ನುಡಿನಮನ/ ರಂಗಭೂಮಿಯ ಮಧುರ ಗೀತೆ ಸುಭದ್ರಮ್ಮ ಮನ್ಸೂರು

ಜಗತ್ತಿನಲ್ಲಿ ಯಾವುದೇ ದೇಶಪ್ರದೇಶದ ಸಾಂಸ್ಕøತಿಕ ಚರಿತ್ರೆ ಸಂಪೂರ್ಣವಾಗಿ “ಅವನ” ಕಥಾನಕವೇ ಆಗಿರುವುದು ಸಾಮಾನ್ಯ ಸಂಗತಿಯಾಗಿದ್ದು, ಅದರಲ್ಲಿ “ಅವಳು” ಕಾಣುವುದು ಅಪರೂಪ. ಪುರುಷ ಅತಿರಥ ಮಹಾರಥರ ವೇಗದ ಜೊತೆ ಮಹಿಳೆ ಬರಿಗಾಲಿನ ನಡಿಗೆಯಲ್ಲೇ ಸ್ಪರ್ಧಿಸಬೇಕು. ಆದರೆ ಎಲ್ಲ ಅರ್ಥಗಳಲ್ಲಿ ಅವಳ ಹೆಜ್ಜೆಗುರುತುಗಳು ಅಲ್ಲಿ ದಟ್ಟವಾಗಿ ಉಳಿದಿವೆ ಎನ್ನುವುದು ಬೇರೆ ಮಾತು. ಕನ್ನಡದ ಪ್ರಸಿದ್ಧ ರಂಗಕಲಾವಿದೆ ಸುಭದ್ರಮ್ಮ ಮನ್ಸೂರು ಸದ್ದಿಲ್ಲದ ಹೋರಾಟಕ್ಕೆ ಒಂದು ಅನುಪಮ ಸಂಕೇತ. ಅವರ ನಿರ್ಗಮನದೊಂದಿಗೆ ಕನ್ನಡ ರಂಗಭೂಮಿಯ ಒಂದು ಉಜ್ವಲ ಅಧ್ಯಾಯವೂ ಮುಗಿದಿದೆ.

ಅಲ್ಲಲ್ಲಿ ಅನಿವಾರ್ಯವಾಗಿ ಆಡಳಿತ ನಡೆಸುವ ರಾಣಿಯರು, ಯುದ್ಧಕ್ಕೆ ಕಾರಣರಾದ ಸುಂದರಿಯರು, ಸ್ಮಾರಕಗಳಿಗೆ ನೆಪವಾದ ಮಡದಿಯರು ಇಂಥವರನ್ನು ಬಿಟ್ಟರೆ, ಇತಿಹಾಸದಲ್ಲಿ ಹೆಣ್ಣಿನ ಶಕ್ತಿ, ಧೈರ್ಯಗಳನ್ನು ಸ್ತುತಿಸುವ ಅಧ್ಯಾಯಗಳು ಬಹಳ ಕಡಿಮೆ ಎಂದೇ ಹೇಳಬೇಕು. ಚರಿತ್ರೆ ಅವರನ್ನು ಎಂದಿಗೂ ಅಂತಃಪುರ ಮತ್ತು ಅಡುಗೆಮನೆಯ ಒಳಗೇ ಇರಿಸಿದೆ. ಯಾವುದೇ ನೆಲದ ಸಾಂಸ್ಕøತಿಕ ಚರಿತ್ರೆ ಇದಕ್ಕಿಂತ ಭಿನ್ನವಾಗಿ ಇರುವುದಿಲ್ಲ. ಸಂಸ್ಕøತಿ ಮತ್ತು ನಾಗರಿಕತೆಯ ಬೆಳವಣಿಗೆಯಲ್ಲಿ, ಕೃಷಿ ಮತ್ತು ಆರ್ಥಿಕ ವ್ಯವಸ್ಥೆಯ ನಿರ್ಮಾಣದಲ್ಲಿ ಹೆಣ್ಣಿನ ಬೆವರೂ ಸೇರಿರುತ್ತದೆ. ಆದರೆ ಅದನ್ನು ಗುರುತಿಸದಿರುವುದೇ ಮನುಷ್ಯ ಚರಿತ್ರೆಯ ದೊಡ್ಡ ಲಿಂಗ ರಾಜಕಾರಣ. ಅದನ್ನು ಎದುರಿಸಿ ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಾಪಾಡಿಕೊಳ್ಳುವುದು ಹೆಣ್ಣಿನ ಪಾಲಿನ ನಿರಂತರ ಹೋರಾಟ. ಇದಕ್ಕೆ ಅವಳು ಹೆದರಿಕೊಳ್ಳಲಿಲ್ಲ ಎನ್ನುವುದೇ ಎಲ್ಲ ಕಾಲದ ಹೆಗ್ಗುರುತು.

ನಮ್ಮ ಸಮಾಜದ ಬಹುಪಾಲು ಜನರಂತೆ ಸುಭದ್ರಮ್ಮ ಮನ್ಸೂರು ಅವರಿಗೂ ಬದುಕಿನಲ್ಲಿ ಆಯ್ಕೆಗಳನ್ನು ಕುರಿತು ಯೋಚಿಸುವ ಅವಕಾಶ ಇರಲಿಲ್ಲ. ಅವರ ತಾಯಿ ಅನಿವಾರ್ಯ ಪರಿಸ್ಥಿತಿಯಲ್ಲಿ ಮಗಳನ್ನು ಬಾಲನಟಿಯಾಗಿ ರಂಗದ ಮೇಲೆ ತಂದು ನಿಲ್ಲಿಸಿದರು. ಅಲ್ಲಿಂದಾಚೆಗೆ ಸುಭದ್ರಮ್ಮ ಸೂತ್ರಕ್ಕೆ ಕುಣಿಯುವ ಗೊಂಬೆಯಾಗದೆ, ಅದನ್ನೇ ವೃತ್ತಿಪ್ರವೃತ್ತಿಗಳ ಸಾಧನೆಯ ವೇದಿಕೆಯನ್ನಾಗಿ ಮಾಡಿಕೊಂಡರು. ರಂಗಭೂಮಿಯ ವೃತ್ತಿಕಲಾವಿದೆಯಾಗಿ ಅವರಷ್ಟು ಯಶಸ್ಸು ಮತ್ತು ಜನಪ್ರಿಯತೆ ಪಡೆದವರು ಬಹಳ ಅಪರೂಪ. ಆರು ದಶಕಗಳನ್ನೂ ಮೀರಿದ ಅವರ ರಂಗಪಯಣದ ವಿಶೇಷಗಳಲ್ಲಿ ಒಂದೊಂದರ ವಿವರವೂ ಅವರ ಬಗ್ಗೆ ಗೌರವವನ್ನು ಹೆಚ್ಚಿಸುತ್ತದೆ.

ಸುಭದ್ರಮ್ಮ ಬಾಲ್ಯದಲ್ಲಿ ಶಾಲೆಯಲ್ಲಿ ಹೆಚ್ಚು ಕಲಿಯಲು ಆಗಲಿಲ್ಲ; ಆದರೆ ಬಾಲನಟಿಯಾಗಿ ಬಂದ ಅವರು ಬೆಳೆಯುತ್ತಾ ರಂಗಭೂಮಿಯನ್ನೇ ಶಾಲೆ ಕಾಲೇಜು ವಿಶ್ವವಿದ್ಯಾಲಯವನ್ನಾಗಿ ಮಾಡಿಕೊಂಡರು. ಶಾಸ್ತ್ರೀಯ ಸಂಗೀತ ಕಲಿಯಲು ಅವರು ತೋರಿದ ಆಸಕ್ತಿ ಇದಕ್ಕೆ ಸಾಕ್ಷಿ. ಹಲವಾರು ರಾಗಗಳನ್ನು ಕಲಿಯುವ ಮೂಲಕ ರಂಗಗೀತೆಗಳಿಗೆ ಜೀವಭಾವ ತುಂಬುವ ಅವರ ಹಂಬಲ ಯಾರೂ ಮೆಚ್ಚುವಂಥದ್ದು. ಶುದ್ಧ ಭಾಷೆ, ಧ್ವನಿಯ ಏರಿಳಿತ, ಸಂಭಾಷಣೆ ಒಪ್ಪಿಸುವ ಶೈಲಿ ಹೀಗೆ ಎಲ್ಲವನ್ನೂ ಕಲಿತ ಅವರು ಇಡೀ ನಾಟಕವನ್ನು ಆವಾಹಿಸಿಕೊಂಡರು. ಅಭಿನಯದಲ್ಲಿ ಪರಿಪಕ್ವತೆಯ ಕಡೆಗೆ ಸಾಗುವ ಅವರ ಸತತ ಪ್ರಯತ್ನಗಳನ್ನು ಪ್ರತಿಯೊಬ್ಬ ರಂಗಾಭ್ಯಾಸಿಯೂ ಪಠ್ಯದಂತೆ ಓದಬೇಕು. ಚೆನ್ನಾಗಿ ಅಭಿನಯಿಸುವವರೆಲ್ಲ ಚೆನ್ನಾಗಿ ಹಾಡುವುದಿಲ್ಲ, ಹಾಗೆಯೇ ಚೆನ್ನಾಗಿ ಹಾಡುವವರೆಲ್ಲ ಚೆನ್ನಾಗಿ ಅಭಿನಯಿಸುವುದಿಲ್ಲ- ಆದರೆ ಸುಭದ್ರಮ್ಮ ಮನ್ಸೂರು ಎರಡರಲ್ಲೂ ಪರಿಣತಿ ಸಾಧಿಸಿದರು.

ಸುಭದ್ರಮ್ಮ ಅವರ ಸಾಧನೆಯನ್ನು ರಂಗಭೂಮಿಯ ಚರಿತ್ರೆ ಮಾತ್ರವಲ್ಲ, ಸಾಮಾಜಿಕ ಚರಿತ್ರೆಯ ಚೌಕಟ್ಟಿನೊಳಗೂ ಇಟ್ಟು ನಿರೂಪಿಸ ಬೇಕು. ಕಲಾವಿದರನ್ನು ಕುರಿತು ಬರೆಯುವಾಗ ಅದು ಕೇವಲ ವಿವರಗಳ ನಿರೂಪಣೆ ಆಗದೆ, ಸಾಮಾಜಿಕ ವ್ಯವಸ್ಥೆಯ ವ್ಯಾಖ್ಯಾನವೂ ಆಗಬೇಕಾದುದು ಅನಿವಾರ್ಯ. ಏಕೆಂದರೆ ಸುಭದ್ರಮ್ಮ ಅನೇಕ ಬಗೆಯ ಸಾಮಾಜಿಕ ಅನನುಕೂಲಗಳ ಬೆಂಕಿಯಲ್ಲಿ ಅರಳಿದ ಸಾಧನೆಯ ಹೂವು. ಎಲ್ಲ ಕಟ್ಟುಪಾಡುಗಳನ್ನು ಮೀರಿ ಬೆಳೆದ ಅವರು ಕಲಾವಿದೆಯಾಗಿ ಪಡೆದ ಯಶಸ್ಸು, ನಮ್ಮ ಸಾಮಾಜಿಕ ಪರಂಪರೆ ಪರಿಸರದ ಕಾರಣದಿಂದಲೇ ಹೆಚ್ಚು ಮೌಲ್ಯವನ್ನು ಗಳಿಸುತ್ತದೆ. ಗುಡಿಹಳ್ಳಿ ನಾಗರಾಜ ಸುಭದ್ರಮ್ಮ ಅವರ ಬಗ್ಗೆ ಒಂದು ಪುಸ್ತಕ ಬರೆದಿದ್ದಾರೆ. ಅಲಕ್ಷಿತ ಸಮುದಾಯಗಳಿಂದ ಬಂದ ರಂಗಕಲಾವಿದೆಯರ ಜೀವನ ಸಾಧನೆಗಳನ್ನು ದಾಖಲಿಸುವುದು ನಮ್ಮ ಸಾಮಾಜಿಕ ಕೈಂಕರ್ಯ.

  • ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *