ನುಡಿನಮನ / ಭಿನ್ನ ಸ್ತ್ರೀ ಮಾದರಿಗಳನ್ನು ಮುಂದಿಟ್ಟ ಕಥೆಗಾರ್ತಿ ತುಳಸಿ – ಗಿರಿಜಾ ಶಾಸ್ತ್ರಿ
ಕಳೆದ ವರ್ಷ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ‘ಮಹಾರಾಷ್ಟ್ರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಧೇರಿಯ ಸಭಾಗೃಹವೊಂದರಲ್ಲಿ ನಾನು ತುಳಸಿ ಮತ್ತು ಮಿತ್ರಾ ಅಕ್ಕಪಕ್ಕದಲ್ಲಿ ಕುಳಿತು ಸಾಹಿತ್ಯ, ಸಂಸಾರ ಏನೇನೋ ಮಾತನಾಡಿದ್ದೆವು. ಕವಿಗೋಷ್ಠಿಯ ವೇದಿಕೆಯನ್ನು ಹಂಚಿಕೊಂಡಿದ್ದೆವು. ಅದೇ ಕೊನೆ. ಆಮೇಲೆ ನಾನು ತುಳಸಿ ಅವರನ್ನು ನೋಡಲೇ ಇಲ್ಲ.
ತುಳಸೀ ಕ್ಯಾನ್ಸರ್‍ನಂತಹ ಮಹಾಮಾರಿಗೆ ತುತ್ತಾಗಿದ್ದಾರೆಂದು ಅವರು ಸಾಯುವ ಮುಂಚಿನ ಎರಡು ದಿನಗಳವರೆಗೂ ನನಗೆ ತಿಳಿದಿರಲೇ ಇಲ್ಲ. ಸ್ಪಾರೋದ ನಿರ್ದೇಶಕಿ ಸಿ.ಎಸ್. ಲಕ್ಷ್ಮಿ `ನಿಮಗೆಲ್ಲಾ ಗೊತ್ತಿದ್ದರೂ ನನಗೆ ಒಂದು ಮಾತು ಹೇಳಲಿಲ್ಲವಲ್ಲಾ?’ ಎಂದು ನೋವಿನ ಸಾಲುಗಳ ಮೆಸೇಜ್ ಮಾಡಿದ್ದರು. ನಮಗೆ ನೋವಾಗಬಾರದು ಎಂಬ ಉದ್ದೇಶದಿಂದ ಅವರ ಅನಾರೋಗ್ಯದ ವಿಷಯವನ್ನು ಯಾರಿಗೂ ಹೇಳಬಾರದು ಎಂಬುದು ಸ್ವತಃ ತುಳಸಿಯವರದೇ ಅಪೇಕ್ಷೆಯಾಗಿತ್ತಂತೆ.
ಇತ್ತೀಚೆಗೆ ತುಳಸಿ ಅವರು ಮಗನ ಜೊತೆ ಪುಣೆಯಲ್ಲಿ ವಾಸವಾಗಿದ್ದರು. ಹೀಗಾಗಿ ಮುಂಬಯಿಯ ಸಾಹಿತ್ಯಕ ಸಭೆಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದುದರಿಂದ ಅವರು ಪುಣೆಯಲ್ಲಿ ಸುಖವಾಗಿದ್ದಾರೆಂದು ಸಹಜವಾಗಿಯೇ ನಾವು ಭಾವಿಸಿದ್ದೆವು. ನಮ್ಮ ಲೆಕ್ಕಾಚಾರಗಳು ತಲೆಕೆಳಗಾದವು. ನಮ್ಮ ನಮ್ಮ ಲೋಕಗಳೂ ಉಂಟಲ್ಲ ಅದರಲ್ಲೇ ವ್ಯಸ್ತವಾಗಿ ಹೋಗಿದ್ದೆವು.
‘ಸೃಜನಾ’ ಸಂಘಟನೆಯಡಿ ನಾವು ಮುಂಬಯಿನ ಹಲವಾರು ಬರಹಗಾರ್ತಿಯರು, ಆಗಾಗ್ಗೆ ಬರಹ, ಓದು, ಪುಸ್ತಕ ಪ್ರಕಟಣೆ ಎಂದೆಲ್ಲಾ ಸೇರುತ್ತಿದ್ದುದುಂಟು. ಅಲ್ಲಿದ್ದವರೆಲ್ಲಾ ಒಂದಲ್ಲಾ ಒಂದು ರೀತಿಯ ಬರಹದ ಪ್ರಕಾರಗಳಲ್ಲಿ ತೊಡಗಿಸಿಕೊಂಡವರೇ, ಪುಸ್ತಕಗಳನ್ನು ಪ್ರಕಟಿಸಿದವರೇ ಆಗಿದ್ದೆವು. ಇಷ್ಟಾದರೂ ನಾವು ನಮ್ಮ ಬರಹಗಳ ಬಗ್ಗೆ ಪರಸ್ಪರ ಮಾತನಾಡಿಕೊಂಡಿದ್ದಿಲ್ಲ. ಪುಸ್ತಕಗಳ ಬಗ್ಗೆ ಬರೆದಿದ್ದಿಲ್ಲ. ತುಳಸೀ ಹೋದ ಮೇಲೆ ಈಗ ಎನಿಸುತ್ತಿದೆ, ನನಗೇಕೆ ಕೇವಲ ದೂರದ, ಕಣ್ಣಿಗೆ ಕಾಣದ ಬರಹಗಾರ್ತಿಯರೇ ಮುಖ್ಯವಾಗಿ ಬಿಟ್ಟರು? ಅತಿ ಪರಿಚಯವೇ ಇದಕ್ಕೆ ಮುಳುವಾಯಿತೇ? ಅಥವಾ ಒಂದು ರೀತಿಯ `ಸಮಾನ ದೂರ’ ಸಿದ್ಧಿಸದೇ ಇದ್ದುದೇ ಕಾರಣವೋ ತಿಳಿಯದು. ನಮ್ಮಲ್ಲಿ ಪರಸ್ಪರ ಮೆಚ್ಚುಗೆ ಇದ್ದರೂ ಅದನ್ನು ಒಬ್ಬರಿಗೊಬ್ಬರು ಪ್ರಮೋಟ್ ಮಾಡಲು ಬಳಸಿಕೊಳ್ಳಬೇಕೆಂದು ಎಂದೂ ಅನಿಸಿರಲಿಲ್ಲ.
ಅಲ್ಲದೇ ತುಳಸಿಯವರು ಪ್ರಚಾರದಿಂದ ಬಹಳ ದೂರ. `ನನ್ನ ಕವಿತೆ ನನ್ನ ಹಾಡು’ ಎಂಬ ಶೀರ್ಷಿಕೆಯಡಿ ಕನ್ನಡದ ಎಲ್ಲಾ ಮಹಿಳಾ ಕವಿಗಳ ಸಾಕ್ಷ್ಯಚಿತ್ರದ ನಿರ್ಮಾಣಕ್ಕಾಗಿ ಕರ್ನಾಟಕ ಲೇಖಕಿಯರ ಸಂಘದಿಂದ ಕರೆ ಬಂದಾಗ ತುಳಸೀ ಅದರ ಭಾಗವಾಗಲು ಇಷ್ಟಪಡಲಿಲ್ಲ. ಅದು ಕನ್ನಡ ಸಾಹಿತ್ಯಕ್ಕೆ ಆಗುವ ನಷ್ಟ ಎಂದು ಏನೆಲ್ಲಾ ನಾವು ಸೃಜನಾದ ಗೆಳತಿಯರು ಸಮಜಾಯಿಷಿ ಕೊಟ್ಟರೂ ಅವರು ಒಪ್ಪಲಿಲ್ಲ. ಸಾಕಷ್ಟು ಮಹತ್ವದ ಕವಿತೆಗಳನ್ನು ಬರೆದ ತುಳಸಿ ಸಾಕ್ಷ್ಯಚಿತ್ರದ ದಾಖಲೆಯ ಹೊರಗೇ ಉಳಿದು ಬಿಟ್ಟರು. ತುಳಸಿ ಎಂದರೆ ಬಾಮಿಯಾನ್ ಬುದ್ಧ ನಾಶವಾದ ಸಂದರ್ಭದಲ್ಲಿ ಬರೆದ ಅವರ ‘ಬಾಮಿಯಾನ್ ಬುದ್ಧ’ ಕವಿತೆಯೇ ಕಣ್ಣಮುಂದೆ ಬರುತ್ತದೆ.
ಯಶವಂತ ಚಿತ್ತಾಲರು ಸೃಜನಾದ ಕೆಲವು ಸದಸ್ಯೆಯರನ್ನು ಪ್ರೀತಿಯಿಂದ `ಸೃಜನಾದ ಪಂಚಕನ್ಯೆಯರು’ ಎಂದು ಕರೆಯುತ್ತಿದ್ದರು. ಆ ಪಂಚಕನ್ಯೆಯರಲ್ಲಿ ತುಳಸಿಯವರೂ ಒಬ್ಬರಾಗಿದ್ದರು. ಈಗ್ಗೆ ಕೆಲವು ವರುಷಗಳ ಹಿಂದೆ ನಡೆದ ಸ್ಪಾರೋ ಸಂಸ್ಥೆಯ ಲೇಖಕಿಯರ ಕಮ್ಮಟದಲ್ಲಿ ನಾನು ಮತ್ತು ಶ್ಯಾಮಲಾ, ತುಳಸಿಯವರ ಜೊತೆಗೆ ಕಳೆದ ರಸಘಳಿಗೆಗಳು ಈಗ ಮುತ್ತಿಮುಕುರುತ್ತಿವೆ. ಆಗ ಚಿತ್ತಾಲರೂ ನಮ್ಮ ಮಾತುಕತೆಯ ಭಾಗವಾಗಿದ್ದುದು ನೆನಪಾಗುತ್ತಿದೆ.
ತುಳಸಿ ವೇಣುಗೋಪಾಲ್ ಹುಟ್ಟಿದ್ದು ಮಂಗಳೂರಿನಲ್ಲಿ. ಪತ್ರಕರ್ತ ವೇಣುಗೋಪಾಲ್ ಅವರೊಂದಿಗೆ ಮದುವೆಯಾಗಿ ಕಾಲಿಟ್ಟಿದ್ದು ಮುಂಬಯಿಗೆ. ವೇಣುಗೋಪಾಲ್ ಕೂಡ ಕಥೆಗಾರರಾಗಿ ಹೆಸರಾದವರು. ಅವರ ಸಾಹಿತ್ಯಕ ಜುಗಲಬಂದಿ ಮುಂಬಯಿಯ ಅನೇಕರಿಗೆ ಪರಿಚಿತವಾದದ್ದು. `ಜುಗಲಬಂದಿ’ ಅವರಿಬ್ಬರ ಕಥಾಸಾಹಿತ್ಯದ ದಾಂಪತ್ಯಗೀತೆ ಕೂಡ ಆಗಿದೆ. ಸಾಂಸಾರಿಕ ಜವಾಬ್ದಾರಿಗಳೊಂದಿಗೆ ಮಗ ದೊಡ್ಡವನಾದಮೇಲೆ ಕನ್ನಡ ಎಂ.ಎ. ಮಾಡಿ ಮುಗಿಸಿದರು ತುಳಸಿ. ಮಹಿಳಾ ಆಕೃತಿಗಳ ಸಂಗ್ರಹ ಮತ್ತು ಸಂಶೋಧನೆಗೆ ಹೆಸರಾದ ಸ್ಪಾರೋ ಎನ್ನುವ ಸಂಸ್ಥೆಯಲ್ಲಿ ಸಮನ್ವಯಕಾರ್ತಿಯಾಗಿ ದುಡಿದ ಶ್ರೇಯಸ್ಸು ಅವರದು. ಆ ಸಂಸ್ಥೆ ಹೊರತಂದ ಮಹಿಳಾ ಸಾಧಕಿಯರ ಮೌಖಿಕ ಸಂದರ್ಶನಗಳ ಕನ್ನಡ ಅನುವಾದ ಸಂಗ್ರಹಗಳಾದ `ಬೊಗಸೆಯಲ್ಲಿಷ್ಟು ಮಳೆ’, `ಮುಗಿಲ ಮಲ್ಲಿಗೆಯ ಎಟುಕಿಸಿ’ ಇವುಗಳ ಸಂಪಾದಕಿಯರಲ್ಲಿ ತುಳಸಿಯವರೂ ಒಬ್ಬರು. `ಮುಂಜಾವಿಗೆ ಕಾದವಳು’ (1993) ಕಥಾ ಸಂಕಲನದ ಮೂಲಕ ಮುಂಬಯಿ ಕನ್ನಡ ಜಗತ್ತಿನಲ್ಲಿ ಹೆಜ್ಜೆ ಊರಿದ ತುಳಸಿ ಕನ್ನಡದ ಅನೇಕ ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ತಮ್ಮ ಕತೆ ಕವನಗಳನ್ನು ಪ್ರಕಟಿಸಿದರು. ಅವರು `ಪುಟಗಳ ಮಧ್ಯದಲ್ಲೊಂದು ನವಿಲುಗರಿ’ (2005) ಕವಿತಾ ಸಂಕಲನಕ್ಕೆ ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿಯನ್ನು ಪಡೆದುದು ಅಕ್ಷರಶಃ ಅವರ ಕಾವ್ಯಕನ್ನಿಕೆಗೆ ಗರಿಮೂಡಿಸಿತು. ಜಾಗತೀಕರಣದ ವಿಕೋಪದಲ್ಲಿ ನರಳುವ ಅಲೆÉಮಾರಿ ಶ್ರಮಜೀವಿ ಹೆಣ್ಣುಗಳ ಬದುಕಿನ ಬವಣೆಗಳು, `ಲೇಡೀಸ್ ಡಬ್ಬದ ಯಾತನಾ ಶಿಬಿರ’ ಕುರಿತಾದ ಬಹಳÀ ಒಳ್ಳೆಯ ಕವಿತೆಗಳನ್ನು ಬಿಟ್ಟುಹೋಗಿರುವ ತುಳಸಿಯವರಿಗೆ ಉದಯೋನ್ಮುಖ ವರ್ಧಮಾನ ಸಾಹಿತ್ಯ ಪ್ರಶಸ್ತಿ (1996) ಮತ್ತು ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿಗಳು (1998) ದೊರೆತಿರುವುದು ಅವರ ಮೇಲಿನ ಕೃತಿಗಳಿಗೆ ಸಂದ ಗೌರವವಾಗಿದೆ.
ಕಥನದ ಸೊಗಸು
ತುಳಸಿಯವರ ಕಥೆಗಳು ಪ್ರಮುಖವಾಗಿ ನಗರ ಪರಿಸರದಲ್ಲಿ ಅರಳಿಕೊಳ್ಳುವಂತಹವು. ಇವರ ಹೆಚ್ಚಿನ ಕಥೆಗಳ ಸ್ತ್ರೀಪಾತ್ರಗಳು ಪಾರಂಪರಿಕ ಮಾದರಿಯ ಅಚ್ಚಿಗೆ ಬೀಳುವುದಿಲ್ಲ. ಅವು ಎಂದೂ ಕ್ಷಮೆಯಾಚಿಸುವ ಅಳುಬುರಕಿಯರಾಗುವುದಿಲ್ಲ. ಹೆಣ್ಣು ಸಾಮಾಜಿಕ ಸವಲತ್ತುಗಳಿಂದ ವಂಚಿತಳಾಗಿರುವ ಪ್ರಜ್ಞೆಯ ಭಾಗವಾಗಿಯೇ ಈ ಎಲ್ಲಾ ಪಾತ್ರಗಳೂ ಹುಟ್ಟಿಕೊಳ್ಳುತ್ತವೆ. ತುಳಸಿಯವರ ಕಥಾನಾಯಕಿಯರು ನಗರದ ಆಧುನಿಕ ಮಹಿಳೆಯರನ್ನು ಪ್ರತಿನಿಧಿಸುತ್ತಾರೆ. ಅವರ ‘ಮುಂಜಾವಿಗೆ ಕಾದವಳು’ ಕಥಾಸಂಕಲನದಲ್ಲಿ ಶೀರ್ಷಿಕೆಯ ಕಥೆಯ ಜೊತೆಗೆ ತಪ್ತರು, ಗೃಹಭಂಗ, ಪಾರ್ಟಿ ಮುಂತಾದ ಉತ್ತಮ ಕತೆಗಳಿವೆ.
ಗಂಡನ ಪುರುಷಾಹಂಕಾರದಲ್ಲಿ ನಲುಗಿ ಹೋಗುವ ಅನೇಕ ಹೆಂಡಂದಿರ ಸಹಜ ಪ್ರತಿನಿಧಿಯಾಗಿ `ಮುಂಜಾವಿಗೆ ಕಾದ’ ಸುಶೀ ಬರುತ್ತಾಳೆ. ಗಂಡನ ತಿರಸ್ಕಾರವನ್ನು ನುಂಗಿಕೊಂಡು ಬದುಕುವ ಬದುಕು ಇಲ್ಲವೇ ಅದರಿಂದ ಜಾರಿಕೊಳ್ಳುವ ಸಾವು ಇವೆರಡೇ ಅವಳ ಬದುಕಿನ ಆಯ್ಕೆಯಾಗಿರುತ್ತದೆ. ಆದರೆ ಸಾವಿನ ಮೊರೆ ಹೋಗುವ ಅವಳನ್ನು ಸಾವು ಸ್ವಿಕರಿಸುವುದಿಲ್ಲ. ಗಂಡನೊಡನೆ ಬದುಕುತ್ತಿದ್ದ ಹೀನಾಯದ ಭೂತಕ್ಕಿಂತಲೂ ಸಾವಿನ ಕದ ತಟ್ಟಿ ಬಂದ ಅವಳ ಭವಿಷ್ಯದ ಬದುಕು ಘೋರವಾಗುವ ಕಲ್ಪನೆಯನ್ನು ಓದುಗರಲ್ಲಿ ಮೂಡಿಸಿ ಕಥೆ ಮುಕ್ತಾಯವಾಗುತ್ತದೆ. ಅವಳ ದೈಹಿಕ ಮತ್ತು ಮಾನಸಿಕ ಯಾತನೆಯನ್ನು ಸಾಂಸಾರಿಕ ನೆಲೆಯಲ್ಲಿನ ಅವಳ ಸಾವು ಬದುಕುಗಳ ಹೋರಾಟದೊಂದಿಗೆ ತುಲನೆ ಮಾಡುತ್ತಾ ಕಥೆ ಮತ್ತೆ ಮರಳುವುದು ಅವಳು ಸತ್ತು ಬದುಕಿದ ಜೀವನದ ಕಡೆಗೇ. ಗಂಡನನ್ನು ಬಿಟ್ಟು ಬೇರೆ ಪರ್ಯಾಯ ಕಂಡುಕೊಳ್ಳಲಾರದ ಗೃಹಿಣಿಯ ಸ್ಥಿತಿ ಹಾಗೂ ಅಂತಹ ಪರ್ಯಾಯಗಳನ್ನು ಕಂಡುಕೊಳ್ಳಲಾರದಂತೆ ಹೆದರಿಸುವ ಸಮಾಜ, ಇವೆರಡರ ಸಂಘರ್ಷದಲ್ಲಿ ನಲಗುವ ಸುಶೀ ಭಾರತೀಯ ಮಧ್ಯಮವರ್ಗದ ಗೃಹಿಣಿಯರ ಉತ್ತಮ ಉದಾಹರಣೆ. ಇಲ್ಲಿ ತುಳಸಿ ಅವರು ಎಲ್ಲವನ್ನೂ ಧಿಕ್ಕರಿಸಿ ಬದುಕುವ ಸುಶಿಯನ್ನು ತೋರಿಸಬಹುದಾಗಿತ್ತು. ಆದರೆ ಹೆಚ್ಚಿನ ಹೆಣ್ಣುಮಕ್ಕಳಿಗೆ ಅದರ ಅರಿವು ಇನ್ನೂ ಮೂಡಬೇಕಾಗಿದೆ ಎನ್ನುವ ವಾಸ್ತವವನ್ನೇ ಅವರು ಎತ್ತಿಹಿಡಿಯುತ್ತಾರೆ. ಮಹಿಳೆಯಾದವಳು ಈ ಎಲ್ಲಾ ಹೋರಾಟಗಳೊಡನೆ ಹೊಂದಾಣಿಕೆ ಮಾಡಿಕೊಂಡು ಸಾಗುವುದು ಮನೆ ಮದುವೆ ಎಂಬುದು ಸ್ವರ್ಗ ಎಂಬ ಕಾರಣಕ್ಕೆ ಅಲ್ಲ, ಬದಲಾಗಿ ಸಮಾಜ ಅವಳನ್ನು ಅದಕ್ಕೆ ಬದ್ಧಳಾಗಿಸಿ ಅದರಿಂದ ಹೊರಬರಲಾರದ ಅನಿವಾರ್ಯತೆಯನ್ನು ಹೇರುವುದರಿಂದ ಎಂಬುದನ್ನು ಈ ಕಥೆ ಎತ್ತಿತೋರಿಸುತ್ತದೆ.
ತುಳಸಿ ಅವರ `ತಪ್ತರು’ ಮತ್ತು `ಋಣ’ ಮೇಲಿನ ಕಥೆಗಿಂತ ಹೆಚ್ಚು ಪ್ರಜ್ಞಾವಂತ ಮಹಿಳೆಯರನ್ನು ಒಳಗೊಂಡಿದೆ. ಗಂಡನನ್ನು ಬಿಟ್ಟು ಒಂಟಿಯಾಗಿ ಮಗನೊಡನೆ ಸಂಸಾರ ಸಾಗಿಸುವ `ತಪ್ತರು’ ಕಥೆಯ ಸುಮಿ, ಇಬ್ಬರು ಪ್ರೇಮಿಗಳ ನಡುವೆ ಯಾರನ್ನೂ ಗಂಡನನ್ನಾಗಿ ಆಯ್ಕೆಮಾಡಿಕೊಳ್ಳದ `ಋತು’ ಕಥೆಯ ಅನಿತಾ ಈ ಎರಡೂ ಪಾತ್ರಗಳು ವಿಶಿಷ್ಟವಾಗಿವೆ. ಸುಮಿಗೆ ಒಂಟಿ ಬದುಕು ತಂದಿತ್ತ ಮಾಗಿದ ಅನುಭವ, ಹಣ್ಣಾದ ವಯಸ್ಸು ಎಲ್ಲವೂ ಅವಳನ್ನು ಹದವಾಗಿಸಿದೆ. ಬಹಳ ವರ್ಷಗಳ ಅನಂತರ ಬಿಟ್ಟುಹೋದ ಗಂಡನನ್ನು ಭೇಟಿಯಾಗುವ ಅವಳು ಅವನ ಕಣ್ಣಿಗೆ ಸೋತಂತೆ ಕಂಡರೂ ನಿಜವಾಗಿ ಗೆಲ್ಲುತ್ತಾಳೆ. ತನ್ನ ಹಿಂದಿನ ಭಾವುಕತೆಯನ್ನೆಲ್ಲಾ ಕಳೆದುಕೊಂಡ ಅವಳು ಆ ವೇಳೆಗೆ ಒಬ್ಬ ಜವಾಬ್ದಾರಿಯುತ, ಪ್ರಜ್ಞಾವಂತ ಮಹಿಳೆಯಾಗಿ ಕಾಣುತ್ತಾಳೆ. ಮುಂಜಾವಿನ ಸುಶಿಯಂತೆ ಇಲ್ಲಿ ಛಿದ್ರಗೊಂಡ ದಾಂಪತ್ಯ ಮತ್ತೆ ಬಿರುಕುಗೊಳ್ಳ್ಳಲಿಕ್ಕಾಗಿಯೇ ತೇಪೆ ಹಾಕಿಕೊಳ್ಳುವುದಿಲ್ಲ. ಆದ್ದರಿಂದ ಬಹಳ ವರ್ಷಗಳ ನಂತರ ಹತ್ತಿರ ಬಂದ ಗಂಡಹೆಂಡತಿಯರು ಸ್ನೇಹಿತರಂತೆ ಬೇರೆಯಾಗುತ್ತಾರೆ. ಇಬ್ಬರ ಮನಸ್ಸುಗಳೂ ತಮ್ಮ ಹಿಂದಿನ ತಪ್ಪಗಳ ಅರಿವಿನಲ್ಲಿ ರೋದಿಸುತ್ತಿದ್ದರೂ ಅವು ಮೆಲೋಡ್ರಾಮಾ ಆಗುವುದಿಲ್ಲ. ಬದಲಾಗಿ ಇಬ್ಬರೂ ತಪ್ತರಾಗಿ ಸಮಾನಾಂತರ ನಡೆದು ಬಿಡುತ್ತಾರೆ. ಇಬ್ಬರಿಗೂ ವಾಸ್ತವತೆಯ ಪ್ರಜ್ಞೆ ಇರುವಂತೆ ತಮ್ಮ ಸಾಮಥ್ರ್ಯದ ಅರಿವೂ ಇದೆ. ಆದುದರಿಂದಲೇ ಬದುಕನ್ನು ತೇಪೆಯಾಗಲು, ರಾಡಿಯಾಗಲು ಬಿಡದೇ ತಮ್ಮ ಪಾಡಿಗೆ ತಾವು ನಡೆದು ಬಿಡುತ್ತಾರೆ. ಒಂಟಿ ಬದುಕಿನ ದೀರ್ಘಕಾಲದ ಸಂಘರ್ಷದ ಅನಂತರವೂ ಅವರು ಸೇರುವುದಿಲ್ಲ.
ದಾಂಪತ್ಯ ಬಿರುಕುಬಿಟ್ಟ ಕುರುಹೇ ಇಲ್ಲದಂತೆ ಪಾತಿವ್ರತ್ಯದ ಸಾಫಲ್ಯವನ್ನು ಕಾಣುವುದಕ್ಕೆಂದೇ ಬಂದವರಂತೆ, ಪಶ್ಚಾತ್ತಾಪದಲ್ಲಿ ಗಂಡನ ಸ್ವಾಮಿನಿಷ್ಠೆಯನ್ನು ಒಪ್ಪಿಕೊಂಡುಬಿಡುವ ಹೆಚ್ಚಿನ ನವೋದಯ ಕಥೆಗಳ ಸ್ತ್ರೀಮಾದರಿಗಳಿಗಿಂತ ಭಿನ್ನವಾದ ಲೋಕವನ್ನು ಕಾಣಿಸುವ ಇಂದಿನ ಮಹಿಳೆಯರ ಯಶಸ್ವೀ ಕಥೆಗಳ ಸಾಲಿಗೆ ತುಳಸಿಯವರ ಅನೇಕ ಕಥೆಗಳೂ ಸೇರುತ್ತವೆ. ಇವು ವೈಯಕ್ತಿಕ ಸಾಧನೆಗಳ ಜೊತೆಗೆ ಮಹಿಳಾ ಬರವಣಿಗೆ ಸಾಗಿ ಬಂದ ಮಹತ್ವದ ಘಟ್ಟವನ್ನೂ ಪ್ರತಿನಿಧೀಕರಿಸುತ್ತವೆ.
– ಗಿರಿಜಾ ಶಾಸ್ತ್ರಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ಕಥೆಯ ವಿಶ್ಲೇಷಣೆ ಅಚ್ಚುಕಟ್ಟಾಗಿದೆ, ಗಿರಿಜಾ. ಇನ್ನೂ ಬರಲಿ.
ತುಳಸಿ ವೇಣುಗೋಪಾಲ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಪ್ರತಿ ಬರಹದಲ್ಲೂ ಅವರ ವ್ಯಕ್ತಿತ್ವ ಹಾಗೂ ಬರಹ ಹೊಸ ರೀತಿಯಲ್ಲಿ ಅನಾವರಣ ಗೊಳ್ಳುತ್ತಾ ಹೋಗುತ್ತದೆ.
ತುಳಸೀ ವೇಣುಗೋಪಾಲರ ಕಥಾ ಪ್ರಪಂಚದಲ್ಲಿ ಒಂದು ಸುತ್ತಿಗಾಗಿ ನಮ್ಮನ್ನು ಕರೆದೊಯ್ದಿರುವ ಗಿರಿಜಾ ಶಾಸ್ತ್ರಿ ಯವರ ಲೇಖನ ತುಳಸಿಯವರ ಸೂಕ್ಷ್ಮ ಸಂವೇದನೆಗೆ ಕನ್ನಡಿ ಹಿಡಿದಂತಿದೆ. ಮಹಿಳೆಯರ ಪ್ರಜ್ಞಾವಂತಿಕೆ ಬರಿಯ ಭಾಷಣ, ಬರಹಗಳ ಪುಟವಾಗದೆ ಜೀವಂತಿಕೆಯನ್ನು ಆವಾಹಿಸಿಕೊಳ್ಳುವ ಕಥನಶೈಲಿಗೆ ಇದು ಸಹಜ ನುಡಿ ನಮನ.