನೀಡಿಕೆಯ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುವುದರೊಂದಿಗೆ ಇವರ ಸೇವಾ ಕಾರ್ಯ ಪ್ರಾರಂಭವಾಯಿತು. ಈ ಪ್ರಯತ್ನದಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಅವರಿಗೆ ಅರಿವಾದದ್ದು, ಇಷ್ಟರಿಂದ ಅವರ ಜೀವನ ಉತ್ತಮಗೊಳ್ಳಲು ಸಾಧ್ಯವಿಲ್ಲ ಎಂಬುದು. ಶಿಕ್ಷಣ, ಸ್ವಚ್ಛತೆ, ಹಕ್ಕುಗಳ ಅರಿವು, ನೆಲೆಸಲೊಂದು ಸೂರು, ಕನಿಷ್ಠ ಸೌಲಭ್ಯಗಳು ಇವೆಲ್ಲವನ್ನು ಕೊಳಚೆ ಪ್ರದೇಶ ನಿವಾಸಿಗಳಿಗೆ ದೊರಕಿಸಿಕೊಡುವ ಮತ್ತು ಅವರ ಜೀವನವನ್ನು ಸಹನೀಯವನ್ನಾಗಿಸುವ ಉದ್ದೇಶದಿಂದ ಜನ್ಮ ತಳೆದದ್ದು ‘ಆವಾಸ್’ (ಅಸೋಸಿಯೇಷನ್ ಫಾರ್ ವಾಲೆಂಟರಿ ಆ್ಯಕ್ಷನ್ ಅಂಡ್ ಸರ್ವಿಸ್) ಎಂಬ ಸಂಸ್ಥೆ. ವಿವಿಧ ವೃತ್ತಿಗಳಲ್ಲಿ ತೊಡಗಿದ ಸಮಾನ ಮನಸ್ಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿ 1978 ರಲ್ಲಿ ಕಟ್ಟಿದ ಸಂಸ್ಥೆ ಇದು. ಲಕ್ಷ್ಮೀಪ್ಮರಂ, ಸೋಮೇಶ್ವರ ಮತ್ತು ಸುದಾಮನಗರದ ಕೊಳಚೆ ಪ್ರದೇಶಗಳು. ಮೊದಲಿಗೆ ಆಯ್ಕೆ ಮಾಡಿಕೊಂಡ ಕೊಳಚೆ ಪ್ರದೇಶಗಳು. ಈ ಸಂಸ್ಥೆಯ ಜೊತೆಗೆ, 1996 ರಲ್ಲಿ ಅನಿತಾ ರೆಡ್ಡಿ ಅವರ ತಂದೆ ದ್ವಾರಕಾನಾಥ ರೆಡ್ಡಿ ಅವರು ಸ್ಥಾಪಿಸಿದ ‘ದ್ವಾರಕಾನಾಥ್ ರೆಡ್ಡಿ ರಮಣಾರ್ಪಣಂ ಟ್ರಸ್ಟ್’ (ಡಿಆರ್‍ಆರ್‍ಟಿ) ಸಹ ಕೈಜೋಡಿಸಿತು. ಈ ಎಲ್ಲ ಪ್ರಯತ್ನಗಳಿಂದ ಸಾವಿರಾರು ಮಂದಿ ಕೊಳಚೆ ಪ್ರದೇಶ ನಿವಾಸಿಗಳ ಬದುಕು ಬದಲಾಗತೊಡಗಿತು.

ಮೊದಲಿಗೆ, ಕೊಳಚೆ ಪ್ರದೇಶದ ನಿವಾಸಿಗಳಿಗೆ, ಭೌತಿಕ, ಆರ್ಥಿಕ ಹಾಗೂ ಸಾಮಾಜಕ ಸುರಕ್ಷೆಯನ್ನು ಒದಗಿಸುವುದಕ್ಕೆ ಸಂಸ್ಥೇ ತನ್ನ ಕಾರ್ಯಕ್ಷೇತ್ರವನ್ನು ಸೀಮಿತಗೊಳಿಸಿಕೊಂಡಿತು. ನಗರದಲ್ಲಿ ವಾಸಿಸುವ ಈ ಬಡಜನರಿಗೆ ಒಂದು ಘನತೆಯ ಜೀವನವನ್ನು ಕಟ್ಟಿಕೊಡುವುದು ಇವರಿಗೆ ಆದ್ಯತೆಯಾಗಿತ್ತು. ಇದು ಸಾಧ್ಯವಾಗುವುದು, ಅಲ್ಲಿಯ ಜನರು ಸ್ವಾವಲಂಬಿಗಳಾದಾಗ ಮಾತ್ರ. ಹಾಗಾಗಿ ಈ ಸಂಸ್ಥೆ ಅವರಿಗೆ ಮೂಲ ಸೌಕರ್ಯಗಳನ್ನು ಮಾತ್ರ ಒದಗಿಸಿದರೆ ಸಾಲದು ಎಂಬುದನ್ನು ಕಂಡುಕೊಂಡರು. ಹಾಗಾಗಿ ಕೊಳಚೆ ಪ್ರದೇಶದ ನಿವಾಸಿಗಳಿಗಾಗಿ ಸಮಗ್ರ ಅಭಿವೃದ್ಧಿ ಕಾರ್ಯಯೋಜನೆಗಳನ್ನು ಹಮ್ಮಿಕೊಂಡರು. ಅವರಿಗಾಗಿ ಕಾಂಕ್ರೀಟ್ ಮನೆಗಳ ನಿರ್ಮಾಣ, ಆರೋಗ್ಯ ಕಾರ್ಯಕ್ರಮಗಳು, ಶಿಕ್ಷಣ, ಕೌಶಲ ಮತ್ತು ಆದಾಯ ಸೃಷ್ಟಿ ಚಟುವಟಿಕೆಗಳು, ಉಳಿತಾಯ ಮತ್ತು ಸಾಲ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ಮುಂತಾದ ಅನೇಕ ಯೋಜನೆಗಳನ್ನು ಹಾಕಿಕೊಂಡು, ಅವನ್ನು ಕಾರ್ಯರೂಪಕ್ಕೆ ತಂದು, ಆ ಸಮುದಾಯವನ್ನು ಒಂದು ಸಬಲ ಹಾಗೂ ಸ್ವಾವಲಂಬಿ ಸಮುದಾಯವನ್ನಾಗಿ ರೂಪಿಸುವಲ್ಲಿ ಯಶಸ್ವಿಯಾದರು. ಈ ಎಲ್ಲವುಗಳಿಗೆ ಸಂಬಂಧಪಟ್ಟ ಸಮಸ್ಯೆಯನ್ನು ಎದುರಿಸುವುದಕ್ಕೆ ಅವರು ಅನುಸರಿಸಿದ ಮಾರ್ಗ ಆ ಸಮುದಾಯವನ್ನೇ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು. ಅವರ ಈ ಕ್ರಮದಿಂದಾಗಿ, ಸಮುದಾಯದ ಪಾಲ್ಗೊಳ್ಳುವಿಕೆ, ಮಹಿಳೆಯರ ಮತ್ತು ಯುವಕ ಯುವತಿಯರ ಸಬಲೀಕರಣ, ಸಮುದಾಯದ ಸದಸ್ಯರಿಗೇ ಅಧಿಕಾರ ನೀಡಿಕೆ ಮುಂತಾದುವುಗಳೆಲ್ಲ ಕೇವಲ ಆದರ್ಶವಾಗಿ ಉಳಿಯದೆ ಕಾರ್ಯರೂಪಕ್ಕೆ ಬಂದಿವೆ.

ಇವರ ಕಾರ್ಯಕ್ಷೇತ್ರ ಬೆಂಗಳೂರಿನ ಮತ್ತು ಚಿತ್ತೂರಿನ ಆಯ್ದ ಕೊಳಚೆ ಪ್ರದೇಶಗಳ ಅಭಿವೃದ್ಧಿಯ ಜೊತೆಗೆ ಆಂಧ್ರ ಪ್ರದೇಶದ ಮತ್ತು ತಮಿಳು ನಾಡಿನ ಗ್ರಾಮೀಣ ಪ್ರದೇಶಗಳಲ್ಲಿನ ಬಡ ಕುಟುಂಬಗಳಿರುವ ಸಮುದಾಯಗಳಿಗೂ ವಿಸ್ತರಿಸಿದೆ. ಕೊಳಚೆ ಪ್ರದೇಶಗಳಿರುವ ಭೂಮಿಯನ್ನು ಭೂ ಮಾಫಿಯಾಗಳಿಂದ ಬಿಡಿಸಿ ಅವರಿಗೆ ಪಕ್ಕಾ ಮನೆಗಳನ್ನು ನಿರ್ಮಿಸಿಕೊಡುವ ಪ್ರಯತ್ನದಲ್ಲಿ ಇವರಿಗೆ ಜೀವ ಬೆದರಿಕೆಗಳೂ ಬಂದಿವೆ. ಆದರೆ ಇಲ್ಲಿ ಒಳ್ಳೆಯ ಉದ್ದೇಶ ಮತ್ತು ಸಾಂಘಿಕ ಶಕ್ತಿ ಗೆದ್ದಿದೆ. ನಿರ್ಲಕ್ಷಿತ ಬಡ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಅಗತ್ಯವಿರುವ ಯೋಜನೆಗಳನ್ನು ಕಾರ್ಯನೀತಿ ನಿರ್ಣಯಗಳಲ್ಲಿ ಅಳವಡಿಸಿಕೊಳ್ಳುವಮಟ್ಟಿಗೆ ಆಡಳಿತಾರೂಢರನ್ನು ಪ್ರಭಾವಿಸಿವೆ.

ಕಲಂಕಾರಿ ಪವಾಡ

ಅನಿತಾ ರೆಡ್ಡಿ ಅವರದು ಸದಾ ಬಡವರ ಸಂಕಷ್ಟಗಳಿಗೆ ಮಿಡಿವ ಮನಸ್ಸು ಮತ್ತು ಅವರ ಬದುಕನ್ನು ಹಸನಾಗಿಸುವ ರೀತಿಯಲ್ಲಿ ಅವರನ್ನು ಹೇಗೆ ಸ್ವಾವಲಂಬಿಗಳನ್ನಾಗಿಸಬಹುದು ಎಂಬುದನ್ನು ಸದಾ ಯೋಚಿಸುವ ಮನಸ್ಸು. ಅದಕ್ಕೆ ಅವರು ‘ಕಲಂಕಾರಿ’ ಎಂಬ ಅದ್ಭುತ ಕಲಾ ಪ್ರಪಂಚವನ್ನು ಜಗತ್ತಿಗೆ ತೆರೆದಿಟ್ಟ ರೀತಿ ಮತ್ತು ಆ ಕಲೆಯ ಕಲಾವಿದರಿಗೆ ಸ್ವಾವಲಂಬಿ ಜೀವನವನ್ನು ಕಟ್ಟಿಕೊಟ್ಟ ರೀತಿ. ಇದರ ವಿವರಗಳು ಒಂದು ಪವಾಡದಂತೆ ಕಂಡರೆ ಆಶ್ಚರ್ಯವಿಲ್ಲ.

ಕಲಂಕಾರಿ ಕಲಾ ಪ್ರಕಾರಕ್ಕೆ ಇಂದು ದೇಶದಾದ್ಯಂತ ಅಷ್ಟೇ ಏಕೆ ಜಗತ್ತಿನಾದ್ಯಂತ ಬಹು ಬೇಡಿಕೆ ಇದೆ. ಆದರೆ, ನಶಿಸಿ ಹೋಗುವುದರಲ್ಲಿದ್ದ ಈ ಕಲಾ ಪ್ರಕಾರಕ್ಕೆ ಜೀವ ತುಂಬಿ, ಅದನ್ನು ಪುನರುತ್ಥಾನಗೊಳಿಸಿ, ಆ ಕಲಾಕಾರರ ಕಲಾಕೃತಿಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸಿ, ಆ ಕಲಾಕಾರರಿಗೆ ಜೀವನೋಪಾಯವನ್ನು ಒದಗಿಸಿದ ಕೀರ್ತಿ ಸಂಪೂರ್ಣವಾಗಿ ಸಲ್ಲುವುದು ಅನಿತಾ ರೆಡ್ಡಿ ಮತ್ತು ಆಕೆಯ ತಂದೆ ದ್ವಾರಕಾನಾಥ ರೆಡ್ಡಿ ಅವರಿಗೆ. ಈ ಕೆಲಸದಲ್ಲಿ ಅವರು ತೊಡಗಿದುದರ ಹಿಂದೆ ಒಂದು ರೋಚಕ ಘಟನೆಯಿದೆ. 1999, ಮಳೆಯ ಒಂದು ರಾತ್ರಿ, ಪುರುಷೋತ್ತಮ ಎಂಬ ಹಿರಿ ವಯಸ್ಸಿನ ಒಬ್ಬರು ಅನಿತಾ ರೆಡ್ಡಿ ಅವರ ಮನೆಯ ಬಾಗಿಲು ಬಡಿದರು. ಅವರು ಬಂದದ್ದು ಆಂಧ್ರ ಪ್ರದೇಶದ ಶ್ರೀಕಾಳಹಸ್ತಿ ಎಂಬ ಸ್ಥಳದಿಂದ. ಅವರ ಕೈಯಲ್ಲಿ ಅವರೇ ತಯಾರಿಸಿದ ಕಲಂಕಾರಿ ಕಲೆಯ ಚಿತ್ತಾರಗಳನ್ನು ಬಿಡಿಸಿದ ಬಟ್ಟೆಯ ಉತ್ಪನ್ನಗಳಿದ್ದವು. ಅವರು ಹೇಳಿದ್ದಿಷ್ಟು, ‘ಎಲ್ಲರೂ ನನ್ನನ್ನು ಭಿಕ್ಷುಕನೆಂದು ತಿಳಿದು ಆಚೆಗಟ್ಟುತ್ತಾರೆ. ಆದರೆ ನಾನು ಭಿಕ್ಷುಕನಲ್ಲ. ನಾನು ನನ್ನ ಕಲೆಯನ್ನು ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದೇನೆ. ನಮ್ಮ ಕಲಾ ಉತ್ಪನ್ನಗಳಿಗೆ ಮಾರುಕಟ್ಟೆಯಿಲ್ಲದೆ ನನ್ನ ಜನ ಉಪವಾಸ ಸಾಯುತ್ತಿದ್ದಾರೆ. ನನಗೆ ಸಹಾಯ ಮಾಡಿ’ ಎಂದು. ಕುತೂಹಲಗೊಂಡ ಅವರು ಆತನನ್ನು ಒಳಕ್ಕೆ ಕರೆದು, ಮೊದಲು ಹಸಿದ ಹೊಟ್ಟೆಗೆ ತಿನ್ನಲಿತ್ತು, ಅವರಿಂದ ನಶಿಸಿ ಹೋಗುತ್ತಿರುವ ಒಂದು ಅದ್ಭುತ ಕಲಾ ಪ್ರಕಾರದ ಪರಿಚಯ ಮಾಡಿಕೊಂಡು ಅದನ್ನು ಉಳಿಸುವ, ಬೆಳೆಸುವ ಪಣತೊಟ್ಟರು. ಹಾಗೆ ಪ್ರಾರಂಭವಾಯಿತು ಅವರ ಕಲಂಕಾರಿ ಕಲಾ ಜಗತ್ತಿನೊಳಗಣ ಪಯಣ.

ಕಲಂಕಾರಿ ಕಲೆ ಎಂಬುದು, ತರಕಾರಿಯಿಂದ ತೆಗೆದ ಸಹಜೋತ್ಪನ್ನ ಬಣ್ಣಗಳನ್ನು ಬಳಸಿ, ಸುಟ್ಟ ಹುಣಸೆ ನಾರಿನಿಂದ ಬಟ್ಟೆಯ ಮೇಲೆ ಸುಂದರ ಚಿತ್ರಗಳನ್ನು ಮೂಡಿಸುವ ಕಲೆ. ಕೃಷ್ಣದೇವರಾಯನ ಕಾಲದಲ್ಲಿ ಈ ಕಲೆಗೆ ಬಹು ಬೇಡಿಕೆ ಇತ್ತು ಎನ್ನಲಾಗಿದೆ. ಅನಿತಾ ಅವರು, ಈ ಕಲೆಗೆ ಮಾರುಕಟ್ಟೆ ಸೌಲಭ್ಯ ಒದಗಿಸಲೆಂದೇ ಬೆಂಗಳೂರಿನಲ್ಲಿ ದ್ವಾರಕಾ ಎಂಬ ಪ್ರದರ್ಶನ ಮಳಿಗೆಯನ್ನು ಪ್ರಾರಂಭಿಸಿದರು. ಈ ಮೂಲಕ, ಅವರು ಕಲೆಯನ್ನು ಜಾಗತಿಕ ಮಟ್ಟಕ್ಕೆ ಒಯ್ಯುವಲ್ಲಿ ಮತ್ತು ಕಲಾಕರರ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿ ಅದನ್ನು ಸಾಕಾರಗೊಳಿಸುವಲ್ಲಿ ಸಫಲರಾದರು. ಕಲಂಕಾರಿ ಕಲೆಯ ಒಂದು ವಸ್ತ್ರ ಪೂರ್ಣಗೊಂಡು ಅಂತಿಮ ರೂಪ ತಳೆಯುವಲ್ಲಿ ಮಹಿಳೆಯರ ಶ್ರಮ ಬಹಳ ದೊಡ್ಡದು. ಹಾಗಾಗಿ ಅನಿತಾ ಮತ್ತು ಅವರ ತಂಡದ ಅಭಿವೃದ್ಧಿಯ ಕೇಂದ್ರ ವ್ಯಕ್ತಿ ಮಹಿಳೆ. ಮಹಿಳೆ ಉದ್ಧಾರವಾದರೆ ಒಂದು ಮನೆಯೇ ಉದ್ಧಾರವಾಗುತ್ತದೆ ಎಂಬ ಹೇಳಿಕೆಯಲ್ಲಿ ನಂಬಿಕೆ ಇಟ್ಟವರು ಅವರು. ಹಾಗಾಗಿ, ಅನಿತಾ ಅವರ ಈ ಪ್ರಯತ್ನಗಳ ಹಿಂದಿನ ಘೋಷವಾಕ್ಯ ‘ಮಹಿಳೆಯರ ಜಾಗೃತಿ ಮತ್ತು ಸಶಕ್ತೀಕರಣ’. ‘ಅವರಿಗೆ ಬೇಕಾದಂಥ ಕಚ್ಚಾ ಪದಾರ್ಥದ ಜೊತೆಗೆ ಅವರಿಗೆ ಅವರ ಹಕ್ಕುಗಳ ಬಗ್ಗೆ ತಿಳಿವಳಿಕೆ ಮೂಡಿಸುವುದು, ಅವರಲ್ಲಿ ಆತ್ಮಶಕ್ತಿ ಹಾಗೂ ಧೈರ್ಯವನ್ನು ತುಂಬುವುದು, ಅವರಲ್ಲಿರುವ ಸಾಮಥ್ರ್ಯದ ಅರಿವನ್ನು ಅವರಿಗೆ ಮಾಡಿಸುವ ಮೂಲಕ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬೆಳೆಯಲು ಅವರನ್ನು ತಯಾರು ಮಾಡುವುದೂ ಸಹ ನಮಗೆ ಅಷ್ಟೇ ಮುಖ್ಯವಾಗಿತ್ತು’ ಎನ್ನುತ್ತಾರೆ. ಇವರ ಪರಿಶ್ರಮದಿಂದಾಗಿ ಕೆಲವು ದಶಕಗಳ ಹಿಂದೆ ವಿನಾಶದ ಅಂಚಿನಲ್ಲಿದ್ದ ಒಂದು ಕಲೆ ಇಂದು ದೇಶ ವಿದೇಶಗಳಲ್ಲಿ ಮನ್ನಣೆ ಪಡೆದು ಬಹು ಬೇಡಿಕೆಯ ಮಾರುಕಟ್ಟೆಯನ್ನು ಗಳಿಸಿಕೊಂಡಿದೆ.

ಅನಿತಾ ರೆಡ್ಡಿ ಅವರ ಈ ನಲವತ್ತು ವರ್ಷಗಳಲ್ಲಿ ಅವರಿಗೆ ಸಂದಿರುವ ಪ್ರಶಸ್ತಿ ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಅನೇಕ ರಾಷ್ಟ್ರೀಯ ಪ್ರಶಸ್ತಿಗಳಿಗೂ ಇವರು ಭಾಜನರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ರಾಜ್ಯ ಹಾಗೂ ರಾಷ್ಟ್ರದ ನೀತಿನಿರ್ಣಯಗಳನ್ನು ರೂಪಿಸುವ ಅನೇಕ ಸಮಿತಿಗಳಲ್ಲಿ ಮತ್ತು ಮಂಡಲಿಗಳಲ್ಲಿ ಅನೇಕ ಸಾಮಥ್ರ್ಯಗಳಲ್ಲಿ ಇವರು ಕಾರ್ಯ ನಿರ್ವಹಿಸಿದ್ದಾರೆ. ಎಲ್ಲಕ್ಕೂ ಮುಕುಟಪ್ರಾಯವಾಗಿ ರಾಷ್ಟ್ರದ ನಾಲ್ಕನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಇವರಿಗೆ ನೀಡಿ ಗೌರವಿಸಲಾಗಿದೆ.
ಸಮಾಜದ ನಿರ್ಲಕ್ಷಿತರ, ಬಡವರ, ಶೋಷಿತರ ನೆರವಿಗೆ ನಿಲ್ಲುವ ಇಂಥವರ ಸಂತತಿ ಸಾವಿರವಾಗಲಿ!

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಪದ್ಮಪ್ರಭೆ/ ಮಹಿಳಾ ಸಬಲೀಕರಣಕ್ಕೆ ಆದ್ಯತೆ ಕೊಟ್ಟ ಅನಿತಾ ರೆಡ್ಡಿ- ಡಾ. ಗೀತಾ ಕೃಷ್ಣಮೂರ್ತಿ

  • March 15, 2021 at 10:43 am
    Permalink

    Very nice. Well written. Effective narration.

    Reply

Leave a Reply

Your email address will not be published. Required fields are marked *