ಪದ್ಮಪ್ರಭೆ/ ಕರ್ನಾಟಕದ ಸಾಧಕಿಯರ ಸಮೂಹ – ಡಾ. ಗೀತಾ ಕೃಷ್ಣಮೂರ್ತಿ

ಪ್ರಶಸ್ತಿ ಎನ್ನುವುದು ಸಾಧನೆಗೆ ಸಿಕ್ಕ ಮನ್ನಣೆ; ಆದರೆ ಪ್ರಶಸ್ತಿ ಬಂದವರಷ್ಟೇ ಸಾಧಕರು ಎನ್ನಲಾಗದು. ಪದ್ಮಪ್ರಶಸ್ತಿಗಳು ನಮ್ಮ ದೇಶದ ಅತ್ಯುನ್ನತ ಮನ್ನಣೆಯಾಗಿದ್ದು, ಕರ್ನಾಟಕದ ಹಲವು ಮಂದಿ ಸಾಧಕಿಯರು ಅದನ್ನು ಪಡೆದಿದ್ದಾರೆ. ಅವರು ಆಯ್ದುಕೊಂಡ ಕ್ಷೇತ್ರ, ಅವರ ಶ್ರಮ-ಶ್ರದ್ಥೆ, ಅವರ ಚಿಂತನೆ ಇವುಗಳು ಖಂಡಿತ ಮುಂದಿನ ಪೀಳಿಗೆಯ ಮಕ್ಕಳಿಗೆ ಸ್ಫೂರ್ತಿದಾಯಕ. ಅಂಥವರ ಕಿರುಪರಿಚಯದ ಪ್ರಯತ್ನ ಇದು.

ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಗೆ ಕರ್ನಾಟಕದ ಅನೇಕ ಮಹಿಳೆಯರು ಪಾತ್ರರಾಗಿದ್ದಾರೆ. ಪದ್ಮವಿಭೂಷಣ ಪ್ರಶಸ್ತಿಯನ್ನು ಇಬ್ಬರು ಮಹಿಳೆಯರು, ಪದ್ಮಭೂಷಣ ಪ್ರಶಸ್ತಿಯನ್ನು ಐವರು ಮಹಿಳೆಯರು ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು ಮೂವತ್ತೆರಡು ಮಹಿಳೆಯರು ಪಡೆದಿದ್ದಾರೆ.

ಪದ್ಮವಿಭೂಷಣ

ಪದ್ಮ ಪ್ರಶಸ್ತಿಗಳನ್ನು ನೀಡಲು ಪ್ರಾರಂಭಿಸಿದ ವರ್ಷವಾದ 1954 ರಿಂದ 2020ರ ವರೆಗಿನ ಅರವತ್ತಾರು ವರ್ಷಗಳಲ್ಲಿ, 314 ಮಂದಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರಲ್ಲಿ ಪ್ರಶಸ್ತಿ ಪಡೆದ ಮಹಿಳೆಯರ ಸಂಖ್ಯೆ 34. ಕರ್ನಾಟಕದಿಂದ 20 ಮಂದಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರಲ್ಲಿ ಇಬ್ಬರು ಮಹಿಳೆಯರು. ಕಮಲಾದೇವಿ ಚಟ್ಟೋಪಾಧ್ಯಾಯ ಮತ್ತು ಗಂಗೂಬಾಯಿ ಹಾನಗಲ್ ಅವರು. ಕಮಲಾದೇವಿ ಚಟ್ಟೋಪಾಧ್ಯಾಯ ಅವರಿಗೆ, ವಿವಿಧ ಕ್ಷೇತ್ರಗಳಲ್ಲಿನ ಅವರ ಸೇವೆಯನ್ನು ಗೌರವಿಸಿ 1955 ರಲ್ಲಿಯೇ ಪದ್ಮ ಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು. ಅವರಿಗೆ, 1987 ರಲ್ಲಿ ಮತ್ತೆ ಸಮಾಜ ಸೇವೆಯ ವಿಭಾಗದಲ್ಲಿ ಪ್ರತಿಷ್ಠಿತ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಂಗೂಬಾಯಿ ಹಾನಗಲ್ ಅವರು ಕಲಾ ವಿಭಾಗದಲ್ಲಿ 2002 ರಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.

ಪದ್ಮಭೂಷಣ

ಪದ್ಮ ಭೂಷಣ ಪ್ರಶಸ್ತಿಯನ್ನು ಇದುವರೆಗೆ 1254 ಮಂದಿ ಪಡೆದಿದ್ದಾರೆ. ಅವರಲ್ಲಿ ಒಟ್ಟು 92 ಮಂದಿ ಮಹಿಳೆಯರು. ಕರ್ನಾಟಕದಿಂದ 139 ಮಂದಿ ಈ ಪ್ರಶಸ್ತಿಯನ್ನು ಪಡೆದಿದ್ದು ಅವರಲ್ಲಿ ಐವರು ಮಹಿಳೆಯರು. ಯಶೋಧರಾ ದಾಸಪ್ಪ ಅವರು ಸಮಾಜ ಸೇವೆಗಾಗಿ 1972 ರಲ್ಲಿ, ಸರೋಜಾ ದೇವಿ ಅವರು ಕಲಾ ವಿಭಾಗದಲ್ಲಿ 1992 ರಲ್ಲಿ, ಕೆ. ವೆಂಕಟಲಕ್ಷಮ್ಮ ಅವರು ಕಲಾ ವಿಭಾಗದಲ್ಲಿ 1992 ರಲ್ಲಿ, ಕಿರಣ್ ಮಜುಂದಾರ್ ಶಾ ಅವರು ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ 2005 ರಲ್ಲಿ ಮತ್ತು ದೇವಕಿ ಜೈನ್ ಅವರು ಸಮಾಜ ಸೇವೆಗಾಗಿ 2006 ರಲ್ಲಿ, ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಪೈಕಿ, ಬಿ. ಸರೋಜಾದೇವಿ ಕಲಾ ವಿಭಾಗದಲ್ಲಿಯೇ 1969 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು. ಕಿರಣ್ ಮಜುಂದಾರ್ ಶಾ ಅವರು ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ 1989 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು.

ಪದ್ಮಶ್ರೀ

ಪದ್ಮಶ್ರೀ ಪ್ರಶಸ್ತಿಯನ್ನು ಇಲ್ಲಿಯವರೆಗೆ 3123 ಮಂದಿ ಪಡೆದಿದ್ದಾರೆ. ಅವರಲ್ಲಿ ಒಟ್ಟು 433 ಮಹಿಳೆಯರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಕರ್ನಾಟಕದಿಂದ 1164 ಮಂದಿ ಈ ಪ್ರಶಸ್ತಿಯನ್ನು ಪಡೆದಿದ್ದು ಅವರಲ್ಲಿ 32 ಮಂದಿ ಮಹಿಳೆಯರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರಲ್ಲಿ ಇಬ್ಬರು, ಬಿ. ಸರೋಜಾದೇವಿ ಹಾಗೂ ಕಿರಣ್ ಮಜುಂದಾರ್ ಶಾ ಅವರು ತದನಂತರದಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಉಳಿದವರಲ್ಲಿ 9 ಮಹಿಳೆಯರು ಕಲಾ ವಿಭಾಗದಲ್ಲಿ ಹಾಗೂ ಹತ್ತು ಮಹಿಳೆಯರು ಸಮಾಜ ಸೇವಾ ವಿಭಾಗದಲ್ಲಿ, ನಾಲ್ವರು ಸಾಹಿತ್ಯ ಮತ್ತು ಶಿಕ್ಷಣಕ್ಕಾಗಿ, ಮೂವರು ಮಹಿಳೆಯರು ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಸಲ್ಲಿಸಿದ ಸೇವೆಗಾಗಿ, ಕ್ರೀಡೆಗಾಗಿ ಒಬ್ಬರು, ವ್ಯಾಪಾರ ಮತ್ತು ಕೈಗಾರಿಕೆಯಲ್ಲಿ ಒಬ್ಬರು, ಸಾರ್ವಜನಿಕ ವ್ಯವಹಾರದಲ್ಲಿ ಒಬ್ಬರು, ವೈದ್ಯಕೀಯ ಕ್ಷೇತ್ರದಲ್ಲಿ ಒಬ್ಬರು ಮತ್ತು ಕಲೆ, ವಾಸ್ತು ಶಾಸ್ತ್ರ ಹಾಗೂ ಸಂಸ್ಕøತಿ ಕ್ಷೇತ್ರದಲ್ಲಿನ ಅವರ ಸಾಧನೆಗಾಗಿ ಒಬ್ಬರು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದವರು: ದೇವಿಕಾ ರಾಣಿ (1958); ಬಿ. ಸರೋಜಾದೇವಿ (1969)-ಇವರಿಗೆ 1992 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನೂ ನೀಡಲಾಯಿತು; ಶಾಂತಾ ರಾವ್ (1971); ಚಿಂದೋಡಿ ಲೀಲಾ 1988); ಕವಿತಾ ಕೃಷ್ಣಮೂರ್ತಿ (2005); ಅರುಂಧತಿ ನಾಗ್ (2010); ಆರ್. ನಾಗರತ್ನಮ್ಮ (2012); ಬಿ. ಜಯಶ್ರೀ 2013); ಸುಕ್ರಿ ಬೊಮ್ಮಗೌಡ (2017); ಭಾರತಿ ವಿಷ್ಣುವರ್ಧನ್ (2017).

ಸಮಾಜ ಸೇವೆಯ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದವರು: ಮೇರಿ ರತ್ನಮ್ಮ ಐಸ್ಯಾಕ್ (1959); ಸುಧಾ ವೆಂಕಟ ಶಿವ ರೆಡ್ಡಿ (1968); ಕುಮಾರಿ ರೋಹಿಣಿ ಕೊಂಡದ ಪೂವಯ್ಯ (1973); ಲಿಯೊನಾರ್ಡ ಏಂಜೆಲಾ ಕಸಿರಗಿ (1998); ಸುಧಾ ಮೂರ್ತಿ (2006); ನೊಮಿತಾ ಚಾಂಡಿ (2011); ಅನಿತಾ ರೆಡ್ಡಿ (2011); ಸೀತವ್ವ ಜೋಡಿತಿ (2017); ಸೂಲಗಿತ್ತಿ ನರಸಮ್ಮ (2018);ಸಾಲುಮರದ ತಿಮ್ಮಕ್ಕ (2019); ತುಳಸಿ ಗೌಡ (2020).

ಸಾಹಿತ್ಯ ಮತ್ತು ಶಿಕ್ಷಣ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದವರು: ಇವಾಂಜಿಲಿಸ್ ಲಜಾರಸ್ (1961); ಮೇರಿ ಥಿಯೊಡೇಸಿಯಾ (1971); ಶಶಿ ದೇಶಪಾಂಡೆ (2009); ವಿದುಷಿ ಜಯಲಕ್ಷ್ಮಿ ಕೆ.ಎಸ್. (2020)

ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದವರು: ವಿಜಯಲಕ್ಷ್ಮಿ ರವೀಂದ್ರನಾಥ್ (2010); ರೋಹಿಣಿ ಗೋಡಬೋಲೆ (2019);

ವ್ಯಾಪಾರ ಮತ್ತು ಕೈಗಾರಿಕೆ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದವರು: ಕಿರಣ್ ಮಜುಂದಾರ್ ಶಾ (1989)- ಇವರಿಗೆ ಅವರ ಸಾಧನೆಗಾಗಿ 2005 ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನೂ ನೀಡಲಾಯಿತು.
ಸಾರ್ವಜನಿಕ ವ್ಯವಹಾರ ವಿಭಾಗದಲ್ಲಿ ಮಾದಾರಿ ಭಾಗ್ಯ ಗೌತಮ್ (1992);
ವೈದ್ಯಕೀಯ ಕ್ಷೇತ್ರದಲ್ಲಿ ಕಾಮಿನಿ ರಾವ್ (2014); ಕ್ರೀಡೆಯಲ್ಲಿ ಮಾಲತಿ ಕೃಷ್ಣಮೂರ್ತಿ ಹೊಳ್ಳ (2001);
ಇತರೆ ಕ್ಷೇತ್ರದಲ್ಲಿ ಶಾರದಾ ಶ್ರೀನಿವಾಸ (2019) ಅವರುಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2020 ಜನವರಿ 26, ಗಣರಾಜ್ಯ ದಿನದಂದು, ಈ ಪ್ರಶಸ್ತಿ ಪುರಸ್ಕøತರ ಬಗ್ಗೆ ಮಾತನಾಡುತ್ತಾ ಪ್ರಧಾನ ಮಂತ್ರಿ ಹೇಳಿದ ಮಾತು ಮನನೀಯ-“ಈ ಪ್ರಶಸ್ತಿ ಪುರಸ್ಕøತರಲ್ಲಿ ಅನೇಕರು ಸಮಾಜದ ಅತ್ಯಂತ ಕೆಳ ಸ್ತರದಲ್ಲಿ ಇರುವವರು. ಅವರು ಕೇವಲ, ಕೇವಲ ತಮ್ಮ ಶ್ರಮ ಮತ್ತು ಅವಿರತ ಸಾಧನೆಯಿಂದ ಮೇಲಕ್ಕೇರಿದವರು. ಯಾವುದೇ ಸಂಪನ್ಮೂಲಗಳಿಲ್ಲದ ಪರಿಸರವನ್ನು ಮತ್ತು ಅತ್ಯಂತ ನಿರಾಶಾದಾಯಕವಾದ ವಾತಾವರಣವನ್ನು ಕೇವಲ ತಮ್ಮ ಛಲದಿಂದಲೇ ಗೆದ್ದು ಬಂದವರು. ಅವರ ಅಸಾಮಾನ್ಯ ಜೀವನ ಗಾಥೆಗಳನ್ನು ಎಲ್ಲರೂ ತಿಳಿಯಬೇಕು. ಅವರು ಸಾಗಿ ಬಂದ ದಾರಿ, ಅನನುಕೂಲ ಸಂದರ್ಭಗಳನ್ನ ಅವರು ಎದುರಿಸಿದ ರೀತಿ, ಅವರ ಛಲ ಸಮಾಜದಲ್ಲಿ ಇತರರಿಗೆ ಸ್ಫೂರ್ತಿಯಾಗಬಲ್ಲುದು.”

ಸಾಧಕರ ಜೀವನದ ಪರಿಚಯ, ಅವರ ಸಾಧನೆಯ ಕ್ಷೇತ್ರದ ಪರಿಚಯ, ಎಲ್ಲ ಕಾಲಕ್ಕೂ ಎಲ್ಲರಿಗೂ ಸ್ಫೂರ್ತಿ ತುಂಬುವಂಥದ್ದು. ಸಾಧನೆ ದೊಡ್ಡದಿರಲಿ, ಚಿಕ್ಕದಿರಲಿ, ಅಂಥ ಪ್ರತಿಯೊಂದು ಸಾಧನೆಯ ಹಿಂದೆ ಇರುವುದು ಅಚಲವಾದ ನಿರ್ಧಾರ, ಶ್ರಮ ಮತ್ತು ಬದ್ಧತೆ. ಅವರನ್ನು ಸಮಾಜಕ್ಕೆ ಪರಿಚಯ ಮಾಡಿಕೊಡಲು ಮತ್ತು ಆ ಮೂಲಕ ಅನೇಕರಿಗೆ ಸ್ಫೂರ್ತಿ ತುಂಬಲು ಪ್ರಶಸ್ತಿಗಳು ಅನುವು ಮಾಡಿಕೊಡುತ್ತವೆ. ಅಷ್ಟೇ ಅಲ್ಲ, ಪ್ರಶಸ್ತಿ ಸ್ವೀಕರಿಸಿದವರಿಗೂ ಅದು ಮತ್ತಷ್ಟು ಕೆಲಸ ಮಾಡುವ ಹುಮ್ಮಸ್ಸನ್ನು ನೀಡುತ್ತದೆ. ಅಲ್ಲದೆ ಉತ್ಸಾಹವನ್ನು ಮೂಡಿಸಿ ಆತ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಪ್ರಶಸ್ತಿ ಪುರಸ್ಕಾರಗಳು ಇತರರಿಗೆ ಪ್ರೇರೇಪಣೆ ನೀಡುತ್ತದೆ.
ಎಷ್ಟೋ ಜನ ಸಾಧಕರು ಜನಕ್ಕೆ ಪರಿಚಯವಾಗಿರುವುದೇ ಅವರಿಗೆ ಪ್ರಶಸ್ತಿ ದೊರೆತ ನಂತರ, ಮಾಧ್ಯಮಗಳು ಅವರನ್ನು ಪರಿಚಯಿಸಿದ ನಂತರ. ಮ್ಯಾಗ್‍ಸೆಸೆ ಪ್ರಶಸ್ತಿಗೆ ಭಾಜನರಾಗದಿದ್ದಿದ್ದರೆ ಅರುಣಾ ರೇ, ಎಂಸಿ ಮೆಹ್ತಾ ಅಥವಾ ದೀಪ್ ಜೋಷಿ ಪರಿಚಿತರಾಗುತ್ತಿದ್ದರೇ? ಬೂಕರ್ ಪ್ರಶಸ್ತಿ ಪಡೆಯದಿದ್ದಿದ್ದರೆ, ಕಿರಣ್ ದೇಸಾಯ್ ಅಥವಾ ಅರವಿಂದ ಅಡಿಗ ಅವರ ಪುಸ್ತಕಗಳನ್ನು ಹುಡುಕಿ ಕೊಳ್ಳುತ್ತಿದ್ದೆವೇ? ಪ್ರಶಸ್ತಿಗಳು ಮುಖ್ಯವಾಗುವುದು ಈ ಕಾರಣಕ್ಕೆ.

ಅನೇಕ ಭಾರತೀಯರು ಅವರ ಅಸಾಮಾನ್ಯ ಸಾಧನೆಗೆ, ಅನೇಕ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಪ್ರಸಿದ್ಧಿಯನ್ನು ಹಾಗೂ ಪ್ರೋತ್ಸಾಹವನ್ನು ಪಡೆದಿದ್ದಾರೆ, ಪಡೆಯುತ್ತಿದ್ದಾರೆ. ಆಯಾ ಕ್ಷೇತ್ರಕ್ಕೇ ವಿಶಿಷ್ಟವಾದ ಪ್ರಶಸ್ತಿಗಳಿವೆ. ಅಂಥ ಪ್ರಶಸ್ತಿಗಳು ಆಯಾ ಕ್ಷೇತ್ರದಲ್ಲಿನ ಸಾಧಕರಿಗೆ ಮಾತ್ರ ದೊರೆಯುತ್ತದೆ. ಆದರೆ ರಾಷ್ಟ್ರೀಯ ಪ್ರಶಸ್ತಿಗಳಾದ ಭಾರತ ರತ್ನ, ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮ ಶ್ರೀ ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಈ ಪ್ರಶಸ್ತಿಗಳಿಗೆ ವಿಶಿಷ್ಟ ಸ್ಥಾನವಿದೆ. ಎಲ್ಲ ಕ್ಷೇತ್ರಗಳ ಎಲ್ಲ ಸಾಧಕರನ್ನೂ ಗುರುತಿಸಿ, ಆಯಾ ಕ್ಷೇತ್ರದಲ್ಲಿನ ಅವರ ಅತ್ಯುನ್ನತ ಸಾಧನೆಯನ್ನು ಗೌರವಿಸುವ, ಭಾರತ ಸರ್ಕಾರ ಕೊಡಮಾಡುವ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಇವು.

ನಮ್ಮ ನಡುವೆಯೇ ಅದೆಷ್ಟೊಂದು ಜನ ಸಾಧಕರಿದ್ದಾರೆ! ಸುಕ್ರಿ ಬೊಮ್ಮ ಗೌಡ, ಸೂಲಗಿತ್ತಿ ನರಸಮ್ಮ, ತುಳಸಿ ಗೌಡ, ಸಾಲು ಮರದ ತಿಮ್ಮಕ್ಕ, ಕಿತ್ತಲೆ ಹಣ್ಣು ಮಾರಿ ತನ್ನ ಹಳ್ಳಿಗೆ ಶಾಲೆಕಟ್ಟಿಸಿದ ಹರೇಕಳ ಹಾಜಪ್ಪ ಇವರನ್ನು ಗುರುತಿಸಿ, ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದಾಗಲಷ್ಟೇ ಇಡೀ ಜಗತ್ತಿಗೆ ಇವರ ನಿಃಸ್ವಾರ್ಥ ಸೇವೆಯ ಪರಿಚಯವಾದದ್ದು. ರಾಷ್ಟ್ರ ಮಟ್ಟದಲ್ಲಿ ಇವರ ಹೆಸರು ಚಿರಪರಿಚಿತವಾದದ್ದು, ಅನೇಕರಿಗೆ ಸ್ಫೂರ್ತಿಯಾದದ್ದು. ಸೇವೆಯಲ್ಲಿ ತೊಡಗಿಸಿಕೊಳ್ಳಲು ಬೇಕಾಗಿರುವುದು ವಿಶ್ವವಿದ್ಯಾಲಯದ ಪದವಿಗಳಲ್ಲ, ಎಣೆಯಿಲ್ಲದ ಹಣವಲ್ಲ, ಸುದ್ದಿ ಪ್ರಚಾರಗಳಲ್ಲ, ಆಯ್ದ ಕೆಲವೇ ಕ್ಷೇತ್ರಗಳಲ್ಲ, ಅದಕ್ಕೆ ಬೇಕಾಗಿರುವುದು ತನ್ನ ಸಹ ಜೀವಿಗಳಿಗೆ ಸಹಾಯ ಮಾಡಬೇಕೆಂಬ ನೈಜವಾದ ಕಳಕಳಿ, ಈ ಸಮಾಜ ತನ್ನದು, ಇಲ್ಲಿಯವರು ತನ್ನವರು ಎಂಬ ಕನಿಷ್ಠ ಮಾನವೀಯ ಭಾವ. ಆ ಭಾವದಿಂದ ಪ್ರಶಸ್ತಿ ಪುರಸ್ಕಾರಗಳ ಆಸೆ ಇಲ್ಲದೆ ಸಲ್ಲಿಸಿದ ಸೇವೆಯೇ ಇಂದು ಪ್ರಶಸ್ತಿ ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿವೆ. ಇವರೆಲ್ಲ ನಮ್ಮ ಮುಂದಿನ ಜನಾಂಗದ ದಾರಿ ದೀವಿಗೆಗಳು.

ಇವರೆಲ್ಲ ತಮ್ಮ ತಮ್ಮ ಕಾಯಕದಲ್ಲಿ ತೊಡಗಿಸಿಕೊಂಡದ್ದು ಯಾವುವೇ ಪ್ರಶಸ್ತಿ ಪುರಸ್ಕಾರಗಳಿಗೆ ಆಸೆ ಪಟ್ಟು ಅಲ್ಲ. ಅದು, ಅವರಿಗೆ ಅವರ ಜೀವನ ವಿಧಾನವೇ ಆಗಿತ್ತು. ಸಮಾಜದ ಪುಣ್ಯ ವಿಶೇಷದಿಂದ ಇವರಂಥವರ ಸೇವೆ ಸಮಾಜಕ್ಕೆ ಲಭಿಸುತ್ತದೆ. ಇವರನ್ನು ಗುರುತಿಸಿ ಗೌರವಿಸಿದರೆ ನಮ್ಮನ್ನೇ ನಾವು ಗೌರವಿಸಿಕೊಂಡಂತೆ. ಇವರಂತೆಯೇ ಕಲಾ ಕ್ಷೇತ್ರದಲ್ಲಿ, ವಿಜ್ಞಾನ ಕ್ಷೇತ್ರದಲ್ಲಿ, ಕ್ರೀಡೆ, ನಾಟಕ, ಸಿನಿಮಾದಂಥ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜವನ್ನು ಅವರವರದೇ ರೀತಿಯಲ್ಲಿ ಶ್ರೀಮಂತಗೊಳಿಸಿದ ಅದೆಷ್ಟು ಸಾಧಕರು ನಮ್ಮ ಮಧ್ಯೆ ಇದ್ದಾರೆ. ಇವರಿಗೆಲ್ಲ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪದ್ಮ ಪ್ರಶಸ್ತಿಗಳನ್ನು ಪ್ರಾರಂಭ ಮಾಡಿದ ವರ್ಷದಿಂದ 2020 ರ ವರೆಗೆ, ರಾಷ್ಟ್ರಾದ್ಯಂತ ಪ್ರದಾನ ಮಾಡಲಾದ ಒಟ್ಟು ಪ್ರಶಸ್ತಿಗಳು, ಅವುಗಳಲ್ಲಿ ಮಹಿಳೆಯರ ಪಾಲು ಮತ್ತು ಕರ್ನಾಟಕಕ್ಕೆ ಸಂಬಂಧಿಸಿದಂತೆ, ಪ್ರಶಸ್ತಿ ಪಡೆದವರ ಸಂಖ್ಯೆ ಮತ್ತು ಅದರಲ್ಲಿ ಮಹಿಳೆಯರ ಪಾಲು ಎಷ್ಟು ಎಂಬುದನ್ನು ಅಂಕಿಸಂಖ್ಯೆಗಳ ಮೂಲಕ ಸೂಚಿಸಲಾಗಿದೆ. ಇದರಿಂದ ಒಟ್ಟಾರೆ ದೃಷ್ಟಿಕೋನ ಮತ್ತು ನಾವು, ಮಹಿಳೆಯರು, ಎಲ್ಲಿ ನಿಲ್ಲುತ್ತೇವೆ ಎಂಬುದನ್ನು ಸ್ಥೂಲವಾಗಿಯಾದರೂ ತಿಳಿಯಲು ಸಾಧ್ಯವಾಗಬಹುದು.

ಪ್ರಶಸ್ತಿಗೆ ಭಾಜನರಾದ ಮಹಿಳೆಯರಲ್ಲಿ ಬಹುಪಾಲು ಮಹಿಳೆಯರು ಅವರ ಸಾಧನೆಗಳಿಂದಾಗಿ ಸುಪರಿಚಿತರೇ ಆಗಿದ್ದಾರೆ. ಒಬ್ಬರಿಬ್ಬರನ್ನು ಬಿಟ್ಟರೆ ಯಾರನ್ನೂ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಆದರೆ ಅವರೆಲ್ಲರ ಬಗ್ಗೆ, ವಿಸ್ತಾರವಾಗಿ ಅಲ್ಲದಿದ್ದರೂ, ಅವರ ಸಂಕ್ಷಿಪ್ತ ಪರಿಚಯ ಒಂದೆಡೆಯಲ್ಲಿ ದೊರೆಯುವಂತಾಗಲಿ ಎಂಬ ಉದ್ದೇಶದಿಂದ ದಾಖಲು ಮಾಡುವ ಪ್ರಯತ್ನ ಇದು.

ಪ್ರಶಸ್ತಿ ಬಂದವರಷ್ಟೇ ಸಾಧಕರು ಎಂದಾಗಲೀ, ಪ್ರಶಸ್ತಿ ಪಡೆಯಲು ಅರ್ಹರಾದವರಿಗೆಲ್ಲ ಪ್ರಶಸ್ತಿ ಬಂದಿದೆ ಎಂದಾಗಲೀ ಭಾವಿಸಲಾಗದು. ಪ್ರಶಸ್ತಿ ಪಡೆಯದ, ಎಲೆ ಮರೆಯ ಕಾಯಿಯಂತೆ ಸಾಧನೆಗೈಯುತ್ತಿರುವ ಅನೇಕ ಮಂದಿ ಸಾಧಕ ಸಾಧಕಿಯರು ನಮ್ಮ ನಡುವೆಯೇ ಇದ್ದಾರೆ.
ಇವರಿಗೆಲ್ಲ ನಮ್ಮದೊಂದು ನಮಸ್ಕಾರ.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಪದ್ಮಪ್ರಭೆ/ ಕರ್ನಾಟಕದ ಸಾಧಕಿಯರ ಸಮೂಹ – ಡಾ. ಗೀತಾ ಕೃಷ್ಣಮೂರ್ತಿ

  • July 18, 2020 at 3:08 pm
    Permalink

    ನಟಿ ಬಿ . ಸರೋಜಾದೇವಿ ಅವರ ಬೆಳ್ಳಿ ಪರದೆಯ ಬದುಕನ್ನು ಡಾ . ಗೀತಾ ಕೃಷ್ಣಮೂರ್ತಿ ಅವರು ತುಂಬಾ ಆತ್ಮೀಯವಾಗಿ ನಿರೂಪಿಸಿದ್ದಾರೆ .’ಇವರ ಪಾತ್ರಕ್ಕೆ ಇವರದೇ ಕಂಠ ‘ ಹೆಮ್ಮೆ ಎನಿಸಿತು -ಟಿ ಆರ್ .ಅನಂತರಾಮು

    Reply

Leave a Reply

Your email address will not be published. Required fields are marked *