Uncategorizedಅಂಕಣ

ಪದ್ಮಪ್ರಭೆ/ ಕವಿತಾ ಎಂಬ ಮಧುರ ದನಿಯ ಗಾಯಕಿ – ಡಾ. ಗೀತಾ ಕೃಷ್ಣಮೂರ್ತಿ

ಭಾರತೀಯ ಚಿತ್ರರಂಗದ ಮಧುರ ದನಿಯ ಹಿನ್ನೆಲೆ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರ ಹೆಸರನ್ನು ಕೇಳದೆ ಇರುವವರು ವಿರಳ. ಕೇವಲ ಹಿನ್ನೆಲೆ ಗಾಯನಕ್ಕಷ್ಟೇ ಸೀಮಿತಗೊಳಿಸಿಕೊಳ್ಳದೆ, ಅದರಾಚೆಗೂ ತಮ್ಮ ಪ್ರತಿಭೆಯನ್ನು ವಿಸ್ತರಿಸಿರುವುದೂ ಇವರ ಸಂಗೀತ ಸಾಧನೆಯ ಹಾದಿಯಲ್ಲಿನ ಒಂದು ವಿಶೇಷ ಹೆಜ್ಜೆ. ಧ್ವನಿಯಲ್ಲಿನ ಮಾಧುರ್ಯ, ಯಾವುದೇ ಸ್ಥಾಯಿಯಲ್ಲಿ ಹಾಡಬಲ್ಲ ಸಾಮಥ್ರ್ಯ ಹಾಗೂ ಯಾವುದೇ ಬಗೆಯ ಹಾಡುಗಳನ್ನೂ ಹಾಡಬಲ್ಲ ಪ್ರತಿಭೆ ಇರುವ ಕವಿತಾ ಅವರು ಆ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಅವರ ಸಂಗೀತದ ಸಾಧನೆಗೆ ಸಂದ ಅನೇಕ ಪ್ರಶಸ್ತಿಗಳಿಗೆ ಕಿರೀಟವಿಟ್ಟಂತೆ 2005 ರಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ ಅವರಂಥ ಹಿನ್ನೆಲೆ ಗಾಯನದ ದಂತ ಕಥೆಗಳೆನಿಸಿಕೊಂಡ ಗಾಯಕಿಯರ ಪಾರಮ್ಯ ಹೊಂದಿದಂಥ ಕ್ಷೇತ್ರದಲ್ಲಿ ತನ್ನ ಹೆಜ್ಜೆಗಳನ್ನೂರಿ, ಅವರ ಆಶೀರ್ವಾದ ಪಡೆದು, ಆ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತು, ಅವರಿಂದ ಮೆಚ್ಚುಗೆಯ ಮಾತುಗಳನ್ನೂ ಪಡೆದು, ಹೆಸರು ಮಾಡಿದ ಅಪರೂಪದ ಗಾಯಕಿ ಕವಿತಾ ಕೃಷ್ಣಮೂರ್ತಿ. ಆ ಕಾಲಕ್ಕೆ ಅದು ಸಾಮಾನ್ಯದ ಮಾತಾಗಿರಲಿಲ್ಲ. ಈ ಸಾಧನೆಯ ಹಿಂದೆ ಅಪಾರವಾದ ಶ್ರಮ ಮತ್ತು ಸಾಧನೆಯಿತ್ತು. ಶಾಸ್ತ್ರೀಯ ಸಂಗೀತದ ಗಟ್ಟಿಯಾದ ಬುನಾದಿ ಮತ್ತು ಕ್ಷಮತೆ ಅವರಲ್ಲಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಸಾಧನೆಯ ಫಲಕ್ಕಾಗಿ ಕಾಯುವ ಸಹನೆಯಿತ್ತು ಎಂಬುದರಿಂದಲೇ ಇಂದು ತಲುಪಿರುವ ಎತ್ತರವನ್ನು ಅವರು ತಲುಪಲು ಅವರಿಗೆ ಸಾಧ್ಯವಾಯಿತು. ಕವಿತಾ ಅವರ ಮೂಲ ಹೆಸರು ಶಾರದ. ದೆಹಲಿಯಲ್ಲಿ ತಂದೆ ಟಿ.ಎಸ್. ಕೃಷ್ಣಮೂರ್ತಿ ಅವರು ಶಿಕ್ಷಣ ಮಂತ್ರಾಲಯದಲ್ಲಿ ಉದ್ಯೋಗದಲ್ಲಿದ್ದರು. ಕವಿತಾ ತನ್ನ ಕುಟುಂಬದ ಅತ್ಯಂತ ಆಪ್ತರಾದ ಬಂಗಾಳಿ ಆಂಟಿಯ ಸಲಹೆಯ ಮೇರೆಗೆ ಮೊದಲು ಸಂಗೀತ ಶಿಕ್ಷಣ ಪಡೆದದ್ದು ಸುರುಮ ಬಸು ಎಂಬುವರಲ್ಲಿ, ರಬೀಂದ್ರ ಸಂಗೀತದಲ್ಲಿ. ಆನಂತರದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದಲ್ಲಿ ಶಿಕ್ಷಣ ಪಡೆದದ್ದು ಬಲರಾಮ ಪುರಿ ಅವರಲ್ಲಿ. ಅವರ ಹಿಂದೂಸ್ತಾನೀ ಶಾಸ್ತ್ರೀಯ ಗಾಯನದ ತರಬೇತಿಯ ಪ್ರಾರಂಭ ಇಲ್ಲಿಂದಲೇ ಆಯಿತು ಎನ್ನಬಹುದು. ಅಂತರ ಮಂತ್ರಾಲಯಗಳ ನಡುವೆ ಏರ್ಪಡಿಸುವ ಸ್ಫರ್ಧೆಗಳಲ್ಲಿ ಇವರು ಪ್ರತಿ ಬಾರಿ ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಸಣ್ಣ ವಯಸ್ಸಿನಲ್ಲೇ ಎಲ್ಲರ ಗಮನ ಸೆಳೆದಿದ್ದರು.

ಕಾಲೇಜು ಶಿಕ್ಷಣ ಪಡೆಯುವ ವೇಳೆಗೆ ಕವಿತಾ ಮುಂಬಯಿಗೆ ಸ್ಥಳಾಂತರಗೊಂಡರು. ಸೇಂಟ್ ಕ್ಸೇವಿಯರ್ ಕಾಲೇಜು ಇವರ ಮುಂದಿನ ಗಾಯನ ಪಯಣದಲ್ಲಿ ಬಹು ಮುಖ್ಯವಾದ ಪಾತ್ರ ವಹಿಸಿತು. ಅರ್ಥ ಶಾಸ್ತ್ರದಲ್ಲಿ ಪದವಿ ಪಡೆದು ಕಾಲೇಜು ಶಿಕ್ಷಣ ಪೂರ್ಣಗೊಳಿಸಿದರು. ಆದರೆ ಅಲ್ಲಿಂದಲೇ ಅವರ ಸಂಗೀತ ಶಿಕ್ಷಣದ ಪಯಣಕ್ಕೆ ಮಹಾ ತಿರುವೂ ದೊರೆಯಿತು. ಶ್ರೇಷ್ಠ ಗಾಯಕ ಮತ್ತು ಸಂಗೀತ ನಿರ್ದೇಶಕ ಹೇಮಂತ್ ಕುಮಾರ್ ಅವರ ಮಗಳು ಕಾಲೇಜಿನಲ್ಲಿ ಕವಿತಾ ಅವರ ಸಹಪಾಠಿಯಾಗಿದ್ದಳು. ಕವಿತಾ ಅವರ ಗಾಯನ ಸಿರಿಗೆ ಮಾರುಹೋದ ಗೆಳತಿ ತಂದೆಗೆ ಅವಳನ್ನು ಪರಿಚಯ ಮಾಡಿಸಿದಳು. ಹೇಮಂತ್ ಕುಮಾರ್ ಇವರ ಧ್ವನಿಯ ಮಾಧುರ್ಯಕ್ಕೆ ಮಾರು ಹೋಗಿ, ವೇದಿಕೆ ಕಾರ್ಯಕ್ರಮಗಳಲ್ಲಿ ತಮ್ಮೊಂದಿಗೆ ಹಾಡುವ ಅವಕಾಶವನ್ನು ನೀಡಿದರು. ಅಲ್ಲಿಂದ ಮುಂದೆ ಸಾಗಿದ ಕವಿತಾ ಅವರಿಗೆ ಹೀಂದೆ ನೋಡುವ ಪ್ರಮೇಯವೇ ಬರಲಿಲ್ಲ. ಹೇಮಂತ ಕುಮಾರ್ ಅವರೊಡನೆ ಗಾಯನ ಪ್ರದರ್ಶನಗಳಲ್ಲಿ ಹಾಡುವಾಗಲೆಲ್ಲ ಶಾರದ ಎಂದರೆ, ಅದಕ್ಕೆ ಮುನ್ನ ಅವರೊಂದಿಗೆ ಹಾಡುತ್ತಿದ್ದ ಶಾರದ ಎಂಬ ಅದೇ ಹೆಸರಿನ ಪ್ರಸಿದ್ಧ ಗಾಯಕಿ ಎಂದೇ ತಿಳಿಯುತ್ತಿದ್ದರಂತೆ. ಹಾಗಾಗಿ ಹೆಸರನ್ನು ಬದಲಾಯಿಸಿಕೊಳ್ಳುವಂತೆ ಹೇಮಂತ್ ಕುಮಾರ್ ಅವರು ಸೂಚಿಸಿದರಂತೆ. ಹಾಗಾಗಿ ‘ಶಾರದಾ’ ‘ಕವಿತಾ’ ಆದರು. ಹೇಮಂತ್ ಕುಮಾರ್ ಅವರೊಡನೆ ವೇದಿಕೆ ಪ್ರದರ್ಶನಗಳನ್ನು ನೀಡುವಾಗಲೇ ಅವರಿಗೆ ಮನ್ನಾಡೇ ಅವರಿದಲೂ ತಮ್ಮೊಂದಿಗೆ ಹಾಡುವಂತೆ ಕರೆ ಬಂತು. ಆ ಅವಕಾಶದಲ್ಲಿ ಅವರೊಡನೆ ದೇಶಾದ್ಯಂತ ಹಾಗೂ ವಿದೇಶಗಳಲ್ಲಿ ಸಂಚರಿಸಿ ಹಾಡುವಂತಾಗಿ ಅವರ ಗಾಯನದ ಪಯಣಕ್ಕೆ ಮತ್ತೊಂದು ಆಯಾಮ ದೊರೆಯಿತು. ಅತ್ಯಂತ ದೀರ್ಘ ಕಾಲ ಅವರೊಂದಿಗೆ ಹಾಡುವ ಈ ಅವಕಾಶ ಅವರ ಜೀವನದ ಅತ್ಯಮೂಲ್ಯವಾದ ಅವಕಾಶ, ಇದು ನೀಡಿದ ಅನುಭವ ಅತ್ಯಂತ ಶ್ರೀಮಂತವಾದುದು ಎಂದಿದ್ದಾರೆ ಕವಿತಾ. ಅವರನ್ನು ತಂದೆಯ ಸ್ಥಾನದಲ್ಲಿಟ್ಟು ಗೌರವಿಸುವುದಾಗಿ ಭಾವುಕರಾಗಿ ನುಡಿಯುತ್ತಾರೆ.

ಕವಿತಾ ಅವರ ಮೊತ್ತ ಮೊದಲ ಧ್ವನಿಮುದ್ರಿತ ಹಾಡು ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿ, ಶಾಲೆಯಲ್ಲಿದ್ದಾಗ, ಅದೂ ಗಾಯನ ಕ್ಷೇತ್ರದ ದಂತ ಕಥೆ ಎನಿಸಿದ ಲತಾ ಮಂಗೇಶ್ಕರ್ ಅವರ ಜೊತೆಯಲ್ಲಿ ಹಾಡಿದ ಬಂಗಾಳೀ ಗೀತೆ, ಹೇಮಂತ್ ಕುಮಾರ್ ಅವರ ನಿರ್ದೇಶನದಲ್ಲಿ. ಅದು ತಮ್ಮ ಜೀವನದಲ್ಲಿನ ಮರೆಯಲಾರದ ಸಂದರ್ಭ ಎಂದಿದ್ದಾರೆ ಕವಿತಾ ಕೃಷ್ಣಮೂರ್ತಿ. ಅಂದಿನಿಂದಲೂ ಆ ಹಿರಿಯ ಗಾಯಕಿಯ ಆಶೀರ್ವಾದ ತಮ್ಮ ಮೇಲಿದೆ ಎನ್ನುತ್ತಾರೆ. ಮತ್ತೊಮ್ಮೆ ಅವರಿಗೆ ಹಾಡಲು ಸಂಗೀತ ನಿರ್ದೇಶಕರಿಂದ ಕರೆ ಬರುತ್ತದೆ. ತಾವು ಹಾಡಲೆಂದು ಹೋದಾಗ, ಲತಾ ಮಂಗೇಶ್ಕರ್ ಅವರು ಸ್ಟುಡಿಯೋದಲ್ಲಿ ಪ್ರತ್ಯಕ್ಷರಾಗುತ್ತಾರೆ. ತಾನು ಈಗ ಅವರ ಜೊತೆಯಲ್ಲಿ ಹಾಡಲಿದ್ದೇನೆ ಎಂದು ತಿಳಿದಾಗ, ಆದ ಗಾಬರಿ ಪುಳಕಗಳನ್ನು ತಮ್ಮ ಎಲ್ಲ ಸಂದರ್ಶನಗಳಲ್ಲೂ ಹೇಳಿಕೊಂಡಿದ್ದಾರೆ. ಆ ಸಂದರ್ಭವನ್ನು ನೆನಪು ಮಾಡಿಕೊಂಡು ಹೇಳುವಾಗ, ಮತ್ತೊಮ್ಮೆ ಅನುಭವಿಸುತ್ತಾರೆ. ಅವರನ್ನು ಅನಿರೀಕ್ಷಿತವಾಗಿ ನೋಡಿದಾಗ ಹಾಡಬೇಕಿದ್ದ ಸಾಲುಗಳನ್ನೇ ಮರೆತುಬಿಟ್ಟರಂತೆ. ಲತಾ ಅವರೇ ಅವರಿಗೆ ಧೈರ್ಯ ತುಂಬಿದರಂತೆ. ಈ ಬೆಂಬಲ ಅವರಿಗೆ ಈ ಎಲ್ಲ ವರ್ಷಗಳಲ್ಲೂ ದೊರೆಯುತ್ತಾ ಬಂದಿದೆ ಎಂದು ಕೃತಜ್ಞರಾಗುತ್ತಾರೆ.

ಕವಿತಾ ಅವರಿಗೆ ಲಕ್ಷ್ಮೀಕಾಂತ್ ಪರಿಚಯವಾದದ್ದು ಅವರು ಸಿನಿಮಾ ರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಕಾಲೂರಲು ಬಹಳಷ್ಟು ಸಹಾಯಕವಾಯಿತು. 1970-1980 ರ ದಶಕದಲ್ಲಿ ಸಿನಿಮಾ ಸಂಗೀತ ಕ್ಷೇತ್ರವನ್ನು ಅಕ್ಷರಶಃ ಆಳಿದ ದಿಗ್ಗಜ ಸಂಗೀತ ನಿರ್ದೇಶಕ ಜೋಡಿ ಲಕ್ಷ್ಮೀಕಾಂತ್-ಪ್ಯಾರೇಲಾಲ್ ಜೋಡಿಯ ಲಕ್ಷ್ಮೀಕಾಂತ್ ಅವರ ಪರಿಚಯ ಕವಿತಾ ಅವರಿಗೆ ಆದದ್ದು ಖ್ಯಾತ ಅಭಿನೇತ್ರಿ ಹೇಮಾಮಾಲಿನಿಯ ತಾಯಿ ಜಯಾ ಚಕ್ರವರ್ತಿ ಅವರ ಮೂಲಕ. ಕವಿತಾ ಅವರ ಸ್ವರ ಮಾಧುರ್ಯವನ್ನು ಮೆಚ್ಚಿದ ಲಕ್ಷ್ಮೀಕಾಂತ್ ಅವರು ಕವಿತಾ ಅವರಿಗೆ ಖ್ಯಾತ ಗಾಯಕಿಯರಾದ ಲತಾ ಮಂಗೇಶ್ಕರ್ ಹಾಗೂ ಆಶಾ ಭೋಂಸ್ಲೆ ಅವರಿಗೆ ಡಬ್ಬಿಂಗ್ ಕಲಾವಿದೆಯಾಗಿ ಹಾಡಲು ಅವಕಾಶ ಮಾಡಿಕೊಟ್ಟರು. ಪ್ರಾರಂಭದ ವರ್ಷಗಳಲ್ಲಿ, ಸುಮಾರು ಆರೇಳು ವರ್ಷಗಳ ಕಾಲ ಲತಾ ಅವರಿಗೆ ಟ್ರ್ಯಾಕ್ ಗಾಯಕಿಯಾಗಿ ಕವಿತಾ ಹಾಡಿದ್ದಾರೆ. ಈ ಅನುಭವದಿಂದ, ತಾವು ಬಹಳಷ್ಟು ಕಲಿತೆ ಎನ್ನುತ್ತಾರೆ. ಕವಿತಾ ಅವರದೇ ದನಿಯ ಹಿನ್ನೆಲೆ ಗಾಯನದ ಪ್ರಥಮ ಗೀತೆ, ಅವರು 1980 ರಲ್ಲಿ ಹಾಡಿದ ‘ಕಾಹೆ ಕೊ ಭಾಯಿ’ ಎಂಬ ಗೀತೆ. 1985 ರಲ್ಲಿ ಅವರು ಹಾಡಿದ ‘ತುಮ್ಸೆ ಮಿಲ್‍ಕರ್ ನ ಜಾನೇ ಕ್ಯೋಂ’ ಎಂಬ ಗೀತೆ ಅವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು. ಆ ನಂತರದಲ್ಲಿ ಇತರ ನಿರ್ದೇಶಕರಿಗೆ ಹಾಡಲು ಅವರಿಗೆ ಅವಕಾಶಗಳ ಬಾಗಿಲು ತೆರೆಯಿತು. 1987 ರಲ್ಲಿ ತರೆಕಂಡ ‘ಮಿ. ಇಂಡಿಯಾ’ ದಲ್ಲಿ ಅವರು ಖ್ಯಾತ ಅಭಿನೇತ್ರಿ ಶ್ರೀದೇವಿ ಅವರ ಅಭಿನಯಕ್ಕೆ ಹಾಡಿದ ‘ಹವಾಯ್ ಹವಾಯ್’ ಹಾಡು ಅವರ ಹಿನ್ನೆಲೆ ಗಾಯನದ ಅವರ ಜೀವನಕ್ಕೆ ಮುಖ್ಯ ತಿರುವು ನೀಡಿದ ಹಾಡು.

ಧ್ವನಿಯಲ್ಲಿನ ಮಾಧುರ್ಯ, ಯಾವುದೇ ಸ್ಥಾಯಿಯಲ್ಲಿ ಹಾಡಬಲ್ಲ ಸಾಮಥ್ರ್ಯ ಹಾಗೂ ಯಾವುದೇ ಬಗೆಯ ಹಾಡುಗಳನ್ನೂ ಹಾಡಬಲ್ಲ ಕ್ಷಮತೆ ಇರುವ ಕವಿತಾ ಅವರು ಆ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಮನ್ನಾಡೇ, ಕಿಶೋರ್ ಕುಮಾರ್ ಅವರೊಡನೆ ಹಾಡಿದಷ್ಟೇ ಸರಾಗವಾಗಿ ಇಂದಿನ ಗಾಯಕರಾದ ಉದಿತ್ ನಾರಾಯಣ್, ಸೋನು ನಿಗಮ್ ಹಾಗೂ ಶಾನ್ ಅವರ ಜೊತೆಯಲ್ಲಿಯೂ ಹಾಡಬಲ್ಲವರಾಗಿ, ಹಳೆ ಮತ್ತು ಹೊಸ ತಲೆಮಾರುಗಳ ನಡುವೆ ಗಾನ ಸೇತುವೆಯಾಗಿದ್ದಾರೆ ಈ ಅಪರೂಪದ ಗಾಯಕಿ ಎನ್ನಲಾಗಿದೆ. ನೌಷದ್, ಖಯ್ಯಾಮ್, ಓ.ಪಿ. ನಯ್ಯರ್, ಲಕ್ಷ್ಮೀಕಾಂತ್-ಪ್ಯಾರೇಲಾಲ್, ಆರ್.ಡಿ. ಬರ್ಮನ್, ಬಪ್ಪಿ ಲಹರಿ, ಎ.ಆರ್.ರೆಹಮಾನ್, ಅನು ಮಲಿಕ್, ನದೀಮ್ ಶ್ರವಣ್ ಹೀಗೆ ಸರಿ ಸುಮಾರು ಎಲ್ಲ ಸಂಗೀತ ನಿರ್ದೇಶಕರ ನಿರ್ದೇಶನದಲ್ಲಿ ಹಾಡಿದ್ದಾರೆ. ನೂತನ್, ಹೆಲನ್ ಶಬಾನಾ, ಶ್ರೀದೇವಿ, ಮಾಧುರೀ ದೀಕ್ಷಿತ್, ಮನೀಷಾ, ಕಜೋಲ್ ರಿಂದ ಕರಿಷ್ಮಾ, ಐಶ್ವರ್ಯಾ ರೈ ಮತ್ತು ರಾಣಿ ಮುಖರ್ಜಿಯ ವರೆಗೆ ಸುಮಾರು ಮೂರು ಪೀಳಿಗೆಯ ಅಭಿನೇತ್ರಿಯರಿಗೆ ದನಿ ನೀಡಿದ್ದಾರೆ. 16 ಭಾಷೆಗಳಲ್ಲಿ 25,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಬಹುತೇಕ ಭಾಷೆಗಳಲ್ಲಿ ಗಾಯನ : ಕವಿತಾ ಅವರು ಹಿನ್ನೆಲೆ ಗಾಯನಕ್ಕಷ್ಟೇ ಸೀಮಿತಗೊಳಿಸಿಕೊಳ್ಳದೆ ದೇಶಾದ್ಯಂತ ಹಾಗೂ ಅನೇಕಾನೇಕ ದೇಶಗಳಲ್ಲಿ ಸಂಚರಿಸಿ ಗಾನಗೋಷ್ಠಿಗಳನ್ನು ನಡೆಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮರಾಠಿ, ಗುಜರಾತಿ, ಪಂಜಾಬಿ, ಬಂಗಾಳಿ, ಒರಿಯಾ, ಅಸ್ಸಾಮೀ ಭಾಷೆಗಳು, ದಕ್ಷಿಣ ಭಾರತದ ಭಾಷೆಗಳಾದ ಕನ್ನಡ, ತೆಲುಗು, ಮಲೆಯಾಳಂ ಹಾಗೂ ತಮಿಳು ಭಾಷೆಗಳು, ಭೋಜ್‍ಪುರಿ, ಜಾರ್ಖಂಡ್, ರಾಜಾಸ್ತಾನಿ, ಕೊಂಕಣಿ ಭಾಷೆಗಳು ಹೀಗೆ ಭಾರತದ ಬಹುತೇಕ ಎಲ್ಲ ಭಾಷೆಗಳಲ್ಲಿ ಅವರು ಹಾಡಿದ್ದಾರೆ. ಅವರೇ ಹೇಳುವಂತೆ ದಕ್ಷಿಣ ಭಾರತದ ಭಾಷೆಗಳ ಪೈಕಿ ಅವರು ಮೊತ್ತ ಮೊದಲು ಹಾಡಿದುದು ‘ಒಂದಾನೊಂದು ಕಾಲದಲ್ಲಿ’ ಎಂಬ ಕನ್ನಡ ಚಿತ್ರಕ್ಕಾಗಿ. ಇಂಗ್ಲಿಷ್ ಗೀತೆಯನ್ನೂ ಖ್ಯಾತ ಹಾಲಿವುಡ್ ತಾರೆ ಸ್ಟೀವನ್ ಸೆಹಗಲ್ ಜೊತೆಯಲ್ಲಿ ಧ್ವನಿ ಮುದ್ರಿಸಿದ್ದಾರೆ. ಚಿತ್ರ ಗೀತೆಗಳಲ್ಲದ ಅನೇಕ ಗೀತೆಗಳ ಆಲ್ಬಮ್‍ಗಳನ್ನು ಹೊರ ತಂದಿದ್ದಾರೆ.

ಈಗಿನ ಗಾಯಕರಿಗೆ ಹಿನ್ನೆಲೆ ಗಾಯನವಷ್ಟೇ ಅಲ್ಲದೆ ತಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಅನೇಕ ಮಾಧ್ಯಮಗಳಿವೆ. ಆದರೆ ತಾವು ಆ ಕ್ಷೇತ್ರಕ್ಕೆ ಬಂದಾಗ, ಯಾರೇ ಗಾಯಕ ಅಥವಾ ಗಾಯಕಿಗೆ ತನ್ನ ಗಾಯನ ಪ್ರತಿಭೆಯನ್ನು ಪ್ರದರ್ಶಿಸಿ ಜನರನ್ನು ತಲುಪಲು ಇದ್ದ ಮಾಧ್ಯಮವೆಂದರೆ ಒಂದು ಶಾಸ್ತ್ರೀಯ ಸಂಗೀತ ಇಲ್ಲವೇ ಲಘು ಸಂಗೀತ. ಲಘು ಸಂಗೀತದ ಮೂಲಕ ಜನರನ್ನು ತಲುಪಲು ಇದ್ದ ಒಂದೇ ಮಾರ್ಗವೆಂದರೆ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಹೆಸರು ಮಾಡುವುದು ಮಾತ್ರ ಎನ್ನುತ್ತಾರೆ. ಈಗ, ಯುಟ್ಯೂಬ್, ಫೇಸ್‍ಬುಕ್ ಮುಂತಾದವುಗಳ ಮೂಲಕ ಕಲಾವಿದರು ತಮ್ಮ ಸಂಗೀತ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ. ಹಾಗಾಗಿ, ಸ್ವತಂತ್ರ ಸಂಗೀತ ಹಾಗೂ ರಾಕ್ ಬ್ಯಾಂಡ್‍ಗಳು, ಗಾಜ್ ಸಂಗೀತಗಾರರು, ಪ್ರಪಂಚದ ಎಲ್ಲ ಬಗೆಯ ಸಂಗೀತಗಾರರು ಎಲ್ಲರನ್ನು ತಲುಪಲು ಈಗ ಸಾಧ್ಯವಿದೆ. ಈ ಅವಕಾಶ ತಾವು ಹಿನ್ನೆಲೆ ಗಾಯನವನ್ನು ಆಯ್ಕೆ ಮಾಡಿಕೊಂಡಾಗ ತಮಗೆ ಇರಲಿಲ್ಲ ಎನ್ನುತ್ತಾರೆ. 1999 ರಲ್ಲಿ ಕವಿತಾ ಅಂತರಾಷ್ಟ್ರೀಯ ಖ್ಯಾತಿಯ ಪಿಟೀಲು ವಾದಕ ಡಾ. ಎಲ್. ಸುಬ್ರಮಣಿಯಮ್ ಅವರನ್ನು ವಿವಾಹವಾದರು. ಅವರ ಜೊತೆ ದೇಶ ವಿದೇಶಗಳಲ್ಲಿ ಸಂಚರಿಸಿ ಫ್ಯೂಷನ್ ಸಂಗೀತ ಕಚೇರಿಗಳನ್ನು, ಆರ್ಕೆಸ್ಟ್ರಾಗಳನ್ನು ನಡೆಸಿದ್ದಾರೆ. ಐದು ಖಂಡಗಳ ಸಂಗೀತಗಾರರನ್ನು ಒಳಗೊಂಡ, ವಾರ್ನರ್ ಬ್ರದರ್ಸ್ ಬಿಡುಗಡೆ ಮಾಡಿರುವ ‘ಗ್ಲೋಬಲ್ ಫ್ಯೂಷನ್’ ಆಲ್ಬಮ್‍ನಲ್ಲಿ ಏಕ ಮಾತ್ರ ಗಾಯಕಿಯಾಗಿ ಹಾಡಿದ್ದಾರೆ.

ಕವಿತಾ ಪ್ರಸ್ತುತ ಪತಿಯೊಡನೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸುಬ್ರಮಣಿಯಮ್ ಅವರ ತಂದೆ ಮತ್ತು ಸಂಗೀತ ಗುರು ಲಕ್ಷ್ಮೀನಾರಾಯಣ ಅವರ ಹೆಸರಿನಲ್ಲಿ ಸಂಗೀತ ಸಂಸ್ಥೆಯನ್ನು ಪ್ರಾರಂಭಿಸುವ ಯೋಚನೆ ಅವರಿಗಿದೆ. ಇದನ್ನು, ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತಗಳನ್ನು ಕಲಿಸುವ ಗ್ಲೋಬಲ್ ಸಂಸ್ಥೆಯನ್ನಾಗಿ ಬೆಳೆಸಬೇಕೆಂಬ ಉದ್ದೇಶವಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಭಾರತದಲ್ಲಿಯೇ ಅತ್ಯುತ್ತಮ ಸಂಗೀತ ಭಂಡಾರವೆನ್ನಿಸಿಕೊಳ್ಳುವಂಥ ಒಂದು ಸಂಗೀತ ಭಂಡಾರವನ್ನು ಸ್ಥಾಪಿಸುವ ಕನಸಿದೆ.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *