Uncategorizedಅಂಕಣ

ಪದ್ಮಪ್ರಭೆ/ ಅನುಪಮ ರಂಗ ಕಲಾವಿದೆ ಚಿಂದೋಡಿ ಲೀಲಾ -ಡಾ. ಗೀತಾ ಕೃಷ್ಣಮೂರ್ತಿ

ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಪಾತ್ರಗಳಲ್ಲಿ ಮೆರೆದ ಚಿಂದೋಡಿ ಲೀಲಾ ಅವರು ಹಲವು ದಾಖಲೆಗಳನ್ನು ಬರೆದ ಸೂಪರ್ ಸ್ಟಾರ್ ಅಭಿನೇತ್ರಿ. ಬಾಲ್ಯದಲ್ಲೇ ರಂಗಭೂಮಿಗೆ ಬಂದ ಅವರು ನಟಿಯಾಗಿ, ನಿರ್ಮಾಪಕಿಯಾಗಿ, ರಂಗ ಸಂಘಟಕಿಯಾಗಿ, ಚಲನಚಿತ್ರ ನಟಿಯಾಗಿ ತಮ್ಮ ಪ್ರತಿಭೆಯನ್ನು ಮೆರೆದರು. ಅವರ ಬಹುಮುಖ ಪ್ರತಿಭೆಯ ಕ್ರಿಯಾಶೀಲತೆಗೆ ರಾಜಕೀಯವೂ ಸೇರಿಕೊಂಡಿತು. ಭಾರತ ಸರ್ಕಾರ ಅವರಿಗೆ 1988ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಚಿಂದೋಡಿ ಲೀಲಾ ಕರ್ನಾಟಕದ ರಂಗಭೂಮಿಯ ಇತಿಹಾಸದಲ್ಲಿ ಸ್ಥಾಯಿಯಾಗಿ ಉಳಿಯುವ ಹೆಸರು. ರಂಗಭೂಮಿಯ ಕಲಾವಿದರ ವಂಶದಲ್ಲಿಯೇ ಹುಟ್ಟಿದ ಇವರಿಗೆ ಅಭಿನಯ ಕಲೆ ರಕ್ತಗತವಾಗಿತ್ತು. ಹತ್ತರ ವಯಸ್ಸಿನಲ್ಲಿಯೇ ರಂಗಭೂಮಿಯಲ್ಲಿ ಬಣ್ಣ ಹಚ್ಚಿದವರು ಇವರು. ಸಿನಿಮಾ ಹಾಗೂ ಟೀವಿ ಮಾಧ್ಯಮಗಳು ಮನರಂಜನಾ ಕ್ಷೇತ್ರವನ್ನು ಆಕ್ರಮಿಸಿಕೊಂಡು ರಂಗಭೂಮಿ ಕಲೆ ಹಿನ್ನೆಲೆಗೆ ಸರಿಯುತ್ತಿದ್ದ ಸಂಕ್ರಮಣ ಕಾಲದಲ್ಲಿ ಚಿಂದೋಡಿ ಲೀಲಾ ರಂಗಭೂಮಿಯನ್ನು ಪ್ರವೇಶಿಸಿದರು. ಅಭಿನಯವಷ್ಟೇ ಅಲ್ಲದೆ ಕನ್ನಡ ಪರ ಹೋರಾಟಗಳಲ್ಲೂ ತೊಡಗಿಸಿಕೊಂಡರು.

ಚಿಂದೋಡಿ ಲೀಲಾ ಜನಿಸಿದ್ದು ವೃತ್ತಿಪರ ರಂಗಭೂಮಿ ಕಲಾವಿದರ ಕುಟುಂಬದಲ್ಲಿ, 1943 ರಲ್ಲಿ. ದಾವಣಗೆರೆ ಇವರ ಹುಟ್ಟಿದ ಊರು. ಲೀಲಾ ಅವರ ತಂದೆ, ಅಣ್ಣಿಗೇರಿ ಶಾಂತವೀರಪ್ಪ ಅವರು 1928 ರಲ್ಲೇ ‘ಶ್ರೀ ಕರಿಬಸವೇಶ್ವರ ಸಂಗೀತ ನಾಟಕ ಮಂಡಲಿ’ ಎಂಬ ನಾಟಕ ಕಂಪನಿಯನ್ನು ಸ್ಥಾಪಿಸಿದ್ದರು. ಲೀಲಾ ಅವರಿಗೆ ಕೇವಲ ಎಂಟು ವರ್ಷಗಳಾಗಿದ್ದಾಗಲೇ, ಶಿವಯೋಗಿ ಸಿದ್ದರಾಮ ಎಂಬ ನಾಟಕದಲ್ಲಿ ಸಿದ್ದರಾಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಈ ನಾಟಕದ ನಂಟು ಅವರಿಗೆ ಮೂರು ತಲೆಮಾರುಗಳಿಂದ ಹರಿದು ಬಂದದ್ದು. ತಂದೆಯ ಈ ಕಂಪೆನಿ, ಲೀಲಾ ಬಣ್ಣ ಹಚ್ಚುವ ವೇಳೆಗಾಗಲೇ ಅನೇಕಾನೇಕ ಸಂಗೀತಾತ್ಮಕ ಹಾಗೂ ಪೌರಾಣಿಕ ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿ, ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಗಳಿಸಿತ್ತು. ಮೈಸೂರಿನ ನಾಲ್ಕನೇ ಕೃಷ್ಣರಾಜ ಒಡೆಯರು ವೀರಪ್ಪ ಅವರ ಗಾಯನ ಹಾಗೂ ಅಭಿನಯ ಪ್ರತಿಭೆಯನ್ನು ಮೆಚ್ಚಿ ಅವರಿಗೆ ‘ಗಾಯನ ಗಂಧರ್ವ’ ಎಂಬ ಬಿರುದನ್ನು ನೀಡಿ, ಬಂಗಾರದ ಕೈ ಕಡಗವನ್ನು (ತೊಡೇವು) ಬಹುಮಾನವಾಗಿ ನೀಡಿದರಂತೆ. ಅಂದಿನಿಂದ ಅವರು ಚಿನ್ನದ ತೊಡೇವು ವೀರಪ್ಪ' ಎಂದೇ ಖ್ಯಾತನಾಮರಾದರಂತೆ.ಇದೇ ಮುಂದೆ ಚಿಂದೋಡಿ' ಎಂದು ರೂಪಾಂತರ ಹೊಂದಿ, ಮೂಲ ಅಣ್ಣಿಗೇರಿ' ಎಂಬ ಕುಟುಂಬದ ಮೂಲ ಹೆಸರು ಮರೆಗೆ ಸರಿಯಿತಂತೆ. ಲೀಲಾ ಹಿಂದೆ ಸೇರಿರುವ `ಚಿಂದೋಡಿ’ಯ ಕಥೆ ಇದು.

ತಂದೆಯ ಮರಣದ ನಂತರ ಅವರ ಐವರು ಮಕ್ಕಳು ಈ ನಾಟಕ ಕಂಪನಿಯ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡರು. ಕೆಬಿಆರ್ (ಕರಿ ಬಸವ ರಾಜೇಂದ್ರ) ನಾಟಕ ಕಂಪನಿ ಎಂದು ಕಂಪನಿಗೆ ಮರು ನಾಮಕರಣ ಮಾಡಿದರು. 1950 ಮತ್ತು 1970 ನಡುವಿನ ಅವಧಿಯಲ್ಲಿ, ಗುಣಸಾಗರಿ, ಶಕುಂತಲ, ಪತ್ನಿ ಪಾಶ, ಬ್ರಹ್ಮಚಾರಿಯ ಮಗ ಮುಂತಾದ ಅನೇಕ ನಾಟಕಗಳ ಅನೇಕ ಯಶಸ್ವೀ ಪ್ರದರ್ಶನಗಳನ್ನು ನೀಡಿತು. ಇವೆಲ್ಲದರಲ್ಲೂ ಲೀಲಾಳದೇ ನಾಯಕಿಯ ಪಾತ್ರ ಎಂದು ಬೇರೆ ಹೇಳಬೇಕಾಗಿಯೇ ಇಲ್ಲ. ಈ ಅವಧಿಯಲ್ಲಿ, ದಾವಣಗೆರೆ ಕೋಲ ಶಾಂತಪ್ಪ ಅವರು ಬರೆದ ಹಳ್ಳಿ ಹುಡುಗಿ' ನಾಟಕ ಸುಮಾರು 6000 ಪ್ರದರ್ಶನಗಳನ್ನು ಕಂಡು ದಾಖಲೆ ನಿರ್ಮಿಸಿದೆ. ಹಳ್ಳಿ ಹುಡುಗಿಯ ಎಲ್ಲ ಪಾತ್ರಗಳನ್ನೂ ಕುಟುಂಬದವರೇ ನಿರ್ವಸಿದ್ದು ಒಂದು ವಿಶೇಷ. ಹುಬ್ಬಳ್ಳಿಯಲ್ಲಿ ಈ ನಾಟಕವನ್ನು ಪ್ರದರ್ಶಿಸಿದಾಗ, ಹುಬ್ಬಳ್ಳಿಯಲ್ಲಿ ಆಗ ಪ್ರದರ್ಶಿತವಾಗುತ್ತಿದ್ದ ರಾಜ್‍ಕಪೂರ್ ಅವರಜಿಸ್ ದೇಶ್ ಮೆ ಗಂಗಾ ಬೆಹತೀ ಹೈ’ ಸಿನಿಮಾವನ್ನೂ ಗಳಿಕೆಯಲ್ಲಿ ಹಿಂದಿಕ್ಕಿತಂತೆ!

ನಾಟಕದಲ್ಲಿನ ಲೀಲಾ ಅವರ ಅಭಿನಯವನ್ನು ನೋಡಿದ ಕನ್ನಡದ ಖ್ಯಾತ ನಟ ಬಿ.ಆರ್. ಪಂತುಲು ಅವರು ಲೀಲಾ ಅವರನ್ನು ಸಿನಿಮಾ ರಂಗಕ್ಕೆ ಕರೆತರಲು ಕಾರಣರಾದರಂತೆ. ಹೀಗೆ ಸಿನಿಮಾ ರಂಗವನ್ನು ಪ್ರವೇಶಿಸಿದ ಲೀಲಾ, ಸುಮಾರು 50 ಚಿತ್ರಗಳಲ್ಲಿ ನಟಿಸಿದ್ದಾರೆ. ಶ್ರೀಕೃಷ್ಣದೇವರಾಯ, ಕಿತ್ತೂರು ಚೆನ್ನಮ್ಮ, ತುಂಬಿದ ಕೊಡ, ಗಾಳಿ ಗೋಪುರ, ಶರಪಂಜರ ಮುಂತಾದ ಚಿತ್ರಗಳು ಅವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟವು. ನಟಸಾರ್ವಭೌಮ ಡಾ. ರಾಜ್‍ಕುಮಾರ್, ಗಂಗಾಧರ್, ಕಲ್ಯಾಣ್‍ಕುಮಾರ್, ಸರೋಜಾದೇವಿ ಮುಂತಾದ ಖ್ಯಾತ ನಟ ನಟಿಯರ ಜೊತೆ ನಟಿಸುವ ಅವಕಾಶ ಅವರಿಗೆ ದೊರೆತಿತ್ತು. ಇವರು ಅನೇಕ ಚಿತ್ರಗಳನ್ನೂ ನಿರ್ಮಾಣ ಮಾಡಿದರು. ಅವುಗಳಲ್ಲಿ ಗಾನಯೋಗಿ ಪಂಚಾಕ್ಷರ ಗವಾಯಿ ಅತಿ ಮುಖ್ಯವಾದುದು.

ಲೀಲಾ ಅವರು ಚಿತ್ರ ರಂಗವನ್ನು ಪ್ರವೇಶಿಸಿದರೂ ರಂಗಭೂಮಿಯ ನಂಟನ್ನು ಬಿಡಲಿಲ್ಲ. ಅವರು ನಟಿಸಿದ ನಾಟಕಗಳು ಅಪಾರ ಪ್ರಮಾಣದ ವೀಕ್ಷಕರನ್ನು ಸೆಳೆಯುತ್ತಿತ್ತು. ಹತ್ತು ಹಲವು ಬಗೆಯ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸುತ್ತಿದ್ದರು. ಹಳ್ಳಿ ಹುಡುಗಿ, ಸಂಗೀತ ಶಿಕ್ಷಕಿ ಅಥವಾ ವೈದ್ಯೆ ಹೀಗೆ ಯಾವುದೇ ಪಾತ್ರವಿರಲಿ ಅದಕ್ಕೆ ಜೀವ ತುಂಬುತ್ತಿದ್ದರು. ತಮ್ಮ ಸುತ್ತಮುತ್ತ ಕಂಡುಬರುವ ಸಾಮಾನ್ಯ ವ್ಯಕ್ತಿಗಳ ಜೀವನದಲ್ಲಿನ ನೋವು ನಲಿವುಗಳು, ದ್ವೇಷ ಮತ್ಸರಗಳು, ಜಂಝಾಟಗಳೆ ನಾಟಕದ ವಸ್ತುಗಳಾಗಿರುತ್ತಿತ್ತು. ಹಾಗಾಗಿ ನೋಡುಗರಿಗೆ ಆಪ್ತವಾಗಿ ಪಾತ್ರಗಳೊಡನೆ ತಮ್ಮನ್ನು ಸಮೀಕರಿಸಿಕೊಳ್ಳುತ್ತಿದ್ದರು. ಅವರ ನಾಟಕದ ಯಶಸ್ಸಿಗೆ ಇದೂ ಮುಖ್ಯ ಕಾರಣವಾಗಿತ್ತು.1980 ರಿಂದ 1990 ರವರೆಗೆ ಹತ್ತು ವರ್ಷಗಳ ಕಾಲ ಬೆಳಗಾವಿಯಲ್ಲಿ ಶಿಬಿರ ಹೂಡಿ ಕನ್ನಡದ ಕಿಚ್ಚನ್ನು ಹಚ್ಚಿದರು. ಇದನ್ನು ಸಹಿಸದ ಮರಾಠೀ ಭಾಷಿಕರು ಅವರಿಗೆ ಇನ್ನಿಲ್ಲದ ತೊಂದರೆ ಕೊಡರು. ನಾಟಕದ ಕಂಪನಿ ಟೆಂಟು ಹೂಡದಂತೆ ತಕರಾರು ತೆಗೆದರು. ಅಂಥ ಸಂದರ್ಭದಲ್ಲಿ ಇವರ ಬೆನ್ನಿಗೆ ನಿಂತವರು ಇವರ ಅಭಿಮಾನಿಗಳು, ಕನ್ನಡದ ಅಭಿಮಾನಿಗಳು. ಈ ವಿವಾದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿತು. ಅದರಲ್ಲಿ ತೀರ್ಪು ಇವರ ಪರವಾಗಿಯೇ ಇತ್ತು. ಆ ನಂತರದಲ್ಲಿ ಛತ್ರಪತಿ ಶಿವಾಜಿ' ನಾಟಕ ಪ್ರದರ್ಶನ ನೀಡಿ ಮರಾಠೀ ಭಾಷಿಕರ ಮನವನ್ನೂ ಗೆದ್ದರು!

ನಾಟಕದಲ್ಲಿ ಅಷ್ಟೇ ಅಲ್ಲದೆ ಜನ ಮಾನಸದಲ್ಲಿಯೂ ಸ್ಥಾನ ಪಡೆದರು. ಮುನಿಸಿಪಲ್ ಕೌನ್ಸಿಲ್ ಚುನಾವಣೆಗೆ ನಿಂತು, 1600 ಜನಸಂಖ್ಯೆಯ ಪೈಕಿ ಕೇವಲ 600 ರಷ್ಟು ಕನ್ನಡಿಗರಿದ್ದ ವಾರ್ಡ್‍ನಲ್ಲಿ, ಮರಾಠಿಗರ ಮತವನ್ನೂ ಪಡೆದು ಜಯಶಾಲಿಗಳಾದರು! ಲೀಲಾ ನಾಟಕದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ನಾಯಕಿಯಾಗಿಯೇ ಮೆರೆದವರು. ಚಿಂದೋಡಿ ಲೀಲಾ ಅವರ ಹುಟ್ಟಿದೂರು ದಾವಣಗೆರೆಯಾದರೂ ಅವರು ನೆಲೆಸಿದ್ದು ಬೆಳಗಾವಿಯಲ್ಲಿ. ಬೆಳಗಾವಿಯ ಕೌನ್ಸಿಲರ್ ಆಗಿದ್ದಾಗ, 2002 ರಲ್ಲಿ ಶಹಾಪುರದಲ್ಲಿ 'ಕೆಬಿಆರ್ ಕನ್ನಡ ಸಂಸ್ಕøತಿ ಕೇಂದ್ರ'ವನ್ನು ನಿರ್ಮಿಸಿದರು. ಇದನ್ನು ಅಂದಿನ ರಾಜ್ಯಪಾಲರಾಗಿದ್ದ ರಮಾದೇವಿ ಅವರು ಉದ್ಘಾಟಿಸಿದ್ದರು. ಇದು ಅಲ್ಲಿನ ಸಾಂಸ್ಕøತಿಕ ಲೋಕಕ್ಕೆ ಅತ್ಯದ್ಭುತ ವೇದಿಕೆಯನ್ನು ಒದಗಿಸಿಕೊಟ್ಟಿತ್ತು. ಇದಲ್ಲದೆ, ಲೀಲಾ ಅವರು ಬೆಳಗಾವಿ ಹಾಗೂ ಧಾರವಾಡಗಳಲ್ಲಿ ಸಂಸ್ಕøತಿ ಕಲಾ ಕೇಂದ್ರಗಳನ್ನು ನಿರ್ಮಿಸಿದ್ದರು.

ದಾವಣಗೆರೆಯ ಹೊರವಲಯದಲ್ಲಿ ನಿರ್ಮಿಸಿರುವ 'ಚಿಂದೋಡಿ ರಂಗಲೋಕ', ರಂಗಭೂಮಿಯನ್ನು ದಶಕಗಳ ಕಾಲ ಜೀವಂತವಾಗಿಟ್ಟು ಪೋಷಿಸಿದ ಅನುಪಮ ರಂಗ ಕಲಾವಿದೆಯ ನೆನಪನ್ನು ಶಾಶ್ವತವಾಗಿರಿಸಿರುವ ವಿಶಿಷ್ಟ ರೀತಿಯ ಸ್ಮಾರಕ. ಪದ್ಮಶ್ರೀ ಚಿಂದೋಡಿ ಲೀಲಾ ಟ್ರಸ್ಟ್ ಈ ವಿಶಿಷ್ಟ ಸ್ಮಾರಕವನ್ನು 2 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಿದೆ. ಹಸಿರು ಗಿಡಗಳಿಂದ ಕೂಡಿದ ಉದ್ಯಾನದ ಮಧ್ಯ ಭಾಗದಲ್ಲಿ ಚಿಂದೋಡಿ ಲೀಲಾ ಅವರ ಆಳೆತ್ತರದ ಪ್ರತಿಮೆಯನ್ನು ಪೀಠದ ಮೇಲೆ ನಿಲ್ಲಿಸಲಾಗಿದ್ದು, ಪೀಠದ ಮೇಲೆ ಅವರಿಗೆ ಬಂದಿರುವ ಪ್ರಶಸ್ತಿಗಳೆಲ್ಲದರ ಉಲ್ಲೇಖವಿದೆ. ಉದ್ಯಾನದಲ್ಲಿ, ಚಿಂದೋಡಿ ಲೀಲಾ ಅವರು ನಟಿಸಿದ ಅನೇಕ ಪಾತ್ರಗಳ ಪ್ರತಿರೂಪಗಳನ್ನು ನಿರ್ಮಿಸಿ ನಿಲ್ಲಿಸಲಾಗಿದೆ. ಪ್ರಪಂಚದ ಖ್ಯಾತನಾಮರ ಮೇಣದ ಪ್ರತಿಕೃತಿಗಳ ಸಂಗ್ರಹಾಲಯ ಲಂಡನ್ನಿನ `ಮೆಡಾಮ್ ಟುಸ್ಸಾಡ್ಸ್’ ಸಂಗ್ರಹಾಲಯವನ್ನು ಅಕ್ಷರಶಃ ನೆನಪಿಗೆ ತರುವ, ಅದರ ಸ್ಥಳೀಯ ಆವೃತ್ತಿ ಎಂಬಂತಿದೆ ಇದು ಎನ್ನಲಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲೇ ಇಂಥ ಸ್ಮಾರಕ ಇನ್ನೊಂದಿಲ್ಲ ಎನ್ನಲಾಗಿದೆ. ಕಟ್ಟಡದ ಒಳಭಾಗದ ಗೋಡೆಗಳ ಮೇಲೆ, ಲೀಲಾ, ತಮ್ಮ ವೃತ್ತಿ ಜೀವನದಲ್ಲಿ ನಟಿಸಿದ ಅನೇಕ ಪಾತ್ರಗಳ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಕಟ್ಟಡದ ಹೊರ ಗೋಡೆಯ ಮೇಲೆ ಗ್ರಾಮೀಣ ಬದುಕನ್ನು ಬಿಂಬಿಸುವ ಚಿತ್ರಗಳನ್ನು ರಚಿಸಲಾಗಿದೆ.

1992 ರಲ್ಲಿ ಮುಖ್ಯ ಮಂತ್ರಿಗಳಾಗಿದ್ದ ಬಂಗಾರಪ್ಪ ಅವರು ಲೀಲಾ ಅವರನ್ನು ನಾಟಕ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಒಬ್ಬ ರಂಗ ಕಲಾವಿದೆಗೆ ಪ್ರಥಮ ಬಾರಿಗೆ ಈ ಗೌರವ ದೊರೆತಿತ್ತು! ಈ ಎಲ್ಲ ಚಟುವಟಿಕೆಗಳ ನಡುವೆಯೂ ಅವರ ರಂಗಭೂಮಿಯ ಸೇವೆ ನಿರಂತರವಾಗಿ ನಡೆದಿತ್ತು. ಬೆಂಗಳೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ, ಅವರ `ಪೊಲೀಸನ ಮಗಳು’ ನಾಟಕ ಸತತವಾಗಿ 1132 ಪ್ರದರ್ಶನಗಳನ್ನು ನೀಡಿ ಗಿನ್ನಿಸ್ ದಾಖಲೆಯನ್ನು ಸೃಷ್ಟಿಸಿದೆ. ಭಾರತ ಸರ್ಕಾರ ಇವರಿಗೆ 1988 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದೆ.

ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳು ಇವರನ್ನು ಅರಸಿ ಬಂದವು. ರಾಜ್ಯ ಸರ್ಕಾರ ಇವರಿಗೆ 1995-96 ರ ಅತ್ಯುತ್ತಮ ಚಿತ್ರ ನಿರ್ಮಾಪಕಿ ಪ್ರಶಸ್ತಿ ನೀಡಿ ಗೌರವಿಸಿತು. ಇವಲ್ಲದೆ, ಅನೇಕ ಸಂಘಸಂಸ್ಥೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ. 2010 ರ ಜನವರಿ 21 ರಂದು ಅವರು ಹೃದಯಾಘಾತದಿಂದ ಮೃತರಾದರು.


ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *