ಪದ್ಮಪ್ರಭೆ/ ಭಾರತೀಯ ಚಿತ್ರ ರಂಗದ ಪ್ರಪ್ರಥಮ ಅಭಿನೇತ್ರಿ ದೇವಿಕಾ ರಾಣಿ – ಡಾ. ಗೀತಾ ಕೃಷ್ಣಮೂರ್ತಿ

ಭಾರತ ಚಿತ್ರ ರಂಗದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ, ಅಪ್ರತಿಮ ಸೌಂದರ್ಯದ, ಅತಿ ದಿಟ್ಟ, ನಿರ್ಭಿಢ ವ್ಯಕ್ತಿತ್ವದ, ಚಿತ್ರ ರಂಗದಲ್ಲಿ ಇತಿಹಾಸ ಸೃಷ್ಟಿಸಿದ, ಸುಶಿಕ್ಷಿತೆ ದೇವಿಕಾ ರಾಣಿ. 1930 ಮತ್ತು 1940ರ ನಡುವಿನ ಹತ್ತು ವರ್ಷಗಳ ಅವಧಿಯಲ್ಲಿ ಸಿನಿಮಾ ರಂಗದಲ್ಲಿ ಮಿಂಚಿನ ಸಂಚಲನ ಮೂಡಿಸಿದ ಅಭಿನೇತ್ರಿ. 1958 ರಲ್ಲಿ ಈ ಅಪ್ರತಿಮ ಕಲಾವಿದೆಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.

ದೇವಿಕಾ ರಾಣಿ ಎಂದ ಕೂಡಲೇ ನೆನಪಿಗೆ ಬರುವುದು ಅವರೊಡನೆ ತಳುಕು ಹಾಕಿಕೊಂಡ ರಷ್ಯನ್ ವರ್ಣಚಿತ್ರ ಕಲಾಕಾರ ರೋರಿಚ್ ಅವರ ಹೆಸರು, ಬೆಂಗಳೂರಿನ ಹೊರ ವಲಯದಲ್ಲಿರುವ ಈ ದಂಪತಿಯ ತಾಟಗುಣಿ ಎಸ್ಟೇಟ್‍ನ ಹೆಸರು ಮತ್ತು ಅವರಿಬ್ಬರ ಮರಣಾನಂತರ ಅದು ಸೃಷ್ಟಿಸಿದ ವಿವಾದ.

ಭಾರತ ಚಿತ್ರ ರಂಗದ ಇತಿಹಾಸದಲ್ಲಿ ಆಸಕ್ತಿಯಿರುವ ಯಾರಿಗೇ ಆದರೂ ದೇವಿಕಾ ರಾಣಿ ಎಂದರೆ ಕಣ್ಮುಂದೆ ಬರುವುದು ಬೇರೆಯದೇ ಆದ ಅವರ ಚಿತ್ರ. ಭಾರತ ಚಿತ್ರ ರಂಗದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ, ಅಪ್ರತಿಮ ಸೌಂದರ್ಯದ, ಅತಿ ದಿಟ್ಟ, ನಿರ್ಭಿಢ ವ್ಯಕ್ತಿತ್ವದ, ಚಿತ್ರ ರಂಗದಲ್ಲಿ ಇತಿಹಾಸ ಸೃಷ್ಟಿಸಿದ, ಸುಶಿಕ್ಷಿತ ದೇವಿಕಾ ರಾಣಿಯ ಚಿತ್ರ. 1930 ಮತ್ತು 1940ರ ನಡುವಿನ ಹತ್ತು ವರ್ಷಗಳ ಅವಧಿಯಲ್ಲಿ ಸಿನಿಮಾ ರಂಗದಲ್ಲಿ ಮಿಂಚಿನ ಸಂಚಲನ ಮೂಡಿಸಿದ ಅಭಿನೇತ್ರಿ. 1958 ರಲ್ಲಿ ಈ ಅಪ್ರತಿಮ ಕಲಾವಿದೆಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.

ದೇವಿಕಾ ರಾಣಿ ಅವರ ಪೂರ್ಣ ಹೆಸರು ದೇವಿಕಾ ರಾಣಿ ಚೌಧುರಿ. ಅವರ ತಾಯಿ ಲೀಲಾದೇವಿ ಚೌಧುರಿ ಮತ್ತು ತಂದೆ ಮನ್ಮಥನಾಥ ಚೌಧುರಿ. ತಂದೆ ಮದ್ರಾಸ್ ಪ್ರೆಸಿಡೆನ್ಸಿಯ ಮೊತ್ತ ಮೊದಲ ಭಾರತೀಯ ಸರ್ಜನ್ ಜನರಲ್. ಭಾರತಕ್ಕೆ ಪ್ರಪ್ರಥಮ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಖ್ಯಾತ ಕವಿ ರವೀಂದ್ರನಾಥ ಠಾಗೂರ್ ಅವರಿಗೆ ದೇವಿಕಾ ರಾಣಿ ಅತಿ ಹತ್ತಿರದ ಸಂಬಂಧಿ. ಶ್ರೀಮಂತ ಹಾಗೂ ಆಂಗ್ಲೀಕೃತ ಕುಟುಂಬದಲ್ಲಿ ಹುಟ್ಟಿದ ಇವರನ್ನು ಅವರ 9ನೇ ವರ್ಷದಲ್ಲಿಯೇ ಇಂಗ್ಲೆಂಡಿನ ವಸತಿ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಲಾಯಿತು. ಅವರ 16ರ ವಯಸ್ಸಿನಲ್ಲಿಯೇ ಅಭಿನಯದಲ್ಲಿ ತರಬೇತಿ ಪಡೆಯಲು ರಾಯಲ್ ಅಕಾಡೆಮಿ ಆಫ್ ಡ್ರೆಮೆಟಿಕ್ಸ್‍ನಲ್ಲಿ ವಿದ್ಯಾರ್ಥಿ ವೇತನ ದೊರೆಯಿತು. ವಸ್ತ್ರ ವಿನ್ಯಾಸ, ಅಲಂಕರಣ ಮತ್ತು ವಾಸ್ತುಶಿಲ್ಪಗಳಂಥ ಆನ್ವಯಿಕ ಕಲಾ ವಿಷಯಗಳಲ್ಲಿ ಪರಿಣತಿಯನ್ನು ಪಡೆದರು.

ಶ್ರೀ ಹಿಮಾಂಶು ರಾಯ್ ಅವರನ್ನು ದೇವಿಕಾ ಭೇಟಿಯಾದದ್ದು ಅವರಿಗೆ 20 ವರ್ಷಗಳಾಗಿದ್ದಾಗ, 1928ರಲ್ಲಿ. ವಕೀಲಿ ವೃತ್ತಿಗಾಗಿ ಹಿಮಾಂಶು ರಾಯ್ ಅವರು ಲಂಡನ್ನಿಗೆ ಹೋಗಿದ್ದರೂ ರಂಗಭೂಮಿ ಮತ್ತು ಸಿನಿಮಾಗಳೇ ಅವರ ಆಸಕ್ತಿಯ ಕೇಂದ್ರವಾಗಿತ್ತು. 1929ರಲ್ಲಿ ಅವರು ನಿರ್ಮಿಸಿದ ‘ಪ್ರಪಂಚ ಪಾಶ’ ಎಂಬ ಚಿತ್ರಕ್ಕೆ (ಅದರ ಆಂಗ್ಲ ಅವತರಣಿಕೆ ‘ಎ ತ್ರೋ ಆಫ್ ಡೈಸ್’) ವಸ್ತ್ರವಿನ್ಯಾಸಕಿಯಾಗಿ ಮತ್ತು ದೃಶ್ಯವಿನ್ಯಾಸಕಿಯಾಗಿ ಕೆಲಸ ಮಾಡಲು ದೇವಿಕಾ ರಾಣಿ ಅವರಿಗೆ ಅವಕಾಶ ದೊರೆಯಿತು. ಹಾಗೆ ಪರಿಚಯವಾದ, ಅವರಿಗಿಂತ 16 ವರ್ಷ ದೊಡ್ಡವರಾದ, ಆ ವೇಳೆಗಾಗಲೇ ವಿವಾಹವಾಗಿ ಒಂದು ಮಗುವಿನ ತಂದೆಯಾಗಿದ್ದ ಹಿಮಾಂಶು ರಾಯ್ ಅವರನ್ನು 1929ರಲ್ಲಿ ದೇವಿಕಾ ರಾಣಿ ವಿವಾಹವಾದರು. ಆ ನಂತರ ಈ ದಂಪತಿ ಬರ್ಲಿನ್‍ನ ಯುಎಫ್‍ಎ ಸ್ಟುಡಿಯೋ ಸೇರಿದರು. ರಾಯ್ ಅವರು ನಿರ್ಮಾಪಕರಾಗಿ ದುಡಿದರೆ, ದೇವಿಕಾ ರಾಣಿ ಅವರು ಚಿತ್ರ ನಿರ್ಮಾಣದ ವಿವಿಧ ಕೌಶಲಗಳನ್ನು ಗಳಿಸಿಕೊಳ್ಳುವಲ್ಲಿ ನಿರತರಾದರು.

ಅವರು ಚಿತ್ರ ರಂಗವನ್ನು ನಟಿಯಾಗಿ ಪ್ರವೇಶಿಸಿದ್ದು 1933ರಲ್ಲಿ ತಯಾರಾದ ‘ಕರ್ಮ’ ಚಿತ್ರದ ಮೂಲಕ ಈ ಚಿತ್ರದಲ್ಲಿನ ಅವರ ಅಭಿನಯಕ್ಕೆ ಪ್ರಶಂಸೆಗಳ ಸುರಿಮಳೆಯೇ ಸುರಿಯಿತು. ನಿಜ ಜೀವನದಲ್ಲಿಯೂ ದಂಪತಿಯಾದ ಇವರಿಬ್ಬರು ಅಭಿನಯಿಸಿದ ಈ ಚಿತ್ರದಲ್ಲಿನ ನಾಲ್ಕು ನಿಮಿಷದ ದೀರ್ಘ ಚುಂಬನದ ದೃಶ್ಯ ಇಂಗ್ಲೆಂಡಿನಲ್ಲಿ ಆಕರ್ಷಣೆಯನ್ನು ಕೆರಳಿಸಿತು. ಆದರೆ ಅದೇ ದೃಶ್ಯದಿಂದಾಗಿ, ಭಾರತದಲ್ಲಿ ಆ ಚಿತ್ರ ದಯನೀಯ ಸೋಲನ್ನು ಕಂಡಿತು. ಆ ವೇಳೆಗಾಗಲೇ ಆಕೆಗೆ ಅಮೆರಿಕಾ ಮತ್ತು ಜರ್ಮನಿಯ ಚಿತ್ರಗಳಲ್ಲಿ ನಟಿಸಲು ಆಹ್ವಾನಗಳು ಬರುತ್ತಿದ್ದವು. ಆದರೆ, ಭಾರತೀಯರಾಗಿ, ಭಾರತದ ನೆಲದಲ್ಲಿಯೇ ಚಿತ್ರ ನಿರ್ಮಾಣ ಮಾಡಬೇಕೆಂಬುದು ‘ಕರ್ಮ’ ಚಿತ್ರದ ನಿರ್ಮಾಪಕ, ಪತಿ ರಾಯ್ ಅವರ ಆಸೆಯಾಗಿತ್ತು. ಹಾಗಾಗಿ ಅವರು ತಮ್ಮ ಕಾರ್ಯಕ್ಷೇತ್ರವನ್ನು ಮುಂಬಯಿಗೆ ಸ್ಥಳಾಂತರಿಸಿದರು.

1934ರಲ್ಲಿ, ದೇವಿಕಾ ರಾಣಿ ದಂಪತಿ ಭಾರತಕ್ಕೆ ಮರಳಿದರು. ಹಿಮಾಂಶು ರಾಯ್ ಮತ್ತು ದೇವಿಕಾ ರಾಣಿ ತಮ್ಮ ಆಸೆಯಂತೆ ‘ಬಾಂಬೆ ಟಾಕೀಸ್’ ಎಂಬ ಚಿತ್ರ ನಿರ್ಮಾಣ ಸ್ಟುಡಿಯೋವನ್ನು, ಮುಂಬಯಿಯ ಮಲಾಡ್‍ನಲ್ಲಿ 18 ಎಕರೆಗಳ ಪ್ರದೇಶದಲ್ಲಿ, ಇತರ ಕೆಲವರೊಂದಿಗೆ ಸೇರಿ ಸ್ಥಾಪಿಸಿದರು. ‘ಹೊಸ ಸಾಹಸಕ್ಕೆ ಕೈಹಾಕುತ್ತಿದ್ದೇವೆ ಎಂಬ ಅರಿವು ನನಗೆ ಇತ್ತು. ಸ್ವಯಂಪೂರ್ಣ ಸ್ಟುಡಿಯೋ ಒಂದನ್ನು ಸ್ಥಾಪಿಸುವ ಪ್ರಯತ್ನವೇ ರೋಮಾಂಚನಕಾರಿಯಾಗಿತ್ತು. ಎಲ್ಲರೂ ಇದನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು, ಅದನ್ನು ಸಾಕಾರಗೊಳಿಸಿದೆವು’ ಎಂದು ಒಂದು ಸಂದರ್ಶನದಲ್ಲಿ ದೇವಿಕಾ ರಾಣಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿಯೇ ಇದು ಅತ್ಯುತ್ತಮ ನಿರ್ಮಾಣ ಸ್ಟುಡಿಯೋ ಎನ್ನಿಸಿಕೊಂಡಿತು. ಭಾರತೀಯ ಚಿತ್ರ ರಂಗದ ಇತಿಹಾಸದಲ್ಲಿ ಇದನ್ನು ಒಂದು ಮೈಲುಗಲ್ಲಾಗಿ ಇಂದಿಗೂ ಪರಿಗಣಿಸಲಾಗುತ್ತದೆ. ಅಶೋಕ್‍ಕುಮಾರ್, ದಿಲೀಪ್‍ಕುಮಾರ್, ರಾಜ್‍ಕಪೂರ್, ಲೀಲಾ ಚೆಟ್ನಿಸ್, ಮಧುಬಾಲಾ ಮುಂತಾದ ಚಿತ್ರ ರಂಗದ ಅತಿರಥ ಅಭಿನೇತ್ರಿಗಳ ಚಿತ್ರ ರಂಗದ ಪ್ರಯಾಣ ಪ್ರಾರಂಭವಾದದ್ದು ಇದೇ ಬಾಂಬೆ ಟಾಕೀಸ್ ಸ್ಟುಡಿಯೋದಿಂದ.

ದೇವಿಕಾ ರಾಣಿ ಚಿತ್ರರಂಗವನ್ನು ಪ್ರವೇಶಿಸಿದ್ದು, ಮರ್ಯಾದಸ್ಥ ಮನೆತನದ ಹೆಣ್ಣು ಮಕ್ಕಳು ಚಿತ್ರರಂಗವನ್ನು ಪ್ರವೇಶಿಸುವುದೇ ನಿಷಿದ್ಧ ಎಂಬ ಭಾವನೆಯಿದ್ದ ಕಾಲದಲ್ಲಿ. ದೇವಿಕಾ ರಾಣಿ ಅವರು ಲಂಡನ್ನಿನಲ್ಲಿ ಅಭ್ಯಾಸ ಮಾಡುವಾಗ ನೆಲೆಸಿದ್ದು, ನಿರಂಜನ್ ಪಾಲ್ ಎಂಬುವರ ಮನೆಯಲ್ಲಿ. ‘ದೇವಿಕಾ ರಾಣಿ, ಸರಳವಾದ ಉಡುಗೆಯಲ್ಲಿರುತ್ತಿದ್ದ ಮುದ್ದಾದ ಹುಡುಗಿಯಾಗಿದ್ದಳು. ಆದರೆ, ಆ ಮುಗ್ಧತೆಯ ಹಿಂದೆ, ಆ ವೇಳೆಗಾಗಲೇ ಅತೀ ಸ್ವಾವಲಂಬೀ ಸ್ವಭಾವ ಅಡಗಿತ್ತು. ರಬೀಂದ್ರನಾಥ ಠಾಗೂರರ ಅತಿ ಹತ್ತಿರದ ಸಂಬಂಧಿಯಾಗಿದ್ದರೂ, ಯಾರದ್ದೇ ಪ್ರಭಾವ ಬಳಸದೆ ತನ್ನ ಸ್ವಂತ ಪರಿಶ್ರಮ ಮತ್ತು ಪ್ರತಿಭೆಯಿಂದಲೇ ತನ್ನ ಭವಿಷ್ಯವನ್ನು ರೂಪಿಸಿಕೊಂಡಳು’ ಎಂದಿದ್ದಾರೆ. ಅವರೇ ಮುಂದುವರಿದು, ‘ಮುಂದೆ ಒಂದು ಫಿಲ್ಮ್ ಪಾರ್ಟಿಯಲ್ಲಿ ನೋಡಿದಾಗ, ಅವಳು ಆಡಂಬರ ದಿರಿಸಿನ ಮನಮೋಹಕ ಹುಡುಗಿಯಾಗಿ ಮಾರ್ಪಟ್ಟಿದ್ದಳು, ಹದಿನೆಂಟನೇ ವರ್ಷದಲ್ಲೇ ಸಿಗರೇಟು ಮದಿರೆಗಳನ್ನು ನಿರ್ಬಿಢೆಯಿಂದ ತೆಗೆದುಕೊಳ್ಳುತ್ತಿದ್ದಳು.’ ಎಂದು ನೆನಪಿಸಿಕೊಂಡಿದ್ದಾರೆ. ಭಾರತೀಯ ಹಿಂದಿ ಚಿತ್ರ ರಂಗವನ್ನು ತಮ್ಮ ಅಭಿನಯ ಹಾಗೂ ಸೌಂದರ್ಯದಿಂದ ಅಕ್ಷರಶಃ ಆಳಿದ ಮಧುಬಾಲಾ ಮತ್ತು ನರ್ಗಿಸ್‍ರಂಥ ಘಟಾನುಘಟಿ ನಾಯಕಿಯರಿಗಿಂತ ಮುಂಚೆಯೇ, ಅದೇ ಚಿತ್ರರಂಗವನ್ನು ಆಳಿದವರು ಅಭಿನೇತ್ರಿ, ಚಿತ್ರ ನಿರ್ಮಾಪಕಿ, ಸ್ವಯಂಪೂರ್ಣ ಸ್ಟುಡಿಯೋ ಎಂದು ಖ್ಯಾತಿ ಪಡೆದ ‘ಬಾಂಬೆ ಟಾಕೀಸ್’ ನ ಸಹ-ಸಂಸ್ಥಾಪಕಿ ದೇವಿಕಾ ರಾಣಿ. ಭಾರತೀಯ ಚಿತ್ರಗಳನ್ನು ವಿಶ್ವಕ್ಕೆ ಪರಿಚಯಿಸುವಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸಿದವರು. ‘ಬಾಂಬೆ ಟಾಕೀಸ್’ನಿಂದ ನಿರ್ಮಾಣಗೊಂಡ ಮೊದಲ ಚಿತ್ರ ‘ಜವಾನಿ ಹವಾ’ ಎಂಬ ಕ್ರೈಮ್ ಥ್ರಿಲ್ಲರ್. ಇದರಲ್ಲಿ ನಾಯಕಿ ದೇವಿಕಾ ರಾಣಿ, ನಾಯಕನ ಪಾತ್ರ ವಹಿಸಿದ್ದವರು, ನಜಮ್ ಉಲ್ ಹಸನ್. ನಂತರದ ಚಿತ್ರ ‘ಜೀವನ್ ನೈಯ್ಯಾ’. ಈ ಚಿತ್ರದ ಚಿತ್ರೀಕರಣದ ವೇಳೆಗೆ ದೇವಿಕಾ ರಾಣಿ ಮತ್ತು ರಾಯ್ ಅವರ ನಡುವಿನ ಸಂಬಂಧದಲ್ಲಿ ಬಿರುಕುಂಟಾಗಿತ್ತು. ಚಿತ್ರೀಕರಣವನ್ನು ತೊರೆದು, ದೇವಿಕಾ ತಮ್ಮ ಸಹ ನಟ ನಜಮ್ ಉಲ್ ಹಸನ್ ಅವರೊಂದಿಗೆ ಹೊರಟುಹೋದರು. ಅವರನ್ನು ಮತ್ತೆ ಸ್ಟುಡಿಯೋಗೆ ಕರೆ ತಂದದ್ದು ಅಲ್ಲೇ ಸೌಂಡ್ ಇಂಜಿನಿಯರ್ ಆಗಿದ್ದ ಸಶಧರ್ ಮುಖರ್ಜಿ ಅವರು.

ತನ್ನ ಹಣಕಾಸು ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ದೇವಿಕಾ ರಾಣಿ ಅವರ ಷರತ್ತನ್ನು ಮತ್ತು ನಜಮ್ ಉಲ್ ಹಸನ್ ಅವರನ್ನು ಸ್ಟುಡಿಯೋದಿಂದ ಹೊರಹಾಕಬೇಕು ಎಂಬ ರಾಯ್ ಅವರ ಷರತ್ತನ್ನು ಪರಸ್ಪರ ಒಪ್ಪಿಕೊಂಡು ಮತ್ತೆ ಚಿತ್ರೀಕರಣ ಕೆಲಸವನ್ನು ಇಬ್ಬರೂ ಮುಂದುವರಿಸಿದರು. ಆಗ ನಜಮ್ ಉಲ್ ಹಸನ್ ಅವರ ಬದಲಿಗೆ ದೇವಿಕಾರಾಣಿ ಅವರ ಎದುರು ನಟಿಸಲು ಅವಕಾಶ ದೊರೆತದ್ದು ಅಲ್ಲಿಯೇ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಕುಮುದಲಾಲ್ ಗಂಗೂಲಿ ಎಂಬ ಯುವಕನಿಗೆ. ಮುಂದೆ ಇದೇ ಯುವಕ ಅಶೋಕ್ ಕುಮಾರ್ ಎಂಬ ಹೆಸರನಿಂದ ಹಿಂದಿ ಚಿತ್ರರಂಗದ ಪ್ರಖ್ಯಾತ ನಟನಾಗಿ ಗುರುತಿಸಿಕೊಂಡದ್ದು ಈಗ ಇತಿಹಾಸ. ನಂತರದ ವರ್ಷ, 1936ರಲ್ಲಿ, ಇದೇ ಜೋಡಿಯನ್ನು ಹಾಕಿಕೊಂಡು ‘ಅಚೂತ್ ಕನ್ಯಾ’ ಎಂಬ ಚಿತ್ರ ನಿರ್ಮಾಣ ಮಾಡಲಾಯಿತು. ಇದರಲ್ಲಿ ನಾಯಕಿ ಅಸ್ಪøಶ್ಯ ಯುವತಿ, ನಾಯಕ ಬ್ರಾಹ್ಮಣ ಯುವಕ, ಇವರಿಬ್ಬರ ಪ್ರೇಮ ಕಥೆ ಈ ಚಿತ್ರದ ವಸ್ತು. ಜಾತಿ ಪದ್ಧತಿ ಆಳವಾಗಿ ಬೇರೂರಿದ್ದ ಆ ಕಾಲಕ್ಕೆ ಇಂಥದ್ದೊಂದು ಕಥಾ ಹಂದರವನ್ನು ಚಿತ್ರಕ್ಕೆ ಆಯ್ದುಕೊಂಡದ್ದು ಸಾಹಸವೇ ಆಗಿತ್ತು. ಸಮಾಜದ ಜಾತಿ ಪದ್ಧತಿಯನ್ನು ವಸ್ತುವಾಗಿಟ್ಟುಕೊಂಡು ಮಾಡಲಾದ ಈ ಚಿತ್ರವನ್ನು ಭಾರತೀಯ ಚಿತ್ರರಂಗದಲ್ಲಿ ಒಂದು ಮೈಲುಗಲ್ಲು ಎಂದೇ ಪರಿಗಣಿಸಲಾಗುತ್ತದೆ. ನಂತರದಲ್ಲೂ, ಗಟ್ಟಿ ಮಹಿಳಾ ಪಾತ್ರಗಳನ್ನುಳ್ಳ, ಸಮಾಜದ ವಾಸ್ತವಿಕ ಚಿತ್ರಣವನ್ನು ಬಿಂಬಿಸಿ ವಿಮರ್ಶಿಸುವಂಥ ಸುಮಾರು ಹತ್ತು ಚಿತ್ರಗಳಲ್ಲಿ ಇವರಿಬ್ಬರು ನಾಯಕ ನಾಯಕಿಯರಾಗಿ ನಟಿಸಿದರು. ಸುಮಾರು ಹತ್ತು ಚಿತ್ರಗಳಲ್ಲಿ ಈ ಜೋಡಿ ನಟಿಸಿದ್ದಾರೆ.

1930 ರ ದಶಕದಲ್ಲಿ ಬಾಂಬೆ ಟಾಕೀಸ್ ನಾಯಕಿಯರನ್ನು ಕೇಂದ್ರವಾಗುಳ್ಳ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿತು. ಜೀವನ್ ಪ್ರಭಾತ್, ಇಜ್ಜತ್, ನಿರ್ಮಲಾ, ವಚನ್, ದುರ್ಗಾ ಚಿತ್ರಗಳು ಮಹಿಳೆಯ ಭಾವಕೋಶದ ವಿವಿಧ ಮಗ್ಗಲುಗಳನ್ನು ತೆರದಿಡುವ ಚಿತ್ರಗಳಾಗಿ ಗಮನಾರ್ಹ ಯಶಸ್ಸನ್ನು ಕಂಡವು.

ಬಾಂಬೆಟಾಕೀಸ್ ಸ್ಟುಡಿಯೋ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಬಹು ಮುಖ್ಯ ಕಾರಣ ದೇವಿಕಾ ರಾಣಿಯವರ ಸಮ್ಮೋಹಕ ಅಭಿನಯ ಸಾಮಥ್ರ್ಯ ಮತ್ತು ಈ ಚಿತ್ರಗಳಿಗೆ ಹಣ ಹೂಡುವಂತೆ ಹಣಕಾಸು ಹೂಡಿಕೆದಾರರಿಗೆ ಮನದಟ್ಟುಮಾಡಿಸಿ ಮನವೊಲಿಸುವ ಸಾಮರ್ಥ್ಯ. ಹತ್ತು ವರ್ಷದ ಅವರ ಚಿತ್ರರಂಗದ ವೃತ್ತಿ ಜೀವನದಲ್ಲಿ ಹದಿನೈದು ಚಿತ್ರಗಳಲ್ಲಿ ನಟಿಸಿದರು. 1940 ರಲ್ಲಿ, ರಾಯ್ ಅವರ ಅಕಾಲಿಕ ನಿಧನ ದೇವಿಕಾ ಅವರ ವೈಯಕ್ತಿಕ ಜೀವನಕ್ಕೆ ಹಾಗೂ ಚಿತ್ರ ನಿರ್ಮಾಣ ಸ್ಟುಡಿಯೋದ ಭವಿಷ್ಯಕ್ಕೆ ಬಹು ದೊಡ್ಡ ಆಘಾತವನ್ನುಂಟು ಮಾಡಿತು. ಆದರೆ, ಆ ನಂತರವೂ ಬಾಂಬೆಟಾಕೀಸ್ ಅನ್ನು ದೇವಿಕಾ ರಾಣಿ ಐದು ವರ್ಷಗಳ ಕಾಲ ನಡೆಸಿಕೊಂಡು ಹೋದರು.

ಅಂಜಾನ್(1941), ಬಸಂತ್ ಮತ್ತು ಕಿಸ್ಮತ್(1943) ರಾಯ್ ಅವರ ಮರಣಾನಂತರ ನಿರ್ಮಾಣಗೊಂಡ ಚಿತ್ರಗಳು. ಭಾರತ ಬ್ರಿಟಿಷರ ಆಳ್ವಿಕೆಯಲ್ಲಿದ್ದಾಗಲೇ ಬ್ರಿಟಿಷ್ ವಿರೋಧೀ ಸಂದೇಶವುಳ್ಳ ಚಿತ್ರ ನಿರ್ಮಾಣ ಮಾಡಿದ್ದು ಅವರ ಎದೆಗಾರಿಕೆಗೆ ಸಾಕ್ಷಿ. ಈ ಚಿತ್ರ ಎಲ್ಲ ದಾಖಲೆಗಳನ್ನೂ ಮುರಿಯಿತು, ದೇವಿಕಾ ರಾಣಿ ಅಭಿನಯಿಸಿದ ಕೊನೆಯ ಚಿತ್ರ ‘ಹಮಾರಿ ಬಾತ್’(1943).

ಭಾರತದ ಪ್ರಪ್ರಥಮ ಚಿತ್ರ ನಿರ್ಮಾಣ ಸಂಸ್ಥೆ, ಬಾಂಬೆ ಟಾಕೀಸ್‍ನಲ್ಲಿ ಕಾಣಿಸಿಕೊಂಡ ಭಿನ್ನಾಭಿಪ್ರಾಯಗಳು ಹಾಗೂ ಕೆಲವೊಂದು ಆಂತರಿಕ ಕಲಹಗಳ ಕಾರಣದಿಂದಾಗಿ ಮತ್ತು ವ್ಯವಹಾರದಲ್ಲಿ ಬಂದಿತೆನ್ನಲಾದ ವಿವಾದದ ಕಾರಣಗಳಿಂದಾಗಿ ಅಷ್ಟೇ ಅನಿರೀಕ್ಷಿತವಾಗಿ 1945ರಲ್ಲಿ ದೇವಿಕಾ ರಾಣಿ ಅದೆಲ್ಲವನ್ನೂ ಒಮ್ಮೆಗೇ ತೊರೆದು ಹೊರಬಂದರು. ಪುರುಷ ಪಾರಮ್ಯವಿದ್ದ ಸಿನಿಮಾ ಜಗತ್ತಿನಲ್ಲಿ, ಮಹಿಳೆಯರು ಆ ಜಗತ್ತಿನಲ್ಲಿ ಕಾಲಿಡಲೂ ಹಿಂಜರಿಯುತ್ತಿದ್ದ ಆ ಕಾಲದಲ್ಲಿ, ತಮ್ಮ ಅಸಾಮಾನ್ಯ ಪ್ರತಿಭೆ, ಸೌಂದರ್ಯ, ಧೈರ್ಯ ಮತ್ತು ನಿರ್ಬಿಢೆಯ ಸ್ವಭಾವಗಳಿಂದ ದಶಕಕ್ಕೂ ಮೀರಿದ ಅವಧಿಗೆ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿದ್ದೇ ಅಲ್ಲದೆ ಎದುರಾದ ಎಲ್ಲ ಪ್ರತಿಕೂಲ ಸಂದರ್ಭಗಳಿಗೂ ಎದೆಯೊಡ್ಡಿ ಯಶಸ್ವಿಯಾದದ್ದು ಸಾಮಾನ್ಯ ಸಾಧನೆಯಲ್ಲ.

ಬಾಂಬೆ ಟಾಕೀಸ್‍ನಿಂದ ಹೊರಬಂದ ನಂತರ ನೀಡಿದ ಒಂದು ಸಂದರ್ಶನದಲ್ಲಿ, “ಚಿತ್ರ ನಿರ್ಮಾಣದ ‘ಕಲಾತ್ಮಕ ಮೌಲ್ಯಗಳನ್ನು’ ಹೊಂದಾಣಿಕೆ ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ತಾನು ಸಿದ್ಧಳಿರಲಿಲ್ಲ. ಅಲ್ಲಿಂದ ಹೊರಬರಲು ಇದೂ ಒಂದು ಮುಖ್ಯ ಕಾರಣ” ಎಂದು ತಿಳಿಸಿದ್ದಾರೆ. ಇದು, ಚಿತ್ರಗಳ ಬಗ್ಗೆ ಅವರಿಗಿದ್ದ ಬದ್ಧತೆಯನ್ನು ತೋರಿಸುತ್ತದೆ.

ದೇವಿಕಾ ರಾಣಿ ಅವರ ಮೇಲೆ ಜರ್ಮನ್ ಅಭಿನೇತ್ರಿ ಮರ್ಲೆನ್ ಡಿಟ್ರಿಚ್ ಅವರ ಪ್ರಭಾವವಿದ್ದರೂ ಅವರ ಅಭಿನಯವನ್ನು, ಸ್ವೀಡಿಷ್-ಅಮೆರಿಕನ್ ಅಭಿನೇತ್ರಿ ಗ್ರೆಟಾ ಗಾರ್‍ಬೋಗೆ ಹೋಲಿಸಿ ಭಾರತೀಯ ಗಾರ್‍ಬೋ ಎಂದೇ ಗುರುತಿಸಲಾಗಿದೆ. 1969ರಲ್ಲಿ ಸ್ಥಾಪಿಸಿದ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಮೊದಲು ಭಾಜನರಾದ ಕಲಾವಿದೆ ದೇವಿಕಾ ರಾಣಿ. 1990 ರಲ್ಲಿ ಸೋವಿಯತ್ ರಷ್ಯಾ “ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ” ಯನ್ನು ನೀಡಿ ಗೌರವಿಸಿದೆ. 2011 ರಲ್ಲಿ ಭಾರತ ಸರ್ಕಾರ ಇವರ ನೆನಪಿನಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.

ಚಿತ್ರ ರಂಗವನ್ನು ತೊರೆದ ನಂತರ ಅವರು, 1945 ರಲ್ಲಿ, ರಷ್ಯಾದ ಚಿತ್ರಕಲಾಕಾರ ಸ್ವೆಟೋಸ್ಲೇವ್ ರೋರಿಚ್ ಅವರನ್ನು ವಿವಾಹವಾಗುತ್ತಾರೆ. ವಿವಾಹದ ನಂತರ ಕೆಲವು ವರ್ಷಗಳು ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನೆಲೆಸಿ ವನ್ಯಜೀವಿಗಳ ಬಗ್ಗೆ ಕೆಲವೊಂದು ಸಾಕ್ಷ್ಯ ಚಿತ್ರಗಳನ್ನೂ ದೇವಿಕಾ ರಾಣಿ ನಿರ್ಮಿಸುತ್ತಾರೆ. ನಂತರದಲ್ಲಿ, ಬೆಂಗಳೂರಿನ ಹೊರವಲಯದಲ್ಲಿ 450 ಎಕರೆಗಳ ಭೂಮಿಯನ್ನು ಖರೀದಿಸಿ ಇಲ್ಲಿಯೇ ನೆಲೆಸುತ್ತಾರೆ. ಅವರು ನೆಲೆಸಿದ ತಾಟಗುಣಿ ಎಸ್ಟೇಟ್ ಹಲವು ಕಾರಣಗಳಿಗಾಗಿ ಇತ್ತೀಚಿನವರೆಗೂ ಸುದ್ದಿಯಾದದ್ದು ಇನ್ನೂ ನೆನಪಿನಿಂದ ಮರೆಯಾಗಿರುವುದಿಲ್ಲ.


ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಪದ್ಮಪ್ರಭೆ/ ಭಾರತೀಯ ಚಿತ್ರ ರಂಗದ ಪ್ರಪ್ರಥಮ ಅಭಿನೇತ್ರಿ ದೇವಿಕಾ ರಾಣಿ – ಡಾ. ಗೀತಾ ಕೃಷ್ಣಮೂರ್ತಿ

  • September 12, 2020 at 11:08 am
    Permalink

    Beautiful article, very well written. Informative.

    Reply

Leave a Reply

Your email address will not be published. Required fields are marked *