FEATURED

ನುಡಿನಮನ/ ಸಾಹಿತ್ಯಕ್ಕೆ ಹೊಸ ಸಂವೇದನೆ ಪರಿಚಯಿಸಿದ ದಿಟ್ಟ ಲೇಖಕಿ – ಎನ್. ಗಾಯತ್ರಿ

“ತಮ್ಮ ಹೆಂಗಸರಿಗೆ ಕಾಯಿಲೆಯಾದರೆ ಮಹಿಳಾ ವೈದ್ಯರನ್ನೇ ಹುಡುಕಿಕೊಂಡು ಹೋಗುವ ನಮ್ಮ ಗಂಡಸರು ತಮ್ಮ ಹೆಣ್ಣು ಮಕ್ಕಳನ್ನು ಹೈಸ್ಕೂಲಿಗೂ ಕಳುಹಿಸಲು ಒಪ್ಪುವುದಿಲ್ಲ! ಮೇಡಂ ಕ್ಯೂರಿ, ಕ್ರಿಸ್ ಎವರ್ಟ್ ಅಥವಾ ವ್ಯಾಲೆಂಟೀನಾ ಆಗದಿದ್ದರೆ ಹೋಗಲಿ ‘ಮಿಲ್ಸ್ ಅಂಡ್ ಬೂನ್’ ಲೇಖಕಿಯರಂತಾದರೂ ಆಗಲು ನಮ್ಮ ಈ ಹೆಣ್ಣು ಮಕ್ಕಳು ಎಂದಾದರೂ ಪ್ರಯತ್ನಿಸುವರೇ! ಅಜ್ಞಾನದ ಕತ್ತಲ ಗುಹೆಯಿಂದ ಇವರು ಎಂದಾದರೂ ಹೊರಬರಲು ಸಾಧ್ಯವೇ ಎಂದು ನಾನು ಕೆಲವೊಮ್ಮೆ ದೀರ್ಘವಾಗಿ ಯೋಚಿಸುತ್ತೇನೆ”- ಹೀಗೆ ಬರೆದಿರುವ ಕನ್ನಡದ ಅಪರೂಪದ ಲೇಖಕಿ ಸಾರಾ ಅಬೂಬಕ್ಕರ್. ಅವರೂ ಕೂಡ ಇಂತಹುದೇ ಅವಕಾಶವಂಚಿತ ಪರಿಸರದಲ್ಲಿ ಹುಟ್ಟಿ ಬೆಳೆದವರು, ಆದರೆ ಬೆಳೆದು ಕನ್ನಡ ಸಾಹಿತ್ಯಲೋಕವು ಕೊಡಮಾಡುವ ಬಹುಪಾಲು ಎಲ್ಲ ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡವರು. ಇತ್ತೀಚೆಗೆ ತೀರಿಕೊಂಡ ಸಾರಾ ಕನ್ನಡ ಸಾಹಿತ್ಯಕ್ಕೆ ಹೊಸ ಸಂವೇದನೆಗಳನ್ನು ಜೋಡಿಸಿದ ದಿಟ್ಟ ಲೇಖಕಿ. 2007 ರಲ್ಲಿ ಅವರೊಂದಿಗೆ ನಡೆಸಿದ ಮಾತುಕತೆ ಅವರ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ.

   

ಗಾಯತ್ರಿ: ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸವು ಅಲಭ್ಯವಾಗಿದ್ದ ಪರಿಸರದಲ್ಲಿ ಜನಿಸಿರುವ ನೀವು ವಿದ್ಯಾವಂತೆಯಾಗಿ, ಲೇಖಕಿಯಾಗಿ ರೂಪುಗೊಂಡ ಬಗೆ ಹೇಗೆ?

ಸಾರಾ: ನನ್ನ ಮನೆಯ ಪರಿಸರದಲ್ಲಿ ವಿದ್ಯಾಭ್ಯಾಸಕ್ಕೆ ಪ್ರಾಶಸ್ತ್ಯವಿತ್ತು. ನನ್ನ ತಾತ 1970-80ರ ಕಾಲಕ್ಕಾಗಲೇ ‘ಮಾತೃಭೂಮಿ’ ಪತ್ರಿಕೆಯನ್ನು ತಪ್ಪದೆ ದಿನವೂ ಓದುತ್ತಿದ್ದರು. ಧಾರ್ಮಿಕ ಗ್ರಂಥಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ಅವರು ಎಂದೂ ಮತಾಂಧರಾಗಿರಲಿಲ್ಲ. ಮನೆಯ ತೋಟದಲ್ಲಿ ಕೆಲಸ ಮಾಡಲು ಬರುತ್ತಿದ್ದ ಎಲ್ಲಾ ಜಾತಿ, ಧರ್ಮದವರನ್ನು ತಮ್ಮ ಮನೆಯವರಂತೆಯೇ ಕಾಣುತ್ತಿದ್ದರು. ನನ್ನ ತಾತನ ಆರು ಜನ ಗಂಡು ಮಕ್ಕಳಲ್ಲಿ ನನ್ನ ತಂದೆಯೇ ಹಿರಿಯರು. ಆಗಲೇ ಎರಡು ಪದವಿ ಪಡೆದು ಬಿ.ಎಲ್. ತರಗತಿಯಲ್ಲಿ ‘ಮಹಮಡನ್ ಲಾ’ದಲ್ಲಿ ಮದ್ರಾಸು ವಿಶ್ವವಿದ್ಯಾಲಯದ ಚಿನ್ನದ ಪದಕವನ್ನು ಗಳಿಸಿದ್ದರು. ಇಂತಹ ವಿದ್ಯಾವಂತ ತಂದೆಯ ಮಗಳಾದ ನನಗೆ ವಿದ್ಯಾಭ್ಯಾಸ ಪಡೆಯುವುದೇನೂ ಕಷ್ಟವಾಗಲಿಲ್ಲ. ‘ಮಗಳಿಗೆ 16 ವರ್ಷವಾಗದೆ, ಎಸ್.ಎಸ್.ಎಲ್.ಸಿ. ಮಾಡಿಸದೆ ಮದುವೆಯನ್ನು ಮಾಡುವುದಿಲ್ಲ’ ಎಂದು ನಿರ್ಧರಿಸಿದ್ದ ತಂದೆಯ ತೀರ್ಮಾನವೇ ನಾನು ವಿದ್ಯಾವಂತೆಯಾಗಲು ಕಾರಣವಾದದ್ದು. ನಾನು ಶಾಲೆಯಲ್ಲಿದ್ದಾಗ ತುಂಬ ಕತೆ ಪುಸ್ತಕಗಳನ್ನು ಓದುತ್ತಿದ್ದೆ. ಜೊತೆಗೆ ನನ್ನಮ್ಮ ಹಾಡಿನ ರೂಪದಲ್ಲಿರುವ ಪ್ರವಾದಿಗಳ ಕತೆಗಳನ್ನು ಹಾಡಿ ಹೇಳುತ್ತಿದ್ದರು. ಸಬೀನಾ ಎನ್ನುವ ಈ ಜಾನಪದ ಹಾಡುಗಳು ನನಗೆ ತುಂಬ ಇಷ್ಟವಾಗುತ್ತಿದ್ದವು. ಹೀಗೆ ಓದುತ್ತಾ, ಕೇಳುತ್ತಾ ನಾ ಬೆಳೆದೆ.

ಪ್ರಶ್ನೆ: ಇಲ್ಲಿಯವರೆಗೂ ನೀವು ಬರೆದಿರುವ ಕತೆ, ಕಾದಂಬರಿಗಳ ಅನುಭವ ದ್ರವ್ಯ ಮುಖ್ಯವಾಗಿ ಯಾವುದು?

ಉತ್ತರ: ನಾನು ಕಾಲ್ಪನಿಕ ಸಂಗತಿಗಳನ್ನು ಕುರಿತು ಬರೆದದ್ದು ಬಹಳ ಕಡಿಮೆ. ಒಂದೆರಡು ಇರಬಹುದು. ಆದರೆ ಮುಖ್ಯವಾಗಿ ನಾನು ಬದುಕಿನಲ್ಲಿ ಕಂಡ ನೈಜ ಘಟನೆಗಳನ್ನೇ ನನ್ನ ಬರವಣಿಗೆಗೆ ವಸ್ತುವನ್ನಾಗಿ ಆರಿಸಿಕೊಂಡಿರುವುದು. ನನ್ನ ತಂದೆ ಲಾಯರ್. ಅವರ ಬಳಿ ಹಲವಾರು ಜನರು ತಮ್ಮ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು. ಪರಿಹಾರಕ್ಕಾಗಿ ಬರುತ್ತಿದ್ದರು. ತಲಾಖ್ ಮತ್ತಿತರ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು. ಒಂದೊಂದು ಘಟನೆಯೂ ಒಂದೊಂದು ಕತೆಗೆ ವಸ್ತುವಾಗುವಂತಿತ್ತು. ನನ್ನ ತಾಯಿ ತುಂಬ ಸಮಾಜಮುಖಿ. ಅವರು ಬೇರೆಯವರ ಕಷ್ಟಕ್ಕೆ ಕರಗುತ್ತಿದ್ದರು. ನನ್ನ ‘ವಜ್ರಗಳು’ ಕಾದಂಬರಿಯಲ್ಲಿ ಬರೆದಿರುವ ಕತೆ ನಿಜವಾದ ಘಟನೆ. ಗಂಡುಮಕ್ಕಳಿಂದ ಮೋಸಕ್ಕೊಳಗಾದ ಆ ತಾಯಿ ನನ್ನಮ್ಮನ ಬಳಿ ಬಂದು ಕಣ್ಣೀರುಗರೆದು ತನ್ನ ಗೋಳು ಹೇಳಿಕೊಂಡಾಗ ನನ್ನಮ್ಮ ತುಂಬ ನೊಂದುಕೊಂಡಿದ್ದರು. ಆ ಕತೆ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿತ್ತು. ಇನ್ನು ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯೂ ಅಷ್ಟೇ. ನಮ್ಮ ಮನೆಯ ಕೆಲಸಕ್ಕಿದ್ದ ಹುಡುಗಿಯೊಬ್ಬಳ ಕತೆ. ಧರ್ಮದ ಉರಿ ತಾಕಿ ಉರಿದುಹೋದ ಹುಡುಗಿಯ ಕತೆ. ನಾನು ಈ ಪುಸ್ತಕ ಬರೆದಾಗ ಸಾಕಷ್ಟು ವಿರೋಧ ಬಂತು. ನಮ್ಮ ಧಾರ್ಮಿಕ ಆಚರಣೆಯಲ್ಲಿ ಇಲ್ಲದ್ದನ್ನು ಕುರಿತು ಬರೆದೆ; ಅಗ್ಗದ ಪ್ರಚಾರಕ್ಕಾಗಿ ಬರೆದೆ, ಎಂದೆಲ್ಲಾ ಟೀಕಿಸಿದವರು ಇದ್ದರು. ಆದರೆ ಇತ್ತೀಚೆಗೆ ಒರಿಸ್ಸಾದಲ್ಲಿ ಇಂತಹ ಘಟನೆ ನಡೆದಿದೆಯೆಂದು ವರದಿಯಾಗಿದೆ. ನೀವೂ ಪತ್ರಿಕೆಗಳಲ್ಲಿ ಓದಿರಬಹುದು. ರಾತ್ರಿ ಕುಡಿದುಬಂದ ಗಂಡ ಹೆಂಡತಿಗೆ ತಲಾಖ್ ಕೊಟ್ಟ. ಮಾರನೇ ದಿನ ಊರಿನವರೆಲ್ಲಾ ಸೇರಿ ‘ಅವಳು ಗಂಡನೊಂದಿಗೆ ಬಾಳಲು ಸಾಧ್ಯವಿಲ್ಲ. ಬಾಳಬೇಕಾದರೆ ಮತ್ತೊಬ್ಬನನ್ನು ಮದುವೆಯಾಗಿ ತಲಾಖ್ ಪಡೆದಿರಬೇಕು’ ಎಂದರು.

ಪ್ರಶ್ನೆ: ನೀವು ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ ಬರೆದಾಗ ಮಂಗಳೂರಿನಲ್ಲಿ ಸಭೆಯೊಂದರಲ್ಲಿ ನಿಮ್ಮ ವಿರುದ್ಧ ಪ್ರತಿಭಟನೆಯ ಗಲಾಟೆಯಾಯಿತಲ್ವಾ, ಅದು ಏನು?

ಉತ್ತರ: ಹೌದು. ಪುತ್ತೂರಿನ ಪ್ರಗತಿಪರ ಸಂಘಟನೆಯವರು ‘ಜನಾಂಗೀಯ ಅಧ್ಯಯನ’ ಎನ್ನುವ ವಿಚಾರ ಸಂಕಿರಣ ಏರ್ಪಡಿಸಿದ್ದರು. ವಿವೇಕ ರೈ ಅದರ ಅಧ್ಯಕ್ಷತೆ ವಹಿಸಿದ್ದರು. ನನಗೆ ‘ಕರಾವಳಿಯಲ್ಲಿ ಮುಸ್ಲಿಂ ಮಹಿಳೆಯರು’ ಎನ್ನುವ ವಿಷಯ ಕುರಿತು ಮಾತನಾಡಲು ಕೇಳಿದ್ದರು. ಎಂದೂ ಸಭೆ, ಸಮಾರಂಭಗಳಲ್ಲಿ ನಾನು ಮಾತನಾಡಿದವಳಲ್ಲ. ವೇದಿಕೆ ಹತ್ತಿಯೇ ಗೊತ್ತಿಲ್ಲ. ಆದರೂ ನನಗೆ ಗೊತ್ತಿದ್ದನ್ನು ಹೇಳುವಾ, ಎಂದು ಅಲ್ಲಿಗೆ ಹೋಗಿದ್ದೆ. ಪುತ್ತೂರು ಧಾರ್ಮಿಕವಾಗಿ ಪ್ರಬಲ ಶಕ್ತಿಗಳು ಇರುವ ಊರು. ಸಭೆ ಆರಂಭವಾಯಿತು. ಮೊದಲಿನ ಒಂದೆರಡು ಪ್ರಬಂಧಗಳು ಆದ ಮೇಲೆ ನನ್ನ ಸರದಿ ಬಂದು ಮಾತನಾಡಲು ಆರಂಭಿಸಿದಾಗ ‘ನೀವು ಬುರ್ಖಾ ಹಾಕಿಲ್ಲ. ಆದ್ದರಿಂದ ನೀವು ಮುಸ್ಲಿಮರಲ್ಲ. ಮುಸ್ಲಿಂ ಮಹಿಳೆಯ ಬಗ್ಗೆ ನೀವೇನು ಮಾತಾಡೋದು?’ ಎಂದು ಗಲಾಟೆ ಆರಂಭಿಸಿದರು. ಆ ಸಭೆಯಲ್ಲಿ ಬೋಳುವಾರ್, ಕಟ್ಪಾಡಿ ಕೂಡ ಇದ್ದರು. ಕಟ್ಪಾಡಿ ನನ್ನ ಮುಂದೆ ಬಂದು ಅಡ್ಡವಾಗಿ ನಿಂತು ಯಾರೂ ನನಗೆ ಏನೂ ಮಾಡದಂತೆ ತಡೆದರು. ಅಷ್ಟೇ ಗಲಾಟೆ. ಇದು ಒಂದು ರೀತಿಯಲ್ಲಿ ಪೂರ್ವಸಿದ್ಧತೆಯೊಂದಿಗೆ ಆದ ಘಟನೆ. ಸಂಘಟಕರಿಗೂ ಇದರ ಸುಳಿವು ಸಿಕ್ಕಿತ್ತು. ನನಗೆ ತಿಳಿಸಿರಲಿಲ್ಲ, ಅಷ್ಟೇ. ನಾನು ಭಾಷಣ ಪೂರ್ತಿ ಮಾಡದೇ ಅಧ್ಯಕ್ಷ ಭಾಷಣವೂ ನಡೆಯದೆ ಸಭೆ ಮುಕ್ತಾಯವಾಯಿತು. ಯಾವಾಗಲೂ ವಿವೇಕ ರೈ ತಮಾಷೆಯಾಗಿ ಹೇಳುತ್ತಿರುತ್ತಾರೆ, ನಾನು ಅಧ್ಯಕ್ಷತೆ ವಹಿಸಿಯೂ ಅಧ್ಯಕ್ಷ ಭಾಷಣ ಮಾಡದೇ ಹೋದ ಸಭೆ ಅದು, ಎಂದು.

ಪ್ರಶ್ನೆ: ಈ ಘಟನೆಯ ಬಗ್ಗೆ ನಿಮ್ಮ ಕುಟುಂಬದವರ ಪ್ರತಿಕ್ರಿಯೆ ಏನು?

ಉತ್ತರ: ಪ್ರತಿಕ್ರಿಯೆಯೆಂದರೆ ಆಗ ಬೇಸರವಾಯಿತು. ಆ ಸಭೆಯಲ್ಲಿ ನನ್ನ ಪತಿಯೂ ಇದ್ದರು. ಗಾಬರಿಗಿಂತ ಹೆಚ್ಚಾಗಿ ಬೇಜಾರು ಮಾಡಿಕೊಂಡರು, ಅಂತ ಹೇಳಬಹುದು. ಈ ಘಟನೆ ಪತ್ರಿಕೆಯಲ್ಲಿ ಓದಿದ ತಕ್ಷಣ ನನ್ನ ತಮ್ಮ ಓಡಿಬಂದ. ನನ್ನನ್ನು ಸಂತೈಸಿದ. ಇದು ಒಂದು ರೀತಿಯಲ್ಲಿ ನನಗೆ ದಿಢೀರ್ ಪ್ರಸಿದ್ಧಿ ತಂದುಕೊಟ್ಟಿತು. ನನ್ನನ್ನು ‘ಲೇಖಕಿ’ ಎಂದು ಪರಿಚಯಿಸಿತು.

ಪ್ರಶ್ನೆ: ಇದಕ್ಕೆ ಮುಂಚೆ ನೀವು ಏನೂ ಬರೆದಿರಲಿಲ್ಲವಾ?

ಉತ್ತರ: ಒಂದೆರಡು ಕಥೆಗಳನ್ನು ಬರೆದಿದ್ದೆ. ಅಲ್ಲದೆ, ‘ಮುಸ್ಲಿಂ ಹುಡುಗಿಯ ಸ್ಪಂದನ’ ಮತ್ತು ನಜ್ಮಾ ಭಾಂಗಿಯ ಪ್ರಕರಣ ಕುರಿತ ಲೇಖನಗಳು ‘ಲಂಕೇಶ್ ಪತ್ರಿಕೆ’ಯಲ್ಲಿ ಪ್ರಕಟವಾಗಿದ್ದವು.

ಪ್ರಶ್ನೆ: ನಿಮ್ಮೆಲ್ಲ ಕಾದಂಬರಿಗಳೂ ‘ಲಂಕೇಶ್ ಪತ್ರಿಕೆ’ಯಲ್ಲಿಯೇ ಪ್ರಕಟವಾದವಲ್ಲವಾ?

ಉತ್ತರ: ಹೌದು. ‘ಲಂಕೇಶ್ ಪತ್ರಿಕೆ’ ಇಲ್ಲದಿದ್ದರೆ ನಾನು ಲೇಖಕಿಯೇ ಆಗುತ್ತಿರಲಿಲ್ಲವೇನೋ! ಅವರು ನನಗೆ ಕೊಟ್ಟ ಪ್ರೋತ್ಸಾಹ ಎಂದೂ ಮರೆಯಲು ಸಾಧ್ಯವಿಲ್ಲ. ಪ್ರಾರಂಭದಲ್ಲಿ ನನಗೆ ನನ್ನ ಕತೆ, ಕಾದಂಬರಿಗಳು ಇತರ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಗೊಳ್ಳಲಿ ಎನ್ನುವ ಆಸೆಯಿತ್ತು, ಬರೆದು ಕಳುಹಿಸಿದ್ದೆ ಕೂಡ. ಆದರೆ ಯಾರೂ ಪ್ರಕಟಿಸಲಿಲ್ಲ.

ಪ್ರಶ್ನೆ: ನಿಮ್ಮ ಮನೆಮಾತು ಮಲಯಾಳಂ ಅಲ್ಲವಾ? ನೀವು ಆ ಭಾಷೆಯಲ್ಲಿ ಏಕೆ ಕೃತಿ ರಚಿಸಲಿಲ್ಲ?

ಉತ್ತರ: ಮಲೆಯಾಳಂ ಮಾತಾಡುತ್ತೀನಿ, ಓದುತ್ತೀನಿ. ಆದರೆ ನನಗೆ ಬರೆಯಕ್ಕೆ ಬರಲ್ಲ. ಎರಡನೆಯ ತರಗತಿಯವರೆಗೂ ಅಜ್ಜಿಯ ಮನೆಯಲ್ಲಿದ್ದಾಗ ಮಲಯಾಳಂ ಓದಿದೆ. ಮೂರನೆಯ ತರಗತಿಯಿಂದ ತಾಯಿಯ ಮನೆಯಲ್ಲಿಯೇ ಕಾಸರಗೋಡಿನ ಕನ್ನಡ ಶಾಲೆಯಲ್ಲಿ ಓದಿದ್ದು. ಚಿಕ್ಕಂದಿನಿಂದಲೂ ಕತೆ ಪುಸ್ತಕ ಓದುವ ಹುಚ್ಚು. ಇದು ನನ್ನ ಹೆಣ್ಣು ಮೊಮ್ಮಕ್ಕಳಿಗೆ ಬಂದಿದೆ. ಮೊಮ್ಮಗಳೊಬ್ಬಳು ಒಂದೆರಡು ಕತೆ ಅನುವಾದ ಮಾಡಿದ್ದಾಳೆ. ಆದರೆ ಗಂಡು ಮೊಮ್ಮಕ್ಕಳು ಯಾರೂ ಅಷ್ಟು ಓದುವ ಹವ್ಯಾಸ ಬೆಳೆಸಿಕೊಳ್ಳಲಿಲ್ಲ.

ಪ್ರಶ್ನೆ: ನಿಮ್ಮ ಕತೆ, ಕಾದಂಬರಿಗಳಲ್ಲಿ ಮುಸ್ಲಿಂ ಧರ್ಮದ ಆಚರಣೆಗಳಿಂದ ನೋಯುವ ಹೆಣ್ಣಿನ ಕತೆಗಳಿವೆ. ಆದರೆ ಸಮಾಜದ ಸಮಗ್ರ ಅನುಭವದ ಭಾಗವಾಗಿ ಈ ವಸ್ತುಗಳು ಚಿತ್ರಿತವಾಗಿಲ್ಲ. ಅದಕ್ಕೇನಾದರೂ ವಿಶಿಷ್ಟವಾದ ಕಾರಣಗಳಿವೆಯೇ?

ಉತ್ತರ : ಹಾಗಂತ ವಿಶೇಷ ಕಾರಣವೇನಿಲ್ಲ. ಆದರೆ ನನ್ನ ಮುಂದೆ ಕಂಡ ನೋವಿನ ಕತೆಯನ್ನು ಅಷ್ಟೇ ಕೇಂದ್ರೀಕರಿಸಿ ನಾನು ಕಥೆ ಬರೆದಿದ್ದೀನಿ.

ಪ್ರಶ್ನೆ: ನೀವು ವಾಸ ಮಾಡುತ್ತಿರುವ ಊರಿನಲ್ಲಿ ಕೋಮು ಸಂಘರ್ಷದ ಬಿಸಿಯಾದ, ಬಿಗುವಾದ ವಾತಾವರಣ ಸದಾ ನೆಲೆಸಿದೆ. ಹಾಗೂ ಸಾಕಷ್ಟು ಕೋಮು ಗಲಭೆಗಳು, ಕಲಹಗಳು ನಡೆಯುತ್ತಲೇ ಇರುತ್ತವೆ. ಆದರೂ ಇವು ವಿಶೇಷವಾಗಿ ನಿಮ್ಮ ಬರವಣಿಗೆಯ ವಸ್ತುವಾಗಿಲ್ಲ, ಏಕೆ?

ಪ್ರಶ್ನೆ: ಮುಸ್ಲಿಂ ಮಹಿಳೆಯರ ಹಕ್ಕುಗಳ ಸಮರ್ಥನೆಗಾಗಿಯೇ ಒಂದು ಸಂಘಟನೆ ಬೇಕು, ಎಂದು ನಿಮಗನ್ನಿಸುತ್ತದೆಯೇ?

ಉತ್ತರ: ಸಂಘಟನೆಯಾದರೆ ಒಳ್ಳೆಯದು. ಆದರೆ ಅಂತಹ ಸಂಘಟನೆ ಮಾಡಲು ಯಾರು ಬಿಡುತ್ತಾರೆ? ಪುರುಷರು ತಮ್ಮ ಹಕ್ಕುಗಳು ಮೊಟಕಾಗುತ್ತೆ ಅಂತ ಗೊತ್ತಾದರೆ ಕೂಡಲೆ ಇಂತಹ ಸಂಘಟನೆ ಬರೋಕೆ ಬಿಡಲ್ಲ. ‘ಮುಸ್ಲಿಂ ಪ್ರಗತಿ ಪರಿಷತ್’ ತರಹದ ಸಂಘಟನೆಯನ್ನು ಕರ್ನಾಟಕದಲ್ಲಿಯೂ ಆರಂಭಿಸಬೇಕು ಅಂತ ಪ್ರಯತ್ನ ನಡೆದಿತ್ತು. ಆದರೆ ಮೂಲಭೂತವಾದಿ ಸಂಘಟನೆಗಳು, ಮತಾಂಧ ಸಂಘಟನೆಗಳು, ಇಂತಹ ಪ್ರಯತ್ನವನ್ನು ಆರಂಭದಲ್ಲಿಯೇ ಚಿವುಟಿಹಾಕಿದವು.

ಪ್ರಶ್ನೆ: ಹಾಗಾದರೆ ನಿಜವಾದ ಸಮಸ್ಯೆ ಎಲ್ಲಿದೆ? ಅದಕ್ಕೆ ಪರಿಹಾರವೇನು?

ಉತ್ತರ: ಸಮಸ್ಯೆ ಇರುವುದು ಹೆಂಗಸರನ್ನು ಕತ್ತಲಲ್ಲಿ ಇಡುವುದರಲ್ಲಿ. ಅವರಿಗೆ ವಿದ್ಯಾಭ್ಯಾಸ ಬೇಡ. ಮನೆಯಿಂದ ಹೊರಗೆ ಬರುವುದು ಬೇಡ. ಕುಟುಂಬ ಯೋಜನೇನೂ ಬೇಡ. ಮಕ್ಕಳನ್ನು ಹೆತ್ತುಕೊಂಡು, ಅವರನ್ನು ನೋಡಿಕೊಂಡು, ಮನೇನೂ ನೋಡಿಕೊಂಡು ಮನೆಯೊಳಗಿದ್ದರೆ ಸಾಕು, ಎನ್ನುವ ಭಾವನೆ ಪುರುಷರದು. ಹೆಂಗಸರಿಗೆ ಎಲ್ಲಾ ಸುಖ ಆ ಪರಲೋಕದಲ್ಲಿ ಸಿಗುತ್ತೆ. ಆ ಸುಖದ ನೆನಪು ಮಾಡಿಕೊಂಡು ಇಲ್ಲಿ ಕತ್ತಲೆಯಲ್ಲಿ ಇರಬೇಕು. ಅದಕ್ಕೆ ಶರೀಯತ್ ಅಂತ ಹೇಳಿ ಏನೂ ಅರ್ಥವಿಲ್ಲದ ಆಚರಣೆಗಳನ್ನು ಅವರ ಮೇಲೆ ಹೇರೋದು. ನಿಜವಾಗಿಯೂ ಪ್ರವಾದಿಗಳು ಹೇಳಿದ್ದು ಚೆನ್ನಾಗಿಯೇ ಇದೆ. ಅದನ್ನು ಯಾರೂ ಓದಲ್ಲ. ತಮಗಿಷ್ಟ ಬಂದಂತೆ ಅದನ್ನು ತಿರುಚುತ್ತಾರೆ.

ಪ್ರಶ್ನೆ: ಸಮಾನ ನಾಗರಿಕ ಸಂಹಿತೆ ಬೇಕೇ? ಬೇಡವೇ? ಎನ್ನುವ ವಾಗ್ವಾದ ನಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ನಿಮ್ಮ ಅಭಿಪ್ರಾಯವೇನು?

ಉತ್ತರ: ವಾದ ಮಾಡೋದು ಏಕೆ? ಸಮಾನ ನಾಗರಿಕ ಸಂಹಿತೆ ಬಂದರೆ ನಾವೆಲ್ಲಾ ದಿನಾ ದೇವಸ್ಥಾನಕ್ಕೆ ಹೋಗಬೇಕಾಗತ್ತೆ ಅಂತ ಸುಳ್ಳು ಹೆದರಿಕೆ ವ್ಯಕ್ತಪಡಿಸುತ್ತಾರೆ. ಆದರೆ ಅದು ಸತ್ಯ ಅಲ್ಲ. ಈ ವಿಷಯವಾಗಿ ನಮ್ಮ ಪ್ರವಾದಿಗಳು ಹೇಳಿದ್ದನ್ನು ಅಧ್ಯಯನ ಮಾಡಬೇಕಾಗಿದೆ. ನೋಡಿ ನಮಾಜ್, ಪ್ರಾರ್ಥನೆ, ಧಾರ್ಮಿಕ ಆಚರಣೆಗಳು ಇವೆಲ್ಲಾ ಮುಸ್ಲಿಂ ಧರ್ಮದಂತೆಯೇ ಮಾಡಿಕೊಳ್ಳಿ. ಆದರೆ ಸಿವಿಲ್ ವಿಷಯಗಳು ನೀವು ಯಾವ ನಾಡಿನಲ್ಲಿ ಇರುತ್ತೀರೋ ಆ ನಾಡಿನ ನೆಲದ ಕಾನೂನನ್ನು ಗೌರವಿಸಬೇಕು ಅಂತ. ಆದ್ದರಿಂದ ನಮ್ಮ ಮುಸ್ಲಿಂ ಕಾನೂನಿನಲ್ಲೂ ಕೆಲವು ಒಳ್ಳೆಯ ಅಂಶಗಳಿರುತ್ತವೆ. ಆ ಒಳ್ಳೆಯದನ್ನು ತೆಗೆದುಕೊಂಡು ಉಳಿದ ಧರ್ಮಗಳ ಒಳ್ಳೆಯ ಅಂಶಗಳನ್ನು ತೆಗೆದುಕೊಂಡು ಎಲ್ಲರಿಗೂ ಅನುಕೂಲವಾಗುವಂತಹ ಸಮಾನ ಸಂಹಿತೆ ರೂಪಿಸಬೇಕು. ಅದು ಬಿಟ್ಟು ಇವರೂ ವಾದ ಮಾಡುತ್ತಾರೆ, ಅವರೂ ವಾದ ಮಾಡ್ತಾರೇಂತ ವಾದಕ್ಕಾಗಿ ವಾದ ಮಾಡಕೂಡದು. ನಿಜವಾಗಿ ಜನರ ಹಿತ ನೋಡುವುದು ಮುಖ್ಯ.

ಪ್ರಶ್ನೆ: ನಮ್ಮ ನಡುವಿರುವ ಕೋಮು ಸಂಘರ್ಷ ಕೋಮುಗಲಭೆಗಳಿಗೆ ಪರಿಹಾರದ ಪ್ರಯತ್ನ ಯಾರ ಕಡೆಯಿಂದ ಆರಂಭವಾಗಬೇಕು?

ಉತ್ತರ: ನೋಡಿ, ಸರಕಾರದ ಕಣ್ಣಿರುವುದು ವೋಟುಗಳ ಮೇಲೆ. ಅವರಿಂದ ಏನೂ ಮಾಡಲು ಸಾಧ್ಯವಿಲ್ಲ. ಜನಗಳಲ್ಲಿ ತಿಳುವಳಿಕೆ ಮೂಡಬೇಕು. ವಿದ್ಯಾಭ್ಯಾಸ ಪಡೆಯಬೇಕು. ಕೇವಲ ಮದರಸಾಗಳಿಗೆ ಹೋಗುವುದರಿಂದ ವಿದ್ಯಾಭ್ಯಾಸ ಬರುವುದಿಲ್ಲ. ಶಾಲೆಗಳಿಗೆ ಹೋಗಬೇಕು. ನಿಜವಾಗಿ ಜನಗಳು ಕೆಟ್ಟವರೇ ಅಲ್ಲ. ಗಲಾಟೆ ಮಾಡಿಸುವವರು ಬೇರೆಯವರೇ ಇರುತ್ತಾರೆ. ಎರಡೂ ಧರ್ಮಗಳಲ್ಲಿನ ಮತಾಂಧರು ಗಲಾಟೆ ಎಬ್ಬಿಸುತ್ತಾರೆ. ಮುಸ್ಲಿಮರೂ ಬದಲಾಗಬೇಕು. ಎಲ್ಲರೂ ಸಂವಿಧಾನವನ್ನು ಗೌರವಿಸಬೇಕು. ಹಾಗಂತ ಲೇಖನಗಳನ್ನು ಬರೆದಿದ್ದೀನಿ.

ಪ್ರಶ್ನೆ: ನೀವು ಕಳೆದ ಇಪ್ಪತ್ತೈದು ವರ್ಷಗಳಿಂದ ಬರವಣಿಗೆಯಲ್ಲಿ ತೊಡಗಿಕೊಂಡಿದ್ದೀರಿ. ಈ ಅವಧಿಯಲ್ಲಿ ಮಹಿಳಾ ವಿದ್ಯಾಭ್ಯಾಸದ ಅವಧಿಯಲ್ಲಿ ಎಷ್ಟು ಬದಲಾವಣೆ ಆಗಿದೆ?

ಉತ್ತರ: ಬದಲಾವಣೆ ಖಂಡಿತ ಆಗಿದೆ. ಆದರೆ ಇನ್ನೂ ಆಗಬೇಕಿದೆ. ನಮ್ಮ ಕಾಲದಲ್ಲಿ ಅನುಕೂಲವಂತರ ಮನೆಯ ಹೆಣ್ಣುಮಕ್ಕಳು ಮಾತ್ರ ಶಾಲೆಗೆ ಹೋಗುತ್ತಿದ್ದರು. ಈಗ ಮಧ್ಯಮವರ್ಗದ ಮಹಿಳೆಯರೂ ಶಾಲೆಗೆ ಹೋಗುತ್ತಿದ್ದಾರೆ. ಅಲ್ಲೊಬ್ಬರು ಇಲ್ಲೊಬ್ಬರು ವಕೀಲೆಯರನ್ನು, ಕೆಲಸಕ್ಕೆ ಹೋಗುವ ಮಹಿಳೆಯರನ್ನು, ನೋಡಬಹುದು. ಆದರೆ ಈ ಸಂಖ್ಯೆ ಏನೂ ಸಾಲದು. ಇನ್ನೂ ಹೆಚ್ಚು ಜನ ಮನೆಯಿಂದ ಹೊರಗೆ ಬಂದು ಶಾಲೆಗಳಿಗೆ ಹೋಗಿ ವಿದ್ಯಾಭ್ಯಾಸ ಪಡೆಯಬೇಕು.

ಪ್ರಶ್ನೆ: ಕೊನೆಯ ಪ್ರಶ್ನೆ. ನಿಮ್ಮನ್ನು ಇಪ್ಪತ್ತೊಂದು ವರ್ಷಗಳ ಹಿಂದೆ ‘ಅಚಲ’ ಪತ್ರಿಕೆಗಾಗಿ ಸಂದರ್ಶನ ಮಾಡಿದ್ದೆ. ಆ ಸಂದರ್ಭದಲ್ಲಿ ಇನ್ನೂ ಆತಂಕದ ವಾತಾವರಣವಿದ್ದ ಕಾಲ. ಸಂದರ್ಶನದ ವೇಳೆಯಲ್ಲಿ ನಿಮ್ಮ ಪತಿಯೂ ನಮ್ಮ ನಡುವೆ ಉಪಸ್ಥಿತರಿದ್ದರು. ನಾನು ಪ್ರಶ್ನೆ ಕೇಳುವಾಗೆಲ್ಲ ನನಗೆ ಅವರು ‘ಸ್ವಲ್ಪ ನವಿರಾಗಿ ಬರಿ, ಏನೂ ತೊಂದರೆಯಾಗದಂತೆ ಬರಿಯಮ್ಮ’ ಎಂದು ನನ್ನನ್ನು ನಿಯಂತ್ರಿಸುತ್ತಿದ್ದರು. ನಿಮಗೇನೂ ಹೇಳದಿದ್ದರೂ ನೀವೂ ಕೂಡ ಬಿಗುವಿನ ವಾತಾವರಣದಲ್ಲಿಯೇ ಉತ್ತರಿಸುತ್ತಿದ್ದಿರಿ. ಆದರೆ ಈಗ ನೀವು ಆರಾಮಾಗಿ ನಿರ್ಭಿಡೆಯಿಂದ ಮಾತನಾಡುತ್ತಿರುವಿರಿ. ಈ ಬದಲಾವಣೆಯ ಬಗ್ಗೆ ನಿಮಗೇನನ್ನಿಸುತ್ತೆ?

ಉತ್ತರ: ಆರಂಭದಲ್ಲಿದ್ದುದು ಹೆದರಿಕೆಯೋ ಏನೋ ನನಗೆ ಗೊತ್ತಿಲ್ಲ. ಆದರೆ ನನಗೆ ಮಾತನಾಡಿಯೇ ಹೆಚ್ಚು ಗೊತ್ತಿರಲಿಲ್ಲ. ಸ್ವಲ್ಪ ಆತಂಕ ಇದ್ದಿರಬಹುದೇನೋ. ನನ್ನ ಮನೆಯವರು ಎಂದಿಗೂ ನನ್ನ ಅಭಿವ್ಯಕ್ತಿಗೆ ಅಡ್ಡಿ ಬಂದಿಲ್ಲ. ನನ್ನ ಮಕ್ಕಳೂ ಅಷ್ಟೇ. ಈಗಲೂ ಯಾರೂ ನನಗೆ ಸ್ವಾತಂತ್ರ್ಯಹರಣ ಮಾಡಲು ಸಾಧ್ಯವಿಲ್ಲ. ನನ್ನ ಮಕ್ಕಳೂ ನಾ ನಂಬುವ ಮೌಲ್ಯಗಳನ್ನು ಗೌರವಿಸುತ್ತಾರೆ. ನಮ್ಮ ಮನೆಯಲ್ಲಿ ನಾನಾಗಲಿ, ಯಾವ ಹೆಣ್ಣು ಮಕ್ಕಳಾಗಲಿ ಬುರ್ಖಾ ಹಾಕುವುದಿಲ್ಲ.

ಎನ್. ಗಾಯತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ನುಡಿನಮನ/ ಸಾಹಿತ್ಯಕ್ಕೆ ಹೊಸ ಸಂವೇದನೆ ಪರಿಚಯಿಸಿದ ದಿಟ್ಟ ಲೇಖಕಿ – ಎನ್. ಗಾಯತ್ರಿ

  • Shadakshary

    prakatisiddakkagi Dhanyavadagalu

    Reply

Leave a Reply

Your email address will not be published. Required fields are marked *