ನವಮಾಧ್ಯಮ ಮತ್ತು ಹೆಂಗೆಳೆಯರ ‘ಸೆಲಬ್ರಿಟಿ ಕ್ರೇಜ್‌’ !

ಫೇಸ್‌ಬುಕ್‌, ವಾಟ್ಸಾಪ್‌, ಇನ್ಸ್ಟಾಗ್ರಾಂ,  ಟ್ವಿಟ್ಟರ್‌ನಂತಹ ನವಮಾಧ್ಯಮಗಳ ಸಂಖ್ಯೆ ಹೆಚ್ಚಿದಂತೆಲ್ಲ ಜನರಲ್ಲಿ ಅದರಲ್ಲೂ ಹೆಣ್ಣುಮಕ್ಕಳಲ್ಲಿ ಸೆಲಬ್ರಿಟಿ ಕ್ರೇಜ್‌ ಹೆಚ್ಚುತ್ತಿದೆ. ಈ ಬಗ್ಗೆ ಒಂದು ಚಿಂತನೆ…

ಹೆಣ್ಣುಮಕ್ಕಳಲ್ಲಿ ‘ಆಟೋಗ್ರಾಫ್’ ಕ್ರೇಜಿನ ಕಾಲವೊಂದಿತ್ತು. ಬಹುತೇಕವಾಗಿ ತಮ್ಮ ಶಾಲಾ – ಕಾಲೇಜುಗಳಿಗೆ, ಊರಿನ ಸಮಾರಂಭಗಳಿಗೆ ಬರುವ ಗಣ್ಯರ ಸಹಿ ಅಥವಾ ಹಿತನುಡಿಗಳನ್ನು ಪುಟ್ಟದಾದ, ಆಟೋಗ್ರಾಫ್ ಪುಸ್ತಕದಲ್ಲಿ ಬರೆಸಿಕೊಂಡು ಅದನ್ನು ನಿಧಿಯಂತೆ ಕಾಪಾಡಿಕೊಳ್ಳುತ್ತಿದ್ದರು. ಶಾಲೆ – ಕಾಲೇಜಿನ ಕೊನೆಯ ವರುಷಗಳಲ್ಲಿ ಸ್ನೇಹಿತರ ಹಿತನುಡಿಗಳನ್ನು ಪರಸ್ಪರ ಬರೆಯಿಸಿಕೊಂಡು ಅವರ ನೆನಪುಗಳನ್ನು ಆ ಹಾಳೆಗಳ ಮೇಲೆ ಶಾಶ್ವತವಾಗಿ ಉಳಿಸಿಕೊಂಡು ಅವರ ನೆನಪಾದಾಗಲೆಲ್ಲ ಓದಿ ಹನಿಗಣ್ಣಾಗುವುದು ಬಹುತೇಕ ಹೆಣ್ಣುಮಕ್ಕಳ ಜೀವನದ ಭಾಗವಾಗಿತ್ತು. ಸಹಿ ಪಡೆಯುವ ಗಣ್ಯರಲ್ಲಿ ಹೆಚ್ಚಿನವರು ಅವರ ಮೆಚ್ಚಿನ ಲೇಖಕರಿರುತ್ತಿದ್ದರು. ಅವರು ಯಾರನ್ನೂ ಆಗ ಸೆಲೆಬ್ರಿಟಿಗಳಾಗಿ ಬ್ರ್ಯಾಂಡ್ ಮಾಡಿರಲಿಲ್ಲ ! ಭಾರತೀಯ ಮಾಧ್ಯಮದಲ್ಲಿ ಆಗ ‘ಸೆಲೆಬ್ರಿಟಿ ‘ಎಂಬ ಪದವೇ ಇನ್ನೂ ಹುಟ್ಟಿರಲಿಲ್ಲ !

ಎಂಬತ್ತರ ದಶಕದಲ್ಲಿ ಅಂದಿನ ಮುದ್ರಣ ಮಾಧ್ಯಮಗಳು ಸಿನಿಮಾ ನಟ-ನಟಿಯರನ್ನು ‘ತಾರೆ ’ ಯರೆಂದು ಕರೆದು ಅವರನ್ನು ಆಕಾಶಕ್ಕೆ ಏರಿಸಿದಂತೆ ಆ ಮೂಲಕ ಓದುಗರನ್ನೂ ಸೆಳೆಯುವ ತಂತ್ರ ಹೆಣೆದರು. ಇದಕ್ಕೆ ಬಹುಮುಖ್ಯ ಕಾರಣ ಮುದ್ರಣ ಮಾಧ್ಯಮದಲ್ಲಿ ಆದ ಕ್ರಾಂತಿಕಾರಿ ಬದಲಾವಣೆಗಳು. ಸಿನಿಮಾ ಪತ್ರಿಕೆಗಳು, ಮಹಿಳೆಯರಿಗಾಗಿ ಹಾಗೂ ಪುರುಷರಿಗಾಗಿ ವಿಶೇಷ ಮ್ಯಾಗಜೀನುಗಳು, ಟ್ಯಾಬ್ಲಾಯ್ಡ್‍ಗಳು, ಜೊತೆಗೆ ಜಿಲ್ಲಾ ಮಟ್ಟದ ಪತ್ರಿಕೆಗಳು ಹೀಗೆ ತರಹೇವಾರಿ ಪತ್ರಿಕೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು. ತಮ್ಮ ಪತ್ರಿಕೆಗಳ ಓದುಗರನ್ನು ಹಿಡಿದಿಟ್ಟುಕೊಳ್ಳಲು ಹಾಗೂ ಹೊಸ ಓದುಗರನ್ನು ಸಂಪಾದಿಸಲು ಮುದ್ರಣ ಮಾಧ್ಯಮ ಹರಸಾಹಸ ಮಾಡಿತು. ಆಗ ಸಿನಿಮಾ ತಾರೆಯರಿಗಾಗಿ, ಗಾಸಿಪ್ ಪ್ರಿಯರಿಗಾಗಿ ‘ಪೇಜ್ 3 ‘ ಯನ್ನು ಈ ಎಲ್ಲ ಮಾಧ್ಯಮಗಳೂ ಮೀಸಲಾಗಿಟ್ಟವು. ಈ ಪೇಜ್ ಸಾಮಾನ್ಯ ಓದುಗರಿಗೆ ಅಲ್ಲವೇ ಅಲ್ಲ. ಅದೇನಿದ್ದರೂ ಸಮಾಜದ ಗಣ್ಯಾತಿಗಣ್ಯರ ಸಾಮಾಜಿಕ ಹಾಗೂ ಖಾಸಗಿ ಬದುಕನ್ನು ಜಗದೆದುರು ತೆರೆದಿಟ್ಟು ಹಣ ಮಾಡುವ ಹುನ್ನಾರ. ಇದನ್ನು ಬಾಯಿ ಚಪ್ಪರಿಸಿ ಸವಿದದ್ದು ಯುವಜನತೆ ಹಾಗೂ ಮಹಿಳೆಯರು. ಈ ಹಿನ್ನೆಲೆಯಲ್ಲಿ ಶೋಭಾ ಡೇ ಅಂತಹ ಅನೇಕ ಲೇಖಕಿಯರೂ ಹುಟ್ಟಿಕೊಂಡರು. ಪುಕ್ಕಟೆ ಜನಪ್ರಿಯತೆ ಸಿಗುವ ಕಾರಣ ನಟ ನಟಿಯರು ಈ ತಂತ್ರಕ್ಕೆ ಮನಸೋತರು. ಮುಂದಿನ ಒಂದು ದಶಕದ ಕಾಲ ತಾರೆಯರಾಗಿ ಉಳಿದ ಅವರನ್ನು ತೊಂಬತ್ತರ ದಶಕದಿಂದ ಇನ್ನೂ ಮೇಲ್ದರ್ಜೆಗೆ ಏರಿಸಿ ‘ ಸೆಲೆಬ್ರಿಟಿ’ ಗಳನ್ನಾಗಿ ಮಾಡಿದವು ಇವೇ ಮುದ್ರಣ ಮಾಧ್ಯಮಗಳು. ಇದಕ್ಕೆ ಕಾರಣ ಅವುಗಳಿಗೆ ವಿದ್ಯುನ್ಮಾನ ಮಾಧ್ಯಮಗಳಿಂದ ಆಗ ತೀವ್ರ ಪೈಪೋಟಿ ಎದುರಾಗಿ ಬದಲಾವಣೆ ಅನಿವಾರ್ಯವಾಗಿತ್ತು. ಇಪ್ಪತ್ತನೇ ಶತಮಾನದ ಅಂತ್ಯದವರೆಗೂ ಸಿನಿಮಾ ತಾರೆಯರು ಮಾತ್ರ ‘ಸೆಲೆಬ್ರಿಟಿ’ ಗಳಾಗಿ ಮೆರೆಯುತ್ತಿದ್ದರು.

ಆದರೆ ಕಳೆದ ಒಂದು ದಶಕದಿಂದ ಎಲ್ಲೆಲ್ಲೂ ಸೆಲೆಬ್ರಿಟಿಗಳದೇ ಸದ್ದು. ಅವರು ರಾಜಕೀಯ ಮುಂದಾಳುಗಳಾಗಿರಬಹುದು, ಸಿನಿಮಾ ತಾರೆಯರಾಗಿರಬಹುದು, ಪ್ರಸಿದ್ಧ ಆಟಗಾರರು ಹಾಗೂ ಅವರ ಪತ್ನಿಯರಾಗಿರಬಹುದು, ಗ್ಲಾಮರಸ್ ಆಗಿರುವ ಮಾಧ್ಯಮದವರಾಗಿರಬಹುದು, ರೇಡಿಯೋ ಜಾಕಿಗಳಾಗಿರಬಹುದು ಕೊನೆಗೆ ವೇದಿಕೆಯ ಕಾರ್ಯಕ್ರಮಗಳನ್ನು ನಿರ್ವಹಿಸುವ ನಿರೂಪಕರೂ ಕೂಡ ಆಗಿರಬಹುದು. ಅಪರೂಪಕ್ಕೆ ಪ್ರಾಣಿಗಳು, ಪಕ್ಷಿಗಳು, ಹೂವುಗಳೂ ಸೆಲೆಬ್ರಿಟಿಗಳಾಗುವುದಿದೆ. ನಟ-ನಟಿಯರನ್ನೇನೋ ಮಾಧ್ಯಮಗಳು ಸೆಲೆಬ್ರಿಟಿಗಳನ್ನಾಗಿ ಮಾಡಿದವು. ಉಳಿದವರು ತಮ್ಮನ್ನು ತಾವೇ ಸೆಲೆಬ್ರಿಟಿಗಳೆಂದು ಕರೆದುಕೊಳ್ಳುತ್ತಿರುವುದು ವಿಶೇಷ. ಇವರಲ್ಲಿ ಬಹುತೇಕರು ಹೆಂಗಸರು ಎನ್ನುವುದು ಗಮನಾರ್ಹ.

‘ಸೆಲೆಬ್ರಿಟಿ ’ ಎಂಬ ಪದ ಹುಟ್ಟಿರುವುದಾದರೂ ಹೇಗೆ ? ಯಾರು ಈ ಸೆಲೆಬ್ರಿಟಿಗಳು ಹಾಗೂ ಯಾಕೆ ಅವರು ಸೆಲೆಬ್ರಿಟಿಗಳು ? ಇತಿಹಾಸದ ಅನೇಕ ಅದ್ಭುತಗಳು ಮತ್ತು ಎಡವಟ್ಟುಗಳು ಗ್ರೀಸ್ ಹಾಗೂ ರೋಮ್ ನಗರಗಳಲ್ಲಿ ನಡೆದಿರುವುದು ಎಲ್ಲರಿಗೂ ತಿಳಿದಿರುವುದೆ. ಈ ‘ಸೆಲಬ್ರಿಟಿ ‘ ಪದ ಹುಟ್ಟಿಕೊಂಡಿದ್ದೂ ಅಲ್ಲಿಯೇ. ಪುರಾತನ ಗ್ರೀಸಿನಲ್ಲಿ ಆಟಗಾರರು ವಿಜಯಿಯಾಗಿ ತಮ್ಮ ಊರುಗಳಿಗೆ ಹಿಂತಿರುಗಿದಾಗ ಅವರನ್ನು ಇನ್ನಿಲ್ಲದ ಉತ್ಸಾಹದಿಂದ ಸ್ವಾಗತಿಸಲಾಗುತ್ತಿತ್ತು. ಅವರ ಕುರಿತು ಕವಿತೆಗಳನ್ನು ಬರೆದು ಹಾಡಲಾಗುತ್ತಿತ್ತು. ಅವರ ಊಟ-ಉಪಚಾರಗಳ ಖರ್ಚನ್ನು ಊರಿನ ಶ್ರೀಮಂತರು ಭರಿಸುವುದರ ಮೂಲಕ ತಾವು ಸೆಲೆಬ್ರಿಟಿಗಳು ಎಂದು ಕರೆಯಲ್ಪಡುತ್ತಿದ್ದರು. ಅದರಂತೆ ರೋಮಿನಲ್ಲಿ ನಟರಿಗೆ ಆ ಗೌರವ ಸಿಗುತ್ತಿತ್ತು. ಜೂಲಿಯಸ್ ಸೀಜರ್ ಜೀವಿತ ಕಾಲದಲ್ಲೇ ತನ್ನ ಮುಖಮುದ್ರೆಯ ನಾಣ್ಯವನ್ನು ಹೊರತಂದು ಹೊಸ ಇತಿಹಾಸವನ್ನೇ ಬರೆದ. ಒಟ್ಟಾರೆ ಹೇಳುವುದಾದರೆ ಸೆಲಬ್ರಿಟಿ ಸ್ಥಾನ, ಖ್ಯಾತಿ ಹಾಗೂ ಐಶ್ವರ್ಯದ ಜೊತೆಜೊತೆಗಿತ್ತು. ಆ ನಂತರ 18-19ನೇ ಶತಮಾನದಲ್ಲಿ ವಿದೇಶಿ ಪತ್ರಿಕೆಗಳು ಗಾಸಿಪ್ ಕಾಲಂಗಳನ್ನು ಆರಂಭಿಸಿದವು. ಇದು ಬೆಳಗಾಗುವುದರೊಳಗೆ ಎಲ್ಲರನ್ನೂ ಸೆಲೆಬ್ರಿಟಿಗಳಾಗಿ ಮಾಡುವ ಸಾಮರ್ಥ್ಯಕ್ಕೆ ಮುನ್ನುಡಿ ಬರೆಯಿತು. ಖ್ಯಾತಿಯ ಬೆನ್ನು ಹತ್ತಿದವರು ಇದನ್ನು ಚೆನ್ನಾಗಿ ಬಳಸಿಕೊಂಡರು. ವಿದೇಶಿ ತಾರೆಯರು ವಿಶ್ವದಾದ್ಯಂತ ಮನೆಮಾತಾದರು.

20ನೇ ಶತಮಾನದ ಉತ್ತರಾರ್ಧ ಈ ಹಪಹಪಿಯನ್ನು ಭಾರತಕ್ಕೂ ತಂದು ನಿಲ್ಲಿಸತು. ಹಿಂದಿ ಭಾಷೆಯ ಆಗಿನ ಮೇರುನಟ ರಾಜ್‍ಕಪೂರ್ ಸೋವಿಯತ್ ರಷ್ಯಾದಲ್ಲಿ ಭಾರತದಷ್ಟೇ ಖ್ಯಾತಿ ಗಳಿಸಿದರು. ಅಲ್ಲಿಂದ ಪ್ರಾರಂಭವಾದ ಸೆಲಬ್ರಿಟಿ ಸ್ಥಾನದ ಖಯಾಲಿ ಹೆಚ್ಚುತ್ತಲೇ ಹೋಯಿತು. ಆಗ ಭಾರತದಲ್ಲಿ ದೂರದರ್ಶನ ಅಡಿಯಿಡುತ್ತಿದ್ದ ಕಾಲ. ಅಲ್ಲಿನ ವಾರ್ತಾವಾಚಕಿಯರು ಸೆಲಬ್ರಿಟಿಗಳಾದರು. ಅವರ ಜನಪ್ರಿಯತೆ ಯಾವ ನಟಿಯರಿಗೂ ಕಡಿಮೆ ಇರಲಿಲ್ಲ. ಪ್ರಾದೇಶಿಕ ಟಿವಿ ಹಾಗೂ ರೇಡಿಯೊ ವಾಹಿನಿಗಳು ಹೆಚ್ಚಿದಂತೆ ಭಾರತದಲ್ಲಿ ಸೆಲಬ್ರಿಟಿಗಳೂ ಹೆಚ್ಚುತ್ತ ಹೋದರು. ಇವರಲ್ಲಿ ಕೆಲವರನ್ನು ಮಾಧ್ಯಮಗಳು ಆ ಮಟ್ಟಕ್ಕೆ ಬೆಳೆಸಿದರೆ ಕೆಲವರು ತಾವೇ ಅದನ್ನು ಆರೋಪಿಸಿಕೊಂಡರು. 20 ನೇ ಶತಮಾನದ ಅಂತ್ಯದಲ್ಲಿ ಭಾರತದ ಮಾಹಿತಿ ತಂತ್ರಜ್ಷಾನ ಕ್ಷೇತ್ರ. ಖ್ಯಾತಿಯ ಎಲ್ಲ ದಿಡ್ಡಿ ಬಾಗಿಲುಗಳನ್ನೂ ತೆರೆದುಬಿಟ್ಟಿತು. ಬೆರಳ ತುದಿಯಲ್ಲಿ ವಿಶ್ವದ ಆಗು ಹೋಗುಗಳನ್ನು ನಿಯಂತ್ರಿಸಬಲ್ಲ ಈ ಸಶಕ್ತ ಕ್ಷೇತ್ರ ಆಧುನಿಕ ಮಾಧ್ಯಮಗಳನ್ನು ಬೆಳೆಸಿತು. ಇದರಿಂದ ಎಲ್ಲರೂ ಎಲ್ಲರಿಗೂ ಸೆಲಬ್ರಿಟಿಗಳೇ. ಚಿತ್ರ ತಾರೆಯರು ಅಥವಾ ಅವರ ಪತ್ನಿಯರ ಜೊತೆ, ಹಿರಿಯ ಲೇಖಕರ ಜೊತೆ ಫೊಟೋ ತೆಗೆಸಿಕೊಂಡವರು, ವೇದಿಕೆ ಹಂಚಿಕೊಂಡವರೂ ಸೆಲಬ್ರಿಟಿಗಳಾದರು. ಶಹರಗಳಲ್ಲಿ ದಿನಬೆಳಗಾದರೆ ನೂರಾರು ಕಾರ್ಯಕ್ರಮಗಳು ಆಯೋಜಿತವಾಗಹತ್ತಿದವು. ಇದು ವೇದಿಕೆಯ ಮತ್ತನ್ನು ಎಲ್ಲರಿಗೂ ಏರಿಸಿತು. ವೇದಿಕೆ ಏರಿದವರೆಲ್ಲ ಸೆಲಬ್ರಿಟಿಗಳೆಂದು ಭ್ರಮಿಸಿದ್ದು ವಿಪರ್ಯಾಸವೋ , ಹಾಸ್ಯಾಸ್ಪದವೋ ಹೇಳುವುದು ಕಷ್ಟ. ಏಕೆಂದರೆ ಅಪರಾಧಿಗಳೂ ಸೆಲಬ್ರಿಟಿಗಳಾಗಿ ಮಾಧ್ಯಮಗಳಲ್ಲಿ ಮಿಂಚ ತೊಡಗಿದರು. ಜನ ಅವರನ್ನು ಕುತೂಹಲದಿಂದ ಗಮನಿಸಿದರು. ಅದಕ್ಕಾಗಿಯೇ ಅಂಥ ಅಪರಾಧಿಗಳ ಚಲನಚಿತ್ರಗಳು, ಕಥೆಗಳು, ಟಿವಿ ಸಂದರ್ಶನಗಳು ನಿರಂತರವಾಗಿ ಬಂದವು.

21ನೇ ಶತಮಾನದ ಮೊದಲ ದಶಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆತ್ಮಕಥನಗಳ ಹೊಳೆಯನ್ನೆ ಹರಿಸಿತು. ಕುತೂಹಲ, ಸೋಜಿಗದಿಂದ ಇವುಗಳನ್ನು ಎದುರು ನೋಡುತ್ತಿದ್ದ ಓದುಗ ವರ್ಗಕ್ಕೆ ಖಾಸಗಿ ಬದುಕುಗಳು ರುಚಿಸಿದವು. ಇದುವರೆಗೂ ಗೌಪ್ಯವಾಗಿದ್ದ ಸಂಗತಿಗಳು, ವ್ಯಕ್ತಿಗಳ ತೆರೆಮರೆಯ ಜೀವನ ಬಟಾಬಯಲಾಗಿದ್ದು ಅವರನ್ನೆಲ್ಲ ಸೆಲಬ್ರಿಟಿಗಳನ್ನಾಗಿಸಿತು.

ಇಂದಿನ ಫೇಸ್‍ಬುಕ್, ವಾಟ್ಸಪ್‌ , ಟ್ವಿಟರ್‌ಗಳ ಯಗದಲ್ಲಿ ಹೆಚ್ಚು ಲೈಕ್  ಒತ್ತಿಸಿಕೊಂಡವರು, ಫ್ರೆಂಡ್ಸ್‌ ಹೊಂದಿರುವವರು, ಹಿಂಬಾಲಕರಿರುವವರು ಸೆಲಬ್ರಿಟಿಗಳು. ಅಪರಿಚಿತರಿಗೆ ವೇದಕೆ ಸಿಕ್ಕಿದ್ದು, ಅಭಿವ್ಯಕ್ತಿಗೆ ಅವಕಾಶ ಸಿಕ್ಕಿದ್ದು, ಅವರಲ್ಲಿ ಆತ್ಮಸ್ಥೈರ್ಯ ಹಾಗೂ ಜೀವನೋತ್ಸಾಹ ತುಂಬಿ ಮುಖ್ಯವಾಹಿನಿಗೆ ಅವರನ್ನು ತೆರೆಯುವಂತೆ ಮಾಡಿದ್ದು ಈ ಆಧುನಿಕ ಮಾಧ್ಯಮಗಳ ಹೆಗ್ಗಳಿಕೆ. ಆದರೆ ಅದರ ಇನ್ನೊಂದು ಮುಖವೂ ಇದೆ. ಅವರಿಗೆ ಸಿಕ್ಕಷ್ಟು ಲೈಕುಗಳು ತನಗೆ ಸಿಗಲಿಲ್ಲ ಎಂದು, ಅವರು ನನಗಿಂತ ಪ್ರಸಿದ್ಧರಾಗುತ್ತಾರೆ ಎಂದು, ತಾನು ಸುದ್ದಿಯಲ್ಲಿರಲು ಏನಾದರೂ ಮಾಡುತ್ತಲೇ ಇರುವ ಗೀಳನ್ನು ಹತ್ತಿಸಿಕೊಂಡವರ ಸಂಖ್ಯೆ ಹೆಚ್ಚಾಗಿದೆ. ಕಂಡಕಂಡಲ್ಲಿ ಫೋಟೋ ತೆಗೆದು ಅಪ್‍ಲೋಡ್ ಮಾಡಿ ಬರುವ ಲೈಕುಗಳಿಗಾಗಿ ಸದಾ ಆನ್‍ಲೈನಿನಲ್ಲಿದ್ದು ಮತ್ತೆ ಮತ್ತೆ ತಮ್ಮ ಗೋಡೆಗಳಿಗೆ ಹಣುಕುವ ಚಟವನ್ನು ಅನೇಕ ಹೆಣ್ಣುಮಕ್ಕಳು, ಹೆಂಗಳೆಯರು ಬೆಳೆಸಿಕೊಂಡಿದ್ದಾರೆ. ಈ ಗೀಳು ಆಟೋಗ್ರಾಫ್ ಕ್ರೇಜಿನಂತೆ ಸೌಮ್ಯವಲ್ಲ. ಹದಿಹರೆಯದ ಮುಗ್ಧ ಉತ್ಸಾಹವಲ್ಲ. ಬದಲಾಗಿ ಮಾನಸಿಕ ಕ್ಷೋಭೆಗೆ, ಖಿನ್ನತೆಗೆ ಕಾರಣವಾಗುತ್ತಿದೆ.

ಡಾ. ಜಿ ಎಸ್ ಶಿವರುದ್ರಪ್ಪನವರು, ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ’ ಎಂದಿದ್ದಾರೆ. ಡಿ ವಿ ಜಿ ಯವರು, ‘ ಬಾರೆನೆಂಬುದನು ಬಿಡು ಹರುಷಕ್ಕಿದೆ ದಾರಿ’ ಎಂದಿದ್ದಾರೆ. ಇವರೆಲ್ಲ ಈ ಜೀವನ ತತ್ವಗಳನ್ನು ಸಾರಿದ್ದು ಆಧುನಿಕ ಮಾಧ್ಯಮಗಳ ಸದ್ದೇ ಇರದಿದ್ದಾಗ. ಆದರೆ ಅವರ ಆ ಕಾಣ್ಕೆಗಳು ಇಂದಿನ ದಿನಕ್ಕೂ ಸೂಕ್ತವಾಗಿವೆ. ಮೊದಲು ವೇಷ-ಭೂಷಣಗಳಿಗೆ ಜಟಾಪಟಾಯಿಸುತ್ತಿದ್ದ ನಮ್ಮ ಮಹಿಳೆಯರು ಇಂದು ಸೆಲಬ್ರಿಟಿ ಕ್ರೇಜಿನ ಜಟಾಪಟಿಗೆ ಬಿದ್ದಂತಿದೆ. ಇವರಲ್ಲಿ ಬಹತೇಕರು ವಿದ್ಯಾವಂತರು, ‘ಕಂಪ್ಯೂಟರ್ ಲಿಟರೇಟ್’ಗಳು ಎನ್ನುವುದಕ್ಕಿಂತ ವಿಪರ್ಯಾಸ ಬೇಕೆ ?

ನೂತನ ದೋಶೆಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *