ನೂರರ ನೆನಪು / ಅಸಂತೃಪ್ತ ಆತ್ಮ ತೆರೆದಿಟ್ಟ ಅಮೃತಾ ಪ್ರೀತಮ್ – ತಿರು ಶ್ರೀಧರ

ಇಪ್ಪತ್ತನೇ ಶತಮಾನದ ಬದಲಾಗುತ್ತಿದ್ದ ಭಾರತಕ್ಕೆ ಕನ್ನಡಿ ಹಿಡಿದ ಮತ್ತು ಹೆಣ್ಣಿನ ಅಂತರಂಗದ ಪಿಸುಮಾತುಗಳನ್ನು ದಿಟ್ಟತನದಿಂದ ಹೊರಗಿಟ್ಟ ಪ್ರಖ್ಯಾತ ಲೇಖಕಿ ಅಮೃತಾ ಪ್ರೀತಮ್ ಹುಟ್ಟಿ ಆಗಸ್ಟ್ 31 ಕ್ಕೆ ನೂರು ವರ್ಷಗಳಾದವು. ಪ್ರಗತಿಪರ ಸಾಹಿತ್ಯ ಚಳವಳಿಯಲ್ಲಿದ್ದು ಆರು ದಶಕಗಳ ಕಾಲ ನಿರಂತರವಾಗಿ ಬರೆದ ಅವರ ನೂರು ಪುಸ್ತಕಗಳು ಪ್ರಕಟವಾಗಿವೆ.

ಜ್ಞಾನಪೀಠ ಪುರಸ್ಕೃತ ಮಹಾನ್ ಕವಯತ್ರಿ, ಲೇಖಕಿ, ಕತೆಗಾರ್ತಿ, ಕಾದಂಬರಿಗಾರ್ತಿ ಅಮೃತಾ ಪ್ರೀತಮ್ ಅವರ ಜನ್ಮಶತಮಾನೋತ್ಸವವನ್ನು ಸಾಹಿತ್ಯಲೋಕ ಸಂಭ್ರಮದಿಂದ ಆಚರಿಸುತ್ತಿದೆ.

ಅಮೃತಾ ಪ್ರೀತಮ್ ಸ್ವಾತಂತ್ರ್ಯಪೂರ್ವ ಅವಿಭಕ್ತ ಪಂಜಾಬಿನ ಲಾಹೋರಿನ ಬಳಿಯ ಗುಜರನವಾಲಾನಲ್ಲಿ 31ನೆಯ ಆಗಸ್ಟ್ 1919ರಂದು ಜನಿಸಿದರು. ಇವರ ತಂದೆ ಕರ್ತಾರಸಿಂಹ ಹಿತಕಾರಿ ಸಹ ಅಂದಿನ ಪ್ರಸಿದ್ದ ಲೇಖಕರಲ್ಲೊಬ್ಬರಾಗಿದ್ದರು. ಅಮೃತಾ ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ತಾಯಿ ರಾಜಕೌರ್ ಅವರನ್ನು ಕಳೆದುಕೊಂಡರು. ಮುಂದೆ ತಂದೆಯ ಪೋಷಣೆಯಲ್ಲೇ ಬೆಳೆದ ಅಮೃತಾ ತಂದೆಯ ಪ್ರೇರಣೆಯಿಂದಲೆ ಸಾಹಿತ್ಯ ರಚನೆಗೆ ತೊಡಗಿದರು. ನೂರಕ್ಕೂ ಹೆಚ್ಚು ಕವನಗಳನ್ನುಳ್ಳ ಇವರ ಮೊದಲಕೃತಿ ‘ಅಮೃತ ಲಹರಾರಿ’ 1936ರಲ್ಲಿ ಹೊರಬಂತು. 1938ರಲ್ಲಿ ಇವರು ‘ನವೀದುನಿಯಾ’ ಎಂಬ ಸಾಹಿತ್ಯ ಪತ್ರಿಕೆಯನ್ನು ನಡೆಸತೊಡಗಿದರು. ಲಾಹೋರಿನ ಆಕಾಶವಾಣಿಗೆ ಕವನಗಳನ್ನು ಬರೆಯಲಾರಂಭಿಸಿದರು. ಇವರ ಆರಂಭದ ಬರವಣಿಗೆಯ ಮೇಲೆ ಪಂಜಾಬಿನ ಖ್ಯಾತ ಕವಿ ಮೋಹನ ಸಿಂಗ್ ಮತ್ತು ಪ್ರಸಿದ್ಧ ಲೇಖಕ ಗುರುಬಕ್ಷ್‍ಸಿಂಗ್ ಅವರ ಪ್ರಭಾವ ಸಾಕಷ್ಟು ಗೋಚರಿಸುತ್ತವೆ.

1947ರಲ್ಲಿ ಭಾರತದ ವಿಭಜನೆಯಾದ ನಂತರ ಅಮೃತ ಪ್ರೀತಮ್ ಅವರು ಲಾಹೋರನ್ನು ತೊರೆದು ದೆಹಲಿಯಲ್ಲಿ ನೆಲೆಸಿದರು. ವಿಭಜನೆಯ ಸಮಯದಲ್ಲಿ ಅಲ್ಲಿಯ ಪ್ರಜೆಗಳಿಗೆ ಉಂಟಾದ ಕಷ್ಟನಷ್ಟಗಳು ಇವರ ಅನೇಕ ಕೃತಿಗಳಲ್ಲಿ ಮಾರ್ದನಿಸಿವೆ. ವಾರಸ್‍ಶಾಹ್ ಎಂಬ ಇವರ ಕವನ ಈ ನಿಟ್ಟಿನಲ್ಲಿ ತುಂಬಾ ಪ್ರಸಿದ್ಧವಾದದ್ದು. ಇವರ ಕೃತಿಗಳಲ್ಲಿ ಪಂಜಾಬಿನ ಜನಜೀವನದ ಹಲವಾರು ಮುಖಗಳ ಪರಿಚಯ ಕಾಣಸಿಗುತ್ತದೆ. ಹಿಂದಿ ಸಾಹಿತ್ಯಕ್ಷೇತ್ರದಲ್ಲೂ ಇವರು ಜನಪ್ರಿಯ ಕಾದಂಬರಿಕಾರ್ತಿಯೆಂದು ಹೆಸರುವಾಸಿಯಾಗಿದ್ದಾರೆ. ಹೆಣ್ಣಿನ ಅಸಹಾಯಕತೆ, ಅವಳ ಮೇಲೆ ಸಮಾಜ ನಡೆಸುವ ದೌರ್ಜನ್ಯ, ಸಾಮಾಜಿಕ ಕಟ್ಟುಪಾಡುಗಳು ಇವರ ಆರಂಭಿಕ ಕಾದಂಬರಿಗಳ ತಿರುಳು. ನಂತರದ ಕೃತಿಗಳಲ್ಲಿ ಸಾಮಾಜಿಕ ಹಾಗೂ ಮನೋವೈಜ್ಞಾನಿಕ ಸಮಸ್ಯೆಗಳು ಇವರ ಕೃತಿಗಳಲ್ಲಿ ಮೂಡಿಬಂದಿವೆ.

ಪ್ರೀತಿಯ ನಾನಾ ಮುಖಗಳು, ಪ್ರೀತಿಯನ್ನು ಅರಸುವ ಮನ, ಅದು ಪಡುವ ಅಸಂತೃಪ್ತ ಅಲೆಮಾರಿತನಗಳನ್ನು ಅಮೃತಾ ಮೊಗೆ ಮೊಗೆದು ತಮ್ಮ ಬರಹಗಳಲ್ಲಿ ಅನುಭಾವಿಸಿ ಬಿಡಿಸಿಟ್ಟಿದ್ದಾರೆ. ಅಮೃತಾ ಪ್ರೀತಮ್ ದಿಟ್ಟ ಮಹಿಳೆ. ಅಂದಿನ ಕಟ್ಟುಪಾಡಿನ ಸಾಮಾಜಿಕ ಹಿನ್ನೆಲೆಯ ದಿನಗಳಲ್ಲೇ ಅವರ ಸ್ವತಂತ್ರ ಮನೋಭಾವನೆಗಳ ದಿಟ್ಟತನ ಎದ್ದು ಕಾಣುತ್ತದೆ. ಅವರಿಗೆ ಇಪ್ಪತ್ತನೆಯ ವಯಸ್ಸಿನಲ್ಲಿ (ಡಿಸೆಂಬರ್ 1939) ಪ್ರೀತಮ್‍ಸಿಂಗ್ ಕವಾತಡಾ ಅವರೊಡನೆ ಇವರ ಮದುವೆಯಾಯಿತು. ಆದರೆ ಮನಸ್ಸುಗಳು ಕೂಡಿಬರಲಿಲ್ಲ. ಕವಯತ್ರಿಯ ಭಾವ ಬದುಕಿಗೆ ಪ್ರೀತಮ್ ಸಿಂಗ್ ಯಾವ ರೀತಿಯಲ್ಲೂ ಸಾಟಿಯಾಗಿರಲಿಲ್ಲ. ಅಂದಿನ ದಿನಗಳಲ್ಲಿ ಸಾಹಿರ್ ಲುಧಿಯಾನವಿ ಎಂಬ ಕವಿ ಹೆಚ್ಚು ಹೆಸರನ್ನು ಮಾಡಿದ್ದರು. ಈತನ ಕವಿತೆಗಳು ಅಮೃತಾ ಅವರನ್ನು ಎಷ್ಟು ಸೆಳೆಯಿತೆಂದರೆ, ಆಕೆ ತನ್ನ ಪತಿ ಪ್ರೀತಮ್ ಸಿಂಗ್ ಅನ್ನು ಶಾಶ್ವತವಾಗಿ ತೊರೆದು ಸಾಹಿರ್ ಲುಧಿಯಾನವಿ ಹಿಂದೆ ನಡೆದರು. ಆದರೆ ಲುಧಿಯಾನವಿ ಅಮೃತಾ ಮಾಡಿದ ’ತ್ಯಾಗ’ವನ್ನು ಮರೆತು ಮತ್ತೊಂದು ಹೆಣ್ಣಿನಲ್ಲಿ ಸುಖ ಕಾಣಹೊರಟಾಗ ದೊಡ್ಡ ನಿರಾಸೆ ಅನುಭವಿಸಿದರೂ, ಆತನನ್ನು ಆತನ ಪಾಡಿಗೆ ಬದುಕಲು ಬಿಟ್ಟುಬಿಟ್ಟರು. ಮುಂದೆ ಅಮೃತಾ, ಇಮ್ರೋಜ್ ಎಂಬ ಕಲಾವಿದನ ಜೊತೆಯಲ್ಲಿ ಬದುಕಲು ಆರಂಭಿಸಿದರು. ತನ್ನ ಜೀವನದ ಕೊನೆಯವರೆಗೆ ಸುಮಾರು 40 ವರ್ಷಗಳ ಕಾಲದ ಸುದೀರ್ಘ ಬದುಕನ್ನು ಆಕೆ ಇಮ್ರೋಜ್ ಜೊತೆ ಕಳೆದರು.

ಲಾಮಿಯಾವತನ್; ಸುನಹರ್ ಮೊದಲಾದವು ಅಮೃತಾ ಪ್ರೀತಮ್ ಅವರ ಕವನ ಸಂಗ್ರಹಗಳು. ಪಿಂಜರ್, ಆಲನಾ, ಬಂದ್ ದರ್‍ವಾಜಾ, ರಂಗ್ ಕಾ ಪತ್ತಾ, ವಾಕ್ ಥೀ ಅನೀತಾ, ಧರತೀ, ಸಾಗರ್ ಔರ್ ಸೀಪಿಯಾಂ, ದಿಲ್ಲೀ ಕಿ ಗಲಿಯಾಂ, ಎಸ್ಕಿಮೋ ಸ್ಟೈಲ್ ತಥಾ ಏರಿಯಲ್, ಜಲಾವತನ್, ಜೇಬ್ ಕತರೇ ಕಾದಂಬರಿಗಳು. ಅಖರೀಖತ್, ಏಕ್ ಲಡಕೀ ಏಕ್ ಶಾಪ್ ಸಣ್ಣಕತೆಗಳ ಸಂಗ್ರಹ. ಇಕ್ಕೀಸ್ ಪತ್ತಿಯೋಂಕಾ ಗುಲಾಬ್ ಎಂಬುದು ಇವರ ಬಲ್ಗೇರಿಯ, ಸೋವಿಯತ್ ರಷ್ಯ, ಯುಗೋಸ್ಲಾವಿಯ, ಹಂಗೇರಿ, ರುಮೇನಿಯ ಮತ್ತು ಜರ್ಮನಿ ಪ್ರವಾಸದ ದಿನಚರಿ. ಅತೀತ್ ಕೀ ಪರಛಾಯಿಯಾಂ ಕೃತಿಯಲ್ಲಿ ತಮ್ಮ ಬದುಕು ಹಾಗೂ ಸಾಹಿತ್ಯ, ದೇಶವಿದೇಶಗಳ ಬರಹಗಾರರ ಬದುಕು ಮತ್ತು ಸಾಹಿತ್ಯವನ್ನು ಕುರಿತಂತೆ ನೆನಪಿನ ಚಿತ್ರಗಳನ್ನು ಬಿಡಿಸಿದ್ದಾರೆ. ರಸೀದಿ ಟಿಕೆಟ್ ಇವರ ಆತ್ಮಕಥಾತ್ಮಕ ಕೃತಿ.

ಅಮೃತಾ ಪ್ರೀತಮ್ ಅವರು ದೆಹಲಿಯ ಆಕಾಶವಾಣಿಯಲ್ಲಿ ಅನೇಕ ವರ್ಷ ಕೆಲಸ ಮಾಡಿದರು. ಮುಂಬಯಿಯ ಚಲನಚಿತ್ರ ಪ್ರಪಂಚಕ್ಕೂ ಹೆಜ್ಜೆಯಿಟ್ಟ ಇವರು ಆ ಕ್ಷೇತ್ರ ಒಗ್ಗದೆ ಮರಳಿದರು. ಇವರ ಅನೇಕ ಕೃತಿಗಳು ಭಾರತೀಯ ಭಾಷೆಗಳಲ್ಲೇ ಅಲ್ಲದೆ ಇಂಗ್ಲಿಷ್, ರಷ್ಯನ್, ಬಲ್ಗೇರಿಯನ್. ಹಂಗೇರಿಯನ್, ಜಪಾನಿ ಭಾಷೆಗಳಿಗೆ ಅನುವಾದಗೊಂಡಿವೆ. ಇವರ ಸಾಹಿತ್ಯ ಸೇವೆಯನ್ನು ಗಮನಿಸಿ ಕೇಂದ್ರಸಾಹಿತ್ಯ ಅಕಾಡೆಮಿ 1956ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು. ಅದನ್ನು ಪಡೆದ ಮಹಿಳೆಯರಲ್ಲಿ ಇವರೇ ಮೊದಲಿಗರು. ಪದ್ಮಶ್ರೀ, ಪದ್ಮ ವಿಭೂಷಣ ಪ್ರಶಸ್ತಿಗಳು ಲಭಿಸಿದವು. ದೆಹಲಿ ವಿಶ್ವವಿದ್ಯಾಲಯವು 1973ರಲ್ಲಿ ಗೌರವ ಡಿ.ಲಿಟ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಬಲ್ಗೇರಿಯಾದ ಪ್ರಶಸ್ತಿಗೂ ಪಾತ್ರರಾದರು. 1966ರಿಂದ ಮೊದಲುಗೊಂಡಂತೆ, ನಾಗಮಣಿ ಎಂಬ ಪಂಜಾಬಿ ಪತ್ರಿಕೆಯ ಸಂಪಾದಕ ಪ್ರಕಾಶಕರಾಗಿದ್ದರು. ಅಮೆರಿಕೆಯ ಮಿಚಿಗನ್ ವಿಶ್ವವಿದ್ಯಾಲಯದ ನಿಯತಕಾಲಿಕ ಮೆಹಫಿಲ್ ಇವರ ಕೃತಿಗಳನ್ನು ಕುರಿತಂತೆ ಒಂದು ಸಂಚಿಕೆಯನ್ನು ಹೊರತಂದಿತ್ತು.

ಜ್ಞಾನಪೀಠ ಪ್ರಶಸ್ತಿ ಗೌರವಕ್ಕೂ ಪಾತ್ರರಾದ ಅಮೃತಾ ಪ್ರೀತಮ್ ಅವರು, ಕಾಗದ ಮತ್ತು ಕ್ಯಾನ್‍ವಾಸ್ ಕವನ ಸಂಗ್ರಹದಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿದ್ದರು. ತಮ್ಮ ಈ ಪ್ರಯೋಗಗಳಲ್ಲಿ ಜನಪದ ಛಂದಸ್ಸು, ಲಾವಣೆಮಟ್ಟು, ಮುಕ್ತಛಂದಸ್ಸು ಇವುಗಳನ್ನು ವಿಧವಿಧವಾಗಿ ಬಳಸಿದ್ದರು. ಈ ಮಹಾನ್ ಸಾಧಕಿ ಅಮೃತಾ ಪ್ರೀತಮ್ ಅಕ್ಟೋಬರ್ 31, 2005ರಂದು ನಿಧನರಾದರು.

(ಸೌಜನ್ಯ: ಫೇಸ್ ಬುಕ್ ಕನ್ನಡ ಸಂಪದ ಮತ್ತು ಸಲ್ಲಾಪ.ಕಾಂ)

  • ತಿರು ಶ್ರೀಧರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *