ನ್ಯೂಜ಼ಿಲೆಂಡ್ ಸರ್ಕಾರದ ಮಹಿಳಾಪರ ನಿಲುವು – ಮೈತ್ರಿ ಬೆಂಗಳೂರು

ಮಹಿಳಾ ನೇತೃತ್ವದ ಸರ್ಕಾರಗಳು ಮಹಿಳಾ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನೀತಿಯನ್ನು ರೂಪಿಸಬಲ್ಲವು ಎಂಬುದು ಮಹಿಳಾ ಹೋರಾಟಗಾರರ ದೃಢವಾದ ನಂಬಿಕೆ. ಅದನ್ನು ನಿಜವಾಗಿಸಿದ್ದು ನ್ಯೂಜ಼ಿಲೆಂಡ್ ನ ಜಸಿಂಡಾ ಆರ್ಡರ್ನ್‍ ಸರ್ಕಾರ.

ಕಳೆದ ವರ್ಷ ನ್ಯೂಜ಼ಿಲೆಂಡ್ ದೇಶವು ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಮಹಿಳಾ ರಾಜಕಾರಿಣಿಯನ್ನು ತನ್ನ ಪ್ರಧಾನಿಯನ್ನಾಗಿ ಆಯ್ಕೆ ಮಾಡಿ ಸುದ್ದಿ ಮಾಡಿತ್ತು. ಜಸಿಂಡಾ ಆರ್ಡರ್ನ್ ನೇತೃತ್ವದಲ್ಲಿ ರಚನೆಗೊಂಡಿರುವ ಸರ್ಕಾರ ಈಗ ಮತ್ತೊಮ್ಮೆ ತನ್ನ ಮಹಿಳಾಪರ ಕಾಳಜಿಯನ್ನು ತೋರುತ್ತ ಕೌಟುಂಬಿಕ ಹಿಂಸೆಗೆ ಬಲಿಯಾಗುವ ಮಹಿಳೆಯರ ಏಳಿಗೆಗಾಗಿ ಹೊಸ ಕಾನೂನೊಂದನ್ನು ಜಾರಿ ಮಾಡಿದೆ. ಈ ಕಾನೂನು ಕೌಟುಂಬಿಕ ಹಿಂಸೆಯಿಂದ ಪೀಡಿತರಾದ ಹೆಂಗಸರಿಗೆ 10 ದಿನಗಳ ವೇತನ ಸಹಿತ ರಜೆಯನ್ನು ನೀಡುತ್ತದೆ. ಇಂತಹ ಕಾನೂನನ್ನು ಜಾರಿಮಾಡಿದ ವಿಶ್ವದ ಎರಡನೇ ರಾಷ್ಟ್ರ ನ್ಯೂಜ಼ಿಲೆಂಡ್. 2004ರಲ್ಲಿ ಫಿಲಿಪೀನ್ಸ್ ನಲ್ಲಿ ಇಂತಹದೇ ಕಾನೂನು ಜಾರಿಯಾಗಿತ್ತು. ಕೆನಡಾ ದೇಶದ ಕೆಲವು ಪ್ರಾಂತ್ಯಗಳಲ್ಲಿ ಇಂತಹ ಕಾನೂನು ಜಾರಿಯಲ್ಲಿದೆ.

ಜಸಿಂಡಾ ಆರ್ಡರ್ನ್

ನ್ಯೂಜ಼ಿಲೆಂಡ್ ಹೆರಾಲ್ಡ್ ಪತ್ರಿಕೆಯ ಪ್ರಕಾರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪೈಕಿ ಅತಿ ಹೆಚ್ಚಿನ ಕೌಟುಂಬಿಕ ಹಿಂಸೆಯ ಪ್ರಕರಣಗಳು ನ್ಯೂಜ಼ಿಲೆಂಡ್ ನಲ್ಲಿ ವರದಿಯಾಗಿವೆ. ಅಲ್ಲಿ ಪ್ರತಿ ಐದೂವರೆ ನಿಮಿಷಗಳಿಗೊಮ್ಮೆ ಪೋಲೀಸರು ಕೌಟುಂಬಿಕ ಹಿಂಸೆಯ ದೂರಿಗೆ ಪ್ರತಿಕ್ರಯಿಸುತ್ತಾರೆ. ಹಾಗಾಗಿಯೂ ಶೇಕಡ 80 ರಷ್ಟು ಪ್ರಕರಣಗಳು ಬೆಳಕಿಗೆ ಬರದೆ ಮುಚ್ಚಿ ಹೋಗುತ್ತವೆ.  ಕೌಟುಂಬಿಕ ಹಿಂಸೆ ಇಷ್ಟು ತೀವ್ರವಾದ ಸಮಸ್ಯೆಯಾದರೂ ಸಂತ್ರಸ್ತ ಮಹಿಳೆಯರ ಏಳಿಗೆ ಅಲ್ಲಿನ ಸರ್ಕಾರಗಳ ಆದ್ಯತೆ ಈವರೆಗೂ ಆಗಿರಲೇ ಇಲ್ಲ.

ನ್ಯೂಜ಼ಿಲೆಂಡ್ ನ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಗ್ರೀನ್ ಪಾರ್ಟಿಯ ಸಂಸದೆ ಜ್ಯಾನ್ ಲೋಗಿ ಸಂಸತ್ತಿನಲ್ಲಿ ಕೌಟುಂಬಿಕ ಹಿಂಸೆಯ ಸಂತ್ರಸ್ತರಿಗೆ 10 ದಿನಗಳ ವೇತನ ಸಹಿತ ರಜೆಯನ್ನು ನೀಡಬೇಕೆಂಬ ಖಾಸಗಿ ಮಸೂದೆಯೊಂದನ್ನು ಮಂಡಿಸಿದ್ದರು. ಸಂಸತ್ತು ಈ ಮಸೂದೆಯನ್ನು ಜುಲೈ 26 ರಂದು ಅಂಗೀಕರಿಸಿದೆ. ಹೊಸ ಕಾನೂನು ಆಪ್ರಿಲ್ 1, 2019 ರಿಂದ ಜಾರಿಗೆ ಬರಲಿದೆ. ಸಂತ್ರಸ್ತರಿಗೆ ಸಿಗುವ ಈ 10 ದಿನಗಳ ರಜೆ ಬೇರೆಲ್ಲ ಉದ್ಯೋಗಿಗಳಿಗೆ ಸಿಗುವ ವಾರ್ಷಿಕ ರಜೆಗೆ ಪ್ರತ್ಯೇಕವಾದದ್ದು. ರಜೆಯಷ್ಟೇ ಅಲ್ಲದೆ ಸಂತ್ರಸ್ತ ಮಹಿಳೆಯರಿಗೆ ಅನುಕೂಲಕರವಾದಂತಹ ಕೆಲಸದ ವಾತಾವರಣವನ್ನು ನಿರ್ಮಿಸಬೇಕಾದದ್ದು ಸಂಸ್ಥೆಗಳ ಕರ್ತವ್ಯವಾಗಿರುತ್ತದೆ. ಕೌಟುಂಬಿಕ ಹಿಂಸೆಗೆ ಬಲಿಯಾದ ಮಹಿಳೆಯರಿಗೆ ಸೂಕ್ತವಾಗುವಂತಹ ಕೆಲಸದ ವೇಳೆಯಲ್ಲಿನ ಬದಲಾವಣೆ, ಕಚೇರಿಯಲ್ಲಿನ ಬದಲಾವಣೆ ಅಥವಾ ಬೇರೆ ಊರಿನಲ್ಲಿರುವ ಕಚೇರಿಗೆ ವರ್ಗಾವಣೆ, ಸಂಸ್ಥೆಯ ವೆಬ್‍ಸೈಟ್‍ನಲ್ಲಿರುವ ಸಂತ್ರಸ್ತ ಮಹಿಳೆಯ ವಿವರಗಳನ್ನು ತೆಗೆದುಹಾಕುವುದು — ಇವೆಲ್ಲವನ್ನೂ ಸಂಸ್ಥೆಗಳು ತಮ್ಮ ಮಹಿಳಾ ಉದ್ಯೋಗಿಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳಾಗಿವೆ.

ಜ್ಯಾನ್ ಲೋಗಿ

ಕೌಟುಂಬಿಕ ಹಿಂಸೆಯ ಕರಾಳ ಛಾಯೆ ಕೇವಲ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿರದೆ ಮಹಿಳೆಯರ ಉದ್ಯೋಗದ ಸ್ಥಳಗಳಿಗೂ ವ್ಯಾಪಿಸುತ್ತದೆ. ತಮ್ಮ ಮೇಲೆ ದೌರ್ಜನ್ಯವೆಸಗುತ್ತಿರುವ ಸಂಗಾತಿಯ ಮನೆಯಿಂದ ಹೊರನಡೆಯುವುದು ಮಹಿಳೆಯರಿಗೆ ಸುಲಭದ ಕೆಲಸವೇನೂ ಅಲ್ಲ. ಆರ್ಥಿಕವಾಗಿ ಸ್ವಾವಲಂಬಿಗಳಾದ ಮಹಿಳೆಯರಿಗೂ ಇದು ಕಷ್ಟದ ಕೆಲಸವೇ. ಮನೆ ಬಿಟ್ಟು ಬಂದರೆ ಬೇರೊಂದು ಆಶ್ರಯವನ್ನು ಹುಡುಕಲು ಬೇಕಾದ ಸಮಯ ಅವರಿಗೆ ದುಬಾರಿ. ಕೆಲಸಕ್ಕೆ ರಜೆ ಹಾಕಿ ಬೇರೊಂದು ಮನೆಯನ್ನು ಹುಡುಕುವುದು ಕಷ್ಟಸಾಧ್ಯವೆ. ಭಯಾನಕವಾದ ಕೌಟುಂಬಿಕ ಪರಿಸ್ಥಿತಿಗೆ ಪರ್ಯಾಯವೊಂದನ್ನು ಹುಡುಕಿಕೊಂಡು ಕೆಲಸಕ್ಕೆ ಮರಳುವ ವೇಳೆಗೆ ಅವರನ್ನು ಕೆಲಸದಿಂದ ವಜಾ ಮಾಡಿರುವ ಸಾಧ್ಯತೆಯೂ ಇರುತ್ತದೆ. ಇಂತಹ ಪರಿಸ್ಥಿತಿಯನ್ನು ತಪ್ಪಿಸುವುದೇ ಈ ಹೊಸ ಕಾನೂನಿನ ಗುರಿ. ಕೆಲಸ ಕಳೆದುಕೊಳ್ಳುವ ಭಯವಿಲ್ಲದೆ ಸಂತ್ರಸ್ತ ಮಹಿಳೆಯರು ತಮ್ಮ ಕಷ್ಟಕರ ಪರಿಸ್ಥಿತಿಗಳಿಗೆ ಪರ್ಯಾಯವೊಂದನ್ನು ಹುಡುಕಿಕೊಳ್ಳಲು, ಮರಳಿದ ನಂತರ ಅವರ ಕೆಲಸದ ಸ್ಥಳದಲ್ಲಿ ಸುರಕ್ಷಿತವಾಗಿ ಕಾರ್ಯನಿರ್ವಹಿಸಲು ಈ ಕಾನೂನು ಎಡೆಮಾಡಿಕೊಡುತ್ತದೆ.

ನ್ಯೂಜ಼ಿಲೆಂಡ್ ಅಭಿವೃದ್ಢಿ ಹೊಂದಿದ ರಾಷ್ಟ್ರವಾದರೂ ಅಲ್ಲಿನ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಪುರುಷರಿಗೆ ಸಮಾನವಾದದ್ದಲ್ಲ. ಅದರಲ್ಲೂ ಮಾವೋರಿ ಎಂಬ ಬುಡಕಟ್ಟಿಗೆ ಸೇರಿದ ಜನರಲ್ಲಿ ಅತಿ ಹೆಚ್ಚಿನ ಲಿಂಗ ಅಸಮಾನತೆ ಕಂಡುಬರುತ್ತದೆ. ಪುರುಷಾಧಿಪತ್ಯದ ನೆರಳಲ್ಲೇ ಮಹಿಳೆಯರು ಬದುಕುತ್ತಿರುವ ಪರಿಸ್ಥಿತಿ ಇಂದಿಗೂ ಇದೆ. ಬಡತನ, ಮದ್ಯವ್ಯಸನ ಮತ್ತು ಮಾದಕವಸ್ತುಗಳ ಸೇವನೆಯಷ್ಟೇ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಾರಣವಲ್ಲ. ನ್ಯೂಜ಼ಿಲೆಂಡ್ ಸಮಾಜದಲ್ಲಿ ಆಳವಾಗಿ ಬೇರೂರಿರುವ ಲಿಂಗ ಅಸಮಾನತೆಯೇ ಪ್ರಮುಖ ಕಾರಣ ಎಂದು ವಿಮೆನ್ಸ್ ರೆಫ್ಯೂಜ್ ಸಂಸ್ಥೆಯ ಮುಖ್ಯಸ್ಥೆ ಡಾ. ಆಂಗ್ ಜೂರಿ ಅಭಿಪ್ರಾಯ ಪಡುತ್ತಾರೆ.

“ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಬಡತನ, ಮದ್ಯಸೇವನೆಯನ್ನು ದೂರುವ ಜನರೇ ಹೆಚ್ಚು. ಆದರೆ ದೌರ್ಜನ್ಯಕ್ಕೆ ಮೂಲಕಾರಣವಾದ ನಮ್ಮ ಪುರುಷಪ್ರಧಾನ ಸಮಾಜದ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ. ಸ್ವೀಡನ್, ನಾರ್ವೆ ಮುಂತಾದ ದೇಶಗಳಲ್ಲಿ ಲಿಂಗ ಸಮಾನತೆಯಗುರಿಯನ್ನು ಸಾಧಿಸಲು ಶ್ರಮವಹಿಸಲಾಗಿದೆ; ಆದ್ದರಿಂದಲೇ ಆ ದೇಶಗಳಲ್ಲಿ ಕೌಟುಂಬಿಕ ಹಿಂಸೆಯ ಪ್ರಮಾಣ ಸಾಕಷ್ಟು ಕಡಿಮೆಯಿದೆ. ನಮ್ಮಲ್ಲೂ ಅಂತಹ ಬದಲಾವಣೆ ತರಬೇಕಾದರೆ ಮಹಿಳೆಯರ ಸ್ಥಾನಮಾನದ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ,” ಎನ್ನುತ್ತಾರೆ ಜೂರಿ.

ನ್ಯೂಜ಼ಿಲೆಂಡ್ ಸಂಸತ್ತಿನಲ್ಲಿ ಜ್ಯಾನ್ ಲೋಗಿ ಈ ಮಸೂದೆಯನ್ನು ಮಂಡಿಸಿದಾಗ 63 ಸಂಸದರು ಕಾನೂನಿನ ಪರವಾಗಿ ನಿಂತರೆ 57 ಸಂಸದರು ಅದನ್ನು ವಿರೋಧಿಸಿದರು. ನ್ಯೂಜ಼ಿಲೆಂಡ್ ನ ಸಂಸ್ಥೆಗಳಿಗೆ, ಸಣ್ಣ ಪುಟ್ಟ ಉದ್ಯಮಗಳಿಗೆ ಈ ಕಾನೂನಿಂದ ಹೊಡೆತ ಬೀಳುತ್ತದೆ; ಮಹಿಳೆಯರಿಗೆ ಹೆಚ್ಚಿನ ರಜೆ ಕೊಡುವ ಬದಲಾಗಿ ಸಂಸ್ಥೆಗಳು ಸಂತ್ರಸ್ತ ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳುವುದರಿಂದಲೇ ದೂರ ಉಳಿಯಬಹುದೆಂಬುದು ಈ ಕಾನೂನನ್ನು ವಿರೋಧಿಸುವವರ ವಾದ. ಆದರೆ ಮಹಿಳಾ ಕಾರ್ಯಕರ್ತೆಯರು ಈ ವಾದವನ್ನು ತಳ್ಳಿ ಹಾಕುತ್ತಾರೆ. ದೇಶಕ್ಕೆ ಕೌಟುಂಬಿಕ ಹಿಂಸೆಯಿಂದಾಗುವ ನಷ್ಟವೇ ಹೆಚ್ಚು. ವರ್ಷವೊಂದಕ್ಕೆ ಕೌಟುಂಬಿಕ ಹಿಂಸೆಯಿಂದ ನ್ಯೂಜ಼ಿಲೆಂಡ್ 4.1 ರಿಂದ 7 ಬಿಲಿಯನ್ ನ್ಯೂಜ಼ಿಲೆಂಡ್ ಡಾಲರ್‍ ಗಳ ನಷ್ಟ ಅನುಭವಿಸುತ್ತದೆ ಎಂದು ವರದಿಗಳು ಹೇಳುತ್ತವೆ. ಹೊಸ ಕಾನೂನಿಂದ ಇಂತಹ ನಷ್ಟವನ್ನು ಸ್ವಲ್ಪ ಮಟ್ಟಿಗಾದರೂ ತಡೆಯಬಹುದಾದರೆ ಅದು ಸಮಾಜ ಹಾಗೂ ಆರ್ಥಿಕ ವ್ಯವಸ್ಥೆಗಾಗುವ ಲಾಭವೇ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ.

ಜಸಿಂಡಾ ಆರ್ಡರ್ನ್ ನೇತೃತ್ವದ ಸರ್ಕಾರವು ಕಳೆದ ಮೇ ತಿಂಗಳಿನಲ್ಲಿ ಮಂಡಿಸಿದ ಬಜೆಟ್‍ನಲ್ಲಿ 80 ಮಿಲಿಯನ್ ನ್ಯೂಜ಼ಿಲೆಂಡ್ ಡಾಲರ್‍ಗಳನ್ನು ಕೌಟುಂಬಿಕ ಹಿಂಸೆಯ ವಿರುದ್ಧ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳಿಗೆ ನೀಡುವ ಅನುದಾನಕ್ಕಾಗಿ ಮೀಸಲಿಟ್ಟಿದೆ. ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವುದು ಕೇವಲ ಬಾಯಿಮಾತಾಗದೆ ಮಹಿಳಾಪರ ನೀತಿಗಳನ್ನು ರೂಪಿಸುತ್ತ, ಲಿಂಗ ಸಮಾನತೆಯ ಗುರಿಯನ್ನು ತಲುಪುವತ್ತ ನ್ಯೂಜ಼ಿಲೆಂಡ್ ಸರ್ಕಾರ ಇಟ್ಟಿರುವ ಈ ಹೆಜ್ಜೆ ಶ್ಲಾಘನೀಯವಾದದ್ದು; ವಿಶ್ವದ ಇತರ ದೇಶಗಳಿಗೆ ಅನುಕರಣೀಯವಾದದ್ದು.

ಮೈತ್ರಿ ಬೆಂಗಳೂರು

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ನ್ಯೂಜ಼ಿಲೆಂಡ್ ಸರ್ಕಾರದ ಮಹಿಳಾಪರ ನಿಲುವು – ಮೈತ್ರಿ ಬೆಂಗಳೂರು

  • July 30, 2018 at 6:46 am
    Permalink

    Good steps taken by New zealand government

    Reply

Leave a Reply

Your email address will not be published. Required fields are marked *