ನುಡಿನಮನ / ಹೆಣ್ಣಿನ ಅಚಲ ಧ್ವನಿ ಕಮಲಾ ಭಸಿನ್- ಶಶಿಕಲಾ ವೀ. ಹುಡೇದ


ಕೇವಲ ತಾತ್ವಿಕ ಸ್ತ್ರೀವಾದಿ ಆಗಿರದೆ, ಮಹಿಳಾಪರ ಚಿಂತನೆಗೆ ಬೇಕಾದ ಎಲ್ಲದರ ಬಗ್ಗೆ ಚಿಂತಿಸುತ್ತಿದ್ದ ಕಮಲಾ ಭಸಿನ್ ಮಹಿಳಾ ಚಳವಳಿಯಲ್ಲಿ ಹೊಸ ಸಂಚಲನವನ್ನು ಮೂಡಿಸಿದ ಹೋರಾಟಗಾರ್ತಿ. ಗಂಡು-ಹೆಣ್ಣಿಗೆ ಸಮಾನ ಗೌರವ, ಅಧಿಕಾರ-ಹಕ್ಕುಗಳಿರುವ ಸಮಸಮಾಜವನ್ನು ಅವರು ಕನಸುತ್ತಿದ್ದರು. ವಾಸ್ತವ ಬದುಕಿನ ಗಾಢ ಅನುಭವಗಳ ಹಿನ್ನೆಲೆಯಲ್ಲಿ ಪಕ್ವಗೊಂಡಿತ್ತು ಅವರ ಸ್ತ್ರೀವಾದ. ಸ್ತ್ರೀವಾದಿ ವಿಚಾರಧಾರೆ ಎಂಬುದೊಂದು ‘ದೈಹಿಕ’ ವಿಚಾರಧಾರೆಯಲ್ಲ, ಸ್ತ್ರೀವಾದವೆಂದರೆ ಸಮಾನತೆ ಮತ್ತು ಕೇವಲ ಸಮಾನತೆ ಎನ್ನುವುದು ಅವರ ನಿಲುವಾಗಿತ್ತು.

ಇತ್ತೀಚೆಗಷ್ಟೆ ಒಂದು ವಾಟ್ಸಾಪ್ ವೀಡಿಯೊ ನೋಡಿ ಮನ ತಲ್ಲಣಿಸಿಹೋಗಿತ್ತು. ಬೈಕ್‍ನ ಹಿಂದಿನ ಸೀಟಿನಲ್ಲಿ ಹೊರಟಿದ್ದ ಹರೆಯದ ಹೆಣ್ಣುಮಗಳೊಬ್ಬಳನ್ನು ಯುವಕರ ಗುಂಪೊಂದು ತಡೆದು, ಅಸಹ್ಯಕರವಾಗಿ ಮೈಕೈಮುಟ್ಟುತ್ತ, ಸೊಂಟದ ಕೆಳಗಿನ ಭಾಷೆಯನ್ನು ಬಳಸುತ್ತ ‘ನಿನ್ನ ಮರ್ಯಾದೆ ಹೋದರೆ ಆಗ ನಿನಗೆ ಬುದ್ಧಿ ಬರುತ್ತೆ’ ಎಂದು ಹೇಳುತ್ತಿದ್ದರು. ಆ ದೃಶ್ಯವನ್ನು ಮೊಬೈಲ್‍ನಲ್ಲಿ ಚತ್ರೀಕರಿಸಿ ಹರಿಬಿಟ್ಟಿದ್ದರು. ಬೈಕ್ ಸವಾರ ಈ ಗಲಾಟೆಯ ನಡುವೆಯೇ ಬೈಕ್ ವೇಗವನ್ನು ಹೆಚ್ಚಿಸಿ ಗುಂಪಿನಿಂದ ದೂರಚಲಿಸಿದಾಗ ಸಧ್ಯ ಹೆಣ್ಣುಮಗಳು ಈ ಖೂಳರ ಗುಂಪಿನಿಂದ ಪಾರಾದಳಲ್ಲ ಅನ್ನಿಸಿತು. ತನ್ನ ಗಂಡಾಳ್ವಿಕೆಯ ಹಿಡಿತವನ್ನು ಭದ್ರವಾಗಿಡಲು ಸಮಾಜ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತಿರುವ ಬಗ್ಗೆ ಹೇಸಿಗೆಯೆನಿಸಿತು. ಹೆಣ್ಣು ಅಂತರಿಕ್ಷಕ್ಕೆ ಹಾರುವ ಸಾಧನೆ ಮಾಡಿದ್ದರೂ ಈ ಭೂಮಿಯಲ್ಲಿ ಅವಳಿಗೆ ನೆಮ್ಮದಿಯ ಬದುಕು ದುಸ್ತರವಾಗುತ್ತಿರುವುದು ವಿಪರ್ಯಾಸವೇ ಸರಿ.

ಹೆಣ್ಣನ್ನು ದೈಹಿಕ ದೌರ್ಜನ್ಯದ ಮೂಲಕ ಘಾಸಿಗೊಳಿಸಿ, ಅದರಿಂದ ಅವಳ ಮರ್ಯಾದೆ ಕಳೆದೆವೆಂದು ಸಂಭ್ರಮಿಸುವಲ್ಲಿ ಯಾವ ಗಂಡಸುತನ ಅಡಗಿರುವುದೊ ತಿಳಿಯುತ್ತಿಲ್ಲ. ಪ್ರತಿದಿನವೂ ಸೆಕೆಂಡುಗಳ ಅಂತರದಲ್ಲಿ ವರದಿಯಾಗುವ ದುರ್ಭರ ಪ್ರಸಂಗಗಳನ್ನು ನೋಡಿದಾಗ ಇತ್ತೀಚೆಗೆ ನಮ್ಮನ್ನಗಲಿದ ಮಹಿಳಾಪರ ಹೋರಾಟಗಾರ್ತಿ ಕಮಲಾ ಭಸಿನ್ ನೆನಪಾಗುತ್ತಾರೆ. ‘ಹೆಣ್ಣಿನ ಮೇಲೆ ಅತ್ಯಾಚಾರವಾದರೆ ಅವಳ ಮಾನ ಹೋಯಿತೆಂದು ಜನ ಹೇಳುತ್ತಾರೆ. ಇದು ಪಿತೃಸತ್ತೆ (ಗಂಡಾಳಿಕೆ)ಯ ಭಾಷೆ. ಅತ್ಯಾಚಾರವಾದಾಗ ಹೋಗುವುದು ಹೆಣ್ಣಿನ ಮಾನವಲ್ಲ, ಅಲ್ಲಿ ಲೂಟಿಯಾಗುವುದು ಗಂಡಿನ ಮರ್ಯಾದೆಯೇ’ ಎನ್ನುವ ಅವರ ಮಾತು ಎಷ್ಟು ಸರಳವಾದ ಸತ್ಯ!

ಎಪ್ಪತ್ತರ ದಶಕದಲ್ಲಿ ಮಹಿಳಾ ಚಳವಳಿಯಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದ ಕಮಲಾ ಭಸಿನ್ ಹುಟ್ಟಿದ್ದು ಈಗ ಪಾಕಿಸ್ತಾನದ ಭಾಗವಾಗಿರುವ ಪಂಜಾಬ್ ಪ್ರಾಂತದಲ್ಲಿ. 1946ರಲ್ಲಿ ಹುಟ್ಟಿದ್ದ ಅವರು ತಮ್ಮನ್ನು `ಮಿಡ್’ನೈಟ್ ಜನರೇಶನ್’ (ಮಧ್ಯರಾತ್ರಿಯ ಪೀಳಿಗೆ) ಎಂದೇ ಕರೆದುಕೊಳ್ಳುತ್ತಿದ್ದರು. ಸ್ವಾತಂತ್ರ್ಯಾನಂತರ ಅವರ ಕುಟುಂಬ ಭಾರತದ ರಾಜಸ್ತಾನದಲ್ಲಿ ನೆಲೆಸಿತು. ಕೂಡುಕುಟುಂಬದಲ್ಲಿ ಬೆಳೆದ ಕಮಲಾ ಅವರ ತಂದೆ ಸರ್ಕಾರಿ ವೈದ್ಯರಾಗಿದ್ದರು. ಬಾಲ್ಯದಿಂದಲೂ ಮುಕ್ತಮನಸಿನ ಕಮಲಾ ಹುಡುಗರೊಡನೆ ಆಡಿ ಬೆಳೆದರೂ ಭಾರತದ ಗ್ರಾಮೀಣ ಹೆಣ್ಣುಮಕ್ಕಳ ದುರ್ಭರ ಜೀವನದ ಅರಿವು ಅವರಿಗಾಯಿತು. ಸರ್ಕಾರಿ ಶಾಲೆಕಾಲೇಜುಗಳಲ್ಲಿ ಓದಿ ಕಮಲಾ ಸ್ನಾತಕೋತ್ತರ ಪದವಿ ಪಡೆದು ಫೆಲೋಶಿಪ್ ಅಧ್ಯಯನಕ್ಕಾಗಿ ಜರ್ಮನಿಗೆ ತೆರಳಿದರು. ವಿಶ್ವಸಂಸ್ಥೆಯಲ್ಲಿ ಕೆಲಕಾಲ ಕೆಲಸ ಮಾಡಿದರೂ ಭಾರತಕ್ಕೇ ಮರಳಿ ಇಲ್ಲಿ ಸಾಮಾಜಿಕ ತುಡಿತವನ್ನಿಟ್ಟುಕೊಂಡು ಕೆಲಸ ಮಾಡಬಯಸಿದರು.

ಈ ನಡುವೆ ಕಮಲಾ ಭಸಿನ್ ಅವರ ಮದುವೆಯೂ ಆಯಿತು. ಆದರೆ ಈ ಮದುವೆ ಬಹುಕಾಲ ಬಾಳಲಿಲ್ಲ. ನಿರ್ಭಿಡೆಯಿಂದ ಅದರಿಂದ ಹೊರಬಂದು ರಾಜಸ್ತಾನದ ಸೇವಾಮಂದಿರದಲ್ಲಿ ಕೆಲಸ ನಿರ್ವಹಿಸತೊಡಗಿದರು. ವಿದೇಶ ಪ್ರವಾಸದಿಂದ ಅವರು ಕಂಡುಕೊಂಡಂತೆ ದಕ್ಷಿಣ ಏಷ್ಯಾದ ಬಾಂಗ್ಲಾದೇಶ, ಪಾಕಿಸ್ತಾನ, ಭಾರತ ಮೊದಲಾದ ರಾಷ್ಟ್ರಗಳಲ್ಲಿ ಮಹಿಳೆಯರ ದುಸ್ಥಿತಿ ಒಂದೇ ತೆರನಾಗಿತ್ತು. 1976ರಲ್ಲಿ ಬಾಂಗ್ಲಾದೇಶದಲ್ಲಿ ಕೆಲಸ ಮಾಡುವಾಗ ಸಂಪರ್ಕಕ್ಕೆ ಬಂದ ಆರೋಗ್ಯ ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಜಫರುಲ್ಲಾ ಚೌಧರಿ ಅವರಿಂದ ಕಮಲಾ ಅವರ ಸ್ತ್ರೀವಾದಿ ಚಿಂತನೆ ತನ್ನ ಗಟ್ಟಿ ಆಯಾಮವನ್ನು ಪಡೆದುಕೊಂಡಿತು. ಈ ನಡುವೆ ಸಮಾನಮನಸ್ಕರಾದ ಬಲಜೀತ್‍ಸಿಂಗ್ ಮಲಿಕ್ ಅವರೊಂದಿಗೆ ವಿವಾಹವಾಗಿ ಅವರಿಗೆ ಇಬ್ಬರು ಮಕ್ಕಳು ಜನಿಸಿದರು.

ಕೇವಲ ತಾತ್ವಿಕ ಸ್ತ್ರೀವಾದಿ ಆಗಿರದೆ ಕಮಲಾ ಜಾಗೃತಿಗಾಗಿ ಹೋರಾಟದ ಕಣಕ್ಕಿಳಿದರು. ಲಿಂಗತಾರತಮ್ಯ, ಬಡತನ, ಸಾಮಾಜಿಕ ನ್ಯಾಯ, ಆರ್ಥಿಕ ಅಭಿವೃದ್ಧಿ, ಪ್ರಜಾಪ್ರಭುತ್ವ, ಶಾಂತಿ, ಮಾನವ ಹಕ್ಕುಗಳು ಹೀಗೆ ಮಹಿಳಾಪರ ಚಿಂತನೆಗೆ ಪೂರಕವಾದ ಎಲ್ಲ ವಿಷಯಗಳನ್ನು ಪ್ರಚುರಪಡಿಸಲು ದಕ್ಷಿಣ ಏಷ್ಯಾದ ಮಹಿಳೆಯರಿಗಾಗಿ ಒಂದು ತಿಂಗಳ ಅವಧಿಯ ಶಿಬಿರವನ್ನು ಏರ್ಪಡಿಸಹತ್ತಿದರು. ಅವರು ಆಯೋಜಿಸಿದ ಈ ಶಿಬಿರಗಳು ಗಂಡಾಳಿಕೆಯ ಹುನ್ನಾರಗಳನ್ನು ಅರಿತುಕೊಳ್ಳಲು ಸಹಾಯಕವಾಗಿತ್ತು. ಮುಂದೆ 2002 ರಲ್ಲಿ ‘ಸಂಗತ್’ ಎಂಬ ಸಂಸ್ಥೆಯ ಮೂಲಕ ತಮ್ಮ ಮಹಿಳಾಪರ ಕಾರ್ಯಕ್ರಮಗಳನ್ನು ಮುಂದುವರಿಸಿದರು. ತಮ್ಮ ವಿಚಾರಧಾರೆಯನ್ನು ಅವರು ಅನೇಕ ಪುಸ್ತಕಗಳಲ್ಲಿ ದಾಖಲಿಸಿದರು. ಅವರು ಬರೆದ ಪುಸ್ತಕಗಳು 30 ಭಾಷೆಗಳಿಗೆ ಅನುವಾದಗೊಂಡಿವೆ. ಬಿಂದಿಯಾ ಥಾಪರ್ ಅವರ ಜೊತೆ ಬರೆದ ‘ಲಾಫಿಂಗ್ ಮ್ಯಾಟರ್ಸ್’ ಹಲವಾರು ಬಾರಿ ಮರುಮುದ್ರಣಗೊಂಡಿದೆ. ‘ಹಸನಾ ತೊ ಸಂಘರ್ಷೋ ಮೆ ಭೀ ಜರೂರಿ ಹೈ’ (ಸಂಘರ್ಷಗಳಲ್ಲೂ ನಗುವುದು ಅವಶ್ಯ). ಇಂದು ಕನ್ಹಯ್ಯ ಕುಮಾರ್ ಬಳಸುವ ಆಜಾದಿ ಹಾಡು ಕಮಲಾ ಪ್ರಚುರಪಡಿಸಿದ್ದು.

ಸಮಸಮಾಜದ ಕನಸು

ಗಂಡಾಳಿಕೆಯ, ಬಂಡವಾಳಶಾಹಿ ವ್ಯವಸ್ಥೆಯ ಪ್ರಬಲ ವಿರೋಧಿಯಾದ ಕಮಲಾ ಹೇಗೆ ಈ ವ್ಯವಸ್ಥೆಗಳು ಹೆಣ್ಣನ್ನು ಕೇವಲ ಒಂದು ದೇಹವಾಗಿ ಮಾರ್ಪಡಿಸುತ್ತವೆ ಎಂಬ ಬಗ್ಗೆ ಎಚ್ಚರಿಸುತ್ತಿದ್ದರು. ಪ್ರಸಾಧನ ಹಾಗೂ ಅಶ್ಲೀಲ ವಿಡಿಯೊ ಉದ್ದಿಮೆಗಳು ಈ ನವಉದಾರವಾದಿ ಬಂಡವಾಳಶಾಹಿ ಯುಗದಲ್ಲಿ ಹೆಣ್ಣನ್ನು ಒಂದು ಸರಕಾಗಿ ಬಳಸಿಕೊಳ್ಳುತ್ತ ಅವಳನ್ನು ಪರೋಕ್ಷವಾಗಿ ಹಿಂಸೆ, ದೌರ್ಜನ್ಯಗಳ ಕೂಪಕ್ಕೆ ತಳ್ಳುತ್ತಿದೆ ಎಂದು ವಿವರಿಸುತ್ತಿದ್ದರು. ಪಿತೃಪಾಧಾನ್ಯಕ್ಕೆ ಪ್ರತಿಯಾಗಿ ಮಾತೃಪ್ರಾಧಾನ್ಯ ಎಂಬ ವಾದವನ್ನು ಅವರು ಅಲ್ಲಗಳೆಯುತ್ತಿದ್ದರು. ಗಂಡು-ಹೆಣ್ಣಿಗೆ ಸಮಾನಗೌರವ, ಅಧಿಕಾರ-ಹಕ್ಕುಗಳಿರುವ ಸಮಸಮಾಜವನ್ನು ಅವರು ಕನಸುತ್ತಿದ್ದರು. ಕೇವಲ ಸಂತಾನೋತ್ಪತ್ತಿಯ ಉದ್ದೇಶಕ್ಕೆ ಪ್ರಕೃತಿ ಇಬ್ಬರಲ್ಲಿ ಬೇಧವನ್ನು ಮಾಡಿದೆ, ಆದರೆ ಸಮಾಜ ಬೇಧಭಾವವನ್ನು ಸೃಷ್ಟಿಸಿದೆ.’ ಬೇಧವೆಂದರೆ ಅಸಮಾನತೆ ಅಲ್ಲ ಅಥವಾ ಮೇಲು-ಕೀಳರಿಮೆಯಲ್ಲ. ಈ ಪ್ರಕೃತಿಯಲ್ಲಿ ಯಾರೂ ಮೇಲೂ ಅಲ್ಲ, ಕೀಳೂ ಅಲ್ಲ. ಬೆಂಕಿ-ನೀರಿನಲ್ಲಿ ಯಾವುದು ಉತ್ತಮವೆಂದು ನಾವು ಹೇಳಬಹುದೆ? ಪಕ್ಷಿ-ಕೀಟ-ಪ್ರಾಣಿಗಳಲ್ಲಿ? ಇರುವೆ, ಬೆಕ್ಕು, ಆನೆಗಳಲ್ಲಿ? ಸಾಗರಗಳು, ಬೆಟ್ಟಗಳು ಅಥವಾ ಹಳ್ಳಿಗಳು? ಹಗಲು-ರಾತ್ರಿ? ಚಳಿಗಾಲ-ಮಳೆಗಾಲ-ಬೇಸಗೆ ? ಅದರಂತೆ ನಮ್ಮ ಸಮಾಜ, ಕುಟುಂಬಗಳಲ್ಲಿ ಗಂಡಾಗಲಿ, ಹೆಣ್ಣಾಗಲಿ ಅವರಿಗೆ ತನ್ನದೇ ಆದ ಸ್ಥಾನವಿದೆ, ಪಾತ್ರವಿದೆ.’ – ‘ಮೆನಿ ನೋಟ್ಸ್ ಒನ್ ಸಿಂಫನಿ’ ಇದು ಅವರ ಸ್ಪಷ್ಟ ವಾದ. ಗಂಡು ಎಂಬ ಕಾರಣಕ್ಕೆ ಗಂಡಸು ತನ್ನ ಕೋಮಲ ಭಾವನೆಗಳನ್ನು ಕಳೆದುಕೊಳ್ಳುವುದು, ಹೆಣ್ಣು ಅನ್ನುವ ಕಾರಣಕ್ಕೆ ಹೆಂಗಸು ತನ್ನಲ್ಲಿರುವ ವೀರೋದಾತ್ತ ಶಕ್ತಿಗಳನ್ನು ಕಳೆದುಕೊಳ್ಳುವುದು ಯಾವ ನ್ಯಾಯ?. ಎಲ್ಲರ ವ್ಯಕ್ತಿತ್ವಗಳೂ ಒಂದೇ ಎಂಬುದು ಅವರ ವಿಚಾರಗಳ ಸಾರ. ವಾಸ್ತವ ಬದುಕಿನ ಗಾಢ ಅನುಭವಗಳ ಹಿನ್ನೆಲೆಯಲ್ಲಿ ಪಕ್ವಗೊಂಡಿತ್ತು ಕಮಲಾ ಭಸಿನ್ ಅವರ ಸ್ತ್ರೀವಾದ.

ಕಮಲಾ ಅವರ ನಿರ್ಭಿಡೆಯ ಮಾತುಗಳಿಗೆ ಕೆಲ ಉದಾಹರಣೆಗಳು:

‘ನಮ್ಮ ಸಂವಿಧಾನ ಬಹಳಷ್ಟು ಹಿಂದೆಯೇ ಹೆಣ್ಣು-ಗಂಡುಗಳಿಬ್ಬರೂ ಸಮಾನರು ಎಂದು ಹೇಳಿದ್ದರೂ ನಮ್ಮ ಸಮಾಜಕ್ಕೆ ಅದಿನ್ನೂ ಅರ್ಥವಾಗಿಲ್ಲ.’
‘ಪ್ರಕೃತಿ ನಮ್ಮನ್ನು ಕೇವಲ ಮನುಷ್ಯರನ್ನಾಗಿ ಮಾಡುತ್ತದೆ. ಹಿಂದು, ಮುಸ್ಲಿಂ, ದಲಿತ, ಬ್ರಾಹ್ಮಣ ಇದನ್ನು ಸಮಾಜ ಮಾಡುತ್ತದೆ.’
‘ಬಂಡವಾಳಶಾಹಿ ವ್ಯವಸ್ಥೆ ಮತ್ತು ಗಂಡಾಳ್ವಿಕೆ ಒಂದೇ ಮುಖದ ಎರಡು ನಾಣ್ಯಗಳು. ಬಂಡವಾಳಶಾಹಿ ವ್ಯವಸ್ಥೆಗೆ ಸೋವಿಯಾಗಿ ಸಿಗುವ ಶ್ರಮ ಅಂದರೆ ಕೂಲಿಯಾಳು ಬೇಕು ಮತ್ತು ನಮ್ಮ ಮಹಿಳೆಯರು ಬಹಳ ಕಡಿಮೆ ಕೂಲಿಗೆ ಸಿಗುವ ಶ್ರಮಿಕರಾಗಿದ್ದಾರೆ.’
‘ಇವತ್ತಿನ ಹುಡುಗಿಯರು ಪತಿದೇವರನ್ನು ಹುಡುಕುವುದಿಲ್ಲ ಬದಲಾಗಿ ಅವರು ಸಂಗಾತಿಯನ್ನು ಬಯಸುತ್ತಾರೆ.’
‘ಬರೀ ಮಹಿಳಾ ಸಂಸದರು ಬಂದರೆ ಎಲ್ಲವೂ ಸರಿಹೋಗುವುದಿಲ್ಲ. ಸ್ತ್ರೀವಾದಿ ಸಂಸದೆಯರು ಬರಬೇಕು. ಅವರು ಹೆಣ್ಣು-ಗಂಡಿನ ಸಮಾನತೆಯ ಬಗ್ಗೆ ಮಾತನಾಡುತ್ತಾರೆ. ಜಾತಿಯ ನೆಪವೊಡ್ಡಿ ಅವರು ಹಿಂದೆ ಸರಿಯುವುದಿಲ್ಲ. ಸಂಸದೆಯರಷ್ಟೇ ಅಲ್ಲ, ಸ್ತ್ರೀವಾದಿ ಸಂಸದರೂ ಬರಬೇಕೆನ್ನುವುದು ನನ್ನ ಆಶಯ. ಏಕೆಂದರೆ, ಸ್ತ್ರೀವಾದಿ ವಿಚಾರಧಾರೆ ಎಂಬುದೊಂದು ‘ದೈಹಿಕ’ ವಿಚಾರಧಾರೆಯಲ್ಲ. ಸ್ತ್ರೀವಾದವೆಂದರೆ ಸಮಾನತೆ ಮತ್ತು ಕೇವಲ ಸಮಾನತೆ.’

ಹೆಣ್ಣಿನ ಎದೆಯಾಳದ ದನಿಗೆ ಮಾತುಕೊಡುವ, ಹೆಣ್ಣಿನ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಮಲಾ ಅವರ ಕವಿತೆಗಳು ಯಾವತ್ತೂ ಹೋರಾಟದ ಭಾಗವಾಗಿರುವಂತಹವು. ‘ನಾನು ಓದಬೇಕು, ಯಾಕೆಂದರೆ ನಾನು ಹೆಣ್ಣು’ ಇಂತಹ ಒಂದು ಸರಳ ಕವಿತೆ. ಅತ್ಯಂತ ಸರಳ ಭಾಷೆ ಹಾಗೂ ಭಾವಗಳ ಹಾಡುಗಳಿಂದ ಅವರ ಹೋರಾಟದ ಹೆಜ್ಜೆಗಳು ಸ್ತ್ರೀವಾದಿ ಚಳುವಳಿಯಲ್ಲಿ ಬಹಳ ಕಾಲದವರೆಗೆ ಗಟ್ಟಿಯಾಗಿ ನಿಲುವಂಥವು. ಕಮಲಾ ಅವರ ಮಾತುಕತೆಗಳನ್ನು ಕೇಳಿದಾಗ ವಿಷಯವನ್ನು ಮನದಟ್ಟಾಗುವಂತೆ ಪ್ರತಿಪಾದಿಸುವ ಅವರ ಶೈಲಿ ಸಮ್ಮೋಹನಗೊಳಿಸುವಂಥದು ಅನ್ನಿಸುತ್ತದೆ. ಆಮಿರ್ ಖಾನ್ ನಡೆಸಿದ `ಸತ್ಯಮೇವ ಜಯತೆ’ ಟಿವಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾಗ ಅವರ ವಾದಸರಣಿ ತುಂಬ ಜನಮೆಚ್ಚುಗೆ ಗಳಿಸಿತು. ಯೂಟ್ಯೂಬ್ ನಲ್ಲಿ ಅದು 11 ಮಿಲಿಯನ್ ಬಾರಿ ವೀಕ್ಷಿಸಲ್ಪಟ್ಟಿದ್ದು ಅವರಿಗೆ ಬಹಳ ಖುಷಿ ಕೊಟ್ಟಿತಂತೆ. ಆದರೆ ಅದೇ ಹೊತ್ತಿನಲ್ಲಿ ಸಿನಿಮಾ ತಾರೆಯರಾದ ಅತ್ತೆ-ಸೊಸೆಯರ ವಾಗ್ಯುದ್ಧದ ವಿಡಿಯೋ 12 ಮಿಲಿಯನ್ ಬಾರಿ ವೀಕ್ಷಣೆಗೊಂಡಿದ್ದು ನೋಡಿ ನಮ್ಮ ಸಮಾಜ ಎಂಥದನ್ನು ಕುರಿತು ಕುತೂಹಲವನ್ನಿರಿಸಿಕೊಂಡಿದೆ ಎಂದು ಆಶ್ಚರ್ಯ, ವಿಷಾದಗಳೆರಡನ್ನೂ ಕಮಲಾ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಇಂಡಿಯನ್ ಅಸೋಸಿಯೇಷನ್ ಫಾರ್ ವಿಮೆನ್ಸ್ ಸ್ಟಡೀಸ್’ 16 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ (ಜನವರಿ 2020) ಕಮಲಾ ಭಸಿನ್ ಅವರೊಂದಿಗೆ `ಹಿತೈಷಿಣಿ’ ತಂಡ.

ವೈಯಕ್ತಿಕ ಜೀವನದ ನೋವುಗಳು ಸಾಕಷ್ಟಿದ್ದರೂ ಕಮಲಾ ಅವರ ಹೋರಾಟದ ಕಾವು ಆರಲಿಲ್ಲ. ತಾವು ಬಾಲ್ಯದಲ್ಲಿ ತಂದೆಯ ಸ್ನೇಹಿತರು, ಮನೆಯ ಆಳು, ಅಣ್ಣನ ಸ್ನೇಹಿತರು, ಶಿಕ್ಷಕರಿಂದ ಲೈಂಗಿಕ ಕಿರುಕುಳ ಅನುಭವಿಸಿದ್ದರ ಬಗ್ಗೆ ತಮ್ಮ 40ನೆಯ ವಯಸ್ಸಿನಲ್ಲಿ ಹೇಳಿಕೊಳ್ಳುತ್ತಾರೆ. ಪ್ರತಿಭಾವಂತ ಮಗಳು ಮೀತೊ ಆಕ್ಸ್‍ಫರ್ಡ್ ಪದವೀಧರೆ, ತಾಯಿಯಂತೆಯೇ ಹೋರಾಟ, ಚಳುವಳಿಗಳಲ್ಲಿ ಆಸಕ್ತಿಯಿದ್ದವಳು ಖಿನ್ನತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡುದು ಕಮಲಾ ಅವರಿಗೆ ಮಾಯಲಾರದ ಗಾಯವಾದರೂ ಮಗಳ ಆಸಕ್ತಿಯ ಮಾನವಹಕ್ಕುಗಳಿಗಾಗಿ ಹೋರಾಟವನ್ನು ತಾವೇ ಮುಂದುವರಿಸಿಕೊಂಡು ಹೋಗಬೇಕೆಂದು ಹೇಳುತ್ತಾರೆ ಈ ತಾಯಿ. ಇನ್ನು ಮಗ ಹಸುಗೂಸಾಗಿರುವಾಗಲೇ ವ್ಯಾಕ್ಸಿನ್ ಅಡ್ಡಪರಿಣಾಮದಿಂದ ಶಾಶ್ವತವಾಗಿ ಪರಾವಲಂಬಿಯಾದವನು. ಈ ಎಲ್ಲ ವೈಯಕ್ತಿಕ ನೋವುಗಳ ನಡುವೆಯೂ ಕಮಲಾ ಸಮಾಜದಲ್ಲಿ ಹೆಣ್ಣಿನ ಅಸ್ಮಿತೆಗಾಗಿ ಮನಃಪೂರ್ವಕವಾಗಿ ಕೆಲಸ ಮಾಡಿದರು.

ಕಮಲಾ ಅವರು ಹೇಳುವಂತೆ ಎಲ್ಲರೊಳಗೂ ಒಂದು ಬೆಂಕಿ ಇರುತ್ತದೆ. ಆ ಬೆಂಕಿಯ ಕಾವನ್ನು ಆರಗೊಡದೇ ನಾವು ಬದುಕುತ್ತಿರಬೇಕು. ಅಂತೆಯೇ ಕ್ಯಾನ್ಸರ್‍ನಿಂದಾಗಿ ಮರಣ ಶಯ್ಯೆಯಲ್ಲಿದ್ದಾಗಲೂ ಎಲ್ಲ ವಯೋಮಾನದ ತಮ್ಮ ಗೆಳತಿಯರೊಡನೆ ಹರಟುತ್ತ ಕಳೆದರು. ಸಾಯುವ ಕೆಲದಿನಗಳ ಹಿಂದೆ ತನ್ನ ಪಾದದುಗುರಿಗೆ ಬಣ್ಣ ಬಳೆದುಕೊಂಡರಂತೆ! ನಾನಿನ್ನೂ ಬದುಕಬೇಕು ಎಂದು ತಮ್ಮ 75ರ ಹರೆಯದಲ್ಲೂ ಹೇಳಬೇಕಾದರೆ ಇದು ಅವರ ಜೀವನಪ್ರೀತಿಯೇ! ಅವರ ಅಂತ್ಯಸಂಸ್ಕಾರದ ಹೊತ್ತಿನಲ್ಲಿ ಯುವತಿಯೊಬ್ಬರು ಕಮಲಾ ಇನ್ನೂ ಜೀವಂತವಾಗಿದ್ದಾರೊ ಎಂಬಂತೆ ಅವರ ಜೊತೆ ಸಂಭಾಷಿಸುತ್ತಿದ್ದಳಂತೆ. ಹೋರಾಟವನ್ನು ಹಾಡು, ವಿನೋದ, ನಗು ಎಲ್ಲದರ ಮೇಳವೇನೊ ಎನ್ನುವಂತೆ ಬದುಕಿದ್ದ ಕಮಲಾ ಭಸಿನ್ ಎಲ್ಲರಿಗೂ ಎಂದೆಂದೂ ಕಾಡಬೇಕಾದ ಹೆಣ್ಣಿನ ಅಚಲ ಧ್ವನಿ.

  • ಶಶಿಕಲಾ ಹುಡೇದ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *