Uncategorizedಜಗದಗಲ

ನುಡಿನಮನ / ಸ್ತ್ರೀವಾದಕ್ಕೆ ಹೊಸ ಆಯಾಮ ಕೊಟ್ಟ ಬೆಲ್ ಹುಕ್ಸ್

ಜಗತ್ತಿನ ಸ್ತ್ರೀವಾದದ ಕಣ್ಣೋಟವನ್ನೆ ಬದಲಿಸಿದ ಮಹತ್ವದ ಸ್ತ್ರೀವಾದಿ ಚಿಂತಕಿ ಬೆಲ್ ಹುಕ್ಸ್. ಅವರ ನಿಜವಾದ ಹೆಸರು ಗ್ಲೋರಿಯಾ ಜೀನ್ ವಾಟಿನ್. ಆದರೆ ದಿಟ್ಟ ಹೆಂಗಸಾಗಿದ್ದ ತನ್ನ ಅಜ್ಜಿಯ ಹೆಸರನ್ನೇ ತನ್ನ ಹೆಸರನ್ನಾಗಿ ಆಕೆ ಬದಲಿಸಿಕೊಂಡರು. ತಮ್ಮ ಓದು ಮತ್ತು ಬರಹಗಳ ಮೂಲಕ ಜನಾಂಗ, ವರ್ಗ ಮತ್ತು ಲಿಂಗಗಳ ನಡುವಿನ ಸಂಬಂಧಗಳನ್ನು ಅನ್ವೇಷಿಸಲು ಪ್ರಯತ್ನ ಪಟ್ಟರು.. ಕಪ್ಪು ಜನಾಂಗದ ಮಹಿಳೆಯರನ್ನು ಒಳಗೊಳ್ಳದ ಸ್ತ್ರೀವಾದವನ್ನು ಮರುತಿದ್ದುವುದು, ಸರಿ ಹಾದಿಗೆ ತರುವುದು ಅವರ ಮುಖ್ಯ ಗುರಿಯಾಗಿತ್ತು. ಆ ನಿಟ್ಟಿನಲ್ಲಿ ತಕ್ಕ ತಾತ್ವಿಕತೆಯನ್ನು ಕಟ್ಟಿಕೊಟ್ಟಿರುವುದು ಅವರ ಹೆಗ್ಗಳಿಕೆ.

ಡಿ. 15 ರಂದು ತಮ್ಮ 69 ನೇ ವಯಸ್ಸಿನಲ್ಲಿ ತೀರಿಕೊಂಡ ಸ್ತ್ರೀವಾದಿ ಚಿಂತಕಿ, ಲೇಖಕಿ ಬೆಲ್ ಹುಕ್ಸ್ ‘ಟಾಕಿಂಗ್ ಬ್ಯಾಕ್ : ಥಿಂಕಿಂಗ್ ಫೆಮಿನಿಸ್ಟ್ , ಥಿಂಕಿಂಗ್ ಬ್ಲ್ಯಾಕ್ ‘, ‘ಕಮ್ಯೂನಿಯನ್ : ದ ಫೀಮೇಲ್ ಸರ್ಚ್ ಫಾರ್ ಲವ್’, ‘ರೈಟಿಂಗ್ ಬಿಯಾಂಡ್, ರೇಸ್, ಲಿವಂಗ್ ಥಿಯರಿ ಅಂಡ್ ಪ್ರಾಕ್ಟಿಸ್’, ‘ಫೆಮಿನಸಂ ಫಾರ್ ಎವೆರಿಬಡಿ:ಪ್ಯಾಶನೇಟ್ ಪಾಲಿಟಿಕ್ಸ್’ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಬೆಲ್ ಹುಕ್ ಳ ಪ್ರಸಿದ್ಧ ಕೃತಿ “Feminist Theory From Margin to Center” ಕೃತಿಯನ್ನು ಹೆಚ್.ಎಸ್. ಶ್ರೀಮತಿ ಅವರು “ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ” ಎಂದು ಅನುವಾದಿಸಿದ್ದಾರೆ. ಕೃತಿಯ `ಮೊದಲ ಮಾತು’ ನಲ್ಲಿ ಬೆಲ್ ಹುಕ್ಸ್ ಹೀಗೆ ಹೇಳುತ್ತಾರೆ :


“ಅಂಚಿನಲ್ಲಿ ಉಳಿಯುವುದು ಎಂದರೆ ಸಮಗ್ರವೊಂದರ ಭಾಗವೇನೋ ಹೌದು, ಆದರೆ ಮುಖ್ಯ ಚೌಕಟ್ಟಿಗೆ ತಾಗಿದ್ದರೂ ಅದರ ಹೊರಗೆ ನಿಂತಿರುವುದು ಎಂಬ ಎಂಬ ಪುಟ್ಟ ಪಟ್ಟಣದಲ್ಲಿ ವಾಸಿಸುವ ಕಪ್ಪು ಅಮೆರಿಕನ್ನರಿಗೆ ಅಲ್ಲಿ ಹಾಯ್ದು ಹೋಗುವ ರೈಲು ಹಳಿಯು ನಾವು ಅಂಚಿನವರು ಎಂಬುದನ್ನು ದಿನನಿತ್ಯವೂ ನೆನಪಿಸುತ್ತದೆ. ಹಳಿಯ ಆಚೆಗಿನ ಅಚ್ಚುಕಟ್ಟಾದ ರಸ್ತೆಗಳಿಗೆ, ಅಂಗಡಿಗಳಿಗೆ ನಾವು ಹೋಗುವಂತಿಲ್ಲ. ಅಲ್ಲಿನ ರೆಸ್ಟೋರೆಂಟುಗಳಲ್ಲಿ ತಿನ್ನುವಂತಿಲ್ಲ. ಅಷ್ಟೇಕೆ, ಒಂದೊಮ್ಮೆ ಅಲ್ಲಿ ಹೋದೆವೆಂದರೂ ಅಲ್ಲಿನವರ ಮುಖವನ್ನು ನೇರವಾಗಿ ದಿಟ್ಟಿಸಿ ನೋಡುವಂತಿಲ್ಲ. ಹೀಗಿದ್ದರೂ ಇಲ್ಲಿ ನಾವು ಬರುವುದಿದೆ. ಮನೆ ಕೆಲಸದವರಾಗಿ, ಕಾವಲುಗಾರರಾಗಿ, ವೇಶ್ಯೆಯರಾಗಿ … ಹೀಗೆ ಹಲವು ಸೇವೆಗಳಿಗಾಗಿ ಅಲ್ಲಿ ನಾವು ಬೇಕೇ ಬೇಕು. ಅಲ್ಲಿ ಖಂಡಿತವಾಗಿಯೂ ಪ್ರವೇಶಿಸಬಹುದು. ಆದರೆ ಅಲ್ಲಿ ವಾಸಿಸುವಂತಿಲ್ಲ ಅಷ್ಟೆ. ಏನಿದ್ದರೂ ನಮಗೆ ನಿಗದಿಯಾಗಿರುವ ಅಂಚಿಗೆ ವಾಪಸಾಗಬೇಕು. ಹಳಿ ದಾಟಿತೆಂದರೆ ಊರಿನ ಕೊನೆಗೆ ಅಡ್ಡಾದಿಡ್ಡಿ ರಸ್ತೆಗಳಲ್ಲಿ ಯಾರೋ ಬಿಟ್ಟುಹೋದದ್ದೇನೋ ಎನಿಸುವಂತಿರುವ ನಮ್ಮ ಹರುಕು ಮುರುಕು ಮನೆಗಳಿಗೆ ವಾಪಸಾಗಿಬಿಡಬೇಕು.

ನಾವು ಹೀಗೆ ವಾಪಸಾಗಲೇಬೇಕು ಎಂಬುದನ್ನು ಖಚಿತಪಡಿಸಲು ಕಾನೂನುಗಳೇ ಇದ್ದವು. ನಾನು ವಾಪಸಾಗುವುದಿಲ್ಲ ಎಂದು ಅಂದುಕೊಂಡರೆ ಶಿಕ್ಷೆಯ ಅಪಾಯ. ಹಾಗಾಗಿಯೋ ಏನೋ, ಅಂಚಿನಲ್ಲೇ ಬದುಕುವ ನಮ್ಮಲ್ಲಿ ವಾಸ್ತವವನ್ನು ಗ್ರಹಿಸುವ ಒಂದು ವಿಶಿಷ್ಟ ಶಕ್ತಿ ಕೂಡಿಕೊಂಡಂತಿದೆ. ನಮಗೆ ಹೊರಗನ್ನು ಅದರ ಒಳಗಿನಿಂದ ಹಾಗೂ ನಮ್ಮ ಒಳಗನ್ನು ಹೊರಗಿನಿಂದ ಕಾಣುವ ಒಂದು ಶಕ್ತಿ ದಕ್ಕಿರುತ್ತದೆ. ನಮ್ಮ ನೋಟವು ಆ ಕೇಂದ್ರದ ಮೇಲೆ, ಅದೇ ವೇಳೆಗೆ ನಮ್ಮ ಅಂಚಿನ ಒಟ್ಟೋಟ್ಟಿಗೆ ನಿಗಾ ವಹಿಸಿ ಬಿಡುತ್ತಿತ್ತು. ನಮಗೆ ಎರಡೂ ಸರಿಯಾಗಿಯೇ ಅರ್ಥವಾಗುತ್ತಿತ್ತು. ಆ ಕೇಂದ್ರದ ಮೇಲೆ, ಅದೇ ವೇಳೆಗೆ ನಮ್ಮ ಈ ಅಂಚಿನ ಮೇಲೆ ಈ ಬಗೆಯ ನೋಟವು ನಮಗೆ ಸಮಗ್ರ ವಿಶ್ವವು ಅಂಚು ಮತ್ತು ಕೇಂದ್ರ ಎಂಬ ಎರಡನ್ನೂ ಒಟ್ಟಿಗೆ ಒಳಗೊಂಡ ಒಂದು ಅಸ್ತಿತ್ವ ಎಂಬುದನ್ನು ಸದಾ ನೆನಪಿಸುತ್ತಲೇ ಇರುತ್ತಿತ್ತು, ಅಂಚು ಮತ್ತು ಕೇಂದ್ರ ಎಂಬವು ನಿರಂತರವಾಗಿ ಪ್ರತ್ಯೇಕವಾಗಿಯೇ ಇರುತ್ತವೆ ಎಂಬ ಸಾರ್ವಜನಿಕ ಜಾಗೃತಿ ನಮ್ಮ ಅಳಿವು ಉಳಿವಿನ ಪ್ರಶ್ನೆಯೇ ಆಗಿತ್ತು. ಜೊತೆಗೇ ನೋಟವು ಖಾಸಗಿಯಾಗಿ ನಾವು ಆ ಸಮಗ್ರಕ್ಕೆ ತೀರಾ ಅಗತ್ಯವೇ ಆದ ಬಹು ಮುಖ್ಯ ಭಾಗವೂ ಹೌದು ಎಂಬ ತಿಳಿವೂ ಅಗತ್ಯವಾಗಿತ್ತು.

ನಮ್ಮ ಬದುಕಿನ ದೈನಂದಿನ ಲಯಗಳಿಂದಾಗಿಯೇ ಲೋಕದ ಬಗೆಗಿನ ಈ ಬಗೆಯ ತಿಳಿವು ನಮ್ಮ ಪ್ರಜ್ಞಾವಲಯದ ಮೇಲೆ ಅಚ್ಚೊತ್ತಿ ಬಿಟ್ಟಿತ್ತು. ಇದು ನಮಗೆ ವೈರುಧ್ಯಗಳನ್ನು ಸೂಕ್ಷ್ಮಗಳಲ್ಲಿ ಗ್ರಹಿಸುವ ಒಂದು ಲೋಕದೃಷ್ಟಿಯನ್ನು ಒದಗಿಸುವ ಕಾರಣವಾಗಿತ್ತು. ನಮಗೆ ದಕ್ಕಿರುವ ಈ ಬಗೆಯ ನೋಟವು ನಮ್ಮ ಬಹುತೇಕ ದಮನಕಾರರಿಗೆ ದೊರೆಯುವುದು ಅಸಾಧ್ಯವೇ ಆಗಿತ್ತು. ಇದೇ ನಮ್ಮನ್ನು ಉಳಿಸುವ ಸಂಗತಿಯೂ ಆಗಿತ್ತು. ನಮ್ಮ ಬಡತನ ಮತ್ತು ಹತಾಶೆಗಳನ್ನು ಕಳೆದುಕೊಳ್ಳಲು ನಾವು ನಡೆಸುತ್ತಿದ್ದ ಹೋರಾಟಗಳಿಗೆ ಇದೇ ದೊಡ್ಡ ನೆರವಾಗಿ ನಿಂತಿತ್ತು. ನಮ್ಮ ಅತ್ಮವಿಶ್ವಾಸವನ್ನು , ನಮ್ಮ ಒಗ್ಗಟ್ಟನ್ನು ಹೆಚ್ಚಿಸಿತ್ತು. ಈ ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸಿ ನೋಡಬೇಕೆಂಬ ನನ್ನ ಪ್ರಯತ್ನವೇ ” “Feminist Theory From Margin to Center” ಎಂಬ ಈ ನನ್ನ ಬರಹದ ಪರಿಪ್ರೇಕ್ಷ್ಯವನ್ನು ರೂಪಿಸಿದೆ. ಬಹುತೇಕದ ನಮ್ಮ ಸ್ತ್ರೀವಾದೀ ಸಿದ್ಧಾಂತಗಳನ್ನು ರೂಪಿಸಿದವರು ಕೇಂದ್ರದಲ್ಲಿ ನೆಲೆಸಿದವರಾದ ಅನುಕೂಲಸ್ಥ ಮಹಿಳೆಯರೇ. ಇವರಿಗೆ ಅಂಚಿನ ಸಮುದಾಯಗಳ ಮಹಿಳೆಯರು ಮತ್ತು ಪುರುಷರ ವಾಸ್ತವಗಳನ್ನು ಕುರಿತ ಯಾವುದೇ ತಿಳಿವಾಗಲೀ, ಎಚ್ಚರವಾಗಲೀ ತೀರಾ ಕಷ್ಟಸಾಧ್ಯವೇ ಸರಿ. ಈ ಕಾರಣದಿಂದಾಗಿಯೇ ಸ್ತ್ರೀವಾದಿ ಸಿದ್ಧಾಂತಗಳು ಸಮಗ್ರವಾಗಿಲ್ಲ. ಎಲ್ಲ ವೈವಿಧ್ಯಮಯ ಮಾನವ ಅನುಭವಗಳನ್ನೂ ಒಳಗೊಂಡ ಬಗೆಯ ವಿಶಾಲ ವ್ಯಾಪ್ತಿಯ ವಿಶ್ಲೇಷಣೆಗಳ ಕೊರತೆ ಇಲ್ಲಿ ಎದ್ದು ಕಾಣುತ್ತದೆ. ಸ್ತ್ರೀವಾದಿ ಚಿಂತಕಿಯರಿಗೆ ಮಹಿಳಾ ಸಮುದಾಯವು ಒಡೆಯದೆ ಒಗ್ಗೂಡಿ ನಿಲ್ಲಬೇಕು ಎಂಬ ನಿಜವಾದ ಉದ್ದೇಶ ಇರುವುದೇ ಆದರೆ ವಿವಿಧ ಸಮುದಾಯಗಳ ಬಹುಬಗೆಯ ಅನುಭವಗಳನ್ನು ಒಳಗೊಂಡ ಪರಿಕಲ್ಪನೆ ಮತ್ತು ವಿಶ್ಲೇಷಣೆಗಳ ಅಗತ್ಯವಿದೆ ಎಂಬುದನ್ನು ತಿಳಿಯಬೇಕು.

ಇದು ಅವರು ಅರಿಯದ ಸಂಗತಿಯೇನಲ್ಲ. ಆದರೆ ಅದೊಂದು ಸಂಕೀರ್ಣ ಪ್ರಕ್ರಿಯೆ. ರೂಪುಗೊಳ್ಳಲು ದೀರ್ಘಕಾಲ ಹಿಡಿಯುತ್ತದೆ. ಯಾವ ವ್ಯಕ್ತಿಗೆ ಅಂಚು ಮತ್ತು ಕೇಂದ್ರಗಳೆರಡನ್ನೂ ಕುರಿತ ತಿಳಿವು ಇರುತ್ತದೆಯೋ ಅಂಥವರಿಗೆ ಮಾತ್ರವೇ ಇಂಥದೊಂದು ದಾರ್ಶನಿಕ ನೋಟ ಸಾಧ್ಯವಾಗುತ್ತದೆ. ನಾನು “Ain’t I A Woman, black women and feminism” ಎಂಬ ಬರಹವನ್ನು ಆರಂಭಿಸಿದಾಗ, ಕಪ್ಪು ಮಹಿಳೆಯರ ಬಗೆಗೆ ನೇರ ಅವರಿಂದ ಅಥವಾ ಇನ್ನಾವುದೇ ಮೂಲದಿಂದ ಪಡೆಯಬಹುದಾದ ಮಾಹಿತಿಗಳ ಕೊರತೆ ಅಗಾಧವಾಗಿತ್ತು. ಮುಖ್ಯವಾಗಿ ಅಂಚು ಮತ್ತು ಕೇಂದ್ರಗಳೆರಡನ್ನೂ ಒಟ್ಟಿಗೆ ಗಮನಿಸಿ ಪ್ರಸ್ತಾಪಿಸುವ ಯಾವುದೇ ಸ್ತ್ರೀವಾದಿ ಸಿದ್ಧಾಂತಗಳೂ ನನಗೆ ಕಾಣಲಿಲ್ಲ. ಇದು ನನ್ನನ್ನು ಪ್ರಸ್ತುತ ಈ ಕೃತಿಯನ್ನು ಬರೆಯಲು ಪ್ರೇರೇಪಿಸಿತು … ಇಲ್ಲಿ ಸಾಧ್ಯವಾದ ಮಟ್ಟಿಗೂ ಈಗಾಗಲೇ ಪ್ರಚಲಿತವಾದ ಮತ್ತು ಬಳಕೆಯಲ್ಲಿ ಇರುವ ಮಿತಿಗಳನ್ನು ಗುರುತಿಸಲು ಹಾಗೂ ಹೊಸ ದಿಕ್ಕುಗಳನ್ನು ಶೋಧಿಸಲು ಪ್ರಯತ್ನಿಸುತ್ತೇನೆ… ಪರಿಕಲ್ಪನೆಗಳ ಪುನರಾವರ್ತನೆಯನ್ನು ತಪ್ಪಿಸಲು ಪ್ರಯತ್ನಿಸಿದ್ದೇನೆ. ಬದಲಿಗೆ ಹೊಸ ಪ್ರಕರಣಗಳನ್ನು ಶೋಧಿಸುವತ್ತ, ಹಳೆಯ ಪ್ರಕರಣಗಳನ್ನು ಹೊಸ ಪರಿಪ್ರೇಕ್ಷ್ಯದಲ್ಲಿ ಗ್ರಹಿಸುವತ್ತ ಗಮನ ಹರಿಸಿದ್ದೇನೆ . ಪರಿಣಾಮವಾಗಿ ಕೆಲವು ಅಧ್ಯಾಯಗಳು ದೀರ್ಘವೆನಿಸಿದರೆ, ಮತ್ತೆ ಕೆಲವು ಹ್ರಸ್ವವಾಗಿವೆ. ಸಮಗ್ರ ವಿಶ್ಲೇಷಣೆಯಾಗಲೇಬೇಕು ಎಂಬ ಹಟ ಎಲ್ಲಿಯೂ ಇಲ್ಲ. ಆದರೆ ಸ್ತ್ರೀವಾದವು ಸಮುದಾಯ ಆಧರಿತ ರಾಜಕೀಯ ಚಳುವಳಿಯಾಗಬೇಕು ಎಂದು ಸದಾ ಕಾಲವೂ ನಾನು ನಂಬುತ್ತೇನೆ. ಏಕೆಂದರೆ ಇಂಥ ಚಳುವಳಿಗಳು ಮಾತ್ರವೇ ಸಮಾಜದ ಮೇಲೆ ಕ್ರಾಂತಿಕಾರಿ, ಪರಿವರ್ತನಶೀಲ ಪರಿಣಾಮವನ್ನು ಬೀರಲು ಸಾಧ್ಯ.” ( ಬೆಲ್ ಹುಕ್ಸ್ – ಅನು: ಹೆಚ್.ಎಸ್. ಶ್ರೀಮತಿ ) (Text Courtesy: Arun Joladakudlagi)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *