ಪದ್ಮಪ್ರಭೆ/ ಅಪರಿಮಿತ ಸಾಧಕಿ ಮಾಲತಿ ಹೊಳ್ಳ – ಡಾ. ಗೀತಾ ಕೃಷ್ಣಮೂರ್ತಿ

ಬಾಡಿಗೆ ಗಾಲಿ ಕುರ್ಚಿಯ ಮೇಲೆ ಕುಳಿತು ವಿಶ್ವವೇ ಬೆರಗಿನಿಂದ ನೋಡುವಂಥ ಸಾಧನೆಗಳನ್ನು ಮಾಡಿದ ಕ್ರೀಡಾಪಟು ಮಾಲತಿ ಹೊಳ್ಳ, ವಿಶೇಷಚೇತನರಿಗೆ ಮಾತ್ರವಲ್ಲ ಎಲ್ಲರಿಗೂ ಪ್ರೇರಣೆ, ಆತ್ಮವಿಶ್ವಾಸಗಳನ್ನು ತುಂಬುವ ವಿಶಿಷ್ಟ ಚೇತನ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಫರ್ಧೆಗಳಲ್ಲಿ ಅವರು ಗೆದ್ದುಕೊಂಡಿರುವುದು 389 ಚಿನ್ನದ ಪದಕಗಳು, 27 ಬೆಳ್ಳಿ ಮತ್ತು 5 ಕಂಚಿನ ಪದಕಗಳು! ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕದಿಂದ ಪ್ರತಿಷ್ಠಿತ ಪದ್ಮಶ್ರೀ ಪಡೆದ ಏಕೈಕ ಮಹಿಳೆ ಎನ್ನುವುದೂ ಅವರ ಸಾಧನೆ.

ಮಾಲತಿ ಹೊಳ್ಳ ಅವರ ಹೆಸರೇ ಅನನ್ಯ ಸಾಧನೆಗೆ ಒಂದು ಪರ್ಯಾಯ ಪದವೇನೋ ಎಂಬಂತಿವೆ ಅವರ ಸಾಧನೆಗಳ ಪಟ್ಟಿ. ಎಲ್ಲ ಅನುಕೂಲಕರ ಸವಲತ್ತುಗಳಿದ್ದು ಸಾಧನೆ ಮಾಡಿರುವ ಸಾಧಕರದು ಒಂದು ತೂಕವಾದರೆ, ಪ್ರತಿಕೂಲ ಪರಿಸರದ ನಡುವೆ ಇದ್ದು, ಅಲ್ಲಿಂದ ಛಲದಿಂದ ಮೇಲೆದ್ದು ಬಂದು ಸಾಧನೆ ಮಾಡುವವರದೇ ಮತ್ತೊಂದು ತೂಕ. ಒಂದು ತಿಂಗಳ ಮಗುವಿದ್ದಾಗಲೇ ಪೋಲಿಯೋ ಸೋಂಕಿಗೆ ತುತ್ತಾಗಿ ಎರಡೂ ಕಾಲುಗಳ ಸ್ವಾಧೀನವನ್ನು ಕಳೆದುಕೊಂಡರು. ಈ ಪರಿಸ್ಥಿತಿಯಿಂದ ಎದೆಗುಂದಲಿಲ್ಲ ಎಂದರೆ ತಪ್ಪಾದೀತು. ಆದರೆ ಎದೆಗುಂದಿಸಿದ ಪರಿಸ್ಥಿತಿಯನ್ನೇ ಎದೆಗುಂದುವಂತೆ ಮಾಡಿದವರು ಮಾಲತಿ ಎಂದು ಹೇಳಿದರೆ ಖಂಡಿತ ಕಡಿಮೆಯಾದೀತು! ಕ್ರೀಡಾ ಕ್ಷೇತ್ರದಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪಡೆದ ಕರ್ನಾಟಕದ ಏಕೈಕ ಮಹಿಳೆ ಮಾಲತಿ ಕೃಷ್ಣಮೂರ್ತಿ ಹೊಳ್ಳ!

ಮಾಲತಿ ಹೊಳ್ಳ ಅವರು ಹುಟ್ಟಿದ್ದು ಮಧ್ಯಮ ವರ್ಗದ ಕುಟುಂಬದಲ್ಲಿ, 1958 ರ ಜುಲೈ 6 ರಂದು. ತಂದೆ ಬೆಂಗಳೂರು ಗ್ರಾಮೀಣ ಪ್ರದೇಶದಲ್ಲಿ ಒಂದು ಸಣ್ಣ ಹೋಟೆಲ್ ನಡೆಸುತ್ತಿದ್ದರು. ಮಾಲತಿ ಹುಟ್ಟಿದಾಗ ಆರೋಗ್ಯವಂತ ಮಗುವಾಗಿಯೇ ಇದ್ದರು. ಆದರೆ, ದುರದೃಷ್ಟವಶಾತ್, ಆಕೆ ಒಂದು ವರ್ಷದ ಮಗುವಿದ್ದಾಗ ಪೋಲಿಯೋ ಸೋಂಕಿಗೆ ಗುರಿಯಾಗಿ, ಕತ್ತಿನಿಂದ ಕೆಳಗಿನ ಇಡೀ ದೇಹ ಸ್ವಾಧೀನ ಕಳೆದುಕೊಂಡುಬಿಟ್ಟಿತು. ಎರಡು ವರ್ಷಕ್ಕೂ ಹೆಚ್ಚು ಕಾಲ ಕೊಡಿಸಿದ ಎಲೆಕ್ಟ್ರಿಕ್ ಷಾಕ್ ಚಿಕಿತ್ಸೆ ಭಾಗಶಃ ಫಲಕಾರಿಯಾಯಿತು. ದೇಹದ ಮೇಲ್ಭಾಗ ಚೇತರಿಸಿಕೊಂಡಿತು ಆದರೆ, ದೇಹದ ಕೆಳ ಭಾಗದಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ. ತಂದೆ ತಾಯಿಯರು ಮುಂದಿನ ಎರಡು ವರ್ಷಗಳ ಕಾಲ ಮಾಲತಿ ಅವರ ಸ್ಥಿತಿಯನ್ನು ಸುಧಾರಿಸಲು ಇನ್ನಿಲ್ಲದಷ್ಟು ಪ್ರಯತ್ನಗಳನ್ನು ಮಾಡಿದರೂ ಯಾವುದೂ ಫಲ ಕೊಡಲಿಲ್ಲ. ಬೇರೆ ದಾರಿ ಕಾಣದೆ ಅವರು ಮಗುವನ್ನು ಚೆನ್ನೈನಲ್ಲಿರುವ ಮೂಳೆ ಚಿಕಿತ್ಸಾ ಕೇಂದ್ರದಲ್ಲಿ ದಾಖಲು ಮಾಡಿದರು. ಅವರಿಗಿದ್ದ ಒಂದೇ ಆಶಾಕಿರಣವೆಂದರೆ, ಅಲ್ಲಿ ಚಿಕಿತ್ಸೆ ಕೊಡಿಸುವುದರಿಂದಲಾದರೂ ಮಗಳು ಸರಿ ಹೋಗಲಿ ಎಂಬುದಾಗಿತ್ತು.

ಮುಂದಿನ 15 ವರ್ಷಗಳ ಕಾಲವನ್ನು ಮಾಲತಿ ಅವರು ತಂದೆ ತಾಯಿಯರ ಒಲುಮೆಯ ಆರೈಕೆಯಿಂದ ದೂರವಾಗಿ, ಆ ಕೇಂದ್ರದಲ್ಲಿ ಕಳೆದರು. ವ್ಯಕ್ತಿತ್ವವನ್ನು ರೂಪಿಸಿ, ಪ್ರತಿಭೆಯನ್ನು ಅರಳಿಸುವ ಬಾಲ್ಯದ ಬಹು ಮುಖ್ಯ ಭಾಗವನ್ನು ಮಾಲತಿ ಅವರು ಕಳೆದದ್ದು, ಬೆಳೆದದ್ದು ಅವರಂತೆಯೇ ಒಂದಲ್ಲ ಒಂದು ಅಂಗವಿಕಲತೆಯುಳ್ಳವರ ನಡುವೆ. ಅವರಲ್ಲಿ ಬಹಳಷ್ಟು ಮಕ್ಕಳು ಬಡ ಕುಟುಂಬಗಳಿಗೆ ಸೇರಿದವರು. ಪುನಃ ಕರೆದೊಯ್ಯುವ ಉದ್ದೇಶವಿಲ್ಲದೆಯೇ ಬಿಟ್ಟು ಹೋಗಲಾಗಿದ್ದ ಮಕ್ಕಳು. ಈ ಹದಿನೈದೂ ವರ್ಷಗಳು ಅವರು ಒಳಗಾದ ಶಸ್ತ್ರ ಚಿಕಿತ್ಸೆಗಳಿಗೆ ಲೆಕ್ಕವಿಲ್ಲ. ಉಂಡ ನೋವಿಗೆ ಎಣೆಯಿಲ್ಲ. ಇದೆಲ್ಲದರ ಜೊತೆಗೆ ದೇಹದ ಸ್ನಾಯುಗಳಿಗೆ ಶಕ್ತಿ ತುಂಬಲು ಕಡ್ಡಾಯ ವ್ಯಾಯಾಮ ಮತ್ತು ವಿದ್ಯಾಭ್ಯಾಸ. ನಿಧಾನವಾಗಿ ಇದಕ್ಕೆ ಒಗ್ಗಿಕೊಂಡರು ಅವರು. ದೈಹಿಕವಾಗಿ ಹಾಗೂ ಮಾನಸಿಕವಾಗಿ ದೃಢವಾಗುತ್ತಾ ಸಾಗಿದರು. ಅವರು ಈ ಅವಧಿಯಲ್ಲಿ ಸುಮಾರು 32 ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಿದ್ದರು. ದಿನ ನಿತ್ಯದ ಈ ನೋವನ್ನು ಸ್ವಲ್ಪವಾದರೂ ಶಮನಗೊಳಿಸುತ್ತಿದ್ದುದು ಅವರಿಗೆ ಕ್ರೀಡೆಯಲ್ಲಿದ್ದ ಆಸಕ್ತಿ. ಈ ಅವಧಿಯಲ್ಲಿ ಅವರು ಧೃತಿಗೆಡದೇ ಮುಂದೆ ಹೆಜ್ಜೆ ಇಟ್ಟರೆಂಬುದೇ ಮಾಲತಿ ಅವರ ಮುಂದಿನ ಯಶಸ್ಸಿಗೆ ಕಾರಣವಾಯಿತು.

15 ವರ್ಷಗಳ ನಂತರ ಮರಳಿ ಮನೆಗೆ ಬಂದಾಗ ಅವರು ಬೇರೆಯದ್ದೇ ಆದೊಂದು ಸಮರವನ್ನು ಎದುರಿಸಬೇಕಾಯಿತು. ಈ ಸಮರ ಅವರು ಮೂಳೆ ಚಿಕಿತ್ಸಾ ಕೇಂದ್ರದಲ್ಲಿ ಎದುರಿಸಿದ ಸಮರಕ್ಕಿಂತಲೂ ಕಠಿಣವಾಗಿತ್ತು. ಅದೆಂದರೆ ಎಲ್ಲ ಅಂಗಗಳೂ ಆರೋಗ್ಯದಿಂದ ಕೂಡಿದ ಜನರ ಕಾರುಣ್ಯಪೂರಿತ ನೋಟಗಳ ಬಾಣಗಳ ಸಮರ. ಅದು ಹೆಚ್ಚು ಕಠಿಣವಾಗಿತ್ತು ಅವರಿಗೆ. ತಮ್ಮಂತೆಯೇ ಇದ್ದವರ ನಡುವೆ ಅವರಿಗೆ ಇದ್ದಂಥ ಕಂಫರ್ಟ್ ಜೋನ್ ಇಲ್ಲಿ ಅವರಿಗೆ ಇರಲಿಲ್ಲ. ಅವರಿಗೆ ಬೇಕಾದದ್ದು ಕರುಣೆಯಲ್ಲ, ಪ್ರೀತಿ, ಅವರನ್ನು ಪ್ರೋತ್ಸಾಹಿಸಿ ಬೆಳೆಸಬಲ್ಲ ಭರವಸೆಯ ಮಾತುಗಳು ಎಂಬುದನ್ನು ಅರ್ಥ ಮಾಡಿಕೊಳ್ಳದ ಜನರ ನಡುವೆ ಕೀಳರಿಮೆಯಿಂದ ಕುಗ್ಗದೆ ಅವರು ಬೆಳೆಯಬೇಕಿತ್ತು. ಕ್ರೀಡೆಯಲ್ಲಿದ್ದ ಆಸಕ್ತಿಯೊಂದೇ ಅವರನ್ನು ಕೀಳರಿಮೆಗೆ ಒಳಗಾಗಿ ಕುಸಿಯದಂತೆ ತಡೆದದ್ದು.

ಇಚ್ಛಾಶಕ್ತಿ : ಚಿಕ್ಕ ಮಗುವಾಗಿದ್ದಂದಿನಿಂದ ಮೂಳೆ ಚಿಕಿತ್ಸಾ ಕೇಂದ್ರದಲ್ಲಿದ್ದು, ಅಂಥದ್ದೇ ಸಮಸ್ಯೆಯಿರುವ ಮಕ್ಕಳ ನಡುವೆ ಬೆಳೆದಿದ್ದ ಮಾಲತಿ ಅವರಿಗೆ, ಎಲ್ಲ ಅಂಗಗಳೂ ಸ್ವಸ್ಥವಾಗಿರುವ ಜನರಿರುವ ಹೊರ ಪ್ರಪಂಚವೊಂದಿದೆ ಎಂಬುದೇ ತಿಳಿದಿರಲಿಲ್ಲವಂತೆ. ಹಾಗೆಂದು ಅವರು ಹೇಳಿಕೊಂಡಿದ್ದಾರೆ. ಹಾಗಾಗಿ ಅಂಥ ಪ್ರಪಂಚದಲ್ಲಿ ಅವರು ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳಬೇಕಿತ್ತು. ಅದನ್ನು ಅವರು ಸ್ಥಾಪಿಸಿಕೊಂಡದ್ದು ತಮ್ಮೆಲ್ಲ ಸಾಮಥ್ರ್ಯವನ್ನು ಸತತಾಭ್ಯಾಸದಿಂದ ಕ್ರೀಡೆಯಲ್ಲಿ ತೊಡಗಿಸುವ ಮೂಲಕ. ಸಾಮಥ್ರ್ಯ ಎಂಬುದು ದೈಹಿಕ ಶಕ್ತಿಯಿಂದ ಬರುವಂಥದ್ದಲ್ಲ. ಅದು ಬರುವುದು ಅದಮ್ಯ ಇಚ್ಛಾಶಕ್ತಿಯಿಂದ' ಎಂಬುದಕ್ಕೆ ಉದಾಹರಣೆಯಾಗುವಂತೆ ಅವರು ಬೆಳೆದರು. ಬೆಂಗಳೂರಿನ ಮಹಾರಾಣಿ ಕಾಲೇಜು ಅವರ ವಿದ್ಯೆಗಷ್ಟೇ ಅಲ್ಲದೆ ಅವರ ಕ್ರೀಡಾಸಕ್ತಿಗೂ ನೀರೆರೆದು ಪೋಷಿಸಿತು. ಅವರಿಗೆ ಅಗತ್ಯವಾದ ಅನುಕೂಲಗಳನ್ನು ಮಾಡಿಕೊಟ್ಟಿತು. ಕಾಲೇಜಿನಲ್ಲಿ ಮೇಲಿನ ಮಹಡಿಗಳಲ್ಲಿ ನಡೆಯುವ ತರಗತಿಗಳಿಗೆ ಹೋಗಲಾಗದೆ ಶಿಕ್ಷಣವನ್ನೇ ತೊರೆಯುವಷ್ಟು ನಿರಾಶರಾದಾಗ, ಅವರನ್ನು ಕೀಳರಿಮೆಯಿಂದ ಹೊರತಂದು, ತನಗೆ ಅಗತ್ಯವಿದ್ದುದನ್ನು ಒತ್ತಾಯದಿಂದ ಕೇಳಿ ಪಡೆಯುವ ಹಕ್ಕನ್ನು ಚಲಾಯಿಸಬೇಕೆಂದು ತಿಳಿಸಿಕೊಟ್ಟು ಮುನ್ನಡೆಸಿದವರು ಅವರ ತಂದೆ. ಅದರಂತೆ ಕಾಲೇಜಿನ ಪ್ರಾಂಶುಪಾಲರನ್ನು ಭೇಟಿಯಾಗಿ, ತನ್ನ ಸಮಸ್ಯೆಯನ್ನು ವಿವರಿಸಿ, ತನ್ನ ತರಗತಿಗಳನ್ನು ತನಗೆ ಅನುಕೂಲವಾಗುವಂತೆ ನೆಲ ಮಹಡಿಯಲ್ಲಿ ನಡೆಸುವ ವ್ಯವಸ್ಥೆ ಮಾಡುವಂತೆ ಕೋರಿದಾಗ, ಅವರು ಸ್ಪಂದಿಸಿದ ರೀತಿ ಅವರಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸಿತು. ತನ್ನ ಜೀವನ ತಿರುವು ಪಡೆಯಲು ಕಾರಣವಾದ ಘಟನೆ ಅದು ಎಂದು ಅವರು ನೆನೆಯುತ್ತಾರೆ.

ಅಲ್ಲಿಂದೀಚೆಗೆ ಅವರು ತಿರುಗಿ ನೋಡಲಿಲ್ಲ. ಸಾಧನೆಯ ಹಾದಿ ಅವರ ಮುಂದೆ ಚಾಚಿತ್ತು. ಇವರು ಸಾಧನೆಗಳನ್ನು ಮಾಡುತ್ತಾ ಹೋದರು. ಕ್ರೀಡಾ ಕ್ಷೇತ್ರದಲ್ಲಿ ಇವರು ಪಡೆದ ಪದಕಗಳ ಸಂಖ್ಯೆ ನೋಡಿದಾಗ ಈ ಮಾತಿನಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆಯಿಲ್ಲ ಎಂಬುದು ಅರಿವಾಗದೆ ಇರದು. ಮೂಳೆ ಚಿಕಿತ್ಸಾ ಕೇಂದ್ರದಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದ ಅವಧಿಯಲ್ಲಿ ಇವರ ಮೇಲೆ ಮಾಡಿದ ಸುಮಾರು 32 ಶಸ್ತ್ರ ಚಿಕಿತ್ಸೆಗಳು ಇವರ ದೇಹದ ಸೊಂಟದ ಕೆಳಗಿನ ಭಾಗಕ್ಕೆ ಕಸುವು ತುಂಬುವುದರಲ್ಲಿ ವಿಫಲವಾದರೂ, ಅವರ ಆತ್ಮ ಶಕ್ತಿಯನ್ನು ಅವರಿಗೆ ಅರಿವಿಲ್ಲದಂತೆಯೇ ದೃಢಗೊಳಿಸುತ್ತಾ ಹೋಗಿರಬೇಕು. ಅವರ ಹೋರಾಟದ ಮನೋಭಾವಕ್ಕೆ ಕ್ರೀಡಾ ಕ್ಷೇತ್ರ ಒಂದು ಹೊರಕಿಂಡಿಯಾಯಿತು. ತಮ್ಮೆಲ್ಲ ಸಾಮಥ್ರ್ಯವನ್ನು ಅವರು ಅದರಲ್ಲಿ ತೊಡಗಿಸಿದರು. "ತಾನು ಸಾಧಿಸಬಲ್ಲೆ ಎಂಬುದರಲ್ಲಿ ನಂಬಿಕೆ ಅಚಲವಾಗಿದ್ದಾಗ, ಅದನ್ನು ಸಾಧಿಸಲು ಅಗತ್ಯವಾದ ಸಾಮಥ್ರ್ಯವನ್ನು ಗಳಿಸಿಕೊಳ್ಳುವುದು ಖಂಡಿತವಾಗಿಯೂ ಸಾಧ್ಯವಾಗುತ್ತದೆ. ಪ್ರಾರಂಭದಲ್ಲಿಯೇ ಅದು ಸಾಧ್ಯವಾಗದೆ ಹೋಗಬಹುದು ಅಷ್ಟೆ" ಎಂಬ ಸಾಧಕರ ಉಕ್ತಿಯನ್ನು ನಿಜವಾಗಿಸಿದವರು ಮಾಲತಿ.

ಗಾಲಿ ಕುರ್ಚಿಯ ಮೇಲೆ ಕುಳಿತು ಕ್ರೀಡಾ ಜಗತ್ತಿನಲ್ಲಿ ದಾಖಲೆಗಳನ್ನು ಸೃಷ್ಟಿಸಿದ ಮಾಲತಿ ಅವರು,`ನನ್ನ ಬಳಿ ಆಗ ಇದ್ದದ್ದು ಬಾಡಿಗೆಯ ಗಾಲಿ ಕುರ್ಚಿ’ ಎನ್ನುತ್ತಾರೆ. ಸಾಧನೆಯ ಹಾದಿಯಲ್ಲಿ ಇದಾವುದೂ ಅವರಿಗೆ ಅಡ್ಡಿಯೆನಿಸಲಿಲ್ಲ, ಅವರ ಅದಮ್ಯ ಛಲವನ್ನು ಕಡಿಮೆಗೊಳಿಸಲಿಲ್ಲ! ವಿಶೇಷಚೇತನರ ಕ್ರೀಡೆಗಳಲ್ಲಿ ವಿಶೇಷತೆಯನ್ನು ಸಾಧಿಸುತ್ತಲೇ ಮುನ್ನಡೆದರು. 1975 ರ ವೇಳೆಗೆ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪದಕಗಳನ್ನು ಪಡೆದಿದ್ದರು. ಇವರ ಕ್ರೀಡಾಸಕ್ತಿ ಒಂದೇ ಕ್ಷೇತ್ರಕ್ಕೆ ಸೀಮಿತಗೊಳ್ಳಲಿಲ್ಲ. ಶಾಟ್‍ಪುಟ್, ಜ್ಯಾವಲಿನ್ ಎಸೆತ, ಗಾಲಿ ಕುರ್ಚಿ ಓಟ… ಹೀಗೆ ಒಂದಕ್ಕಿಂತ ಹೆಚ್ಚಿನ ಕ್ರೀಡೆಗಳಲ್ಲಿ ಭಾಗವಹಿಸಿ, ಸ್ಪರ್ಧಿಸಿ, ಪದಕಗಳನ್ನು ಅಕ್ಷರಶಃ ಬಾಚಿಕೊಂಡರು! ಕ್ರೀಡೆಯಲ್ಲಿನ ಇವರ ಸಾಧನೆಯನ್ನು ಪರಿಗಣಿಸಿ, 1981 ರಲ್ಲಿ ಸಿಂಡಿಕೇಟ್ ಬ್ಯಾಂಕ್ ಇವರಿಗೆ ತನ್ನಲ್ಲಿ ಗುಮಾಸ್ತೆಯ ಕೆಲಸ ನೀಡಿ ಗೌರವಿಸಿತು.

1988 ರಲ್ಲಿ, ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಸಿಯೋಲ್ ನಲ್ಲಿ ನಡೆದ ಪ್ಯಾರಾ ಒಲಂಪಿಕ್ಸ್‍ನಲ್ಲಿ ಸ್ಫರ್ಧಿಸಿದರು. ಅಲ್ಲಿ ಸ್ಫರ್ಧಿಸಿದ ಇತರ ದೇಶಗಳ ಕ್ರೀಡಾಪಟುಗಳೆಲ್ಲರೂ ಅವರವರ ವೈಯಕ್ತಿಕ ಕೋಚ್‍ಗಳನ್ನು ಹೊಂದಿದ್ದರು. ಆದರೆ ಮಾಲತಿ ಏಕಾಂಗಿಯಾಗಿದ್ದರು. ಗೆಲುವನ್ನು ಪಡೆಯಲು ಕೋಚ್ ಮಾರ್ಗದರ್ಶನ ಎಷ್ಟು ಅಗತ್ಯ ಎಂಬುದರ ಅರಿವು ಅವರಿಗೆ ಆಗಿದ್ದೂ ಅಲ್ಲಿಯೇ, ಮೊತ್ತ ಮೊದಲ ಬಾರಿಗೆ! ಆದರೆ ಅದನ್ನು ಪಡೆಯುವುದು ಅವರಿಗೆ ಸಾಧ್ಯವಿರಲಿಲ್ಲ. ಆದರೆ ಹಾಗೆಂದು ಅವರು ಧೃತಿಗೆಡಲಿಲ್ಲ. ವೃತ್ತಿಪರ ತರಬೇತುದಾರರ ಮುದ್ರಿತ ಕ್ಯಾಸೆಟ್‍ಗಳ ಸಹಾಯದಿಂದ ಅವರ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದರು. ಅದರ ಫಲವಾಗಿ, ಒಂದು ವರ್ಷದಲ್ಲಿಯೇ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆಲ್ಲುತ್ತಾ ಹೋದರು. 1989 ರಲ್ಲಿ ಡೆನ್‍ಮಾರ್ಕ್‍ನಲ್ಲಿ ನಡೆದ ವಲ್ರ್ಡ್ ಮಾಸ್ಟರ್ಸ್ ಗೇಮ್ಸ್'ನಲ್ಲಿ 200 ಮೀ ವೀಲ್‍ಚೇರ್ ಓಟದ ಸ್ಫರ್ಧೆ, ಶಾಟ್ ಪುಟ್, ಜ್ಯಾವಲಿನ್ ಥ್ರೋಗಳಲ್ಲಿ ಚಿನ್ನದ ಪದಕ ಪಡೆದರು. ಮಾಲತಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಸಿಯೋಲ್ ನಂತರ, ಬಾರ್ಸಿಲೋನ, ಅಥೆನ್ಸ್, ಬೀಜಿಂಗ್‍ಗಳಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡೆಗಳಲ್ಲಿ ಮತ್ತು ಬೀಜಿಂಗ್, ಬ್ಯಾಂಕಾಕ್, ದಕ್ಷಿಣ ಕೊರಿಯಾ ಮತ್ತು ಕೌಲಾಲಂಪೂರ್‍ಗಳಲ್ಲಿ ನಡೆದ ಏಷ್ಯನ್ ಕ್ರೀಡೆಗಳಲ್ಲಿ ಮಾಲತಿ ಅವರು ಭಾರತವನ್ನು ಪ್ರತಿನಿಧಿಸಿದ್ದಾರೆ.

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಫರ್ಧೆಗಳಲ್ಲಿ ಅವರು ಗೆದ್ದುಕೊಂಡಿರುವುದು 389 ಚಿನ್ನದ ಪದಕಗಳು, 27 ಬೆಳ್ಳಿ ಮತ್ತು 5 ಕಂಚು ಪದಕಗಳು! ಪದಕಗಳ ಸಂಖ್ಯೆ ನೋಡಿದಾಗ ಇದು ಸಾಧ್ಯವೇ ಎನಿಸುತ್ತದೆ. ಸಾಧ್ಯ ಎನ್ನುತ್ತದೆ ಅವರ ಸಾಧನೆಯ ಹಾದಿ! ಬಹಳಷ್ಟು ಪದಕಗಳನ್ನು ಅವರು ಗಳಿಸಿರುವುದು ಬಾಡಿಗೆಯ ರೇಸ್ ಗಾಲಿ ಕುರ್ಚಿಯ ಮೇಲೆ! ಮಾಲತಿ ಇಂದಿಗೂ, ಎಂದೆಂದಿಗೂ ಅಂಗ ವಿಕಲತೆಯಿಂದ ಬಳಲುವ ಎಲ್ಲರಿಗೂ ಸ್ಫೂರ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ. ಅಂಥ ಮಕ್ಕಳ ಪ್ರತಿಭೆ ಸರ್ವತೋಮುಖವಾಗಿ ಅರಳಲು ಅವಕಾಶ ಕಲ್ಪಸಲು ತನ್ನಿಂದಾದ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ, 2002 ರಲ್ಲಿಮಾತೃ ಪ್ರತಿಷ್ಠಾನ’ ಎಂಬ ಪುನರ್ವಸತಿ ಕೇಂದ್ರವನ್ನೂ ಪ್ರಾರಂಭಿಸಿದ್ದಾರೆ.

ಅರ್ಜುನ ಪ್ರಶಸ್ತಿಗೆ ಅಂಗವಿಕಲ ಕ್ರೀಡಾಪಟುಗಳನ್ನೂ ಪರಿಗಣಿಸಬೇಕು ಎಂಬ ಹೋರಾಟವನ್ನೂ ಮುನ್ನಡೆಸಿದವರು ಇವರು. ಇದರ ಫಲವಾಗಿ, 1995 ರಲ್ಲಿ ಇವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೆ.ಕೆ. ಬಿರ್ಲಾ ಪ್ರಶಸ್ತಿ, ಕರ್ನಾಟಕ ಸರ್ಕಾರದ ಏಕಲವ್ಯ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. 1999 ರಲ್ಲಿ ಅಮೆರಿಕಾದ ಅಮೆರಿಕನ್ ಬಯಾಗ್ರಾಫಿಕಲ್ ಸಂಸ್ಥೆ, ವರ್ಷದ ಮಹಿಳೆ' ಎಂದು ಗೌರವಿಸಿದೆ. ಅದೇ ವರ್ಷ, ಲಂಡನ್ನಿನ ಕೇಂಬ್ರಿಜ್‍ನಅಂತಾರಾಷ್ಟ್ರೀಯ ಬಯಾಗ್ರಾಫಿಕಲ್ ಸೆಂಟರ್’ ಮಾಲತಿ ಅವರನ್ನು ವರ್ಷದ ಅಂತಾರಾಷ್ಟ್ರೀಯ ಮಹಿಳೆ' ಎಂದು ಗೌರವಿಸಿದೆ. ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು 2001 ರಲ್ಲಿ ಪಡೆದ ಮಾಲತಿ ಕೃಷ್ಣಮೂರ್ತಿ ಹೊಳ್ಳ ಅವರು ಈ ಪ್ರಶಸ್ತಿ ಪಡೆದ ಪ್ರಪ್ರಥಮ ವಿಕಲಚೇತನ ಮಹಿಳೆ. 2009 ರಲ್ಲಿ ಇವರ ಜೀವನ ಚರಿತ್ರೆ `ಎ ಡಿಫರೆಂಟ್ ಸ್ಪಿರಿಟ್’ ಬಿಡುಗಡೆಯಾಗಿದೆ.


-ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *