ಪದ್ಮಪ್ರಭೆ/ ಪಂಚಭಾಷಾ ತಾರೆ ಭಾರತಿ ವಿಷ್ಣುವರ್ಧನ್ – ಡಾ. ಗೀತಾ ಕೃಷ್ಣಮೂರ್ತಿ


ದಿನಾಲ್ಕರ ಹರೆಯದಲ್ಲಿ ಚಿತ್ರರಂಗವನ್ನು ಪ್ರವೇಶಿಸಿದ ಭಾರತಿ, ಐದು ಭಾಷೆಗಳ ಚಿತ್ರರಂಗಗಳ ಮೇರು ಕಲಾವಿದರೊಂದಿಗೆ ಐದು ದಶಕಗಳಿಗೂ ಹೆಚ್ಚು ಕಾಲ ನಟಿಸಿ ತಮ್ಮ ಪ್ರತಿಭೆಯನ್ನು ಮೆರೆದರು. ಭಾರತೀಯ ಚಿತ್ರರಂಗದ ಪ್ರಮುಖ ದಾಖಲೆಗಳಲ್ಲಿ ಪಾಲು ಪಡೆದ ಈ ಸಹಜ ಅಭಿನೇತ್ರಿಗೆ 2017 ರಲ್ಲಿ ಪದ್ಮಶ್ರೀ ಗೌರವ ಲಭಿಸಿದೆ.

ಕನ್ನಡ ಚಲನಚಿತ್ರ ರಸಿಕರಿಗೆ ಚಿರಪರಿಚಿತ ಹೆಸರು ಭಾರತಿ ವಿಷ್ಣುವರ್ಧನ್, ಅಷ್ಟೇ ಪ್ರಿಯವಾದ ಹೆಸರೂ ಸಹ. ತನ್ನ ಅಭಿನಯ, ಸೌಂದರ್ಯ ಮತ್ತು ಸುಂದರ ಮೈಮಾಟದಿಂದ ಐದು ದಶಕಗಳಿಗೂ ಹೆಚ್ಚಿನ ಕಾಲ ಕನ್ನಡ ಚಿತ್ರರಂಗದಲ್ಲಿ ಮೆರೆದ ಕಲಾವಿದೆ.

ಭಾರತಿ ಅವರ ತಂದೆ ವಿ.ಎಂ. ರಾಮಚಂದ್ರ ರಾವ್, ತಾಯಿ ಭದ್ರಾವತಿ ಬಾಯಿ. 1950 ರ ಆಗಸ್ಟ್ 15 ರಂದು ಸಾಂಪ್ರದಾಯಿಕ ಕುಟುಂಬದಲ್ಲಿ ಇವರ ಜನನ. ಅಪರಿಚಿತರೊಡನೆ ತಲೆಯೆತ್ತಿ ಮಾತನಾಡಲೂ ಹೆದರುತ್ತಿದ್ದ ಈ ಹುಡುಗಿ, ಮುಂದೆ ಐದು ದಶಕಗಳಿಗೂ ಹೆಚ್ಚಿನ ಕಾಲ ಕನ್ನಡ ಚಿತ್ರಗಳಲ್ಲಷ್ಟೇ ಅಲ್ಲದೆ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷೆಯ ಚಿತ್ರಗಳಲ್ಲಿಯೂ ನಟಿಸಿ ಪಂಚಭಾಷಾ ತಾರೆಯರ ಪಟ್ಟಿಗೆ ಸೇರಿದುದು ಅವರ ಸೌಂದರ್ಯ ಮತ್ತು ನಟನಾ ಕೌಶಲದಿಂದಾಗಿ ಎಂದರೆ ತಪ್ಪಲ್ಲ. ಅವರ ಐದು ದಶಕಗಳ ಚಿತ್ರರಂಗದ ಜೀವನದಲ್ಲಿ ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ, ಅವಲ್ಲದೆ, ಇತರ ಭಾಷೆಗಳ ಐವತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಕಲಾಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ 2017 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

‘ತಾನು ತಾರೆಯಾಗಿರದಿದ್ದಿದ್ದರೆ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಅಥವಾ ಕ್ರೀಡಾಪಟುವಾಗಿರುತ್ತಿದ್ದೆ, ಆದರೆ, ನನ್ನ ವಿಧಿ ನನ್ನನ್ನು ಚಿತ್ರರಂಗಕ್ಕೆ ಕರೆದೊಯ್ಯಿತು’ ಎಂದು ಒಂದೆಡೆ ಹೇಳಿಕೊಂಡಿದ್ದಾರೆ. ಕ್ರೀಡಾ ಜಗತ್ತಿಗೆ ಆದ ನಷ್ಟ ಚಲನ ಚಿತ್ರಕ್ಕೆ ಲಾಭವಾಗಿ ಪರಿಣಮಿಸಿತು. ಆದರೆ, ಕ್ರೀಡಾ ಜಗತ್ತನ್ನು ತೊರೆದು ಚಿತ್ರರಂಗಕ್ಕೆ ಬಂದಿದ್ದರ ಬಗ್ಗೆ ಅವರಿಗೆ ಖೇದವಿಲ್ಲ. ಶಾಲೆಯಲ್ಲಿ ಕುಣಿಯುತ್ತಾ, ನಲಿಯುತ್ತಾ, ನೃತ್ಯ ಮಾಡುತ್ತಾ, ನಾಟಕಗಳಲ್ಲಿ ಅಭಿನಯಿಸುತ್ತಾ ಇದ್ದ ಅತಿ ಚಟುವಟಿಕೆಯ ಹುಡುಗಿ, ಮುಂದೆ ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರಿನ ಮಹಾರಾಣಿ ಕಾಲೇಜಿಗೆ ಸೇರಿದರು. ವ್ಯಾಸಂಗದ ಜೊತೆಗೆ ಥ್ರೋಬಾಲ್ ಆಡುತ್ತಿದ್ದ ಭಾರತಿಗೆ ಸಿನಿಮಾ ರಂಗದ ಕರೆ ತೀರಾ ಅನಿರೀಕ್ಷಿತವಾಗಿತ್ತು. ಕಾಲೇಜಿನಲ್ಲಿ ಮಾಡಿದ ನೃತ್ಯ ಕಾರ್ಯಕ್ರಮವೊಂದರಲ್ಲಿನ ಆಕೆಯ ಚಿತ್ರಗಳನ್ನು ನೋಡಿದ ಕಲ್ಯಾಣ್ ಕುಮಾರ್ ‘ಲವ್ ಇನ್ ಬೆಂಗಳೂರ್’ ಚಿತ್ರಕ್ಕೆ ನಾಯಕಿಯನ್ನಾಗಿ ಆರಿಸಿಯೇ ಬಿಟ್ಟರು.

ಇದು ನಡೆದದ್ದು 1964 ರಲ್ಲಿ. ಆಗ ಆಕೆ ಇನ್ನೂ 14 ವರ್ಷಗಳ ಹುಡುಗಿ. ಅಲ್ಲಿಂದ ಅವರ ಚಿತ್ರರಂಗದ ಪಯಣ ಪ್ರಾರಂಭವಾಯಿತು. ಆಕೆ ಮೊದಲು ನಟಿಸಿದ್ದು ‘ಲವ್ ಇನ್ ಬೆಂಗಳೂರ್’ ಆದರೂ, ಅದು ಬಿಡುಗಡೆಯಾಗುವುದಕ್ಕೆ ಮುಂಚೆಯೇ, ಈಕೆ ಅಭಿನಯಿಸಿದ ಬಿ.ಆರ್. ಪಂತುಲು ಅವರ ‘ದುಡ್ಡೇ ದೊಡ್ಡಪ್ಪ’ ಬಿಡುಗಡೆ ಆಯಿತು. ಮುಂದೆ ಇವರು ಬಿ.ಆರ್. ಪಂತುಲು ಅವರೊಡನೆ, ಎಮ್ಮೆ ತಮ್ಮಣ್ಣ (1966), ನಾಡೋಡಿ (1966), ಎಂಗ ಪಪ್ಪ (1966), ನಮ್ಮ ವೀಟ್ಟು ಲಕ್ಷ್ಮಿ (1966), ಗಂಗೆ ಗೌರಿ (1967), ಅಮ್ಮ (1968), ಗಂಡೊಂದು ಹೆಣ್ಣಾರು (1969), ಅಳಿಯ ಗೆಳೆಯ (1970) ಮತ್ತು ಶ್ರೀ ಕೃಷ್ಣದೇವರಾಯ (1970) ಮುಂತಾದ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದರು.

ಕನ್ನಡದ ಮೇರು ನಟರಾದ ರಾಜ್‍ಕುಮಾರ್, ಕಲ್ಯಾಣ್ ಕುಮಾರ್, ಉದಯಕುಮಾರ್, ವಿಷ್ಣುವರ್ಧನ್ ಅವರೆಲ್ಲರೊಡನೆ ನಾಯಕಿ ಪಾತ್ರ ಮಾಡಿರುವುದಲ್ಲದೆ, ತೆಲುಗಿನ ಅಕ್ಕಿನೇನಿ ನಾಗೇಶ್ವರ ರಾವ್, ಎನ್.ಟಿ. ರಾಮರಾವ್, ಶೋಭನ್ ಬಾಬು, ಕೃಷ್ಣಮ್ ರಾಜು, ಹಿಂದಿಯ ಸುನಿಲ್ ದತ್, ವಿನೋದ್ ಖನ್ನಾ, ರಾಕೇಶ್ ರೋಶನ್, ಮಹಮೂದ್, ತಮಿಳಿನ ಎಂಜಿಆರ್, ಜೆಮಿನಿ ಗಣೇಶನ್ ಮುಂತಾದ ಇತರ ಭಾಷೆಯ ಖ್ಯಾತ ನಟರೊಡನೆಯೂ ಅಭಿನಯಿಸಿ ಚಿತ್ರ ರಸಿಕರ ಮನ ಗೆದ್ದಿದ್ದಾರೆ.

ಭಾರತಿ ಅವರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ್ದು ಎ. ಭೀಮ್‍ಸಿಂಗ್ ಎಂಬ ನಿರ್ದೇಶಕರು, ‘ಮೆಹರಬಾನ್’ (1967) ಮತ್ತು ‘ ಸಾಧು ಔರ್ ಸೈತಾನ್’ (1968) ಚಿತ್ರಗಳ ಮೂಲಕ. ಆನಂತರದಲ್ಲಿ ಅವರು, ರಾಕೇಶ್ ರೋಶನ್ ಅವರೊಡನೆ ‘ಘರ್ ಘರ್ ಕಿ ಕಹಾನಿ’, ಮನೋಜ್ ಕುಮಾರ್ ಅವರೊಡನೆ, ‘ಪೂರಬ್ ಔರ್ ಪಶ್ಚಿಮ್’, ವಿನೋದ್ ಖನ್ನಾ ಅವರೊಡನೆ ‘ಹಮ್ ತುಮ್ ಔರ್ ವೋ’, ಮೆಹಬೂಬ್ ಅವರೊಡನೆ, ‘ಕುವ್ವಾರಾ ಬಾಪ್’ ಮುಂತಾದ ಅನೇಕ ಹಿಂದಿ ಚಿತ್ರಗಳಲ್ಲಿ ನಟಿಸಿದರು.

ತಮಿಳು ಚಿತ್ರರಂಗದಲ್ಲಿ, ಪ್ರಾರಂಭದಲ್ಲಿ ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದರೂ, ನಂತರದಲ್ಲಿ, ಜೆಮಿನಿ ಗಣೇಶನ್, ಶಿವಾಜಿ ಗಣೇಶನ್, ಎಂ.ಜಿ. ರಾಮಚಂದ್ರನ್ ಅಂಥ ತಮಿಳಿನ ಮೇರು ನಟರೊಂದಿಗೆ ನಾಯಕಿಯಾಗಿ ಅಭಿನಯಿಸುವ ಅವಕಾಶ ದೊರೆಯಿತು.

ತೆಲುಗು ಚಿತ್ರ ರಂಗದ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರೊಡನೆ ‘ಜೈ ಜವಾನ್’ (1970), ‘ಗೋವುಲ ಗೋಪನ್ನ’ (1968) ಮತ್ತು ‘ಸಿಪಾಯಿ ಚಿನ್ನಯ್ಯ’ ಚಿತ್ರಗಳಲ್ಲಿ ನಟಿಸಿದ್ದಾರೆ. ಮಲೆಯಾಳ ಭಾಷೆಯ ಖ್ಯಾತ ನಟರೊಡನೆಯೂ ಇವರು ನಟಿಸಿದ್ದಾರೆ.

ಯಶಸ್ವಿ ಜೋಡಿ

ಕನ್ನಡದಲ್ಲಿ, ರಾಜ್‍ಕುಮಾರ್ ಮತ್ತು ಭಾರತಿ ಇವರಿಬ್ಬರ ಜೋಡಿ ಆ ಕಾಲಕ್ಕೆ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ಜೋಡಿಯಾಗಿತ್ತು. ಇವರಿಬ್ಬರು ಅಭಿನಯಿಸಿದ ‘ಸಂಧ್ಯಾರಾಗ’ ಚಿತ್ರ ಅತ್ಯಂತ ಯಶಸ್ವಿ ಚಿತ್ರವೆನಿಸಿತು. ಆ ಚಿತ್ರದಲ್ಲಿನ ಅವರ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ದೊರೆಯಿತು. “ನನ್ನ ಚಿತ್ರರಂಗದ ಜೀವನ ಪ್ರಾರಂಭವಾದದ್ದು 1964 ರಲ್ಲಿ, 1966 ರಲ್ಲಿ ಡಾ| ರಾಜ್‍ಕುಮಾರ್ ಅವರೊಡನೆ ಸಂಧ್ಯಾರಾಗ ಚಿತ್ರದಲ್ಲಿ ಅಭಿನಯಿಸಿದೆ. ಅದಕ್ಕೆ ರಾಷ್ಟ್ರ ಪ್ರಶಸ್ತಿ ಬಂತು. ಆ ಬಗ್ಗೆ ನನ್ನ ತಂದೆ ತಾಯಿ ಹೆಮ್ಮೆ ಪಟ್ಟಿದ್ದು ನನ್ನ ಖುಷಿಯನ್ನು ಇಮ್ಮಡಿಸಿತ್ತು” ಎಂದು ನೆನಪಿಸಿಕೊಳ್ಳುತ್ತಾರೆ.

ಮುಂದೆ ಸುಮಾರು 20 ಚಿತ್ರಗಳಲ್ಲಿ ಈ ಜೋಡಿ ನಾಯಕ ನಾಯಕಿಯರಾಗಿ ಅಭಿನಯಿಸಿದರು. ಮನಸ್ಸಾಕ್ಷಿ, ಶ್ರೀ ಕೃಷ್ಣದೇವರಾಯ, ಬಂಗಾರದ ಮನುಷ್ಯ, ಜಗ ಮೆಚ್ಚಿದ ಮಗ, ಗಂಗೆ ಗೌರಿ, ಬಾಳು ಬೆಳಗಿತು ಮುಂತಾದ ಚಿತ್ರಗಳಲ್ಲಿನ ಅಭಿನಯವನ್ನು ಚಿತ್ರ ರಸಿಕರು ಮರೆಯುವುದು ಸಾಧ್ಯವೇ ಇಲ್ಲ. ಶ್ರೀ ಕೃಷ್ಣದೇವರಾಯ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಅವರಿಗೆ ಕರ್ನಾಟಕ ರಾಜ್ಯ ನೀಡುವ ಅತ್ಯುತ್ತಮ ಅಭಿನೇತ್ರಿ ಪ್ರಶಸ್ತಿ ದೊರೆಯಿತು. ಮುಂದೆ ವಿಷ್ಣುವರ್ಧನ್ ಅವರೊಡನೆ ಮಾಡಿದ ‘ಭಾಗ್ಯ ಜ್ಯೋತಿ’, ‘ಮಕ್ಕಳ ಭಾಗ್ಯ’, ‘ದೇವರ ಗುಡಿ’, ‘ನಾಗರಹೊಳೆ’, ‘ಬಂಗಾರದ ಜಿಂಕೆ ಮುಂತಾದ ಚಿತ್ರಗಳು ಯಶಸ್ವಿ ಚಿತ್ರಗಳಾದುದೇ ಅಲ್ಲದೆ, ಆ ಚಿತ್ರಗಳ ಮೂಲಕ ಜನಪ್ರಿಯ ಜೋಡಿಯಾಗಿಯೂ ಇವರಿಬ್ಬರು ಮನೆಮಾತಾದರು.

ಭಾರತಿ ಅವರೇ ಹೇಳುವಂತೆ ಚಿತ್ರರಂಗವನ್ನು ಪ್ರವೇಶಿಸುವುದಕ್ಕೆ ಮುನ್ನ ಅವರಿಗೆ ನಟನೆಯ ಗಂಧಗಾಳಿಯೂ ತಿಳಿದಿರಲಿಲ್ಲವಂತೆ. ನಿರ್ದೇಶಕರು ಹೇಳಿದುದನ್ನಷ್ಟೇ ಮಾಡುತ್ತಿದ್ದೆ ಎನ್ನುವ ಹುಡುಗಿ ಚಿತ್ರರಂಗವನ್ನು ಪ್ರವೇಶಿಸಿ, ನಿರ್ದೇಶಕರು ಹೇಳಿದುದನ್ನು ಚಾಚೂ ತಪ್ಪದೆ ಪಾಲಿಸುತ್ತಾ, ಇತರ ಖ್ಯಾತ ನಟರ ನಟನೆಯನ್ನು ನೋಡಿ ಕಲಿಯುತ್ತಾ ಈ ಮಟ್ಟಕ್ಕೆ ತಲುಪಿದ್ದಾರೆಂದರೆ, ತಾವು ಕೆಲಸಮಾಡುವ ಕ್ಷೇತ್ರದ ಬಗ್ಗೆ ಅವರು ಬೆಳೆಸಿಕೊಂಡ ಆಸಕ್ತಿ ಮತ್ತು ಅದರಲ್ಲಿ ಅವರಿಗಿದ್ದ ಬದ್ಧತೆ ಎಂಥದ್ದು ಎಂಬುದು ಅರಿವಾಗುತ್ತದೆ. ವಿವಿಧ ಭಾಷೆಗಳ ಮೇರು ನಟರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದರಿಂದಾಗಿ ತಮ್ಮ ನಟನಾ ಕೌಶಲವನ್ನು ಉತ್ತಮಪಡಿಸಿಕೊಳ್ಳಲು ನೆರವಾಯಿತು ಎಂಬ ನಮ್ರ ಭಾವ ಅವರಲ್ಲಿದೆ ಮತ್ತು ಅಂಥ ಮೇರು ನಟರು ಇದ್ದ ಕಾಲಮಾನದಲ್ಲಿ ತಾವೂ ಇದ್ದದ್ದು ಮತ್ತು ಅಂಥವರ ಜೊತೆಯಲ್ಲಿ ನಟಿಸುವ ಅವಕಾಶ ದೊರೆತದ್ದು ತಮ್ಮ ಸೌಭಾಗ್ಯ ಎನ್ನುತ್ತಾರೆ.

ಭಾರತಿ, ಚಿತ್ರ ರಂಗದಲ್ಲಿನ ತಮ್ಮ ಯಶಸ್ಸಿಗೆ ತಮ್ಮ ತಂದೆ ತಾಯಿ ಹಾಗೂ ಕುಟುಂಬದ ಬೆಂಬಲವೇ ಕಾರಣ ಎಂದು ಯಾವಾಗಲೂ ನೆನೆಯುತ್ತಾರೆ. ‘ನನ್ನ ಯಶಸ್ಸಿಗಾಗಿ ಅವರು ನನ್ನ ಅರಿವಿಗೇ ಬಾರದಂತೆ ಸಾಕಷ್ಟು ತ್ಯಾಗವನ್ನು ಮಾಡಿದ್ದಾರೆ’ ಎಂದಿದ್ದಾರೆ.

ಸಣ್ಣ ವಿರಾಮದ ನಂತರ, 1984 ರಲ್ಲಿ, ಪುಟ್ಟಣ್ಣ ಕಣಗಾಲರ, ಅತ್ಯಂತ ಪ್ರಶಂಸೆಗೆ ಒಳಗಾದ ‘ಋಣಮುಕ್ತಳು’ ಚಿತ್ರದ ಮೂಲಕ ತಮ್ಮ ಚಿತ್ರ ಜೀವನದ ಎರಡನೇ ಅಧ್ಯಾಯವನ್ನು ಪ್ರಾರಂಭಿಸಿದರೆಂದು ಹೇಳಬಹುದು. ಆ ನಂತರ ಮಾಡಿದ ಅನೇಕ ಚಿತ್ರಗಳಲ್ಲಿ ಅವರದು ಪ್ರೌಢ ಪಾತ್ರ.

ಭಾರತಿ ತಮ್ಮ ಪತಿ, ಕನ್ನಡ ಚಿತ್ರರಂಗದಲ್ಲಿ ‘ಸಾಹಸ ಸಿಂಹ’ ಎಂದು ಖ್ಯಾತರಾದ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿದುದು ‘ದೂರದ ಬೆಟ್ಟ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ. ಆಗ ನಾಗರಹಾವು ಚಿತ್ರದ ತಂಡ, ಚಿತ್ರ ಪ್ರದರ್ಶನದ ನೂರು ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿತ್ತು. ಆ ಸಂಭ್ರಮದಲ್ಲಿ ಭಾರತಿ ಅವರೂ ವಿಷ್ಣುವರ್ಧನ್ ಅವರ ಆಹ್ವಾನದ ಮೇರೆಗೆ ಪಾಲ್ಗೊಂಡರು. ಹೀಗೆ ಚಿಗುರೊಡೆದ ಪ್ರೇಮ, ಮನೆ ಬೆಳಗಿದ ಸೊಸೆ (1973) ಚಿತ್ರೀಕರಣದ ವೇಳೆಗೆ ಗಟ್ಟಿಯಾಗಿ, 1975 ರ ಫೆಬ್ರವರಿ 27 ರಂದು ಅವರು ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳು -ಕೀರ್ತಿ ಮತ್ತು ಚಂದನ. ಭಾರತಿ ಅವರ ಪತಿ ವಿಷ್ಣುವರ್ಧನ್ 2009ರ ಡಿಸೆಂಬರ್ 30 ರಂದು ವಿಧಿವಶರಾದರು.

ಚಿತ್ರ ರಂಗದಲ್ಲಿ ಇವರು ಹಿನ್ನೆಲೆ ಗಾಯಕಿಯಾಗಿ ಮತ್ತು ಸಹ ನಿರ್ದೇಶಕರಾಗಿ ಸಹ ತಮ್ಮ ಪ್ರತಿಭೆಯನ್ನು ಮೆರೆÀದಿದ್ದಾರೆ. ತಮಿಳು ಚಿತ್ರದಲ್ಲಿ ಜೆಮಿನಿ ಗಣೇಶನ್ ಅವರೊಡನೆ ನಟಿಸಿದ ದೃಶ್ಯವೊಂದರ ಹಿನ್ನೆಲೆ ಗಾಯನಕ್ಕೆ ಟಿ.ಎಂ. ಸೌಂದರರಾಜನ್ ಅವರೊಡನೆ ದನಿ ಸೇರಿಸಿದ್ದಾರೆ. ಕನ್ನಡದ ನಾಗರಹೊಳೆ ಚಿತ್ರದಲ್ಲಿ ವಿಷ್ಣುವರ್ಧನ್ ಅವರೊಡನೆ ‘ಈ ನೋಟಕೆ ಮೈ ಮಾಟಕೆ’ ಎಂಬ ಗೀತೆಯನ್ನು ಹಾಡಿದ್ದಾರೆ. ಕೆ.ಎಸ್.ಎಲ್. ಸ್ವಾಮಿ ಅವರೊಡಗೂಡಿ, ‘ಕರುಣೆ ಇಲ್ಲದ ಕಾನೂನು’, ‘ಹುಲಿ ಹೆಜ್ಜೆ’ ಹಾಗೂ ‘ಮಲಯ ಮಾರುತ’ ಚಿತ್ರಗಳ ಸಹ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ.
ಈ ಪ್ರತಿಭಾವಂತ ಕಲಾವಿದೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಕರ್ನಾಟಕ ಸರ್ಕಾರದ ಮುಕ್ತ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಎಪ್ಪತ್ತು ವಸಂತಗಳನ್ನು ಪೂರೈಸಿರುವ ಈ ಕಲಾವಿದೆ ಇಂದಿಗೂ ಚಟುವಟಿಕೆಯ ಖನಿ. ಮುಂದೆಯೂ, ಇನ್ನಷ್ಟು ವರ್ಷಗಳು ನಮ್ಮೊಡನಿರಲಿ ಎಂಬುದು ಎಲ್ಲರ ಹಾರೈಕೆ.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *