ಪದ್ಮಪ್ರಭೆ/ ಎಲೆಮರೆಯ ಸೇವಾಕರ್ತೆ ಏಂಜಲಿನಾ ಕಾಸಿರಗಿ- ಡಾ. ಗೀತಾ ಕೃಷ್ಣಮೂರ್ತಿ


ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ಯಾವ ಬಾಜಾ ಬಜಂತ್ರಿಗಳೂ ಇಲ್ಲದೆ ಅನೇಕರ ಬಾಳಿಗೆ ಬೆಳಕನ್ನಿತ್ತು, ತಾವು ಕತ್ತಲಲ್ಲೇ ಉಳಿದ ಅನೇಕ ಮಹನೀಯರು ನಮ್ಮ ನಡುವೆಯೇ ಇದ್ದಾರೆ. ಇಟಲಿಯಲ್ಲಿ ಹುಟ್ಟಿದರೂ ಭಾರತಕ್ಕೆ ಬಂದು ಧಾರವಾಡದಲ್ಲಿ ನೆಲೆಸಿ, ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಬಡಬಗ್ಗರಿಗೆ ನೆರವಾದ ಲಿಯೊನಾರ್ಡ ಏಂಜೆಲಿನಾ ಕಾಸಿರಗಿ ಅವರು ಅಂಥವರಲ್ಲಿ ಒಬ್ಬರು. 1998 ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಅವರ ಹೆಸರನ್ನು ಕೇಳದಿರುವವರೇ ಹೆಚ್ಚು ಎಂಬುದೇ ಅವರ ಹೆಚ್ಚುಗಾರಿಕೆ.

ಮದರ್ ತೆರೇಸಾ ಅವರು ಹೇಳುವಂತೆ, “ನಾವು ಎಷ್ಟನ್ನು ಮಾಡುತ್ತೇವೆ ಎಂಬುದು ಮುಖ್ಯವಲ್ಲ. ಮಾಡುವುದನ್ನು ಎಷ್ಟು ಪ್ರೀತಿಯಿಂದ ಮಾಡುತ್ತೇವೆ ಎಂಬುದು ಮುಖ್ಯ. ನಾವು ಎಷ್ಟನ್ನು ಕೊಡುತ್ತೇವೆ ಎಂಬುದು ಮುಖ್ಯವಲ್ಲ, ಕೊಡುವುದನ್ನು ಎಷ್ಟು ಪ್ರೀತಿಯಿಂದ ಕೊಡುತ್ತೇವೆ ಎಂಬುದು ಮುಖ್ಯ”

-ಬಹುಶಃ ಇದೇ ಎಂದು ಕಾಣುತ್ತದೆ ಸಾಮಾನ್ಯರಿಗೂ ಅಸಾಮಾನ್ಯತೆಯನ್ನು ಸಾಧಿಸಿದವರಿಗೂ ಇರುವ ವ್ಯತ್ಯಾಸ. ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಲಾಲಸೆಗಳಿಂದ ಕೂಡಿದ ಜನರ ನಡುವೆಯೂ ಮಾನವೀಯತೆಯಲ್ಲಿ ನಂಬಿಕೆಯಿರಿಸಬಹುದೆಂಬ ಭರವಸೆಯನ್ನು ಮೂಡಿಸುವುದು ಏಂಜೆಲಿನಾ ಕಾಸಿರಗಿ ಅವರಂಥ, ಇತರರ ಕಣ್ಣೀರನ್ನು ಒರೆಸುವ, ದಯಾದ್ರ್ರ ಹೃದಯಗಳು. ಅವರ ನಿಃಸ್ವಾರ್ಥತೆ, ನಿಃಸ್ಫುರತೆ, ನಿಷ್ಕಾಮ ಸೇವೆಗಳು ಅವರ ಬಾಳಿನ ಉದ್ದೇಶವಾಗಿರದೆ ಅವರ ಜೀವನ ಕ್ರಮವೇ ಅದಾಗಿರುತ್ತದೆ.

ಏಂಜೆಲಿನಾ ಕಾಸಿರಗಿ ಅವರು ಮೂಲತಃ ಇಟಲಿ ದೇಶದವರು. ಆದರೆ ಅವರು ತಮ್ಮ ಕರ್ಮಭೂಮಿಯನ್ನಾಗಿ ಆಯ್ಕೆ ಮಾಡಿಕೊಂಡದ್ದು ಕರ್ನಾಟಕದ ಧಾರವಾಡವನ್ನು! ಧಾರವಾಡದ ಬಡವರಿಗೆ, ದೀನ ದಲಿತರಿಗೆ ಸೇವೆ ಸಲ್ಲಿಸುತ್ತಾ ದೊಡ್ಡಮ್ಮ' ನಾದವರು! ಎತ್ತಣಿಂದೆತ್ತ ಸಂಬಂಧವಯ್ಯಾ! ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು, ಇಲ್ಲಿಯವರನ್ನೇ ಶೋಷಿಸಿ ತಮ್ಮ ಭಂಡಾರ ತುಂಬಿಸಿಕೊಂಡು ಮೆರೆಯುವವರ ಮಧ್ಯೆ, ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ಜೀವ ಇಲ್ಲಿಯವರ ಜೀವಕ್ಕಾಗಿ ತುಡಿಯುವುದನ್ನು ನೋಡಿದಾಗ, ಇವರನ್ನು ರೂಪಿಸಿರುವ ಮತ್ತು ಇವರ ಕೈಹಿಡಿದು ನಡೆಸುವ ಆ ಅಂತಃಸತ್ವವಾದರೂ ಎಂತಹುದು, ಎಲ್ಲಿಯದು ಎನಿಸದೆ ಇರಲಾರದು. ಸಣ್ಣ ವಯಸ್ಸಿನಲ್ಲೆ ತನ್ನ ತಾಯ್ನೆಲವನ್ನು ತೊರೆದು ಏಂಜಲಿನಾ ಕಾಸರಗಿ ಅವರು 1955 ರಲ್ಲಿ ಭಾರತಕ್ಕೆ ಬಂದರು. ಜನ ಸೇವೆಯೇ ಜನಾರ್ದನ ಸೇವೆ ಎಂದು ಅದರಂತೆ ನಡೆದುಕೊಂಡರು. ತಮ್ಮ ಕೊನೆಯ ಉಸಿರು ಇರುವವರೆಗೂ ಜನ ಸೇವೆಯಲ್ಲಿ ತೊಡಗಿದ್ದರು. ಭಾರತಕ್ಕೆ ಬಂದ ನಂತರ, ಮೊದಲಿಗೆ ಇವರು, ಮಂಗಳೂರಿನ ಜೆಪ್ಪು ಎಂಬಲ್ಲಿ ಒಂದು ವರ್ಷ ಕೆಲಸ ಮಾಡಿದರು. ಆ ನಂತರ, ಹೈದರಾಬಾದಿನ ವಿಜಯಮೇರಿ ಆಸ್ಪತ್ರೆಯಲ್ಲಿ ಎರಡು ವರ್ಷ ಕಾಲ ಕೆಲಸ ಮಾಡಿದರು. ಆ ನಂತರ ಅವರು ತಮ್ಮ ಉಳಿದ ಜೀವತಾವಧಿಯನ್ನು ಕಳೆದದ್ದು ಧಾರವಾಡದಲ್ಲಿ. ಇವರ ಬಗ್ಗೆ ಓದಿದಾಗ ಇವರಂತೆಯೇ ಅನ್ಯ ನೆಲದಲ್ಲಿ ಹುಟ್ಟಿ ಅಲ್ಲಿನ ತನ್ನವರನ್ನೆಲ್ಲ ತೊರೆದು ಭಾರತವನ್ನು ತಮ್ಮ ಕರ್ಮ ಭೂಮಿಯನ್ನಾಗಿ ಮಾಡಿಕೊಂಡ ಮದರ್ ತೆರೆಸಾ, ನಿವೇದಿತಾ ಅಂಥವರ ನೆನಪು ಬಾರದೇ ಇರದು.

ಉತ್ತರ ಮಸಿಡೋನಿಯಾದ ಈಗಿನ ರಾಜಧಾನಿ ಸ್ಕೋಪ್ಜೆ ಯಲ್ಲಿ ಹುಟ್ಟಿದ ಮದರ್ ತೆರೇಸಾ ತಮ್ಮ ಇಡೀ ಜೀವಮಾನವನ್ನು ಭಾರತದ ದೀನ ದಲಿತರ ಸೇವೆಗಾಗಿ ಮುಡಿಪಾಗಿಟ್ಟರು. ಭಾರತದ ಅತ್ಯುನ್ನತ ಪ್ರಶಸ್ತಿಯಾದ 'ಭಾರತ ರತ್ನ' ಪ್ರಶಸ್ತಿಗೆ ಮತ್ತು ವಿಶ್ದದ ಅತಿ ಪ್ರತಿಷ್ಠಿತ 'ನೊಬೆಲ್' ಪ್ರಶಸ್ತಿಗೆ ಭಾಜನರಾದರು. 1929 ರಲ್ಲಿ, ತಮ್ಮ 19ರ ಹರೆಯದಲ್ಲಿ ಭಾರತಕ್ಕೆ ಕಾಲಿಟ್ಟ ಮದರ್ ತೆರೇಸಾ, 1948 ರಲ್ಲಿ ಬಡವರ ಸೇವೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡರು. 1950 ರಲ್ಲಿ 'ಮಿಷನರೀಸ್ ಆಫ್ ಚ್ಯಾರಿಟಿ' ಸಂಸ್ಥೆಯನ್ನು ಪ್ರಾರಂಭಿಸಿ, 1997 ರಲ್ಲಿ, ಕೊನೆಯುಸಿರಿನ ತನಕ ಸೇವೆಯಲ್ಲಿ ತೊಡಗಿದ್ದರು. ಸಿಸ್ಟರ್ ನಿವೇದಿತಾ ಎಂದೇ ಖ್ಯಾತರಾದ ಮಾರ್ಗರೆಟ್ ಎಲಿಜಬತ್ ನೊಬೆಲ್ ಹುಟ್ಟಿದ್ದು 1867 ರಲ್ಲಿ, ಐರ್ಲೆಂಡಿನಲ್ಲಿ. 1895 ರಲ್ಲಿ ಸ್ವಾಮಿ ವಿವೇಕಾನಂದರನ್ನು ನಿವೇದಿತಾ ಭೇಟಿಯಾಗುತ್ತಾರೆ. ಅಲ್ಲಿಂದ ಕೊಲ್ಕತ್ತಾಗೆ ಬರುತ್ತಾರೆ. ವಿವೇಕಾನಂದರು ಆಕೆಗೆ 'ನಿವೇದಿತಾ' (ದೇವರಿಗೆ ಸಮರ್ಪಿತಳಾದವಳು) ಎಂಬ ಹೆಸರನ್ನು ನೀಡುತ್ತಾರೆ. ನಿವೇದಿತಾ ಅವರನ್ನು ಭಾರತಕ್ಕೆ ಕರೆತಂದ ಮೂಲ ಉದ್ದೇಶ ಭಾರತದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ. ಆದರೆ ಆಕೆ, ಕೇವಲ ಅಷ್ಟಕ್ಕೆ ಸೀಮಿತಗೊಳ್ಳದೆ, ಬಡವರ ಸೇವೆಯಲ್ಲಿ, ಮಾನವೀಯ ಕಾಳಜಿಯಿಂದ ರೋಗಿಗಳ ಶುಶ್ರೂಷೆಯಲ್ಲಿಯೂ ತೊಡಗಿಕೊಂಡರು. ಭಾರತದ ರಾಜಕಾರಣದಲ್ಲಿ ಸಕ್ರಿಯವಾದ ಪಾತ್ರವನ್ನೂ ವಹಿಸಿದರು.

ಇವರೆಲ್ಲರ ಈ ಮಾನವೀಯತೆಯ ತುಡಿತದ ಹಿಂದೆ ಇರುವುದು ಅವರು ತಮ್ಮ ಬಾಲ್ಯದಲ್ಲಿ ತಮ್ಮ ತಂದೆ ತಾಯಿಯರಿಂದ ಮೈಗೂಡಿಸಿಕೊಂಡಿದ್ದ ಮೌಲ್ಯಗಳು, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ಗುಣ, ದೀನ ದಲಿತರರನ್ನು ಉದ್ಧರಿಸುವ ಮನೋಭಾವ, ಭೇದಭಾವವೆಸಗದೆ ಎಲ್ಲರನ್ನೂ ತನ್ನವರೆಂದು ಕಂಡು ಮಿಡಿಯುವ ಮನಸ್ಸು. ಇದೇ ಮನೋಭಾವವೇ ತಾವು ಹುಟ್ಟಿದ ನೆಲವನ್ನು ತೊರೆದು ಬಂದು, ಅವರನ್ನು ಸೇವಾ ಕೈಂಕರ್ಯಕ್ಕೆ ತೊಡಗಿಸಿದುದರ ಹಿಂದೆ ಇದ್ದ ಶಕ್ತಿ. 1955 ರಲ್ಲಿ ಭಾರತಕ್ಕೆ ಬಂದ ಏಂಜಲಿನಾ ಅವರು, 1958ರ ಫೆಬ್ರವರಿಯಲ್ಲಿ, ಇಬ್ಬರು ಸಿಸ್ಟರ್ ಗಳ ಜೊತೆಗೂಡಿ ಒಂದು ಸಣ್ಣ ಔಷಧಾಲಯವನ್ನು ಪ್ರಾರಂಭಿಸುವ ಮೂಲಕ ಧಾರವಾಡದಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಇದೇ ಇಂದು `ಅವರ್ ಲೇಡಿ ಆಫ್ ಲೌರ್ಡ್ಸ್ ಚ್ಯಾರಿಟಬಲ್ ಹಾಸ್ಪಿಟಲ್’ ಎಂಬ ಹೆಸರಿನ ದೊಡ್ಡ ಆಸ್ಪತ್ರೆಯಾಗಿ ಬೆಳೆದಿದೆ. ಜನರ ಅಗತ್ಯಗಳಿಗೆ ಸ್ಪಂದಿಸುತ್ತಾ ಹೊರ ರೋಗಿಗಳಿಗೆ ಹಾಗೂ ಒಳ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಮಥ್ರ್ಯವನ್ನು ಹೆಚ್ಚಿಸಿಕೊಂಡಿದೆ. ಆರೋಗ್ಯ ಸಮಸ್ಯೆಯ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಖಾಯಿಲೆಗಳಿಗೆ ಚಿಕಿತ್ಸೆ ನೀಡಬಲ್ಲ ಪರಿಣತ ತಜ್ಞ ವೈದ್ಯರನ್ನು ಹೊಂದಿರುವ ಆಸ್ಪತ್ರೆಯಾಗಿ ಬೆಳೆದಿದೆ. ರೋಗಿಗಳಿಗೆ, ದುಃಖಿತರಿಗೆ, ತೊಂದರೆಗೆ ಒಳಗಾದವರಿಗೆ, ಸಾಂತ್ವನ, ಸಮಾಧಾನ ಹಾಗೂ ಆರೈಕೆ ಮಾಡುತ್ತಾ, ದೇವರು ದಯಾಮಯನೆಂದು ತಿಳಿಸುತ್ತಾ, ಅವರಲ್ಲಿ ಧೈರ್ಯ ತುಂಬುತ್ತಾ ಅವರಲ್ಲಿ ಒಬ್ಬರಾಗಿ, ಏಂಜಲಿನಾ ಅವರು ತಮ್ಮ ಸೇವೆಯನ್ನು ಮುಂದುವರಿಸಿದರು. ಅವರಿಂದ ದೊಡ್ಡಮ್ಮ ' ಎಂದು ಕರೆಸಿಕೊಂಡರು. ಧರ್ಮದ ಬೆಂಬಲದೊಡನೆ ಸಂಘಟಿತರಾಗಿ, ಸಮಾಜದ ರೋಗಿಗಳು, ಬಡವರು, ಶೋಷಿತರ ಸೇವೆಯಲ್ಲಿ ತೊಡಗಿಸಿಕೊಂಡ ಕ್ರಿಶ್ಚಿಯನ್ ಧರ್ಮಾನುಯಾಯಿಗಳು ತಮ್ಮ ತಮ್ಮ ಸಂಘಗಳನ್ನುಸಿಸ್ಟರ್ಸ್ ಆಫ್ ಚ್ಯಾರಿಟಿ’ ಎಂದು ಗುರುತಿಸಿಕೊಳ್ಳುತ್ತಾರೆ. ಅನೇಕ ದೇಶಗಳಲ್ಲಿ ಇಂಥ ಸಂಸ್ಥೆಗಳಿವೆ.

ಇಟಲಿಯಲ್ಲಿ, ಸಿಸ್ಟರ್ಸ್ ಆಫ್ ಚ್ಯಾರಿಟಿ' ಎಂಬ ಸಂಸ್ಥೆ 1932 ರಲ್ಲಿ ಪ್ರಾರಂಭವಾಯಿತು. ಅದನ್ನು ಪ್ರಾರಂಭಿಸಿದವರು, ಬಾರ್ತೊಲೋಮಿಯಾ ಕ್ಯಾಪಿತಾನಿಯೋ ಎಂಬ ಸಾಧಾರಣ ಕುಟುಂಬದ ಯುವತಿ ಹಾಗೂ ಕ್ಯಾಥರೀನ್ ಗೆರೋಸಾ ಎಂಬ ಶ್ರೀಮಂತ ಕುಟುಂಬದ ಹೆಣ್ಣುಮಗಳು. ಬಾರ್ತೊಲೋಮಿಯಾ ಕ್ಯಾಪಿತಾನಿಯೋ ಅವರಿಗೆ 18 ವರ್ಷವಾಗಿದ್ದಾಗಲೇ ಅವರಿಗೆ ಧರ್ಮ ಪ್ರಚಾರಕ್ಕೆ ತನ್ನನ್ನು ಅರ್ಪಿಸಿಕೊಳ್ಳಬೇಕೆಂಬ ಅಂತಃ ಪ್ರೇರಣೆಯಾಯಿತಂತೆ. ಹಾಗಾಗಿ ಆ ಪ್ರಯತ್ನದಲ್ಲಿ, ಅಗತ್ಯವಿರುವವರಿಗೆ ಸಹಾಯ ಹಸ್ತ ನೀಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅದೇ ಸಮಯಕ್ಕೆ ಯೋಗಾಯೋಗವೆಂಬಂತೆ, ಶ್ರೀಮಂತ ಉದ್ಯಮಿ ಕುಟುಂಬದ ಕ್ಯಾಥರೀನ್ ಗೆರೋಸಾ ಎಂಬಾಕೆ ತನ್ನ ಕುಟುಂಬದವರನ್ನು ಒಬ್ಬೊಬ್ಬರನ್ನಾಗಿ ಕಳೆದುಕೊಂಡರು. ಇದರ ಪರಿಣಾಮವಾಗಿ, ಕುಟುಂಬದ ಹಣವನ್ನು ಬಳಸಿ, ಬಡ ಹೆಣ್ಣುಮಕ್ಕಳಿಗೆ, ಅವರ ಜೀವನದ ಮಟ್ಟವನ್ನು ಸುಧಾರಿಸಿಕೊಳ್ಳಲು ಅಗತ್ಯವಾದ ಸಾಮುದಾಯಿಕ ಕೆಲಸಗಳಲ್ಲಿ ತರಬೇತಿ ಕೊಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಸಮಾನ ಮನಸ್ಕರಾದ ಇವರಿಬ್ಬರೂ ಸೇರಿ ವೈದ್ಯಕೀಯ ನೆರವನ್ನು ಪಡೆಯಲು ಅಶಕ್ತರಾದವರಿಗಾಗಿ ಆಸ್ಪತ್ರೆಯನ್ನು ಪ್ರಾರಂಭಿಸಲು ನಿರ್ಧರಿಸಿದರು. ಇದನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ನಂತರ, ಅದೇ ಉತ್ಸಾಹದಲ್ಲಿ, ಅನಾರೋಗ್ಯ ಪೀಡಿತರಿಗೆ ಉಚಿತ ವೈದ್ಯಕೀಯ ನೆರವು, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಕ್ರಿಶ್ಚಿಯನ್ ಅನಾಥಾಲಯಗಳು ಮತ್ತು ಯುವ ಕಲ್ಯಾಣ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ 1824 ರಲ್ಲಿ `ಸಿಸ್ಟರ್ಸ್ ಆಫ್ ಚ್ಯಾರಿಟಿ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. 1832 ರಲ್ಲಿ ಅದಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಹೀಗೆ ಪ್ರಾರಂಭವಾದ ಸಂಸ್ಥೆಯ ಕೆಲಸದಲ್ಲಿ ಅನೇಕಾನೇಕರು ಕೈಜೋಡಿಸಿದರು. 19ನೇ ಶತಮಾನದಲ್ಲಿ ವ್ಯಾಪಕವಾಗಿ ಕಾಲರಾ ರೋಗ ಹರಡಿ ಜನರು ಕಂಗೆಟ್ಟಾಗ, ಯುದ್ಧಗಳಿಂದಾಗಿ ನೊಂದು ಬೆಂದ ಜನರು ನೆರವಿಗಾಗಿ ಹಾತೊರೆಯುತ್ತಿದ್ದಾಗ, ಈ ಸಂಸ್ಥೆಯ ಸದಸ್ಯರು ಬೌಗೋಳಿಕ ಗಡಿಯನ್ನೂ ಮೀರಿ ಸಹಾಯ ಹಸ್ತ ಚಾಚಲು ಮುಂದಾದರು. 1864ರ ಹೊತ್ತಿಗೆ ತಮ್ಮ ಸೇವಾ ಕಾರ್ಯವನ್ನು ಭಾರತಕ್ಕೂ ವಿಸ್ತರಿಸಿದರು.

ಧಾರವಾಡದಲ್ಲಿ ಈ ಆಸ್ಪತ್ರೆಯನ್ನು ಪ್ರಾರಂಭಿಸಬೇಕೆಂಬ ಉದಾತ್ತ ಕಲ್ಪನೆ ಮೊದಲಿಗೆ ಮೊಳೆತದ್ದು, ಇಟಲಿಯ ಈ `ಸಿಸ್ಟರ್ಸ್ ಆಫ್ ಚ್ಯಾರಿಟಿ’ ಸಂಸ್ಥೆಗೆ. ಈ ಸಂಸ್ಥೆಗೆ ಸೇರಿದ ಮಿಸ್ ಗಟ್ರ್ರೂಡ್ ಫರ್ನಾಂಡಿಸ್ ಅವರಲ್ಲಿ. ಇದಕ್ಕೆ ಉದಾರವಾಗಿ ಹಣ ಸಹಾಯ ಮಾಡುವ ಮೂಲಕ ಆಸ್ಪತ್ರೆಯ ಬೆಳವಣಿಗೆಗೆ ಕಾರಣರಾದರು. ಹೀಗೆ ಸಣ್ಣದಾಗಿ ಪ್ರಾರಂಭವಾದ ಚಿಕಿತ್ಸಾಲಯ ಇಂದು ರೋಗಿಗಳ ಸೇವೆಗೆ ಕಟಿಬದ್ಧವಾದ ಆಸ್ಪತ್ರೆಯಾಗಿ ವಿಸ್ತಾರವಾಗಿ ಬೆಳೆದು ನಿಂತಿದೆ. 2011 ರ ಅಂಕಿ ಅಂಶಗಳ ಪ್ರಕಾರ, ಆ ವರ್ಷ ಇಲ್ಲಿ 8072 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ ಮತ್ತು 42,255 ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಇದು ಒಂದು ವರ್ಷದ ಅಂಕಿ ಅಂಶ!
ಭಾರತದಲ್ಲಿ ಅನೇಕ ಕ್ರಿಶ್ಚಿಯನ್ ಮಿಷನರಿಗಳು ಹುಟ್ಟು ಹಾಕಿದ ಆಸ್ಪತ್ರೆಗಳು ಬಡಬಗ್ಗರ ಕಷ್ಟಗಳಿಗೆ ಸ್ಪಂದಿಸುತ್ತಾ, ಅವರಿಗೆ ಉತ್ತಮ ಮಟ್ಟದ ಚಿಕಿತ್ಸೆ ನೀಡುತ್ತಾ ಅವರ ಜೀವನವನ್ನು ಸಹನೀಯವಾಗಿಸಲು ನೆರವಾಗುತ್ತಾ ಬಂದಿವೆ. ಅವರು ಇಲ್ಲಿಯ ಜನರೊಂದಿಗೆ ಬೆರೆತುಹೋಗಿದ್ದಾರೆ. ಧರ್ಮ ಭೇದವಿಲ್ಲದೆ ರೋಗಿಗಳ ಸೇವೆಯಲ್ಲಿ ತೊಡಗಿದ್ದಾರೆ. ಮನುಜರಲ್ಲಿ ಯಾವುದೇ ಭೇದಭಾವವೆಣಿಸದೆ ಅವರ ಸೇವೆಯಲ್ಲಿ ತೊಡಗುವ ಮಾನವತಾವಾದಿಗಳೇ ಎಂದಿಗೂ ಮಾನವತೆಯಲ್ಲಿ ನಂಬಿಕೆಯನ್ನು ಉಳಿಸುವವರು ಮತ್ತು ಮಾನವೀಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿ ನೀಡುವವರು.

1955 ರಲ್ಲಿ ಭಾರತಕ್ಕೆ ಬಂದ ಏಂಜಲಿನಾ ಅವರು, 2011ರ ಆಗಸ್ಟ್ 11 ರಂದು ಅವರು ಕೊನೆಯುಸಿರೆಳೆದಾಗ, ಅಲ್ಲಿ ಸೇರಿದ ಜನ ಸಮೂಹ, ವ್ಯಕ್ತವಾದ ಭಾವುಕತೆ, ಅವರಿಗೆ ನೀಡಿದ ವಿದಾಯ ಅವರ ನಿಃಸ್ವಾರ್ಥ ಸೇವೆಗೆ ಜನರೇ ನೀಡಿದ ಅತಿ ದೊಡ್ಡ ಪ್ರಶಸ್ತಿಯಾಗಿತ್ತು.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *