ಪದ್ಮಪ್ರಭೆ / ಬಹುಮುಖ ಸಮಾಜ ಸೇವೆಯ ಸುಧಾ ಮೂರ್ತಿ-ಡಾ. ಗೀತಾ ಕೃಷ್ಣಮೂರ್ತಿ
1996 ರಲ್ಲಿ ಪ್ರಾರಂಭವಾದ ‘ಇನ್ಫೋಸಿಸ್ ಪ್ರತಿಷ್ಠಾನ’ ದ ಮೂಲಕ ಸುಧಾ ಮೂರ್ತಿ ಅವರು ಮಾಡುತ್ತಿರುವ ಸಮಾಜಸೇವೆ ಬಹುಮುಖಿ ಮತ್ತು ಬಹುರೂಪಿಯಾದದ್ದು. ಇನ್ಫೋಸಿಸ್ ನಂಥ ದೈತ್ಯ ಕಂಪೆನಿಯ ಪ್ರಾರಂಭಕ್ಕೆ ಕಾರಣವಾಗಿ, ಅವರನ್ನೂ ಬೆಳೆಸಿ, ತಾವೂ ಬೆಳೆದ ಸಾಧಕಿ ಅವರು. ಸಮಾಜದ ಶೋಷಿತ ವರ್ಗದವರಿಗೆ ಸಹಾಯ ಹಸ್ತ ಚಾಚುವ ಉದ್ದೇಶದಿಂದ, ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಆರೋಗ್ಯ ಸೇವೆಗಳು ಹಾಗೂ ನಿರ್ಗತಿಕರ ಪುನರ್ವಸತಿ ಕ್ಷೇತ್ರಗಳಲ್ಲಿ ಪ್ರತಿಷ್ಠಾನದ ಮೂಲಕ ಅವರು ಮಾಡುತ್ತಿರುವ ಸೇವೆ ಅನುಪಮವಾದದ್ದು. ಅವರ ಈ ಸಮಾಜಸೇವೆಯನ್ನು ಗುರುತಿಸಿ ಅವರಿಗೆ 2006 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಸುಧಾ ಮೂರ್ತಿ ಅವರ ಹೆಸರನ್ನು ಕೇಳಿದೊಡನೆ ಕಣ್ಣ ಮುಂದೆ ಬರುವುದು ಮುಖದ ತುಂಬ ನಗು ತುಂಬಿಕೊಂಡ ಹೃದಯವಂತಿಕೆಯ ಸಂಪನ್ನೆ. ಈ ನಗು ಬರಿಯ ಸಿರಿವಂತಿಕೆಯಿಂದ ಮಾತ್ರ ಬಂದದ್ದಲ್ಲ ಅನ್ನುವುದೇ ಇವರ ವಿಶೇಷತೆ. ಹಣದ ಸಿರಿವಂತಿಕೆಯೊಡನೆ ಹೃದಯ ಸಿರಿವಂತಿಕೆಯೂ ಇವರಲ್ಲಿ ಮೈಗೂಡಿದೆ. ಅವರ ಸರಳತೆ ಅವರ ವ್ಯಕ್ತಿತ್ವಕ್ಕೆ ವಿಶೇಷ ಮೆರುಗನ್ನು ನೀಡುತ್ತದೆ.
ಸುಧಾ ಮೂರ್ತಿ ಜನಿಸಿದ್ದು ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ, 1950 ರಲ್ಲಿ. ಅವರ ತಂದೆ ಡಾ. ಆರ್.ಎಚ್. ಕುಲಕರ್ಣಿ, ತಾಯಿ ವಿಮಲಾ ಕುಲಕರ್ಣಿ. ಕುಟುಂಬದ ಸದಸ್ಯರೆಲ್ಲರೂ ಉನ್ನತ ಶಿಕ್ಷಣ ಪಡೆದವರು. ಅವರು ಇಂಜಿನಿಯರಿಂಗ್ ಪದವಿಯನ್ನು ಪಡೆದದ್ದು ಬಿವಿಬಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ. ಎಲ್ಲ ವಿಭಾಗಗಳಲ್ಲೂ ಪ್ರಥಮ ಸ್ಥಾನ ಪಡೆದು, ಇಂಜಿನಿಯರಿಂಗ್ ನಲ್ಲಿ ಮೊದಲ ರ್ಯಾಂಕ್ ಪಡೆದು 1972 ರಲ್ಲಿ ಪದವೀಧರೆಯಾದರು. 1974 ರಲ್ಲಿ ಅವರು ಭಾರತೀಯ ವಿಜ್ಞಾನ ಸಂಸ್ಥೆಯಿಂದ ಎಂ.ಇ. ಪದವಿಯಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದರು. ಅಲ್ಲಿಯೂ ಚಿನ್ನದ ಪದಕ ಪಡೆದರು. ಕಾಲೇಜಿನಲ್ಲಿ 150 ಮಂದಿ ವಿದ್ಯಾರ್ಥಿಗಳಿದ್ದ ತರಗತಿಯಲ್ಲಿ ಅವರು ಒಬ್ಬರೇ ವಿದ್ಯಾರ್ಥಿನಿಯಾಗಿದ್ದರು. ಆ ಕಾರಣಕ್ಕಾಗಿ ಎದುರಿಸಬೇಕಾಗಿ ಬಂದ ಎಲ್ಲ ರೀತಿಯ ಚುಡಾಯಿಸುವಿಕೆಗಳನ್ನೂ ಧೈರ್ಯಗುಂದದೆ ಎದುರಿಸಿದರು. ಅವರ ಗಮ್ಯವನ್ನು ಯಶಸ್ವಿಯಾಗಿ ತಲುಪುವುದಷ್ಟೇ ಅವರ ಗುರಿ ಆಗಿತ್ತು. ಆ ದಾರಿಯಲ್ಲಿ ಏನೇ ಅಡೆತಡೆಗಳು ಬಂದರೂ ಅದನ್ನು ಎದುರಿಸಿ ದೃಢ ಆತ್ಮ ವಿಶ್ವಾಸದಿಂದ ಮುನ್ನಡೆಯುವುದು ಅವರ ಸ್ವಭಾವವೇ ಆಗಿತ್ತು. ಈ ಏಕಾಗ್ರತೆ ಅವರ ಎಲ್ಲ ಕೆಲಸಗಳಲ್ಲಿಯೂ ಇತ್ತು. ಹಾಗಾಗಿಯೇ ಅವರು ಇಂದು ತಲುಪಿರುವ ಈ ಎತ್ತರವನ್ನು ತಲುಪಲು ಸಾಧ್ಯವಾಯಿತು.
ಸುಧಾ ಅವರ ಉದ್ಯೋಗದ ವೃತ್ತಿ ಜೀವನದ ಪ್ರಾರಂಭವೂ ಒಂದು ದಂತ ಕಥೆಯಂತೆಯೇ ಇದೆ. ಉದ್ಯಮ ದೈತ್ಯ ಟಾಟಾ ಸಮೂಹದ ಟೆಲ್ಕೋ ಕಂಪೆನಿ ಇಂಜಿನಿಯರ್‍ಗಳನ್ನು ನೇಮಿಸಿಕೊಳ್ಳಲು ಜಾಹೀರಾತನ್ನು ನೀಡಿತ್ತು. ಆದರೆ ಮಹಿಳೆಯರು ಅರ್ಜಿ ಸಲ್ಲಿಸುವುದನ್ನು ನಿಷೇಧಿಸಲಾಗಿತ್ತು. ಹುದ್ದೆಗೆ ಅಗತ್ಯ ಅರ್ಹತೆಯನ್ನು ಪಡೆದಿದ್ದಾಗ್ಯೂ ಮಹಿಳೆ ಎಂಬ ಕಾರಣಕ್ಕೆ ಅನರ್ಹಗೊಳ್ಳುವುದನ್ನು ಸುಧಾ ಅವರ ಸ್ವಾಭಿಮಾನ ಒಪ್ಪಲಿಲ್ಲ. ಆ ಬಗ್ಗೆ ಅವರು ನೇರವಾಗಿ ಆ ಕಂಪನಿಯ ಅಧ್ಯಕ್ಷರಿಗೇ ಅದನ್ನು ಪ್ರಶ್ನಿಸಿ ಪತ್ರ ಬರೆದುಬಿಟ್ಟರು. ಆಶ್ಚರ್ಯವೆಂಬಂತೆ ಅವರ ಪತ್ರಕ್ಕೆ ಪ್ರತಿಕ್ರಿಯಿಸಿ ಅವರನ್ನು ಸಂದರ್ಶನಕ್ಕೆ ಕರೆದದ್ದೂ ಅಲ್ಲದೆ ಅವರಿಗೆ ಉದ್ಯೋಗವನ್ನೂ ನೀಡಲಾಯಿತು. ಅಲ್ಲಿಯೂ ಅವರು ಒಂದು ದಾಖಲೆಯನ್ನು ಸೃಷ್ಟಿಸಿದ್ದರು. ಭಾರತದ ಅತಿ ದೊಡ್ಡ ಕಂಪೆನಿಯಾದ ಟೆಲ್ಕೋ ಕಂಪೆನಿಯಲ್ಲಿ ನೇಮಕಗೊಂಡ ಪ್ರಥಮ ಮಹಿಳೆಯಾಗಿದ್ದರು.
ನಾರಾಯಣ ಮೂರ್ತಿ ಅವರನ್ನು ಮೆಚ್ಚಿ ಅತ್ಯಂತ ಸರಳ ರೀತಿಯಲ್ಲಿ ವಿವಾಹವಾದ ನಂತರ, ಟೆಲ್ಕೋ ಕಂಪೆನಿಯ ಉದ್ಯೋಗವನ್ನು ತೊರೆದು ಪುಣೆಗೆ ಸ್ಥಳಾಂತರಗೊಂಡರು. ಹೊಸ ಕಂಪೆನಿ ಕಟ್ಟುವ ಸಂಗಾತಿಯ ಕನಸನ್ನು ಸಾಕಾರಗೊಳಿಸಲು ಕಷ್ಟ ಕಾಲಕ್ಕೆಂದು ಕೂಡಿಟ್ಟಿದ್ದ 10,000 ರೂಗಳನ್ನು ನೀಡಿ, ಕುಟುಂಬದ ನೊಗವನ್ನು ತಾನು ಹೊತ್ತು, ಮೂರ್ತಿ ಅವರನ್ನು ಅವರ ಕನಸಿನ ಬೆನ್ನು ಹತ್ತಿ ಹೋಗಲು ಅನುವು ಮಾಡಿಕೊಟ್ಟವರು ಸುಧಾ ಮೂರ್ತಿ. ಹಾಗೆ ಕಟ್ಟಿದ ಇನ್ಫೋಸಿಸ್ ಕಂಪನಿಯಲ್ಲಿ, ಪತಿ ಪತ್ನಿಯರಿಬ್ಬರೂ ಒಂದು ತಂಡವಾಗಿ ಒಂದೇ ಕಂಪೆನಿಯಲ್ಲಿ ತೊಡಗಿಕೊಳ್ಳುವುದು ಬೇಡವೆಂಬ ಕಾರಣ ನೀಡಿ, ಪತಿ ತಮ್ಮನ್ನು ಅವರ ಕಂಪೆನಿಯಲ್ಲಿ ತೊಡಗಿಸಿಕೊಳ್ಳದೆ ಇದ್ದಾಗ, ಬೇಸರಗೊಂಡರೂ, ಅವರ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವ ಹೃದಯ ಶ್ರೀಮಂತಿಕೆಯನ್ನು ಮೆರೆದವರು ಅವರು.
ನೇಮಕಾತಿಯಲ್ಲಿ ಸ್ತ್ರೀ ಪುರುಷ ತಾರತಮ್ಯ ತೋರಿದುದನ್ನು ಪ್ರಶ್ನಿಸಿ ಟೆಲ್ಕೋದಂಥ ಭಾರತದ ಅತಿದೊಡ್ಡ ಕಂಪನಿಯ ಅಧ್ಯಕ್ಷರಾಗಿದ್ದ ಜೆ.ಆರ್.ಡಿ. ಟಾಟಾ ಅವರಿಗೇ ಪತ್ರ ಬರೆದು ಉದ್ಯೋಗ ಗಳಿಸಿಕೊಂಡ ಸುಧಾ ಅವರು ಆ ಕಂಪೆನಿಯನ್ನು ಬಿಟ್ಟು ಹೊರಬರುವಾಗ ಟಾಟಾ ಅವರು ಒಂದು ಮಾತನ್ನು ಹೇಳಿದರಂತೆ -“ಯಾರೂ ಹಣದ ಮಾಲೀಕರಲ್ಲ. ಅವರು ಹಣದ ಟ್ರಸ್ಟೀ ಗಳಷ್ಟೇ. ಹಣ ಯಾವಾಗಲೂ ಕೈಗಳನ್ನು ಬದಲಿಸುತ್ತಿರುತ್ತದೆ. ಆದ್ದರಿಂದ ನೀನು ಯಶಸ್ವಿಯಾದಾಗ, ನಿನಗಿಷ್ಟು ಕೊಟ್ಟ ಸಮಾಜಕ್ಕೆ ನೀನು ಹಿಂತಿರುಗಿ ಕೊಡು”. ಟಾಟಾ ಅವರು ಹೇಳಿದ ಮಾತು ಮುಂದಿನ ಅವರ ಜೀವನದ ದಿಕ್ಕನ್ನು ಸೂಚಿಸಿತು. ಮುಂದೆ ಒಂದು ಸಂದರ್ಭದಲ್ಲಿ, “ನೀನು ಪಾಲಿಸದೆ ಇದ್ದುದನ್ನು ಪಾಲಿಸುವಂತೆ ಇತರರಿಗೆ ಹೇಳುವ ನೈತಿಕತೆ ನಿನಗೆ ಇರುವುದಿಲ್ಲ” ಎಂದ ಮಗಳ ನುಡಿಗಳು ಅವರ ಜೀವನದ ನಡೆಯನ್ನು ನಿರ್ಧರಿಸಿತು. ಅಲ್ಲಿಂದ ಮುಂದೆ ಅವರು ಪೂರ್ಣ ಪ್ರಮಾಣದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು.
ಸಿರಿವಂತಿಕೆಯ ನಡುವೆ ಇದ್ದ ಸುಧಾ ಮೂರ್ತಿ ಆಯ್ದುಕೊಂಡದ್ದು ಹೆಚ್ಚಿನವರು ನಡೆದಿಲ್ಲದ ಹಾದಿಯನ್ನು. ಅಲ್ಲಿಂದ ಅವರ ಜೀವನವೊಂದೇ ಬದಲಾಗಲಿಲ್ಲ. ಅನೇಕರ ಜೀವನ ಬದಲಾಯಿತು. ಅವರು ಸಮಾಜ ಸೇವೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡದ್ದು ಅವರ 45 ನೇ ವರ್ಷದಲ್ಲಿ. “ನಾನು ಒಬ್ಬ ಇಂಜಿನಿಯರ್, ತನಗೆ ಸಮಾಜ ಸೇವೆಯಲ್ಲಿ ಯಾವುದೇ ಅನುಭವವಿರಲಿಲ್ಲ. ಆದರೆ ಒಮ್ಮೆ ಅದರಲ್ಲಿ ತೊಡಗಿಕೊಂಡ ನಂತರ ನನ್ನ ಜೀವನ ದೃಷ್ಟಿಯೇ ಬದಲಾಯಿತು. ಭಾರತ ಎಂದರೆ, ಒಂದಷ್ಟು ಜಿಡಿಪಿ ಇರುವ ಅನೇಕ ರಾಜ್ಯಗಳ ಸಮೂಹ ಎಂದು ಗ್ರಹಿಸಿದ್ದ ನನಗೆ, ಭಾರತ ನಿಜವಾಗಿ ಅರ್ಥವಾದದ್ದೇ ಸಮಾಜಸೇವೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡ ನಂತರ. ನಮ್ಮಂಥ ಅನೇಕಾನೇಕ ಪ್ರತಿಭಾವಂತರು ಬಡತನದ ಕಾರಣದಿಂದಾಗಿ ಬೆಳಕಿಗೆ ಬಾರದೆ, ಅವಕಾಶದಿಂದ ವಂಚಿತರಾಗಿದ್ದಾರೆ. ಅವರ ಅಸಹಾಯಕತೆಯನ್ನು ನೋಡಿ ಅವರಿಗೇನು ಬೇಕಾಗಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡೆ” ಎಂದು ತಮ್ಮ ಸಮಾಜ ಸೇವೆಯನ್ನು ಮುನ್ನಡೆಸಿದ ಗ್ರಹಿಕೆಯನ್ನು ತೆರೆದಿಡುತ್ತಾರೆ ಅವರು.
ಇನ್ಫೋಸಿಸ್ ಐಟಿ ಕಂಪೆನಿಯ ನಾನ್ ಪ್ರಾಫಿಟ್ ಶಾಖೆಯಾಗಿ `ಇನ್ಫೋಸಿಸ್ ಪ್ರತಿಷ್ಠಾನ' ಪ್ರಾರಂಭವಾದದ್ದು 1996 ರಲ್ಲಿ. ಅದಕ್ಕೆ ದೇಣಿಗೆ ಬರುವುದು ಇನ್ಫೋಸಿಸ್ ಐಟಿ ಕಂಪೆನಿಯಿಂದ ಮಾತ್ರ. ಇದರ ಅಧ್ಯಕ್ಷೆಯಾಗಿ ಸುಧಾ ಮೂರ್ತಿ ಅವರು 20 ವರ್ಷಗಳಿಂದ ಸತತವಾಗಿ ಸಮಾಜಕ್ಕೆ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಕಂಪೆನಿಯ ಸಿಎಸ್‍ಆರ್ (ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಲಿಟಿ ) ಕಡೆಯಿಂದ ಇನ್ಫೋಸಿಸ್ ಪ್ರತಿಷ್ಠಾನಕ್ಕೆ ದೇಣಿಗೆಯಾಗಿ ಹರಿದು ಬರುವ ಕೋಟಿ ಕೋಟಿ ರೂಪಾಯಿಗಳನ್ನು ಒಂದಿಷ್ಟೂ ದುರುಪಯೋಗವಾಗದಂತೆ, ಅಗತ್ಯವಿರುವ ಅರ್ಹರಿಗೆ ತಲುಪಿಸುವ ಕಾರ್ಯ ಸುಲಭದ್ದಲ್ಲ. ನಿಸ್ಪøಹತೆ, ಪ್ರಾಮಾಣಿಕತೆ, ವೈಯಕ್ತಿಕ ಆದ್ಯತೆಗಳನ್ನು ಬದಿಗಿಟ್ಟು ತಮ್ಮ ಸಮಯದ ಸಂಪೂರ್ಣ ವಿನಿಯೋಗಗಳ ಜೊತೆಗೆ ಅದಕ್ಕೆ ಬೇಕಾಗಿರುವುದು ತಾನು ಮಾಡುವ ಕೆಲಸದ ಬಗೆಗೆ ಅದಮ್ಯ ಪ್ರೀತಿ. ಸುಧಾ ಅವರ ಈ ಪ್ರೀತಿಯಿಂದಾಗಿ ಅವರ ಕಾರ್ಯ ಎಲ್ಲ ಕ್ಷೇತ್ರಗಳಿಗೆ ಮತ್ತು ಭಾರತದ ಮೂಲೆ ಮೂಲೆಗೆ ವಿಸ್ತರಿಸಿದೆ.
ಬಹುನೆಲೆಯ ಸೇವೆ : 1996 ರಲ್ಲಿ 32 ಲಕ್ಷ ರೂಗಳ ಮೂಲಧನದೊಂದಿಗೆ ಪ್ರಾರಂಭವಾದ
`ಇನ್ಫೋಸಿಸ್ ಪ್ರತಿಷ್ಠಾನ’ 19 ವರ್ಷಗಳಲ್ಲಿ ಸುಮಾರು 450 ಕೋಟಿಗಳಿಗಿಂತ ಹೆಚ್ಚು ಹಣವನ್ನು ಸಮಾಜಕ್ಕೆ ಹಿಂತಿರುಗಿ ಕೊಟ್ಟಿದೆ! ಆರೋಗ್ಯ ಸೇವೆ, ಶಿಕ್ಷಣ, ಮಹಿಳಾ ಸಬಲೀಕರಣ, ಸಾರ್ವಜನಿಕ ಶುಚಿತ್ವ, ಕಲೆ ಮತ್ತು ಸಂಸ್ಕøತಿ, ಬೇರು ಮಟ್ಟದಲ್ಲಿ ಬಡತನ ನಿರ್ಮೂಲನೆ ಹೀಗೆ ಎಲ್ಲ ಕ್ಷೇತ್ರಗಳಿಗೂ ಇವರ ಸಮಾಜ ಸೇವೆ ವಿಸ್ತರಿಸಿದೆ. ಇನ್ಫೋಸಿಸ್ ಪ್ರತಿಷ್ಠಾನ' ದೇಶದಲ್ಲಿ 70,000 ಕ್ಕೂ ಹೆಚ್ಚು ಗ್ರಂಥಾಲಯಗಳನ್ನು ಸ್ಥಾಪಿಸಿದೆ, ಪ್ರಾಕೃತಿಕ ವಿಕೋಪಗಳಿಂದ ನೆಲೆ ಕಳೆದುಕೊಂಡವರಿಗಾಗಿ 2300 ಕ್ಕೂ ಹೆಚ್ಚಿನ ಮನೆಗಳನ್ನು ಕಟ್ಟಿಕೊಟ್ಟಿದೆ, 16,000ಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದೆ, 2018 ರಲ್ಲಿ ಕೊಡಗು ಅತಿವೃಷ್ಟಿಯಿಂದ ತತ್ತರಿಸಿದಾಗ, ಕುಟುಂಬಗಳ ಪುನರ್ವಸತಿಗಾಗಿ, 25 ಕೋಟಿ ರೂಗಳನ್ನು ದಾನವಾಗಿ ನೀಡಿದೆ, ರಾಷ್ಟ್ರಕ್ಕಾಗಿ ಅಸು ನೀಗಿದ 800 ಯೋಧರ ಕುಟುಂಬಗಳಿಗೆ 10 ಕೋಟಿಗೂ ಮೀರಿದ ಹಣವನ್ನು ನೀಡಿದೆ, ಇತ್ತೀಚಿನ ಕೊರೋನಾ ವೈರಸ್ ಪಿಡುಗಿನ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ, ಪಿಪಿಇ ಕಿಟ್‍ಗಳನ್ನು ಒದಗಿಸುವುದಕ್ಕಾಗಿ ಸುಮಾರು 150 ಕೋಟಿ ರೂಗಳನ್ನು ವ್ಯಯಿಸಿದೆ. ಈ ಎಲ್ಲ ಕಾರ್ಯಕ್ರಗಳ ಹಿಂದಿನ ಕ್ರತುಶಕ್ತಿ ಸುಧಾ ಮೂರ್ತಿ. ಕನಿಷ್ಠ ಪಕ್ಷ 100 ಮಂದಿ ಲೈಂಗಿಕ ಕಾರ್ಯಕರ್ತೆಯರ ಬದುಕನ್ನಾದರೂ ಬದಲಾಯಿಸಬೇಕೆಂದು ಬಯಸಿದ್ದ ಸುಧಾ ಮೂರ್ತಿ ಅವರಿಗೆ 3000 ಮಂದಿ ಅಂಥ ಲೈಂಗಿಕ ಕಾರ್ಯಕರ್ತೆಯರ ಬದುಕನ್ನು ಸುಧಾರಿಸಿದ ತೃಪ್ತಿ ಇದೆ ಅವರಿಗೆ. ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿ ರೂಢಿಯಲ್ಲಿರುವ ದೇವದಾಸಿ ಪದ್ಧತಿಯ ವಿರುದ್ಧ ಹೋರಾಡಿ ಅದರ ನಿರ್ಮೂಲನೆಗೆ ಎದೆಗುಂದದೆ ಶ್ರಮಿಸಿದ್ದಾರೆ.
ತಮಗೆ ಯಾವಾಗಲೂ, ಅಂದಿನಿಂದ ಇಂದಿನವರೆಗೆ, ಸ್ಫೂರ್ತಿ ಟಾಟಾ ಎಂದು ಸುಧಾ ಸ್ಮರಿಸುತ್ತಾರೆ. ಅವರ ಕಾರ್ಯ ವ್ಯಾಪ್ತಿಯ ಕ್ಷೇತ್ರಗಳು ಹಲವಾರು. ಟಾಟಾ ಅವರು ತಮ್ಮ ಆಸ್ತಿಯನ್ನು ಮೂರು ಭಾಗವನ್ನಾಗಿ ಮಾಡಿ ಹಂಚಿದ್ದು, ತಮ್ಮ ಇಬ್ಬರು ಮಕ್ಕಳಾದ ರತನ್‍ಜಿ ಮತ್ತು ದೊರಾಬ್‍ಜಿ ಅವರಿಗೆ ಒಂದೊಂದು ಭಾಗವನ್ನಾದರೆ ಮತ್ತೊಂದು ಭಾಗವನ್ನು ಅವರು ನೀಡಿದುದು ಭಾರತೀಯ ವಿಜ್ಞಾನ ಸಂಸ್ಥೆಗೆ! ಆ ಸಂಸ್ಥೆಯನ್ನು ಅವರು ತಮ್ಮ ಮೂರನೆಯ ಮಗನನ್ನಾಗಿ ಪರಿಗಣಿಸುತ್ತಿದ್ದರು! ಅವರ ದೇಶ ಪ್ರೇಮದ ಪರಿ ಅಂಥದ್ದು. ನಮ್ಮ
ಇನ್ಫೋಸಿಸ್ ಪ್ರತಿಷ್ಠಾನ’ದ ಆಶಯವೂ ಅದೇ ಆಗಿರಬೇಕು ಎನ್ನುತ್ತಾರೆ ಸುಧಾ ಮೂರ್ತಿ.
`ಇನ್ಫೋಸಿಸ್ ಪ್ರತಿಷ್ಠಾನ’ದ ಕೆಲಸಗಳಿಗಾಗಿ ತಿಂಗಳಲ್ಲಿ 20 ದಿನಗಳನ್ನು ಸಂಚರಿಸುತ್ತ ಕಳೆಯುವ ಸುಧಾ ಮೂರ್ತಿ ಅವರು ಬದುಕಿಗೆ ಬಣ್ಣ ತುಂಬುವ ಖುಷಿಗಳಿಂದ ಎಂದೂ ವಿಮುಖರಾದವರಲ್ಲ. ಅವರಿಗೆ ಚಲನಚಿತ್ರಗಳನ್ನು ನೋಡುವುದೆಂದರೆ ಬಹಳ ಪ್ರಿಯವಂತೆ. ವರ್ಷದ 365 ದಿನವೂ ನೋಡಲು ಸಿದ್ಧ ಎನ್ನುತ್ತಾರೆ ಅವರು. ನಾನು ಇಚಿಜಿನಿಯರ್ ಆಗಿರದಿದ್ದಿದ್ದರೆ ಚಲನ ಚಿತ್ರ ಪತ್ರಕರ್ತೆಯಾಗಿರುತ್ತಿದ್ದೆ ಎನ್ನುತ್ತಾರೆ.
ಸುಧಾ ಮೂರ್ತಿ ಅವರಿಗೆ ಸಮಾಜ ಸೇವೆಯ ಜೊತೆಗೆ ಸಾಹಿತ್ಯದಲ್ಲೂ ಅಪರಿಮಿತ ಆಸಕ್ತಿ. ಅವರು ಒಬ್ಬ ಖ್ಯಾತ ಲೇಖಕಿಯೂ ಹೌದು. ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಅಲ್ಲದೆ ಕನ್ನಡದಲ್ಲಿ ಬರೆದ ಇವರ ಅನೇಕ ಪುಸ್ತಕಗಳು ಇಂಗ್ಲಿಷ್ ಹಾಗೂ ಇತರ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಸಹೃದಯತೆ, ಸಂವೇದನಾಶೀಲತೆ ಮತ್ತು ಅನುಭವಗಳು ಮುಪ್ಪುರಿಗೊಂಡು ಅವರ ಕತೆಗಳನ್ನು ಶ್ರೀಮಂತವಾಗಿಸಿವೆ. ಸರಳ ಭಾಷೆಯಲ್ಲಿ ಸರಳ ರೀತಿಯಲ್ಲಿ ಕತೆ ಹೇಳುವ ಕಲೆ ಅವರಿಗೆ ಸಿದ್ಧಿಸಿದೆ. ಹಾಗೆಂದೇ ಅವು ಅಷ್ಟು ಜನಪ್ರಿಯವಾಗಿವೆ. ಅವರ ಡಾಲರ್ ಸೊಸೆ, ಕಾವೇರಿಯಿಂದ ಮೆಕಾಂಗಿಗೆ, ಋಣ, ಹಕ್ಕಿಯ ತೆರದಲ್ಲಿ, ಗುಟ್ಟೊಂದು ಹೇಳುವೆ ಬಹಳ ಜನಪ್ರಿಯ ಪುಸ್ತಕಗಳು. ಅವರ ಜನಪ್ರಿಯ ಕೃತಿಗಳಲ್ಲಿ ಒಂದಾದ ‘ನನ್ನ ಅಜ್ಜಿಗೆ ನಾ ಹೇಗೆ ಓದಲು ಕಲಿಸಿದೆ ಮತ್ತು ಇತರ ಕಥೆಗಳು’ 15 ಭಾಷೆಗಳಿಗೆ ಭಾಷಾಂತರಗೊಂಡಿದೆ! ಅವರ ಮೊದಲ ಕಾದಂಬರಿ, ‘ಹೌಸ್ ಆಫ್ ಕಾಡ್ರ್ಸ್’. ಇದು ಶ್ರೀಮಂತ ವೈದ್ಯರ ಪತ್ನಿಯೊಬ್ಬರು ಎದುರಿಸಿದ ಪ್ರಕ್ಷುಬ್ಧ ಪರಿಸ್ಥಿತಿಯನ್ನು ವಿವರಿಸುತ್ತದೆ. ಸುಧಾ ಮೂರ್ತಿ ಅವರ ಸಮಾಜ ಸೇವೆಗಾಗಿ, ಮತ್ತು ಸಾಹಿತ್ಯ ಕೃಷಿಗಾಗಿ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಗೌರವ ಡಾಕ್ಟರೇಟ್ ನೀಡಿ ಅವರನ್ನು ಗೌರವಿಸಲಾಗಿದೆ.
- ಡಾ. ಗೀತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.