ನೆನಪಿನ ಓಣಿ/ ನನ್ನ ಚುನಾವಣಾ ಪಯಣ – ಲೀಲಾದೇವಿ ಆರ್. ಪ್ರಸಾದ್
ಮಹಿಳೆ ತನ್ನ ರಾಜಕೀಯ ಶಕ್ತಿ ಸಾಬೀತು ಪಡಿಸಲು ಪಡಬೇಕಾದ ಪಾಡು ನಮ್ಮೆಲ್ಲರಿಗೂ ಗೊತ್ತು. ರಾಜಕಾರಣದಲ್ಲಿ ಈ ಸಾಹಸಕ್ಕೆ ಎದುರಾಗುವ ಸವಾಲುಗಳು ಲೆಕ್ಕವಿಲ್ಲದಷ್ಟು. ಅದು ಕಾಲ ಸರಿದಂತೆ ಮತ್ತಷ್ಟು ಹೆಚ್ಚುತ್ತಿದೆ. ಕರ್ನಾಟಕದ ಹಿರಿಯ ಮಹಿಳಾ ರಾಜಕಾರಣಿ, ಆ ಕಲ್ಲುಮುಳ್ಳಿನ ನೆನಪಿನ ಓಣಿಯಲ್ಲಿ ಇಟ್ಟ ಹೆಜ್ಜೆಗಳನ್ನು ನೆನಪಿಸಿಕೊಂಡಿದ್ದಾರೆ.
ರಾಜಕೀಯ, ರಾಜಕಾರಣ, ಚುನಾವಣೆ ಎಂಬ ಪದಗಳೇ ಗೊತ್ತಿಲ್ಲದಿದ್ದ ಕಾಲದಲ್ಲಿ ನಾನು ಅವುಗಳನ್ನು ಹೇಗೆ ಆವಾಹಿಸಿಕೊಂಡೆ ಎಂಬುದು ನನ್ನ ಬದುಕಿನ ಅಚ್ಚರಿಗಳಲ್ಲೊಂದು. ನನ್ನ ಬದುಕಿನಲ್ಲಿ ಹತ್ತು ಚುನಾವಣೆಗಳನ್ನು ಎದುರಿಸಿರುವ ನನ್ನ ಅನುಭವ ನಮ್ಮ ದೇಶ ರಾಜಕೀಯರಂಗಕ್ಕೇ ಅಪರೂಪವಿರಬಹುದು.
ನನಗೆ 22 ವರ್ಷ ಆದಾಗ, ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ದಾಖಲಾಯಿತು. 23ನೇ ವರ್ಷಕ್ಕೆ ನಾನು ರಾಜಕೀಯಕ್ಕೆ ಪ್ರವೇಶ ಪಡೆದೆ. ಎಷ್ಟು ಆಶ್ಚರ್ಯವೆಂದರೆ… ನನಗೆ ಚುನಾವಣೆ ಎಂದರೇನು, ಅದು ಹೇಗಿರುತ್ತದೆ ಎಂಬುದೇ ಗೊತ್ತಿರಲಿಲ್ಲ. ರಾಜಕೀಯವೆಂದರೆ ಮೈಲು ದೂರ ಎನ್ನುವ ಸ್ಥಿತಿಯಲ್ಲಿದ್ದವಳು. ರಾಜಕೀಯ ನನ್ನಿಂದ ಬಹಳ ದೂರವಿತ್ತು. ಆದರೆ ಎಷ್ಟು ಅದೃಷ್ಟವಂತೆ ಅಂದರೆ, ಮೊದಲ ಚುನಾವಣೆಯಲ್ಲೇ ನಾನು ಗೆದ್ದುಬಿಟ್ಟೆ.
ಅದು ಬೆಂಗಳೂರು ಕಾರ್ಪೋರೇಷನ್‍ಗೆ ಚುನಾವಣೆ. ಇದೇ ಬೆಂಗಳೂರಿನ ಕಾಟನ್ ಪೇಟೆಯಲ್ಲಿ ನಮ್ಮ ಮಾವನವರ ಮನೆ ಇತ್ತು. ಮದುವೆಯಾಗಿ ಎರಡು ವರ್ಷವಾಗಿತ್ತು. ಅದೇ ಸಂದರ್ಭದಲ್ಲಿ ಕಾರ್ಪೋರೇಷನ್‍ಗೆ ಉಪಚುನಾವಣೆ ನಡೆಯಿತು. ಆಗ ಅಲ್ಲಿ ಏಳು ಕ್ಷೇತ್ರಗಳು ಮಹಿಳೆಯರಿಗಾಗಿ ಮೀಸಲಾಗಿದ್ದವು. ನನ್ನ ಗಂಡನ ಬಳಿ ಯಾರೋ ಬಂದು, ನೀವೇ ಚುನಾವಣೆಗೆ ನಿಲ್ಲಬೇಕು ಎಂದು ಹೇಳಿದರು. ಆದರೆ ಆ ಸಮಯದಲ್ಲಿ ಅವರು ಕಾನೂನು ಪದವಿ ಓದುತ್ತಿದ್ದರು. “ಅಪ್ಪಾ ನೀನು ಲಾ ಓದ್ತಾ ಇದ್ದೀಯಾ, ನಿನ್ನ ಹೆಂಡತಿ ಉತ್ತರ ಕರ್ನಾಟಕದವಳು, ಅಲ್ಲಿಯ ಹೆಣ್ಮಕ್ಕಳು ಬಹಳ ಗಟ್ಟಿ ಇರ್ತಾರೆ. ಅವರನ್ಯಾಕೆ ನಿಲ್ಲಿಸಬಾರದು” ಅಂತ ಯಾರೋ ಹೇಳಿದರು. ಸರಿ, ಈ ಮಾತನ್ನೇ ಆಧಾರವಾಗಿಟ್ಟುಕೊಂಡು ನಾನು ಚುನಾವಣೆಗೆ ಅರ್ಜಿ ಹಾಕಿದೆ.
ಆವಾಗ ನಾನಿನ್ನೂ ತುಂಬಾ ಚಿಕ್ಕವಳು. ರಾಜಕೀಯದ ಕುರಿತು ಏನೊಂದೂ ಗೊತ್ತಿರಲಿಲ್ಲ. ಚುನಾವಣಾ ಪ್ರಚಾರ ಹೇಗೆ ಮಾಡುತ್ತಾರೆಂಬುದೂ ಗೊತ್ತಿಲ್ಲ. ನಮ್ಮವರಿಗೆ ಸುಬ್ಬಮ್ಮ ಅಂತ ಒಬ್ಬರು ವಕೀಲರು ಪರಿಚಯದವರಿದ್ದರು. ಪ್ರಚಾರಕ್ಕೆ ನಾನು ಒಬ್ಬಳೇ ಹೋಗಬೇಕಲ್ಲ ಅಂತ ಅವರ ಜೊತೆ ಹೋಗು ಎಂದು ನನ್ನ ಕಳಿಸುತ್ತಿದ್ದರು. ಹೀಗೆ ಸುಬ್ಬಮ್ಮ ಎಂಬ ವಕೀಲರೊಂದಿಗೆ ನಾನು ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೆ. ನನಗೆ ಏನು ಮಾಡಬೇಕು ಅಂತ ಅರ್ಥವಾಗಿರಲಿಲ್ಲ. ಮನೆ ಮನೆಗೆ ಹೋಗಬೇಕು, ಕೈ ಮುಗೀಬೇಕು, ದೊಡ್ಡವರನ್ನು ಕಂಡರೆ ಕಾಲಿಗೆ ಬೀಳಬೇಕು. ಇದು ಆಗಿನ ಕಾಲದ ಚುನಾವಣೆ. ಈಗಿನ ಈ ಸಂಸ್ಕøತಿ ಆಗ ಇರಲಿಲ್ಲ. ಮೊದಲನೇ ಚುನಾವಣೆಗೆ ನಾನು ಖರ್ಚು ಮಾಡಿರೋದು ಕೇವಲ 250 ರೂ. ಅಂದರೆ ನೀವು ನಂಬಬೇಕು.
ನಾನು ಆ ಚುನಾವಣೆಯಲ್ಲಿ ಅವಿರೋಧವಾಗಿ ಗೆದ್ದುಬಿಟ್ಟೆ. ನನ್ನ ಎದುರು ನಿಂತವರು ಅರ್ಜಿ ವಾಪಸ್ ತಗೊಂಡು ಬಿಟ್ಟರು. ಅಕ್ಕಿಪೇಟೆಗೆ ಪ್ರಚಾರಕ್ಕೆಂದು ಹೋಗುತ್ತಿದ್ದೆ. ಆಗ ಯಾರೋ ನಮಗೆ ಹೇಳಿದ್ರು: “ನಿಮ್ಮ ಎದುರು ಚುನಾವಣೆಗೆ ನಿಂತವರು ವಾಪಸ್ ತಗೊಂಡು ಬಿಟ್ಟರು” ಅಂತ. ನನ್ನ ಜೊತೆಯಲ್ಲಿ ಬಂದ ಸುಬ್ಬಮ್ಮ “ಬಾರೇ ಲೀಲಾ, ವಾಪಸ್ ಹೋಗೋಣ, ನೀನು ಗೆದ್ದು ಬಿಟ್ಟಿದ್ದೀಯಾ” ಅಂತ ಅಂದರು. ಹೀಗೆ 23ನೇ ವರ್ಷಕ್ಕೆ ಮೊದಲನೇ ಚುನಾವಣೆಯನ್ನು, ಅದರಲ್ಲೂ ಅವಿರೋಧವಾಗಿ ಗೆದ್ದೆ. ಬೆಂಗಳೂರು ಕಾರ್ಪೋರೇಷನ್‍ಗೆ ಯಂಗೆಸ್ಟ್ ಕೌನ್ಸಿಲರ್ ಆಗಿ ಆಯ್ಕೆಯಾದೆ.
ಒಂದೊಂದು ಸಲ ಈ ಹುಚ್ಚುಗಳು ಹೇಗಿರುತ್ತವೆಯೆಂದರೆ… ಅವು ಯಾವುದೇ ಹುಚ್ಚಾಗಿರಲಿ, ಸಂಗೀತದ್ದೋ, ಸಾಹಿತ್ಯದ್ದೋ, ಒಮ್ಮೆ ಹುಚ್ಚು ಹಚ್ಚಿಕೊಂಡುಬಿಟ್ಟರೆ ಅದು ಬೆಳೀತಾ ಬೆಳೀತಾ ಹೋಗುತ್ತವೆ. ಹಾಗೆಯೇ ನನಗೆ ರಾಜಕೀಯದ ಹುಚ್ಚು ಏರತೊಡಗಿತು. ಎರಡನೇ ಚುನಾವಣೆ ಬಂತು. ಆದರೆ ಆ ಕಾಲದಲ್ಲೂ ಕೂಡಾ ಈ ಜಾತಿ ಅನ್ನೋ ಪಿಡುಗು ಹೇಗಿತ್ತು ಅಂದರೆ ಕ್ಯಾನ್ಸರ್ ರೋಗದ ಥರಾ ಇತ್ತು. ನನ್ನ ಎದುರಿಗೆ ನನ್ನದೇ ಜಾತಿಯ ಒಬ್ಬ ಹೆಣ್ಣುಮಗಳನ್ನು ನಿಲ್ಲಿಸಿದ್ದರು. ಜಾತಿ ಪ್ರಭಾವ ಆ ಕಾಲದಲ್ಲೂ ತುಂಬಾ ಇತ್ತು. ಆದರೂ ಆ ಬಾರಿಯೂ ನಾನು ಗೆದ್ದೆ. ಎರಡು ಬಾರಿ ಆದಮೇಲೆ, ಮೂರನೇ ಕಾರ್ಪೋರೇಷನ್ ಚುನಾವಣೆಯನ್ನೂ ಗೆದ್ದುಬಿಟ್ಟೆ. ಹೀಗೆ ಮೂರು ಬಾರಿ ಗೆದ್ದ ಮೇಲೆ ಸ್ವಾಭಾವಿಕವಾಗಿ ವಿಧಾನಸೌಧದ ಮೆಟ್ಟಿಲು ಹತ್ತಬೇಕು ಅನ್ನೋ ಹುಚ್ಚು ತಲೆಗೆ ಹತ್ತಿಬಿಟ್ಟಿತ್ತು.
ಯಾರಿಗೇ ಆಗಿಲಿ, ಇಂಥ ಆಸೆ ಸಹಜವಾಗಿ ಬಂದುಬಿಡುತ್ತದೆ. ಏನು ಮಾಡಬೇಕು ಅಂತ ಯೋಚಿಸಿದೆ. ಆಗ ಎಸ್. ನಿಜಲಿಂಗಪ್ಪನವರು ನಮಗೆಲ್ಲಾ ನಾಯಕರು. ಅದು ಆಗ ಅವಿಭಜಿತ ಕಾಂಗ್ರೆಸ್ ಪಕ್ಷ. ಟಿಕೆಟ್ ಬೇಕು ಅಂದರೆ ಕಾಂಗ್ರೆಸ್ ಆಫೀಸ್‍ಗೆ ಹೋಗಬೇಕಿತ್ತು. ಕಾಂಗ್ರೆಸ್ ಆಫೀಸಿಗೆ ಹೋಗಬೇಕು ಅಂತ ಅಂದರೆ, ಆಗೆಲ್ಲ ಖಾದಿ ಸೀರೆ ಉಟ್ಟು ಹೋದರೇನೇ ಟಿಕೆಟ್ ಸಿಗೋದು ಎಂಬ ಮಾತಿತ್ತು. ಖಾದಿಸೀರೆ ಉಟ್ಟುಕೊಂಡು ಹೋದರೆ ಮಾತ್ರ ಬಿ-ಫಾರಂ ಸಿಗುತ್ತಾ ಇತ್ತು. ಅಂಥ ಕಾಲದಲ್ಲಿ ನಾವಿದ್ದೆವು. ಸರಿ, ಹಾಗೆ ಖಾದಿ ಸೀರೆ ಉಟ್ಟು ಕಾಂಗ್ರೆಸ್ ಕಚೇರಿಯ ಮೆಟ್ಟಿಲು ಹತ್ತಿದೆ.
ಖಾದಿ ಸೀರೆ ಬಿಟ್ಟದ್ದು
ನಾನು ಖಾದಿ ಸೀರೆ ಉಡುವುದನ್ನು ಬಿಡುವುದಕ್ಕೂ ಒಂದು ಕಾರಣವಿದೆ. ಆಗಿನ ಕಾಲದಲ್ಲಿ ಇಂದಿರಾ ಗಾಂಧಿ ಅವರಿಗೆ ನಾನು ಬಹಳ ಹತ್ತಿರದವಳಾಗಿದ್ದೆ. ಎಐಸಿಸಿ ಸೆಷನ್ ಆದಾಗ ಇಂದಿರಾ ಗಾಂಧಿ ಅವರು ಟೆಂಟ್‍ನಲ್ಲಿದ್ದರು, ನಾನು ಆಗ ಸದಾಶಿವ ನಗರದಲ್ಲಿ ವಾಲೆಂಟಿಯರ್ ಆಗಿ ಕೆಲಸ ಮಾಡುತ್ತಿದ್ದೆ. ಅವರಿಗೆ ನಮ್ಮನೆಯಿಂದ ದಿನಾ ಚಪಾತಿ ಮಾಡಿಕೊಂಡು ಹೋಗುತ್ತಿದ್ದೆ. ಈಗಲೂ ಅದರ ಫೋಟೋ ನನ್ನ ಹತ್ತಿರ ಇದೆ. ಹೀಗೇ ಒಂದು ದಿವಸ ಇಂದಿರಾ ಗಾಂಧಿಯವರು ಬೆಂಗಳೂರಿನಲ್ಲಿ ಸೀರೆ ತೊಗೋಬೇಕು ಅಂದರು. ಅವರಿಗೂ ಖಾದಿ ಸೀರೆ ಬೇಕಾಗಿರಬಹುದು ಎಂದು ತಿಳಿದು ನಾನು ಖಾದಿ ಭಂಡಾರದವರಿಗೆಲ್ಲ ಫೋನ್ ಮಾಡಿ, “ಇಂದಿರಾ ಗಾಂಧಿ ಬರ್ತಾ ಇದಾರೆ ಸೀರೆ ತೋರಿಸಬೇಕು” ಅಂತ ಹೇಳಿದೆ. ಆಮೇಲೆ ಅವರ ಆಪ್ತ ಸಹಾಯಕರಿಗೂ “ಎಲ್ಲ ಖಾದಿ ಭಂಡಾರಕ್ಕೂ ಫೋನ್ ಮಾಡಿದ್ದೇನೆ, ತರಲು ಹೋಗೋಣ” ಅಂತ ಹೇಳಿದೆ. ಅದಕ್ಕೆ ಅವರು “ನೋ.., ನೋ.. ಮೇಡಂ, ಅವರಿಗೆ ಖಾದಿ ಸೀರೆಗಳು ಬೇಡ. ಅವರಿಗೆ ಕೊಯಮತ್ತೂರ್ ಸಿಲ್ಕ್ ಮತ್ತು ಕಾಟನ್ ಸ್ಯಾರೀಸ್ ಬೇಕು” ಅಂದರು. “ಅಯ್ಯೋ ಗ್ರಹಚಾರವೇ, ಇಂದಿರಾ ಗಾಂಧಿಯವರೇ ಖಾದಿ ಸೀರೆ ಉಡೋದಿಲ್ಲ ಅಂದಮೇಲೆ, ನಾವು ಯಾಕೆ ಉಡಬೇಕು” ಅಂತ ಆಮೇಲೆ ತೀರ್ಮಾನಿಸಿದೆ. ಹೀಗೆ ನಾನು ಖಾದಿ ಸೀರೆ ಉಡುವುದನ್ನು ಬಿಟ್ಟೆ. ಆದರೆ ನನ್ನ ಹತ್ತಿರ ಇನ್ನೂ ಖಾದಿ ಸೀರೆಗಳು ಇವೆ. ಆವಾಗ ಕೊಂಡುಕೊಳ್ಳೋಕೆ ಹೆಚ್ಚಿನ ಶಕ್ತಿ ಇರಲಿಲ್ಲ. 15 ರೂಪಾಯಿ ಸೀರೆ, 5 ರೂಪಾಯಿ ಬ್ಲೌಸ್! ಒಂದೊಂದೂ ಬೆಡ್ ಶೀಟ್ ಇದ್ದ ಹಾಗೇ ಇದ್ದವು ಆ ಸೀರೆಗಳು. ಈಗಲೂ ನಮ್ಮ ಮನೇಲಿ ಆ ಸೀರೆಗಳು ಇದ್ದಾವೆ. ಆದರೆ ಈಗ ಉಡುವುದಿಲ್ಲ ಅಷ್ಟೆ.
ಮೂರು ಸಲ ಕಾರ್ಪೋರೇಷನ್ ಚುನಾವಣೆಯಲ್ಲಿ ಗೆದ್ದ ಮೇಲೆ ವಿಧಾನ ಸೌಧದ ಮೆಟ್ಟಿಲು ಹತ್ತಬೇಕು ಎಂಬ ಅಭಿಲಾಷೆ ಇತ್ತಲ್ಲ… ಆದರೆ ವಿಧಾನ ಸೌಧದ ಮೆಟ್ಟಿಲು ಹತ್ತಲು ನಾನು ಪಟ್ಟಿರುವಂಥ ಕಷ್ಟ ಹೇಳಿಬಿಟ್ಟರೆ, ಬಹುಶಃ ಮುಂದಕ್ಕೆ ಯಾರೂ ಚುನಾವಣೆಗೆ ನಿಲ್ಲಲಿಕ್ಕಿಲ್ಲ ಅಂತ ಅನಿಸುತ್ತದೆ. ಆದರೆ ಯಾರೂ ಹಾಗೆ ಮಾಡಬೇಡಿ, ಮಹಿಳೆಯರು ಚುನಾವಣೆಗೆ ನಿಲ್ಲಲೇ ಬೇಕು. ನಾವು ಆಸೆ ಬಿಟ್ಟರೆ ಮುಂದೆ ಕಷ್ಟ ಆಗುತ್ತೆ. ಕಾಲಚಕ್ರ ಹೀಗೇ ಇರುವುದಿಲ್ಲ. ಚುನಾವಣೆಗೆ ಮಹಿಳೆಯರು ಮುಂದೆ ಬರಬೇಕು. ನಾನು ಯಾವತ್ತೂ ಆಶಾವಾದಿ. ಇವತ್ತಿನ ದಿವಸ ರಾಜಕೀಯ ಶಕ್ತಿದಂಡ ಕೈಗೆ ಬಂದಿಲ್ಲ, ಆದರೆ ಯಾವ ಶಕ್ತಿಯೂ ಅದರ ಮುಂದೆ ಇಲ್ಲ.
ಸಮಾಜಸೇವೆಗೂ ರಾಜಕೀಯ ಶಕ್ತಿಗೂ ಅಜಗಜಾಂತರ ವ್ಯತ್ಯಾಸವಿದೆ. ರಾಜಕೀಯ ದಂಡ ಕೈಗೆ ಬಂದರೆ ಸಾಕಷ್ಟು ಬದಲಾವಣೆಗಳನ್ನು ತರಬಹುದು. ಇವತ್ತು ಹೆಣ್ಣುಮಕ್ಕಳ ಕುರಿತು ಮಾತನಾಡುವ ಧಾಟಿಯೇ ಬೇರೆಯಾಗಿದೆ. ಅವರು ಹಾಗೆ ಹೀಗೇ… ಅಬಲೆಯರು… ಮತ್ತೊಂದು ಮಗದೊಂದು… ಅಂತ. ಅವರಿಗೆ ಶಕ್ತಿ ತುಂಬಬೇಕಾದರೆ ರಾಜಕೀಯ ದಂಡ ಕೈಗೆ ಸಿಗಬೇಕು. ಇವತ್ತು ಮೋಟಮ್ಮ ಅಂಥವರ ಬಗ್ಗೆ ಯಾಕೆ ಮಾತನಾಡುತ್ತೇವೆ ಅಂದರೆ, ಅವರ ಕೈಯಲ್ಲಿ ರಾಜಕೀಯ ದಂಡ ಇದೆ. ಕೆಲಸ ಮಾಡಲು ಶಕ್ತಿ ಇದೆ. ಅದನ್ನು ಯಾರೂ ಮರೆಯಬಾರದು.
ವಿಧಾನ ಸೌಧದ ಮೆಟ್ಟಿಲು
ರಾಜಕೀಯ ಅನ್ನೋದು ಹೇಗೆ ಅಂದರೆ, ವಿಧಾನ ಸೌಧದ ಮೆಟ್ಟಿಲು ಹತ್ತಬೇಕು ಸರಿ, ಆದರೆ ಅದಕ್ಕೆ ಯಾವ್ಯಾವ ಕಷ್ಟಗಳಿವೆ, ಏನೇನಿವೆ ಅಂತ ಹೆಚ್ಚಿನ ಜನರಿಗೆ ಗೊತ್ತಿಲ್ಲ. ನಾನು ಮೂರು ಬಾರಿ ಕಾರ್ಪೋರೇಷನ್ ಚುನಾವಣೆಯಲ್ಲಿ ಗೆದ್ದರೂ ವಿಧಾನಸಭೆ ಚುನಾವಣೆಗೆ ನನಗೆ ಬೆಂಗಳೂರಿನಲ್ಲಿ ಟಿಕೆಟ್ ಕೊಡಲಿಲ್ಲ. ಒಂದು ಅಂಥ ಅವಕಾಶ ಪಡೆಯಬೇಕಾದರೆ ಏನೇನು ಮಾಡಬೇಕು? ಅಂದಿನ ಸಂಸ್ಕøತಿ ಇಂದಿನ ಹಾಗೆ ಹಣದ ಸಂಸ್ಕøತಿಯಾಗಿರಲಿಲ್ಲ. ನಾವು ರಾಜಕೀಯ ಪ್ರವೇಶ ಮಾಡಿದಾಗ ಇಂದಿನ ತರಹ ಅನಿಷ್ಟ ಸಂಸ್ಕøತಿಯಾಗಿರಲಿಲ್ಲ. ಆದರೆ ಏನು ಮಾಡೋದು ಅಂತ ಗೊತ್ತಾಗಲಿಲ್ಲ. ಬೆಂಗಳೂರಿನಲ್ಲಿ ಟಿಕೆಟ್ ಕೊಡಕ್ಕಾಗಲ್ಲ ಅಂದರು. ದೆಹಲಿಗೆ ಹೋದೆ. ರಾಮಕೃಷ್ಣ ಹೆಗಡೆ, ಬೊಮ್ಮಾಯಿ, ದೇವೇಗೌಡ ಅವರೆಲ್ಲ ಇದ್ದರು. ಅವರ ಹತ್ತಿರ ಏನು ಮಾಡೋದು ಅಂತ ಕೇಳಿದೆ. ನಾನು ಮೂರು ಬಾರಿ ಕಾರ್ಪೋರೇಷನ್ ಚುನಾವಣೆಯಲ್ಲಿ ಗೆದ್ದು ಶಿಕ್ಷಣ ಸಮಿತಿಯ ಅಧ್ಯಕ್ಷೆಯಾಗಿದ್ದೆ. ಆಗ ಬೆಂಗಳೂರಿನಲ್ಲಿ 100 ಶಾಲೆಗಳನ್ನು ಪ್ರಾರಂಭಿಸಿದ್ದೆ. 100 ಶಾಲೆಗಳನ್ನು ಹುಟ್ಟುಹಾಕಿದವಳು, ಅನೇಕ ಸಂಘಸಂಸ್ಥೆಗಳನ್ನು ಕಟ್ಟಿದವಳು, ಹೀಗಿದ್ದೂ ಬೆಂಗಳೂರಿನಲ್ಲಿ ನನಗೆ ಟಿಕೆಟ್ ಸಿಗಲಿಲ್ಲ. ಈ ಕಾಲದಲ್ಲಾದರೆ ಹೊಡೆದಾಟ ಬಡಿದಾಟ ಮಾಡಿಯಾದರೂ ಟಿಕೆಟ್ ಪಡೆಯಬಹುದಿತ್ತೇನೋ!
ಏನು ಮಾಡುವುದು? ಆಗ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದರು. ಗಾಂಧಿನಗರದಲ್ಲಿ ನಾಗರತ್ನಮ್ಮ ಹಿರೇಮಠ ಎಂಬುವರು ಶಾಸಕಿಯಾಗಿದ್ದರು. ನಿಜಲಿಂಗಪ್ಪನವರು ನನ್ನ ಕರೆದು “ನೋಡಮ್ಮ, ಅವರಿಗೆ ಬೋನ್ ಕ್ಯಾನ್ಸರ್ ಆಗಿದೆ, ನಾಳೆ ವೆಲ್ಲೂರಿಗೆ ಹೋಗಿ ಅವರಿಗೆ 25 ಸಾವಿರ ರೂಪಾಯಿ ಕೊಟ್ಟು ಬಾ” ಅಂತ ಹೇಳಿದರು. “ಇಲ್ಲಮ್ಮಾ ಅವರಿಗೆ ಕ್ಯಾನ್ಸರ್ ಆಗಿದೆ, ಈ ಸಲ ನೀನು ರೆಡಿಯಾಗು, ಗಾಂಧಿ ನಗರದಲ್ಲಿ ಟಿಕೆಟ್ ಕೊಡ್ತೀನಿ” ಅಂದರು. ಆದರೆ ನಾಗರತ್ನಮ್ಮ ಅವರು ಕ್ಯಾನ್ಸರ್ ಚಿಕಿತ್ಸೆ ಪಡೆದು ವಾಸಿಯಾಗಿ ಬಂದರು. ಒಂದು ದಿವಸ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಜಲಿಂಗಪ್ಪನವರನ್ನು ಭೇಟಿಯಾಗಲು ಹೋದೆ. ನನಗೆಲ್ಲಾದರೂ ಟಿಕೆಟ್ ಕೊಡ್ತಾರೋ ಏನೋ ಅಂತ ತಿಳಿಯೋಕೆ (ಅವರನ್ನು ತಾತ ಎಂದು ಕರೆಯುತ್ತಿದ್ದೆ.) ಆಗ ಅಲ್ಲಿ ನಾಗರತ್ನಮ್ಮ ನಿಂತಿದ್ದರು. “ಇಲ್ಲಮ್ಮಾ ನೀನಿನ್ನೂ ಚಿಕ್ಕವಳು, ಈ ಬಾರಿ ನಾಗರತ್ನಮ್ಮನೇ ಸ್ಪರ್ಧಿಸಲಿ, ಅವಳು ಈಗ ಹುಷಾರಾಗಿ ಬಂದಿದ್ದಾಳೆ. ಅವಳು ಕಾರಲ್ಲಿ ಕೂತಿರ್ತಾಳೆ. ನೀನು ಕ್ಯಾನ್ವಾಸ್ ಮಾಡಿ ಅವಳನ್ನು ಗೆಲ್ಲಿಸಬೇಕು” ಅಂದರು. ಆಯ್ತು ಎಂದು ನಾಗರತ್ನಮ್ಮ ಪರವಾಗಿ ಚುನಾವಣಾ ಪ್ರಚಾರಮಾಡಿ ಅವರನ್ನು ಗೆಲ್ಲಿಸಿದೆ. ಅಲ್ಲಿಗೆ ಎರಡನೇ ಬಾರಿಯ ನನ್ನ ಪ್ರಯತ್ನ ಮುಗಿಯಿತು.
ಮೂರನೇ ಸಲ ಮತ್ತೆ ಪ್ರಯತ್ನ ಮಾಡಿದೆ. ಆವಾಗಲೂ ಇನ್ನೇನೋ ಏನೇನೋ ತೊಂದರೆಗಳಾಗಿ ಟಿಕೆಟ್ ಸಿಗಲಿಲ್ಲ. 1978 ರವರೆಗೂ ಬೆಂಗಳೂರಿನಲ್ಲಿ ಯಾವುದೇ ಕ್ಷೇತ್ರದಲ್ಲಿ ನನಗೆ ರಾಜಕೀಯವಾಗಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ. ಸುಮ್ಮನೆ ಯೋಚಿಸಿ, ಎಷ್ಟೊಂದು ಸಮಾಜಮುಖೀ ಕೆಲಸ ಮಾಡಿದ್ದೆ, ಆದರೂ ಎಷ್ಟೇ ಪ್ರಯತ್ನ ಮಾಡಿದರೂ ಟಿಕೆಟ್ ಸಿಗಲಿಲ್ಲ. ಬಹಳ ಕಷ್ಟಪಟ್ಟೆ. 1978ರಲ್ಲಿ ತುರ್ತು ಪರಿಸ್ಥಿತಿಯಿಂದ ನಾವೆಲ್ಲ ಹೊರಗೆ ಬಂದಿದ್ದೆವು. ಆವಾಗ ಮತ್ತೆ ದೆಹಲಿಗೆ ಹೋದೆ. ನನಗೆ ಸ್ಪರ್ಧಿಸಲು ಟಿಕೆಟ್ ಕೊಡಿ ಅಂತ ಮತ್ತೆ ಕೇಳಿದೆ. ಆಗ ಏನಾಯಿತು ಅಂದರೆ, ಅಥಣಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಯಾರೂ ಅಭ್ಯರ್ತಿ ಇರಲಿಲ್ಲ. ಆಗ ನನ್ನನ್ನು ಅಥಣಿಗೆ ಕಳುಹಿಸುವ ವಿಚಾರ ಪ್ರಸ್ತಾಪವಾಯಿತು. ಆಗ ನನಗೆ ಅಥಣಿ ಯಾವ ದಿಕ್ಕಿನಲ್ಲಿದೆ, ಎಷ್ಟು ದೂರ ಇದೆ ಅನ್ನುವುದು ಕೂಡ ಗೊತ್ತಿರಲಿಲ್ಲ. ಏನು ಮಾಡುವುದು ಅನ್ನುವ ಗೊಂದಲದಲ್ಲಿರುವಾಗ “ಆಥಣಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಯಾರೂ ಅಭ್ಯರ್ಥಿ ಇಲ್ಲ, ನೀವು ನಿಲ್ತೀರಾ?”ಎಂದು ಕೇಳಿದರು. ನನಗೆ ಏನು ಮಾಡಬೇಕು ಅಂತ ತೋಚಲಿಲ್ಲ. ಆದರೂ “ಮನೆಯವರ ಹತ್ತಿರ ಚರ್ಚಿಸಿ ನಾಳೆ ಹೇಳುತ್ತೇನೆ” ಅಂತ ರೂಮಿಗೆ ಬಂದೆ.
ಕರ್ನಾಟಕ ಭವನಕ್ಕೆ ಬಂದು ನನ್ನ ಮನೆಯವರಿಗೆ ಫೋನ್ ಮಾಡಿದೆ. “ನನಗೆ ಅಥಣಿಗೆ ಹೋಗು, ಅಲ್ಲಿ ನಿನಗೆ ಟಿಕೆಟ್ ಕೊಡುತ್ತೇವೆ ಅಂತಾ ಹೇಳುತ್ತಿದ್ದಾರೆ. ಏನು ಮಾಡಲೀ?” ಅಂತ ಕೇಳಿದೆ. ಆಗ ನನ್ನವರು “ನಿನ್ನ ತಲೆಗಿಲೆ ಕೆಟ್ಟಿದೆಯಾ, ಅಥಣಿ ಅನ್ನುವ ಊರು ಬೆಂಗಳೂರಿನಿಂದ 690 ಕಿ.ಮಿ. ದೂರದಲ್ಲಿದೆ. ಪರಿಚಯವಿಲ್ಲ, ಏನಿಲ್ಲ, ಸುಮ್ಮನೆ ಬೆಂಗಳೂರಿಗೆ ಬಾ” ಅಂತ ಅಂದರು. “ಅಲ್ಲಾರೀ, ಅಥಣಿಗೆ ಹೋಗಲ್ಲ ಅಂದ್ರೆ ಟಿಕೆಟ್ ಕೊಡಲ್ಲ ಅಂತಿದ್ದಾರೆ, ಏನು ಮಾಡಲಿ?” ಅಂತ ಕೇಳಿದೆ. ಆಗ ಅವರು “ಬೇಡ ಲೀಲಾ ರಿಸ್ಕ್ ತಗೋಬೇಡಾ, ಅಥಣಿ ಯಾವ ದಿಕ್ಕಿನಲ್ಲಿದೆ ಅಂತಾನೂ ಗೊತ್ತಿಲ್ಲ, ಯಾಕೆ ರಿಸ್ಕ್” ಅಂತ ಹೇಳಿದರು.
ನೋಡೋಣ ಅಂತ ಯೋಚನೆ ಮಾಡಲು ಶುರುಮಾಡಿದೆ. ಬೊಮ್ಮಾಯಿ, ರಾಮಕೃಷ್ಣ ಹೆಗಡೆಯವರೂ ಜೊತೆಯಲ್ಲಿದ್ದರು. “ಅಥಣಿಯಲ್ಲಿ ಯಾರೂ ಇಲ್ಲ. ನೀವು ಅಲ್ಲಿ ಹೋಗೋ ಹಾಗಿದ್ರೆ ಯೋಚನೆ ಮಾಡಿ, ಬಿ-ಫಾರಂ ಕೊಡ್ತೀವಿ” ಅಂತ ಅಂದರು. ನಾನು ಅಥಣಿ ನೋಡಿದ್ದೆ. ಅಂದರೆ ನಮ್ಮ ತಂದೆ ಬೆಳಗಾವಿಯಲ್ಲಿ ಡೆಪ್ಯುಟಿ ಕಮಿಷನರ್ ಆಗಿದ್ದರು. ಅಲ್ಲಿ ಒಂದು ಮಠ ಇದೆ. ಅಲ್ಲಿಗೆ ತಂದೆಯವರು ನನ್ನ ಕರೆದುಕೊಂಡು ಹೋಗಿದ್ದರು. ಎರಡನೆಯ ಸಲ ನಾನು ಕಾವೇರಿ ಎಂಪೆÇೀರಿಯಮ್ ಚೇರ್‍ಮನ್ ಆದಾಗ ಕೊಲ್ಲಾಪುರ ಚಪ್ಪಲಿ ಇನ್‍ಸ್ಪೆಕ್ಷನ್‍ಗೆ ಹೋಗಿದ್ದೆ. ಈಗ ಮೂರನೇ ಬಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚುನಾವಣೆಗೋಸ್ಕರ ಅಥಣಿಗೆ ಹೋದ ಹಾಗಾಯಿತು. ಯಾವ ದಿಕ್ಕು ದೆಸೆ ಗೊತ್ತಿರದಿದ್ದರೂ ಧೈರ್ಯವಾಗಿ ಅಲ್ಲಿಗೆ ಹೋದೆ. ಇಲ್ಲದಿದ್ದರೆ ಟಿಕೆಟ್ ಕೊಡಲ್ಲಾ ಅಂತಿದಾರೆ. ಮತ್ತೆಲ್ಲೂ ಸ್ಪರ್ಧಿಸುವ ಹಾಗಿಲ್ಲ. ಹಾಗಾಗಿ ಹೋಗಬೇಕಾಯಿತು. ಮೊದಲನೇ ಸಲ ಅಂದರೆ 1978 ನೇ ಇಸವಿಯಲ್ಲಿ ಅಥಣಿಯಲ್ಲಿ ಸ್ಪರ್ಧಿಸಿದಾಗ 1500 ಮತಗಳಿಂದ ಸೋತೆ.
ಅಥಣಿ ನನ್ನದಾಯಿತು
ಹೀಗೆ ಅಥಣಿಯಲ್ಲಿ ಆಗ ಸೋತ ಮೇಲೆ ಒಂದು ಯೋಚನೆಮಾಡಿದೆ. ಅಲ್ಲಿನ ಜನ ಸಂಪರ್ಕ ನೋಡಿ ನಾನು ಯಾಕೆ ತಿಂಗಳಿಗೆ ಒಂದು ಬಾರಿ ಅಲ್ಲಿಗೆ ಹೋಗಬಾರದು, ಅವರ ಕಷ್ಟ ಸುಖ ವಿಚಾರ ಮಾಡಬೇಕು. ಅವರೊಡನೆ ಒಡನಾಡಿ ಅಲ್ಲಿಯ ಸಮಸ್ಯೆಗಳನ್ನು ಅರಿತು ಅವರಿಗೆ ಸ್ಪಂದಿಸಬೇಕು, ಅವರಿಗೆ ಏನಾದರೂ ಸಣ್ಣಪುಟ್ಟ ಸಹಾಯ ಮಾಡಬೇಕು ಅಂತ ಯೋಚಿಸಿ ನಿರಂತರವಾಗಿ 3 -4 ವರ್ಷ ಪ್ರತಿ ತಿಂಗಳೂ ಅಥಣಿಗೆ ಹೋಗುತ್ತಿದ್ದೆ. ಆಗೆಲ್ಲ ಯಾವುದೋ ಸ್ನೇಹಿತರ ಮನೆಯಲ್ಲಿ ಉಳಿಯುವುದು, ಯಾವುದೋ ಮಠದಲ್ಲಿ ಇರೋದು, ಹೀಗೆ ಮಾಡಿ ಸದಾ ಜನರ ಸಂಪರ್ಕದಲ್ಲಿರುತ್ತಿದ್ದೆ. ಎರಡನೇ ಬಾರಿ ಚುನಾವಣೆ ಸಮಯ ಬಂದಾಗ “ಅಥಣಿಗೆ ಟಿಕೆಟ್ ಕೊಡಿ, ಹೋಗ್ತೀನಿ” ಎಂದು ನಾನೇ ಕೇಳಿದೆ. ಆಗ “ಯಾಕಮ್ಮಾ ಸೋತು ಬಂದಿದ್ದೀಯಲ್ಲಾ, ಮತ್ಯಾಕೆ ಅಲ್ಲಿಗೆ” ಅಂತ ಅವರೇ ಕೇಳಿದರು. “ಇಲ್ಲಾ…ಇಲ್ಲಾ ನಾನು ಅಲ್ಲಿಗೇ ಹೋಗ್ತೀನಿ” ಎಂದು ದೃಢವಾಗಿ ಹೇಳಿದೆ. ಆಗ ಅಲ್ಲಿನ ಜನ ನನ್ನ ಬಗ್ಗೆ ಅಭಿಮಾನ ಇಟ್ಟುಕೊಂಡು ಬೆಂಗಳೂರಿನಿಂದ ಕರೆದುಕೊಂಡು ಹೋಗಿ 15 ಸಾವಿರ ಲೀಡ್‍ನಿಂದ ನನ್ನ ಗೆಲ್ಲಿಸಿದರು. ಆವಾಗ ಅಥಣಿ ಕ್ಷೇತ್ರ ನನ್ನದಾಯಿತು.
ಅಲ್ಲಿ ಒಂದು ತಮಾಷೆ ಸಂಗತಿ ನಡೆಯಿತು. ಅದನ್ನೂ ಹೇಳ್ತೀನಿ. ಅಲ್ಲಿ ಒಬ್ಬರು ಪಾಟೀಲರು ಅಂತ ಇದ್ದರು. ಅವರಿಗೆ ಟಿಕೆಟ್ ಕೊಡಬೇಕಾಗಿತ್ತು. ಅಷ್ಟರೊಳಗಾಗಿಯೇ ರಾಮಕೃಷ್ಣ ಹೆಗಡೆಯವರು ನನ್ನ ಹತ್ತಿರ ನಾಮಪತ್ರ ಹಾಕಿ ಅಂದಿದ್ದರು. ಹೋಗಿ ನಾಮಪತ್ರ ಹಾಕಿ ಹೊರಗೆ ಬರುತ್ತಿದ್ದೆ, ಆಗ “ಲೀಲಾದೇವಿ, ನೀವು ಎರಡು ಗಂಟೆ ಒಳಗೆ ಸಂಕೇಶ್ವರಕ್ಕೆ ಹೋಗಿ ಅಲ್ಲಿ ನಾಮಪತ್ರ ಸಲ್ಲಿಸಿ’ ಅಂತ ಗಡಿಬಿಡಿಯಲ್ಲಿ ಒಬ್ಬರು ಹೇಳಿದರು. ಅಥಣಿಯಿಂದ ಸಂಕೇಶ್ವರ 40 ಕಿ.ಮಿ. ದೂರದಲ್ಲಿದೆ. “ಏನಿದು, ನಾನೇನು ಫುಟ್‍ಬಾಲ್ ಥರವಾ? ಲೀಲಾದೇವಿ ಪ್ರಸಾದ್ ಅಂದರೆ ರಾಜಕೀಯದಲ್ಲಿ ಫುಟ್‍ಬಾಲ್ ಇದ್ದ ಹಾಗೆ. ಇಲ್ಲಿ ಒದ್ರೆ ಅಲ್ಲಿ, ಅಲ್ಲಿ ಒದ್ರೆ ಇಲ್ಲಿ ಓಡಿ ಬರೋದು” ಅನ್ನೋ ಥರ ಅನಿಸತೊಡಗಿತು. ಆಗ “ನಾನ್ಯಾಕೆ ಹೋಗಬೇಕು ಸರ್ ಅಲ್ಲಿಗೆ?” ಅಂತ ಹಿರಿಯರನ್ನು ಕೇಳಿದೆ. ಅದಕ್ಕೆ ಅವರು “ಅಥಣಿ ಕ್ಷೇತ್ರವನ್ನು ಇನ್ನೊಬ್ಬರಿಗೆ ಕೊಡಬೇಕು” ಅಂತ ಹೇಳಿದರು. ನನಗೂ ರೇಗಿಹೋಯಿತು. “ಅಲ್ಲ ಸರ್, ಅಥಣಿನೂ ಗೊತ್ತಿಲ್ಲ, ಸಂಕೇಶ್ವರನೂ ಗೊತ್ತಿಲ್ಲ, ಆದರೆ ಈಗ ನನಗೆ ಅಥಣಿ ಹತ್ತಿರ ಇದೆ. ನಿಮ್ಮ ಪಕ್ಕದಲ್ಲಿ ಕೂತುಕೊಂಡು ಹೇಳುತ್ತಿದ್ದಾರಲ್ಲ ಅವರನ್ನೇ ಸಂಕೇಶ್ವರಕ್ಕೆ ಕಳುಹಿಸಿ. ನನಗೆ ಬಿ.-ಫಾರಂ ಕೊಡಿ” ಅಂತ ಧೈರ್ಯವಾಗಿ ಹೇಳಿದೆ. ಹಾಗೆ ಟಿಕೆಟ್ ಸಿಕ್ಕು ನಾನು ಅಥಣಿಯಲ್ಲಿ ಗೆಲ್ಲುವ ಹಾಗಾಯಿತು.
ಮೊದಲ ಬಾರಿ ಸೋತ ನಂತರ ನಿರಂತರವಾಗಿ ಮೂರು ಬಾರಿ ಅಥಣಿಯಲ್ಲಿ ಸ್ಪರ್ಧಿಸಿ ಗೆದ್ದು ಬಂದಿದ್ದೀನಿ. ಇದು ರಾಜಕೀಯ. ಅಲ್ಲಿ ಏನೇನು ಹೇಗೆಲ್ಲ ನಡೆಯುತ್ತದೆ ಎನ್ನುವುದನ್ನು ತಿಳಿಸುವುದಕ್ಕೆ ಈ ಎಲ್ಲ ನನ್ನ ಅನುಭವಗಳನ್ನು ಹೇಳುತ್ತಿದ್ದೇನೆ. ಮೂರು ಕಾರ್ಪೋರೇಷನ್ ಚುನಾವಣೆ, ಐದು ಎಂ.ಎಲ್.ಎ. ಚುನಾವಣೆ, ಒಂದು ಲೋಕಸಭೆ, ಒಂದು ರಾಜ್ಯಸಭೆ ಹೀಗೆ ಹತ್ತು ಚುನಾವಣೆಯಲ್ಲಿ ಐದು ಸಲ ಗೆದ್ದಿದ್ದೀನಿ. ಐದು ಸಲ ಸೋತಿದ್ದೀನಿ.
ಅಥಣಿಯಲ್ಲಿ ನಾನು ಮೊದಲ ಬಾರಿ ಗೆದ್ದು ಬಂದಾಗ 35 ರಿಂದ 40 ಸಾವಿರ ಅಂತರದಲ್ಲಿ ಗೆದ್ದು ಬಂದಿದ್ದೆ. ಅಥಣಿಯ ಚುನಾವಣಾ ಸಮಯದಲ್ಲಿ ನಡೆದ ಒಂದು ಘಟನೆ ನೆನಪಿಗೆ ಬರುತ್ತಿದೆ, ಬೆಂಗಳೂರಿನಲ್ಲಿದ್ದ ರಾಮಕೃಷ್ಣ ಹೆಗಡೆಯವರು, “ಬಹಳ ದೂರದ ಕ್ಷೇತ್ರದಲ್ಲಿ ಲೀಲಾದೇವಿ ಪ್ರಸಾದ್ ನಿಂತಿದಾಳೆ” ಎಂದು ರಾಮಪ್ಪ ಅನ್ನುವವರ ಬಳಿ ಚುನಾವಣೆ ಖರ್ಚಿಗಾಗಿ 25 ಸಾವಿರ ರೂ.ಕೊಟ್ಟು ಬಾ ಅಂತ ಕಳುಹಿಸಿದ್ದರು. ಅವರು 25 ಸಾವಿರ ರೂ.ಗಳನ್ನು ತಗೊಂಡು ಅಥಣಿಗೆ ಬಂದರು. “ಏನ್ರಿ ರಾಮಪ್ಪ” ಅಂದೆ. “ಸಾಹೇಬ್ರು ಚುನಾವಣಾ ಖರ್ಚಿಗಾಗಿ 25 ಸಾವಿರ ಕಳ್ಸಿದಾರೆ” ಅಂದ್ರು. “ಅಯ್ಯೋ! 25 ಸಾವಿರಾನಾ’ ಅಂತ ಅಂದುಕೊಂಡೆ. ಆ ಹಣದಲ್ಲಿ ಸ್ವಲ್ಪ ಮಾತ್ರ ಖರ್ಚು ಮಾಡಿದೆ. ಅಂದರೆ ಆಗಿನ ಚುನಾವಣೆ ವ್ಯವಸ್ಥೆ ನೋಡಿದರೆ ನಿಮಗೇ ಅರ್ಥವಾಗುತ್ತದೆ. ಇವತ್ತು ನೋಡಿದರೆ ಭೂಮಿ ಆಕಾಶದಷ್ಟು ಅಂತರ.
ಅಂದಿನ ದಿನಗಳಲ್ಲಿ ನಾಮಪತ್ರ ಹಾಕಬೇಕು ಅಂದರೆ, ಊರಿನ ನಾಲ್ಕು ಹಿರಿಯರನ್ನು ಕರೆದುಕೊಂಡು, ಯಾವುದಾದ್ರೂ ದೇವಸ್ಥಾನಕ್ಕೆ ಹೋಗಿ, ಹಣ್ಣು ಕಾಯಿ ಮಾಡಿಸಿಕೊಂಡು, ನಂತರ ತಹಶೀಲ್ದಾರ್ ಆಫೀಸಿಗೆ ಹೋಗಿ ನಾಮಪತ್ರ ಸಲ್ಲಿಸಿದರೆ ಮುಗಿಯುತ್ತಿತ್ತು. ಆದರೆ ಇವತ್ತಿನದು ಊಹೆಗೂ ನಿಲುಕುವುದಿಲ್ಲ. ಮೊನ್ನೆ ಈ ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕೋಸ್ಕರವೇ ಅಭ್ಯರ್ಥಿಗಳು 80 ಲಕ್ಷದಿಂದ 1 ಕೋಟಿಯಷ್ಟು ಹಣವನ್ನು ಖರ್ಚು ಮಾಡಿದ್ದಾರೆ. ಬರೀ ನಾಮಿನೇಷನ್‍ಗೆ! ಇನ್ನು ಚುನಾವಣೆಗೆಷ್ಟು ಖರ್ಚುಮಾಡಬಹುದು. ಈ ಬದಲಾವಣೆ ನೋಡಿದರೆ ನಮ್ಮ ಎದೆ ನಡುಗಿ ಹೋಗುತ್ತದೆ. ಯಾಕೆಂದರೆ ನಾನೂ ಚುನಾವಣೆ ಎದುರಿಸಿದವಳು. ನಾಮಪತ್ರ ಹಾಕುವುದಕ್ಕೇ ಆ ಪೈಪೋಟಿ, ಆ ವೈಭವ. ನಮ್ಮ ಕಾಲದ ವ್ಯವಸ್ಥೆಗೂ ಈಗಿನದ್ದಕ್ಕೂ ಎಷ್ಟೊಂದು ಅಂತರ ಇದೆ.
ಸಂಸ್ಕೃತಿ ಇಲ್ಲದ ಚುನಾವಣೆ
ರಾಜಕೀಯ ಚುನಾವಣೆಯಲ್ಲಿ ಸಂಸ್ಕøತಿ ಉಳಿದಿದೆಯಾ? ನಾವು ರಾಜಕೀಯ ಚುನಾವಣೆಯಲ್ಲಿ ಸಂಸ್ಕøತಿಯನ್ನು ಉಳಿಸಿಕೊಂಡಿದ್ದೀವಾ? ರಾಜಕೀಯಕ್ಕೂ ಸಂಸ್ಕøತಿಗೂ ಅಜಗಜಾಂತರ ವ್ಯತ್ಯಾಸವಾಗಿದೆ. ಈ ಕುರಿತು ಮಾತನಾಡುವಾಗ ಮನಸ್ಸು, ರಕ್ತ ಕುದಿಯುತ್ತದೆ. ಎಲ್ಲಿದೆ ಸಂಸ್ಕøತಿ? ಯಾವುದು ಸಂಸ್ಕøತಿ? ನೋಡಿದರೆ ಮೈ ಉರಿಯುತ್ತದೆ. ಇವರು ಚುನಾವಣಾ ಪ್ರಚಾರ ಮಾಡಲಿ, ಆದ್ರೆ ಹೆಣ್ಣುಮಕ್ಕಳ ವಿಷಯವಾಗಿ ಕೀಳಾಗಿ ಮಾತಾಡೋದ್ಯಾಕೆ? ಅವರ ಕುರಿತು ಏನೇನೋ ಮಾತಾಡಿ ಅಪಪ್ರಚಾರ ಮಾಡುವುದು ರಾಜಕೀಯ ಧರ್ಮವೂ ಅಲ್ಲ, ರಾಜಕೀಯ ಸಂಸ್ಕøತಿಯೂ ಅಲ್ಲ. ಯಾವ ರೀತಿಯ ಚುನಾವಣಾ ಪ್ರಚಾರ ಇದೆಲ್ಲ ಎಂದು ಮನಸ್ಸು ಖಿನ್ನವಾಗುತ್ತದೆ. ಒಬ್ಬ ಸುಮಲತಾ ಹೆಸರಿನಲ್ಲಿ ಐದು ಜನರನ್ನು ಚುನಾವಣೆಗೆ ನಿಲ್ಲಿಸುವುದು ಯಾವ ಸಂಸ್ಕøತಿ? ಎಲ್ಲಾದರೂ ಉಂಟಾ ಇದು? ಚುನಾವಣೆ ಎಂದರೆ ಗೆಲುವು ಸೋಲು ಎರಡೂ ಇರುತ್ತದೆ. ಎಲ್ಲರೂ ಗೆದ್ದರೆ ಚುನಾವಣೆ ಅಂತ ಯಾಕೆ ಹೇಳಬೇಕು? ಎಲ್ಲರೂ ಸೋತರೂ ಚುನಾವಣೆ ಅಂತ ಹೇಳಲಾಗುವುದಿಲ್ಲ. ಗೆಲುವು ಹಾಗು ಸೋಲು ಎರಡೂ ಸಮಸಮವಾಗಿರುತ್ತದೆ. ಆದರೆ ಈ ವ್ಯವಸ್ಥೆ, ರಾಜಕೀಯ ಸಂಸ್ಕøತಿ, ಚುನಾವಣೆ ಸಂಸ್ಕøತಿ ಇವತ್ತಿನ ದಿವಸ ಮಾಯವಾಗುತ್ತಿವೆ. ಇವೆಲ್ಲ ನೋಡಿ ಮನಸ್ಸಿಗೆ ಬಹಳ ನೋವಾಗುತ್ತಿದೆ.
ಆಗ ಅಂದು ರಾಮಕೃಷ್ಣ ಹೆಗಡೆಯವರು ಕೊಟ್ಟು ಕಳುಹಿಸಿದ 25 ಸಾವಿರ ರೂ.ಗಳಲ್ಲಿ ಖರ್ಚೆಲ್ಲಾ ಕಳೆದು ಒಂದಿಷ್ಟು ಹಣ ನನ್ನ ಹತ್ತಿರವೇ ಉಳಿದಿತ್ತು. ಹಣ ಹಂಚಲಿಲ್ಲ, ಯಾರಿಗೂ ಸೀರೆ ಹಂಚಲಿಲ್ಲ. ಹಾಗಾಗಿ ಹಣ ಮಿಕ್ಕಿತು. ಚುನಾವಣೆ ನಂತರ ಬೆಂಗಳೂರಿಗೆ ಬಂದೆ. ರಾಮಕೃಷ್ಣ ಹೆಗಡೆಯವರ ಮನೆಗೆ ಹೋದೆ. ಖರ್ಚಿಗೆ ಕೊಟ್ಟ 25 ರಲ್ಲಿ 15 ಸಾವಿರ ಉಳಿದಿತ್ತು. ಟೇಬಲ್ ಮೇಲಿಟ್ಟೆ. “ಏನ್ರಿ ಲೀಲಾದೇವಿ” ಅಂದರು. “ಸರ್ ನೀವು 25 ಸಾವಿರ ಕಳ್ಸಿದ್ರಿ, 15 ಸಾವಿರ ಉಳಿದಿದೆ. ಬಹುಶಃ ಇದು ಪಾರ್ಟಿ ಫಂಡ್, ಲೆಕ್ಕ ತಗೋಳಿ” ಅಂದೆ. ಹೆಗಡೆಯವರು ದಂಗಾದರು. “ಏನ್ರಿ, ಗೆಲ್ತೀರಾ?” ಅಂತ ಅಂದರು. “ಗೆಲ್ತೀನಿ ಸರ್. ಇದು ಉಳಿದಿರೋ ಹಣ ತಗೋಳಿ” ಅಂತ ಅಂದೆ. ಅದನ್ನ ಕೇಳಿ ಅವರು ಭಾವುಕರಾದರು. “15 ಸಾವಿರ ಉಳಿಸಿಕೊಂಡು ಬಂದಿದ್ದೀರಲ್ಲಾ ಗೆಲ್ತೀರಾ ಲೀಲಾದೇವಿ” ಅಂತ ಮತ್ತೆ ಕೇಳಿದರು. ನಾನು “ಗೆಲ್ತೀನಿ ಸರ್” ಎಂದು ಅಷ್ಟೇ ದೃಢವಾಗಿ ಹೇಳಿ ಅಲ್ಲಿಂದ ಹೊರಬಿದ್ದೆ. ಮತ್ತು ಗೆದ್ದೆ ಕೂಡ.
ಒಂದು ಸತ್ಯ ಸಂಗತಿ ಹೇಳ್ತೀನಿ. ನಾನು ಸ್ಪರ್ಧಿಸಿದ 10 ಚುನಾವಣೆಗಳಲ್ಲಿ ಒಂಭತ್ತು ಚುನಾವಣೆವರೆಗೂ ನಾನು ಯಾರಿಗೂ ಸೆರೆ ಗಿರೆ ಕೊಡಲಿಲ್ಲ. ಸೀರೆಯನ್ನೂ ಹಂಚಲಿಲ್ಲ. ಹತ್ತನೇ ಚುನಾವಣೆಯಲ್ಲಿ ನನ್ನ ಮಗ ನನಗೆ ಗೊತ್ತಿಲ್ಲದ ಹಾಗೆ ಸೆರೆ ಹಂಚಿ ಸೋತ ನೋಡಿ, ನಾನು ಅವತ್ತೇ ನಿರ್ಧರಿಸಿದೆ, ಇನ್ನು ಮುಂದೆ ಚುನಾವಣೆಗೆ ನಿಲ್ಲಬಾರದು ಎಂದು. ಯಾರಿಗೂ ಏನನ್ನೂ ಹಂಚಲಿಲ್ಲ ನಾನು. ಆದರೆ ಕೊನೆಗೆ ನನ್ನ ಹಾಳುಮಾಡಿದ್ದು, ಸೋಲಿಸಿದ್ದು ಇದೇ ಸೆರೆ. ಹಾಗಾಗಿ ನಾನು ಚುನಾವಣೆಗೆ ನಾಲಾಯಕ್ ಅಂತ ನನ್ನಷ್ಟಕ್ಕೆ ನಾನೇ ಅಂದುಕೊಂಡುಬಿಟ್ಟೆ.
ಈಗ ಚುನಾವಣಾ ಅಸಂಸ್ಕøತಿ ಬೆಳೆಯುತ್ತಿದೆ. ಎಷ್ಟು ಮೋಸಗಾರಿಕೆ ಇದೆ, ಎಷ್ಟು ಅನ್ಯಾಯ ನಡೆಯುತ್ತಿದೆ, ಎಷ್ಟು ಪ್ರಾಣಗಳು ಹೋಗುತ್ತಾ ಇವೆ. ಇದನ್ನೆಲ್ಲಾ ಮಹಿಳೆ ಎದುರಿಸಬಲ್ಲಳೇ? ಮಹಿಳೆ ಚುನಾವಣೆಗೆ ನಿಂತರೆ ಯಾವ್ಯಾವ ರೀತಿಯ ಸಂದರ್ಭಗಳನ್ನು, ಸಮಸ್ಯೆಗಳನ್ನು ಎದುರಿಸ ಬೇಕಾದೀತು? ಇಂಥ ಸವಾಲುಗಳನ್ನು ನೋಡಿದಾಗ ಯಾವ ಮಹಿಳೆ ಧೈರ್ಯವಾಗಿ ಚುನಾವಣೆಗೆ ನಿಲ್ಲೋದಕ್ಕೆ ಸಾಧ್ಯ? ಹಾಗಾಗಿ ವರ್ಷದಿಂದ ವರ್ಷಕ್ಕೆ ರಾಜಕೀಯದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ.
ಇತ್ತೀಚೆಗೆ ನಾನು “ಇಪ್ಪತ್ತನೆಯ ಶತಮಾನದ ರಾಜಕೀಯದಲ್ಲಿ ಮಹಿಳೆ” ಎಂಬ ಪುಸ್ತಕವನ್ನು ಬರೆದಿದ್ದೇನೆ. ಒಂದು ಶತಮಾನದಲ್ಲಿ ರಾಜಕೀಯ ರಂಗದಲ್ಲಿ ವರ್ಷದಿಂದ ವರ್ಷಕ್ಕೆ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಮಹಿಳೆಯರ ಸಂಖ್ಯೆ ಹೇಗೆ ಕಡಿಮೆ ಆಗುತ್ತಾ ಬಂದಿದೆ ಎಂಬುದನ್ನು ಅಂಕಿ ಸಂಖ್ಯೆಗಳೊಂದಿಗೆ ವಿವರಿಸಿದ್ದೇನೆ. ಇವತ್ತು ವಿಧಾನಸಭೆಗಳಲ್ಲಿ, ಲೋಕಸಭೆಯಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಬಹುದೊಡ್ಡ ಪ್ರಶ್ನೆ. ಮಹಿಳೆಯರಿಗೆ ಇಂದು ಯಾಕೆ ಗೆದ್ದು ಬರುವುದಕ್ಕೆ ಸಾಧ್ಯವಾಗುತ್ತಿಲ್ಲ, ಏನು ಕಷ್ಟ ಆಗ್ತಾ ಇದೆ, ಚುನಾವಣೆಗೆ ನಿಂತ ಮಹಿಳೆಯರು ಯಾವ ರೀತಿ ಹಿಂಸೆ ಅನುಭವಿಸುತ್ತಿದ್ದಾರೆ ಅನ್ನೋದು ಬಹಳ ಗಂಭೀರವಾದಂತಹ ವಿಷಯ.
ಇಂದು ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಬೇಕು ಎಂದು ನಾವೆಲ್ಲ ಹೇಳುತ್ತಿದ್ದೇವೆ. ಈ ರೀತಿ ಹೋರಾಟ ಮಾಡಿಮಾಡಿ ಶೇ.33ರಷ್ಟು ಮೀಸಲಾತಿ ಮೊದಲು ತಂದಿದ್ದಕ್ಕೆ, ಬೆಂಗಳೂರು ಮಹಾನಗರಪಾಲಿಕೆಯಲ್ಲಿ 102 ಜನ ಮಹಿಳೆಯರು ಇದ್ದಾರೆ. ಆದರೆ ವಿಧಾನಸಭೆ, ಲೋಕಸಭೆಗೆ ಇನ್ನೂ ಆಗಿಲ್ಲ. ಮಹಿಳೆಯರನ್ನು ಚುನಾವಣಾ ಕಣಕ್ಕೆ ತರೋದಕ್ಕೆ ನಾನು ತುಂಬಾ ತುಂಬಾ ಹೋರಾಟ ಮಾಡಿದೆ. ನಾನು ಚುನಾವಣೆಗೆ ನಿಂತಾಗ ಕಲ್ಲು ಒಗೆದ್ರು, ಛೀ ಅಂತ ಉಗಿದ್ರು, ಮಣ್ಣು ತೂರಿದ್ರು. ಇವೆಲ್ಲಾ ನೆನಪಿಸಿಕೊಂಡರೆ… ಕಷ್ಟ ಆಗುತ್ತದೆ. ಆದರೂ ಅವನ್ನೆಲ್ಲ ತಡೆದುಕೊಳ್ಳಬೇಕು. ಎದುರಿಸಬೇಕು, ಅದಕ್ಕೆ ಆತ್ಮ ಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಆದರೂ ನಾನು ಆಶಾವಾದಿ. ಮಹಿಳೆಯರಿಗೆ ಮೀಸಲಾತಿ ಬಂದೇ ಬರುತ್ತದೆ. ಅದಕ್ಕೆ ನಾವೇ ಹೋರಾಟ ಮಾಡಬೇಕು.
(ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ ಮಾರ್ಚ್ 25 ರಂದು ಬೆಂಗಳೂರಿನಲ್ಲಿ ಏರ್ಪಡಿಸಿದ್ದ “ಚುನಾವಣಾ ಸಂಸ್ಕøತಿ ಮತ್ತು ಮಹಿಳೆ” ವಿಚಾರಸಂಕಿರಣದಲ್ಲಿ ಮಾಡಿದ ಭಾಷಣದ ಸಂಗ್ರಹರೂಪ. ನಿರೂಪಣೆ: ಜಯಲಕ್ಷ್ಮಿ ಹೆಗಡೆ.)
-ಲೀಲಾದೇವಿ ಆರ್. ಪ್ರಸಾದ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
Very interesting