ಪದ್ಮಪ್ರಭೆ / ಗಾನ ಸರಸ್ವತಿ ಗಂಗೂಬಾಯಿ ಹಾನಗಲ್ – ಡಾ. ಗೀತಾ ಕೃಷ್ಣಮೂರ್ತಿ


ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಗಂಗೂಬಾಯಿ ಹಾನಗಲ್ ಅವರು ಹಿಂದೂಸ್ತಾನಿ ಸಂಗೀತದಲ್ಲಿ ತಮ್ಮ ವಿಶಿಷ್ಟ ದನಿ ಮತ್ತು ಗಾಯನ ಶೈಲಿಯಿಂದ ಅಸಂಖ್ಯಾತ ಸಂಗೀತ ಪ್ರೇಮಿಗಳ ಹೃದಯ ಸಿಂಹಾಸನದಲ್ಲಿ ಸ್ಥಾನ ಪಡೆದಿದ್ದಾರೆ. ಹಿಂದೂಸ್ಥಾನೀ ಸಂಗೀತದ ಕಿರಾಣಾ ಘರಾನಾ ಶೈಲಿಯ ಹಾಡುಗಾರರಲ್ಲಿ ಗಂಗೂಬಾಯಿ ಹಾನಗಲ್ ಅವರದು ಬಹು ದೊಡ್ಡ ಹೆಸರು.


ಕರ್ನಾಟಕದಿಂದ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಕೇವಲ ಇಬ್ಬರು ಮಹಿಳೆಯರಲ್ಲಿ ಗಂಗೂಬಾಯಿ ಅವರೂ ಒಬ್ಬರು! 1971ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದ ಅವರು 2002ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದರು.

ಅಪ್ರತಿಮ ಸಾಧನೆಗಾಗಿ ‘ಭಾರತರತ್ನ’ದ ನಂತರದ ಅತ್ಯುತ್ತಮ ಪ್ರಶಸ್ತಿಯಾದ ‘ಪದ್ಮ ವಿಭೂಷಣ’ ಪ್ರಶಸ್ತಿ ಪಡೆದಾಗ, ಅವರನ್ನು ಸಂದರ್ಶಿಸಲು ಬಂದವರು ವಾಡಿಕೆಯಂತೆ ‘ನಿಮಗೇನನಿಸುತ್ತದೆ’ ಎಂದು ಪ್ರಶ್ನಿಸಿದರಂತೆ, ಏನೆಂದು ಉತ್ತರಿಸಬೇಕು? ಏನನಿಸಬೇಕು ಅವರಿಗೆ? ಈ ಸಾಧನೆಯ ಶಿಖರವೇರುವ ಹಾದಿಯಲ್ಲಿ ಬಂದ ತೊಡಕುಗಳು, ಅವನ್ನು ನಿವಾರಿಸಿಕೊಂಡು ಮುಂದೆ ಸಾಗಲು ಅವರು ಪಟ್ಟ ಪಾಡುಗಳು ಎಲ್ಲ ಬಹುಶಃ ಅವರ ಕಣ್ಣ ಮುಂದೆ ಹಾದು ಹೋಗಿರಬೇಕು. ಅದಕ್ಕೆ ಉತ್ತರವಾಗಿ ಅವರ ತುಟಿಗಳಲ್ಲಿ ಒಂದು ಮುಗುಳ್ನಗೆ ಜೀವನದ ಒಂದು ಕ್ರೂರ ವ್ಯಂಗ್ಯವಾಗಿ ಹೊಮ್ಮಿರಬೇಕು.

ಅವರ ಸಾಧನೆಯ ಹಾದಿ ಸುಗಮವಾದ ಹಾದಿಯಾಗಿರಲಿಲ್ಲ. ಜೀವನದ ವಿಪರ್ಯಾಸವೇ ಹಾಗೆ. ಒಂದಿಷ್ಟು ಪ್ರೀತಿಗಾಗಿ ಜೀವ ಹಂಬಲಿಸುವಾಗ ಅದರ ಛಾಯೆಯನ್ನೂ ಹಿಡಿಯಲಾರದಂತೆ ಅದು ಅಷ್ಟು ದೂರ ಓಡುತ್ತದೆ. ಸಹ ಜೀವಿಗಳಿಂದ ಒಂದಿಷ್ಟು ಸಹನೆ ಸೈರಣೆಯನ್ನು ಬಯಸುವಾಗ, ಅದನ್ನು ಬಯಸುವ ಹಕ್ಕೂ ನಿನಗೆ ಇಲ್ಲ ಎಂಬಂತೆ ಸುತ್ತಲಿನ ಜನ ದೂರವಿಡುತ್ತಾರೆ. ಬಹುಶಃ ಇದೇ ಅವನ್ನು ಪಡೆದುಕೊಳ್ಳುವ ಮತ್ತು ಅವಮಾನವನ್ನು ಮೆಟ್ಟಿ ನಿಲ್ಲುವ ಛಲವನ್ನು ನೀಡುತ್ತದೇನೋ ಎಂಬಂತೆ ಕೆಲವರು ಸಾಧನೆಯ ಮೆಟ್ಟಿಲುಗಳನ್ನೇರುತ್ತಾ ಹೋಗುತ್ತಾರೆ. ದೇವದಾಸಿ ಕುಟುಂಬದಲ್ಲಿ ಹುಟ್ಟಿದ ಗಂಗೂಬಾಯಿ ಅವರಿಗೆ ನೋವು, ಅಪಮಾನ, ಬಡತನಗಳು ಉಸಿರಾಟದಷ್ಟೇ ಜೀವನದ ಭಾಗವಾಗಿ ಹೋಗಿತ್ತು. ಗಂಗೂಬಾಯಿ ಹಾನಗಲ್ ಅವರ ಬಾಲ್ಯದುದ್ದಕ್ಕೂ ಇಂಥದ್ದೇ ಪ್ರತಿಕೂಲ ಸಂದರ್ಭಗಳನ್ನು ಎದುರಿಸಿದವರು. ಅವೆಲ್ಲವನ್ನೂ ಮೆಟ್ಟಿ ಸಾಧನೆಯ ಉತ್ತುಂಗಕ್ಕೇರಿದವರು.

ಮೊದಲ ಬಾರಿಗೆ, ಇದಕ್ಕೆ ಹಿಂದೆ, 1971ರಲ್ಲಿ ಪದ್ಮಭೂಷಣ ಪ್ರಶಸ್ತಿ ಇವರನ್ನರಸಿ ಬಂದಾಗ ಅವರಿಗೆ ಅದರ ನಿರೀಕ್ಷೆಯೂ ಇರಲಿಲ್ಲ, ಭಾರತದ ಪ್ರಧಾನಮಂತ್ರಿ ಇಂದಿರಾ ಗಾಂಧಿ ಮತ್ತು ರಕ್ಷಣಾ ಮಂತ್ರಿಗಳಾಗಿದ್ದ ಜಗಜೀವನ ರಾಂ ಅವರು, ಅವರನ್ನು ಅಭಿನಂದಿಸಿ ಕಳುಹಿಸಿದ ಟೆಲಿಗ್ರಾಂ ಅರ್ಧರಾತ್ರಿಯಲ್ಲಿ ಅವರ ಕೈ ಸೇರಿದಾಗ, ಅದನ್ನು ಕೈಯಲ್ಲಿ ಹಿಡಿದು ನಸುಕಿನವರೆಗೆ ಅತ್ತಿದ್ದರಂತೆ ಅವರು. ಈ ಗಳಿಗೆಯನ್ನು ಸಂತೋಷಿಸಲು ತನ್ನನ್ನು ತಿದ್ದಿ ತೀಡಿದ ತಾಯಿ, ಅಜ್ಜಿ, ತನಗೆ ಬಾಳು ಕೊಟ್ಟ ‘ಯಜಮಾನ’ ಜೊತೆಗಿಲ್ಲವಲ್ಲ ಎಂದು ಅವರನ್ನು ನೆನೆದು ಅತ್ತಿದ್ದರಂತೆ. ಅದೆಂಥ ಘಳಿಗೆ!

ಗಂಗೂಬಾಯಿ ಹಾನಗಲ್ ಹುಟ್ಟಿದ್ದು 1913 ರ ಮಾರ್ಚ್5 ರಂದು, ಧಾರವಾಡದಲ್ಲಿ, ಮನೆಯಲ್ಲಿ ಬಡತನವಿದ್ದರೂ ಸಂಗೀತದಲ್ಲಿ ಶ್ರೀಮಂತಿಕೆಯಿದ್ದ ದೇವದಾಸಿ ಕುಟುಂಬದಲ್ಲಿ. ಧಾರವಾಡದ ಶುಕ್ರವಾರದಪೇಟೆ ಇವರು ಹುಟ್ಟಿದ ಸ್ಥಳ. ಅದು ಬ್ರಾಹ್ಮಣರೇ ಇದ್ದ ಕಾಲೊನಿ. ಅವರುಗಳ ಮನೆಯ ಹೊಸಿಲು ತುಳಿಯುವುದೂ ಇವರಿಗೆ ನಿಷಿದ್ಧವಾಗಿತ್ತು. ಒಮ್ಮೆ ಪಕ್ಕದ ಅವರ ತೋಟಕ್ಕೆ ಹೋಗಿ ಮಾವಿನಹಣ್ಣು ಕದ್ದಾಗ ಹಿಡಿದು ದಂಡಿಸಿದ್ದನ್ನು ನೆನಪಿಸಿಕೊಂಡು, ಇದೇ ಜನ ನಂತರ ಅವರನ್ನು ಆಹ್ವಾನಿಸಿ ಔತಣ ನೀಡಿ ಸನ್ಮಾನಿಸಿದ್ದನ್ನು ಉಲ್ಲೇಖಿಸುತ್ತಾರೆ. ಗಂಗೂಬಾಯಿ ಅವರಿಗೆ ಅವರ ಏಳನೇ ವಯಸ್ಸಿನವರೆಗೆ ಪಾಠವಾದದ್ದು ಅವರ ತಾಯಿಯಿಂದಲೇ, ಅದೂ ಕರ್ನಾಟಕ ಸಂಗೀತದಲ್ಲಿ. ಆದರೆ ಮುಂದೆ ಅವರು ಸಾಧನೆ ಮಾಡಿದುದು ಹಿಂದೂಸ್ತಾನಿ ಸಂಗೀತದಲ್ಲಿ! ದೇವದಾಸಿ ಕುಟುಂಬದಲ್ಲಿ ಹುಟ್ಟಿದ ಗಂಗೂಬಾಯಿ, ಕೆಳಜಾತಿಯ, ಬಡ ಕುಟುಂಬದ, ಐದನೇ ಇಯತ್ತೆಯ ವರೆಗೆ ಮಾತ್ರ ಶಿಕ್ಷಣ ಪಡೆದ, ‘ಹಾಡೋರ ಮನೆ ಹುಡುಗಿ’ಯಾಗಿ, ಆ ಕಾಲದಲ್ಲಿ ಎದುರಿಸಬಹುದಾಗಿದ್ದ ಸಮಾಜದ ಎಲ್ಲ ಬಗೆಯ ನಿಂದನೆಗಳನ್ನು, ಭತ್ಸ್ರ್ಯನೆಗಳನ್ನು ಎದುರಿಸಿದ್ದರು. ಸಮಾಜದ ಪುರುಷ ಪ್ರಧಾನ ನಿಲುವು, ಮಹಿಳೆಯರ ವ್ಯಕ್ತಿತ್ವ ವಿಕಸನಕ್ಕೆ ಇದ್ದ ನಿರ್ಬಂಧಗಳು, ಪ್ರತಿ ಹಂತದಲ್ಲೂ ಎದುರಿಸಬೇಕಾಗಿದ್ದ ನಿಂದನೆಗಳಿಂದಾಗಿ, ಅರಳಬಹುದಾಗಿದ್ದ ಅದೆಷ್ಟು ಕುಸುಮಗಳು ಮುರುಟಿಹೋಗಿವೆಯೋ!

ಆದರೆ ಗಂಗೂಬಾಯಿಗೆ ಅವರ ತಾಯಿ ಅಂಬಾಬಾಯಿ ಒತ್ತಾಸೆಯಾಗಿ ನಿಂತರು. ತಾಯಿಯದು ಕರ್ನಾಟಕ ಸಂಗೀತದಲ್ಲಿ ಅಸಾಧಾರಣ ಪ್ರತಿಭೆ. ಹಾಗಾಗಿ, ಗಂಗೂಬಾಯಿ ಅವರಿಗೆ ಸಂಗೀತ ಅವರ ರಕ್ತದಲ್ಲಿಯೇ ಇತ್ತು. ಯಾವುದೇ ರೀತಿಯ ಸಾಮಾಜಿಕ ಪ್ರತಿಕೂಲ ಸಂದರ್ಭಗಳಿಗೂ ಅವರಲ್ಲಿ ಹುದುಗಿದ್ದ ಸಂಗೀತ ಪ್ರೇಮವನ್ನು ಮತ್ತು ಸಂಗೀತಗಾರಳನ್ನು ದಮನಿಸಲು ಸಾಧ್ಯವಾಗಲಿಲ್ಲ. ಅವರ ಆಸಕ್ತಿಗೆ ನೀರೆರೆದು ಪೋಷಿಸಿದ್ದು, ಸ್ವತಃ ಕರ್ನಾಟಕ ಸಂಗೀತದಲ್ಲಿ ಸಾಧನೆ ಮಾಡಿದ್ದರೂ ಮಗಳ ಆಯ್ಕೆಯನ್ನು ಗೌರವಿಸಿ ಹಿಂದೂಸ್ತಾನಿ ಸಂಗಿತದ ಕಲಿಕೆಗೆ ಅಗತ್ಯವಾದ ಅನುಕೂಲಗಳನ್ನು ಮಾಡಿಕೊಟ್ಟದ್ದು ಅವರ ತಾಯಿ ಅಂಬಾಬಾಯಿ.

ತಂದೆ ಚಿಕ್ಕುರಾವ್ ನಾಡಿಗೇರ್ ವೃತ್ತಿಯಲ್ಲಿ ಕೃಷಿಕರು, ತಾಯಿ ಸಂಗೀತ ವಿದುಷಿ. ಗಂಗೂಬಾಯಿಯ ಶಿಕ್ಷಣ ಐದನೆಯ ತರಗತಿಗೇ ಮುಕ್ತಾಯ. ಐದನೇ ತರಗತಿಯವರೆಗಷ್ಟೇ ಶಿಕ್ಷಣ ಪಡೆದ ಗಂಗೂಬಾಯಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಪ್ರಾಧ್ಯಾಪಕರಾದರು! ಆರು ಗೌರವ ಡಾಕ್ಟರೇಟ್ ಪಡೆದು ಡಾ. ಗಂಗೂಬಾಯಿ ಹಾನಗಲ್ ಎನಿಸಿಕೊಂಡರು! ಸಂಗೀತ ವಿಶ್ವ ವಿದ್ಯಾಲಯಕ್ಕೆ ಅವರ ಹೆಸರನ್ನು ಇಡಲಾಗಿದೆ! ಅವರು 50 ಪ್ರಶಸ್ತಿಗಳನ್ನು, 24 ಬಿರುದುಗಳನ್ನು ಪಡೆದಿದ್ದಾರೆ ಮತ್ತು ಒಂಬತ್ತು ಮಂದಿ ಪ್ರಧಾನ ಮಂತ್ರಿಗಳು ಮತ್ತು ಐವರು ರಾಷ್ರಾಧ್ಯಕ್ಷರಿಂದ ಸನ್ಮಾನಿತರಾಗಿದ್ದಾರೆ! ಸಾಧ್ಯವೇ ಇದು? ಇದಲ್ಲವೇ ಸಾಧನೆ!

“ಮಹಾತ್ಮ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಗಂಗೂಬಾಯಿ ಸ್ವಾಗತ ಗೀತೆಯನ್ನು ಹಾಡಿದ್ದಳು. ಅವಳ ಹದಿಹರೆಯದ ವಯಸ್ಸಿನಲ್ಲೇ ಎಚ್‍ಎಂವಿ ಸಂಸ್ಥೆ ಅವಳ ಹಾಡುಗಳನ್ನು ಧ್ವನಿ ಮುದ್ರಿಸಿತ್ತು. 1936 ರಲ್ಲಿ ಅವರು ಆಕಾಶವಾಣಿಯಲ್ಲಿ ಹೀರಾಬಾಯಿ ಬರೋಡೆಕರ್ ಅವರಂಥ ಮೇರು ಗಾಯಕಿಗೆ ಹಾಡುಗಾರಿಕೆಯಲ್ಲಿ ಸಾಥ್ ನೀಡಿದರು. ಅವರ ಸಂಗೀತ ಸಾಧನೆಯ ಯಾನ ಪ್ರಾರಂಭವಾದದ್ದು ಹೀಗೆ” ಎಂದು ಎಚ್.ವೈ. ಶಾರದಾಪ್ರಸಾದ್ (ಭಾರತದ ಮೂವರು ಪ್ರಧಾನ ಮಂತ್ರಿಗಳಾದ ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ ಮತ್ತು ರಾಜೀವ್ ಗಾಂಧಿ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದವರು) ಅವರು ನೆನಪಿಸಿಕೊಂಡಿದ್ದಾರೆ.

ಗಂಗೂಬಾಯಿಯ ಪ್ರಾಥಮಿಕ ಶಿಕ್ಷಣ ಮುಗಿದ ನಂತರ, 1928 ರಲ್ಲಿ ಕುಟುಂಬದವರೆಲ್ಲ ಹುಬ್ಬಳ್ಳಿಗೆ ಸ್ಥಳಾಂತರಗೊಂಡರು. ಇಲ್ಲಿಯೇ, ಅವರ 13 ನೇ ವರ್ಷದಲ್ಲಿ, ಹಿಂದೂಸ್ತಾನಿ ಸಂಗೀತದಲ್ಲಿ ಅವರ ತಾಲೀಮು ಪ್ರಾರಂಭವಾದದ್ದು. ಅವರ 15 ನೇ ವಯಸ್ಸಿನಲ್ಲಿ, ಅವರ ತಾಯಿ, ಗುರುರಾಜ್ ಕೌಲಗಿ ಎಂಬ ಬ್ರಾಹ್ಮಣ ವಕೀಲರೊಂದಿಗೆ ಅವಳ ಮದುವೆಯನ್ನು ನೆರವೇರಿಸಿದರು. ದೇವದಾಸಿ ಸಂಪ್ರದಾಯದಂತೆ ಗಂಗೂಬಾಯಿ ಅವರೊಂದಿಗೆ ವಾಸ ಮಾಡಲಿಲ್ಲ. ಈ ಮದುವೆಯಿಂದ ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗು ಜನಿಸಿದರು. ನಾರಾಯಣ ರಾವ್, ಬಾಬು ರಾವ್ ಮತ್ತು ಕೃಷ್ಣಾ. ಅಮ್ಮನಂತೆ ಕೃಷ್ಣಾ ಸಹ ಗಾಯಕಿಯಾಗಿದ್ದರು. ಸಂಸಾರ ನಿರ್ವಹಣೆ ಮತ್ತು ಮಕ್ಕಳ ಪೋಷಣೆಗೆ ಸಂಬಂಧಿಸಿದಂತೆ ಆಕೆಯದು ‘ಏಕ ಪೋಷಕ’ ಕುಟುಂಬವಾಗಿತ್ತು. ‘ಗಾಯಿಕಿ’ಯೇ ಸಂಸಾರಕ್ಕೆ ಆಧಾರವಾಗಿದ್ದದು. 1979 ರಲ್ಲಿ ಕೌಲಗಿ ತೀರಿಕೊಳ್ಳುವ ವೇಳೆಗೆ ಗಂಗೂಬಾಯಿಯವರ ಕೀರ್ತಿ ಎಲ್ಲೆಡೆ ಹರಡಿತ್ತು. ಗಂಡನ ಕುಟುಂಬ ಕೊನೆಗೂ ಇವರನ್ನು ಕುಟುಂಬದ ಸದಸ್ಯೆಯನ್ನಾಗಿ ಒಪ್ಪಿಕೊಂಡಿತಂತೆ. 2004 ರಲ್ಲಿ ಕೃಷ್ಣಾಳ ಮರಣ ಹಾನಗಲ್ಲರಿಗೆ ಜೀವನದ ಅತಿ ದೊಡ್ಡ ಪೆಟ್ಟು.

ಪ್ರಾರಂಭದಲ್ಲಿ, ಗಂಗೂಬಾಯಿ ಅವರು ಸಂಗೀತ ಶಿಕ್ಷಣ ಪಡೆದದ್ದು, ಕೃಷ್ಣ ಆಚಾರ್ಯರ ಸಂಗೀತ ಅಕಾಡೆಮಿಯಲ್ಲಿ. ಹುಬ್ಬಳ್ಳಿಗೆ ಬಂದ ನಂತರ ಅವರಿಗೆ ಪ್ರಾರಂಭಿಕ ಶಿಕ್ಷಣ ನೀಡಿದ ಗುರುಗಳಲ್ಲಿ ದತ್ತೋಪಂತ ದೇಸಾಯಿಯವರೂ ಒಬ್ಬರು. ಆನಂತರದಲ್ಲಿ, ಅವರು ಸವಾಯಿ ಗಂಧರ್ವ ಅವರ ಬಳಿ ತಮ್ಮ ಸಂಗೀತಾಭ್ಯಾಸವನ್ನು ಮುಂದುವರಿಸಿದರು. ಇದು 1937ರ ಮಾತು. ಅವರ ಗುರುಗಳಾದ ಸವಾಯಿ ಗಂಧರ್ವ ಅವರಿದ್ದುದು ಕುಂದಗೋಳದಲ್ಲಿ. ಇವರಿದ್ದುದು ಹುಬ್ಬಳ್ಳಿಯಲ್ಲಿ. ಹುಬ್ಬಳ್ಳಿಯಿಂದ ಕುಂದಗೋಳಕ್ಕೆ 30 ಕಿಮೀಗಳ ದೂರ. ಅವರ ಸಹಾಭ್ಯಾಸಿ ಭೀಮಸೇನ ಜೋಷಿ ಅವರಂತೆ ಅಲ್ಲೇ ಇದ್ದು ಅಭ್ಯಾಸ ಮಾಡುವುದು ಸಾಧ್ಯವಿರಲಿಲ್ಲ. ಏಕೆಂದರೆ ಆ ವೇಳೆಗಾಗಲೇ ಅವರಿಗೆ ಕುಟುಂಬದ ಜವಾಬ್ದಾರಿ ಹೆಗಲ ಮೇಲಿತ್ತು. ಹಾಗಾಗಿ ಅವರು ಹುಬ್ಬಳ್ಳಿಯಿಂದ ಕುಂದಗೋಳಕ್ಕೆ ರೈಲಿನಲ್ಲಿ ಹೋಗಿ, ಸಂಗೀತದ ತಾಲೀಮು ನಡೆಸಿ ಮತ್ತೆ ಹುಬ್ಬಳ್ಳಿಗೆ ಮರಳಿ ಬರಬೇಕಿತ್ತು. ಅಲ್ಲಿಂದ ಹೊರಡುವ ವೇಳೆಗೆ ಕತ್ತಲಾಗಿರುತ್ತಿತ್ತು. ಅವರನ್ನು ಲಾಟೀನು ಹಿಡಿದು ರೈಲು ಹತ್ತಿಸಲು ಬರುತ್ತಿದ್ದುದು ಭೀಮಣ್ಣ. ಅದೇ ಗುರುಗಳ ಬಳಿ ಕಲಿತು ಹಿಂದೂಸ್ತಾನೀ ಗಾಯಕರಾಗಿ ‘ಭಾರತ ರತ್ನ’ ಪ್ರಶಸ್ತಿಗೆ ಭಾಜನರಾದ ‘ಭೀಮಣ್ಣ’, ಪಂಡಿತ್ ಭೀಮಸೇನ ಜೋಷಿ! ಅವರಿಗೆ “ಭಾರತ ರತ್ನ’ ಪ್ರಶಸ್ತಿ ದೊರೆತಾಗ ‘ನನಗೆ ಅತ್ಯಂತ ಹೆಮ್ಮೆ ಎನಿಸಿತು’ ಎಂದು ನೆನಪಿಸಿಕೊಂಡಿದ್ದಾರೆ ಗಂಗೂಬಾಯಿ ಅವರು. ಕಣ್ಣೆದುರಿಗೆ ಗುರಿ, ಆ ಗುರಿಯನ್ನು ತಲುಪಲು ಅಚಲವಾದ ನಿಷ್ಠೆ ಇದ್ದಾಗ ಮಾತ್ರ ಎದುರಾಗುವ ಯಾವುವೇ ಎಡರುತೊಡರುಗಳನ್ನು ನಿವಾರಿಸಿಕೊಂಡು ಇಂಥ ಸಾಧನೆ ಮಾಡುವುದು ಸಾಧ್ಯವಾಗುತ್ತದೆ.

ಇದರ ನಡುವೆಯೂ ಅವರನ್ನು ಕಾಡುತ್ತಿದ್ದುದು ಹಣದ ಚಿಂತೆ. ಸಂಸಾರ ನಿರ್ವಹಣೆಗೆ ನಾಳೆ ಹೇಗೆ, ಎಲ್ಲಿಂದ ಹಣ ಹೊಂದಿಸುವುದು ಎಂಬ ಚಿಂತೆ ಅವರನ್ನು ಅಧೀರರನ್ನಾಗಿಸುತ್ತಿತ್ತು. ‘ಈ ಚಿಂತೆಗಳಲ್ಲಿ ಮುಳುಗಿ ಹೋಗಿದ್ದಾಗ ಹೊಸದು ಕಲಿಯುವುದು ಹೇಗೆ ಸಾಧ್ಯ? ಸುತ್ತಲಿನ ಪ್ರಪಂಚವನ್ನು ಮರೆತು ಸಂಗೀತದಲ್ಲಿ ಕಳೆದುಹೋಗುವುದು ಅನ್ನುವುದೆಲ್ಲ ಸುಳ್ಳು. ತಂಬೂರ ಕೈಯಲ್ಲಿ ಹಿಡಿದ ಕೂಡಲೇ ಎಲ್ಲ ಮರೆತು ಸಂಗೀತದ ಅಭ್ಯಾಸದಲ್ಲಿ ತೊಡಗುವುದು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ನನ್ನ ಪರಿಸ್ಥಿತಿ ಹೇಗಿತ್ತೆಂದರೆ, ತಾನ್‍ಪುರ ಕೈಯಲ್ಲಿ ಹಿಡಿದು, ಈ ದಿನ ಹೇಗೆ ಕಳೆದೀತು ಎಂಬ ಚಿಂತೆಯಿಂದ ಅಳುತ್ತಿದ್ದೆ. ನಾಳೆಗೆ ಏನು ಮಾಡಲಿ ಎಂದು ಚಿಂತಿಸುತ್ತಿದ್ದೆ. ನನಗೆ ಅನುಕೂಲಗಳು ಇಲ್ಲ ಎಂದು ನಾನು ಚಿಂತಿಸುತ್ತಿರಲಿಲ್ಲ, ನನ್ನ ಕುಟುಂಬವನ್ನು ಹೇಗೆ ದಡ ಸೇರಿಸಲಿ ಎಂದು ಚಿಂತಿಸುತ್ತಿದ್ದೆ’ ಎಂದು ಒಂದು ಸಂದರ್ಶನದಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಇದರ ಮಧ್ಯೆ ಆಗಿನ ಗುರುಕುಲದ ರೀತಿಯ ಕಠಿಣ ಅಭ್ಯಾಸ. ‘ಗುರುಗಳು ನನಗೆ ನಾಲ್ಕು ರಾಗಗಳಿಗಿಂತ ಹೆಚ್ಚಿಗೆ ಕಲಿಸಲಿಲ್ಲ. ಸ್ವರ ಮತ್ತು ಹಣ ಎರಡೂ ಸದೃಶವಾದವು. ಅಗತ್ಯಕ್ಕಿಂತ ಹೆಚ್ಚಿಗೆ ಎಂದೂ ಬಳಸಬಾರದು ಎನ್ನುತ್ತಿದ್ದರು ಗುರುಗಳು’ ಎಂದು ನೆನಪಿಸಿಕೊಂಡಿದ್ದಾರೆ.

ಯಾವುದೇ ಸಾಧನೆಯನ್ನಾಗಲೀ ಯಾರದ್ದೇ ಸಾಧನೆಯನ್ನಾಗಲೀ ಅವರು ಜೀವಿಸಿದ್ದ ಕಾಲದಿಂದ ಬೇರ್ಪಡಿಸಿ ನೋಡಲಾಗದು. ಅದರಲ್ಲೂ ಮಹಿಳೆಯರ ಸಾಧನೆಗೆ ಸಂಬಂಧಿಸಿದಂತೆ ಈ ಅಂಶ ಹೆಚ್ಚು ಪ್ರಸ್ತುತವಾಗುತ್ತದೆ. ಏಕೆಂದರೆ ಯಾವುದೇ ಕಾಲದಲ್ಲೂ ಹೆಚ್ಚು ಹೆಚ್ಚು ನಿಯಂತ್ರಣಕ್ಕೆ ಒಳಪಟ್ಟಿದ್ದವರು ಮತ್ತು ಅತ್ಯಲ್ಪ ಅನುಕೂಲಗಳನ್ನು ಹೊಂದಿದ್ದವರು ಮಹಿಳೆಯರೇ! ಈ ಮಾತು, ಕೆಲವರನ್ನು ಹೊರತು ಪಡಿಸಿದರೆ, ಇವತ್ತಿಗೂ ಸತ್ಯ!

ಗಂಗೂಬಾಯಿ ಅವರ ಮೂಲ ಹೆಸರು ಗಾಂಧಾರೀ ಹಾನಗಲ್ ಅಂತೆ! ಆದರೆ ರೆಕಾರ್ಡಿಂಗ್ ಕಂಪೆನಿ ಅವರ ಹೆಸರನ್ನು ಹಾನಗಲ್ ಬದಲಿಗೆ ಹುಬ್ಳೀಕರ್ ಎಂದು ಮುದ್ರಿಸಿತಂತೆ. ಅದಕ್ಕೆ ಅದು ಕೊಟ್ಟ ಕಾರಣ, ಹಾನಗಲ್ ಎಂಬ ಹೆಸರು ಯಾರಿಗೂ ಗೊತ್ತಿರುವುದಿಲ್ಲ. ಹುಬ್ಬಳ್ಳಿಯಾದರೆ ದೊಡ್ಡ ನಗರ. ಹಾಗಾಗಿ ಹೆಸರಿನ ಮುಂದೆ ಹುಬ್ಳೀಕರ್ ಎಂದಿದ್ದರೆ ಹೆಚ್ಚಿನ ಖ್ಯಾತಿ ದೊರೆಯುತ್ತದೆ ಎಂಬುದು. ಗಾಂಧಾರಿ ಎಂಬ ಹೆಸರು ತುಂಬಾ ಸಾಮಾನ್ಯವಾಗಿ ಇಡುವಂಥದ್ದು ಎಂದು ಕಂಪೆನಿಯ ಒಬ್ಬ ಹಿರಿಯ ಅಧಿಕಾರಿ ಭಾವಿಸಿದ್ದರಿಂದ ಗಾಂಧಾರಿ ಗಂಗೂಬಾಯಿ ಆಯಿತಂತೆ. ಆದರೆ, ಮುಂದೆ, ಊರ ಹೆಸರು ಇವರ ಹೆಸರಿನಿಂದ ಖ್ಯಾತವಾಗುವಷ್ಟು ಎತ್ತರಕ್ಕೆ ಇವರು ಬೆಳೆದರು!

ಪುರಷ ಸಂಗೀತಗಾರ ಖ್ಯಾತನಾದ ಕೂಡಲೇ, ಮುಸಲ್ಮಾನನಾದರೆ ‘ಉಸ್ತಾದ್’, ಹಿಂದೂವಾದರೆ, ‘ಪಂಡಿತ್’ ಎನಿಸಿಕೊಳ್ಳುತ್ತಾನೆ, ಆದರೆ ಸ್ತ್ರೀ ಖ್ಯಾತಿ ಪಡೆದರೂ ಕೇಸರ್‍ಬಾಯಿ, ಮೋಗುಬಾಯಿ ಅವರಂತೆ ‘ಬಾಯಿ’ಗಳಾಗಿಯೇ ಉಳಿಯುತ್ತಾರೆ ಎಂದು ಸ್ತ್ರೀ ಪುರುಷ ತಾರತಮ್ಯದ ಬಗ್ಗೆ ಒಮ್ಮೆ ಅಭಿಪ್ರಾಯ ವ್ಯಕ್ತ ಪಡಿಸಿದ್ದರಂತೆ. ಅವರೂ ‘ಗಂಗೂಬಾಯಿ’ ಆಗಿಯೇ ಉಳಿದರು, ಕೊನೆಯವರೆಗೂ.

ಹಾಡುತ್ತಿರುವವವರನ್ನು ನೋಡದೆ ಗಂಗೂಬಾಯಿಯವರ ಹಾಡುಗಾರಿಕೆಯನ್ನು ಮಾತ್ರ ಕೇಳಿದವರು, ಹಾಡುತ್ತಿರುವವರು ಗಂಡಸರು ಎಂದೇ ತಿಳಿಯುತ್ತಿದ್ದರು. ಅದನ್ನು ಅವರೇ ನಗುತ್ತಾ ಹೇಳಿಕೊಳ್ಳುತ್ತಿದ್ದುದು ಉಂಟಂತೆ. ಒಮ್ಮೆ ಆಕಾಶವಾಣಿಯಲ್ಲಿ ಅವರ ಹಾಡುಗಾರಿಕೆಯ ನೇರ ಪ್ರಸಾರವಿತ್ತು. ಮನೆಯಿಂದ ಹೊರಡುವಾಗ ಮನೆಯಲ್ಲಿದ್ದ ಬಾಲಕಿಗೆ ತಮ್ಮ ಹಾಡುಗಾರಿಕೆಯನ್ನು ಕೇಳುವಂತೆ ಹೇಳಿ ಹೊರಟರಂತೆ. ಬಂದ ನಂತರ ಕೇಳಿದೆಯಾ ಎಂದು ಕೇಳಿದಾಗ ‘ರೇಡಿಯೋ ಹಚ್ಚಿದ್ದೆ ಅಕ್ಕಾರೆ, ಯಾರೋ ಗಂಡಸರು ಹಾಡ್ಲಿಕ್ಕೆ ಹತ್ತಿದ್ರು’ ಎಂದಳಂತೆ! ಕವಿ ಬೇಂದ್ರೆಯವರು ಹೇಳುತ್ತಿದ್ದರಂತೆ, ‘ಯಾರೋ ಉಸ್ತಾದನ ಆತ್ಮ ಗಂಗೂಬಾಯಿಯವರ ಗಂಟಲನ್ನು ಕಾಯಂ ಸ್ಥಾನವನ್ನಾಗಿ ಮಾಡಿಕೊಂಡುಬಿಟ್ಟಿದೆ’ ಎಂದು. ಗಂಗೂಬಾಯಿಯವರು ಪದೇ ಪದೇ ಟಾನ್ಸಿಲ್ಸ್ ಸೋಂಕಿಗೆ ತುತ್ತಾಗುತ್ತಿದ್ದಾಗ ಶಸ್ತ್ರ ಚಿಕಿತ್ಸೆ ಮಾಡುವುದು ಅಗತ್ಯವಾಯಿತಂತೆ. ಆದರೆ ಗಂಟಲಿಗೆ ಧಕ್ಕೆಯಾಗಿ ಇವರ ಇನಿದನಿ ಹಾಳಾದೀತು ಎಂಬ ಕಾಳಜಿಯಿಂದ ಶಸ್ತ್ರ ಚಿಕಿತ್ಸೆ ಮಾಡದೆಯೇ ಅದನ್ನು ಸುಟ್ಟರಂತೆ. ದನಿ ಉಳಿಯಿತು ಆದರೆ ಮಾಧುರ್ಯ ಹಾಳಾಗಿತ್ತು. ಆ ನಂತರ ಆ ಗಡಸು ದನಿಯನ್ನು ಪಳಗಿಸುವುದಕ್ಕೆ ಅವರು ಮಾಡಿದ ಸಾಧನೆ ಅನನ್ಯ.

ಗಂಗೂಬಾಯಿ ಹಾನಗಲ್ ಅವರಿಗೂ ಆಕಾಶವಾಣಿಗೂ ಇದ್ದ ನಂಟು ಸಹ ಅಷ್ಟೇ ಅನನ್ಯವಾದುದು. ಆದರೆ, ಮಾನ್ಯತೆ ಪಡೆದ ಸಂಗೀತಗಾರರ ಟ್ರೇಡ್ ಯೂನಿಯನ್ ಇಲ್ಲದಿದ್ದ ಆ ಕಾಲದಲ್ಲಿ, ಹಾನಗಲ್ ಮತ್ತು ಇತರ ಸಂಗೀತಗಾರರು ಆಕಾಶವಾಣಿಯ ಆಡಿಷನ್‍ನ ವಿಳಂಬ ನೀತಿಯ ವಿರುದ್ಧ ಮತ್ತು ದೀರ್ಘ ಪ್ರಕ್ರಿಯೆಯ ವಿರುದ್ಧ ದನಿಯೆತ್ತಿದ್ದರಂತೆ. ಇದರ ಫಲವಾಗಿ ಅವರನ್ನು ಆಕಾಶವಾಣಿ ಅವರನ್ನು ಕಪ್ಪು ಪಟ್ಟಿಗೂ ಸೇರಿಸಿತ್ತಂತೆ. ಹಣದ ಅಗತ್ಯವಿದ್ದ ಆ ಕಾಲದಲ್ಲಿ ಇದು ದೊಡ್ಡ ಹೊಡೆತವಾದರೂ ತತ್ವಕ್ಕಾಗಿ ಹಿಂತೆಗೆಯಲಿಲ್ಲವಂತೆ. ಆ ನಂತರದಲ್ಲಿ, 1954 ರಲ್ಲಿ, ಒಂದು ಒಪ್ಪಂದಕ್ಕೆ ಬಂದು, ಭಾರತದಾದ್ಯಂತ ಇದ್ದ 44 ಪ್ರಸರಣ ಕೇಂದ್ರಗಳಿಂದ ಐದು ದಿನಗಳ ಕಾಲ ಶಾಸ್ತ್ರೀಯ ಸಂಗೀತ ಪ್ರಸಾರ ಮಾಡಲು ಆಕಾಶವಾಣಿ ಪ್ರಾರಂಭಿಸಿತಂತೆ. ಈ ಸಂಗೀತೋತ್ಸವದ ಕೇಂದ್ರ ಬಿಂದು ಗಂಗೂಬಾಯಿಯವರೇ ಆಗಿದ್ದರು ಎಂಬುದನ್ನು ಬೇರೆ ಹೇಳಬೇಕಾಗಿಯೇ ಇಲ್ಲ.

ಗಂಗೂಬಾಯಿ ಅವರು ತಮ್ಮ ಮೊತ್ತ ಮೊದಲಿನ ಸಂಗೀತ ಕಾರ್ಯಕ್ರಮ ನೀಡಿದ್ದು ಮುಂಬಯಿಯ ‘ಮುಂಬಯಿ ಮ್ಯೂಸಿಕ್ ಸರ್ಕಲ್’ನಲ್ಲಿ, ಸಂಗೀತದ ಅತಿರಥ ಮಹಾರಥರು ಎನ್ನಿಸಿಕೊಂಡಿದ್ದವರ ಅಂದಿನ ಸಂಗೀತಗಾರರ ಸಮ್ಮುಖದಲ್ಲಿ. ಆ ನಂತರದಲ್ಲಿ, ಅವರ ಸಂಗೀತ ಸಾಧನೆಯ ಗ್ರಾಫ್ ಏರುತ್ತಲೇ ಹೋಯಿತು. ಭಾರತದಾದ್ಯಂತ ಸಂಚರಿಸಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಪಾಕಿಸ್ತಾನ, ನೇಪಾಳ, ಜರ್ಮನಿ, ಫ್ರಾನ್ಸ್, ಅಮೆರಿಕಾ ಹಾಗೂ ಕೆನಡಾ ದೇಶಗಳಲ್ಲಿ ಸಹ ಇವರ ಸಂಗೀತ ಸುಧೆ ಹರಿದಿದೆ. ಇವರ ಸಂಗೀತ ಪಯಣದ ಪ್ರಾರಂಭದಲ್ಲಿ ಇವರು ಲಘು ಶಾಸ್ತ್ರೀಯ ಸಂಗೀತವನ್ನು, ಭಜನ್ ಮತ್ತು ಟುಮರಿಗಳನ್ನು ಹಾಡುತ್ತಿದ್ದರಾದರೂ ಆ ನಂತರದಲ್ಲಿ ಅವರು ಖಯಾಲ್‍ಗಳನ್ನಷ್ಟೇ ಹಾಡಲಿಚ್ಛಿಸುತ್ತಿದ್ದರು. ಅವರು ತಮ್ಮ ಕೊನೆಯ ಕಚೇರಿಯನ್ನು ನಡೆಸಿಕೊಟ್ಟದ್ದು 2006 ರಲ್ಲಿ, ಅವರ ಸಂಗೀತ ಪಯಣ 75 ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆಯ ಸಂದರ್ಭದಲ್ಲಿ, ಅವರ 93 ನೇ ವರ್ಷದಲ್ಲಿ!

2009 ರ ಜುಲೈ 21 ರಂದು ಅವರ 96ನೇ ವರ್ಷದಲ್ಲಿ ಗಂಗೂಬಾಯಿ ಅವರು ದೈವಾಧೀನರಾದರು. ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿ ಮಾದರಿಯಾದವರು. ಕರ್ನಾಟಕ ರಾಜ್ಯ ಸರ್ಕಾರ ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಿತು. ಸಕಲ ಸರ್ಕಾರೀ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯಕ್ಕೆ ಗಂಗೂಬಾಯಿಯವರ ಹೆಸರಿಡಲಾಗಿದ್ದು, ಅದು ಪ್ರಸ್ತುತ ಮೈಸೂರಿನಿಂದ ಕಾರ್ಯ ನಿರ್ವಹಿಸುತ್ತಿದೆ. ಗಂಗೂಬಾಯಿ ಅವರು ಹುಟ್ಟಿದ ಸ್ಥಳವನ್ನು ಕರ್ನಾಟಕ ಸರ್ಕಾರ ವಸ್ತು ಸಂಗ್ರಹಾಲಯವನ್ನಾಗಿ ಅಭಿವೃದ್ಧಿಪಡಿಸಿದೆ. ಹುಬ್ಬಳ್ಳಿಯಲ್ಲಿರುವ ಡಾ. ಗಂಗೂಬಾಯಿ ಹಾನಗಲ್ ಗುರುಕುಲ, ಕಲಾವಿದರಿಗೆ ಗುರು-ಶಿಷ್ಯ ಪರಂಪರೆಯಲ್ಲಿ ಸಂಗೀತ ತರಬೇತಿ ನೀಡುತ್ತಿದೆ. ಬಿಜಾಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಮರಣೋತ್ತರ ಡಾಕ್ಟ್ರೇಟ್ ನೀಡಿ ಗೌರವಿಸಿದೆ. ಅವರು ಪಡೆದ ಪ್ರಶಸ್ತಿಗಳಲ್ಲಿ ಮುಖ್ಯವಾದವು-
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ 1962
ಪದ್ಮಭೂಷಣ 1971
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ 1996
ಪದ್ಮವಿಭೂಷಣ 2002

  • ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *