ಪದ್ಮಪ್ರಭೆ / ಕನ್ನಡದ ವಿಶಿಷ್ಟ ಇಂಗ್ಲಿಷ್ ಲೇಖಕಿ ಶಶಿ ದೇಶಪಾಂಡೆ- ಡಾ. ಗೀತಾ ಕೃಷ್ಣಮೂರ್ತಿ

ಪಿತೃಪ್ರಧಾನ ನಂಬಿಕೆಗಳನ್ನು ಪ್ರಶ್ನಿಸುತ್ತಾ ಬರೆಯುವ ಶಶಿ ದೇಶಪಾಂಡೆ ಅವರ ಎಲ್ಲ ಕಾದಂಬರಿಗಳ ಕೇಂದ್ರ ಪಾತ್ರ ಮಹಿಳೆ. ಸಮಾಜದಲ್ಲಿ ಕೌಟುಂಬಿಕ ಮೌಲ್ಯಗಳು ಮತ್ತು ಪಾತ್ರಗಳ ಬಗ್ಗೆ ಇರುವ ನಿರೀಕ್ಷೆಗಳನ್ನು ಅವರ ಬರವಣಿಗೆ ಒಪ್ಪುವುದಿಲ್ಲ, ಬದಲಿಗೆ ಹೊಸ ಚಿಂತನೆಯ ವ್ಯಕ್ತಿಗಳನ್ನು ಅವರು ಪರಿಚಯಿಸುತ್ತಾರೆ. ಒಬ್ಬ ಸಂವೇದನಾಶೀಲ ಸಾಹಿತಿ ಸಮಾಜದ ಯಾವುದೇ ಸಮಸ್ಯೆಗೂ ಪ್ರತಿಕ್ರಿಯೆ ತೋರಿಸದೆ ನಿಷ್ಕ್ರಿಯತೆಯಿಂದಿರುವುದು ಸಾಧ್ಯವಿಲ್ಲ ಎಂದು ನಂಬಿರುವ ಅವರು ಎಲ್ಲ ಸಾಹಿತ್ಯಿಕ, ಸಾಂಸ್ಕøತಿಕ ಹಾಗೂ ರಾಜಕೀಯ ಪಲ್ಲಟಗಳಿಗೂ ಸ್ಪಂದಿಸುತ್ತಾ, ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ. ಭಾರತೀಯ ಲೇಖಕಿಯರಿಗೆ ಮಾದರಿಯಾಗಿರುವ ಅವರ ಸಾಹಿತ್ಯ ಸಾಧನೆಗೆ 2009 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಶಶಿ ದೇಶಪಾಂಡೆ ಸಾಹಿತ್ಯಾಸಕ್ತರೆಲ್ಲರಿಗೂ ಸಾಮಾನ್ಯವಾಗಿ ಪರಿಚಯವಿರುವ ಹೆಸರು. ಇದಕ್ಕೆ ಕಾರಣ, ಕನ್ನಡದ ಶ್ರೇಷ್ಠ ಸಾಹಿತಿಯ ಮಗಳಾಗಿ, ಕನ್ನಡದ ನೆಲದಲ್ಲಿಯೇ ಹುಟ್ಟಿ, ಇಂಗ್ಲಿಷ್ ಭಾಷೆಯಲ್ಲಿ ಕೃಷಿ ಮಾಡಿ ಹೆಸರು ಮಾಡಿರುವ ಅಪರೂಪದ ಲೇಖಕಿಯಾಗಿರುವುದು. ಇವರ ಸಾಹಿತ್ಯ ಕೃಷಿಯನ್ನು ಗುರುತಿಸಿ, ಗೌರವಿಸಿ, ಸಾಹಿತ್ಯ ಸಾಧನೆಗಾಗಿ 2009 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಶಶಿ ದೇಶಪಾಂಡೆ ಅವರು ಹುಟ್ಟಿದ್ದು ಧಾರವಾಡದಲ್ಲಿ, 1938 ರಲ್ಲಿ. ಕನ್ನಡದ ಖ್ಯಾತ ನಾಟಕಕಾರ, ಸಾಹಿತಿ, ಸಂಸ್ಕøತ ವಿದ್ವಾಂಸ ಶ್ರೀರಂಗ ಎಂಬ ಕಾವ್ಯನಾಮದಿಂದ ಖ್ಯಾತರಾದ ಆರ್.ವಿ ಜಾಗೀರ್‍ದಾರ್ ಮತ್ತು ಶಾರದಾ ಆರ್ಯ ದಂಪತಿಯ ಎರಡನೆಯ ಮಗಳು. ಶಶಿ ದೇಶಪಾಂಡೆ ಅವರು ಬೆಳೆದದ್ದು ಮೇಲ್ ಮಧ್ಯಮ ವರ್ಗದ ಕುಟುಂಬದಲ್ಲಿ. ತಾಯಿಯಿಂದ ಮರಾಠಿ, ತಂದೆಯಿಂದ ಕನ್ನಡ ಭಾಷೆಗಳಲ್ಲಿ ಪರಿಣತಿ, ಶಿಕ್ಷಣ ದೊರೆತದ್ದೆಲ್ಲಾ ಇಂಗ್ಲೀಷ್ ಕಾನ್ವೆಂಟ್ ಶಾಲೆಯಲ್ಲಿ. ಮುಂಬಯಿ ವಿಶ್ವವಿದ್ಯಾಲಯದಿಂದ 1956 ರಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ ಪದವಿಯನ್ನು, 1970 ರಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾವನ್ನು, ಕರ್ನಾಟಕದ ಮೈಸೂರು ವಿಶ್ವವಿದ್ಯಾಲಯದಿಂದ 1970 ರಲ್ಲಿ ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಕಾನೂನು ಪದವಿಯನ್ನೂ ಪಡೆದಿದ್ದರು. ಹಾಗಾಗಿ ಮೊದಲು ಕೈಗೊಂಡ ವೃತ್ತಿ ಲಾಯರ್ ಬಳಿ, ಆ ನಂತರ ಕೈಗೊಂಡದ್ದು ಪತ್ರಕರ್ತೆಯ ಹುದ್ದೆ. 1962 ರಲ್ಲಿ ವೈದ್ಯ ಧೀರೇಂದ್ರ ದೇಶಪಾಂಡೆ ಅವರೊಂದಿಗೆ ವಿವಾಹ. ಇಬ್ಬರು ಮಕ್ಕಳ ತಾಯಿ. ಪತ್ನಿಯಾಗಿ, ತಾಯಿಯಾಗಿ ಕರ್ತವ್ಯ ನಿರ್ವಹಣೆಯನ್ನು ನಿಸ್ಪøಹತೆಯಿಂದ ನಿರ್ವಹಿಸುತ್ತಿದ್ದರೂ ಅಭಿವ್ಯಕ್ತಿಗಾಗಿ ಚಡಪಡಿಸುತ್ತಿದ್ದ ತನ್ನೊಳಗನ್ನು ಹತ್ತಿಕ್ಕಲಾರದೆ ಹೋದರು. ಅದರ ಪರಿಣಾಮವೇ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟಗಳೆರಡರಲ್ಲೂ ಹೆಸರು ಮಾಡಿರುವ, ಇಂದು ನಮ್ಮ ಮುಂದಿರುವ ಅವರ ಅನೇಕ ಮೌಲಿಕ ಬರವಣಿಗೆಗಳು.

ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗದಲ್ಲಿ, ಭಾರತದಲ್ಲಿ ಮಹಿಳಾ ಶಿಕ್ಷಣಕ್ಕೆ ಪ್ರಾಮುಖ್ಯ ದೊರೆಯಿತು. ಅದಕ್ಕೆ ಕಾರಣ, ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಪಿಡುಗುಗಳನ್ನು ನಿವಾರಿಸುವುದು ಸಾಧ್ಯವಾಗಬಹುದು ಎಂಬುದಾಗಿತ್ತು. ಇದರ ಫಲವಾಗಿ, ಆ ನಂತರ ಬಂದ ಮಹಿಳೆಯರು ಬರೆದ ಸಾಹಿತ್ಯ ಕೃತಿಗಳಲ್ಲಿ, ಅದುವರೆಗೆ ಅದುಮಿಟ್ಟ ಭಾವನೆಗಳಿಗೆ ಅಭಿವ್ಯಕ್ತಿ ದೊರೆಯಿತು. ಜೊತೆಗೆ, ತಮ್ಮ ಕೃತಿಗಳ ಮೂಲಕ, ಹಳೆಯ ಪಿತೃ ಪ್ರಧಾನ ಮೌಲ್ಯಗಳನ್ನು ಪ್ರಶ್ನಿಸಲೂ ಪ್ರಾರಂಭಿಸಿದರು. ಹೀಗೆ ಬಂದ ಭಾರತೀಯ ಇಂಗ್ಲಿಷ್ ಲೇಖಕಿಯರಲ್ಲಿ ಶಶಿ ದೇಶಪಾಂಡೆ ಅವರ ಹೆಸರು ಬಹಳ ಪ್ರಮುಖವಾದದ್ದು.

ಅವರ ಬರವಣಿಗೆಗಳೆಲ್ಲವೂ, ಅವರೇ ಹೇಳುವಂತೆ, “ನಾನು ವಾಸಿಸುವ ಸಮಾಜದ, ಅದರಲ್ಲೂ ಮಹಿಳೆಯರ ಜೀವನದ ಜೊತೆಯಲ್ಲಿ ಹೊಂದಿರುವ ಗಾಢವಾದ ನಂಟಿನ ಹಿನ್ನೆಲೆಯಿಂದ ಮೂಡಿಬಂದವುಗಳು. ಹಾಗಾಗಿ ನನ್ನ ಎಲ್ಲ ಕಾದಂಬರಿಗಳ ಕೇಂದ್ರ ಪಾತ್ರ ಮಹಿಳೆ- ತಮ್ಮನ್ನು ತಾವು ಅರ್ಥ ಮಾಡಿಕೊಳ್ಳಲೆಳಸುವ ಮಹಿಳೆ, ತನ್ನ ಹಿನ್ನೆಲೆ, ಸಮಾಜದಲ್ಲಿ ತನ್ನ ಪಾತ್ರ, ತನ್ನ ಸ್ಥಾನ, ಎಲ್ಲಕ್ಕಿಂತ ಹೆಚ್ಚಾಗಿ ಇತರರೊಡನೆ ತನಗಿರುವ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುವ ಮಹಿಳೆ. ನನ್ನ ಎಲ್ಲ ಕಾದಂಬರಿಗಳಲ್ಲಿ, ಕಾದಂಬರಿಯಿಂದ ಕಾದಂಬರಿಗೆ, ಮಹಿಳೆಯ ಸಿದ್ಧ ಪಾತ್ರವನ್ನು ನಿರಾಕರಿಸುತ್ತಾ, ಮಹಿಳೆಯರೆಂದರೆ ಹೀಗಿರಬೇಕು ಎಂದು ನಿರ್ಧರಿಸಿದ ನಂಬಿಕೆಗಳನ್ನು ಪ್ರಶ್ನಿಸುತ್ತಾ, ನನ್ನ ಆಲೋಚನೆಗಳನ್ನು ಮತ್ತೆ ಮತ್ತೆ ನಿಕಷಕ್ಕೆ ಒಡ್ಡಿದ್ದೇನೆ.”

ಇವರ ಇಂಥ ವ್ಯಕ್ತಿತ್ವ ರೂಪುಗೊಂಡದ್ದೂ ಮನೆಯ ಮೊದಲ ಪಾಠ ಶಾಲೆಯಲ್ಲಿಯೇ! ಅವರ ತಂದೆ ಕನ್ನಡದ ಖ್ಯಾತ ನಾಟಕಕಾರರು, ಸಾಹಿತಿ, ಬರಹಗಾರ. ಅಂದಿನ ಅಧ್ವರ್ಯು ಬರಹಗಾರರೆಲ್ಲರೂ ಬಂದು ಚರ್ಚೆಗಳಲ್ಲಿ ತೊಡಗಿಕೊಳ್ಳುತ್ತಿದ್ದ ಸಾಹಿತ್ಯಿಕ ಪರಿಸರ, ಹುಡುಗಿ ಎಂಬ ಕಾರಣಕ್ಕೆ ಯಾವ ಸ್ವಾತಂತ್ರ್ಯವನ್ನೂ ಮೊಟಕುಗೊಳಿಸದೆ, ವ್ಯಕ್ತಿತ್ವ ವಿಕಸನಕ್ಕೆ ಮತ್ತು ಪ್ರಶ್ನಿಸುವ ಮನೋಭಾವದ ಬೆಳವಣಿಗೆಗೆ ಅನುವು ಮಾಡಿಕೊಡುವಂಥ ಮುಕ್ತ ವಾತಾವರಣ!

ಶಶಿ ದೇಶಪಾಂಡೆ ಅವರು ಬರಹಗಾರ್ತಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದು ಸಾಕಷ್ಟು ತಡವಾಗಿ. ಅದಕ್ಕೆ ಮುನ್ನ ತಾನು ಏನನ್ನೂ ಬರೆದದ್ದೇ ಇಲ್ಲ. ಬರಹಗಾರರಾದವರು ತಮ್ಮ ಹರೆಯದಲ್ಲಿ ಒಂದು ಕವನವನ್ನಾದರೂ ಗೀಚಿರುತ್ತಾರೆ. ಆದರೆ ತಾನು ಬರೆದದ್ದೇ ಇಲ್ಲ. ಆದರೆ ಬರೆಯಲು ತೊಡಗಿದ ಮೇಲೆ ನಿಲ್ಲಿಸಿದ್ದೇ ಇಲ್ಲ ಎಂದಿದ್ದಾರೆ. ‘ಸ್ತ್ರೀ ಮತ್ತು ಪುರುಷರ ಹಣೆಬರಹವನ್ನು ನಿರ್ಧರಿಸುವುದು ಸಮಾಜದ ಒಪ್ಪಿಗೆ ಪಡೆದ ಪೂರ್ವ ನಿರ್ಧರಿತ ಅಂಶಗಳು ಎಂಬುದು ನನಗೆ ನಿಚ್ಚಳವಾಗಿ ಅರ್ಥವಾದದ್ದು ವಿವಾಹ ಮತ್ತು ತಾಯ್ತನಗಳ ನಂತರ. ಇವೆರಡನ್ನು ಹೊರತುಪಡಿಸಿಯೂ ನನ್ನದೊಂದು ವ್ಯಕ್ತಿತ್ವವಿದೆ, ಅದನ್ನು ಯಾರೂ ಗುರುತಿಸುತ್ತಿಲ್ಲ, ಅದಕ್ಕೆ ಯಾರೂ ಬೆಲೆ ನೀಡುತ್ತಿಲ್ಲ ಎಂಬ ನನ್ನಲ್ಲಿ ಹುದುಗಿದ್ದ ಭಾವ ನನ್ನನ್ನು ಚಡಪಡಿಸುವಂತೆ ಮಾಡುತ್ತಿತ್ತು, ನನ್ನ ವ್ಯಕ್ತಿತ್ವದ್ದೇ ಒಂದು ಭಾಗವಾದ ನನ್ನ ಚಿಂತನೆ ದಮನಗೊಂಡಿದೆ ಎಂಬ ಭಾವ ಅನೇಕ ಬಾರಿ ನನ್ನ ಅಸಹನೆಗೂ ಕಾರಣವಾಗುತ್ತಿತ್ತು. ನನ್ನ ಈ ಒಳಗುದಿಯನ್ನು ಹೊರಹಾಕಲೇಬೇಕಿತ್ತು. ಈ ಸುಪ್ತ ಭಾವನೆ ಅಭಿವ್ಯಕ್ತಿಗಾಗಿ ಹಾತೊರೆಯುತ್ತಿತ್ತು’ ಎನ್ನುತ್ತಾರೆ. ಅವರ ಬರವಣಿಗೆಗಳಲ್ಲಿನ ತೀವ್ರತೆಗೆ ಬಹುಶಃ ಅವರ ಈ ಭಾವ ತೀವ್ರತೆಯೇ ಕಾರಣವಿರಬಹುದು. ಬ್ರೆಟ್ಟಿ ಫ್ರೀಡನ್‍ನ “ಫೆಮಿನೈನ್ ಮಿಸ್ಟಕ್” ಅನ್ನು ಓದುವುದಕ್ಕೇ ಮುಂಚೆಯೇ ಅವರು ಮಧ್ಯಮ ವರ್ಗದ ಮಹಿಳೆಯರ ‘ಹೆಸರಿಲ್ಲದ ಸಮಸ್ಯೆಗಳಿಗೆ’ ದನಿಯಾಗಿದ್ದರು. ಕುಟುಂಬ ನಿರ್ವಹಣೆ ಮಾಡುವುದಕ್ಕೆ ಹಾಗೂ ಅಡಿಗೆ ಮಾಡುವುದಕ್ಕೆ ಮತ್ತು ಅವನ್ನು ಮಾಡಿದುದಕ್ಕೆ ಪ್ರಶಂಸೆ ಪಡೆಯುವುದಕ್ಕೆ ಮಾತ್ರ ನಾವು ಜನಿಸಿಲ್ಲ, ಅದಕ್ಕಿಂತ ಹೆಚ್ಚಿನದನ್ನು ಪಡೆಯಲು ನಾವು ಅರ್ಹರು. ಮಹಿಳೆಯರು ಪೂರ್ಣವಾಗಿ ಬದುಕುತ್ತಿಲ್ಲ ಎಂಬ ಭಾವ ಅವರನ್ನು ಕಾಡುತ್ತಿತ್ತು.

ಅವರ ಸಣ್ಣ ಕಥೆಗಳು ಹಾಗೂ ಅವರ ಕಾದಂಬರಿಗಳು, ಸುಶಿಕ್ಷಿತ ಮಧ್ಯಮ ವರ್ಗದ ಮಹಿಳೆಯ ತಲ್ಲಣಗಳನ್ನು, ತೊಳಲಾಟಗಳನ್ನು, ವ್ಯಕ್ತಿಯಾಗಿ ತನಗಿರುವ ವೈಯಕ್ತಿಕ ಆಸೆಗಳು ಮತ್ತು ಪಿತೃ ಪ್ರಧಾನ ಸಮಾಜದಲ್ಲಿ ಒಪ್ಪಿತವಾದ ಹೆಣ್ಣಿನ ಪಾತ್ರ ನಿರ್ವಹಣೆಯಲ್ಲಿ ಕಳೆದುಹೋಗುವ ‘ತನ್ನತನ’ದ ಘರ್ಷಣೆಗಳ ನಡುವೆ ಸಿಕ್ಕು ಹೈರಾಣಾಗುವ ಹೆಣ್ಣಿನ ಮಾನಸಿಕ ಸ್ಥಿತಿಯನ್ನು ಚಿತ್ರಿಸುತ್ತವೆ.

ವಿವಿಧ ಆಯಾಮಗಳು : 2004 ರಲ್ಲಿ ಹಿಂದೂ ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ, “ಎಲ್ಲ ಪ್ರಾರಂಭವಾಗುವುದು ಕುಟುಂಬದಲ್ಲಿಯೇ, ಹೊರಗಡೆ ನಡೆಯುವ ಪ್ರತಿಯೊಂದೂ ಮನೆಯಲ್ಲಿ ನಡೆಯುವುದರ ಪ್ರತಿಬಿಂಬವಷ್ಟೇ” ಎಂದಿದ್ದಾರೆ. ನಗರದ ಸುಶಿಕ್ಷಿತ ಮಹಿಳೆಯರೂ ಶೋಷಣೆಗೆ ಒಳಗಾಗುತ್ತಾ, ದನಿಯೆತ್ತದೇ ಅದನ್ನು ಒಪ್ಪಿಕೊಳ್ಳುತ್ತಾ, ತಮ್ಮ ವ್ಯಕ್ತಿತ್ವವನ್ನು ಕೊಂದುಕೊಳ್ಳುತ್ತಾ ಬದುಕುವ ಮಹಿಳೆಯರನ್ನು ನೋಡಿ, ಅದರಿಂದ ಪಾರಾಗುವ ಎಲ್ಲ ಮಾರ್ಗಗಳನ್ನೂ ತಾವೇ ಮುಚ್ಚಿಕೊಳ್ಳುತ್ತಾರೆ ಎಂದು ಕನಲುತ್ತಾರೆ. ಇದನ್ನು ಅವರು ಪ್ರತಿ ಸಂದರ್ಶನದಲ್ಲಿಯೂ ವ್ಯಕ್ತ ಪಡಿಸುತ್ತಲೇ ಬಂದಿದ್ದಾರೆ. ಇವರ ಎಲ್ಲ ಕೃತಿಗಳಲ್ಲಿ ಇಂಥ ಮಹಿಳೆಯ ತೊಳಲಾಟಗಳ ವಿವಿಧ ಆಯಾಮಗಳೇ ಕೇಂದ್ರ ವಸ್ತು. ‘ನಾನು ಬರೆಯಲು ಕುಳಿತಾಗ ನಾನು ಕೇವಲ ಲೇಖಕಿ ಅಷ್ಟೇ. ಅಲ್ಲಿ ಮಹಿಳೆ ಅಥವಾ ಪುರುಷ ಎಂಬ ವ್ಯತ್ಯಾಸವಿರುವುದಿಲ್ಲ. ನಾನು ಮಹಿಳೆಯಾಗಿರುದರಿಂದ, ನಾನು ಪ್ರಪಂಚವನ್ನು ನೋಡುವುದು, ಮಹಿಳೆಯ ಜೀವನವನ್ನು ಪ್ರಭಾವಿಸಿರುವ ಐತಿಹಾಸಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ, ಮಹಿಳಾ ದೃಷ್ಟಿಕೋನದಿಂದ’ ಎನ್ನುತ್ತಾರೆ. ‘ನಾನೊಬ್ಬಳು ಮಾನವತಾ ಮಹಿಳಾವಾದಿ’ ಎಂದು ಕರೆದುಕೊಳ್ಳುತ್ತಾರೆ. ಯಾವಾಗಲೂ ಪ್ರಚಾರದಿಂದ ದೂರವೇ ಉಳಿದ ವಿಶಿಷ್ಟ ಲೇಖಕಿ ಇವರು. ಪ್ರಚಾರ ಲೇಖಕನಿಗೆ ಒಳ್ಳೆಯದಲ್ಲ, ಅದು ‘ಲೇಖಕನಿಂದ’ ಲೇಖಕನನ್ನು ವಿಮುಖವಾಗಿಸಿ, ‘ವ್ಯಕ್ತಿ’ಯಾಗಿ ಮುಖ್ಯನಾಗುವಂತೆ ಮಾಡುತ್ತದೆ, ಅದು ಅವರ ಬರವಣಿಗೆಯ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಇವರ ಸ್ಪಷ್ಟ ನಿಲುವು.

ಅವರ ಇಂಥ ಆಲೋಚನಾ ಕ್ರಮವೇ ಅವರನ್ನು ವಿಶಿಷ್ಟ ಲೇಖಕಿಯನ್ನಾಗಿ ರೂಪಿಸಿರುವುದು. ಅವರ ಎಲ್ಲ ಕೃತಿಗಳೂ ಬಹುವಾಗಿ ವಿಮರ್ಶೆಗೆ ಒಳಗಾಗಿವೆ. ಆದರೆ, ಸಾಹಿತಿ ‘ಮಹಿಳೆ’ ಎಂಬ ಕಾರಣಕ್ಕೆ ಮಹಿಳೆಯ ಕೃತಿ ವಸ್ತುನಿಷ್ಠ ವಿಮರ್ಶೆಗೆ ಒಳಗಾಗುವುದರಿಂದ ವಂಚಿತವಾಗುತ್ತದೆ. ಈ ಮನೋಭಾವ ಭಾರತೀಯ ಸಾಹಿತ್ಯ ವಲಯದಲ್ಲಿ ಬೇರೂರಿದೆ. ಇದನ್ನು ಪ್ರತಿ ಸಂದರ್ಭದಲ್ಲಿಯೂ ಲೇಖಕಿ ವ್ಯಕ್ತ ಪಡಿಸಿದ್ದಾರೆ. ‘ನಾವು ಮಹಿಳೆಯರು ಕೌಟುಂಬಿಕ ವಿಷಯ ಹಾಗೂ ಸಮಸ್ಯೆಗಳ ಬಗ್ಗೆ ಬರೆಯುತ್ತೇವೆ ಎಂಬ ಕಾರಣಕ್ಕೆ ನಮ್ಮನ್ನು ಪಕ್ಕಕ್ಕೆ ಸರಿಸಲಾಗುತ್ತದೆ. ಆದರೆ ಅದೇ ಜೋನಾಥನ್ ಫ್ರಾನ್ಜೆನ್ ಎಂಬ ಅಮೆರಿಕಾದ ಲೇಖಕ, ಕಾದಂಬರಿಕಾರ ಕುಟುಂಬ ಜೀವನದ ಬಗ್ಗೆ ಬರೆದರೆ, ಅವನಿಗೆ, ಅದಕ್ಕಾಗಿ ಹೆಚ್ಚುವರಿ ಅಂಕಗಳು ದೊರೆಯುತ್ತದೆ. ಆದರೆ ಹಾಗೆ ನೋಡಿದರೆ, ಮಹಿಳೆಯರೇ ಪುರುಷರಿಗಿಂತ ಹೆಚ್ಚು ಅಧ್ಯಯನ ಯೋಗ್ಯರು, ಅದರಲ್ಲೂ ಅವರು ಜೀವನದಲ್ಲಿ ಎದುರಿಸುವ ಅನಿವಾರ್ಯತೆಗಳು ಹಾಗೂ ಅವರು ಅದುಮಿಡಬೇಕಾದ ಭಾವನೆಗಳು ಮುಂತಾದುವನ್ನು ನೋಡಿದಾಗ ಮಹಿಳೆಯರೇ ಹೆಚ್ಚು ಸಂಕೀರ್ಣ, ಆಸಕ್ತಿಕರ ವ್ಯಕ್ತಿಗಳು ಎಂಬುದರಲ್ಲಿ ಅನುಮಾನವಿಲ್ಲ’ ಎನ್ನುತ್ತಾರೆ.

ಅವರ ಆತ್ಮ ಚರಿತ್ರೆ ‘ಲಿಸನ್ ಟು ಮಿ’ ಪ್ರಕಟವಾದ ಸಂದರ್ಭದಲ್ಲಿ ‘ಇಂಡಿಯಾ ಟು ಡೇ’ ನಿಯತ ಕಾಲಿಕೆಗಾಗಿ ಅವರ ಸಂದರ್ಶನ ನಡೆಸಲಾಗಿತ್ತು. ಸಂದರ್ಶನ ನಡೆಸುವ ಸಂದರ್ಭದಲ್ಲಿ ಅವರ ಪುಟ್ಟ ಮೊಮ್ಮಗ ಅಂಬೆಗಾಲಿಡುತ್ತಾ ಅಲ್ಲಿಗೆ ಬರುತ್ತಾನೆ. ಮುಂದೆ, ನಿಯತಕಾಲಿಕೆಯಲ್ಲಿ, ‘ಹಳೆಯ ಮಾದರಿಯಲ್ಲಿ ಬರೆಯುವ ಅಜ್ಜಿ’ (ಗ್ರ್ಯಾಂಡ್‍ಮದರ್ ರೈಟ್ಸ್ ಓಲ್ಡ್ ಫ್ಯಾಷನ್ಡ್ ವೇ) ಎಂಬ ಶೀರ್ಷಿಕೆಯಡಿಯಲ್ಲಿ ಅವರ ಸಂದರ್ಶನ ಪ್ರಕಟವಾಗುತ್ತದೆ. ರೋಷಗೊಂಡ ಲೇಖಕಿ ಸಂಪಾದಕರಿಗೆ ಕರೆ ಮಾಡಿ, ‘ಯು.ಆರ್.ಅನಂತಮೂರ್ತಿ ಬದುಕಿದ್ದು, ಅವರಿಗೆ ಮೊಮ್ಮಕ್ಕಳಿದ್ದಿದ್ದರೆ, ಅವರನ್ನು ಅಜ್ಜ ಎಂದು ಕರೆಯುವ ಎದೆಗಾರಿಕೆಯನ್ನು ನೀವು ತೋರುತ್ತಿದ್ದಿರಾ?’ ಎಂದು ಕೇಳುತ್ತಾರೆ. ಮಹಿಳಾ ಸಾಹಿತಿ ಎಂದ ಕೂಡಲೇ ಬದಲಾಗುವ ವಿಮರ್ಶಾ ಮಾನದಂಡದ ಬಗೆಗೆ, ಸಾಹಿತ್ಯ ವಲಯ ಹಾಗೂ ವಿಮರ್ಶಕರ ಸಮೂಹ, ಸ್ತ್ರೀಯರು ಬರೆದ ಸಾಹಿತ್ಯವನ್ನು ಮೌಲ್ಯ ÀiÁಪನ ಮಾಡುವಾಗ ತೋರುತ್ತಿದ್ದ ತಾರತಮ್ಯದ ಬಗೆಗೆ ಇದ್ದ ಅವರ ರೋಷ ಪ್ರಕಟವಾಗದೆ ಹೋಗುತ್ತಿರಲಿಲ್ಲ.

ಅವರ ಮೊದಲ ಸಣ್ಣ ಕಥೆಗಳ ಸಂಕಲನ ಪ್ರಕಟವಾದದ್ದು 1978 ರಲ್ಲಿ, 1980 ರಲ್ಲಿ ಅವರ ಮೊದಲ ಕಾದಂಬರಿ ‘ದ ಡಾರ್ಕ್ ಹೋಲ್ಡ್ಸ್ ನೋ ಟೆರರ್’ ಪ್ರಕಟವಾಯಿತು. 1990 ರಲ್ಲಿ, ‘ದಟ್ ಲಾಂಗ್ ಸೈಲೆನ್ಸ್’ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು. ಅವರು ನಾಲ್ಕು ಮಕ್ಕಳ ಪುಸ್ತಕಗಳನ್ನು, ಅನೇಕ ಸಣ್ಣ ಕಥೆಗಳನ್ನು, ಒಂಬತ್ತು ಕಾದಂಬರಿಗಳನ್ನು ಬರೆದಿದ್ದಾರೆ. ಇವಲ್ಲದೆ, ಸಮಾಜದ ಎಲ್ಲ ಸಾಹಿತ್ಯಿಕ ಹಾಗೂ ರಾಜಕೀಯ ಪಲ್ಲಟಗಳಿಗೆ ಸ್ಪಂದಿಸುತ್ತಾ, ತಮ್ಮ ವಿಚಾರಗಳನ್ನು ಅತ್ಯಂತ ಕಟುವಾದ ರೀತಿಯಲ್ಲಿ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಅವರ ಈ ಬಗೆಯ ಲೇಖನಗಳು ಅವರ ‘ರೈಟಿಂಗ್ ಫ್ರಮ್ ದ ಮಾರ್ಜಿನ್ ಅಂಡ್ ಅದರ್ ಎಸ್ಸೇಸ್’ ಸಂಕಲನದಲ್ಲಿ ದೊರೆಯುತ್ತವೆ.

ಶಶಿ ದೇಶಪಾಂಡೆ ಅವರ ಕೃತಿಗಳ ಬಗ್ಗೆ ನಡೆದಿರುವ ಅಧ್ಯಯನಗಳ ಬಾಹುಳ್ಯವೇ ಅವರು ಸಾಹಿತಿಯಾಗಿ ಅದೆಷ್ಟು ಚರ್ಚೆಗೆ ಒಳಗಾಗಿರುವ ವ್ಯಕ್ತಿ ಎಂಬುದನ್ನು ವಿದಿತ ಪಡಿಸುತ್ತವೆ. ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

ಶಶಿ ದೇಶಪಾಂಡೆ ಅವರು ಬರೆಯುವ ಕಾಲಕ್ಕೆ ಅವರು ಎದುರಿಸಬೇಕಾಗಿದ್ದ ಸವಾಲುಗಳು ಮತ್ತು ಪ್ರತಿರೋಧಗಳು ಬಹಳಷ್ಟು. ಅವು ಈಗಿನ ಮಹಿಳಾ ಲೇಖಕಿಯರಿಗೆ ಕಡಿಮೆ. ಮಹಿಳಾ ಸಾಹಿತ್ಯ ಎಂದ ಕೂಡಲೇ ಎರಡನೆಯ ದರ್ಜೆಯ ಸಾಹಿತ್ಯ ಎಂದು ವರ್ಗೀಕರಿಸಿ ಬಿಡುವ ದೃಷ್ಟಿಕೋನವೂ ಈಗ ಬದಲಾಗುತ್ತಿದೆ.

ಒಬ್ಬ ಸಂವೇದನಾಶೀಲ ಸಾಹಿತಿ ಸಮಾಜದ ಯಾವುದೇ ಸಮಸ್ಯೆಗೂ ಪ್ರತಿಕ್ರಿಯೆ ತೋರಿಸದೆ ನಿಷ್ಕ್ರಿಯತೆಯಿಂದಿರುವುದು ಸಾಧ್ಯವಿಲ್ಲ. ಶಶಿ ದೇಶಪಾಂಡೆ ಅವರು ಎಲ್ಲ ಸಾಹಿತ್ಯಿಕ, ಸಾಂಸ್ಕøತಿಕ ಹಾಗೂ ರಾಜಕೀಯ ಪಲ್ಲಟಗಳಿಗೂ ಸ್ಪಂದಿಸುತ್ತಾ, ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ. ಸಾಹಿತಿ, ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಅವರ ಕೊಲೆಯ ಬಗ್ಗೆ ಅಕಾಡೆಮಿ ತೋರಿದ ನಿಷ್ಕ್ರಿಯತೆಯನ್ನು ಮತ್ತು ಮೌನವನ್ನು ವಿರೋಧಿಸುವ ಸಾಹಿತಿಗಳ ಹಾಗೂ ವಿಚಾರವಾದಿಗಳ ಗುಂಪಿಗೆ ಬೆಂಬಲವಾಗಿ, 2015 ರ ಅಕ್ಟೋಬರ್ 9 ರಂದು ತಮ್ಮ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ ಮತ್ತು ಅಕಾಡೆಮಿಯ ಜನರಲ್ ಕೌನ್ಸಿಲಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. 82 ರ ಈ ವಯಸ್ಸಿನಲ್ಲೂ ಅಷ್ಟೇ ಕಟುವಾದ ಮಾತುಗಳಲ್ಲಿ ಪ್ರತಿಕ್ರಿಯಿಸುವ ಮನೋಭಾವವನ್ನು ಉಳಿಸಿಕೊಂಡಿದ್ದಾರೆ.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *