ನುಡಿನಮನ/ ಶಿಲ್ಪಕಲೆಯ ಚಿನ್ನದಂಥ ಕಲಾವಿದೆ ಕನಕಾ ಮೂರ್ತಿ- ತಿರು ಶ್ರೀಧರ

ಶಿಲ್ಪಕಲೆಯಲ್ಲಿ ಕಲಾವಿದನ ಕೌಶಲದಿಂದ ಹೆಣ್ಣು ಲಕ್ಷಾಂತರ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾಳೆ; ಆದರೆ ಅವಳೇ ಶಿಲ್ಪ ಕೆತ್ತುವ ಕಲಾವಿದೆಯಾಗುವುದು ಅಂದಿಗೂ ಇಂದಿಗೂ ಅಪರೂಪದ ಸಂಗತಿ. ಅಂಥ ಹೆಜ್ಜೆ ಮೂಡದ ಹಾದಿಯಲ್ಲಿ ದಿಟ್ಟತನದಿಂದ ನಡೆದವರು ಪ್ರತಿಭಾವಂತ ಶಿಲ್ಪ ಕಲಾವಿದೆ ಕನಕಾ ಮೂರ್ತಿ. ಅವರಿವರ ಟೀಕೆಟಿಪ್ಪಣಿಗಳನ್ನು ಲೆಕ್ಕಿಸದೆ ಶ್ರದ್ಧೆಯಿಂದ ಶಿಲ್ಪಕಲೆಯನ್ನು ಅಭ್ಯಾಸ ಮಾಡಿದ ಅವರು, ದೇಶದ ಪ್ರಸಿದ್ಧ ಶಿಲ್ಪಿಗಳಲ್ಲಿ ಒಬ್ಬರಾಗಿ ಪ್ರಸಿದ್ಧಿ ಪಡೆದರು. ಕಲೆಯನ್ನು ಅನ್ವೇಷಿಸುವ ಕಿರಿಯರಿಗೆ ಪ್ರೇರಕಶಕ್ತಿಯಾದರು. ಇಂದು ಕೊರೋನ ಕಸಿದುಕೊಂಡ ಈ ಅದ್ಭುತ ಕಲಾವಿದೆಗೆ ಗೌರವದ ನುಡಿನಮನ.

ಕನ್ನಡ ನಾಡಿನ ಮಹಾನ್ ಶಿಲ್ಪಿಗಳಲ್ಲಿ ಒಬ್ಬರಾಗಿದ್ದ ಕನಕಾ ಮೂರ್ತಿ ಇಂದು (13.05.2021) ನಿಧನರಾಗಿದ್ದಾರೆ.

ಕನಕಾ ಮೂರ್ತಿ ಅವರು 1942ರ ಡಿಸೆಂಬರ್ 2ರಂದು ಟಿ. ನರಸೀಪುರದಲ್ಲಿ ಜನಿಸಿದರು. ಅವರು ಪಡೆದದ್ದು ಬಿ.ಎಸ್‍ಸಿ ಪದವಿ. 1965ರಲ್ಲಿ ಮೈಸೂರಿನ ದೇವಾಲಯವೊಂದಕ್ಕೆ ಭೇಟಿ ನೀಡಿದಾಗ ಶಿಲ್ಪಕಲೆ ಅವರನ್ನು ಸೆಳೆಯಿತು. ಮಹಿಳೆಯರಿಗೆ ಶಿಲ್ಪಕಲೆ ಸಾಧ್ಯವಿಲ್ಲ ಎಂಬ ಸಾಮಾನ್ಯವಾದ ನಂಬಿಕೆ ಇದ್ದ ಕಾಲದಲ್ಲಿ ತಂದೆಯವರಿಂದ ಕಷ್ಟಪಟ್ಟು ಅನುಮತಿ ಪಡೆದು ಮಹಾನ್ ಶಿಲ್ಪಿ ದೇವಲಕುಂದ ವಾದಿರಾಜ್ ಅವರಲ್ಲಿ ಕಲಿಕೆ ಆರಂಭಿಸಿದರು. ಮೊದಲ ದಿನಗಳಲ್ಲಿ ಉಳಿ ಸುತ್ತಿಗೆ ಹಿಡಿದು ಕೆಲಸ ಮಾಡುವಾಗ ಕೈಯಲ್ಲಿ ರಕ್ತ ಹರಿದು ‘ಇನ್ನು ಇವರ ಕೈಲಾದಂತೆಯೇ!’ ಎಂದು ಎಲ್ಲರೂ ಭಾವಿಸಿದ್ದಾಗ ಗುರುಗಳೇ ಅಚ್ಚರಿಪಡುವಂತಹ ಸಾಧನೆಯನ್ನು ತೋರಿದರು. 1993ರವರೆಗೆ ಗುರುಗಳು ಜೀವಂತ ಇರುವವರೆಗೆ ನಿರಂತರ ಅವರ ಬಳಿ ಕಲಿಕೆ ನಡೆಸಿದರು.

ಅವರೊಮ್ಮೆ ನುಡಿದಿದ್ದರು: “ಹೆಣ್ಮಕ್ಕಳು ಶಿಲ್ಪಕಲೆ ಅಭ್ಯಸಿಸುವುದು ಎನ್ನುವಾಗ ಸಮಾಜ ವಿಚಿತ್ರವಾಗಿ ನೋಡುತ್ತದೆ ನಿಜ. ಆದರೆ ನಾನು ಈ ಯಾವುದನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ನನಗೆ ಅಮ್ಮನ ಬೆಂಬಲವಿತ್ತು. ನಾನು ಸಮಾಜದ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ ನನ್ನ ಗುರಿಯನ್ನು ಬೆನ್ನಟ್ಟಿದೆ. ಯಾಕೆಂದರೆ ನಾವು ಬದುಕುತ್ತಿರುವುದು ನಮಗೋಸ್ಕರ!”

ಒಮ್ಮೆ ಬಾದಾಮಿಯಲ್ಲಿ 15 ದಿನಗಳ ಶಿಲ್ಪಕಲಾ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರಾರ್ಥಿಗಳಿಗೆ ಸೂಕ್ತ ಕಲ್ಲನ್ನು ಆಯ್ಕೆಮಾಡಿಕೊಟ್ಟು ಮಾರ್ಕ್ – ಗುರುತು ಮಾಡಿಕೊಡುವುದು ಕನಕಾ ಮೂರ್ತಿ ಅವರ ಕೆಲಸವಾಗಿತ್ತು. ಅದಕ್ಕಾಗಿ ಕಲ್ಲುಗಳನ್ನು ಆಯ್ದು ತರಲಾಗಿತ್ತು. ಇವರ ಸೂಚನೆಯಂತೆ ಎಲ್ಲರಿಗೂ ಒಂದೊಂದು ಕಲ್ಲನ್ನು ಕೊಟ್ಟ ಶಿಬಿರಾರ್ಥಿಯೊಬ್ಬ “ಮೇಡಂ ನಿಮಗೆ ಯಾವುದು ಕೊಡಲಿ?” ಎಂದು ಪುಟ್ಟ ಕಲ್ಲೊಂದನ್ನು ದೃಷ್ಟಿಸಿದ. ಅವನ ಮಾತು, ನೋಟದ ಅಂತರಾರ್ಥ ಗ್ರಹಿಸಿದ ಕನಕಾಮೂರ್ತಿ ಅವರು ಅಲ್ಲಿದ್ದ ಅತಿ ದೊಡ್ಡ ಕಲ್ಲು ತೋರಿಸಿ “ಅದನ್ನು ನನಗೆ ಬಿಡು” ಎಂದರು. ಎಲ್ಲರೂ ಹುಬ್ಬೇರಿಸಿದರು. ಓರ್ವ ಹೆಣ್ಣುಮಗಳಿಗೆ ಇದು ಸಾಧ್ಯವೇ? ಎಂಬಂತಿತ್ತು ಅವರ ನೋಟ. ಮಾರನೆಯ ದಿನದಿಂದಲೇ ಅವರ ಕೆಲಸ ಆರಂಭವಾಯಿತು. ಕೆಲಸದ ರಭಸವನ್ನು ನೋಡಿ ಆಶ್ಚರ್ಯಚಕಿತರಾದ ಶಿಬಿರಾರ್ಥಿಗಳು ತಮ್ಮ ಕೆಲಸ ಬಿಟ್ಟು ಇವರ ಸುತ್ತ ಸೇರಿದರು. ಕೆಲವೇ ದಿನಗಳಲ್ಲಿ ಅಲ್ಲಿ ಅದ್ಭುತ ಶಿಲ್ಪವೊಂದು ಮೈದಳೆದಿತ್ತು.

ಕನಕಾ ಮೂರ್ತಿ ಅವರು ಗುರುಗಳಾದ ದೇವಲಕುಂದ ವಾದಿರಾಜರ ಜೊತೆ ಇಂಗ್ಲೆಂಡ್ ಮತ್ತು ರಷ್ಯಾ ಪ್ರವಾಸದಲ್ಲಿ ಭಾಗಿಯಾಗಿದ್ದರು. ಲಾಲ್‍ಬಾಗ್ ಪಶ್ಚಿಮ ದ್ವಾರದಲ್ಲಿ ಇರುವ ಮಹಾಕವಿ ಕುವೆಂಪು ಪ್ರತಿಮೆ, ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಇರುವ ರೈಟ್ ಸಹೋದರರ ಪ್ರತಿಮೆ, ಸತ್ಯಸಾಯಿ ಆಸ್ಪತ್ರೆ ವಿಷ್ಣು ಪ್ರತಿಮೆ; ಗಂಗೂಬಾಯಿ ಹಾನಗಲ್, ಭೀಮಸೇನ ಜೋಷಿ, ಮಲ್ಲಿಕಾರ್ಜುನ ಮನ್ಸೂರ್, ಬೇಂದ್ರೆ, ಮತ್ತೂರು ಕೃಷ್ಣಮೂರ್ತಿ ಪ್ರತಿಮೆಗಳು; ಬಾಣಸವಾಡಿಯಲ್ಲಿ ಹನ್ನೊಂದು ಅಡಿ ಆಂಜನೇಯ, ದೆಹಲಿ ಮ್ಯೂಸಿಯಮ್ನಲ್ಲಿ ವಾಗ್ದೇವಿ ಮುಂತಾದ ಇನ್ನೂರಕ್ಕೂ ಹೆಚ್ಚು ಪ್ರತಿಮೆಗಳು ಕನಕಾಮೂರ್ತಿ ಅವರ ಅಗಾಧ ಪ್ರತಿಭೆಗೆ ಸಾಕ್ಷಿಯಾಗಿ ನಿಂತಿವೆ.

ಕನಕಾಮೂರ್ತಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಶಿಲ್ಪ ಅಕಾಡಮಿ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ, ಜಕಣಾಚಾರಿ ಪ್ರಶಸ್ತಿ, ಕರ್ನಾಟಕ ಶಿಲ್ಪ ಅಕಾಡಮಿ ಫೆಲೋಶಿಪ್ ಮುಂತಾದ ಅನೇಕ ಗೌರವಗಳು ಸಂದಿದ್ದವು.

ವಯಸ್ಸಿನ ಹಿರಿತನದಲ್ಲಿ ಸಾವು ಎಂಬುದು ಅನಿವಾರ್ಯವಾದರೂ ಈ ಕರೋನಾ ಎಂಬ ಬಿರುಗಾಳಿ ನಮ್ಮ ಜೀವನದ ಸಾಂಸ್ಕೃತಿಕ ಆಧಾರ ಸ್ತಂಭಗಳನ್ನು ಅಲುಗಾಡಿಸಿ ಉರುಳಿಸಿ ಹೋಗುತ್ತಿರುವುದು ನಮ್ಮ ಬದುಕಿನ ಕಾಲಘಟ್ಟದ ದೌರ್ಭಾಗ್ಯ. ಇಂದು (13ನೇ ಮೇ 2021ರಂದು) ನಮ್ಮನ್ನಗಲಿದ
ಮಹಾನ್ ಶಿಲ್ಪಿ ಕನಕಾಮೂರ್ತಿ ಎಂಬ ಚೇತನಕ್ಕೆ ಗೌರವದ ನಮನ. (ಮೂಲ: ಫೇಸ್ ಬುಕ್ ಮತ್ತು ಕನ್ನಡ ಸಂಪದ. www.sallapa.com)

ತಿರು ಶ್ರೀಧರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *