ನುಡಿನಮನ / ಲೇಖನಿಯನ್ನು ಖಡ್ಗದಂತೆ ಎತ್ತಿ ಹಿಡಿದ ಸುಗತ ಕುಮಾರಿ

ಕೋಣೆಯೊಳಗೆ ಕುಳಿತು ಕವಿತೆ ಬರೆಯುವುದಷ್ಟೇ ಅಲ್ಲ, ಜಲವಿದ್ಯುತ್ ಯೋಜನೆಯನ್ನು ವಿರೋಧಿಸಿ ದಟ್ಟ ಹಸಿರು ಕಾಡನ್ನು ರಕ್ಷಿಸುವುದು, ಸರ್ಕಾರಿ ಕೇಂದ್ರದೊಳಗೆ ನರಳುವ ರೋಗಿಗಳ ಸ್ಥಿತಿ ಸುಧಾರಿಸುವುದು ಕೂಡ ಅತ್ಯಗತ್ಯವಾಗಿ ಮಾಡಬೇಕಾದ ಕೆಲಸ ಎಂದು ನಂಬಿದವರು, ಹಾಗೆ ಬಾಳಿ ಬದುಕಿದವರು ಮಲಯಾಳಂ ಲೇಖಕಿ ಸುಗತ ಕುಮಾರಿ. ಅವರ ಕ್ರಿಯಾಶಕ್ತಿ ಪದಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ, ಅದಕ್ಕೆ ಇತಿಮಿತಿಗಳಿರಲಿಲ್ಲ. ಯುವ ಬರಹಗಾರರಿಗೆ ಅವರು ಸೃಷ್ಟಿಶೀಲತೆಗೂ ಮಾದರಿ, ಸಾಮಾಜಿಕ ಸಂವೇದನೆಗೂ ಮಾದರಿ. ಸಾಮಾಜಿಕ ಜವಾಬ್ದಾರಿಯ ಉಜ್ವಲ ನಿದರ್ಶನದಂತೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅವರು ಕೆಂಡದಂತೆ ಉರಿದರು.

“ಲೇಖಕಿಯರು ಪ್ರತಿಭಟನೆ, ಮುಷ್ಕರ, ಹೋರಾಟ ಇವನ್ನೆಲ್ಲ ಬಿಟ್ಟುಬಿಡಬೇಕು. ಅದನ್ನೆಲ್ಲಾ ಮಾಡಲು ಬೇರೆ ಜನ ಇದ್ದಾರಲ್ಲಾ? ಲೇಖಕಿಯರ ಕೆಲಸ ಏನಿದ್ದರೂ ಬರೆಯುವುದಷ್ಟೆ” ಎಂದು ಈಗಲೂ ನಮ್ಮ ಕನ್ನಡದ ಹಲವಾರು ಲೇಖಕಿಯರು ಬಹಿರಂಗವಾಗಿ ಹೇಳುವುದುಂಟು. ಕನ್ನಡ ಮಾತ್ರವಲ್ಲ ಅನೇಕ ಭಾರತೀಯ ಭಾಷೆಗಳ ಲೇಖಕಿಯರು ಮತ್ತು ಲೇಖಕರು ಸಾಹಿತ್ಯ ಮಾತ್ರ ತಮ್ಮ ಗುರಿ, ಹಾಗೆ ನಂಬುವುದೇ ತಮ್ಮ ಹೆಗ್ಗಳಿಕೆ ಎಂದು ಭಾವಿಸುವುದುಂಟು. ಆದರೆ ವ್ಯವಸ್ಥೆಯ, ಸರ್ಕಾರದ, ಅಧಿಕಾರ ವಲಯದ ಮನ್ನಣೆ ಪಡೆಯಲು ಏನನ್ನು ಬೇಕಾದರೂ ಅನುಸರಿಸುವುದು, ಕಸರತ್ತು ಮಾಡುವುದು ಮಾತ್ರ ಅವರು ಒಪ್ಪಲಿ ಬಿಡಲಿ, ಅವರ ಸಾಹಿತ್ಯ ರಚನೆಗಿಂತ ಭಿನ್ನವಾದ ಕೆಲಸ. ಆದರೆ ಮಲಯಾಳಂ ಭಾಷೆಯ ಲೇಖಕಿ ಸುಗತ ಕುಮಾರಿ ಧೈರ್ಯವಾಗಿ “ನನ್ನ ಲೇಖನಿಯೇ ನನ್ನ ಏಕೈಕ ಖಡ್ಗ” ಎಂದು ಘಂಟಾಘೋಷವಾಗಿ ಹೇಳಿದರು. ಹಾಗೆಂದು ಮನೆಯಲ್ಲೇ ಕೂರದೆ ಪರಿಸರ ನಾಶದ ವಿರುದ್ಧ, ಸಾಮಾಜಿಕ ಅನ್ಯಾಯಗಳ ವಿರುದ್ಧ ಗಂಭೀರ ಹೋರಾಟಗಳನ್ನು ಕಟ್ಟಿ ಬೆಳೆಸಿದರು. ಕೊನೆಯ ದಿನಗಳಲ್ಲೂ ಗಾಲಿ ಕುರ್ಚಿಯಲ್ಲಿ ಕುಳಿತೇ ಪ್ರತಿಭಟನೆಗಳಲ್ಲಿ ಭಾಗವಹಿಸಿದ ಅವರು ತಮ್ಮ 84 ನೇ ವಯಸ್ಸಿನಲ್ಲಿ ಇತ್ತೀಚೆಗೆ ನಿಧನರಾದರು.

ಕೇರಳದ ದಟ್ಟ ಹಸಿರುಕಾಡುಗಳಲ್ಲಿ ಜಲವಿದ್ಯುತ್ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಾಗ ಸುಗತ ಕುಮಾರಿ ಮತ್ತು ಇನ್ನಿತರ ಕೆಲವು ಲೇಖಕರು ಕವಿತೆಗಳು ಮತ್ತು ಲೇಖನಗಳನ್ನು ಬರೆದು, ಮರಗಳ ನಾಶ ಆಗಕೂಡದು ಎಂದು `ಸೈಲೆಂಟ್ ವ್ಯಾಲಿ ಸಂರಕ್ಷಣಾ ಸಮಿತಿ’ ಕಟ್ಟಿ ಚಳವಳಿ ಆರಂಭಿಸಿದರು. ಹಸಿರು ಮೌನ ಕಣಿವೆಯನ್ನು ಉಳಿಸುವ ಆಂದೋಲನ ದೇಶವಿದೇಶಗಳ ಗಮನ ಸೆಳೆದು, ಯೋಜನೆಯನ್ನು ರೂಪಿಸಿದ ರಾಜಕಾರಣಿಗಳು ಇನ್ನಿಲ್ಲದ ಅಪಪ್ರಚಾರ ಮಾಡಿದರು. ಯಾವುದಕ್ಕೂ ಜಗ್ಗದ ಚಳವಳಿಕಾರರ ಛಲದಿಂದ ಯೋಜನೆಯನ್ನು ಕೊನೆಗೂ ಕೈಬಿಡಲಾಯಿತು. ಈ ಸಂದರ್ಭದಲ್ಲಿ ಸುಗತ ಕುಮಾರಿ ಬರೆದ ಒಂದು ಕವಿತೆ, ಪರಿಸರವಾದಿಗಳ ಪ್ರಚಾರ ಗೀತೆಯಾಗಿ ಎಲ್ಲರ ಬಾಯಲ್ಲಿ ಉಳಿಯಿತು ಎಂದು ಅವರನ್ನು ಬಲ್ಲ ಪತ್ರಕರ್ತೆ ಗೀತಾ ಅರವಮುದನ್ ಹೇಳುತ್ತಾರೆ.

ಪರಿಸರ ಸಂರಕ್ಷಣೆ ಮಾತ್ರವಲ್ಲ, ಸಮಾಜದ ಅಂಚಿನಲ್ಲಿರುವ ಜನರ, ಅಲ್ಪಸಂಖ್ಯಾತರ, ಮತ್ತು ಮುಖ್ಯವಾಗಿ ಮಹಿಳೆಯರ ಹಕ್ಕುಗಳ ರಕ್ಷಣೆಗೆ ಧಾವಿಸಿ ಬೆಂಬಲ ವ್ಯಕ್ತಪಡಿಸುವುದು, ಅಗತ್ಯವಿದ್ದರೆ ಪ್ರತಿಭಟನಾ ಚಳವಳಿ ಕಟ್ಟುವುದು ಸುಗತ ಕುಮಾರಿ ಅವರ ಜೀವನದ ಬಹುಮುಖ್ಯ ಕಾರ್ಯವಾಗಿತ್ತು. ಒಮ್ಮೆ ಒಬ್ಬ ಮುಸ್ಲಿಂ ಮಹಿಳೆಗೆ 101 ಚಾಟಿ ಏಟುಗಳನ್ನು ಹೊಡೆಯಬೇಕು ಎಂದು ಜಮಾತ್ ಶಿಕ್ಷೆ ವಿಧಿಸಿದಾಗ, ಸುಗತ ಕುಮಾರಿ ದಿಟ್ಟತನದಿಂದ ಅದನ್ನು ಪ್ರತಿಭಟಿಸಿದರು. ಶರಿಯತ್ ಅನ್ನು ಮಹಿಳೆಗೆ ಸಂಬಂಧಿಸಿದಂತೆ ಮಾತ್ರ ಏಕೆ ಜಾರಿ ಮಾಡುತ್ತೀರಿ ಎಂದು ಪುರುಷರನ್ನು ಪ್ರಶ್ನಿಸಿದರು.

ಗ್ರಾಹಕರ ಹಕ್ಕುಗಳ ಚಳವಳಿ, ಮಕ್ಕಳ ಹಕ್ಕುಗಳ ರಕ್ಷಣೆ, ಮರಗಳ ಪೋಷಣೆ, ಮಕ್ಕಳ ಸಾಹಿತ್ಯ, ಪ್ರಗತಿಪರ ಚಲನಚಿತ್ರ ಚಳವಳಿ – ಹೀಗೆ ಸುಗತ ಕುಮಾರಿ ಅವರ ಕಾರ್ಯರಂಗಗಳು ಒಂದೆರಡಲ್ಲ. ಸಾಮಾಜಿಕ, ಸಾಂಸ್ಕøತಿಕ ರಂಗದ ಹಲವು ಸಮಿತಿಗಳು, ಸರ್ಕಾರದ ಮಂಡಲಿಗಳು, ಅನೇಕ ಸಂಘ ಸಂಸ್ಥೆಗಳು ಎಲ್ಲದರಲ್ಲೂ ಸದಸ್ಯೆ ಅಥವಾ ಅಧ್ಯಕ್ಷೆ ಆಗಿದ್ದ ಅವರು ಎಲ್ಲ ಕಡೆಯೂ ಮಾನವೀಯ ಮೌಲ್ಯಗಳು ಮತ್ತು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ಪ್ರಯತ್ನಿಸಿದರು. ಸಮಾಜದ ಇಷ್ಟೊಂದು ಚಟುವಟಿಕೆಗಳಲ್ಲಿ ಉತ್ಸಾಹ, ಬದ್ಧತೆಯಿಂದ ಭಾಗವಹಿಸುವ ಅವರಂಥ ಸೃಜನಶೀಲ ಬರಹಗಾರ್ತಿಯರು ಎಲ್ಲ ರಾಜ್ಯಗಳಲ್ಲೂ ವಿರಳ ಎಂದೇ ಗುರುತಿಸಲಾಗಿತ್ತು. ಸುಗತ ಕುಮಾರಿ ಅವರ ಸಾಮಾಜಿಕ ಬದ್ಧತೆ ಮತ್ತು ಕ್ರಿಯಾಶೀಲತೆ ನಮ್ಮ ಕಾಲದ ಯುವಜನರಿಗೆ ನಿಜಕ್ಕೂ ಪ್ರೇರಣೆ ನೀಡುವಂಥದು. (ವಿವಿಧ ಮೂಲಗಳಿಂದ ಸಂಗ್ರಹ)
ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *