ಪದ್ಮಪ್ರಭೆ/ ಅಪರೂಪದ ಸಾಧಕಿ ಶಾರದಾ ಶ್ರೀನಿವಾಸನ್- ಡಾ. ಗೀತಾ ಕೃಷ್ಣಮೂರ್ತಿ


ಕಲೆ, ಪುರಾತತ್ತ್ವಶಾಸ್ತ್ರ, ಪುರಾತನ ಲೋಹ ಶಾಸ್ತ್ರ ಮತ್ತು ಸಂಸ್ಕøತಿಗಳ ವ್ಶೆಜ್ಞಾನಿಕ ಅಧ್ಯಯನದಲ್ಲಿ ವಿಶೇಷತೆಯನ್ನು ಮೆರೆದಿರುವ ಅಪರೂಪದ ಸಂಶೋಧಕಿ ಶಾರದಾ ಶ್ರೀನಿವಾಸನ್. ಅವರು ಭರತನಾಟ್ಯದಲ್ಲೂ ವಿಶಾರದೆ. ನಟರಾಜನ ವಿಗ್ರಹಗಳಿಗೆ ಅಚ್ಚುಮೆಚ್ಚಾದ ದಕ್ಷಿಣ ಭಾರತದ ಕಂಚಿನ ಶಿಲ್ಪಕಲೆಯನ್ನು ಕುರಿತ ಅವರ ಸಂಶೋಧನೆ ವಿಶ್ವದ ಗಮನ ಸೆಳೆಯುವ ವೈಶಿಷ್ಟ್ಯಗಳಿಂದ ಕೂಡಿದೆ. ಹಲವು ಕ್ಷೇತ್ರಗಳಲ್ಲಿ ಸಾಧಕಿಯಾಗಿರುವ ಅವರಿಗೆ 2019 ರಲ್ಲಿ ಪದ್ಮಶ್ರೀ ಪ್ರಶಸ್ತಿ ಗೌರವ ದೊರೆತಿದೆ.

ಬೆಂಗಳೂರಿನ ಶಾರದಾ ಶ್ರೀನಿವಾಸನ್ ವೈಜ್ಞಾನಿಕ ಮತ್ತು ಸಾಂಸ್ಕøತಿಕ ಅಧ್ಯಯನಗಳಲ್ಲಿ ಸಮಾನ ಆಸಕ್ತಿ ಹೊಂದಿರುವ ಪ್ರತಿಭಾವಂತೆ. ಖ್ಯಾತ ಪರಮಾಣು ವಿಜ್ಞಾನಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕøತರಾದ ಡಾ. ಮಾಲೂರು ರಾಮಸ್ವಾಮಿ ಶ್ರೀನಿವಾಸನ್ ಅವರು ಶಾರದಾ ಅವರ ತಂದೆ, ಖ್ಯಾತ ಪರಿಸರವಾದಿ, ನೀಲಗಿರಿ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ ಸಂಸ್ಥೆಯ ಅಧ್ಯಕ್ಷರೂ ಆದ ಗೀತಾ ಶ್ರೀನಿವಾಸನ್ ಇವರ ತಾಯಿ. ಖ್ಯಾತ ನ್ಯಾಯಾಧೀಶರೂ, ಮದ್ರಾಸ್ ಪ್ರೆಸಿಡೆನ್ಸಿಯ ಅಡ್ವೊಕೇಟ್ ಜನರಲ್ ಮತ್ತು ತಿರುವಾಂಕೂರಿನ ದಿವಾನರೂ ಆಗಿದ್ದ ಸಿ.ಪಿ. ರಾಮಸ್ವಾಮಿ ಅಯ್ಯರ್ ಇವರ ಮುತ್ತಜ್ಜ. ಇಂಥ ಪ್ರತಿಷ್ಠಿತ ಮತ್ತು ಮಹನೀಯರ ಪರಂಪರೆಯಲ್ಲಿ 1966 ರ ಜನವರಿ 16 ರಂದು ಬೆಂಗಳೂರಿನಲ್ಲಿ ಶಾರದಾ ಜನಿಸಿದರು.

ಶಾರದಾ ಅವರ ತಂದೆ ತಾಯಿಯರು ಮತ್ತು ಅವರ ಕುಟುಂಬದ ಸದಸ್ಯರೆಲ್ಲರೂ ವ್ಶೆಜ್ಞಾನಿಕ ಅಭಿವೃದ್ಧಿಗೆ, ಅಧ್ಯಾಪನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಕೊಡುಗೆಯನ್ನು ನೀಡಿದವರು. ಸಂಸ್ಕøತಿ ಅಧ್ಯಯನ, ಭಾರತದ ಇತಿಹಾಸ ಅಧ್ಯಯನ, ಪರಿಸರ ವಿಷಯಗಳು ಹಾಗೂ ವನ್ಯಜೀವಿ ವಿಷಯಗಳಲ್ಲಿ ಆಸಕ್ತಿ ಉಳ್ಳವರು. ಇಂಥ ವಾತಾವರಣದಲ್ಲಿ ಬೆಳೆದ ಶಾರದಾ ಅವರು ಸಹಜವಾಗಿಯೇ ವಿಜ್ಞಾನ ಹಾಗೂ ಕಲೆಗಳೆರಡರಲ್ಲೂ ಆಸಕ್ತಿಯನ್ನು ಬೆಳೆಸಿಕೊಂಡರು. ದಕ್ಷಿಣ ಭಾರತದ ಬಹುಪಾಲು ಕುಟುಂಬಗಳ ಹೆಣ್ಣು ಮಕ್ಕಳ ರೀತಿಯಲ್ಲಿಯೇ ಭರತನಾಟ್ಯದಲ್ಲಿ ಶಿಕ್ಷಣವನ್ನೂ ಪಡೆದರು! ಹಾಗೆಯೇ, ಬಹುಪಾಲು ಹೆಣ್ಣು ಮಕ್ಕಳು ಮಾಡುವಂತೆ ಅದನ್ನು ಅರ್ಧಕ್ಕೆ ನಿಲ್ಲಿಸದೆ, ಗಳಿಸಿದ ಭರತನಾಟ್ಯ ವಿದ್ಯೆಯನ್ನು ಅಭಿವೃದ್ಧಿಪಡಿಸಿಕೊಂಡರು! ವಿಜ್ಞಾನದಲ್ಲಿ ಆಸಕ್ತಿ ಉಂಟಾಗಲು, ಅಣುವಿದ್ಯುತ್ ಯೋಜನೆಗಳಲ್ಲಿ ತೊಡಗಿಸಿಕೊಂಡ ಮತ್ತು ಆ ನಂತರದಲ್ಲಿ ಭಾರತೀಯ ಅಣುಶಕ್ತಿ ಆಯೋಗದ ಅಧ್ಯಕ್ಷರಾದ ಅವರ ತಂದೆಯವರೇ ಕಾರಣ ಮತ್ತು ಅವರೇ ತಮಗೆ ದೊಡ್ಡ ಸ್ಫೂರ್ತಿ ಎಂದಿದ್ದಾರೆ ಶಾರದಾ.

ಶ್ರೀನಿವಾಸನ್ ಅವರು ಮಕ್ಕಳನ್ನು ಅವರನ್ನು ಅಣುವಿದ್ಯುತ್ ಸ್ಥಾಪನೆಗಳಿಗೆ ಕರೆದೊಯ್ದು ಅವನ್ನು ವಿವರಿಸುತ್ತಿದ್ದರಂತೆ. ಹೆಣ್ಣುಮಕ್ಕಳು ವಿಜ್ಞಾನ ವಿಷಯವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳದಿದ್ದ ಕಾಲದಲ್ಲಿ ತಂದೆ ಇವರಿಗೆ ವಿಜ್ಞಾನ ಕಲಿಯಲು ಪ್ರೋತ್ಸಾಹ ನೀಡಿದುದು ವಿಶೇಷವಾದುದು. ಇವರ ತಂದೆಯವರು ಕಲ್ಪಾಕ್ಕಮ್ ಅಣುವಿದ್ಯುತ್ ಸ್ಥಾವರದ ನಿರ್ಮಾಣದಲ್ಲಿ ತೊಡಗಿದ್ದ ಸಂದರ್ಭದಲ್ಲಿ, ಸಮೀಪದ, ಪಲ್ಲವರ ಕಾಲದ ಶಿಲಾ ಸ್ಮಾರಕಗಳಿರುವ ಮಹಾಬಲಿಪುರಂನ ಸುತ್ತಮುತ್ತಲ ಪ್ರದೇಶ ಇವರ ಆಸಕ್ತಿಯ ತಾಣಗಳಾಗಿದ್ದುವಂತೆ. ಹಾಗೆಯೇ ಅವರ ಮಾವ ಸಿ.ವಿ. ಶೇಷಾದ್ರಿ ಅವರು, ‘ನೀನು ಪ್ರಯೋಗ ಶಾಲೆಯ ವಿಜ್ಞಾನಿಯಾಗಬೇಡ, ಹೊರಗೆ ಹೋಗು, ಗ್ರಾಮೀಣಾಭಿವೃದ್ಧಿಯಲ್ಲಿ ಆಸಕ್ತಿ ತೋರಿಸು’ ಎನ್ನುತ್ತಿದ್ದರಂತೆ. ಬಾಲ್ಯದ ಹಾಗೂ ಬೆಳೆಯುವ ವಯಸ್ಸಿನಲ್ಲಿ ಅವರಿಗೆ ದೊರೆತ ಈ ಪರಿಸರ ಹಾಗೂ ಈ ಅನುಭವಗಳು ಶಾರದಾ ಶ್ರೀನಿವಾಸನ್ ಅವರ ಆಸಕ್ತಿಗಳನ್ನು ಮತ್ತು ಅಧ್ಯಯನಶಿಲತೆಯನ್ನು ರೂಪಿಸಿದವು ಎನ್ನಬಹುದು.

ಶಾರದಾ ಶ್ರೀನಿವಾಸನ್ ಅವರು 1987 ರಲ್ಲಿ ಮುಂಬಯಿ ಐ.ಐ.ಟಿಯಿಂದ ಬಿ.ಟೆಕ್ ಪದವಿಯನ್ನು ಪಡೆದರು, 1999 ರಲ್ಲಿ ಲಂಡನ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ಅದೇ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಭಾರತದ ಕಂಚಿನ ಶಿಲ್ಪಕಲೆಯ ಬಗ್ಗೆ ಸಂಶೋಧನೆ ನಡೆಸಿ 1995 ರಲ್ಲಿ ಪಿಎಚ್.ಡಿ ಪಡೆದರು. ಅವರು ಬಿ.ಟೆಕ್. ಮಾಡುವಾಗಲೇ ತನ್ನ ನಾಲ್ವರು ಸಹಪಾಠಿಗಳೊಂದಿಗೆ ಸೇರಿ, ‘ನ್ಯುಕ್ಲಿಯರ್ ವಿಂಟರ್’ ಎಂಬ ಇಂಗ್ಲಿಷ್ ಚಲನಚಿತ್ರವನ್ನು ಸಹ-ನಿರ್ದೇಶಿಸಿದುದಲ್ಲದೆ ಅದರಲ್ಲಿ ಅಭಿನಯಿಸುವುದರ ಜೊತೆಗೆ ಅದಕ್ಕೆ ನೃತ್ಯ ಸಂಯೋಜನೆಯನ್ನೂ ಮಾಡಿದ್ದರಂತೆ. ಆ ಚಿತ್ರ ವಿಶೇಷ ವರ್ಗದಲ್ಲಿ ಕ್ಯಾನ್ ಚಿತ್ರೋತ್ಸವ ಪ್ರಶಸ್ತಿಯನ್ನು ಗಳಿಸಿತ್ತು! ಚಿತ್ರವನ್ನು ಪವಾಯ್‍ನ ಐಐಟಿ ಆವರಣದಲ್ಲಿ ಚಿತ್ರೀಕರಿಸಿದ್ದು, ಇದು ಅವರ ನೃತ್ಯ ಜೀವನಕ್ಕೆ ನಾಂದಿ ಹಾಡಿತು. ಇವರ ವಿಭಿನ್ನ ಅಸಕ್ತಿಗಳು ಮುಂದೆ ಅವರು ಪಿಎಚ್.ಡಿ ಮಾಡಲು ಆಯ್ದುಕೊಂಡ ವಿಷಯವನ್ನು ವಿವಿಧ ಆಯಾಮಗಳಿಂದ ಅಧ್ಯಯನ ಮಾಡಲು ಪ್ರೇರಕವಾಯಿತು.

ಶಾರದಾ ಶ್ರೀನಿವಾಸನ್ ಅವರಿಗೆ ಹೋಮಿಭಾಭಾ ಫೆಲೋಷಿಪ್ ದೊರತಿದೆ. ಆ ಸಂದರ್ಭದಲ್ಲಿ ಅವರು ಯುಕೆ, ಅಮೆರಿಕಾದ ಸ್ಮಿತ್‍ಸೋನಿಯನ್ ಮ್ಯೂಸಿಯಂ, ದಿ ಕನ್ಸರ್‍ವೇಷನ್ ಅನಲಿಟಿಕಲ್ ಲ್ಯಾಬರೇಟರಿ, ಮ್ಯೂಸಿಯಂ ಆಫ್ ಅಪ್ಲೈಡ್ ಸೈನ್ಸೆಸ್ ಆಫ್ ಕಾರ್ಡಿಯಾಲಜಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ, ಇತ್ಯಾದಿ ಪ್ರತಿಷ್ಠಿತ ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ, ಯೂರೋಪ್ ಮತ್ತು ಅಮೆರಿಕಾದ ಹಲವಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮತ್ತು ಅಂತರ ರಾಷ್ಟ್ರೀಯ ಅಧಿವೇಶನಗಳಲ್ಲಿ ಪ್ರಬಂಧಗಳನ್ನು ಮಂಡಿಸಿ ಅಧ್ಯಕ್ಷತೆಯನ್ನು ವಹಿಸಿದ್ದಾರೆ. ಇವರು 60ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದು ಪ್ರಕಟಿಸಿದ್ದಾರೆ. ವಿಶಿಷ್ಟ ಗುಣಗಳಿಂದ ಕೂಡಿದ ವುಟ್ಜ್ ಸ್ಟೀಲ್ ಎಂದು ಕರೆಯಲಾಗುವ, ಭಾರತಕ್ಕೇ ವಿಶೇಷವಾದ ಲೋಹವನ್ನು ಕುರಿತಾದ ಅನೇಕ ಅಸಕ್ತಿಕರ ವಿವರಗಳನ್ನೊಳಗೊಂಡ India’s Legendary Wootz and Steel- an advanced material of ancient world ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಲೋಹದ ತಯಾರಿಕೆ ಭಾರತದಲ್ಲೇ ಮೊದಲು ಪ್ರಾರಂಭವಾದದ್ದು ಮತ್ತು ಈ ಲೋಹದಿಂದ ತಯಾರಾದ ಕತ್ತಿಗಳನ್ನು ಡಮಾಸ್ಕಸ್ ಮೊದಲಾದ ಹೊರ ರಾಜ್ಯಗಳಿಗೆ ಕಳುಹಿಸುತ್ತಿದ್ದರೆಂಬ ವಿಷಯವನ್ನೂ ಪ್ರಸ್ತಾಪಿಸುತ್ತಾರೆ.

ಭರತನಾಟ್ಯ ಪ್ರವೀಣೆ

ಬಾಲ್ಯದಲ್ಲಿ ಬೆಳೆದ ನೃತ್ಯದಲ್ಲಿನ ಅವರ ಆಸಕ್ತಿ ಅವರು ವಿಜ್ಞಾನಿಯಾದ ಮೇಲೆಯೂ ಮುಂದುವರಿದಿದ್ದು, ಅದರಿಂದ, ವಿಜ್ಞಾನ ಮತ್ತು ಕಲೆಗಳ ಸಂಬಂಧವನ್ನು ವೈಜ್ಞಾನಿಕ ಮತ್ತು ತಾತ್ತ್ವಿಕ ದೃಷ್ಟಿಕೋನದಿಂದ ವಿಶ್ಲೇಷಿಸಿ, ಸಂಶೋಧನೆಗೆ ಹೊಸ ಆಯಾಮ ನೀಡಲು ಅವರಿಗೆ ನೆರವಾಗಿದೆ. ನಾಟ್ಯಕ್ಕೆ ಅಧಿಪತಿಯಾದ ನಟರಾಜನ ಶಿವತಾಂಡವ ನೃತ್ಯದ ಪಂಚಲೋಹದ ವಿಗ್ರಹಗಳ ಬಗೆಗಿನ ಸಂಶೋಧನೆಯಲ್ಲಿ ಕಲೆ, ಸಂಸ್ಕøತಿ, ಮತ್ತು ತಂತ್ರಜ್ಞಾನಗಳ ಸಮ್ಮಿಲನವನ್ನು ಎತ್ತಿ ತೋರಿಸಿರುವುದು ಇವರ ಸಂಶೋಧನೆಯ ವೈಶಿಷ್ಟ್ಯ. ಭರತನಾಟ್ಯ ಪ್ರವೀಣೆಯಾದ ಇವರು ದೇಶ ವಿದೇಶಗಳಲ್ಲಿ ಭರತ ನಾಟ್ಯ ಪ್ರದರ್ಶನಗಳನ್ನು ನೀಡಿದ್ದಾರೆ.

ಶಾರದಾ ಶ್ರೀನಿವಾಸನ್ ಅವರು ಪ್ರಸ್ತುತ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ಎನ್‍ಐಎಎಸ್) ಬೆಂಗಳೂರು, ಇಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಇತ್ತೀಚೆಗೆ, ‘ಅಮೆರಿಕನ್ ಅಕಾಡೆಮಿ ಆಫ್ ಆಟ್ರ್ಸ್ ಅಂಡ್ ಸೈನ್ಸ್ಸಸ್’ ನಂಥ ಪ್ರತಿಷ್ಠಿತ ಸಂಸ್ಥೆಗೆ ‘ಸೋಷಿಯಲ್ ಮತ್ತು ಬಿಹೇವಿಯರಲ್ ಸೈನ್ಸ್ಸಸ್, ಆಂತ್ರೊಪಾಲಜಿ ಮತ್ತು ಆರ್ಕಿಯಾಲಜಿ’ ವರ್ಗದಿಂದ ಆಯ್ಕೆಯಾದ ಏಕೈಕ ಭಾರತೀಯರಾಗಿದ್ದಾರೆ. ‘ಇದು ತಮ್ಮ ಮೂರು ದಶಕಗಳ ಶ್ರಮಕ್ಕೆ ಸಂದ ಫಲ. ಕಲೆ ಮತ್ತು ವಿಜ್ಞಾನದ ಅಂತರ ಶಿಸ್ತೀಯ ಸಮಗ್ರ ಅಧ್ಯಯನಕ್ಕೆ ಇದರಿಂದ ಹೆಚ್ಚು ಪ್ರೋತ್ಸಾಹ ದೊರೆಯುತ್ತದೆ’ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.

ವಿಶ್ವ ಪಾರಂಪರಿಕ ತಾಣವಾದ ಹಂಪಿಯ ವಾಸ್ತುಶಿಲ್ಪ, ಶಿಲ್ಪಕಲೆ, ಭಿತ್ತಿಚಿತ್ರಗಳು, ಶಾಸನಗಳು ಹಾಗೂ ಅಲ್ಲಿಯ ಬಜಾರಿನ ಅನುಭವಗಳೆಲ್ಲವನ್ನೂ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ 3ಡಿ ಆಯಾಮದಲ್ಲಿ ದಾಖಲಿಸುವಲ್ಲಿ ಇವರ ಕೊಡುಗೆ ಅನನ್ಯವಾದುದು.

ಡಾ. ಶಾರದಾ ಶ್ರೀನಿವಾಸನ್ ಹಲವು ಪ್ರತಿಭೆಗಳ ಸಂಗಮ. ಅಂತೆಯೇ ಅವರ ಸಾಧನೆಗಳು ಸಹ ಹಲವು, ಅವರಿಗೆ ಸಂದಿರುವ ಪ್ರಶಸ್ತಿ ಪುರಸ್ಕಾರಗಳೂ ಹಲವಾರು. ಅವುಗಳಲ್ಲಿ ಮುಖ್ಯವಾದವುಗಳು, ಕರ್ನಾಟಕ ರಾಜ್ಯದ ಡಾ. ಕಲ್ಪನಾ ಚಾವ್ಲಾ ಮಹಿಳಾ ವಿಜ್ಞಾನಿ ಪ್ರಶಸ್ತಿ, ಮೆಟೀರಿಯಲ್ಸ್ ರಿಸರ್ಚ್ ಸೊಸೈಟಿ ಆಫ್ ಇಂಡಿಯಾ ಪದಕ. ಇವಕ್ಕೆ ಮುಕುಟಪ್ರಾಯವಾಗಿ, 2019 ರ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ.

ನಮ್ಮ ನಡುವೆ ಇರುವ ಡಾ. ಶಾರದಾ ಶ್ರೀನಿವಾಸನ್ ಅವರು ಹಲವು ಪ್ರತಿಭೆಗಳ ಖನಿ, ನಮ್ಮ ರಾಜ್ಯ, ಅಷ್ಟೇ ಏಕೆ ಇಡೀ ರಾಷ್ಟ್ರ ಹೆಮ್ಮೆಪಡುವಂಥ ವಿಶಿಷ್ಟ ವ್ಯಕ್ತಿ.

ಡಾ. ಗೀತಾ ಕೃಷ್ಣಮೂರ್ತಿ


Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *