ನಾಟಕ-ದು.ಸರಸ್ವತಿ

ಎಲ್ಲೋದ್‍ವು ಎದೆಯ ಗೂಡಿನ ಅಕ್ಕಿಗಳು?
ಕತೆ ಏಳೋ ನಾನು ಎಣ್ಮಕ್ಳು ಏಳೋ ಕತೆನಾ ಕೇಳೋಕೆ ವೋಗಿದ್ದೆ. ಒಬ್ಬೊಬ್ಳುದು ಒಂದೊಂದು ಕತೆ,
ನನ್ ವಟ್ಟೆವಳ್ಗಿನ ಎಣ್ಮಗನ ನನ್ ಕೈಲೇ ವಸ್ಕಾಕಸ್ತರೆ
ನಾನ್ ಎತ್ ಎಣ್ಮಗಿಗೆ ನನ್ ಕೈಲೇ ಇಸ ಉಣ್‍ಸ್ತರೆ
ಜೀವ ಉಳಿಸ್ಕಂಡ್ರೆ ಅವ್ಮಾನನೇ ಉಣ್ಸಿ ಬೆಳಸ್ತರೆ
ಇಂಗೆ ಏಳ್ತಾ ಇದ್ ಅವ್ರ ಕತೆ ಕೇಳಿ ಮನ್ಸಿಗೆ ಸ್ಯಾನೆ ನೋವಾತು
ಎಣ್ಣನ್ನ
ಮೋಜಂತ ಮಜ ಮಾಡ್ತರೆ
ಸ್ವತ್ತು ಅನ್ಕಂಡು ಬೇಲಿ ಆಕ್ತರೆ
ಪಣಕ್ಕಿಟ್ಟು ಕುಸ್ತಿ ಆಡ್ತರೆ
ತಲೆ ಮ್ಯಾಲಿನ ಕಿರೀಟ ಮಾಡ್ಕತರೆ
ಕಾಲಾಗ್ಳ ಎಕ್ಡ ಮಾಡ್ಕತರೆ
ವೈರಿ ಅಂತ ದಾಳಿ ಮಾಡ್ತಾರೆ
ಸಂಪತ್ತು ಅಂದ್ಕಂಡು ಲೂಟಿ ಮಾಡ್ತಾರೆ
ಆಪತ್ತು ಅಂತ ಕೂಡಾಕ್ತರೆ
ಯಾಕಿಂಗೇ?
ಗಂಡ್ಸು ಅಂದ್ರೆ ಸಂಚು, ವಂಚ್ನೆ
ಗಂಡ್ಸು ಅಂದ್ರೆ ಸಾಹ್ಸ
ಗಂಡ್ಸು ಅಂದ್ರೆ ಆಳೋನು
ಗಂಡ್ಸು ಅಂದ್ರೆ ಕಾವ್ಲು ಕಾಯೋನು
ಗಂಡ್ಸು ಅಂದ್ರೆ ಯಜ್ಮಾನ
ಗಂಡ್ಸು ಅಂದ್ರೆ ಭೀತಿ
ಗಂಡ್ಸು ಅಂದ್ರೆ ದಾಳಿ
ಗಂಡ್ಸು ಅಂದ್ರೆ ಗೆಲ್ವು
ಏನಿಲ್ಲ ಅಂದ್ರು ತೋಳ್ ಮಡ್ಚಿ ಒಂದಾವಾಜ್ ಆಕ್ಲಿಲ್ಲ ಅಂದ್ರೆ ಗಂಡ್ಸು ಅನ್‍ಸ್ಕಳಲ್ಲ
ಹೆಂಗ್ಸು ಅಂದ್ರೆ ಒಂದ್ ಜೊತೆ ಮಲೆ, ಒಂದ್ ಜೊತೆ ತೊಡೆ, ಒಂದ್ ಯೋನಿ
ಹೆಂಗ್ಸು ಅಂದ್ರೆ ವಂಚಾಕಿ ಹಿಡ್ದಾಕ್ಬೇಕಾಗಿರೊ ಚಂಚ್ಲೆ
ಹೆಂಗ್ಸು ಅಂದ್ರೆ ಗೆಲ್ ಬೇಕಾಗಿರೊ ಮಾಯಾಂಗ್ನೆ
ಹೆಂಗ್ಸು ಅಂದ್ರೆ ಕಲ್ ವಡಿಬೇಕಾಗಿರೊ ಹುಚ್ಚಿ
ಹೆಂಗ್ಸು ಅಂದ್ರೆ ನಾಶ ಮಾಡ್ಬೇಕಾಗಿರೊ ನರ್ಕ
ಹೆಂಗ್ಸು ಅಂದರೆ ಮೋಸ
ಹೆಂಗ್ಸು ಅಂದ್ರೆ ಕೇಡು
ಅಂತ ಮಾಡ್ಕಂಡಿದಿವಿ, ಅದನ್ನೆ ನಂಬ್ಕಂಡಿದಿವಿ
ಅದ್ಕೆ ನಮ್ಮ ಸಂಬಂದ್ಗೋಳು ನೀನು ನಾನು ಬೇದ ಅಳ್ದು ಒಂದ್ರೊಳ್ಗೆ ಒಂದು ಎಣ್ಕಂಡಿರೊ ಬೆಸ್ಗೆ ಅಲ್ಲ
ನೀನ್ ಬ್ಯಾರೆ ನಾನ್ ಬ್ಯಾರೆ ಅಂತ ಎದ್ರಬದ್ರ ನಿಂತಿರೊ ಶತ್ರುಗಳು
ಅದ್ಕೆ ಬದ್ಕು ನಡ್ಯಲ್ಲ
ಯುದ್ಧ ನಡಿತದೆ, ಕದನ ನಡಿತದೆ, ಕಾಳಗ ನಡಿತದೆ
ಯಾಕಿಂಗಾಗದೆ ಅಂದ್ರೆ ಒಂದಾನೊಂದ್ ಕಾಲ್ದಾಗೆ ಗಂಡುಸ್ರು ಅಂಬೋರು ಮನುಸ್ರಾಗಿದ್ದಾಗ ಅವ್ರೆದೆಗ್ಳು ಅಕ್ಕಿ ಗೂಡ್ಗಳಾಗಿದ್ವು. ಅಲ್ಲಿದ್ದವು ಎಂತೆಂತೆ ಅಕ್ಕಿಗ್ಳು ಅಂತಿರಾ!
ನವ್ಲು, ಕಾಗೆ, ಕೋಗ್ಲು, ಗೀಜ್ಗ, ಪಿಕ್ಳಾರ, ಗುಬಚ್ಚಿ, ಮಂಗಟ್ಟೆ, ನೀಲಕ್ಕಿಗಳು
ಗರಿಕೆದ್ರಿ, ಈ ಚೆಲ್ವು ಈ ಕುಣ್ತ ನಿಂಗೆ ಅಂತ ಕುಣ್ಯುತ್ತಲ್ಲ ಕಣ್ಣಿಗೆ ಅಬ್ಬ ಅನ್ನಂಗೆ ಆ ನವ್ಲು ಗಂಡ್ಸಲ್ವಾ?
ಒಂದ್ಗಳು ಅನ್ನ ಕಂಡ್ರು ಅಂಚ್ಕಂಡು ಉಣ್ಣನಾ ಅಂತ ಕ್ರಾ ಕ್ರಾ ಅಂತ ಕರ್ಯುತ್ತಲ್ಲ ಕಾಗೆ ಗಂಡ್ಸಲ್ವಾ?
ಎಲ್ಲೇ ಮರೆನಾಗಿರ್ಲಿ ಒಲ್ದು ಬರಂಗೆ ಉಲ್ಯುತ್ತಲ್ಲ ಕೋಗ್ಲು ಗಂಡ್ಸಲ್ವಾ?
ಗಾಳಿನಾಗೆ ತೇಲಾಡೊ ಅಂತ ಬೆಚ್ಗಿನ ಗೂಡ್ ಕಟ್ಟಿ ಕರ್ಯುತ್ತಲ್ಲ ಗೀಜ್ಗ ಗಂಡ್ಸಲ್ವಾ?
ಬೆಚ್ಚನೆ ಗೂಡ್ ಕಟ್ಟಿ ಮೆತ್ತನೆ ಮೆತ್ತೆ ಹಾಸಿ ಜತೇಲಿ ಮಟ್ಟೆಗೆ ಕಾವ್ ಕೊಟ್ಟು, ಗುಕ್ ನೀಡೋ ಪಿಕ್ಳಾರ, ಗುಬ್ಬಚ್ಚಿ ಗಂಡ್ಸಲ್ವಾ?
ಗೂಡ್ನಾಗೆ ಮಟ್ಟೆಗೆ ನೆಮ್ದಿ ಆಗಿ ಕಾವ್ ಕೊಡೋಳ್ನ ಜೋಪಾನ ಮಾಡೋ ಮಂಗಟ್ಟೆ ಗಂಡ್ಸಲ್ವಾ?
ನೀರಿನ್ ದಡ್ದಾಗೆ ಗೂಡ್ ಕಟ್ಟಿ, ನೀಲಿ ಅಣ್ಣನ ಕಚಕ್ನೆ ಅಗ್ದು ಪುಚುಕ್ನೆ ಗ್ವಾಡೆಗೆ ಉಗ್ದು, ಕುಂಡಿ ಬಾಲ್ದಾಗೆ ಗೂಡ್ಗೆ ಬಣ್ಣ್ ವಡ್ದು, ಮಿಂಚುಳ ತಂದು ನೇತಾಕಿ ಅಲಂಕಾರ ಮಾಡಿ ನಿಂಗೆ ಒಪ್ಗೆನಾ ಅನ್ನುತ್ತಲ್ಲ ನೀಲಕ್ಕಿ ಗಂಡ್ಸಲ್ವಾ?
ಎಲ್ಲ ಅಕ್ಕಿಗ್ಳು ಕಳ್ದೋಗವೆ. ಅವು ಕಳ್ದೋಗವೆ ಅನ್ನದಿರ್ಲಿ ಅವು ಇದ್ವು ಅನ್ನೊ ಗ್ಯಪ್ತಿನೂ ಈ ಬೇಕೂಪ್‍ಗಳ್ಗೆ ಇಲ್ಲ
ಉಡಿಕ್ಕಂಡು ಬರಕೆ
ದಣಿವಾಗ್ದ ರೆಕ್ಕೆ ಬೇಕು
ಇಂಗ್ಡಿಸಿ ನೋಡೋ ಕಣ್‍ಬೇಕು
ಎಲ್ಕಿಂತ ಮದ್ಲು ಮ್ಯಾಕೆ ಆರಾಕೆ ಅಗ್ರಾಗ್ಬೇಕು
ಅಗ್ರಾಗಕೆ ಅಮ್ಮು ಅದ್ಕಾರ ದುರಾಸೆ ಬಾರ ಕಳ್ಕಬೇಕು
ಅಯ್ಯೋ ನಿನ್ ಪಕ್ಸಿ ಮನೆ ಆಳಾಗ ಅಮ್ಮುಆಸೆ ಅದ್ಕಾರ ಇಲ್ದೆ ಇರಕಾದಾತ ಅಂತೀರ?
ಅಲ್ವ ಮತ್ತೆ?
ಕಿರೀಟ ಬ್ಯಾಡ್ವಾ ತಲೆ ಮ್ಯಾಕೊಂದು ಎಸೇ ಬಾರ್ವಾಗಿರ್ಲಿ?
ತಲೆಮ್ಯಾಗ್ಳ ಭಾರ ಎಂತದು ಅಂತವಾ ಮೈಲ್ ದೂರ್ದಿಂದ ಉರ್ಯ ಬಿಸಿಲ್ನಾಗೆ ಸೌದೆ ವರೆ ವಂತ್ಕಂಡು ಬತ್ತರಲ್ಲ ಎಂಗುಸ್ರು ಅವ್‍ರ್ನಾ ಕೇಳಿ. ಕುತ್ಗೆ ನರ ಎಂಗೆ ನರ್ಗುಡ್ತವೆ ಅಂತ ಯೋಳ್ತರೆ. ಸೌದೆ ತಂದ್ಮೇಲೆ ಒಲ್ಗಿಕ್ಕಿ ಉರಿ ಆಕಿ ನೀರ್ ಕಾಯ್ಸಿ ಬೆಚ್ಗೆ ಉಯ್ಕಂತರೆ, ಉರ್ದಿರೊ ಸೌದೆ ಬೂದಿ ಆದ್ಮೇಲೆ ಉಫ್ ಅಂದ್ರೆ ಆರೋಯ್ತಳೆ ಅಷ್ಟೇ
ಸಿಮ್ಮಾಸ್ನ ಬ್ಯಾಡ್ವೆ? ಸಿಕ್ತು ಸಿಮ್ಮಾಸ್ನ ಅಂತ ಅಂಟ್ಕಂಡು ಕೂತ್ಕಂಡ್ರೋ ಉಸಾರು, ಮಲ್ ರೋಗ ಬಂದು ಅರಅರ ಸಿವಸಿವ ಅನ್ನಂಗಾಗುತ್ತೆ
ಆಳಾಕೆ ಒಂದ್ ಸಾಮ್ರಾಜ್ಯ ಬ್ಯಾಡ್ವೆ? ಯಾರಿಗ್ಬೇಡಾ? ಎಷ್ಟ್ ಅಗ್ಲ, ಎಷ್ಟುದ್ದ ಸಾಮ್ರಾಜ್ಯವೇ ಇರ್ಲಿ ಮಣ್ಣಾಗಕೆ ಆರಡಿಮೂರಡಿ ಸಾಕು.
ಕೈಗೆಕಾಲ್ಗೆ ಆಳು ಬ್ಯಾಡ್ವೆ ಮೈಕೈ ವತ್ಸ್‍ಕಳಕೆ? ಬೇಕು ಬೇಕು, ಏನು ಆಗೊಂದಪ ಈಗೊಂದಪ ವತ್ಸ್‍ಕಂಡ್ರೆ ಪರ್ವಾಗಿಲ್ಲ ಯಾವಾಗ್ಲು ವತ್ಸ್‍ಕಂತಿದ್ರೆ ಮೂಳೆ ಕೀಲು ತುಕ್ಕಿಡದ್ರೆ ಪರ್ಮೆಟ್ಟಾಗಿ ಎತ್ಬೇಕಾಗುತ್ತೆ ಇಳ್ಕ್ ಬೇಕಾಗತ್ತೆ
ಚಪ್ಪಾಳೆಬೋಪರಾಕು ಬೀಳ್ತಾ ಇದ್ರೆ ಅಹಹಹಾ ಏನ್ ಸಂತೋಸ ಗುಂಡ್ಗೆ ಅಂಬೋದು ಊದಿ ಉಲ್ಮೆಕಾಯಾತದೆ. ಜಾಪಾನ! ಗುಂಡ್ಗೆ ಅನ್ನೊದು ಬಲೂನಿದ್ದಂಗೆ ಸ್ಯಾನೆ ಉಬ್ಬಿರೆ ಪಟ್ನೆ ವಡ್ದೊತಳೆ ಆಮ್ಯಾಲೆ ಕ್ಯಾಬಿನಯ್
ಏನಿದ್ರು ನಿನ್ನ ಅಸ್ವಿಗೆ ನೀನೇ ಉಣ್ಬೇಕು ನಿನ್ ನೋವು ನೀನೇ ಅನ್‍ಬೋಗ್ಸ್ ಬೇಕು
ಬಾರ್ವಾಗಿ ಮುಳ್ಗಿ ಉಸ್ರುನ್ನ ಕಟ್ಸದಾ
ಅಗ್ರಾಗಿ ಹಾರಿ ಉಸ್ರುನ್ನ ಆಡ್ಸದಾ
ನಮ್ಗೆ ಬಿಟ್ಟಿದ್ದು
ನಾನ್ ಮಾತ್ರ ಅಕ್ಕಿಗುಳ್ನೆ ಉಡಿಕ್ಕಂಡು ವೋಯ್ತಿನಿ ಉಡ್ಕಿರೆ ಸಿಕ್ಕೇ ಸಿಕ್ತವೆ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *