ಪದ್ಮಪ್ರಭೆ/ ‘ಆಶ್ರಯ’ದಾತೆ ನೊಮಿತಾ ಚಾಂಡಿ – ಡಾ. ಗೀತಾ ಕೃಷ್ಣಮೂರ್ತಿ

ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಸಮಾಜ ಸೇವಕಿ ನೊಮಿತಾ ಚಾಂಡಿ ಅವರದು ಬಹುಮುಖೀ ಸಮಾಜ ಸೇವೆ – ಅನಾಥ ಮಕ್ಕಳಿಗೆ ನೆಲೆಯನ್ನು ಕಲ್ಪಿಸುವುದು, ‘ಮನೆ’ಯನ್ನು ದೊರಕಿಸುವುದು, ಎಳೆಯ ವಯಸ್ಸಿನ ಮಕ್ಕಳನ್ನು ನೋಡಿಕೊಳ್ಳಲು ಶಿಶು ಪಾಲನಾ ಕೇಂದ್ರ, ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಿದ್ದರೆ ಅವರಿಗೆ ಹತ್ತಿರದ ಶಾಲೆಯಲ್ಲಿ ಶಿಕ್ಷಣ ಸೌಲಭ್ಯ, ತಾಯಂದಿರಿಗೆ ವೃತ್ತಿ ತರಬೇತಿ ಪಡೆಯುವ ಅವಕಾಶ, ವಲಸೆ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ, ‘ಮಕ್ಕಳ ನಿಗಾವಣೆ ಕೇಂದ್ರ – ಹೀಗೆ ಅದರ ವಿಸ್ತಾರವಿದೆ.

1989 ರ ಒಂದು ದಿನ. ‘ಆಶ್ರಯ’ ಎಂಬ ಶಿಶು ಪಾಲನಾ ಮತ್ತು ದತ್ತಕ ಕೇಂದ್ರಕ್ಕೆ ಮಂಗಳೂರಿನ ಇಬ್ಬರು ನನ್‍ಗಳು ಕೈ ಕಾಲುಗಳು ಇಲ್ಲದ ಒಂದು ಮುದ್ದಾದ ಮಗುವನ್ನು ಕರೆತಂದಿದ್ದರು. ಅವರಿಗೆ ಗೊತ್ತಿತ್ತು ಅಂಥ ಆ ಮಗುವನ್ನು ನೋಡಿಕೊಳ್ಳಬಲ್ಲ ಕೇಂದ್ರ ಅದೊಂದೇ ಎಂದು. ಅವರ ನಿರೀಕ್ಷೆಯನ್ನು ಸುಳ್ಳಾಗಿಸದೆ ಆ ಮಗುವನ್ನು ಪ್ರೀತಿಯಿಂದ ಸ್ವೀಕರಿಸಿದವರು ಆ ಕೇಂದ್ರದ ಕಾರ್ಯದರ್ಶಿ ನೊಮಿತಾ ಚಾಂಡಿ. ಆ ಮಗುವಿನ ಹೆಸರು ಸ್ವಪ್ನಾ. ಸ್ವಪ್ನವೋ ಎಂಬಂತೆ ಆ ಮಗು ಸೇರಿದ್ದು ಫ್ಲೋರಿಡಾದಿಂದ ಬಂದಿದ್ದ ನರ್ಸ್ ಒಬ್ಬಾಕೆಯ ಮಮತೆಯ ಮಡಿಲನ್ನು, ಮಿಂಡಾ ಎಂಬ ಹೊಸ ಹೆಸರು ಪಡೆದು. ಅಮೆರಿಕಾದಿಂದ ಬಂದಿದ್ದ ಮೃದುಭಾಷಿಣಿಯಾದ ಆ ನರ್ಸ್ ಏಕ ಪೋಷಕಿಯಾಗಿ ಅನೇಕ ವಿಕಲಾಂಗ ಮಕ್ಕಳನ್ನು ದತ್ತಕಕ್ಕೆ ಪಡೆದು, ಅವರನ್ನು ಮಮತೆಯಿಂದ ಪೋಷಿಸಿ, ಆ ಮಕ್ಕಳಿಗೆ ಬಾಳು ನೀಡಿದವರು. ಸ್ವಪ್ನಾಳಿಗೆ ಬಹುಶಃ ಇದಕ್ಕಿಂತ ಉತ್ತಮ ಪೊರೆವ ಮಡಿಲು ದೊರೆಯುತ್ತಿರಲಿಲ್ಲವೇನೋ! ಈ ಕೇಂದ್ರದಿಂದ ಭಾರತದೊಳಗೆ ದತ್ತಕಕ್ಕೆ ಹೋದ ಮಕ್ಕಳ ಸಂಖ್ಯೆ 2000 ದಾಟಿದರೆ, ವಿದೇಶಗಳಿಗೆ ದತ್ತಕಕ್ಕೆ ಹೋಗಿ ಸಮಾಜದ ಮುಖ್ಯ ವಾಹಿನಿಗೆ ಸೇರಿದ ಮಕ್ಕಳ ಸಂಖ್ಯೆ ಸಾವಿರವನ್ನಾದರೂ ದಾಟುತ್ತದೆ. ಮಕ್ಕಳಿಗೆ ದತ್ತಕ ತಂದೆ ತಾಯಿಯರನ್ನು ಗುರುತಿಸಿ ಅನಾಥ ಮಕ್ಕಳಿಗೆ ಒಂದು ನೆಲೆಯನ್ನು ಕಲ್ಪಿಸುವುದು ನೊಮಿತಾ ಅವರು ತೊಡಗಿಸಿಕೊಂಡಿರುವ ಅನೇಕ ಸಾಮಾಜಿಕ ಕಾರ್ಯಕ್ರಮಗಳ ಪೈಕಿ ಒಂದು ಅಷ್ಟೇ! ‘ತಾಯ್ತಂದೆಯರಿಗೆ ಮಕ್ಕಳು, ಮಕ್ಕಳಿಗೆ ತಾಯ್ತಂದೆಯರು, ತಾಯ್ತಂದೆಯರಿಗೆ ಮಕ್ಕಳು. ಬೇಕು’ ಎಂಬುದು ಅವರ ಕಚೇರಿಯಲ್ಲಿ ಪ್ರದರ್ಶನಗೊಂಡಿರುವ ಘೋಷವಾಕ್ಯ.

ನೊಮಿತಾ ಚಾಂಡಿ, ‘ಆಶ್ರಯ’ ಸಂಸ್ಥೆಯ ಮೂಲಕ ನಿರ್ಗತಿಕ, ಅನಾಥ ಮಕ್ಕಳಿಗೆ ನೆಲೆ ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಸಮಾಜ ಸೇವಕಿ. ಇವರು ಹುಟ್ಟಿದ್ದು 1946 ರ ಆಗಸ್ಟ್ 21 ರಂದು. ಇವರ ತಂದೆ, ಭೂಸೇನಾ ವೈದ್ಯಕೀಯ ವಿಭಾಗದಲ್ಲಿ ಜನರಲ್, ಪತಿ ನೌಕಾ ಅಧಿಕಾರಿ. ನೊಮಿತಾ ಅವರ ಅತ್ತೆ ‘ಎಸ್‍ಒಎಸ್ ಚಿಲ್ಡ್ರನ್ಸ್ ವಿಲೇಜ್’ ಎಂಬ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷೆಯಾಗಿದ್ದರು. ಅವರ ಪ್ರಭಾವ ನೊಮಿತಾ ಅವರ ಮೇಲೆ ಗಾಢವಾಗಿತ್ತು. ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅವರೇ ಕಾರಣ ಎನ್ನುತ್ತಾರೆ. ಪತಿ ವರ್ಗಾವಣೆಯಾಗಿ ಹೋದೆಡಗಳಲ್ಲೆಲ್ಲಾ ಇವರು ಮಕ್ಕಳಿಗಾಗಿ ಸ್ವಯಂಸೇವಾ ಸಂಸ್ಥೆಯನ್ನು ಸ್ಥಾಪಿಸಿ ಮಕ್ಕಳ ಏಳ್ಗೆಗಾಗಿ ಶ್ರಮಿಸುತ್ತಿದ್ದರು. ಬೆಂಗಳೂರು, ವಿಶಾಖಪಟ್ಣಂ, ಪುಣೆ, ದೆಹಲಿ ಮತ್ತು ಲಂಡನ್‍ನಲ್ಲಿ ಖಾಸಗಿ ದತ್ತಕ ಕೇಂದ್ರಗಳನ್ನು ಸ್ಥಾಪಿಸಲು ಕಾರಣರಾದರು. ದೇಶದಲ್ಲಿ ದತ್ತಕ ಪ್ರಕ್ರಿಯೆಯಲ್ಲಿ ಇದ್ದ ಅನೇಕ ಅಡಚಣೆಗಳನ್ನು ನಿವಾರಿಸಲು ಅವಿರತವಾಗಿ ಶ್ರಮಿಸಿದರು.

‘ಆಶ್ರಯ’ ಎಂಬುದು ಸಮಾಜದ ನಿರ್ಗತಿಕ ಹಾಗೂ ಅನಾಥ ಮಕ್ಕಳ ಉನ್ನತೀಕರಣಕ್ಕಾಗಿ ಕಳೆದ ಮೂವತ್ತು ವರ್ಷಗಳಿಂದ ಶ್ರಮಿಸುತ್ತಿರುವ ಒಂದು ನೋಂದಾಯಿತ ಸರ್ಕಾರೇತರ ಸಂಸ್ಥೆ. ಇದನ್ನು 1982 ರಲ್ಲಿ ಸ್ಥಾಪಿಸಿದವರು ರಮಾ ಅನಂತ್ ಎಂಬ ಮಹಿಳೆ. ತನ್ನ ಇಬ್ಬರು ಗೆಳತಿಯರಾದ ನೊಮಿತಾ ಚಾಂಡಿ ಮತ್ತು ಶಾಂತಿ ಚಾಕೊ ಅವರೊಡನೆ ಸೇರಿ ಸ್ಥಾಪಿಸಿದ ಈ ಸಂಸ್ಥೆಯ ಮುಖ್ಯ ಉದ್ದೇಶ, ಬೆಂಗಳೂರಿನಲ್ಲಿ ಕಟ್ಟಡ ಕಾಮಗಾರಿಗಳಿಗಾಗಿ ಬೇರೆ ಊರುಗಳಿಂದ ವಲಸೆ ಬಂದು, ಕಟ್ಟಡ ನಿರ್ಮಾಣದಲ್ಲಿ ತೊಡಗುವ ಕೂಲಿ ಕಾರ್ಮಿಕರ ಮಕ್ಕಳ ಯೋಗಕ್ಷೇಮದ ಬಗ್ಗೆ ಗಮನ ಕೊಡುವುದಾಗಿತ್ತು. ನಂತರದ ವರ್ಷಗಳಲ್ಲಿ ಈ ಸಂಸ್ಥೆಯ ಕಾರ್ಯ ಕ್ಷೇತ್ರ ವಿಸ್ತಾರಗೊಂಡಿತು. ನಿರ್ಗತಿಕ ಅನಾಥ ಮಕ್ಕಳಿಗೆ ಒಂದು ಮನೆ ದೊರೆಯುವ ತನಕ ಆಶ್ರಯ ನೀಡುವುದು ಮತ್ತು ಮಕ್ಕಳಿಗಾಗಿ ಹಾತೊರೆಯುವ ಪೋಷಕರನ್ನು ಗುರುತಿಸಿ ಮಕ್ಕಳನ್ನು ಅವರಿಗೆ ವಿಧ್ಯುಕ್ತವಾಗಿ, ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ, ದತ್ತಕಕ್ಕೆ ನೀಡುವ ಮೂಲಕ ಅನಾಥ ಮಕ್ಕಳಿಗೆ ‘ಮನೆ’ಯನ್ನು ದೊರಕಿಸುವುದು ಸಹ ಅವರ ಕಾರ್ಯಕ್ಷೇತ್ರದ ಒಂದು ಭಾಗವಾಯಿತು.

ಒಂದು ಯಶಸ್ವಿ ದತ್ತಕ ಪ್ರಕ್ರಿಯೆ ಎಲ್ಲರಿಗೂ ಸಂತೋಷ ಕೊಡುವಂಥದ್ದು, ಒಬ್ಬರನ್ನು ಹೊರತುಪಡಿಸಿ, ಆ ಒಬ್ಬರೆಂದರೆ ಮಗುವನ್ನು ಹೆತ್ತ ತಾಯಿ, ಎನ್ನುತ್ತಿದ್ದರು ಚಾಂಡಿ. ಈ ಯೋಚನೆಯೇ ಅವರಿಗೆ ‘ತಾರಾ’ ಎಂಬ ಮತ್ತೊಂದು ಸಂಸ್ಥೆಯ ಸ್ಥಾಪನೆಗೆ ಪ್ರೇರಣೆ ನೀಡಿತು. ಮಕ್ಕಳನ್ನು ಸಾಕುವ ಶಕ್ತಿಯಿಲ್ಲದೆ ದತ್ತಕಕ್ಕೆ ಕೊಡುವ ಅನಿವಾರ್ಯತೆಗೆ ದೂಡಲ್ಪಟ್ಟ ಮಹಿಳೆಯರಿಗೆ, ತಮ್ಮ ಮಕ್ಕಳೊಡನೆ ಇರಲು ಆಶ್ರಯ ಕಲ್ಪಿಸಿ, ಆಪ್ತ ಸಮಾಲೋಚನೆಯ ಮೂಲಕ ಅವರ ಅತ್ಮಬಲವನ್ನು ಹೆಚ್ಚಿಸಿ, ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಅವರನ್ನು ಸಿದ್ಧಗೊಳಿಸುವ ಅನನ್ಯ ಉದ್ದೇಶದಿಂದ 1996 ರಲ್ಲಿ ಈ ಸಂಸ್ಥೆ ಪ್ರಾರಂಭವಾಯಿತು. ಸುಮಾರು ಮುನ್ನೂರು ಮಹಿಳೆಯರು ಇಲ್ಲಿ ಆಶ್ರಯ ಪಡೆದಿದ್ದಾರೆ. ಮಹಿಳೆಯರನ್ನು ಸಬಲಗೊಳಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇ±. ಎಳೆಯ ವಯಸ್ಸಿನ ಮಕ್ಕಳನ್ನು ನೋಡಿಕೊಳ್ಳಲು ಶಿಶು ಪಾಲನಾ ಕೇಂದ್ರ, ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಿದ್ದರೆ, ಅವರಿಗೆ ಹತ್ತಿರದ ಶಾಲೆಯಲ್ಲಿ ಶಿಕ್ಷಣ ಸೌಲಭ್ಯ, ತಾಯಂದಿರಿಗೆ ವೃತ್ತಿ ತರಬೇತಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ನೆಲಮಂಗಲದ ಬಳಿ ‘ಸುಧಾ’ ಎಂಬ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮೈಕ್ರೋ ಫೈನಾನ್ಸ್, ಸ್ವ ಸಹಾಯ ಗುಂಪುಗಳ ರಚನೆ ಮತ್ತು ಇತರ ವಿಷಯಗಳಲ್ಲಿ ತರಬೇತಿ ನೀಡಲು ಲಾಭಾಕಾಂಕ್ಷೆ ಇಲ್ಲದೆ ಕೆಲಸಮಾಡುವ ಸಂಸ್ಥೆಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ವಲಸೆ ಕಾರ್ಮಿಕರ ಮಕ್ಕಳಿಗಾಗಿ ‘ನೀಲ್‍ಬಾಘ್’ ಎಂಬ ಒಂದು ವಸತಿ ಶಾಲೆಯನ್ನು ಬೆಂಗಳೂರಿನಿಂದ 100 ಕಿ.ಮೀಗಳ ದೂರದಲ್ಲಿ ಮದನಪಲ್ಲಿಯ ಬಳಿ 1996 ರಲ್ಲಿ ತೆರೆಯಲಾಯಿತು. ಇಲ್ಲಿ, ಎಲ್‍ಕೆಜಿ ಯಿಂದ ಹತ್ತನೇ ತರಗತಿಯವರೆಗೆ ಕನ್ನಡದಲ್ಲಿ ಶಿಕ್ಷಣ ನೀಡಲಾಗುತ್ತದೆ. ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿಸಲು ಅವರಿಗೆ, ಮರಗೆಲಸ, ಕುಂಬಾರಿಕೆ, ಹೊಲಿಗೆ, ವಿದ್ಯುತ್ ಉಪಕರಣಗಳ ದುರಸ್ತಿ ಮುಂತಾದ ವೃತ್ತಿಪರ ತರಬೇತಿಯನ್ನೂ ನೀಡಲಾಗುತ್ತದೆ.

‘ಮಕ್ಕಳ ನಿಗಾವಣೆ ಕೇಂದ್ರ’ ಆಶ್ರಯ ಕೇಂದ್ರದ ಮತ್ತೊಂದು ಪ್ರಕಲ್ಪ. ಬಾಲಾಪರಾಧಿಗಳಿಗೆ, ಆಪ್ತ ಸಮಾಲೋಚನೆಯ ಮೂಲಕ ಬಾಲಾಪರಾಧಿಗಳ ಮನಃ ಪರಿವರ್ತನೆಗೆ ಶ್ರಮಿಸುವ, ಅವರಿಗೆ ವೃತ್ತಿಪರ ಶಿಕ್ಷಣ ಹಾಗೂ ಅನೌಪಚಾರಿಕ ಶಿಕ್ಷಣ ನೀಡುವ ಮೂಲಕ ಅವರನ್ನು ನಡವಳಿಕೆಯನ್ನು ಸುಧಾರಿಸುವ ಉದ್ದೇಶದಿಂದ ಇದನ್ನು 1997 ರಲ್ಲಿ ಪ್ರಾರಂಭಿಸಲಾಯಿತು. ಸಂಸ್ಥೆಯ ಈ ಚಟುವಟಿಕೆಗಳನ್ನು ಗುರುತಿಸಿ ಕರ್ನಾಟಕ ಸರ್ಕಾರ ಈ ಸಂಸ್ಥೆಗೆ ಗೃಹ ಕರ್ನಾಟಕ ಸರ್ಕಾರದ ನಿರ್ವಹಣಾ ಸಮಿತಿಯ ಸದಸ್ಯತ್ವವನ್ನು ನೀಡಿತು. ಭಾರತ ಸರ್ಕಾರ, ‘ಸಮಗ್ರ ಮಕ್ಕಳ ರಕ್ಷಣಾ ಯೋಜನೆ’ಯ ಪ್ರಮಾಣಪತ್ರವನ್ನು ಈ ಸಂಸ್ಥೆಗೆ ನೀಡಿ ಗೌರವಿಸಿತು.

ಇವರ ಸ್ವಾರ್ಥ ರಹಿತ ಸಮಾಜ ಸೇವೆಯನ್ನು ಗುರುತಿಸಿ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ‘ಸಬಲರಾಗಿ, ನನಗೆ ಬದಲಾವಣೆ ತರುವ ಶಕ್ತಿ ಇದೆ ಎಂದು ನಿಮಗೆ ನೀವೇ ಹೇಳಿಕೊಳ್ಳಿ, ಆಗ ಮಾತ್ರ ನೀವು ಏನನ್ನಾದರೂ ಮಾಡಲು ಸಾಧ್ಯವಾಗುವುದು, ನಮ್ಮಲ್ಲಿ ಪ್ರತಿಯೊಬ್ಬರಿಗೂ ನಮ್ಮ ಸಮುದಾಯಕ್ಕೆ, ನಮ್ಮ ನೆರೆಹೊರೆಯವರಿಗೆ ಹಾಗೂ ನಮ್ಮ ಸಮಾಜಕ್ಕೆ ಕಿಂಚಿತ್ತಾದರೂ ಒಳಿತು ಮಾಡುವ ಶಕ್ತಿ ಇದೆ’ ಎಂಬುದು ಅವರು ಪದ್ಮಶ್ರೀ ಸ್ವೀಕರಿಸಿದ ಸಂದರ್ಭದಲ್ಲಿ ಹೇಳಿದ ಮಾತುಗಳು. ಅದೆಷ್ಟು ಸತ್ಯ! 2015 ರ ಮೇ 25 ರಂದು ಅವರು ನಿಧನರಾದರು.

ಡಾ. ಗೀತಾ ಕೃಷ್ಣಮೂರ್ತಿ


Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *