FEATURED

ನುಡಿನಮನ/ ಚಳವಳಿ ಮತ್ತು ಚಿಂತನೆಗೆ ಮಾದರಿ ರೂಪಿಸಿದ ಗೇಲ್ ಓಮ್‍ವೆಡ್ತ್ – ಆರ್. ಪೂರ್ಣಿಮಾ

ಜಾತಿ ವ್ಯವಸ್ಥೆ, ಅಸ್ಪøಶ್ಯತೆ, ಮಹಿಳೆಯರ ಮೇಲಿನ ದೌರ್ಜನ್ಯ, ಶ್ರಮಜೀವಿಗಳ ಶೋಷಣೆ ಮುಂತಾದ ಅನಿಷ್ಟಗಳ ವಿರುದ್ಧ ಭಾರತದಲ್ಲಿ ರೂಪುಗೊಳ್ಳುವ ಚಳವಳಿಗಳಲ್ಲಿ ಪಾಲ್ಗೊಳ್ಳುತ್ತ, ಅವುಗಳಿಗೆ ಸೈದ್ಧಾಂತಿಕ ನೆಲೆಗಟ್ಟು ನೀಡಲು ದಶಕಗಳ ಕಾಲ ಶ್ರಮಿಸಿದವರು ಸಮಾಜವಿಜ್ಞಾನಿ ಗೇಲ್ ಓಮ್‍ವೆಡ್ತ್. ಹಾಗೆಯೇ ಬುದ್ಧಪೂರ್ವ ಚಿಂತನೆ, ಬೌದ್ಧ ಧರ್ಮ, ಅಂಬೇಡ್ಕರ್ ವಾದ, ಜಾತಿ ಮತ್ತು ಲಿಂಗತ್ವದ ಸಂಬಂಧ ಮೊದಲಾದ ಹಲವಾರು ವಿಷಯಗಳಲ್ಲಿ ಅವರ ತಲಸ್ಪರ್ಶಿ ಅಧ್ಯಯನ ಮತ್ತು ಸಂಶೋಧನೆ ಬಹಳ ಅಮೂಲ್ಯವಾದ ಕೊಡುಗೆ. ಹೀಗೆ ಹೋರಾಟಗಳನ್ನು ಮುನ್ನಡೆಸುವ ಸಂಘಟಕಿ, ಇತಿಹಾಸವನ್ನು ಸಾಮಾಜಿಕ ದೃಷ್ಟಿಕೋನದಿಂದ ವ್ಯಾಖ್ಯಾನಿಸುವ ಸಂಶೋಧಕಿ ಮತ್ತು ಒಳ್ಳೆಯ ವಿದ್ವತ್ಪೂರ್ಣ ಲೇಖಕಿ ಎಲ್ಲವೂ ಆಗಿದ್ದ ಅವರು ಎಲ್ಲ ಬಗೆಯ ಶೋಷಣೆಗಳ ವಿರುದ್ಧ ದನಿ ಎತ್ತಿದರು; ವಿದೇಶದಲ್ಲಿ ಹುಟ್ಟಿದ್ದರೂ ನಂತರ ಭಾರತೀಯರೇ ಆಗಿ ನಮ್ಮ ಸಮಾಜದ ಆತ್ಮಸಾಕ್ಷಿಯಂತೆ ಕೆಲಸ ಮಾಡಿದ ಗೇಲ್ ಓಮ್‍ವೆಡ್ತ್ ಅವರಿಗೊಂದು ನಮನ.

ಜಾತಿ ವ್ಯವಸ್ಥೆ ಮತ್ತು ಅದರ ವಿರುದ್ಧ ಜ್ಯೋತಿಬಾ ಫುಲೆ ಅವರು ನಡೆಸಿದ ಚಳವಳಿಯ ಮೇಲೆ ಸಂಶೋಧನೆ ಮಾಡಿ ಪಿಎಚ್.ಡಿ ಪಡೆಯುವ ಆಸೆಯೊಡನೆ ಅಮೆರಿಕದಿಂದ ಭಾರತಕ್ಕೆ ಬಂದಿಳಿದ ಯುವತಿ ಗೇಲ್ ಓಮ್‍ವೆಡ್ತ್ ಇಲ್ಲಿನ ಜಾತಿ ವ್ಯವಸ್ಥೆಯ ಆಳಅಗಲಗಳನ್ನು ಕಂಡು ಬೆರಗಾಗುತ್ತ ಬೆಚ್ಚಿದರು. ನಮ್ಮ ಸಮಾಜದಲ್ಲಿನ ಜಾತಿ ಮತ್ತು ಅಸ್ಪøಶ್ಯತೆ ಮನುಷ್ಯರ ಮೇಲೆ ಬೀರುವ ಪರಿಣಾಮಗಳು ಅವರ ಮನಸ್ಸನ್ನು ತೀವ್ರವಾಗಿ ತಟ್ಟಿ, ಭಾರತದಲ್ಲೇ ಉಳಿಯಲು ನಿರ್ಧರಿಸಿದರು. ಅಧ್ಯಯನದ ಜೊತೆಗೆ ಚಳವಳಿಗೆ ಇಳಿದ ಅವರು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತ, ಹೋರಾಟಗಾರರೊಂದಿಗೆ ಸಂಘಟನೆಗಳನ್ನು ಕಟ್ಟಿ ಬೆಳೆಸಿದರು. ಅರ್ಧ ಶತಮಾನದಷ್ಟು ಕಾಲ ಭಾರತೀಯ ಸಮಾಜದ ಅಧ್ಯಯನವನ್ನೇ ಮಿದುಳುಮನಗಳಲ್ಲಿ ತುಂಬಿಕೊಂಡಿದ್ದ ಅವರು, ಜಾತಿವ್ಯವಸ್ಥೆಯನ್ನು ಅರ್ಥ ಮಾಡಿಕೊಂಡ ರೀತಿಯೇ ವಿಶಿಷ್ಟ. ಜ್ಯೋತಿಬಾ ಫುಲೆ ಮತ್ತು ಅಂಬೇಡ್ಕರ್ ಅವರ ವಿಚಾರಗಳು ಮತ್ತು ದಲಿತ ರಾಜಕೀಯ ಅವರನ್ನು ಬಹುವಾಗಿ ಆವರಿಸಿದ್ದವು. ಹಾಗೆ ನೋಡಿದರೆ, ಫುಲೆ ಅವರ ಸತ್ಯಶೋಧಕ ಸಮಾಜದ ಚಳವಳಿ ಮತ್ತು ಅಂದಿನ ರಾಜಕೀಯ- ಸಾಮಾಜಿಕ ಚಳವಳಿಗಳ ಬಗ್ಗೆ ಗಮನ ಹರಿಸಿದ ಪ್ರಮುಖ ಸಂಶೋಧಕರಲ್ಲಿ ಇವರೂ ಒಬ್ಬರು. ದಶಕಗಳ ಕಾಲ ಭಾರತವನ್ನು ಕುರಿತು ಅವರು ನಡೆಸಿದ ಸಾಮಾಜಿಕ ಅಧ್ಯಯನಗಳು, ದಕ್ಷಿಣ ಏಷ್ಯಾದ ಸಂರಚನೆ ಮತ್ತು ಸಂಕಥನಗಳನ್ನು ಅರ್ಥ ಮಾಡಿಕೊಳ್ಳಲು ಈಗ ಅನಿವಾರ್ಯ ಆಕರಗಳಾಗಿವೆ.

ಸಂಗಾತಿ ಭರತ್ ಪಟಾನ್ಕರ್ ಜೊತೆ

ಅಮೆರಿಕದ ಮಿನ್ನಿಸೋಟ ರಾಜ್ಯದಲ್ಲಿ 1941 ರ ಆಗಸ್ಟ್ 2 ರಂದು ಜನಿಸಿದ ಗೇಲ್ ಓಮ್‍ವೆಡ್ತ್, ಬರ್ಕಲಿಯಲ್ಲಿರುವ ಹೆಸರಾಂತ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿ 1973 ರಲ್ಲಿ ಪಿಎಚ್.ಡಿ ಪಡೆದರು. ಕಾಲೇಜು ದಿನಗಳಲ್ಲೇ ಯುದ್ಧ ವಿರೋಧಿ ಚಳವಳಿಗಳಲ್ಲಿ ಭಾಗವಹಿಸಿದ್ದರು. ಸಂಶೋಧನೆ ನಂತರ ಭಾರತದಲ್ಲೇ ಉಳಿದು, ಮಹಿಳಾ ಚಳವಳಿಗಾರ್ತಿ ಇಂದುಮತಿ ಪಟಾನ್ಕರ್ ಅವರೊಂದಿಗೆ ಸೇರಿದ ಗೇಲ್ ಮುಂದೆ, ಅವರ ಮಗ ಭರತ್ ಪಟಾನ್ಕರ್ ಅವರನ್ನು ಮದುವೆಯಾಗಿ ಭಾರತೀಯ ಪೌರತ್ವ ಪಡೆದರು. ಮಹಾರಾಷ್ಟ್ರದ ಸತಾರ ಜಿಲ್ಲೆಯ ಕಾಸೆಗಾಂವ್ ನಲ್ಲಿ ನೆಲೆನಿಂತು ರೈತರು, ಬುಡಕಟ್ಟು ಜನರು, ಅರಣ್ಯವಾಸಿಗಳು, ದಲಿತರು, ಮಹಿಳೆಯರು, ಹಿಂದುಳಿದ ವರ್ಗಗಳು ಎಲ್ಲರ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅವಾಂತರಗಳ ಬಗ್ಗೆ ಎಚ್ಚರ ಮೂಡಿಸಿದರು. ಸಂಗಾತಿ ಭರತ್ ಜೊತೆ ಸ್ಥಾಪಿಸಿದ ಶ್ರಮಿಕ ಮುಕ್ತಿ ದಳ',ಸ್ತ್ರೀಮುಕ್ತಿ ಸಂಘರ್ಷ ಚಳವಳಿ’, `ಶೇತ್ಕರಿ ಮಹಿಳಾ ಅಘಡಿ’ ಸಂಘಟನೆಗಳೆಲ್ಲ ದಲಿತರ, ಮಹಿಳೆಯರ ದನಿಯಾಗುವಂತೆ ಬೆಳೆಸಿದರು. ಮಾನವ ಹಕ್ಕುಗಳ ಪರವಾದ ಚಳವಳಿಯನ್ನೂ ಬಲಪಡಿಸಿದರು. ಕೊಯ್ನಾ ಅಣೆಕಟ್ಟು ಸೇರಿ ಹಲವೆಡೆ ನಿರಾಶ್ರಿತರಾದ ಜನರನ್ನು ಅವರ ನ್ಯಾಯೋಚಿತ ಹಕ್ಕುಗಳಿಗೆ ಸಂಘಟಿಸಿದರು.

ಬಹುಮುಖಿ ಕಾರ್ಯ

ಗೇಲ್ ಓಮ್‍ವೆಡ್ತ್ ಅವರ ವ್ಯಕ್ತಿತ್ವದ ವಿಶಿಷ್ಟ ಅಂಶವೆಂದರೆ, ದಿನನಿತ್ಯ ಜನರ ನಡುವೆ ಬೆರೆತು ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅವರು, ಕ್ಷೇತ್ರಕಾರ್ಯ ಆಧಾರಿತ ಅಧ್ಯಯನಗಳಿಗೂ ಸಮಯ ಹೊಂದಿಸಿಕೊಂಡು ಅತ್ಯಂತ ಶಿಸ್ತುಬದ್ಧ `ಅಕೆಡೆಮಿಕ್ ಸ್ಕಾಲರ್’ ಆಗಿ ಹೆಸರು ಪಡೆದಿದ್ದರು. ಜೊತೆಗೆ ಚಳವಳಿ ಮತ್ತು ಅಧ್ಯಯನದಲ್ಲಿ ಕಂಡುಕೊಂಡ ಸತ್ಯವನ್ನು ಪುಸ್ತಕಗಳಾಗಿ ವಿದ್ವತ್ಪೂರ್ಣವಾಗಿ ಬರೆಯಬಲ್ಲ ಒಳ್ಳೆಯ ಲೇಖಕಿಯೂ ಆಗಿದ್ದರು. ಅವರು ಬರೆದಿರುವ ಸುಮಾರು 25 ಗಂಭೀರ ಕೃತಿಗಳು ಸಮಾಜಶಾಸ್ತ್ರಕ್ಕೆ ಕೊಟ್ಟ ಅದ್ಭುತ ಕೊಡುಗೆಗಳಾಗಿವೆ. ಗೌತಮ ಬುದ್ಧನಿಗೂ ಮೊದಲು ಬೆಳೆದ ಜಾತಿ ವ್ಯವಸ್ಥೆಯ ವಿರೋಧಿ ಚಿಂತನೆ ಕುರಿತು ಅವರು ನಡೆಸಿದ ಸಂಶೋಧನೆ ಮತ್ತು ಮಂಡಿಸಿದ ವಾದ ಜಗತ್ತಿನ ಗಮನವನ್ನೇ ಸೆಳೆದಿದೆ. ಪ್ರಾಚೀನ ಮತ್ತು ಸಮಕಾಲೀನ ಭಾರತವನ್ನು ಅರ್ಥ ಮಾಡಿಕೊಳ್ಳಲು ಅವರ ಪುಸ್ತಕಗಳು ವಿದ್ಯಾರ್ಥಿಗಳಿಗೆ, ವಿದ್ವಾಂಸರಿಗೆ ಕೈಪಿಡಿಗಳಂತೆ ನೆರವಾಗುತ್ತವೆ.

ಹೋರಾಟಗಾರ್ತಿ ಗೇಲ್ ಓಮ್‍ವೆಡ್ತ್ ಭಾರತದ ಮತ್ತು ಜಗತ್ತಿನ ಅನೇಕ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಮತ್ತು ಸಂಶೋಧನೆ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ ಎನ್ನುವುದೂ ಬಹಳ ವಿಶೇಷ ಸಂಗತಿ. ಚಳವಳಿಗಳ ಸಂಘಟಕಿ, ಹೊಸ ವಿಷಯಗಳ ಸಂಶೋಧಕಿ, ಘನತೆವೆತ್ತ ಲೇಖಕಿ – ಇವುಗಳ ಜೊತೆ ಅವರು ಅಪೂರ್ವ ಪ್ರಾಧ್ಯಾಪಕಿಯೂ ಆಗಿದ್ದರು. ಗೇಲ್ ಅವರ ಸಂಗಾತಿ ಭರತ್ ಪಟಾನ್ಕರ್, ಮಗಳು ಪ್ರಾಚಿಯ ಜೊತೆ ಅಪಾರ ಸಂಖ್ಯೆಯ ಚಳವಳಿ ಸಂಗಾತಿಗಳು, ಸಹ ಚಿಂತಕರು, ವಿದ್ಯಾರ್ಥಿಗಳು ಅವರನ್ನು ನಿಜಅರ್ಥದಲ್ಲಿ ಕಳೆದುಕೊಂಡಿದ್ದಾರೆ. ಆದರೆ ಅವರ ಚಿಂತನೆಗಳು ಮುಂದಿನ ಸಾಮಾಜಿಕ ಹೋರಾಟಗಳು ಮತ್ತು ವಿದ್ವತ್ ವಲಯಗಳಿಗೆ ಮಾರ್ಗದರ್ಶಿಯಾಗಿ ಉಳಿಯಲಿವೆ.

-ಆರ್. ಪೂರ್ಣಿಮಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *