Uncategorized

ನುಡಿನಮನ/ ‘ಸೇವಾ’ ದ ರೂವಾರಿ ಇಳಾ ಭಟ್ ಇನ್ನಿಲ್ಲ – ಎನ್. ಗಾಯತ್ರಿ


ನಮ್ಮ ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುವ, ಅನೌಪಚಾರಿಕ ದುಡಿಮೆಯ ಅದೃಶ್ಯ ಕೈಗಳ ಶ್ರಮವನ್ನು ಸಂಘಟಿಸಿ, ಸಂಭ್ರಮಿಸಿ ಅದನ್ನು ಸಾರ್ವಜನಿಕ ಜೀವನದಲ್ಲಿ ಅನಾವರಣಗೊಳಿಸಿದವರು ಗುಜರಾತಿನ ಇಳಾ ಭಟ್. ಆರ್ಥಿಕ ಸುಧಾರಣೆಯ ಕೇಂದ್ರಬಿಂದುವಾಗಿ ಮಹಿಳೆಯರನ್ನು ಕಾಣುತ್ತಿದ್ದ ಅವರಿಗೆ ಮಹಿಳೆಯರ ಶಕ್ತಿ, ಸಾಮಥ್ರ್ಯದ ಬಗ್ಗೆ ಅಪಾರ ವಿಶ್ವಾಸವಿತ್ತು. ಈ ಸಂಘಟಿತ ಮಹಿಳಾ ಶ್ರಮಶಕ್ತಿ ‘ಸೇವಾ’ ದ ರೂವಾರಿ ಇಳಾ ಭಟ್ ಇನ್ನಿಲ್ಲ. ಅವರಿಗೆ ಹಿತೈಷಿಣಿಯ ನುಡಿನಮನ ಇಲ್ಲಿದೆ.


ಭಾರತದ ಸಹಕಾರ ಚಳುವಳಿಯ ಭಾಗವಾದ ಗುಜರಾತಿನ ‘ಸೇವಾ’ ಮತ್ತು ‘ಸೇವಾ ಸಹಕಾರಿ ಬ್ಯಾಂಕ್’ನ ಹುಟ್ಟಿಗೆ ಕಾರಣರಾದ ಇಳಾ ಭಟ್ ಭಾರತದ ಸಂಸತ್ ಸದಸ್ಯೆಯಾಗಿದ್ದರು. ನಂತರ ರಾಷ್ಟ್ರೀಯ ಯೋಜನಾ ಆಯೋಗದ ಸದಸ್ಯೆಯಾಗಿ ಕೆಲಸ ಮಾಡಿದ್ದಾರೆ. ವಿಶ್ವ ಮಹಿಳಾ ಬ್ಯಾಂಕಿಂಗ್‍ನ ಕಲ್ಪನೆಯನ್ನು ಹುಟ್ಟು ಹಾಕಿ ಅದರ ಮೊದಲ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದಾರೆ. ಮನೆಯಿಂದ ಕೆಲಸ ಮಾಡುವ ಕಾರ್ಮಿಕರ ಅಂತರರಾಷ್ಟ್ರೀಯ ಒಕ್ಕೂಟ (ಹೋಮ್ ನೆಟ್)ನ ಅಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದಾರೆ. ಒಂದು ದಶಕಗಳ ಕಾಲ ರಾಕ್ ಫೆಲರ್ ಫೌಂಡೇಶನ್‍ನ ಟ್ರಸ್ಟಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಳಿ ವಯಸ್ಸಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ರಾಷ್ಟ್ರೀಯ ಮಂಡಳಿಯ ಸದಸ್ಯರಾಗಿ ಕೂಡ ಕೆಲಸ ಮಾಡಿದ್ದಾರೆ. ಅವರನ್ನು ಅರಸಿ ಬಂದ ಸನ್ಮಾನಗಳು ಹಲವಾರು. ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ, ರೈಟ್ ಲೈವ್ಲಿಹುಡ್ ಪ್ರಶಸ್ತಿ ಮತ್ತು ಹಾರ್ವರ್ಡ್ ಮತ್ತು ಯೇಲ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಅವರನ್ನು ಅಲಂಕರಿಸಿವೆ. ಇಂತಹ ಇಳಾ ಭಟ್ ಹುಟ್ಟು ಹಾಕಿದ ‘ಸೇವಾ’ ಮತ್ತು ‘ಸೇವಾ ಸಹಕಾರಿ ಬ್ಯಾಂಕ್’ನ ಕಥೆಯೇ ಒಂದು ರೋಮಾಂಚಕಾರಿ ಅನುಭವ.

ಅಹಮದಾಬಾದ್‍ನಲ್ಲಿ 1933ರ ಸೆಪ್ಟೆಂಬರ್ 7ರಂದು ಜನಿಸಿದ ಇಳಾ ಭಟ್ ಅವರ ತಂದೆ ಸುಮಂತ್ ಭಟ್ ಮತ್ತು ತಾಯಿ ವನಲೀಲಾ ವ್ಯಾಸ್. ಮಹಾತ್ಮ ಗಾಂಧಿಯವರ ಸುಧಾರಣೆಯ ಆದರ್ಶದ ಮೌಲ್ಯಗಳಿದ್ದ ಕುಟುಂಬದಲ್ಲಿ ಬೆಳೆದು ಬಂದ ಇಳಾ ಚಿನ್ನದ ಪದಕದೊಂದಿಗೆ ಕಾನೂನು ಪದವಿ ಪಡೆದ ನಂತರ, ಭಾರತದ ಆರಂಭದ ಕಾರ್ಮಿಕ ಸಂಘಟನೆಗಳಲ್ಲೊಂದಾದ ಟೆಕ್ಸ್‍ಟೈಲ್ ಲೇಬರ್ ಅಸೋಸಿಯೇಷನ್‍ನಲ್ಲಿ ಕಾನೂನು ಸಲಹೆಗಾರರಾಗಿ ಸೇರಿಕೊಂಡರು. ಹೀಗೆ ಜ್ಯೂನಿಯರ್ ಲಾಯರ್ ಆಗಿ ವೃತ್ತಿಯನ್ನು ಆರಂಭಿಸಿದ್ದು ಅವರ ಬದುಕಿಗೊಂದು ಮಹತ್ವದ ತಿರುವನ್ನು ನೀಡಿತು. ಆ ಕೆಲಸದಲ್ಲಿರುವಾಗಲೇ ಅವರು ಬೀದಿ ಬದಿಯ ವ್ಯಾಪಾರ ಮಾಡುವ, ಚಿಂದಿ ಆಯುವ ಮತ್ತು ಬಡ ಕೃಷಿಕ ಮಹಿಳೆಯರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿದರು. ನ್ಯಾಯವಾಗಿ ಅವರಿಗೆ ದಕ್ಕಬೇಕಾದ ಹಕ್ಕುಗಳನ್ನು ದೊರಕಿಸಿಕೊಡಲು ಟೆಕ್ಸ್‍ಟೈಲ್ ಲೇಬರ್ ಅಸೋಸಿಯೇಷನ್‍ನ ಭಾಗವಾಗಿ ಒಂದು ಸಂಘಟನೆಯನ್ನು ಆರಂಭಿಸಿದರು. ಆಗ ಅವರ ಮನಸ್ಸಿಗೆ ಹೊಳೆದದ್ದು ಈ ‘ಸೇವಾ’ದಂತಹ ಸಂಘಟನೆ. ಇದು ಅನೌಪಚಾರಿಕವಾಗಿ ಡಿಸೆಂಬರ್ 3, 1971ರಂದು ಆರಂಭವಾಯಿತು. ಇಳಾ ಇದರ ಸ್ಥಾಪಕ ಕಾರ್ಯದರ್ಶಿಯಾದರು.

ತನ್ನ ನೆಲವಾದ ಗುಜರಾತಿನಲ್ಲಿ ನೆಲೆಸಿರುವ ಚಿಂದಿ ಆಯುವ ಮಹಿಳೆಯರು, ಮನೆಯಲ್ಲೇ ಕೂತು ಕಸೂತಿ ಹೊಲಿಯುವವರು, ಅಂಟು ಕಿತ್ತು ಮಾರುವವರು, ಬುಟ್ಟಿ ಹೆಣೆಯುವವರು, ಮರು ಬಳಕೆಯ ಬಟ್ಟೆಯನ್ನು ಮಾರುವವರು, ಚಿಂದಿಯಿಂದ ಕ್ವಿಲ್ಟ್ ಹೊಲೆಯುವವರು, ಹೊಲ ಗದ್ದೆಗಳಲ್ಲಿ ದುಡಿಯುವ ಬಡ ಮಹಿಳೆಯರು- ಹೀಗೆ ಹತ್ತು ಹಲವು ಕಸಬುಗಳನ್ನು ಮಾಡಿಕೊಂಡು ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತ ಮಹಿಳೆಯರ ಸ್ಥಿತಿಗೆ ಮರುಗಿದ ಇಳಾ ಭಟ್ ಹುಟ್ಟು ಹಾಕಿದ ಸಂಘಟನೆ ‘ಸೇವಾ’(Sಇಗಿಂ – Seಟಜಿ emಠಿಟoಥಿeಜ Womeಟಿs ಂssoಛಿiಚಿಣioಟಿ). ಈ ಸಂಸ್ಥೆಯನ್ನು ದುಡಿಯುವ ಮಹಿಳೆಯರ ಕಾರ್ಮಿಕ ಸಂಘವೆಂದು ನೋಂದಣಿ ಮಾಡಬೇಕೆಂದು ಹೊರಟಾಗ, ‘ಇಲ್ಲಿ ಉದ್ಯೋಗದಾತರು ಯಾರು? ಮಹಿಳೆಯರ ಹೋರಾಟ ಯಾರ ವಿರುದ್ಧ?’ ಎಂಬ ಹಲವಾರು ಪ್ರಶ್ನೆಗಳನ್ನು ನೋಂದಣೆಯ ಅಧಿಕಾರಿಗಳಿಂದ ಇಳಾ ಎದುರಿಸಬೇಕಾಗಿ ಬಂತು. ಆದರೆ ಇಂತಹದೊಂದು ಸಂಘಟನೆಯ ಅಗತ್ಯದ ಬಗ್ಗೆ ಸ್ಪಷ್ಟತೆ ಮತ್ತು ಅನಿವಾರ್ಯತೆಯನ್ನು ಅಧಿಕಾರಿಗಳಿಗೆ ಅರ್ಥಮಾಡಿಸುವಲ್ಲಿ ಇಳಾ ಯಶಸ್ವಿಯಾದರು. ‘ಈ ಸಂಘಟನೆಯ ಉದ್ದೇಶ ಯಾರ ವಿರುದ್ಧವೂ ಅಲ್ಲ, ಆದರೆ ಈ ಮಹಿಳೆಯರು ಬದುಕುತ್ತಿರುವ ದುಡಿಮೆಯ ಸನ್ನಿವೇಶದ ವಸ್ತು ಸ್ಥಿತಿಯನ್ನು ಬದಲಾಯಿಸಲು ಈ ಸಂಘಟನೆ ಕೆಲಸ ಮಾಡುತ್ತದೆ. ಅವರಿಗೆ ಸಂಬಂಧಪಟ್ಟ ನಿಯಮಾವಳಿಗಳನ್ನು ಮತ್ತು ಕಾಯಿದೆಗಳನ್ನು ಬದಲಾಯಿಸುವುದು, ಗುತ್ತಿಗೆ ವ್ಯವಸ್ಥೆಯ ಹಲವು ಹಂತಗಳಲ್ಲಿ ಮಧ್ಯವರ್ತಿಗಳಿಂದ ನಡೆಯುವ ಶೋಷಣೆ, ಬೀದಿ ವ್ಯಾಪಾರವನ್ನು ಕಾನೂನು ಬಾಹಿರ ಎನ್ನುವ ನಗರಾಭಿವೃದ್ಧಿಯ ನಿಯಮಾವಳಿಗಳು, ಪೊಲೀಸರ ಕಿರುಕುಳ, ಸಾರ್ವಜನಿಕ ಹಂಚಿಕಾ ವ್ಯವಸ್ಥೆ …. ಹೀಗೆ ಹತ್ತು ಹಲವು ವಿಷಯಗಳಿಗಾಗಿ ಹೋರಾಡಬೇಕಾದ ಸಂದರ್ಭದಲ್ಲಿ ಮಹಿಳೆಯರಿಗೆ ಬೆಂಗಾವಲಾಗಿ ನಿಲ್ಲುವುದು’ ಈ ಸಂಘದ ಉದ್ದೇಶವೆಂದರು. ಅಂತೂ ಕೊನೆಗೆ 1926ರ ಟ್ರೇಡ್ ಯೂನಿಯನ್ ಅಧಿನಿಯಮದ ಕೆಳಗೆ 1972, ಏಪ್ರಿಲ್ 12ರಂದು ‘ಸೇವಾ’ ನೋಂದಣಿಯಾಯಿತು.

ಸೇವಾ ನೋಂದಣಿಯಾದ ನಂತರ ಕೆಲವು ಸದಸ್ಯರೊಂದಿಗೆ ಸೇರಿಕೊಂಡು ಸ್ವ-ಉದ್ಯೋಗಸ್ಥ ಮಹಿಳೆಯರ ಪರಿಸ್ಥಿತಿ, ಅವರ ಬೇಕು-ಬೇಡಗಳು ಮತ್ತು ಸವಾಲನ್ನು ಎದುರಿಸಲು ಅವರಿಗಿರುವ ತಾಳಿಕೊಳ್ಳುವ ಶಕ್ತಿಯನ್ನು ಕುರಿತಂತೆ ಕ್ಷೇತ್ರ ಅಧ್ಯಯನವನ್ನು ಮಾಡಿದರು. ಇದರಿಂದ ಅನಾವರಣಗೊಂಡ ಮಾಹಿತಿಗಳು ಗಾಬರಿಹುಟ್ಟಿಸಿದವು. ಈ ಗುಂಪಿನ ಜನರಲ್ಲಿ ಶೇಕಡ 93ರಷ್ಟು ಮಂದಿ ಅನಕ್ಷರಸ್ಥರು, ಎಂಬುದು ತಿಳಿದುಬಂತು. ಅವರ ಕೈಯಲ್ಲಿ ಯಾವುದಕ್ಕೂ ಹೆಚ್ಚಿನ ಹಣವಿಲ್ಲ. ಬಡ್ಡಿ ವ್ಯಾಪಾರಿಗಳು ಮತ್ತು ಲೇವಾದೇವಿಗಾರರ ಸಾಲದ ಮುಷ್ಟಿಯಲ್ಲಿ ಸಿಕ್ಕು ನರಳುತ್ತಿದ್ದರು. ಅಂತಹವರನ್ನು ಆ ಕೂಪದಿಂದ ಎತ್ತುವುದೆಂತು? ಆ ಸಂದರ್ಭದಲ್ಲಿ ಈ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸಹಕಾರಿ ಸಂಘಗಳ ಸ್ಥಾಪನೆಯತ್ತ ಇಳಾ ಮನಸ್ಸು ಮಾಡಿದರು. ಸಹಕಾರಿಗಳ ಸ್ಥಾಪನೆ ಕಾರ್ಮಿಕ ಮಹಿಳಾ ಸಂಘಟನೆಗೆ ನೆರವಾಗುವುದಲ್ಲದೆ ಮಹಿಳೆಯರನ್ನು ಸ್ವಯಂಪೂರ್ಣವಾಗಿಸುತ್ತದೆ ಎಂದು ಅವರು ಧೃಢವಾಗಿ ನಂಬಿದ್ದರು. ಇಸ್ರೇಲಿನ ಟೆಲ್ ಎವಿವ್‍ನ ಆಫ್ರೋ-ಏಶಿಯನ್ ಇನ್‍ಸ್ಟಿಟ್ಯೂಟ್ ಆಫ್ ಲೇಬರ್ ಅಂಡ್ ಕೋ-ಆಪರೇಟಿವ್ಸ್‍ನಲ್ಲಿ ಸಹಕಾರ ಸಂಘಗಳನ್ನು ಸಂಘಟಿಸುವುದನ್ನು ಕುರಿತು ಮೂರು ತಿಂಗಳ ತರಬೇತಿಯನ್ನು ಪಡೆದು ಬಂದರು. ಎಪ್ಪತ್ತರ ದಶಕದಲ್ಲಿ ಅವರು ಮಾಡಿದ ಈ ಸಹಕಾರಿ ಯೋಜನೆ ಭಾರತೀಯ ಸಹಕಾರಿ ಕ್ಷೇತ್ರದಲ್ಲಿ ಒಂದು ದೊಡ್ಡ ಇತಿಹಾಸವನ್ನು ಸೃಷ್ಟಿಸಿತು.

ಗುಜರಾತಿನಲ್ಲಿ ಆರಂಭವಾದ ಇಳಾ ಭಟ್ ಕಟ್ಟಿದ ‘ಸೇವಾ’ ನಮ್ಮ ದೇಶದಲ್ಲಷ್ಟೇ ಅಲ್ಲ, ವಿಶ್ವದ ಮಟ್ಟದಲ್ಲಿಯೂ ಅತ್ಯಂತ ದೊಡ್ಡ ಮಹಿಳಾ ಸಂಘಟನೆಗಳಲ್ಲಿ ಒಂದಾಗಿದೆ. ‘ಸೇವಾ’ ಸದಸ್ಯರು ನಗರ ಮತ್ತು ಗ್ರಾಮೀಣ ಪ್ರದೇಶದ ವಿಭಿನ್ನ ಜಾತಿ, ವರ್ಗ ಮತ್ತು ವೃತ್ತಿಗೆ ಸೇರಿದ ಮಹಿಳೆಯರು. ಅತ್ಯಂತ ಕಡು ಬಡವರು. ದಿನದ ತುತ್ತಿಗೆ ಸಾಕಾಗುವಷ್ಟನ್ನೇ ದುಡಿದು ಬದುಕುತ್ತಿದ್ದವರು. ಸಂಘಟಿತ ವಲಯದ ದುಡಿಯುವ ಮಹಿಳೆಯರಿಗೆ ಸಿಗುವ ಯಾವ ಸೌಕರ್ಯ ಹಾಗೂ ಸೌಲಭ್ಯಗಳೂ ಇವರಿಗೆ ದೊರಕದು. ಅವರನ್ನು ಕಾರ್ಮಿಕರೆಂದು ಯಾರೂ ಪರಿಗಣಿಸುವುದಿಲ್ಲ. ಈ ಹೆಂಗಸರಿಗಾಗಿ ಇಳಾ ಭಟ್ ಮೊದಲು ‘ವಿಜಯ್’, ‘ಗೀತಾಂಜಲಿ’ ಮತ್ತು ‘ಸುಜಾತಾ’ ಎಂಬ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಿದರು. ನಂತರ ಇವರೆಲ್ಲಾ ‘ಸೇವಾ’ದ ಸದಸ್ಯರಾದರು. ಇಂದು ಸುಮಾರು 800 ಸಹಕಾರಿ ಸಂಸ್ಥೆಗಳು ‘ಸೇವಾ’ದ ಸದಸ್ಯರಾಗಿದ್ದಾರೆ; ಎರಡು ಮಿಲಿಯನ್ ಮಹಿಳೆಯರು ಈ ಸಂಘಟನೆಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ.

1972ರ ಡಿಸೆಂಬರ್‍ನಲ್ಲಿ ಗುಜರಾತಿನ ನರಂಘಾಟ್‍ನಲ್ಲಿ ‘ಸೇವಾ’ ಸಂಸ್ಥೆಯ ಸರ್ವ ಸದಸ್ಯರ ಸಭೆ ನಡೆದಿತ್ತು. ಅದರಲ್ಲಿ ಸಾವಿರಾರು ಸದಸ್ಯರು ಭಾಗವಹಿಸಿದ್ದರು. ಮಧ್ಯದಲ್ಲಿ ಮರು ಬಳಕೆಯ ಬಟ್ಟೆಯ ವ್ಯಾಪಾರಿ ಚಂದಾ ಬೆನ್ ಎದ್ದುನಿಂತು ಪ್ರಶ್ನೆಯೊಂದನ್ನು ಕೇಳಿದಳು. “ಬೆಹನ್, ನಾವು ನಮ್ಮದೇ ಆದ ಬ್ಯಾಂಕನ್ನು ಏಕೆ ಮಾಡಿಕೊಳ್ಳಬಾರದು?” ಈ ಪ್ರಶ್ನೆಯನ್ನು ಕೇಳಿಸಿಕೊಂಡ ಇಳಾ ಅತ್ಯಂತ ತಾಳ್ಮೆಯಿಂದ ಇದಕ್ಕೆ ಉತ್ತರಿಸಿದರು: “ನಮ್ಮ ಬಳಿ ಹಣ ಇಲ್ಲ. ಬ್ಯಾಂಖ್ ಸ್ಥಾಪಿಸಲು ತುಂಬ ಹಣ ಬೇಕಾಗುತ್ತದೆ!” ಅದಕ್ಕೆ ಚಂದಾ ಬೆನ್‍ಳದು ಪ್ರತಿಯಾಗಿ ಉತ್ತರ: “ಸರಿ, ನಾವು ಬಡವರಾದರೇನು, ನಮ್ಮ ಸಂಖ್ಯೆ ದೊಡ್ಡದಿದೆಯಲ್ಲವೆ?” ಈ ಮಾತು ಕೇಳಿ ಇಳಾ ಬೆಕ್ಕಸ ಬೆರಗಾಗುತ್ತಾರೆ. ಪರ್ವತವನ್ನೇ ಕದಲಿಸಬಲ್ಲ ಶಕ್ತಿ ಮತ್ತು ವಿಶ್ವಾಸ ‘ಸೇವಾ’ ಸಂಸ್ಥೆಗಿದೆಯೆಂಬುದನ್ನು ಚಂದಾಬೆನ್ ಳ ಮಾತುಗಳು ಅವರಿಗೆ ಮನದಟ್ಟುಮಾಡಿದವು. ಚಂದಾಳ ಮಾತುಗಳು ಸಭೆಯಲ್ಲಿದ್ದವರನ್ನೆಲ್ಲ ಯೋಚಿಸುವಮ್ತೆ ಮಾಡಿತು. “ಹೌದಲ್ಲಾ, ನಮ್ಮದೇ ಒಂದು ಬ್ಯಾಂಕ್ ಏಕಾಗಬಾರದು?” ಎಂದು ಸದಸ್ಯರು ತಮ್ಮ ತಮ್ಮಲ್ಲೇ ಚರ್ಚಿಸತೊಡಗಿದರು. ಒಬ್ಬ ಸಮಾನ್ಯ ಸದಸ್ಯೆ ಚಂದಾಬೆನ್‍ಳ ಮಾತುಗಳಿಗೆ ಇಳಾ ಬೆಟ್ ಎಷ್ಟು ಪ್ರಾಮುಖ್ಯತೆ ಕೊಟ್ಟರೆಂದರೆ ಅವರು ತಮ್ಮ ಆತ್ಮಕಥಾನಕದ ಶೀರ್ಷಿಕೆ “ನಾವು ಬಡವರಾದರೇನು, ನಮ್ಮ ಸಂಖ್ಯೆ ದೊಡ್ಡದಿದೆ” ಎಂದು ಇಟ್ಟರು. ಸದಸ್ಯರ ಮನಸ್ಸಿನಲ್ಲಿ ಮೂಡಿದ ಕನಸು 1974ರಲ್ಲಿ ಸಾಕಾರವಾಯಿತು. ಜುಲೈ, 1974ರಲ್ಲಿ ಸೇವಾ ಸಹಕಾರಿ ಬ್ಯಾಂಕ್ ನೋಂದಣಿಯಾಯಿತು.

‘ಸೇವಾ’ದ ಶೇಕಡ 93ರಷ್ಟು ಮಹಿಳೆಯರು ಅನಕ್ಷರಸ್ಥರಿರುವಾಗ ಅವರಿಗೆ ಬ್ಯಾಂಕಿನ ವ್ಯವಹಾರಗಳ ತಿಳುವಳಿಕೆ ಮೂಡಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅದಕ್ಕೆ ಹರಸಾಹಸ ಪಡಬೇಕಾಯಿತು. ಚಂದಾಬೆನ್‍ಳಂತಹ ಕೆಲವು ಆಪ್ತ ಸದಸ್ಯರನ್ನು ಜೊತೆಗೂಡಿಸಿಕೊಂಡು ಸೇವಾದ ಸದಸ್ಯರಿಗೆ ಬ್ಯಾಂಕಿಂಗ್ ವ್ಯವಹಾರಗಳ ತಿಳುವಳಿಕೆಯನ್ನು ಕೊಡಲು ಆರಂಭಿಸಿದರು. ಪ್ರತಿಯೊಬ್ಬ ಮಹಿಳೆಗೂ ಉಳಿತಾಯ ಮಾಡಲು ಉತ್ತೇಜಿಸಿದರು. ಪ್ರತ್ಯೇಕ ಮಹಿಳಾ ಬ್ಯಾಂಕನ್ನು ಸ್ಥಾಪಿಸಲು ನಿರ್ಧರಿಸಿದ್ದೇ ಹೆಣ್ಣುಮಕ್ಕಳಿಗೆ ಉಳಿತಾಯ ಮತ್ತು ಸಾಲ ಸೌಲಭ್ಯಗಳು ದೊರೆಯುವಂತೆ ಮಾಡುವುದಾಗಿತ್ತು. ಈ ಮಹಿಳೆಯರಿಗೆ ಉತ್ಪಾದನೆ, ಶೇಖರಣೆ,ಗಳಿಸುವಿಕೆ ಹಾಗೂ ಮಾರಾಟದಲ್ಲಿ ತಾಂತ್ರಿಕ ಮತ್ತು ಆಡಳಿತಾತ್ಮಕ ಸಹಾಯವನ್ನು ನೀಡುವುದು ಬ್ಯಾಂಕಿನ ಗುರಿಯೆಂದು ಘೋಷಿಸಿಕೊಳ್ಳಲಾಗಿತ್ತು. ಮಹಿಳೆಯರು ಅಡವಿಟ್ಟ ಒಡವೆಗಳು, ಒತ್ತೆ ಇಟ್ಟ ಮನೆ ಅಥವಾ ಭೂಮಿಯನ್ನು ಮರಳಿ ಪಡೆಯುವುದು, ದಲ್ಲಾಳಿಗಳು ಮತ್ತು ಬಡ್ಡಿ ವ್ಯಾಪಾರಿಗಳ ಬಳಿ ತೆಗೆದುಕೊಂಡ ಹಳೆಯ ಸಾಲವನ್ನು ಹಿಂತಿರುಗಿಸಲು ಬ್ಯಾಂಕ್ ಸಾಲ ನೀಡುವುದು ಈ ಬ್ಯಾಂಕಿನ ಉದ್ದೇಶವಾಗಿತ್ತು. ಇಳಾ ಭಟ್ ಸ್ಥಾಪಿಸಿದ ಸೇವಾ ಬ್ಯಾಂಕಿನಿಂದ ಮಹಿಳೆಯರಿಗಾದ ಲಾಭ ಅಪಾರ. ಹೆಚ್ಚು ಹೆಚ್ಚು ಹಣ ಸಂಪಾದಿಸುವುದಕ್ಕೆ ಉತ್ತೇಜನ ನೀಡಿದ್ದಲ್ಲದೆ, ತಮಗೆ ಬೇಕಾದ ಉತ್ಪಾದನಾ ಸಲಕರಣೆಗಳನ್ನು ಕೊಂಡುಕೊಳ್ಳಲು ನೆರವಾಗಿದೆ. ಬಡ್ಡಿ ವ್ಯಾಪಾರಿಗಳಲ್ಲಿ ಮಾಡಿದ್ದ ಹಳೆಯ ಸಾಲವನ್ನು ತೀರಿಸಲು ಮತ್ತು ಒತ್ತೆಯಿಟ್ಟ ಚಿನ್ನಾಭರಣಗಳನ್ನು ಬಿಡಿಸಿಕೊಳ್ಳಲು ಸಹಾಯ ಮಾಡಿದೆ. ಅವರ ಉದ್ಯೋಗಗಳನ್ನು ಹೆಚ್ಚು ವಿಸ್ತಾರವಾಗಿ ಮಾಡಲು ನೆರವಾಗಿದೆ.

‘ಸೇವಾ’ ಬ್ಯಾಂಕಿನ ಕಾರ್ಯ ವೈಖರಿ ದೇಶ ವಿದೇಶಗಳ ಗಮನವನ್ನು ಸೆಳೆಯಿತೆಂಬುದು ಅತಿಶಯೋಕ್ತಿಯಲ್ಲ. 1979ರಲ್ಲಿ ಮಹಿಳಾ ಜಾಗತಿಕ ಬ್ಯಾಂಕ್ ಆರಂಭವಾಯಿತು. 1995ರಲ್ಲಿ ಬಡವರ ನೆರವಿಗಾಗಿ ದಿ ವಲ್ರ್ಡ್ ಬ್ಯಾಂಕ್ಸ್ ಕನ್ಸಲ್‍ಟೇಟಿವ್ ಗ್ರೂಪ್ ಆರಂಭವಾಯಿತು. ಈ ಎರಡೂ ಸಂಸ್ಥೆಗಳ ಹುಟ್ಟಿಗೆ ಸೇವಾ ಬ್ಯಾಂಕ್ ಪ್ರೇರಣೆಯಾಗಿದೆ. ಈ ಸಂಸ್ಥೆಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಬಡಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಸಾಲ ನೀಡುತ್ತಿದೆ. ಜಾಗತಿಕ ಬ್ಯಾಂಕ್ ಸ್ಥಾಪನೆಯಲ್ಲಿ ಇಳಾ ಭಟ್ ಕೊಡುಗೆ ಅಪಾರ. 1979ರಲ್ಲಿ ವಿಶ್ವಬ್ಯಾಂಕ್ ಆರಂಭವಾದಾಗ ಅದರ ಸ್ಥಾಯಿ ಸಮಿತಿಯಲ್ಲಿ ಇಳಾ ಭಟ್ ಇದ್ದರು. ನಂತರ 1988ರಿಂದ್ 1998ರವರೆಗೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ದುಡಿಯುವ ಸಂಸ್ಥೆಯಾದ ವಿಶ್ವ ಮಹಿಳಾ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.
ಆರ್ಥಿಕ ಸುಧಾರಣೆಯ ಕೇಂದ್ರಬಿಂದುವಾಗಿ ಮಹಿಳೆಯರನ್ನು ಕಾಣುತ್ತಿದ್ದ ಇಳಾ ಭಟ್ ಅವರಿಗೆ ಮಹಿಳೆಯರ ಶಕ್ತಿ, ಸಾಮಥ್ರ್ಯದ ಬಗ್ಗೆ ಅಪಾರ ವಿಶ್ವಾಸವಿತ್ತು. ಮಹಿಳೆಯರು ತಮಗೆ ಆಪ್ತವಾದ ಕಾಳಜಿಗಳ ಸುತ್ತ ಒಂದು ಸದೃಢವಾದ ಸಮರ್ಥ ಸಂಘಟನೆಯನ್ನು ಕಟ್ಟಬಲ್ಲರು. ಹಾಗೆಯೇ ಈ ಪ್ರಕ್ರಿಯೆಯಲ್ಲಿ ನಮ್ಮ ಸಮಾಜ ಮತ್ತು ಪರಿಸರವನ್ನು ಆರೋಗ್ಯಪೂರ್ಣವಾಗಿ, ಗೌರವಯುತವಾಗಿ, ಅಹಿಂಸಾತ್ಮಕವಾಗಿ ಸೃಷ್ಟಿಸಿಕೊಳ್ಳಬಲ್ಲರು ಎಂಬ ದೃಢವಾದ ನಂಬಿಕೆಯನ್ನು ಅವರು ಕಾರ್ಯನಿರ್ವಹಿಸಿದ ಸೇವಾ ಮತ್ತು ಸೇವಾ ಸಹಕಾರಿ ಬ್ಯಾಂಕ್ ಸಾಬೀತು ಮಾಡಿದವು.

ಎನ್. ಗಾಯತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *