ನುಡಿನಮನ / ಗಾಂಧೀಜಿ ಮತ್ತು ಮಹಿಳೆಯರು – ಡಾ. ಜ್ಯೋತ್ಸ್ನಾ ಕಾಮತ್


ಗಾಂಧೀಜಿ ಮತ್ತು ಅವರಂಥ ಎಲ್ಲ ಹೋರಾಟಗಾರರು ರೂಪಿಸಿದ ಸ್ವಾತಂತ್ರ್ಯ ಚಳವಳಿ, ಮಹಿಳೆಯರ ಅಭಿವೃದ್ಧಿಯ ಸಿದ್ಧಾಂತವನ್ನೂ ಒಳಗೊಂಡಿತ್ತು. ಹೋರಾಟದಲ್ಲಿ ಎಲ್ಲ ಜನವರ್ಗಗಳಿಗೆ ಸೇರಿದ ಮಹಿಳೆಯರು ಪಾಲ್ಗೊಳ್ಳಲು ಗಾಂಧೀಜಿ ಪ್ರಭಾವವೇ ಮುಖ್ಯಕಾರಣವಾಗಿತ್ತು. ಸ್ತ್ರೀಪುರುಷ ಸಮಾನತೆಯ ಅಡಿಪಾಯವನ್ನು ಗಟ್ಟಿಗೊಳಿಸಿದ ಗಾಂಧೀಜಿಯವರ 150 ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರ ಆಶಯಗಳ ಸ್ಮರಣೆ.

ಮೋಹನದಾಸ ಗಾಂಧಿ ಅವರು ಭಾರತಕ್ಕೆ ಬಂದು ಹೋರಾಟದ ನಾಯಕತ್ವವನ್ನು ವಹಿಸಿಕೊಂಡ ಕಾಲದಲ್ಲಿ ಮಹಿಳೆಯರ ಸ್ಥಿತಿಗತಿ ಹೇಗಿತ್ತು? ಭಾರತೀಯ ಮಹಿಳೆಯ ಜೀವಮಾನ ಆಯುಷ್ಯ ಕೇವಲ ಇಪ್ಪತ್ತೇಳು ವರ್ಷಗಳಷ್ಟೆ ಇತ್ತು. ಎಳೆಯ ಮಕ್ಕಳು ಮತ್ತು ಗರ್ಭಿಣಿಯರು ಬಹಳ ಚಿಕ್ಕ ವಯಸ್ಸಿನಲ್ಲೇ ಸಾಯುತ್ತಿದ್ದರು. ಬಾಲ್ಯ ವಿವಾಹವೇ ರೂಢಿಯಲ್ಲಿತ್ತು ಮತ್ತು ವಿಧವೆಯರು ಬಹಳ ಸಂಖ್ಯೆಯಲ್ಲಿದ್ದರು. ಒಟ್ಟು ಮಹಿಳೆಯರಲ್ಲಿ ಕೇವಲ ಶೇ. 2 ರಷ್ಟು ಮಂದಿಗೆ ಮಾತ್ರ ಏನಾದರೊಂದು ಶಿಕ್ಷಣ ಪಡೆಯುವ ಅವಕಾಶವಿತ್ತು. ಮಹಿಳೆಗೆ ತನ್ನದೇ ಆದ ಅಸ್ಮಿತೆ ಎಂಬುದೇ ಇರಲಿಲ್ಲ. ಉತ್ತರ ಭಾರತದಲ್ಲಿ, ಮಹಿಳೆಯರು ಮುಖಕ್ಕೆ ಮುಸುಕು ಹಾಕಿಕೊಳ್ಳುತ್ತಿದ್ದರು. ಗಂಡಸರು ಜೊತೆಗಿಲ್ಲದಿದ್ದರೆ ಮತ್ತು ಮುಖ ಮುಚ್ಚಿಕೊಳ್ಳದಿದ್ದರೆ ಅವರು ಹೊರಗೆ ಹೋಗಲು ಸಾಧ್ಯವೇ ಇರಲಿಲ್ಲ. ಶಾಲೆಗೆ ಹೋಗಲು ಅದೃಷ್ಟವಿದ್ದ ಹುಡುಗಿಯರನ್ನು ಪೂರ್ತಿ ಮುಚ್ಚಿದ ಗಾಡಿಗಳಲ್ಲಿ ಕಳಿಸಲಾಗುತ್ತಿತ್ತು.

ಗಾಂಧಿಯವರ ಅದ್ಭುತ ಕೊಡುಗೆಯನ್ನು ಈ ಹಿನ್ನೆಲೆಯಲ್ಲಿ ಪರಿಶೀಲಿಸಬೇಕು. ಹೆಣ್ಣು ಗಂಡಿಗೆ ಸಂಪೂರ್ಣವಾಗಿ ಸರಿಸಮಾನಳು ಎಂದು ಹೇಳಿದ ಅವರು ಅದನ್ನು ಕಟ್ಟುನಿಟ್ಟಾಗಿ ಅನುಸರಿಸಿದರು. ಗಾಂಧೀಜಿಯವರ ಪ್ರಭಾವದಿಂದಾಗಿ ಶಿಕ್ಷಿತರು, ಅನಕ್ಷರಸ್ಥರು, ಗೃಹಿಣಿಯರು, ವಿಧವೆಯರು, ವಿದ್ಯಾರ್ಥಿನಿಯರು, ವೃದ್ಧೆಯರು ಸೇರಿದಂತೆ ಸಾವಿರಾರು, ಲಕ್ಷಾಂತರ ಮಹಿಳೆಯರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು. ಗಾಂಧೀಜಿಯವರ ಅಭಿಪ್ರಾಯದಲ್ಲಿ, ಸ್ವಾತಂತ್ರ್ಯ ಚಳವಳಿ ಕೇವಲ ರಾಜಕೀಯ ಹೋರಾಟ ಮಾತ್ರ ಆಗಿರಲಿಲ್ಲ; ಅದು ರಾಷ್ಟ್ರಮಟ್ಟದ ಆರ್ಥಿಕ ಮತ್ತು ಸಾಮಾಜಿಕ ಸುಧಾರಣಾ ಚಳವಳಿಯೂ ಆಗಿತ್ತು. ಆದ್ದರಿಂದಲೇ 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೆ ಮತ್ತು 1950 ರಲ್ಲಿ ಸಂವಿಧಾನವನ್ನು ಅಂಗೀಕರಿಸಿದಾಗ ಮಹಿಳಾ ಸಮಾನತೆಗೆ ಆದ್ಯತೆ ಎನ್ನುವುದು ಸಹಜವಾಗಿ ಆಗಲೇಬೇಕಾದ ಪ್ರಕ್ರಿಯೆ ಅನ್ನಿಸಿತು.

ಗಾಂಧೀಜಿ ಸಂಪೂರ್ಣ ಸುಧಾರಣೆಯನ್ನು ಬಯಸುವ “ಸರ್ವೋದಯ” ಅಂದರೆ ಸಮಗ್ರ ಪ್ರಗತಿಯನ್ನು ಪ್ರತಿಪಾದಿಸುತ್ತಿದ್ದರು. ಪುರುಷ ಮತ್ತು ಸ್ತ್ರೀ ನಡುವೆ ಇರುವುದು ಕೇವಲ ದೈಹಿಕ ವ್ಯತ್ಯಾಸವಷ್ಟೆ ಎಂದು ನಂಬಿದ್ದ ಅವರು, ತಾಳ್ಮೆ, ಸಹನೆ ಮತ್ತು ತ್ಯಾಗ ಮುಂತಾದ ಅನೇಕ ವಿಷಯಗಳಲ್ಲಿ ಭಾರತೀಯ ಮಹಿಳೆ ಪುರುಷನಿಗಿಂತ ಮೇಲ್ಮಟ್ಟದಲ್ಲಿದ್ದಾಳೆ ಎಂದು ಅನೇಕ ಬಾರಿ ತಮ್ಮ ಬರಹಗಳಲ್ಲಿ ಹೇಳಿದ್ದಾರೆ. “ಯಂಗ್ ಇಂಡಿಯ” ಮತ್ತು “ಹರಿಜನ” ಪತ್ರಿಕೆಗಳ ಲೇಖನಗಳಲ್ಲಿ ಈ ಅಭಿಮತವನ್ನು ಕಾಣಬಹುದು. ತಾವು ಬರೆದದ್ದು ಅದೆಷ್ಟು ನಿಜ ಎಂಬುದಕ್ಕೆ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಅವರಿಗೆ ಇನ್ನಷ್ಟು ಕಾರಣಗಳು ಸಿಕ್ಕವು. ಅವರು ಮಹಿಳೆಯರಿಗಾಗಿ ನಿರ್ದಿಷ್ಟ ಯೋಜನೆ ಅಥವಾ ಕಾರ್ಯಕ್ರಮ ಇರಬೇಕು ಎನ್ನಲಿಲ್ಲ, ಬದಲಿಗೆ ಅವರು ಪ್ರತಿಪಾದಿಸಿದ ಎಲ್ಲ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೂ ಮಹತ್ವದ ಪಾತ್ರ ಇದ್ದು, ಅವರನ್ನೂ ಒಳಗೊಂಡಿತ್ತು. ಈ ಕಾರಣದಿಂದಲೇ ಗಾಂಧೀಜಿಯವರ ಎಲ್ಲ ಕಾರ್ಯಕ್ರಮಗಳಲ್ಲಿ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದಕ್ಕೆ ಇದೂ ಒಂದು ಮುಖ್ಯ ಕಾರಣ ಎಂದು ನಾನು ಭಾವಿಸುತ್ತೇನೆ.

ಅಸಮಾನತೆಗೆ ಕಾರಣ : ಮನೆಗಿಂತ ಉತ್ತಮ ಶಾಲೆ ಇಲ್ಲ ಮತ್ತು ತಂದೆತಾಯಿಗಿಂತ ಉತ್ತಮ ಶಿಕ್ಷಕರಿಲ್ಲ ಎಂದು ಗಾಂಧೀಜಿ ಹೇಳಿದರು. ಪುರುಷ ಮತ್ತು ಮಹಿಳೆ ಸಮಾನರು, ಆದರೆ ಅವರು ಒಂದೇ ಅಲ್ಲ. “ಮಹಿಳೆ ಬೌದ್ಧಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪುರುಷನಿಗೆ ಸಮಾನಳು ಮತ್ತು ಅವಳು ಪ್ರತಿಯೊಂದು ಕಾರ್ಯದಲ್ಲಿ, ಚಟುವಟಿಕೆಯಲ್ಲಿ ಪಾಲ್ಗೊಳ್ಳಬಹುದು” ಎಂದೂ ಹೇಳಿದರು. ನಮ್ಮದು ಪುರುಷ ಪ್ರಾಧಾನ್ಯದ ಸಮಾಜ. ತಮ್ಮ ಮದುವೆಯಾದ ಹೊಸತರಲ್ಲಿ ತಾವೂ ಕೂಡ ಹೇಗೆ ಹೆಂಡತಿಯ ಮೇಲೆ ಅಧಿಕಾರ, ದರ್ಪ ತೋರಿಸಲು ಬಯಸಿದೆ ಎಂಬುದನ್ನು ಗಾಂಧೀಜಿ ತಮ್ಮ ಆತ್ಮಚರಿತ್ರೆ “ಮೈ ಎಕ್ಸ್‍ಪರಿಮೆಂಟ್ಸ್ ವಿತ್ ಟ್ರೂತ್” ನಲ್ಲಿ ಹೇಳಿಕೊಂಡಿದ್ದಾರೆ. ಪಿತೃಪ್ರಧಾನ ಸಮಾಜವೇ ಅಸಮಾನತೆಗೆ ಮೂಲಕಾರಣ ಎಂದು ಅವರು ಅನೇಕ ಬಾರಿ ಹೇಳಿದ್ದಾರೆ.

ಗಾಂಧೀಜಿ ಮತ್ತು ಕಸ್ತೂರಬಾ ಅವರ ನಡುವೆ ಬೌದ್ಧಿಕ ಅಂತರ ಬಹಳವೇ ಇದ್ದಿರಬಹುದು, ಆದರೆ ಅದು ಅವರ ಕೌಟುಂಬಿಕ ಜೀವನದ ಮೇಲೆ ಪರಿಣಾಮ ಬೀರಲಿಲ್ಲ. ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಅವರು ತನ್ನನ್ನು ಅನುಸರಿಸಿದರು ಎಂದು ಗಾಂಧೀಜಿ ಹೇಳಿಕೊಂಡಿದ್ದಾರೆ. ಕಸ್ತೂರಬಾ ನಿಧನರಾದಾಗ ಅವರಿಲ್ಲದೆ ತನ್ನ ಜೀವನ ಅರ್ಥಹೀನವಾಗಿರುತ್ತಿತ್ತು ಎಂದು ಗಾಂಧೀಜಿ ದುಃಖಿಸಿದರು. ಅವರದು 62 ವರ್ಷಗಳ ವೈವಾಹಿಕ ಅನುಬಂಧವಾಗಿತ್ತು.

ಮಹಿಳೆಯ ದೈಹಿಕ ಮತ್ತು ಮಾನಸಿಕ ನೋವುಗಳನ್ನು ಅರ್ಥ ಮಾಡಿಕೊಳ್ಳಲು ಗಾಂಧೀಜಿ ಕಷ್ಟಪಟ್ಟರು. ಬಹಳ ಚಿಕ್ಕವಯಸ್ಸಿನಲ್ಲೇ ಹೆಂಡತಿ ಮಕ್ಕಳಲ್ಲಿ ಸಾಮಾಜಿಕ ಸೇವೆ ಮತ್ತು ತ್ಯಾಗದ ಅರಿವು ಮೂಡಿಸಿದರು. ಸೇವೆ ಎನ್ನುವುದು ಆತ್ಮತೃಪ್ತಿಗೇ ಹೊರತು ಸಾರ್ವಜನಿಕ ಪ್ರದರ್ಶನಕ್ಕಲ್ಲ ಎಂದು ಅವರು ನಂಬಿದ್ದರು. ವೃತ್ತಿ ಅಥವಾ ಕೆಲಸಕ್ಕೆ ಸಂಬಂಧಿಸಿದ ಜಾತಿ ಕೀಳರಿಮೆಯನ್ನು ದೂರವಿರಿಸಲು ಅವರು ಕ್ಷೌರಿಕ, ಧೋಬಿ ಮುಂತಾದ ಕೆಲಸಗಳನ್ನು ತಾವೇ ಮಾಡಿ ತೋರಿಸಿದರು. ಮಕ್ಕಳನ್ನು ಸಾಕಿಬೆಳೆಸುವುದರಲ್ಲಿ ಅವರೂ ಪಾಲ್ಗೊಂಡದ್ದು ನನ್ನ ಪ್ರಕಾರ ಒಂದು ಆಧುನಿಕ ವಿಚಾರವೇ. ಅವರ ಮಕ್ಕಳು ಹುಟ್ಟುವಾಗ ಒಮ್ಮೆ ಹೆರಿಗೆ ಸಮಯದಲ್ಲಿ ಬಿಳಿಯ ಮಿಡ್‍ವೈಫ್ ಬರದೇ ಹೋದಾಗ ಸ್ವತಃ ಅವರೇ ಹೆರಿಗೆ ಮಾಡಿದರು. ಮಗುವನ್ನು ಸಾಕುವುದರಲ್ಲಿ ಹೆಂಡತಿಗೆ ಸಹಾಯ ಮಾಡುತ್ತಿದ್ದರು. ಹೊಸಕಾಲದ ಅಪ್ಪಂದಿರು ಮಾಡುವ ಕೆಲಸಗಳನ್ನು ಗಾಂಧೀಜಿ 90 ವರ್ಷಗಳ ಹಿಂದೆಯೇ ತಮ್ಮ ಕುಟುಂಬದಲ್ಲಿ ಮಾಡಿತೋರಿಸಿದರು.

“ಮಹಿಳೆ ಎಂದರೆ ಅವಳ ಜೀವನ ಅಡುಗೆಮನೆಗೆ ಸೀಮಿತವಲ್ಲ” ಎಂದು ಹೇಳುತ್ತಿದ್ದ ಗಾಂಧೀಜಿ, “ಅಡುಗೆಮನೆಯ ದಾಸ್ಯಸಂಕೋಲೆಯಿಂದ ಅವಳನ್ನು ಬಿಡುಗಡೆ ಮಾಡಿದಾಗ ಮಾತ್ರ ಅವಳ ನಿಜವಾದ ಸತ್ವ ಎಲ್ಲರಿಗೂ ತಿಳಿಯುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದರು. ಮನೆಯ ಜವಾಬ್ದಾರಿಯನ್ನು ಗಂಡ, ಹೆಂಡತಿ ಮತ್ತು ಮಕ್ಕಳು ಹಂಚಿಕೊಂಡು ಮಾಡಬೇಕು ಎಂದು ಅವರು ಹೇಳಿದ್ದರು. ಮಹಿಳೆಯರು ತಮ್ಮ ಸಾಂಪ್ರದಾಯಿಕ ಜವಾಬ್ದಾರಿಗಳನ್ನು ಮೀರಿ, ದೇಶದ ಆಗುಹೋಗುಗಳಲ್ಲಿ ಭಾಗವಹಿಸಬೇಕು ಎಂಬುದು ಅವರ ಆಸೆಯಾಗಿತ್ತು. ಗಂಡುಮಕ್ಕಳೇ ಬೇಕೆಂಬ ಹಪಾಹಪಿಯನ್ನು ಅವರು ಟೀಕಿಸುತ್ತಿದ್ದರು. ಹುಡುಗಿಯರೂ ಹುಡುಗರಂತೆ ಮಕ್ಕಳು ಎಂದು ಸಹಜವಾಗಿ ಸ್ವೀಕರಿಸದಿದ್ದರೆ, ನಮ್ಮ ದೇಶ ಕಗ್ಗತ್ತಲೆಯಲ್ಲಿ ಇರುತ್ತದೆ ಎಂದೂ ಗಾಂಧೀಜಿ ಹೇಳಿದ್ದರು.

ಬಾಲವಿಧವೆಯರು : ಗಾಂಧೀಜಿ ಅವರಿಗೆ ಬಾಲವಿಧವೆಯರ ಬಗ್ಗೆ ತೀವ್ರ ಅನುತಾಪವಿತ್ತು. ಹಿಂದಿನ ಈ ಕೆಲವು ದಶಕಗಳಲ್ಲಿ ಬಾಲವಿಧವೆಯರ ವಿಚಾರದಲ್ಲಿ ಏನಾದರೂ ಸುಧಾರಣೆ ಕಂಡಿದ್ದರೆ ಅದಕ್ಕೆ ಗಾಂಧೀಜಿ ಮತ್ತು ಅವರ ಸಮಕಾಲೀನರಾದ ಕೆಲವು ಸಮಾಜ ಸುಧಾರಕರ ಪ್ರಯತ್ನಗಳೇ ಕಾರಣ. ಗಾಂಧೀಜಿ ಭಾರತದಾದ್ಯಂತ ಸಂಚಾರ ಮಾಡುತ್ತಿದ್ದರು, ಅಂತಹದೊಂದು ಸಂಚಾರದಲ್ಲಿ, “ನಾನು ದೇಶಾದ್ಯಂತ ಸಂಚಾರ ಮಾಡುವಾಗ, ಮದುವೆ ಆಗದಿರುವ 13 ವರ್ಷದ ಬಾಲೆಯನ್ನು ನೋಡಲೇ ಇಲ್ಲ” ಎಂದು ಖೇದ ವ್ಯಕ್ತಪಡಿಸಿದ್ದರು. ಹೆಣ್ಣುಮಕ್ಕಳನ್ನು ಕೇಳದೇ ಮಾಡುವ ಮದುವೆಗಳು ಅಪವಿತ್ರ ಎಂದೂ ಘೋಷಿಸಿದ್ದರು. ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಆ ಕಾಲದಲ್ಲಿ ಬಾಲವಿಧವೆಯರ ಸಂಖ್ಯೆ ಬಹಳಷ್ಟಿತ್ತು. ವಿಧವೆಯರನ್ನು ಮದುವೆಯಾಗಿ ಮತ್ತು ಬಾಲ್ಯವಿವಾಹವನ್ನು ವಿರೋಧಿಸಿ ಎಂದು ಗಾಂಧೀಜಿ ಯುವಕರಿಗೆ ಕರೆ ನೀಡಿದರು. ವಿಧವೆಯರನ್ನು ಮದುವೆಯಾದ ಅನೇಕರು ಮುಂದೆ ಸಮಾಜ ಸುಧಾರಕರಾಗಿ ಕೆಲಸ ಮಾಡಿದರು ಎಂಬುದು ನಮಗೆ ಗೊತ್ತಿದೆ.

ದೇವದಾಸಿಯರು ಮತ್ತು ವೇಶ್ಯೆಯರು : ಸಮಾಜದಲ್ಲಿದ್ದ ದೇವದಾಸಿಯರ ಹೀನಸ್ಥಿತಿಯ ಬಗ್ಗೆ ಗಾಂಧೀಜಿಯವರಿಗೆ ಬಹಳ ಬೇಸರವಿತ್ತು. ವೇಶ್ಯಾವಾಟಿಕೆಗಳಲ್ಲಿ ಮಕ್ಕಳಿಗೆ ಆಗುವ ಹಿಂಸೆಯ ಬಗ್ಗೆ ಅವರು ತುಂಬಾ ದುಃಖಿತರಾಗಿದ್ದರು. ಅವರ ಪುನರುಜ್ಜೀವನಕ್ಕೆ ಅನೇಕ ಯೋಜನೆಗಳನ್ನು ರೂಪಿಸಿದರು. ಮಹಿಳೆಯರ ಗೌರವ ರಕ್ಷಣೆಯನ್ನು ಕುರಿತು ಗಾಂಧೀಜಿ ಅವರು ತಮ್ಮ “ಮಹಿಳೆಯರು ಮತ್ತು ಸಾಮಾಜಿಕ ನ್ಯಾಯ” ಎಂಬ ಪುಸ್ತಕದಲ್ಲಿ ವಿಸ್ತಾರವಾಗಿ ಚರ್ಚಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ ದೇವದಾಸಿ ಪದ್ಧತಿ ಮತ್ತು ವೇಶ್ಯಾವಾಟಿಕೆ ಪದ್ಧತಿಯನ್ನು ರದ್ದು ಮಾಡಬೇಕು ಎಂದು ಅವರು ಹೇಳುತ್ತಿದ್ದರು. ದೇವದಾಸಿ ಪದ್ಧತಿ ಕಾನೂನಿನಲ್ಲಿ ರದ್ದಾಗಿದ್ದರೂ ಮಹಿಳೆಯರ ಲೈಂಗಿಕ ಶೋಷಣೆ ಆಧುನಿಕ ಕಾಲದಲ್ಲಿ ಹೇಗೆ ಮುಂದುವರೆದಿವೆ ಎನ್ನುವುದು ಎಲ್ಲರಿಗೂ ಗೊತ್ತು.

ಮಹಿಳೆಯರ ಏಳಿಗೆಗೆ ಗಾಂಧೀಜಿ ಕೊಡುಗೆ : ಚಳವಳಿಯ ದೊಡ್ಡ ನಾಯಕರಾಗಿ ಗಾಂಧೀಜಿ ರೂಪುಗೊಳ್ಳುವ ಮುನ್ನ ಇದ್ದ ಮಹಿಳೆಯರ ಸ್ಥಿತಿಗತಿಗೂ ಈಗಿನ ಸ್ಥಿತಿಗತಿಗೂ ಅಗಾಧ ಅಂತರವಿದೆ. ಅವರ ದೂರದೃಷ್ಟಿಯ ಪ್ರಭಾವದ ನೆರಳಲ್ಲಿ ಮಹಿಳಾ ನಾಯಕಿಯರ ತಲೆಮಾರೇ ಕಾಣಿಸಿಕೊಂಡಿತು. ಇಂದು ಮಹಿಳೆಯರು ಕಚೇರಿ, ವಿದ್ಯಾಸಂಸ್ಥೆ. ಕಾರ್ಖಾನೆಗಳಿಗೆ ಹಿಂಜರಿಕೆಯಿಲ್ಲದೆ ಹೋಗುವಂತಾಗಿದ್ದರೆ, ಅದಕ್ಕೆ ಗಾಂಧೀಜಿ ಮತ್ತವರ ಅನುಯಾಯಿಗಳು ಹಾಕಿದ ಅಡಿಪಾಯವೇ ಕಾರಣ. ಮಹಿಳೆಯರ ಅಭಿವೃದ್ಧಿಯನ್ನು ಒಳಗೊಳ್ಳುವಂತೆ ಅವರು ಸ್ವಾತಂತ್ರ್ಯ ಹೋರಾಟವನ್ನು ರೂಪಿಸಿದರು.

ಸಮಾಜದಲ್ಲಿ ಅನೇಕ ಅಸಮಾನತೆಗಳು ಉಳಿದಿದ್ದರೂ ಪುರುಷರು ಮತ್ತು ಮಹಿಳೆಯರು ಸಮಾನರು ಎಂಬ ಮೂಲಭೂತ ಸಿದ್ಧಾಂತವನ್ನು ನಾವು ಒಪ್ಪಿಕೊಂಡಿದ್ದೇವೆ. ಮಹಿಳೆಯರಿಗೆ ಮತದಾನದ ಹಕ್ಕೂ ಆರಂಭದಲ್ಲೇ ಸಿಕ್ಕಿದೆ. ಆಸ್ತಿ ಹಕ್ಕು, ವಿಚ್ಛೇದನದ ಹಕ್ಕು ಇವೆಲ್ಲವೂ ಮಹಿಳೆಯರ ಪಾಲಿಗಿದೆ. ಇಂದು ಗಾಂಧೀತತ್ವವನ್ನು ನಾವು ಮರೆತಿದ್ದರೆ ಅದಕ್ಕೆ ನಮ್ಮ ಹೀನ ರಾಜಕಾರಣವೇ ಕಾರಣ. ಮಹಿಳೆಯರ ಪ್ರಗತಿ ಕುರಿತು ಗಾಂಧೀಜಿಯವರ ಕನಸನ್ನು ನನಸು ಮಾಡಲು ಯುವಜನರು ಮನಸ್ಸು ಮಾಡಬೇಕು.
(ಡಾ. ಜ್ಯೋತ್ಸ್ನಾ ಕಾಮತ್ ಅವರ ಇಂಗ್ಲಿಷ್ ಲೇಖನದ ಸಂಗ್ರಹಾನುವಾದ.)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *