ಪದ್ಮಪ್ರಭೆ/ಕಮಲಾದೇವಿ ಚಟ್ಟೋಪಾಧ್ಯಾಯ – ಡಾ. ಗೀತಾ ಕೃಷ್ಣಮೂರ್ತಿ


ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿಗಳಲ್ಲಿ ಅತ್ಯುನ್ನತ ಪ್ರಶಸ್ತಿ ‘ಭಾರತ ರತ್ನ’ ದ ನಂತರದ್ದು `ಪದ್ಮ ವಿಭೂಷಣ’. ಕರ್ನಾಟಕದಿಂದ ಕೇವಲ ಇಬ್ಬರು ಮಹಿಳೆಯರು ಈ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. `ಪದ್ಮ ವಿಭೂಷಣ’ ಪ್ರಶಸ್ತಿಗೆ ಭಾಜನರಾದ ಪ್ರಪ್ರಥಮ ಮಹಿಳೆ ಕಮಲಾದೇವಿ ಚಟ್ಟೋಪಾಧ್ಯಾಯ. ಗೃಹಿಣಿಯ ದುಡಿಮೆಯನ್ನು ‘ನಿರ್ದಿಷ್ಟ ಆರ್ಥಿಕ ದುಡಿಮೆ’ಎಂದು ಪರಿಗಣಿಸಬೇಕು ಮತ್ತು ಮಹಿಳೆಯರಿಗೆ ಸಮಾನ ಪರಿಶ್ರಮಕ್ಕೆ ಸಮಾನವೇತನ ನೀಡಬೇಕು ಎಂದು ವಾದ ಮಾಡಿದ ಅವರು ಅಸೀಮ ಮಹಿಳಾವಾದಿಯಾಗಿದ್ದರು.

ಕಮಲಾದೇವಿ ಚಟ್ಟೋಪಾಧ್ಯಾಯ ಅವರದು ಬಹು ಮುಖ ವ್ಯಕ್ತಿತ್ವ. ಅವರು ಒಬ್ಬ ಸಮಾಜವಾದಿ ರಾಜಕಾರಣಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಮಹಿಳಾ ಚಳವಳಿಯ ಸಂಘಟನಾಕಾರ್ತಿ, ಅಭಿನೇತ್ರಿ, ಸಮಾಜ ಸೇವಕಿ, ಸ್ವಾತಂತ್ರ್ಯಾನಂತರ ಸ್ಥಾಪಿಸಲ್ಪಟ್ಟ ಭಾರತದ ಕರಕುಶಲ ಪರಿಷತ್ತಿನ ಅಧ್ಯಕ್ಷೆ. ಆ ಕಾಲದಲ್ಲಿಯೇ ಮಹಿಳಾ ಹಕ್ಕುಗಳ ಬಗ್ಗೆ, ಸಮಾನತೆಯ ಬಗ್ಗೆ ದನಿ ಎತ್ತಿದವರು. ಇಷ್ಟು ಹೇಳಿಯೂ ಅವರ ಕಾರ್ಯ ವ್ಯಾಪ್ತಿ ಮತ್ತು ವಿಸ್ತಾರವನ್ನು ಪೂರ್ತಿ ಹೇಳಿದಂತಾಗುವುದಿಲ್ಲ. ಮಹಿಳಾ ಹಕ್ಕುಗಳು, ಧಾರ್ಮಿಕ ಸ್ವಾತಂತ್ರ್ಯ ರಾಜಕೀಯ ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳು ಒಂದಕ್ಕೊಂದು ಬೆಸೆದುಕೊಂಡಿರುವಂಥದ್ದು ಎಂದು ಮೊದಲ ಬಾರಿಗೆ ಪ್ರತಿಪಾದಿಸಿದಾಕೆ. ಒಂದು ಅಂಕಣ ಬರಹದಲ್ಲಿ ಅವರನ್ನು ಪರಿಚಯಿಸುವುದು ಎಂದರೆ ಮುಷ್ಟಿಯಲ್ಲಿ ಬೆಳಕನ್ನು ಹಿಡಿದಂತೆ.

ಕಮಲಾದೇವಿಯರ ವೈಯಕ್ತಿಕ ಜೀವನದ ದೊರೆತಷ್ಟು ವಿವರಗಳಿಂದಲೇ ಆಕೆ ತೊಡಗಿಸಿಕೊಂಡ ಎಲ್ಲ ಕ್ಷೇತ್ರಗಳಲ್ಲಿ ಅವರಿಗಿದ್ದ ಬದ್ಧತೆ ಮತ್ತು ತಾದಾತ್ಮ್ಯ ಭಾವ ಸ್ಪಷ್ಟವಾಗುತ್ತದೆ. ಹಾಗೆಯೇ, ಅವರ ಜೀವನದ ವಿವಿಧ ಮಜಲುಗಳಲ್ಲಿ ಅವರು ತೊಡಗಿಸಿಕೊಂಡ ಕಾರ್ಯಕ್ಷೇತ್ರದ ವಿವರಗಳು, ಸ್ತ್ರೀ ಶಿಕ್ಷಣಕ್ಕೆ ಹಾಗೂ ಮಹಿಳೆಯರಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಭಾಗವಹಿಸುವುದಕ್ಕೆ ಪ್ರೋತ್ಸಾಹ ನೀಡಿದ ಅಂದಿನ ಸಮಾಜ ಸುಧಾರಣಾ ಚಳವಳಿಗಳ ಬಗ್ಗೆ ಸ್ಥೂಲ ಮಾಹಿತಿಯನ್ನು ನೀಡುತ್ತವೆ.

ಅವರ ಹೆಸರು ಕೇಳಿದ ಕೂಡಲೇ ಅವರು ಕರ್ನಾಟಕದವರಲ್ಲ ಎನಿಸುತ್ತದೆ. ಇದಕ್ಕೆ ಕಾರಣ ಅವರ ಹೆಸರಿನ ಜೊತೆ ಸೇರಿಕೊಂಡಿರುವ, ಬಂಗಾಳದವರನ್ನು ಸೂಚಿಸುವ, ಅವರ ಉಪನಾಮ- ಚಟ್ಟೋಪಾಧ್ಯಾಯ ಎಂಬುದು. ಇದು ಅವರ ಪತಿ ಹರೀಂದ್ರನಾಥ್ ಚಟ್ಟೋಪಾಧ್ಯಾಯ ಅವರಿಂದ ಬಂದ ಹೆಸರು. ಹರೀಂದ್ರನಾಥ್ ಚಟ್ಟೋಪಾ ಧ್ಯಾಯ ಅವರು, ಭಾರತದ ರಾಜಕಾರಣದಲ್ಲಿ ಮರೆಯಲಾರದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಇನ್ನೊಬ್ಬ ಅಸಾಮಾನ್ಯ ಮಹಿಳೆ ಸರೋಜಿನಿ ನಾಯ್ಡು ಅವರ ಸಹೋದರ.

ಕಮಲಾದೇವಿ, ಮಂಗಳೂರಿನ ಸಾರಸ್ವತ ಕುಟುಂಬದ ಅನಂತಯ್ಯ ಧಾರೇಶ್ವರ್ ಮತ್ತು ಗಿರಿಜಮ್ಮ ದಂಪತಿಯ ನಾಲ್ಕನೆಯ ಮತ್ತು ಕೊನೆಯ ಮಗಳಾಗಿ 1903 ರ ಏಪ್ರಿಲ್ 3 ರಂದು ಮಂಗಳೂರಿನಲ್ಲಿ ಜನ್ಮ ತಾಳಿದಳು. ಇವರ ಬಾಲ್ಯ ಸುಖಮಯವಾಗೇನೂ ಇರಲಿಲ್ಲ. ಕಮಲಾದೇವಿಗೆ ಅತ್ಯಂತ ಆಪ್ತಳಾಗಿದ್ದ ಆಕೆಯ ಅಕ್ಕ ಸುಗುಣ ವಿವಾಹವಾದ ಸ್ವಲ್ಪ ಸಮಯದಲ್ಲೇ ಅವಳ ಹದಿಹರೆಯದಲ್ಲಿ ತೀರಿಕೊಂಡಾಗ ಅವಳಿಗೆ ಮೊದಲ ಆಘಾತವಾಗಿತ್ತು. ಆನಂತರದಲ್ಲಿ, ಅವಳಿಗಿನ್ನೂ ಏಳು ವರ್ಷವಾಗಿದ್ದಾಗ ತಂದೆಯನ್ನು ಕಳೆದುಕೊಂಡಳು. ತಂದೆಯ ಆಸ್ತಿಯೆಲ್ಲವೂ ತಂದೆಯ ಮೊದಲನೆಯ ವಿವಾಹದಿಂದ ಹುಟ್ಟಿದ ಅವರ ಮಗನಿಗೆ ಸೇರಿತು. ಕಮಲಾದೇವಿ ಮತ್ತು ಆಕೆಯ ತಾಯಿ ಅಕ್ಷರಶಃ ಬೀದಿ ಪಾಲಾದರು. ಆ ನಂತರ ಕಮಲಾದೇವಿ ಬೆಳೆದಿದ್ದು ಆಕೆಯ ಸೋದರಮಾವನ ಮನೆಯಲ್ಲಿ. ಬಾಲ್ಯದ ಕಹಿ ಅನುಭವಗಳಿಂದ ಕುಸಿದುಹೋಗುವ ಸಾಮಾನ್ಯ ಸ್ತ್ರೀಯಾಗದೆ ಅವುಗಳ ಮಧ್ಯದಿಂದಲೇ ಗಟ್ಟಿ ವ್ಯಕ್ತಿತ್ವವನ್ನು ರೂಪಿಸಿಕೊಂಡು ಕಮಲದಂತೆ ಅರಳಿದುದು ಕಮಲಾದೇವಿ ಅವರ ಅನನ್ಯತೆ. ಅದಕ್ಕೆ ಪೂರಕವಾಗಿ ಒದಗಿ ಬಂದದ್ದು ಆಕೆಯ ಸೋದರಮಾವನ ಮನೆಯಲ್ಲಿ ಸಿಕ್ಕ ವಾತಾವರಣ.

ಅಧ್ಯಯನಶೀಲತೆ : ಆಕೆಯ ಮಾವ ಸಮಾಜ ಸುಧಾರಕರೆಂದು ಹೆಸರು ಮಾಡಿದ್ದರು. ಅವರ ಮನೆಗೆ ಖ್ಯಾತ ರಾಜಕಾರಣಿಗಳೂ ಹಾಗೂ ಜನಪ್ರಿಯ ನಾಯಕರೂ ಆಗಿದ್ದ ಗೋಪಾಲ ಕೃಷ್ಣ ಗೋಖಲೆ, ಸರ್ ತೇಜ್ ಬಹದ್ದೂರ್ ಸಪ್ರು, ಮಹದೇವ ಗೋವಿಂದ ರಾನಡೆ, ಶ್ರೀನಿವಾಸ ಶಾಸ್ತ್ರಿ, ಆನಿಬೆಸೆಂಟ್ ಹಾಗೂ ಪಂಡಿತ ರಮಾಬಾಯಿ ಅಂಥವರೆಲ್ಲ ಬಂದು ಹೋಗುತ್ತಿದ್ದರು. ಹಾಗಾಗಿ, ಕಮಲಾದೇವಿಗೆ ಚಿಕ್ಕ ವಯಸ್ಸಿನಲ್ಲೇ ರಾಜಕಾರಣ ಮತ್ತು ಸಾರ್ವಜನಿಕ ಕ್ಷೇತ್ರದ ದಿಗ್ಗಜರ ಸಂಪರ್ಕ ಬೆಳೆಯಿತಲ್ಲದೆ ಆ ಕ್ಷೇತ್ರಗಳ ಬಗ್ಗೆ ಒಲವು ಬೆಳೆಯಲು ಕಾರಣವಾಯಿತು. ಈ ಹಂತದಲ್ಲೇ ಅವಳ ಸುಶಿಕ್ಷಿತ ತಾಯಿ ಹಾಗೂ ಆಕೆಯ ಉದ್ಯಮಶೀಲ ಅಜ್ಜಿ ಅವಳ ಮೇಲೆ ಅಚ್ಚಳಿಯದ ಪ್ರಭಾವ ಬೀರಿದರು. ಅವರಿಂದಾಗಿಯೇ ಕಮಲಾದೇವಿಗೆ ಅಧ್ಯಯನಶೀಲತೆ ಮೈಗೂಡಿತು.

1917 ರಲ್ಲಿ ಆಕೆಗೆ ಇನ್ನೂ 14 ವರ್ಷಗಳಾಗಿದ್ದಾಗ ವಿವಾಹವಾಯಿತು. ಆದರೆ ವಿವಾಹವಾದ ಒಂದು ವರ್ಷದಲ್ಲೇ ಅವಳ ಗಂಡ ಮರಣ ಹೊಂದಿ ಚಿಕ್ಕ ವಯಸ್ಸಿನಲ್ಲೇ ವೈಧವ್ಯ ಪ್ರಾಪ್ತವಾಯಿತು. ಆದರೆ ಅವಳ ಮಾವ (ಗಂಡನ ತಂದೆ) ವಿಶಾಲ ಮನೋಭಾವದವರಾಗಿದ್ದರಿಂದ, ಶಿಕ್ಷಣ ಮುಂದುವರಿಸುವಂತೆ ಆಕೆಗೆ ಪ್ರೋತ್ಸಾಹ ನೀಡಿದರು. ಅವರ ಸಲಹೆಯಂತೆ ಮುಂದಿನ ಕೆಲವು ವರ್ಷಗಳನ್ನು ಆಕೆ ಶಿಕ್ಷಣಕ್ಕಾಗಿ ಮೀಸಲಿಟ್ಟರು. ಮಂಗಳೂರಿನಲ್ಲಿ ಶಾಲೆ ಮುಗಿಸಿ, ನಂತರದ ಶಿಕ್ಷಣಕ್ಕಾಗಿ ಮದ್ರಾಸಿನ ಕ್ವೀನ್ ಮೇರಿ ಕಾಲೇಜನ್ನು ಸೇರಿದರು. ಅಲ್ಲಿ ಸರೋಜಿನಿ ನಾಯ್ಡು ಅವರ ತಂಗಿ ಸುಹಾಸಿನಿಯ ಗೆಳೆತನವಾಯಿತು. ಅಲ್ಲಿ ಅವರಿಗೆ ಅವಳ ಅಣ್ಣ ಹರೀಂದ್ರನಾಥ್ ಚಟ್ಟೋಪಾಧ್ಯಾಯ ಅವರ ಪರಿಚಯವಾಯಿತು. ಅವರ 20 ನೇ ವಯಸ್ಸಿನಲ್ಲಿ ಆಕೆ 1872 ರ ಹಿಂದೂ ವಿವಾಹ ಅಧಿನಿಯಮದ ಅಡಿಯಲ್ಲಿ ಅವರನ್ನು ವಿವಾಹವಾದರು. 1920 ರ ಪ್ರಾರಂಭದಲ್ಲಿ ಪತಿಯೊಡನೆ ಲಂಡನ್ನಿನಲ್ಲಿ ನೆಲೆಸಿದ್ದಾಗ, ಲಂಡನ್ನಿನ ವಿಶ್ವವಿದ್ಯಾಲಯದ ಬೆಡ್‍ಫೋರ್ಡ್ ಕಾಲೇಜಿನಿಂದ ಸಮಾಜ ಶಾಸ್ತ್ರದಲ್ಲಿ ಡಿಪ್ಲೊಮಾ ಪದವಿ ಪಡೆದರು. ಆನಂತರದಲ್ಲಿ, ಅವರು ಹರೀಂದ್ರನಾಥ್ ಚಟ್ಟೋಪಾಧ್ಯಾಯ ಅವರಿಂದ ವಿಚ್ಛೇದನೆ ಪಡೆದರು. ಭಾರತದ ನ್ಯಾಯಾಲಯ ಕಾನೂನು ರೀತ್ಯಾ ಮಂಜೂರು ಮಾಡಿದ ಪ್ರಥಮ ವಿಚ್ಛೇದನೆ ಅದು.

ಪತಿಯೊಡನೆ ಲಂಡನ್ನಿನಲ್ಲಿ ನೆಲೆಸಿದ್ದಾಗ, ಅಸಹಕಾರ ಚಳವಳಿಯ ಬಗ್ಗೆ ತಿಳಿಯಿತು. ಕೂಡಲೇ ‘ಸೇವಾ ದಳ’ ಸೇರಲು ಸ್ವದೇಶಕ್ಕೆ ಮರಳಿ ಬಂದರು. ಈಕೆ ಸೇವಾ ದಳದ ಮಹಿಳಾ ವಿಭಾಗಕ್ಕೆ ‘ಸೇವಿಕಾ’ ರನ್ನು ದಳದಲ್ಲಿ ನೇಮಿಸಿಕೊಳ್ಳುವ, ಅವರಿಗೆ ತರಬೇತಿ ನೀಡುವ ಹಾಗೂ ಸಂಘಟಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು.
ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಮದ್ರಾಸ್ ಪ್ರಸಿಡೆನ್ಸಿ 1926 ರಲ್ಲಿ ಅನುಮತಿ ನೀಡಿತು. ಕಮಲಾದೇವಿ ಅವರಿಗೆ ಕುಟುಂಬದ ಬೆಂಬಲವಿದ್ದುದರಿಂದ ಮೊತ್ತಮೊದಲ ಅವಕಾಶವನ್ನು ಬಳಸಿಕೊಂಡು ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಅದರಲ್ಲಿ ಇವರು ಕೇವಲ 23 ಮತಗಳಿಂದ ಸೋತರು. ಸೋತರೂ, ಪ್ರಾಂತೀಯ ವಿಧಾನ ಸಭೆಗೆ ಸ್ಫರ್ಧಿಸಿದ ಮೊದಲ ಮಹಿಳೆ ಎಂದು ದಾಖಲಾಯಿತು. 1927 ರಲ್ಲಿ ‘ಅಖಿಲ ಭಾರತ ಮಹಿಳಾ ಸಮ್ಮೇಳನ’ದ ನೇತೃತ್ವವಹಿಸಿದರು.

1930 ರ ದಶಕದಲ್ಲಿ, ಅವರು ನಾಲ್ಕು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಕನ್ನಡದ ಪ್ರಪ್ರಥಮ ಮೂಕಿ ಚಿತ್ರ ‘ಮೃಚ್ಛಕಟಿಕ’ದಲ್ಲಿ ವಸಂತಸೇನೆಯ ಪಾತ್ರದಲ್ಲಿ ನಟಿಸಿದ್ದರು. ‘ತಾನ್‍ಸೇನ್’ ಎಂಬ ಹಿಂದಿ ಚಿತ್ರದಲ್ಲಿ ಸೈಗಲ್ ಅವರ ಜೊತೆಯಲ್ಲಿ ಅಭಿನಯಿಸಿದ್ದರು. ಇವಲ್ಲದೆ, 1940 ರ ದಶಕದಲ್ಲಿ, ‘ಶಂಕರ ಪಾರ್ವತಿ’ ಮತ್ತು ‘ದನ್ನ ಭಗತ್’ಎಂಬ ಚಿತ್ರಗಳಲ್ಲೂ ನಟಿಸಿದ್ದಾರೆ.

ಉಪ್ಪಿನ ಸತ್ಯಾಗ್ರಹ : ಮಹಾತ್ಮಾ ಗಾಂಧಿಯವರ ಉಪ್ಪಿನ ಸತ್ಯಾಗ್ರಹದಲ್ಲಿ, ಉಪ್ಪು ತಯಾರಿಕೆಯಲ್ಲಿ ಪಾಲ್ಗೊಳ್ಳಲು ರಚಿಸಿದ ಏಳು ಮಂದಿಯ ತಂಡದಲ್ಲಿ ಇದ್ದದ್ದು ಇಬ್ಬರೇ ಮಹಿಳೆಯರು. ಒಬ್ಬರು ಅವಂತಿಕಾಬಾಯಿ ಗೋಖಲೆಯವರಾದರೆ ಇನ್ನೊಬ್ಬರು ಕಮಲಾದೇವಿ! ಉಪ್ಪಿನ ಸತ್ಯಾಗ್ರಹದಲ್ಲಿ ಮಹಿಳೆಯರು ಪಾಲ್ಗೊಳ್ಳುವುದು ಬೇಡ ಎಂಬುದು ಗಾಂಧೀಜೀ ಅವರ ನಿಲುವಾಗಿತ್ತು. ಆದರೆ, ಅವರೊಡನೆ ವಾದಿಸಿ ಅದರಲ್ಲಿ ಪಾಲ್ಗೊಂಡ ಛಲಗಾತಿ ಮಹಿಳೆ ಈಕೆ! ಈ ಸಂದರ್ಭದಲ್ಲಿ ಅವರು ದಸ್ತಗಿರಿಯಾಗಿ ಜೈಲು ವಾಸವನ್ನೂ ಅನುಭವಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ದಸ್ತಗಿರಿಯಾದ ಮೊದಲ ಮಹಿಳೆ ಎಂಬ ಪ್ರಥಮಕ್ಕೂ ಭಾಜನರಾದರು. 1936 ರಲ್ಲಿ ಕಾಂಗ್ರೆಸ್ ಸಮಾಜವಾದೀ ಪಕ್ಷದ ಅಧ್ಯಕ್ಷೆಯಾದರು. ಮಹಿಳಾ ಚಳವಳಿಯಲ್ಲಿ ಹೆಚ್ಚು ಹೆಚ್ಚು ತಮ್ಮನ್ನು ತೊಡಗಿಸಿಕೊಂಡರು ಮತ್ತು ಕಾರ್ಖಾನೆಗಳಲ್ಲಿ ಮತ್ತು ಹೊಲಗಳಲ್ಲಿ ಕೆಲಸಮಾಡುವ ಮಹಿಳೆಯರ ಪರಿಸರ ಸುಧಾರಿಸಬೇಕು ಮತ್ತು ಸಂಬಳ ಸಹಿತ ಪ್ರಸೂತಿ ರಜೆ ಸೌಲಭ್ಯ ನೀಡಬೇಕು ಎಂಬ ಹೋರಾಟವನ್ನು ಮುನ್ನಡೆಸಿದರು. 1942 ರ ‘ದೇಶ ಬಿಟ್ಟು ತೊಲಗಿ’ ಚಳವಳಿಯಲ್ಲಿ ಭಾಗವಹಿಸಿ ದಸ್ತಗಿರಿಯಾದರು. ಒಂದು ವರ್ಷಕ್ಕೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದರು. ಔಪಚಾರಿಕ ರಾಜಕಾರಣದ ಭಾಗವಾಗಲು ನಿರಾಕರಿಸಿದರು.

ಕಮಲಾದೇವಿ ಅವರು ಅಂತರರಾಷ್ಟ್ರೀಯ ಸಮಾಜವಾದೀ ಮಹಿಳಾ ಚಳವಳಿಯಯಲ್ಲಿ ಪ್ರಮುಖ ಪಾತ್ರ ವಹಿಸಿದರು. 1942 ರಲ್ಲಿ ಅಖಿಲ ಭಾರತ ಮಹಿಳಾ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆಯಾದರು. ಆ ಸಮಯದಲ್ಲಿ ಅವರು ಜೈಲಿನಲ್ಲಿದ್ದುದರಿಂದ ಅವರಿಗೆ ಸ್ಥಾನ ಗ್ರಹಣ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಆ ನಂತರ 1944 ರಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು.

ಬ್ರಿಟಿಷರಿಗಿಂತ ಮುಂಚೆಯೇ ಭಾರತದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ದೊರೆತಿತ್ತು. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಹಿಳಾ ಚಳವಳಿಗೆ ಹೆಚ್ಚಿನ ವಿರೋಧವಿರಲಿಲ್ಲ ಎಂಬ ಬಗ್ಗೆ ಈಕೆಗೆ ಸಮಾಧಾನವಿದ್ದರೂ ಸ್ವಾತಂತ್ರ್ಯಾನಂತರ ಮಹಿಳಾ ಚಳವಳಿ ತನ್ನ ಹುರುಪನ್ನು ಕಳೆದುಕೊಂಡ ಬಗ್ಗೆ ಖೇದವಿತ್ತು. ಅಲ್ಲದೆ, ಮಧ್ಯಮವರ್ಗದ ಮಹಿಳೆಯರು ಕಾರ್ಮಿಕ ವರ್ಗದ ಮಹಿಳೆಯರ ಹಿತಾಸಕ್ತಿಯನ್ನು ಪ್ರತಿನಿಧಿಸಲು ವಿಫಲರಾದ ಬಗ್ಗೆಯೂ ಅವರಿಗೆ ಕಳಕಳಿಯಿತ್ತು. 1947 ರಷ್ಟು ಹಿಂದೆಯೇ, ಗೃಹಿಣಿಯ ದುಡಿಮೆಯನ್ನು ‘ನಿರ್ದಿಷ್ಟ ಆರ್ಥಿಕ ದುಡಿಮೆ’ಎಂದು ಪರಿಗಣಿಸಬೇಕು ಮತ್ತು ಮಹಿಳೆಯರಿಗೆ ಸಮಾನ ಪರಿಶ್ರಮಕ್ಕೆ ಸಮಾನವೇತನ ನೀಡಬೇಕು ಎಂದು ವಾದ ಮಾಡಿದವರು ಈಕೆ. ‘ಮಹಿಳಾವಾದಿ’ ಎಂಬ ಹಣೆಪಟ್ಟಿಯನ್ನು ತೊಡಲು ಇಚ್ಛಿಸದೆಯೇ ಅಸೀಮ ಮಹಿಳಾವಾದಿಯಾಗಿದ್ದರು ಈಕೆ.

ನಿರಾಕರಿಸುವ ಧೈರ್ಯ : ಕಮಲಾದೇವಿ ಸ್ವತಂತ್ರ ಮನೋಭಾವದ ಮಹಿಳೆಯಾಗಿದ್ದರು. ನ್ಯಾಯ ಸಮ್ಮತವಲ್ಲದ ಅಥವಾ ತಾರತಮ್ಯದಿಂದ ಕೂಡಿದ ಯಾವುದೇ ಅಧಿಕಾರಕ್ಕಾಗಲಿ ಅಥವಾ ಆದೇಶಕ್ಕಾಗಲೀ ತಲೆಬಾಗುತ್ತಿರಲಿಲ್ಲ. ತಮ್ಮ ರಾಜಕೀಯ ಜೀವನದಲ್ಲಿ ಅನೇಕ ದೇಶಗಳಿಗೆ ಭೇಟಿ ನೀಡಿದ್ದು, ಮಹಿಳೆಯ ಘನತೆಗೆ ಕುಂದು ತರುವ ಯಾವುದೇ ಆದೇಶಗಳಿಗೆ ತಲೆಬಾಗಲು ತನ್ನದಲ್ಲದ ನೆಲದಲ್ಲಿಯೂ ನಿರಾಕರಿಸುವ ಧೈರ್ಯ ತೋರಿದವರು ಅವರು. ಅವರ ದೀರ್ಘ ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಅವರು ಅನೇಕಾನೇಕ ರಾಜಕೀಯ ಧುರೀಣರ, ಮುಖಂಡರ ಒಡನಾಟದಲ್ಲಿ ಕಾರ್ಯ ನಿರ್ವಹಿಸಿದ್ದರು. ಆದರೆ ಯಾರಿಂದಲೇ ಆಗಲಿ, ಯಾವುದೇ ಸಂದರ್ಭದಲ್ಲಿ ಆಗಲಿ, ಮಹಿಳೆಯ ಹಕ್ಕುಗಳ ಉಲ್ಲಂಘನೆಯಾದಲ್ಲಿ, ಅದನ್ನು ವಿರೋಧಿಸದೆ ಸುಮ್ಮನೆ ಉಳಿಯುತ್ತಿರಲಿಲ್ಲ.

“ವ್ಯಕ್ತಿ ಗೌರವವನ್ನು ಹಾಗೂ ದುಡಿಮೆಯ ಘನತೆಯನ್ನು ಎತ್ತಿ ಹಿಡಿಯುವ ಸಮಾಜದಲ್ಲಿ ಮಾತ್ರವೇ ಮಹಿಳೆಯರು ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯ. ಘನತೆಯಿಂದ ಜೀವನವನ್ನು ನಡೆಸಲು ಅಗತ್ಯವಾದ ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ನೀಡುವ ಸಮಾಜದಲ್ಲಿ ಮಾತ್ರ ಪ್ರತಿ ವ್ಯಕ್ತಿ, ಪುರುಷನಿರಲಿ ಮಹಿಳೆಯಿರಲಿ, ತನ್ನ ದುಡಿಮೆಯ ಫಲವನ್ನು ಹಾಗೂ ವಿಜ್ಞಾನ ಮತ್ತು ಸಂಸ್ಸøತಿಯ ಫಲವನ್ನು, ಅನುಭವಿಸಲು ಸಾಧ್ಯ” ಎಂಬುದು ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು.

ಕಮಲಾದೇವಿ ಅವರು ಉತ್ಕಟ ಮಹಿಳಾವಾದಿಯಾಗಿದ್ದರು. ಸ್ತ್ರೀಯರಿಗೆ ನ್ಯಾಯ ದೊರೆಯಬೇಕಾದರೆ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕು ಎಂದು ಪ್ರತಿಪಾದಿಸಿದರು, ಬಾಲ್ಯ ವಿವಾಹ ತಡೆಗೆ ಅವಿರತವಾಗಿ ಶ್ರಮಿಸಿದರು, ಮಹಿಳೆಯರ ಮನೆ ದುಡಿಮೆಯನ್ನು ಉತ್ಪಾದಕ ದುಡಿಮೆ ಎಂದು ಪರಿಗಣಿಸಬೇಕೆಂದು ಒತ್ತಾಯಿಸಿದರು, ಮಹಿಳಾ ಶಿಕ್ಷಣ ಕ್ರಮದ ಸುಧಾರಣೆಗಾಗಿ ಹೋರಾಡಿದರು. ನವ ದೆಹಲಿಯ ಲೇಡಿ ಇರ್ವಿನ್ ಕಾಲೇಜಿಗೆ ಬೀಜಾಂಕುರವಾದದ್ದು ಇವರಿಂದಲೇ!

ಮಹಿಳೆಯರು ಶಿಕ್ಷಣ ಪಡೆಯುವುದೇ ದುಸ್ತರವಾದ ಕಾಲದಲ್ಲಿ ಕಮಲಾದೇವಿ ಅವರು ಶಿಕ್ಷಣವನ್ನು ಪಡೆದುದೇ ಅಲ್ಲದೆ ಸಾರ್ವಜನಿಕ ಜೀವನಕ್ಕೂ ಧುಮುಕಿದರು, ರಾಜಕೀಯ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಸಮಾಜ ಸೇವೆ ಹಾಗೂ ರಾಜಕೀಯದಲ್ಲಿ ಅವರಿಗೆ ಎಷ್ಟು ಆಸಕ್ತಿಯಿತ್ತೋ ಅದಕ್ಕಿಂತಲೂ ಒಂದು ಪಾಲು ಹೆಚ್ಚು ಆಸಕ್ತಿ ದೇಸಿ ಹಾಗೂ ಇತರ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವುದರಲ್ಲಿತ್ತು. “ನಾನು ರಾಜಕಾರಣದ ಹೆದ್ದಾರಿಯನ್ನು ಬಿಟ್ಟು ರಚನಾತ್ಮಕ ಕೆಲಸ ಮಾಡಲು ಅವಕಾಶವಿರುವ ಉಪ ಮಾರ್ಗವನ್ನು ಆಯ್ಕೆಮಾಡಿಕೊಂಡೆ” ಎಂದು ಅವರೇ ಹೇಳಿದ್ದಾರೆ.

ಕುಶಲಕಲೆಗಳ ಪುನರುಜ್ಜೀವನ : ಸ್ವಾತಂತ್ರ್ಯಾನಂತರದ ಭಾರತದಲ್ಲಿ, ಸಾವಿರಾರು ಸ್ವದೇಶೀ ಕಲೆ ಹಾಗೂ ಕುಶಲ ಕಲೆಗಳ ಪುನರುಜ್ಜೀವನ ಕಾರ್ಯದಲ್ಲಿ ಮಹತ್ತರವಾದ ಪಾತ್ರ ವಹಿಸಿದರು. ಭಾರತೀಯ ನೃತ್ಯ, ನಾಟಕ, ಕಲೆ, ಗೊಂಬೆಯಾಟ, ಸಂಗೀತ ಮತ್ತು ಕರಕುಶಲ ಕಲೆಗಳನ್ನು ಉಳಿಸಿ ಬೆಳೆಸಲು, ರಾಷ್ಟ್ರೀಯ ನಾಟಕ ಸಂಸ್ಥೆ, ಅಖಿಲ ಭಾರತ ಕರಕುಶಲ ಗಳ ಮಂಡಳಿ, ಸಂಗೀತ ನಾಟಕ ಅಕಾಡೆಮಿ ಮತ್ತು ಕೇಂದ್ರ ಗುಡಿ ಕೈಗಾರಿಕೆ ಉದ್ಯಮ ಕೇಂದ್ರಗಳಂಥ ಸರಣಿ ರಾಷ್ಟ್ರೀಯ ಸಂಸ್ಥೆಗಳನ್ನು ಸ್ಥಾಪಿಸಿದರು. ಕಲಾವಿದರಷ್ಟೇ ಕುಶಲಕರ್ಮಿಗಳೂ ಮುಖ್ಯ ಮತ್ತು ಸಮಾನರು ಎಂದು ಅವರು ನಂಬಿದ್ದರು. ಅವರಿಗಾಗಿ ಪ್ರಶಸ್ತಿಗಳನ್ನೂ ಪ್ರಾರಂಭಿಸಿದರು.

ಇಷ್ಟೆಲ್ಲ ವಿರಾಮವಿರದ ಚಟುವಟಿಕೆಗಳ ನಡುವೆಯೂ ಸುಮಾರು 20 ಪುಸ್ತಕಗಳನ್ನು ಬರೆದಿದ್ದಾರೆ. ಅವರ ಪುಸ್ತಕಗಳು ಅವರ ವಿದೇಶ ಪ್ರಯಾಣದ ವಿಸ್ತøತ ಅನುಭವಗಳ, ಅವರ ಜಾಗತಿಕ ದೃಷ್ಟಿಕೋನದ ಹಾಗೂ ಅವರ ಉನ್ನತ ಬುದ್ಧಿಮತ್ತೆಯ ದಾಖಲೆಗಳಾಗಿವೆ. ಅವರ ಜೀವನ ಪ್ರಯಾಣದ ವಿವರಗಳನ್ನು, ಸಾಧನೆಗಳನ್ನು ನೋಡಿದಾಗ ಅವರನ್ನು ಹುಡುಕಿಕೊಂಡು ಬಂದ ಲೆಕ್ಕವಿಲ್ಲದಷ್ಟು ಮಾನ-ಸನ್ಮಾನ ಹಾಗೂ ಪ್ರಶಸ್ತಿಗಳೂ ಕಡಿಮೆಯೆನಿಸುತ್ತವೆ.

ತಮ್ಮ ದೂರದೃಷ್ಟಿತ್ವದಿಂದ ಭಾರತದಲ್ಲಿ ಅನೇಕ ಅತ್ಯುತ್ತಮ ಸಾಂಸ್ಕøತಿಕ ಸಂಸ್ಥೆಗಳ ಸ್ಥಾಪನೆಗೆ ಕಾರಣರಾದ ಈ ಅಸಾಮಾನ್ಯ ಮಹಿಳೆ ತಮ್ಮ 85 ನೇ ವಯಸ್ಸಿನಲ್ಲಿ, 1988ರ ಅಕ್ಟೋಬರ್ 29 ರಂದು ಮರಣ ಹೊಂದಿದರು.

ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಸ್ಥಾಪಿಸಿದ ಸಂಸ್ಥೆಗಳು:
ಇಂಡಿಯನ್ ನ್ಯಾಷನಲ್ ಥಿಯೇಟರ್
ಭಾರತೀಯ ನಾಟ್ಯ ಸಂಘ
ಲೇಡಿ ಇರ್ವಿನ್ ಕಾಲೇಜ್
ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ
ಸಂಗೀತ ನಾಟಕ ಅಕಾಡೆಮಿ
ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂ
ವರ್ಲ್ಡ್ ಕ್ರಾಫ್ಟ್ಸ್ ಕೌನ್ಸಿಲ್
ಕ್ರಾಫ್ಟ್ಸ್ ಕೌನ್ಸಿಲ್ ಆಫ್ ಇಂಡಿಯಾ
ದೆಹಲಿ ಕ್ರಾಫ್ಟ್ಸ್ ಕೌನ್ಸಿಲ್
ಶ್ರೀನಿವಾಸ್ ಮಲ್ಲೈಯ್ಯ ಮೆಮೋರಿಯಲ್ ಥಿಯೇಟರ್ ಕ್ರಾಫ್ಟ್ ಮ್ಯೂಸಿಯಂ

ಕಮಲಾದೇವಿ ಚಟ್ಟೋಪಾಧ್ಯಾಯ ಅವರಿಗೆ ಸಂದ ಪ್ರಶಸ್ತಿಗಳು :
1955-ಭಾರತ ಸರ್ಕಾರದ ಪದ್ಮ ಭೂಷಣ ಪ್ರಶಸ್ತಿ
1962-ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವಗಾಗಿ ವಾಟಮಲ್ ಪ್ರತಿಷ್ಠಾನದ ಪ್ರಶಸ್ತಿ
1966- ಸಮುದಾಯ ಮುಖಂಡತ್ವಕ್ಕೆ ಸಲ್ಲುವ ರೇಮನ್ ಮ್ಯಾಗ್‍ಸೆಸೆ ಪ್ರಶಸ್ತಿ
1970-ಶಾಂತಿನಿಕೇತನದ ದೇಶಿಕೋತ್ತಮ ಬಿರುದು.
1972-ಭಾರತ ಸರ್ಕಾರದ ಸ್ವಾತಂತ್ರ ಹೋರಾಟಗಾರರಿಗೆ ಕೊಡಮಾಡುವ ತಾಮ್ರಪತ್ರ ಪ್ರಶಸ್ತಿ
1974-ರತ್ನಸದಸ್ಯ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಜೀವಮಾನ ಸಾಧನೆ ಪ್ರಶಸ್ತಿ
1977-ಕರಕುಶಲಕಲೆಗಳ ಅಭಿವೃದ್ಧಿಗಾಗಿ ನೀಡುವ ಯುನೆಸ್ಕೋ ಪ್ರಶಸ್ತಿ
1987–ಭಾರತ ಸರ್ಕಾರದ ಪದ್ಮ ವಿಭೂಷಣ ಪ್ರಶಸ್ತಿ

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *