ಹೆಣ್ಣು ಹೆಜ್ಜೆ / ನರಳುವಿಕೆಯನ್ನು ಇತರರಿಗೆ ಹೇಳುವ ಸ್ಥೈರ್ಯ!- ಡಾ. ಕೆ.ಎಸ್. ಪವಿತ್ರ

ಮನೋರೋಗ ಕಣ್ಣಿಗೆ ಕಾಣಿಸುವಂತದ್ದಲ್ಲ. ಹಾಗಾಗಿ ಅದನ್ನು ಅರ್ಥ ಮಾಡಿಕೊಳ್ಳುವುದು ಕುಟುಂಬಕ್ಕೆ, ಸಮಾಜಕ್ಕೆ ಕಷ್ಟವೇ. ಮಹಿಳೆಯರ ಅನಾರೋಗ್ಯಕ್ಕೆ, ಆರೋಗ್ಯದ ಬಗೆಗಿನ ಅಜ್ಞಾನಕ್ಕೆ ಮಹಿಳೆ ತನ್ನ ಸಮಸ್ಯೆಗಳ ಬಗೆಗೆ ಮುಕ್ತವಾಗಿ ಹೇಳಿಕೊಳ್ಳದಿರುವುದೂ ಒಂದು ಪ್ರಮುಖ ಕಾರಣ ಎಂಬುದು ಗಮನಾರ್ಹ. ಹೀಗಿರುವಾಗ ಒಬ್ಬ ಮನೋರೋಗಿ ತಾನು ಎದುರಿಸಿದ ಮಾನಸಿಕ ಕಾಯಿಲೆ, ಸಂಕಷ್ಟಗಳು, ತಾನು ಅವುಗಳಿಂದ ಹೊರಬಂದ ಬಗೆಯನ್ನು ಸುಮಾರು 24 ವರ್ಷಗಳ ಹಿಂದೆಯೇ, ಆತ್ಮಕತೆಯ 200 ಪುಟಗಳ ಒಂದು ಕಾದಂಬರಿಯಾಗಿ ಬರೆಯುವುದು ಮನಸ್ಸಿನ ಸ್ಥಿರತೆಯ ಗುರುತು ಅನ್ನಿಸುವುದಿಲ್ಲವೇ?


ಇದು `ಸ್ನೇಹಾ-ಮನೋರೋಗಿಯ ಆತ್ಮಕತೆ' ಎಂಬ ಪುಟ್ಟ ಪುಸ್ತಕಕ್ಕೆ ಸಂಬಂಧಪಟ್ಟ ಬರೆಹ. ಒಂದು ಪುಸ್ತಕದ ಬಗೆಗಿನ ವಿಮರ್ಶೆಗೆ ನಾನು ಕೊಟ್ಟಿರುವ ಶೀರ್ಷಿಕೆಯ ಹಿಂದೆಯೂ ಒಂದು ಕಾರಣವಿದೆ. ಸಾಮಾನ್ಯವಾಗಿ ಮಹಿಳೆಯರು ಪುರುಷರಂತಲ್ಲ. ತಮಗೆ ಯಾವ ಆರೋಗ್ಯದ ಸಮಸ್ಯೆ ಬಂದರೂ, ಕೌಟುಂಬಿಕ ಸಮಸ್ಯೆಯಿದ್ದರೂ ಅವರು ಇತರರೊಂದಿಗೆ ಹಂಚಿಕೊಳ್ಳುವುದನ್ನು ಇಷ್ಟ ಪಡುವುದಿಲ್ಲ. ಬೇರೆಯವರು ಅದನ್ನು ಗೇಲಿ ಮಾಡಿದರೆ ಎಂಬ ಭಯದಿಂದ ಯಾರೊಡನೆಯೂ ಹಂಚಿಕೊಳ್ಳಲಾರರು. ಇದಕ್ಕೆ ಕೇವಲ ಮಹಿಳೆಯರ ಬುದ್ಧಿ ಮಾತ್ರ ಕಾರಣವೆಂದುಕೊಂಡರೆ ಅದು ತಪ್ಪೇ. ಸಮಾಜವೂ ಮಹಿಳೆಯರ ಅನಾರೋಗ್ಯವನ್ನು `ಟೀಕಿಸುವ', `ಗೇಲಿ ಮಾಡುವ',ನೋಡಿ ನಗುವ’ ಪ್ರವೃತ್ತಿಯನ್ನು ರೂಢಿಸಿಕೊಂಡೇ ಇದೆ. ಒಟ್ಟಿನಲ್ಲಿ ಮಹಿಳೆಯರ ಅನಾರೋಗ್ಯಕ್ಕೆ, ಆರೋಗ್ಯದ ಬಗೆಗಿನ ಅಜ್ಞಾನಕ್ಕೆ ಮಹಿಳೆ ತನ್ನ ಸಮಸ್ಯೆಗಳ ಬಗೆಗೆ ಮುಕ್ತವಾಗಿ ಹೇಳಿಕೊಳ್ಳದಿರುವುದೂ ಒಂದು ಪ್ರಮುಖ ಕಾರಣ ಎಂಬುದು ಗಮನಾರ್ಹ.

ಮಾನಸಿಕ ಆರೋಗ್ಯದ ವಿಷಯದಲ್ಲಿ ಮಹಿಳೆಯನ್ನು ಇಡೀ ಸಮಾಜವೇ ಹೀಗೆ ಹೇಳದಿರುವದಕ್ಕೆ ಮಾದರಿಯಾಗಿರಿಸಿಕೊಂಡುಬಿಟ್ಟಿದೆ! ಅರ್ಥಾತ್`ಮಾನಸಿಕ ಕಾಯಿಲೆ’ ಎಂದರೆ ಕಳಂಕ ಕಟ್ಟಿಟ್ಟ ಬುತ್ತಿ ಎಂಬ ಕಾರಣಕ್ಕೆ ಮುಕ್ತವಾಗಿ ತಮಗಿರುವ ಮಾನಸಿಕ ಕಾಯಿಲೆಗಳ ಬಗೆಗೆ ಪುರುಷ – ಸ್ತ್ರೀ ಯಾರೂ ಮಾತನಾಡುವುದು, ಬರೆಹ ರೂಪದಲ್ಲಿ ವ್ಯಕ್ತಪಡಿಸುವುದು ವಿರಳ. ಹೀಗಿರುವಾಗ 1996ರಷ್ಟು ಹಿಂದೆಯೇ, ಅಂದರೆ ಸುಮಾರು 24 ವರ್ಷಗಳ ಹಿಂದೆ ಆತ್ಮಕತೆಯನ್ನು 200 ಪುಟಗಳ ಒಂದು ಕಾದಂಬರಿಯಾಗಿ ಬರೆಯುವುದು ಮನಸ್ಸಿನ ಸ್ಥಿರತೆಯ ಒಂದು ಗುರುತು ಎನಿಸುತ್ತದೆಯಲ್ಲವೇ?

ಆಂಗ್ಲ ಭಾಷೆಯಲ್ಲಿ ಮಾನಸಿಕ ಸಮಸ್ಯೆಗಳಿಂದ ನರಳುವ ಮಹಿಳೆಯರ ಕಥಾನಕಗಳು ಗಮನಾರ್ಹವಾಗಿ ಬಂದಿವೆ. ಅವುಗಳಲ್ಲಿ ಸುಮಾರು 194 ಪುಸ್ತಕಗಳನ್ನು ಅಂತರ್ಜಾಲ ತಾಣಗಳು ಪಟ್ಟಿ ಮಾಡುತ್ತವೆ. ಅವುಗಳ ಹೆಸರುಗಳೂ ಅಷ್ಟೆ, ಗಮನ ಸೆಳೆಯುವಂತೆ, ಕುತೂಹಲ ಮೂಡಿಸುವಂತೆ ಇವೆ. ಅಮಂಡಾ ಗ್ರೀನ್ ಬರೆದಿರುವ "My Alien Self; My Journey Back to Me", ಕೇಟ್ ಚಾಪಿನ್ ಬರೆದಿರುವ "The Awakening" ಕ್ರಿಸ್ಟೀನ್ ಜಿಡ್ರಂಸ್ ಳ "Cutters Don't Cry" ಮೊದಲಾದವನ್ನು ಇಲ್ಲಿ ಹೆಸರಿಸಬಹುದು. ಮನೋರೋಗಗಳ ಬಗೆಗೆ ಮಹಿಳೆಯರು ಬರೆದಿರುವ ಜೀವನ ಕಥೆಗಳದ್ದೇ ಒಂದು ಮಹಾಪ್ರಬಂಧ ಬರೆಯಬಹುದಾದಷ್ಟು ಅಂಶಗಳು ಇಲ್ಲಿವೆ. ಆದರೆ ಈ ಆಕರ್ಷಕ ಹಿನ್ನೆಲೆ -ಶೀರ್ಷಿಕೆಗಳು ಕನ್ನಡದಲ್ಲಿ ಬಂದಿರುವ `ಮನೋರೋಗಿಯ ಆತ್ಮಕತೆ'ಗಿಲ್ಲ! ಅದಕ್ಕಿರುವ ಪ್ರಮುಖ ಶಕ್ತಿ ಅದರಪ್ರಾಮಾಣಿಕತೆ. ಆಕರ್ಷಕ ಶೀರ್ಷಿಕೆ ಅದಕ್ಕಿಲ್ಲ ಎನ್ನುವುದನ್ನೂ ಪ್ರಾಮಾಣಿಕತೆಯ ಕುರುಹಾಗಿಯೇ ಭಾವಿಸಬಹುದು!

ಒಬ್ಬ ಮನೋವೈದ್ಯೆಯಾಗಿ, ಒಬ್ಬ ಸಾಮಾನ್ಯ ಓದುಗಳಾಗಿ ನಾನು ಈ ಪುಸ್ತಕವನ್ನು ಎರಡು ಅಂಶಗಳಿಂದ ಗಮನಾರ್ಹ ಎನ್ನುತ್ತೇನೆ. ಒಂದು, ಒಬ್ಬ ಮನೋರೋಗಿ ತಾನು ಎದುರಿಸಿದ ಮಾನಸಿಕ ಕಾಯಿಲೆ, ಸಂಕಷ್ಟಗಳು, ತಾನು ಅವುಗಳಿಂದ ಹೊರಬಂದ ಬಗೆಗೆ ನೈಜ ಚಿತ್ರಣ ಇಲ್ಲಿರುವುದು. ಇದು ಮನೋವೈದ್ಯನಿಗೆ ರೋಗಿ'ಯ ಮನಸ್ಸಿನ ಒಳ ನೋಟವನ್ನು ತೆರೆದು ತೋರಿಸುತ್ತದೆ. ಇನ್ನೊಂದು ಜನಸಾಮಾನ್ಯರಿಗೆ ಮಾನಸಿಕ ಕಾಯಿಲೆಯ ಬಗೆಗೆ ಮನೋವೈದ್ಯ ಹೇಳುವ ಅರಿವಿಗಿಂತ, ಮನೋರೋಗಿಯಿಂದ ಬರುವ ಅನುಭವಾತ್ಮಕ ಕಥನ ಹೆಚ್ಚು ಆಪ್ತವೂ, ಉಪಯುಕ್ತವೂ ಆಗುತ್ತದೆ ಎಂಬ ಅಂಶ. ಪುಸ್ತಕದ ಸಮರ್ಪಣೆಯನ್ನು ಲೇಖಕಿಮನೋರೋಗ’ ವನ್ನು ಸಹನೀಯವಾಗಿಸಿದ ತನಗೆ ಚಿಕಿತ್ಸೆ ನೀಡುತ್ತಿರುವ ಮನೋವೈದ್ಯರಿಗೆ ಸಮರ್ಪಿಸಿದ್ದಾರೆ. ಖ್ಯಾತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಪುಸ್ತಕಕ್ಕೊಂದು ಜ್ಞಾನ ಭರಿತ ಮುನ್ನುಡಿ ಬರೆದಿದ್ದಾರೆ. ಮನೋವೈದ್ಯಕೀಯ ರಂಗದಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣವಾದ ಕ್ಲಿಫೆರ್ಡ್ ಬೀರ್ಸ್‍ನ್ ದಿ ಮೈಂಡ್ ದ್ಯಾಟ್ ಫೌಂಡ್ ಇಟ್‍ಸೆಲ್ಪ್' ಪುಸ್ತಕವನ್ನು ಉಲ್ಲೇಖಿಸಿದ್ದಾರೆ. ಅಂಥ ಬದಲಾವಣೆಗೆ ಸ್ನೇಹಾರ ಪುಸ್ತಕವೂ ಕಾರಣವಾಗಲೆಂದು ಹಾರೈಸಿದ್ದಾರೆ.

ಕಥೆಯ ಪ್ರಾರಂಭ ವಿದ್ಯಾರ್ಥಿ ಜೀವನ ಕಾಲದಿಂದ ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದ್ದ, ಆರ್ಥಿಕವಾಗಿ ಒಳ್ಳೆಯ ಗಟ್ಟಿ ಹಿನ್ನೆಲೆಯಲ್ಲಿ, ಮುಂದೆ ವೈದ್ಯಳಾಗಬೇಕೆಂದು ಕನಸು ಹೊತ್ತ ಹುಡುಗಿ `ಜಯ' ಕಥೆಯ ನಾಯಕಿ. ಕಥಾನಾಯಕಿಯೇ ಬರೆಯುವಂತೆ "ದೇಹವು ರೋಗದಿಂದ ನರಳಿದರೆ ತತ್‍ಕ್ಷಣ ಚಿಕಿತ್ಸೆ ಮಾಡಿಸಿಕೊಳ್ಳುತ್ತೇವೆ. ಆದರೆ ಮನೋರೋಗವನ್ನು ಗುರುತಿಸಲೇ ಸಮಯ ಬೇಕು". ಹಾಗಾಗಿ ಮಾನಸಿಕ ಖಿನ್ನತೆ ಜಯಳನ್ನು ಕಾಡಲಾರಂಭಿಸಿದಾಗ, ಅದು ಕಾಯಿಲೆ ಎಂದು ಗುರುತಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಯಾವುದೇ ವಿದ್ಯಾರ್ಥಿಗೆ ಮಾನಸಿಕ ಕಾಯಿಲೆ ಬಂದಾಗ ಆಕೆಯ ತಂದೆ-ತಾಯಿ ಸ್ವತಃ ವಿದ್ಯಾರ್ಥಿ ಎದುರಿಸುವ ವಿವಿಧ ಸಮಸ್ಯೆಗಳು, ತಾವೇ ಕಂಡುಕೊಳ್ಳುವ ವಿವಿಧ ಪರಿಹಾರೋಪಾಯಗಳು ಇಲ್ಲಿ ಚಿತ್ರಿಸಲ್ಪಟ್ಟಿವೆ. ಅಂತಹ ಒಂದು ಪರಿಹಾರ ಜಯಳನ್ನು ಬೋರ್ಡಿಂಗ್ ಶಾಲೆಗೆ ಕಳುಹಿಸಿದ್ದು. ಇಲ್ಲಿ ಬೋರ್ಡಿಂಗ್ ಶಾಲೆಯ ತನ್ನ ಗೆಳತಿಯರ ಬಗೆಗೆ ಜಯ ಹೇಳುವ ಒಂದು ಮಾತು ನಮ್ಮಲ್ಲಿ ಹಲವು ಚಿಂತನೆಗಳನ್ನು ಮೂಡಿಸುತ್ತದೆ. ನನ್ನ ಗೆಳತಿಯರು ನನ್ನನ್ನು ತಿರಸ್ಕರಿಸಲಿಲ್ಲ, ಹಳಿಯಲಿಲ್ಲ. ಬಹುಶಃ ಅವರಿಗೆ ಹೊರಗಿನ ಕ್ರೂರ ಸಮಾಜದ ಸಂಪರ್ಕ ಇಲ್ಲದೇ ಇದ್ದದ್ದೇ ಇದಕ್ಕೆ ಕಾರಣವೇನೋ".

ಮನೋರೋಗ ಕಣ್ಣಿಗೆ ಕಾಣಿಸುವಂತದ್ದಲ್ಲ. ಹಾಗಾಗಿ ಅದನ್ನು ಅರ್ಥ ಮಾಡಿಕೊಳ್ಳುವುದು ಕುಟುಂಬಕ್ಕೆ, ಸಮಾಜಕ್ಕೆ ಕಷ್ಟವೇ. ಮಾನಸಿಕ ರೋಗದ `ಋಣಾತ್ಮಕ' - negative ಲಕ್ಷಣಗಳು ಯಾವುದನ್ನು ಮಾಡಲೂ ಉತ್ಸಾಹದ ಕೊರತೆ, ಮನಸ್ಸು ಯಾವುದಕ್ಕೂ ಸ್ಪಂದಿಸದಿರುವುದು ಇವೇ ಮೊದಲಾದವು. ಇವುಗಳಿಂದ ಮಾನಸಿಕ ಕಾಯಿಲೆಯಿಂದ ನರಳುವ ವ್ಯಕ್ತಿ `ಸೋಮಾರಿ' ಎನಿಸುವುದು ಸಹಜ. ಇದನ್ನು ಮತ್ತಷ್ಟು ಉಲ್ಬಣಗೊಳಿಸುವುದು ಅವರ `ಒಂಟಿತನ'. ಮತ್ತೆ ಇವೆರಡೂ ಸೇರಿ ಮಾನಸಿಕವಾಗಿ ರೋಗಿಯನ್ನು ಮತ್ತಷ್ಟು ಕುಗ್ಗಿಸುತ್ತದೆ. ರೋಗದಿಂದ ಹೊರಬರುವಲ್ಲಿ ದೊಡ್ಡ ಅಡ್ಡಿಗಳಾಗುತ್ತವೆ. ಇದನ್ನು `ಜಯ' ಳೂ ಎದುರಿಸುತ್ತಾಳೆ. ಸಂಬಂಧಿಗಳ ಕುಟುಂಬದ ಅವಹೇಳನದ ಬಗೆಗೆ ನೆನಪಿಸಿಕೊಳ್ಳುತ್ತಾಳೆ. ಮನೋರೋಗ ವಯಸ್ಸಿಗೆ ಬಂದ ಹುಡುಗಿಯಲ್ಲಿ ಆರಂಭವಾದಾಗ ಕುಟುಂಬಕ್ಕೆ ಎದುರಾಗುವ ಮತ್ತೊಂದು ಸಮಸ್ಯೆ ಆಕೆಯ ಮದುವೆಯ ವಿಷಯ. ಅಂತಹ ಅಡ್ಡಿಯ ಫಲವಾಗಿಯೇ ಇರಬಹುದು, ಅಥವಾ ಕುಟುಂಬದ ಪೂರ್ವನಿರ್ಧರಿತ ಯೋಜನೆಯೂ ಆಗಿರಬಹುದು- `ಜಯ' ತನ್ನ ಸೋದರ ಮಾವನನ್ನೇ ಮದುವೆಯಾಗುತ್ತಾಳೆ. ನೇರವಾಗಿ ಮದುವೆಗೆ ಉಂಟಾದ ಕಷ್ಟಗಳ ಬಗೆಗೆ ಬರೆಯದಿದ್ದರೂ, ಸೋದರ ಮಾವ ಸರಳ -ನೇರ ಮಾತಿನ ಸಹೃದಯಿ ಎಂದು ಹೇಳಿದ್ದರೂ, ಮದುವೆಯ ಸಮಯದಲ್ಲಿ ತನಗೆ ಯಾವ ಭಾವನೆಗಳೇ ಇರದದ್ದನ್ನು ಜಯ ಸ್ಪಷ್ಟವಾಗಿ ಹೇಳುತ್ತಾಳೆ.

ಜಯಾಗಿದ್ದ ಕಾಯಿಲೆಯ ವೈಜ್ಞಾನಿಕ ಹೆಸರು `ಉನ್ಮಾದ ಮತ್ತು ಖಿನ್ನತೆಯ ಕಾಯಿಲೆ' - Bipolar affective disorder. ಮಾನಸಿಕ ಕಾಯಿಲೆಯೆಂದರೆನಾವೇ ತಂದುಕೊಳ್ಳುವ ಕಾಯಿಲೆ” ಎಂದು ಭಾವಿಸುವ ಅಸಂಖ್ಯಾತರಿಗೆ ಕಥಾನಾಯಕಿ ಹೀಗೆ ಹೇಳುತ್ತಾಳೆ "ಜಯ ನೋಡಲು ಚೆನ್ನಾಗಿಯೇ ಇದ್ದಾಳೆ. ಒಂದು ಜ್ವರ -ಕೈಕಾಲು ನೋವು ಏನೂ ಇಲ್ಲ. ಕುಟುಂಬದಲ್ಲಿ ಯಾರೂ ಸತ್ತಿಲ್ಲ /ಗಂಡ ಹಿಂಸಿಸುತ್ತಿಲ್ಲ. ಎಲ್ಲಾ ಸೌಲಭ್ಯಗಳೂ ಇವೆ. ಅಂದ ಮೇಲೆ ದುಃಖವಾಗುತ್ತಿದೆ ಎಂದರೆ ಏನರ್ಥ?" ಎನ್ನುವುದು ಅವರ ಪ್ರಶ್ನೆ. ಅವರೂ ನನ್ನಂತೆ ಮನೋರೋಗವೆಂಬ ಅಗ್ಗಿಷ್ಟಿಕೆಯಲ್ಲಿ ಬೆಂದಿದ್ದರೆ ನನ್ನ ಗೋಳು ಅರ್ಥವಾಗುತ್ತಿತು”್ತ. ಮನೋರೋಗದಿಂದ ತಾಯಿ ಬಳಲಿದಾಗ ಮಕ್ಕಳ ಮೇಲೆ, ಕೌಟುಂಬಿಕ ಜೀವನದ ಮೇಲೆ ಅದು ಬೀರುವ ಚಿತ್ರಣವೂ ಇಲ್ಲಿದೆ. ಕಾದಂಬರಿಯ ಎರಡನೇ ಅರ್ಧ ಮನೋವೈದ್ಯಕೀಯ ಚಿಕಿತ್ಸೆಯ ಬಗೆಗೆ ಹಲವು ಮುಖ್ಯ ಅಂಶಗಳನ್ನು ತೆರೆದಿಡುತ್ತದೆ. ಮನೋವೈದ್ಯಕೀಯ ಚಿಕಿತ್ಸೆಯ ಬಗೆಗೆ ಸಮಾಜದಲ್ಲಿ ವ್ಯಾಪಕವಾಗಿರುವ ತಪ್ಪು ಕಲ್ಪನೆಗಳನ್ನು ಜಯಾರ ವಿವರಣೆ ತಮ್ಮ ನೈಜ ಅನುಭವಗಳ ಬಲದಿಂದ ಸರಿಪಡಿಸುವ ಪ್ರಯತ್ನ ಮಾಡುತ್ತದೆ. 24 ವರ್ಷಗಳ ಹಿಂದೆ ಬರೆದು ಪುಸ್ತಕವಾದರೂ ಇಂದು ಈ ಪುಸ್ತಕ ಪ್ರಸ್ತುತ ಎನಿಸುವುದು ಈ ಕಾರಣದಿಂದಲೂ ಎನ್ನುವುದು ವಿಶೇಷ.

`ಮನೋರೋಗ ಗೆಲ್ಲಬಹುದೇ?' ಎಂದು ಶೀರ್ಷಿಕೆಯಲ್ಲಿ ನಮ್ಮನ್ನು ಪ್ರಶ್ನಿಸುವ ಜಯಾ, ತನ್ನ ಭಾವನೆಗಳನ್ನು ಅಭಿವ್ಯಕ್ತಿಸುವ, ಬೇರೆಯವರ ನೋವು-ನಲಿವುಗಳಿಗೆ ಸ್ಪಂದಿಸುವ ಸಾಮಥ್ರ್ಯ ಮರಳಿ ಬಂದ ಸ್ಥಿತಿಯನ್ನು ತನ್ನ `ಮನೋರೋಗ ಗೆದ್ದ ಹಂತ' ವಾಗಿ ಜಯಾ ಗುರುತಿಸುತ್ತಾಳೆ. ಔಷಧಿಗಳನ್ನು ನಿಲ್ಲಿಸುವುದನ್ನಲ್ಲ! ಇಂದಿಗೂ ಚಿಕಿತ್ಸೆಯಲ್ಲಿದ್ದು, ತನ್ನ ಕಾಯಿಲೆಯ ಮೇಲೆ ತನ್ನ ಸತತ ಪ್ರಯತ್ನದಿಂದ ಮನೋರೋಗ ಗೆದ್ದ ಲೇಖಕಿ “ಧೀಮಂತ ಮಹಿಳೆ’ ಎನಿಸುತ್ತಾಳೆ.

ರೋಗಗಳಲ್ಲಿ ಹೆಚ್ಚು ಗಮನ ಗಳಿಸದಿರುವಂತದ್ದು ಮನೋರೋಗ . ಕ್ಯಾನ್ಸರ್-ಮಾರಣಾಂತಿಕ ಕಾಯಿಲೆಗಳ ಬಗೆಗಿನ ಆತ್ಮಕಥನಗಳು ಪ್ರಸಿದ್ಧವಾದಷ್ಟು ಕನ್ನಡದ ಈ ಪುಟ್ಟ ಪುಸ್ತಕ ಸುದ್ದಿಯಾಗದಿರುವುದು ಅಚ್ಚರಿಯೇನಲ್ಲ. ಆದರೆ ಹಲವು ಚಿಂತನೆಗಳಿಗೆ ಗ್ರಾಸವಾಗಿ, ಬದಲಾವಣೆಗಳಿಗೆ ಕಾರಣವಾಗಬಲ್ಲದು ಎನ್ನುವ ಕಾರಣಕ್ಕೆ ಈ ಪುಸ್ತಕ ಗಮನಾರ್ಹ.

ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *