ಪದ್ಮಪ್ರಭೆ/ ದೇವರ ಹೆಸರಿನ ದುಷ್ಟತನ ವಿರೋಧಿಸಿದ ಸೀತವ್ವ ಜೋಡಟ್ಟಿ – ಡಾ. ಗೀತಾ ಕೃಷ್ಣಮೂರ್ತಿ
ನಮ್ಮ ದೇಶದ ಸಾಮಾಜಿಕ ಅನಿಷ್ಟಗಳಲ್ಲೊಂದಾದ ದೇವದಾಸಿ ಪದ್ಧತಿಯಲ್ಲಿ ನೋಯುವ ಹೆಣ್ಣುಮಕ್ಕಳ ದುಃಖದ ನಿಟ್ಟುಸಿರು ಇಂದಿಗೂ ಕಾನೂನಿನ ತೆರೆಮರೆಯಲ್ಲಿ ಕೇಳುತ್ತಲೇ ಇರುತ್ತದೆ. ಹುಟ್ಟಿದ ಏಳನೇ ವರ್ಷದಲ್ಲೇ ದೇವದಾಸಿಯಾದ ಹೆಣ್ಣುಮಗಳೊಬ್ಬಳು, ದೇವರ ಹೆಸರಿನಲ್ಲಿ ಮಾಡುವ ದುಷ್ಟತನವನ್ನು ಅರಿತು ತನ್ನ ಸಮುದಾಯದ ಮಹಿಳೆಯರಲ್ಲಿ ಅರಿವು ಮೂಡಿಸುವ ಮತ್ತು ಅವರಿಗೆ ವಿಭಿನ್ನ ಜೀವನೋಪಾಯಗಳನ್ನು ಕಲಿಸುವ ಕಾಯಕದಲ್ಲಿ ತೊಡಗಿಕೊಂಡರು. ನೂರಾರು ಯಶಸ್ವಿ ಉದಾಹರಣೆಗಳನ್ನು ರೂಪಿಸಿದರು. ಇಂಥ ಅಸಾಧಾರಣ ಸಮಾಜಸೇವೆಯನ್ನು ಮಾಡುವ ಸೀತವ್ವ ಜೋಡಟ್ಟಿ ಅವರಿಗೆ 2014 ರಲ್ಲಿ `ಪದ್ಮಶ್ರೀ’ ಗೌರವ ಅರ್ಹವಾಗಿ ಸಂದಿದೆ. ದೃಢತೆ, ಬದ್ಧತೆಗಳ ಅವರ ವ್ಯಕ್ತಿತ್ವ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.
ಏಳು ವರ್ಷದ ಪೋರಿ, ಲಂಗವನ್ನು ಚಿಮ್ಮುತ್ತಾ ಓರಿಗೆಯವರೊಡನೆ ಕುಂಟೆಬಿಲ್ಲೆಯಾಡುತ್ತಾ ನಲಿಯಬೇಕಾದ ವಯಸ್ಸು. ಆದರೆ, ಆ ವಯಸ್ಸಿಗಾಗಲೇ ಸೀತವ್ವ ಬಾಲ್ಯದ ಸಂತೋಷಗಳಿಂದ ವಂಚಿತಳಾಗಿ ಜೀವನದ ಕ್ರೂರ ಮುಖದ ದರ್ಶನ ಮಾಡಿಯಾಗಿತ್ತು. ಸೀತವ್ವಳ ತಂದೆ ತಾಯಿಯರು ಅವಳನ್ನು ದೇವದಾಸಿಯನ್ನಾಗಿ ದೇವರಿಗೆ ಬಿಟ್ಟಾಗಿತ್ತು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸಣ್ಣ ಗ್ರಾಮವಾದ ಕಬ್ಬೂರು ಗ್ರಾಮದಲ್ಲಿ ಹಿಂದುಳಿದ ಸಮುದಾಯದ ಕುಟುಂಬದಲ್ಲಿ ತಂದೆ ತಾಯಿಯರಿಗೆ ಆರನೆ ಮಗುವಾಗಿ ಜನಿಸಿದವಳು ಸೀತವ್ವ. ಕುಟುಂಬದ ಕೊನೆಯ ಹೆಣ್ಣು ಮಗಳನ್ನು ದೇವರಿಗೆ ಅರ್ಪಿಸಿದರೆ, ದೇವರು ಗಂಡು ಮಗುವನ್ನು ಕರುಣಿಸುತ್ತಾನೆ ಎಂಬುದು ಅವರಲ್ಲಿದ್ದ ನಂಬಿಕೆ. ಸೀತವ್ವ ಕೇವಲ ಏಳು ವರ್ಷದವಳಿದ್ದಾಗ, ಅವಳ ಕೊರಳಿಗೆ ಮುತ್ತುಕಟ್ಟುವ ಸಾಂಪ್ರದಾಯಿಕ ಆಚರಣೆಯನ್ನು ಅವಳ ತಂದೆ ತಾಯಿಯರು ನೆರವೇರಿಸಿದರು. ಅವಳನ್ನು ದೇವದಾಸಿಯಾಗಿ ಅರ್ಪಿಸಲಾಗಿದೆ ಎಂಬುದನ್ನು ಸಮುದಾಯದ ಎಲ್ಲರಿಗೆ ತಿಳಿಯಪಡಿಸುವ ವಿಧಾನ ಇದು.
ಆ ನಂತರ ಆಕೆ ಪ್ರೌಢೆಯಾದ ನಂತರ, ಅವಳ ತಂದೆತಾಯಿಯರು ಆ ವಿಷಯವನ್ನು ಸಮುದಾಯಕ್ಕೆ ತಿಳಿಯಪಡಿಸುತ್ತಾರೆ. ಇದರರ್ಥ, ಸಮುದಾಯದ ಶ್ರೀಮಂತ ವ್ಯಕ್ತಿ ಆಕೆಯನ್ನು ಕೊಳ್ಳಬಹುದು ಮತ್ತು ಲೈಂಗಿಕವಾಗಿ ಅವಳನ್ನು ಬಳಸಿಕೊಳ್ಳಬಹುದು ಎಂದು. ಹಾಗೆ ಆಕೆಯನ್ನು ‘ಕೊಂಡ’ ವ್ಯಕ್ತಿ ಆಕೆಯ ಕುಟುಂಬದ ಯೋಗಕ್ಷೇಮವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ನೋಡಿಕೊಳ್ಳುತ್ತಾನೆ. ಶ್ರೀಮಂತ ವ್ಯಕ್ತಿಗಳೊಡನೆ ದೇವರ ಹೆಸರಿನಲ್ಲಿ ದೇವಸ್ಥಾನಗಳ ಮುಖ್ಯಸ್ಥರೂ ಭಾಗಿಯಾಗುವುದರಿಂದ ಸಮಸ್ಯೆ ಮತ್ತಷ್ಟು ಜಟಿಲಗೊಳ್ಳತ್ತದೆ ಎನ್ನುತ್ತಾರೆ ಅದನ್ನು ನಿರ್ಮೂಲನಗೊಳಿಸುವ ಪ್ರಯತ್ನದಲ್ಲಿ ತೊಡಗಿರುವ ಸೀತವ್ವ.
ಮೂಲದಲ್ಲಿ ದೇವರ ಮುಂದೆ ತಮ್ಮ ಸಂಗೀತ ನೃತ್ಯ ಕಲೆಗಳನ್ನು ಪ್ರದರ್ಶಿಸುತ್ತಾ ರಾಜಾಶ್ರಯದಲ್ಲಿ ಇದ್ದವರು ದೇವದಾಸಿಯರು. ಆದರೆ ರಾಜರ ಆಡಳಿತ ಕೊನೆಗೊಂಡ ನಂತರ ಅವರ ಬಾಳು ಅತಂತ್ರವಾಯಿತು. ದೇವಸ್ಥಾನಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಸಂಗೀತ ನೃತ್ಯಗಳು ನಿಂತು ಅವರ ಬದುಕು ಅಕ್ಷರಶಃ ಬೀದಿಗೆ ಬಂದು, ಅವರ ಸ್ಥಾನಮಾನ ಲೈಂಗಿಕ ಕಾರ್ಯಕರ್ತೆಯರ ಮತ್ತು ಬಾಲ ವೇಶ್ಯೆಯರ ಸ್ಥಾನಮಾನಕ್ಕೆ ಇಳಿಯಿತು.
ಸೀತವ್ವ ಇಂಥ ಕಾಲಮಾನದಲ್ಲಿ ದೇವರಿಗೆ ಅರ್ಪಿಸಲ್ಪಟ್ಟವಳು. ಆಕೆ ಏಳನೇ ತರಗತಿಗೆ ಬರುವ ವೇಳೆಗೆ ಮನೆಯ ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಿತ್ತು. ಶ್ರೀಮಂತ ವ್ಯಕ್ತಿಯಿಂದ ಹಣ ಪಡೆದು ಸೀತವ್ವಳನ್ನು ಆ ವ್ಯಕ್ತಿಯೊಂದಿಗೆ ಕಳುಹಿಸಲಾಯಿತು. ಆದರೆ ಮುಂದೆ ತನಗೆ ಎಂಥ ಜೀವನ ಕಾದಿದೆ ಎಂಬುದರ ಸುಳಿವೂ ಆಕೆಗೆ ಇರಲಿಲ್ಲ. ಅದು ತಿಳಿಯುವುದಕ್ಕೆ ಮುನ್ನವೇ, ಹದಿನೇಳು ವರ್ಷಗಳ ಹದಿ ಹರಯವನ್ನು ತಲುಪುವ ವೇಳೆಗಾಗಲೇ, ಇಬ್ಬರು ಪುರುಷರಿಂದ ಆಕೆ ಮೂರು ಮಕ್ಕಳ ತಾಯಿಯಾಗಿದ್ದಳು. ವಿವಾಹದ ಕನಿಷ್ಠ ವಯಸ್ಸಿನ ಬಗ್ಗೆಯಾಗಲೀ ಮಹಿಳೆರಿಗಿರುವ ಹಕ್ಕುಗಳ ಬಗ್ಗೆಯಾಗಲೀ ಘನತೆಯ ಜೀವನಕ್ಕಿರುವ ಮಾನವ ಹಕ್ಕುಗಳ ಬಗ್ಗೆಯಾಗಲೀ ಅವಳಿಗೆ ಏನೊಂದೂ ತಿಳಿದಿರಲಿಲ್ಲ.
1987 ರಲ್ಲಿ ಕರ್ನಾಟಕ ಸರ್ಕಾರ, ‘ಕರ್ನಾಟಕ ದೇವದಾಸಿಯರ (ಸಮರ್ಪಣಾ ನಿಷೇಧ) ಅಧಿನಿಯಮ’ವನ್ನು ಜಾರಿಗೊಳಿಸುವ ಮೂಲಕ ದೇವದಾಸಿ ಪದ್ಧತಿಯನ್ನು ನಿಷೇಧಿಸಿತು. 1990 ರ ಸುಮಾರಿಗೆ ದೇವದಾಸಿಯರಾಗಿದ್ದ ಮಹಿಳೆಯರೆಲ್ಲ ಸ್ವಸಹಾಯ ಸಂಘಗಳನ್ನು ಕಟ್ಟಿಕೊಳ್ಳಲಾರಂಭಿಸಿದರು. ಸೀತವ್ವ ಅವುಗಳ ಸಭೆಗಳಿಗೆ ಹೋಗಲು ಪ್ರಾರಂಭಿಸಿದಳು.
ಸೀತವ್ವಳ ಜೀವನ ತಿರುವು ಕಂಡದ್ದು ಆಕೆ 1991 ರಲ್ಲಿ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲತಾಮಾಲಾ ಅವರನ್ನು ಭೇಟಿಯಾದ ನಂತರ. ಲತಾಮಾಲಾ ಅವರು, ದೇವದಾಸಿ ಪದ್ಧತಿ ಎಂಥ ಹೀನ ಪದ್ಧತಿ, ಸೀತವ್ವಳನ್ನು ಹೇಗೆ ಶೋಷಣೆಗೆ ಒಳಪಡಿಸಲಾಗುತ್ತಿದೆ, ಅವಳ ಸಮುದಾಯದವರೇ ಅವಳನ್ನು ಎಷ್ಟು ಕೀಳಾಗಿ ಕಾಣುತ್ತಾರೆ ಎಂಬುದನ್ನು ಅವಳಿಗೆ ಅರ್ಥವಾಗುವಂತೆ ತಿಳಿಸಿದರು, ಅವಳ ಮತ್ತು ಅವಳ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಯೋಚಿಸುವಂತೆ ಪ್ರೇರೇಪಿಸಿದರು. ಅವಳು ಮನಸ್ಸು ಮಾಡಿದರೆ ಅವಳಷ್ಟೇ ಅಲ್ಲ, ಅವಳಂಥ ಅನೇಕ ಹೆಣ್ಣು ಮಕ್ಕಳು ಈ ಅನಿಷ್ಟ ಪದ್ಧತಿಯನ್ನು ಧಿಕ್ಕರಿಸಿ ಹೊರಬರಬಹುದು ಮತ್ತು ಘನತೆಯಿಂದ ಜೀವಿಸಬಹುದು ಎಂಬ ಅರಿವನ್ನು ಮೂಡಿಸಿದರು. ಅಲ್ಲಿಯವರೆಗೂ ಸೀತವ್ವಳಿಗೆ ತಾನು ಎಂಥ ಜೀವನದಿಂದ ವಂಚಿತಳಾಗಿದ್ದೇನೆ ಎಂಬ ಅರಿವೂ ಇರಲಿಲ್ಲ.
ಅಲ್ಲಿಂದ ಮುಂದೆ, ಸೀತವ್ವ ಇತರ ದೇವದಾಸಿಯರೊಂದಿಗೆ, ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ನಡೆಯುವ ಜಾತ್ರೆಗಳಿಗೆ ಹೋಗಲು ಪ್ರಾರಂಭಿಸಿದಳು. ಅಲ್ಲಿ ಸೇರುವ ಇತರ ದೇವದಾಸಿಯರಿಗೆ ಇದೆಂಥ ಅನಿಷ್ಟ ಪದ್ಧತಿ ಎಂಬುದರ ಬಗ್ಗೆ ಅರಿವು ಮೂಡಿಸಲು ಪ್ರಾರಂಭಿಸಿದಳು. ಈ ಪದ್ಧತಿಗೊಳಗಾಗಿ ರೋಸಿ ಹೋಗಿದ್ದ ದೇವದಾಸಿಯರಿಗೆ ಇವಳ ಮಾತುಗಳು ಬಿಡುಗಡೆಯ ಮುಕ್ತಿ ಮಾರ್ಗವಾಗಿ ಕಂಡಿತು. ಹಾಗಾಗಿ ಈ ಅನಿಷ್ಟ ಪದ್ಧತಿಯಿಂದ ಬಿಡುಗಡೆ ಹೊಂದಲು ನಿರ್ಧರಿಸಿದರು. ಒಂದು ವಾರದೊಳಗೆ ಸೀತವ್ವಳಿಗೆ ಬೆಂಬಲ ನೀಡಲು 45 ದೇವದಾಸಿಯರು ಮುಂದೆ ಬಂದರು. ಮುಂದೆ ಸೀತವ್ವ ಗೋಕಾಕ್ ತಾಲೂಕಿಗೆ ಹೋಗಿ, ದೇವದಾಸಿ ಪದ್ಧತಿಯನ್ನು ನಿರ್ಮೂಲನ ಮಾಡಲು ಶ್ರಮಿಸುತ್ತಿದ್ದ ‘ಮಹಿಳಾ ಅಭಿವೃದ್ಧಿ ಸಂರಕ್ಷಣ ಸಂಸ್ಥೆ’ಯನ್ನು ಸೇರಿದರು. ಆ ತಾಲೂಕಿನ ಘಟಪ್ರಭ ಗ್ರಾಮದಲ್ಲಿ ನೆಲೆಸಿದರು. 2012 ರಿಂದ, 43 ವರ್ಷದ ಸೀತವ್ವ ಆ ಸಂಸ್ಥೆಯ ಸಿಇಒ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಲ್ಲಿ 23 ಕಾಯಂ ಮತ್ತು 55 ಅರೆಕಾಲಿಕ ಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. ಸುಮಾರು 3000 ಸದಸ್ಯರಿದ್ದಾರೆ. ಇಲ್ಲಿಯವರೆಗೆ ಈ ಸಂಸ್ಥೆ ಸುಮಾರು 4000 ಮಹಿಳೆಯರನ್ನು ದೇವದಾಸಿ ಪದ್ಧತಿಯಿಂದ ರಕ್ಷಿಸಿದೆ ಮತ್ತು ಅವರ ಜೀವನೋಪಾಯಕ್ಕೆ ತೊಂದರೆಯಾಗದಂತೆ ಅವರನ್ನುಇತರ ಕಸುಬುಗಳಲ್ಲಿ ತೊಡಗಿಸಿದೆ. ಅವರ ಮಕ್ಕಳಿಗೆ ಶಿಕ್ಷಣಾವಕಾಶವನ್ನು ಕಲ್ಪಿಸುತ್ತಿದೆ.
ಶಿಕ್ಷಣವೊಂದೇ ಜನರಲ್ಲಿನ ಇಂಥ ಮೂಢನಂಬಿಕೆಗಳನ್ನು ಹೋಗಲಾಡಿಸಲು ಸಾಧ್ಯ ಮತ್ತು ಶಿಕ್ಷಣವೊಂದರಿಂದಲೇ ಮಹಿಳಾ ಸಬಲೀಕರಣದ ಕನಸು ನನಸಾಗುವುದು ಎಂಬುದನ್ನು ಬಲವಾಗಿ ನಂಬಿದ್ದಾರೆ ಸೀತವ್ವ ಜೋಡಟ್ಟಿ. ಹಾಗಾಗಿ ದೇವದಾಸಿಯರ ಮಕ್ಕಳಿಗೆ ಶಿಕ್ಷಣ ಸೌಲಭ್ಯವನ್ನು ಕಲ್ಪಿಸುವ ಮತ್ತು ಶಾಲೆ ಬಿಟ್ಟವರನ್ನು ಪುನಃ ಶಾಲೆಗೆ ಕರೆತರುವ ಕೆಲಸಕ್ಕೆ ಹೆಚ್ಚಿನ ಗಮನವನ್ನು ಈ ಸಂಸ್ಥೆ ನೀಡುತ್ತಿದೆ.
ಉತ್ತಮ ಸಂಪರ್ಕಜಾಲ
ಹೀಗೆ ದೇವದಾಸಿ ಜೀವನದಿಂದ ಹೊರ ಬಂದ ಮಹಿಳೆಯರು ಅದರಲ್ಲಿ ಸಿಲುಕಿದ ಇತರ ಮಹಿಳೆಯರಲ್ಲಿ ಅರಿವು ಮೂಡಿಸುವ ಕಾಯಕದಲ್ಲಿ ತೊಡಗಿ, ಜಿಲ್ಲೆಯಲ್ಲಿ ಕೆಲವು ಕಡೆಗಳಲ್ಲಿ ರಹಸ್ಯವಾಗಿ ಉಳಿದಿರುವ ಈ ಪದ್ಧತಿಯನ್ನು ನಿರ್ಮೂಲ ಮಾಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಈಗ, ಬೆಳಗಾವಿಯ ಗೋಕಾಕ, ಸವದತ್ತಿ, ರಾಯಬಾಗ್ ತಾಲೂಕುಗಳ ಹಾಗೂ ನೆರೆಯ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ತಾಲೂಕುಗಳ ಹಿಂದುಳಿದ ಗ್ರಾಮಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ಹಿಂದೆ ದೇವದಾಸಿಯರಾಗಿದ್ದು,ಅದರಿಂದ ಹೊರ ಬಂದ ಮಹಿಳೆಯರು ಉತ್ತಮ ಸಂಪರ್ಕಜಾಲವನ್ನು ರೂಪಿಸಿಕೊಂಡಿದ್ದಾರೆ, ತಮ್ಮ ಮಗಳನ್ನು ದೇವದಾಸಿಯನ್ನಾಗಿ ಮಾಡಲು ಯಾವುದೇ ಕುಟುಂಬ ಪ್ರಯತ್ನಿಸುತ್ತಿದೆ ಎಂಬ ಸುಳಿವು ದೊರೆತ ಕೂಡಲೇ, ತಮ್ಮ ಸಂಸ್ಥೆಯ ಇತರ ಸದಸ್ಯರಿಗೆ ಸುದ್ದಿ ಮುಟ್ಟಿಸಿ, ಅಲ್ಲಿಗೆ ಧಾವಿಸುತ್ತಾರೆ. ಜೊತೆಗೆ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿ, ತಡೆಯಲು ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಾರೆ.
ಸೀತವ್ವ ಅವರ ಈ ಪ್ರಯತ್ನದಲ್ಲಿ ಅವರು ಕ್ರಮಿಸಿದ ಹಾದಿ ಸುಗಮವಾಗಿಯೇನೂ ಇರಲಿಲ್ಲ. ಆದರೆ ಈ ಹಾದಿಯಲ್ಲಿ ಮುನ್ನಡೆಯುವ ಶಕ್ತಿ ಬಂದದ್ದು ಮಾತ್ರ ಹೆಣ್ಣಾಗಿ ತಾವು ಪಟ್ಟ ಪಡಬಾರದ ಕಷ್ಟ, ತಾನು ಪಟ್ಟ ಕಷ್ಟ ಇನ್ನೊಬ್ಬ ಹೆಣ್ಣುಮಗಳು ಪಡಬಾರದು ಎಂಬ ದೃಢ ಸಂಕಲ್ಪ ಎಂದು ಹನಿಗಣ್ಣಾಗುತ್ತಾರೆ.
‘ದೇವದಾಸಿಯರಲ್ಲಿ ಅರಿವು ಮೂಡಿಸುವ ಕೆಲಸ ಎಷ್ಟು ಕಷ್ಟವಿತ್ತೋ ಅದಕ್ಕಿಂತ ಈ ಪದ್ಧತಿಯ ಲಾಭ ಪಡೆಯುತ್ತಿದ್ದ ಪಟ್ಟಭದ್ರರನ್ನು ಎದುರು ಹಾಕಿಕೊಂಡು ಕೆಲಸ ಮಾಡುವುದು ಕಷ್ಟವಿತ್ತು. ದೇವದಾಸಿಯಾಗುವುದರಿಂದ ಹದಿ ಹರೆಯದ ಹೆಣ್ಣು ಮಕ್ಕಳನ್ನು ರಕ್ಷಿಸುವ ನನ್ನ ಕಾರ್ಯದಲ್ಲಿ ನಾನು ಏಟು ತಿಂದದ್ದೂ ಇದೆ. ನನ್ನ ಈ ಕೆಲಸವನ್ನು ವಿರೋಧಿಸಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ, ಏಟು ತಿಂದ ನಂತರ ನಾನು ಅವರಿಗೆ ಹೊಡೆಯಲಿಲ್ಲ, ಬದಲಿಗೆ ಈ ಅನಿಷ್ಟ ಪದ್ಧತಿಯ ಬಗ್ಗೆ ತಿಳಿವಳಿಕೆ ನೀಡಿದೆ. ಸಂಘ ಕಟ್ಟಿಕೊಂಡು ದೇವದಾಸಿ ಪದ್ಧತಿ ವಿರುದ್ಧ ಜಾಗೃತಿ ಮೂಡಿಸಲು ಆರಂಭಿಸಿದೆ’ ಎಂದು ಸೀತವ್ವ ನೆನೆಯುತ್ತಾರೆ. ಅದರ ಫಲವಾಗಿ, ಇಂದು ಅವರಿಗೆ ಹೋದಲ್ಲೆಲ್ಲ ಗೌರವ ಸಿಗುತ್ತಿದೆ, ಅವರ ಸಾಧನೆಯ ಬಗ್ಗೆ ಮೆಚ್ಚುಗೆ ದೊರೆಯುತ್ತಿದೆ. ಈಗ ಅವರ ಬುತ್ತಿಯಲ್ಲಿ, ಈ ಅನಿಷ್ಟ ಪದ್ಧತಿಯಿಂದ ಹೊರಬಂದು ಜೀವನ ರೂಪಿಸಿಕೊಂಡ ಅನೇಕ ಹೆಣ್ಣು ಮಕ್ಕಳ ಯಶಸ್ಸಿನ ಕಥೆಗಳಿವೆ.
ಈ ಯಶಸ್ಸಿನಿಂದ ಪ್ರೇರಿತರಾಗಿ, ಈ ಸಂಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜಾಗೃತಿ ಶಿಬಿರಗಳನ್ನು, ಮಹಿಳೆಯರು ಮತ್ತು ಮಕ್ಕಳಿಗೆ ಇರುವ ಹಕ್ಕುಗಳ ಬಗ್ಗೆ ಅರಿವನ್ನು, ಹಣಕಾಸು ನಿರ್ವಹಣೆಯ ಬಗ್ಗೆ ತಿಳಿವಳಿಕೆಯನ್ನು ನೀಡುವ ಶಿಬಿರಗಳನ್ನೂ ನಡೆಸುತ್ತಿದೆ. 300 ಸ್ವಸಹಾಯ ಸಂಘಗಳ ಮೂಲಕ ಅಗತ್ಯವಿರುವ ಮಹಿಳೆಯರಿಗೆ ಹಣಕಾಸು ಬೆಂಬಲ ನೀಡುತ್ತಿದೆ ಮತ್ತು ಬ್ಯಾಂಕುಗಳಿಂದ ಮತ್ತು ಅತಿಸಣ್ಣ ಸಾಲ ನೀಡಿಕೆ ಸಂಸ್ಥೆಗಳಿಂದ ಸಾಲ ಪಡೆಯಲು ಅಗತ್ಯವಾದ ಸಹಾಯವನ್ನು ನೀಡುತ್ತಿದೆ.
ಮಹಿಳೆಯರನ್ನು ಶೋಷಿಸುವಂಥ ಈ ದೇವದಾಸಿ ಪದ್ಧತಿಯನ್ನು ನಿಷೇಧಿಸುವ ಕಾನೂನುಗಳು ಜಾರಿಯಲ್ಲಿ ಇದ್ದರೂ ಇಂದಿಗೂ ಅದನ್ನು ಸಂಪುರ್ಣವಾಗಿ ನಿಷೇಧಿಸಲು ಸಾಧ್ಯವಾಗಿಲ್ಲ. ಸಮಾಜ ಸುಧಾರಣೆಯ ಯಾವುದೇ ಕಾನೂನು ಯಶಸ್ವಿಯಾಗುವುದು ಆ ಬಗ್ಗೆ ಜನರಲ್ಲಿ ಅರಿವು ಮೂಡಿದಾಗ ಮಾತ್ರ. ಬದಲಾವಣೆಯನ್ನು ತರಲು ಕಾನೂನು ನೆರವಾಗಬಹುದೇ ವಿನಃ ಕಾನೂನೇ ಬದಲಾವಣೆಯನ್ನು ತರಲಿ ಎಂದು ನಿರೀಕ್ಷಿಸಲಾಗದು. ಭಾರತದಲ್ಲಿ 450,000 ದೇವದಾಸಿಯರಿದ್ದಾರೆ ಎಂದು 2013 ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ನೀಡಿರುವ ವರದಿ ತಿಳಿಸುತ್ತದೆ. ಇದರಿಂದ ದೇವದಾಸಿ ಪದ್ಧತಿ ಸಮಾಜದಲ್ಲಿ ಎಷ್ಟು ಆಳಕ್ಕಿಳಿದಿದೆ ಎಂಬುದನ್ನು ಊಹಿಸಬಹುದು.
ಸೀತವ್ವ ಜೋಡಟ್ಟಿ ಅವರ ದಣಿವರಿಯದ ಸಮಾಜ ಸೇವೆಯ ಈ ಕಾರ್ಯವನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅವರಿಗೆ ನೀಡಿದ ಈ ಪ್ರಶಸ್ತಿ ಅಂಥ ಕಾರ್ಯಗಳಲ್ಲಿ ತಡಗಿಸಿಕೊಳ್ಳುವ ಅನೇಕ ಹೆಣ್ಣು ಮಕ್ಕಳಿಗೆ ಮತ್ತಷ್ಟು ಸ್ಫೂರ್ತಿಯನ್ನು ತುಂಬುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
ಡಾ. ಗೀತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.