ಪದ್ಮಪ್ರಭೆ/ ಉನ್ನತ ಗೌರವ ಪಡೆದ ಸಾಧಕಿಯರು – ಡಾ. ಗೀತಾ ಕೃಷ್ಣಮೂರ್ತಿ

ಭಾರತ ರತ್ನ ಗೌರವಕ್ಕೆ ಇದುವರೆಗೆ ಐವರು ಮಹಿಳೆಯರು ಭಾಜನರಾಗಿದ್ದಾರೆ. ಇಂದಿನ ವೇಗದ ಯುಗದಲ್ಲಿ “ಸಕ್ಸೆಸ್ ಹ್ಯಾಸ್ ನೋ ಷಾರ್ಟ್‍ಕಟ್ಸ್” ಎಂಬುದರ ಅರಿವು ಮೂಡಬೇಕಾದರೆ ಮಹಿಳೆಯರು ತಮ್ಮ ಸಾಧನೆಯ ಹಾದಿಯಲ್ಲಿ ಕ್ರಮಿಸಿದ ರೀತಿಯನ್ನು ಅರಿಯುವುದು ಅತ್ಯಂತ ಮುಖ್ಯವಾಗುತ್ತದೆ. ಮಹಿಳೆಯರ ಹೋರಾಟವನ್ನು, ಅವರ ಸಾಧನೆಗಳನ್ನು ದಾಖಲಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಅವಶ್ಯಕವಾಗಿದೆ. ಈ ದಿಸೆಯಲ್ಲಿ ಪದ್ಮ ಪ್ರಶಸ್ತಿಗಳನ್ನು ಪಡೆದಿರುವ ಕರ್ನಾಟಕದ ಸಾಧಕಿಯರನ್ನು ನಮಗೆ ನಾವೇ ಪರಿಚಯ ಮಾಡಿಕೊಳ್ಳುವ ಪ್ರಯತ್ನ ಈ ಅಂಕಣದ್ದು.

ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಪುರುಷರಿಗಷ್ಟೇ ಸೀಮಿತ ಎಂದು ಭಾವಿಸಿದ್ದ ಕ್ಷೇತ್ರಗಳಿಗೂ ಪ್ರವೇಶ ಪಡೆದು ತಮ್ಮ ಕ್ಷಮತೆಯನ್ನು ರುಜುವಾತು ಪಡಿಸುತ್ತಿದ್ದಾರೆ. ಮಹಿಳೆಗೆ ದೊರೆತಿರುವ ಈ ಅವಕಾಶಗಳ ಹಿಂದೆ ಅನೇಕ ವರ್ಷಗಳ ಹೋರಾಟವಿದೆ. ಅನೇಕ ಮಹಿಳೆಯರ ತ್ಯಾಗವಿದೆ. ಅನೇಕ ಪುರುಷ ಸಮಾಜ ಸುಧಾರಕರ ಮುಂಗಾಣ್ಕೆಯಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರು ನಾಲ್ಕು ಗೋಡೆಗಳಿಂದ ಹೊರ ಬಂದು ಸ್ವಾತಂತ್ರ ಸಂಗ್ರಾಮದ ಮಹಾ ಹೋರಾಟದಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೆ ಅವಕಾಶ ನೀಡಿದ ಮಹಾತ್ಮ ಗಾಂಧೀಜಿಯವರ ದಾರ್ಶನಿಕತೆಯಿದೆ. ಮಹಿಳೆಯರ ಈ ಹೋರಾಟವನ್ನು, ಅವರ ಸಾಧನೆಗಳನ್ನು, ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ದಾಖಲಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಅವಶ್ಯಕವಾಗಿದೆ.

ಇಂದಿನ ವೇಗದ ಯುಗದಲ್ಲಿ “ಸಕ್ಸೆಸ್ ಹ್ಯಾಸ್ ನೋ ಷಾರ್ಟ್‍ಕಟ್ಸ್” ಎಂಬುದರ ಅರಿವು ಮೂಡಬೇಕಾದರೆ ಸಾಧಕ ಮಹಿಳೆಯರು ತಮ್ಮ ಸಾಧನೆಯ ಹಾದಿಯಲ್ಲಿ, ಪ್ರಶಸ್ತಿ ಪುರಸ್ಕಾರಗಳ ಹಂಬಲವಿಲ್ಲದೆ, ಕ್ರಮಿಸಿದ ರೀತಿಯನ್ನು ಅರಿಯುವುದು ಅತ್ಯಂತ ಮುಖ್ಯವಾಗುತ್ತದೆ. ಅವರ ಸಾಧನೆಗೆ ಪ್ರಶಸ್ತಿ ಪುರಸ್ಕಾರಗಳ ಹಂಬಲ ಕಾರಣವಾಗದಿದ್ದರೂ, ಪ್ರಶಸ್ತಿ ಪುರಸ್ಕಾರಗಳು ಅವರ ಕೃಷಿಗೆ ಮತ್ತಷ್ಟು ಇಂಬು ಕೊಡುತ್ತದೆ ಎಂಬುದನ್ನು ಅಲ್ಲಗಳೆಯಲಾಗದು. ಅದಕ್ಕಿಂತ ಹೆಚ್ಚಾಗಿ, ಅವು ಮತ್ತಷ್ಟು ಎಳೆಯ ಪ್ರತಿಭೆಗಳಿಗೆ ಸ್ಪೂರ್ತಿಯನ್ನು ನೀಡುತ್ತದೆ ಎಂಬುದಂತೂ ನಿಜ. ಯಾವುದೇ ಪ್ರಶಸ್ತಿಯನ್ನು ಅಥವಾ ಪುರಸ್ಕಾರವನ್ನು ನೀಡುವ ಹಿಂದಿರುವ ನಿಜವಾದ ಉದ್ದೇಶವೂ ಇದೇ! ಈ ಹಿನ್ನೆಲೆಯಲ್ಲಿ, ರಾಷ್ಟ್ರ ಪ್ರಶಸ್ತಿಗಳಾದ ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮ ಶ್ರೀ ಪ್ರಶಸ್ತಿಗಳು ನಾಗರಿಕ ಸೇವೆಗಾಗಿ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಗಳು. ಈ ಪ್ರಶಸ್ತಿಗಳನ್ನು ಪಡೆದಿರುವ ಕರ್ನಾಟಕದ ಮಹಿಳಾ ಸಾಧಕಿಯರನ್ನು ಪರಿಚಯ ಮಾಡಿಸುವ ಮೂಲಕ ನಮಗೆ ನಾವೇ ಅವರ ಪರಿಚಯ ಮಾಡಿಕೊಳ್ಳುವ ಪ್ರಯತ್ನ ಈ ಅಂಕಣದ್ದು.

ನಮ್ಮ ನಡುವೆಯೇ ನಾವರಿಯದ ಅದೆಷ್ಟು ಮಂದಿ ಮಹಿಳಾ ಸಾಧಕಿಯರಿದ್ದಾರೆ! ಈ ಯಾವುದೇ ಪ್ರಶಸ್ತಿಯೂ, ಅವಳಿಗೆ ‘ಇವಳು ಮಹಿಳೆ’ ಎಂಬ ಕಾರಣಕ್ಕೆ ತಳಿಗೆಯಲ್ಲಿಟ್ಟು ನೀಡಿದ ಪ್ರಶಸ್ತಿಯಲ್ಲ. ಇದನ್ನು ಅವರು ತಮ್ಮ ಶ್ರಮವರಿಯದ ಛಲ, ಏಕಾಗ್ರತೆ, ಏಕ ನಿಷ್ಠ ಗುರಿ ಮತ್ತು ಆ ಗುರಿಯನ್ನು ತಲುಪಬೇಕೆಂಬ ಸಂಕಲ್ಪದಿಂದ ಮಾಡಿದ ಸಾಧನೆಯ ಫಲವಾಗಿ ಪಡೆದ ಪುರಸ್ಕಾರಗಳು- ಈ ಪ್ರಶಸ್ತಿಗಳು.

ಶತಮಾನಗಳ ಕಾಲ ಮಹಿಳೆಯರು ಸಮಾನಾವಕಾಶಗಳಿಂದ ವಂಚಿತರಾಗಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಹೊರ ಜಗತ್ತಿಗೆ ತೆರೆದುಕೊಂಡ ಮಹಿಳೆಯರು ಆ ನಂತರದಲ್ಲಿ ಸಾವಿತ್ರಿ ಬಾಯಿ ಫುಲೆ ಅವರಂಥ ಸಮಾಜ ಸುಧಾರಕ ಮಹಿಳೆಯರಿಂದಾಗಿ ಶಿಕ್ಷಣ ಸೌಲಭ್ಯವನ್ನು ಪಡೆಯುವಂತಾಯಿತು. ಅಕ್ಷರ ಜ್ಞಾನ ಮತ್ತು ಶಿಕ್ಷಣದಿಂದಾಗಿ ಜಗತ್ತಿನಾದ್ಯಂತ ತಮ್ಮ ಹಕ್ಕುಗಳಿಗಾಗಿ ಮತ್ತು ಸಮಾನಾವಕಾಶಗಳಿಗಾಗಿ ನಡೆಯುತ್ತಿರುವ ಮಹಿಳಾ ಹೋರಾಟಗಳ ಅರಿವು ಅವರಿಗೆ ಆಗತೊಡಗಿತು. ನಿಧಾನವಾಗಿ ಬದಲಾವಣೆಯ ಗಾಳಿ ಬೀಸತೊಡಗಿತು. ಇಷ್ಟಾಗಿಯೂ ಇಂದಿಗೂ ನಮ್ಮದು ಪುರುಷ ಪ್ರಧಾನ ಸಮಾಜವೇ! ಯಾವುದೇ ಕ್ಷೇತ್ರದಲ್ಲಿ ಯಾವುದೇ ಸಾಧನೆ ಮಾಡಬೇಕಾದರೂ ಈ ಪುರುಷ ಪ್ರಧಾನ ಸಮಾಜ ಒಡ್ಡುವ ಸವಾಲುಗಳನ್ನು ಎದುರಿಸುತ್ತಲೇ, ಅದು ವಿಧಿಸುವ ಪರಿಮಿತಿಗಳನ್ನು ದಾಟುವ ಧೈರ್ಯ ತೋರುತ್ತಲೇ, ಅಲ್ಲಿರುವ ಸೀಮಿತ ಅವಕಾಶಗಳ ನಡುವಿನಿಂದಲೇ ಮಾಡ ಬೇಕಾಗುತ್ತದೆ ಎಂಬುದನ್ನು ಸತ್ಯವೆಂದು ಯಾರಾದರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಮಹಿಳೆಯರ ಯಾವುದೇ ಕ್ಷೇತ್ರದಲ್ಲಿನ ಯಾವುದೇ ಸಾಧನೆ ದಾಖಲೆ ಯೋಗ್ಯ ಸಾಧನೆಯಾಗುತ್ತದೆ, ಆಗಬೇಕು.

ಭಾರತದ ಅತಿ ಶ್ರೇಷ್ಠ ವಿಜ್ಞಾನಿ, ಭಾರತದ ‘ಮಿಸೈಲ್ ಮ್ಯಾನ್’ ಎಂದೇ ಪ್ರಸಿದ್ಧರಾದ, ಭಾರತದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ, ಭಾರತ ರತ್ನ ಪ್ರಶಸ್ತಿಗೆ ಭಾಜನರಾದ, ಎಲ್ಲಕ್ಕಿಂತ ಹೆಚ್ಚಾಗಿ, ಮಾನವ ಪ್ರೀತಿಯುಳ್ಳ, ಅತಿ ಶ್ರೇಷ್ಠ ಮನುಷ್ಯ ಎನಿಸಿಕೊಂಡಿದ್ದ ಏ.ಪಿ.ಜೆ ಅಬ್ದುಲ್ ಕಲಾಂ ಅವರು ಹೇಳುವ ಈ ಮಾತುಗಳನ್ನು ನೋಡಿ-
‘ಸಪ್ನೆ ಓ ನಹೀ ಜೋ ಆಪ್ ಸೋತೇ ಹುಎ ದೇಖತೆ ಹೈ,
ಸಪ್ನೆ ಓ ಹೈ ಜೋ ಆಪ್ ಕೋ ಸೋನೇ ನಹೀ ದೇತಾ’
ಕಲಾಂ ಅವರು ಹೇಳಿದಂತೆ, ಸಾಧಕಿಯರು ಕಂಡ ಕನಸುಗಳು ಮತ್ತು ಅವುಗಳನ್ನು ನನಸು ಮಾಡಿಕೊಳ್ಳಬೇಕೆಂಬ ಛಲವೇ ಅವರೆಲ್ಲರ ಸಾಧನೆಯ ಹಿಂದಿನ ಶಕ್ತಿ ಎನ್ನಿಸುತ್ತದೆ.

‘ಭಾರತ ರತ್ನ’, ಮತ್ತು ಪದ್ಮ ಪ್ರಶಸ್ತಿಗಳು ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಗಳು. ‘ಭಾರತ ರತ್ನ’ ಪ್ರಶಸ್ತಿ, ಯಾವುದೇ ಕ್ಷೇತ್ರದಲ್ಲಿ ವ್ಯಕ್ತಿ ಸಲ್ಲಿಸಿದ ಅತ್ಯುತ್ಕøಷ್ಟ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಕೊಡುವ ಅತ್ಯುನ್ನತ ಪ್ರಶಸ್ತಿ. ಪದ್ಮ ಪ್ರಶಸ್ತಿಗಳು ಮೂರು, ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮ ಶ್ರೀ. ಇವು ಕ್ರಮವಾಗಿ ಭಾರತ ರತ್ನ ಪ್ರಶಸ್ತಿಯ ನಂತರದ ಹಂತದ ಪ್ರಶಸ್ತಿಗಳು.

ಪ್ರಶಸ್ತಿ ಪ್ರದಾನ, ಯಾವುದೇ ಕ್ಷೇತ್ರದಲ್ಲಿ ಅತ್ಯುತ್ಕøಷ್ಟ ಸೇವೆ ಸಲ್ಲಿಸಿದ ಅಥವಾ ಅತ್ಯುನ್ನತ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ, ಮೆಚ್ಚುಗೆ ವ್ಯಕ್ತ ಪಡಿಸಿ, ಅವರು ಮಾಡಿದ ಸೇವೆಗೆ/ಸಾಧನೆಗೆ ರಾಷ್ಟ್ರದ ಪರವಾಗಿ ಧನ್ಯವಾದ ಅರ್ಪಿಸುವ ಅಥವಾ ಮೆಚ್ಚುಗೆ ಸೂಚಿಸುವ ರೀತಿ. ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ಜನವರಿ 26 ರಂದು ಆಚರಿಸುವ ಗಣರಾಜ್ಯ ದಿನಾಚರಣೆಯ ಸಂದರ್ಭದಲ್ಲಿ ಘೋಷಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿಯವರು ಪ್ರದಾನ ಮಾಡುತ್ತಾರೆ.

ಪ್ರಶಸ್ತಿ ಪುರಸ್ಕಾರಗಳು ಅದನ್ನು ಸ್ವೀಕರಿಸಿದ ವ್ಯಕ್ತಿಗೆ ಒಂದು ರೀತಿಯ ಆತ್ಮ ತೃಪ್ತಿಯನ್ನು ಹಾಗೂ ಧನ್ಯತಾ ಭಾವವನ್ನು ಕೊಡುತ್ತದೆ. ಪ್ರಶಸ್ತಿಯನ್ನು ಸ್ವೀಕರಿಸಿದವರಿಗೆ ಒಂದು ಸಾರ್ಥಕತೆಯ ಭಾವವನ್ನು ಉಂಟು ಮಾಡುವಂತೆಯೇ ಅದನ್ನು ಪ್ರದಾನ ಮಾಡಿದವರಿಗೂ ಮತ್ತು ಆ ಪ್ರಶಸ್ತಿಗೂ ಒಂದು ಗೌರವವನ್ನು ತಂದು ಕೊಡುತ್ತದೆ.

ಭಾರತದಲ್ಲಿ ‘ಭಾರತ ರತ್ನ’ ಮತ್ತು ಪದ್ಮ ಪ್ರಶಸ್ತಿಗಳನ್ನು ಪ್ರಾರಂಭ ಮಾಡಿದ್ದು 1954 ರ ಜನವರಿ 2 ರಂದು. ಮೊದಲಿಗೆ, ಕಲೆ, ಸಾಹಿತ್ಯ, ವಿಜ್ಞಾನ ಮತ್ತು ರಾಜಕಾರಣ ಕ್ಷೇತ್ರಗಳಲ್ಲಿ ಅತ್ಯುತ್ಕøಷ್ಟ ಸಾಧನೆಯನ್ನು ಮಾಡಿದವರನ್ನು ಗುರುತಿಸಿ ‘ಭಾರತ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿತ್ತು. 2011 ರ ಡಿಸೆಂಬರ್ ನಲ್ಲಿ ಎಲ್ಲ ಕ್ಷೇತ್ರಗಳನ್ನೂ ಇದರ ಪರಿಧಿಗೆ ತರಲಾಯಿತು.

ಇದುವರೆಗೆ 48 ಮಂದಿಯನ್ನು ಅವರವರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ‘ಭಾರತ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಈ ಪ್ರಶಸ್ತಿಯನ್ನು ಪ್ರಾರಂಭಿಸಿದ ಪ್ರಥಮ ವರ್ಷದಲ್ಲಿ, ಎಂದರೆ, 1954 ರಲ್ಲಿ, ಈ ಪ್ರಶಸ್ತಿಗೆ ಭಾಜನರಾದವರು ರಾಜಕಾರಣಿ, ಮುತ್ಸದ್ದಿ ಶ್ರೀ. ಸಿ. ರಾಜಗೋಪಾಲಾಚಾರಿ, ತತ್ವ ಶಾಸ್ತ್ರಜ್ಞ ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ವಿಜ್ಞಾನಿ ಸಿ.ವಿ.ರಾಮನ್ ಅವರುಗಳು. ಇಲ್ಲಿಯವರೆಗೆ ‘ಭಾರತ ರತ್ನ’ ಪ್ರಶಸ್ತಿಯನ್ನು ಸ್ವೀಕರಿಸಿದ ನಲವತ್ತೆಂಟು ವ್ಯಕ್ತಿಗಳ ಪೈಕಿ ಕರ್ನಾಟಕ್ಕೆ ರಾಜ್ಯಕ್ಕೆ ಸೇರಿದ ಮೂವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಆ ಮಹನೀಯರು, ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಪಂಡಿತ್ ಭೀಮಸೇನ್ ಜೋಷಿ ಹಾಗೂ ಡಾ. ಸಿ.ಎನ್.ಆರ್. ರಾವ್.
ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಸಿವಿಲ್ ಇಂಜಿನಿಯರ್ ಹಾಗೂ ಮುತ್ಸದ್ದಿ ಆಗಿದ್ದವರು. 1912-18 ರ ಅವಧಿಯಲ್ಲಿ ಮೈಸೂರಿನ ದಿವಾನರಾಗಿದ್ದವರು. ‘ನೈಟ್ ಕಮಾಂಡರ್ ಆಫ್ ದ ಆರ್ಡರ್ ಆಫ್ ದ ಇಂಡಿಯನ್ ಎಂಪೈರ್’ ಆಗಿದ್ದವರು. ಭಾರತದಾದ್ಯಂತ, ಪ್ರತಿ ವರ್ಷ ಸೆಪ್ಟೆಂಬರ್ 15 ನೇ ದಿನಾಂಕದಂದು, ಆ ದಿನವನ್ನು ‘ಇಂಜಿನಿಯರ್ಸ್ ಡೇ’ ಎಂದೇ ಆಚರಿಸಲಾಗುತ್ತದೆ.

2009 ರಲ್ಲಿ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಪಂಡಿತ್ ಭೀಮಸೇನ್ ಜೋಷಿ ಅವರು, ಭಾರತದಾದ್ಯಂತ ಪ್ರಸಿದ್ಧರಾದ ಕಿರಾಣಾ ಘರಾನಾ ಶೈಲಿಯ ಶಾಸ್ತ್ರೀಯ ಹಿಂದೂಸ್ತಾನಿ ಗಾಯಕರು. ಅವರ ಹಾಡುಗಾರಿಕೆಗೆ ಮಾರುಹೋದ ಸಹಸ್ರಾರು ಮಂದಿ ಜಗತ್ತಿನಾದ್ಯಂತ ಇದ್ದಾರೆ.

2014 ರಲ್ಲಿ ಈ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಮತ್ತೊಬ್ಬರು ಹೆಮ್ಮೆಯ ಪುತ್ರ ಡಾ|ಸಿಎನ್ನಾರ್. ರಾವ್. ರಸಾಯನ ಶಾಸ್ತ್ರಜ್ಞ, ಪ್ರಾಧ್ಯಾಪಕರು. ಪ್ರತಿಷ್ಠಿತ 63 ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿರುವವರು. ಇದುವರೆಗೆ ಸುಮಾರು, 1600 ಸಂಶೋಧನಾ ಲೇಖನಗಳನ್ನು ಹಾಗೂ 48 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಇದುವರೆಗೆ ಐವರು ಮಹಿಳೆಯರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು. ಇವರು ಯಾರೂ ಕರ್ನಾಟಕದವರಲ್ಲ. ಆದರೆ ಇವರ ಸಾಧನೆಗೆ ಭೌಗೋಳಿಕ ಮಿತಿ ಎಂಬುದಿಲ್ಲ. ಭಾರತದ ಪ್ರತಿಯೊಬ್ಬರೂ ಇವರೊಂದಿಗೆ ತಮ್ಮನ್ನು ಇವರು ‘ನನ್ನ ದೇಶದವರು’ ಎಂದು ಗುರುತಿಸಿಕೊಳ್ಳಲು ಹೆಮ್ಮೆ ಪಡುವಂಥ ಸಾಧಕಿಯರು ಇವರು. ಶ್ರೀಮತಿ ಇಂದಿರಾಗಾಂಧಿ(1971) (ಉತ್ತರ ಪ್ರದೇಶ), ಮದರ್ ತೆರೇಸಾ(1980) (ಪಶ್ಚಿಮ ಬಂಗಾಳ) (ಈಗ ಉತ್ತರ ಮೆಕೆಡೋನಿಯಾ ಎಂದು ಕರೆಯಲಾಗುವ ಸ್ಕಾಪ್ಜೆ ಎಂಬಲ್ಲಿ ಜನಿಸಿದವರು), ಅರುಣಾ ಅಸಫ್ ಆಲಿ(1992) (ಪಶ್ಚಿಮ ಬಂಗಾಳ), ವಿದುಷಿ ಎಂ.ಎಸ್. ಸುಬ್ಬಲಕ್ಷ್ಮಿ(1998) (ತಮಿಳು ನಾಡು) ಮತ್ತು ಲತಾ ಮಂಗೇಶ್ಕರ್ (2001) (ಮಹಾರಾಷ್ಟ್ರ). ಈ ಐವರು ಮಹಿಳೆಯರೂ ಅವರವರ ಕ್ಷೇತ್ರದಲ್ಲಿ, ಅವರಿಗೆ ಸಾಟಿಯೇ ಇಲ್ಲ ಎನ್ನುವಷ್ಟು ಸಾಧನೆಯನ್ನು ಮಾಡಿದವರು. ಅವರಿಗೆ ಭಾರತ ರತ್ನ ಪ್ರದಾನ ಮಾಡಿದುದರಿಂದ ಆ ಪ್ರಶಸ್ತಿಗೇ ಒಂದು ಗೌರವ ಪ್ರಾಪ್ತವಾಯಿತು ಎನ್ನಬಹುದು.
ನಂತರದ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮ ಶ್ರೀ ಪ್ರಶಸ್ತಿಗಳಿಗೆ ಕರ್ನಾಟಕದ ಅನೇಕ ಮಹಿಳೆಯರು ಪಾತ್ರರಾಗಿದ್ದಾರೆ. (Photo Credit: yourstory.com)

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *