ನಮ್ಮ ಕಥೆ / ಹುದುಗಲಾರದ ದುಃಖ – ಎನ್. ಗಾಯತ್ರಿ

ವಿವಾಹ ಸಂಸ್ಥೆ ಹೆಣ್ಣಿಗೆ ಕೊಟ್ಟದ್ದೆಷ್ಟು? ಅವಳಿಂದ ಕಳೆದದ್ದೆಷ್ಟು ? ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ವಿವಾಹ ಸಂಬಂಧದಲ್ಲಿ ಸಿಕ್ಕುವ ಬಾಳ ಸಂಗಾತಿ ಜೀವನ ಪಯಣದಲ್ಲಿ ಮಧ್ಯೆ ನಿರ್ಗಮಿಸಿದಾಗ ಒಂಟಿಯಾಗಿ ಬಾಳನ್ನೆದುರಿಸುತ್ತಾ ಜೀವನ ಮುಂದುವರಿಸುವುದು ಬೇರೆಯೇ ಅನುಭವ. ಸಾರ್ವಜನಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹನ್ನೆರಡು ಪ್ರಸಿದ್ಧ ಮಹಿಳೆಯರು ದಾಂಪತ್ಯ ಮತ್ತು ವೈಧವ್ಯವನ್ನು ನಿಭಾಯಿಸಿದ ಕುತೂಹಲಕಾರಿ ಕತೆಯನ್ನು ಭಾರತದ ಬಹುಮುಖ್ಯ ಸ್ತ್ರೀವಾದಿ ಚಿಂತಕರೂ ಮತ್ತು ಹೋರಾಟಗಾರರೂ ಆದ ವಸಂತ ಕಣ್ಣಬಿರಾನ್‍ರವರು ಸ್ವಂತ ತಮ್ಮ ಅನುಭವದೊಂದಿಗೆ ಇಲ್ಲಿ ಅನಾವರಣಗೊಳಿಸಿದ್ದಾರೆ.

ಆಂಧ್ರದ ಕೆ.ಜಿ.ಕಣ್ಣಬಿರಾನ್ ಪ್ರಸಿದ್ಧ ವಕೀಲರು ಮತ್ತು ಮಾನವ ಹಕ್ಕುಗಳ ಹೋರಾಟಗಾರರೂ ಆಗಿದ್ದರು. ಹಿಂಸೆ, ಕ್ರೌರ್ಯ, ಕೊಲೆಗಳಿಗೆ ಬಲಿಯಾಗುತ್ತಿದ್ದ ಶೋಷಿತರ ಮತ್ತು ಕ್ರಾಂತಿಕಾರಿಗಳ ಪರವಾಗಿ ಹೋರಾಟ ಮಾಡುತ್ತಿದ್ದರು. “ಸ್ತ್ರೀಶಕ್ತಿ ಸಂಘಟನೆ”ಯ ಕಾರಣಕರ್ತರು. ಅವರನ್ನು ವಿವಾಹವಾದ ವಸಂತ, ಅವರೊಡನೆ ನಡೆಸಿದ ಐವತ್ತು ವರ್ಷಗಳ ಸುದೀರ್ಘ ದಾಂಪತ್ಯ ಜೀವನದ ಸಂದರ್ಭದಲ್ಲಿ ಎದುರಿಸಿದ ಬದುಕಿನ ತಲ್ಲಣಗಳು, ಸಂತೋಷ ಮತ್ತು ತಮ್ಮ ಸಾಧನೆಯ ಕ್ಷಣಗಳನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ. ಅವರು ತಮ್ಮ ಕಣ್ಣ ಮುಂದಿನ ವೈಧವ್ಯವನ್ನು ಎದುರಿಸಿದ ಹನ್ನೆರಡು ಸಾಧಕಿಯರ ದಾಂಪತ್ಯ ಜೀವನದ ವಿವಿಧ ಛಾಯೆಗಳನ್ನು ಸಂದರ್ಶನ ಲೇಖನಗಳ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
“ಮದುವೆ ಎನ್ನುವ ಸಂಸ್ಥೆಯು ಹಲವು ಕುತೂಹಲಕರವಾದ ಒಳ ಆಯಾಮಗಳನ್ನು ತೋರಿಸುವುದರೊಂದಿಗೆ, ಈ ನನ್ನ ಪ್ರಯತ್ನದಲ್ಲಿ ಇಬ್ಬರು ವ್ಯಕ್ತಿಗಳನ್ನು ಬದುಕಿನ ನಿಡು ಪಯಣದಲ್ಲಿ ತೊಡಗಿಕೊಳ್ಳುವಂತೆ ಮಾಡಿದ ಮದುವೆಯ ಅಂತ್ಯವನ್ನೂ, ಗಂಡನನ್ನೂ ಕಳೆದುಕೊಂಡ ನಂತರ ಈ ಹೆಣ್ಣುಮಕ್ಕಳ ಭಾವಲೋಕದಲ್ಲೂ ಬೌದ್ಧಿಕ ಲೋಕದಲ್ಲೂ ಆದ ಪಲ್ಲಟಗಳ ಸೂಕ್ಷ್ಮಗಳನ್ನೂ ಬಿಂಬಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ಮುಖ್ಯ ಗಮನವಿದ್ದುದು ಮೊದಲಿಗೆ ಕಳೆದುಕೊಳ್ಳುವ ಭಯವನ್ನು, ನಂತರ ಕಳೆದೇ ಹೋಗಿಬಿಟ್ಟಿದ್ದನ್ನು ಇವರು ನಿಭಾಯಿಸಿದ ಪರಿಯ ಬಗ್ಗೆ” ಎನ್ನುವ ಕೃತಿಯ ಲೇಖಕಿಯ ಆಶಯ ಒಟ್ಟು ಪುಸ್ತಕಕ್ಕೆ ಒಂದು ಚೌಕಟ್ಟನ್ನು ಕಟ್ಟಿಕೊಡುತ್ತದೆ.
ಈ ಎಲ್ಲ ಮಹಿಳೆಯರೂ ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಜನಿಸಿದವರು ಮತ್ತು ಅವರಲ್ಲಿ ಕೆಲವರ ಕುಟುಂಬಗಳು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದುದರಿಂದ ಆ ಮೌಲ್ಯ ಮತ್ತು ಆದರ್ಶಗಳಿಂದ ನೇರವಾಗಿ ಪ್ರಭಾವಿತರಾದವರು. ಇಂತಹ ಹಿನ್ನೆಲೆಯಲ್ಲಿ ತಮ್ಮ ಪತಿಯನ್ನು ತಾವೇ ಆರಿಸಿಕೊಂಡವರು ಕೆಲವರಾದರೆ ಮತ್ತೆ ಕೆಲವರು ಹೆತ್ತವರು ಮಾಡಿಸಿದ ಮದುವೆಯಲ್ಲಿಯೂ ಜೀವನದ ಸಾರ್ಥಕ್ಯವನ್ನು ಅರಿಸಿಕೊಂಡವರು. ಒಂದಿಬ್ಬರು ಅಸಮ ದಾಂಪತ್ಯ ಸಂಬಂಧಗಳನ್ನು ಕೊಡವಿ ವಿಚ್ಚೇದನ ಪಡೆದು ಪ್ರೀತಿಸಿದವನನ್ನು ಮದುವೆಯಾದವರು. ಇಲ್ಲಿನ ಬಹುಪಾಲು ಮಂದಿ ಗೃಹಕೃತ್ಯ ಮತ್ತು ವೃತ್ತಿಯನ್ನು ಸಮರ್ಥವಾಗಿ ನಿಭಾಯಿಸಲು ಹೆಣಗಾಡಿದವರು. ಅವರುಗಳ ಸುದೀರ್ಘವಾದ ಹಾಗೂ ಕ್ರಿಯಾಶೀಲವಾದ ದಾಂಪತ್ಯದ ಕೊನೆಯಲ್ಲಿ ವೈಧವ್ಯವನ್ನು ದಿಟ್ಟವಾಗಿ ಎದುರಿಸಿದವರು. ಇವರಲ್ಲಿ ಕ್ಯಾಥಿ ಶ್ರೀಧರ್ ಮಾತ್ರ ವಿದೇಶಿ ಸಂಸ್ಕೃತಿಯಲ್ಲಿ ಬೆಳೆದರೂ ಭಾರತೀಯ ಸಂಪ್ರದಾಯದ ಕಟ್ಟುಪಾಡುಗಳ ಬಿಸಿಯಿಂದಾಗಿ ನೋವನ್ನುಂಡವರು. ಒಟ್ಟಿನಲ್ಲಿ ಇಲ್ಲಿನ ಬಹುತೇಕ ಮದುವೆಗಳು ಕಳೆದ ಶತಮಾನದ ಒಂದು ನಿರ್ದಿಷ್ಟ ವರ್ಗದ ಮಹಿಳೆಯರ ಸಾಮಾಜಿಕ ಇತಿಹಾಸವನ್ನು ಬಿಂಬಿಸುತ್ತವೆ.
“ ಬೊನ್ಸಾಯ್ ಗಿಡವು ಮದುವೆಯಾದ ಹೆಣ್ಣನ್ನು ಕುರಿತಂತೆ ಒಂದು ರೂಪಕವಾಗಿಯೇ ಕಾಣಿಸುತ್ತದೆ” ಎನ್ನುವ ವಸಂತ ಕಣ್ಣಾಬಿರನ್ ಮಾತುಗಳು ವಿಶ್ವದ ಯಾವುದೇ ಹೆಣ್ಣಿಗೆ ಅನ್ವಯಿಸುವ ಮಾತಾದರೂ ಭಾರತದ ಸಂದರ್ಭದಲ್ಲಿ ಹೆಚ್ಚು ನಿಜವೆನಿಸುತ್ತದೆ. ಪ್ರೀತಿಸಿ ಮದುವೆಯಾಗಲೀ, ಇಲ್ಲವೆ ಹಿರಿಯರಿಂದ ವ್ಯವಸ್ಥೆಗೊಳಿಸಿದ ಮದುವೆಯಾಗಲೀ ಹೆಣ್ಣು ಬದುಕಿನಲ್ಲಿ ಮಾಡಿಕೊಳ್ಳಬೇಕಾದ ಹೊಂದಾಣಿಕೆಗಳು ಹಲವಾರು. ಎಂದರೆ ಮದುವೆ ಎನ್ನುವ ಸಂಸ್ಥೆ ಮೂಲಭೂತವಾಗಿ ಹೆಣ್ಣಿನ ಸ್ವಾತಂತ್ರ್ಯ ಮತ್ತು ಬೆಳವಣಿಗೆಯನ್ನು ಮೊಟಕುಗೊಳಿಸಿ ಅವಳನ್ನು ವಿಕಲಗೊಳಿಸುವ ಸಂದರ್ಭಗಳೇ ಹೆಚ್ಚು. ಆದರೆ ಇದಕ್ಕೆ ಅಪವಾದಗಳು ಇಲ್ಲದೆ ಇಲ್ಲ. ಅಂತಹ ಹಲವಾರು ಅಪವಾದದ ಉದಾಹರಣೆಗಳು ಈ ಪುಸ್ತಕದಲ್ಲಿ ಸಿಗುತ್ತವೆ. ವಿವಾಹಿತ ಬದುಕನ್ನು ಬದುಕುವಾಗಲೂ ಹೆಣ್ಣಿನ ಸಾಂಪ್ರದಾಯಿಕ ಪಾತ್ರವನ್ನು ಮೀರಿ ಬೌದ್ಧಿಕ ನೆಲೆಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡ ವ್ಯಕ್ತಿತ್ವಗಳು ಇಲ್ಲಿನ ಸಂದರ್ಶನಗಳ ಮೂಲಕ ಅನಾವರಣಗೊಳ್ಳುತ್ತವೆ.
ತಮ್ಮ ಅಸಮ ದಾಂಪತ್ಯದ ಬಲೆಯನ್ನು ಕಿತ್ತೆಸೆದು ದಿಟ್ಟವಾಗಿ ಹೊಸ ಸಂಗಾತಿಯನ್ನು ಹುಡುಕಿಕೊಂಡ ದಿಟ್ಟೆಯರು ಇಲ್ಲಿದ್ದಾರೆ. ಪ್ರಗತಿಪರ, ಸಾಹಿತ್ಯಿಕ ವಾತಾವರಣದ ಕುಟುಂಬದ ಎಲ್ಲ ಸವಲತ್ತುಗಳನ್ನು ಪಡೆದಿದ್ದರೂ ಬಾಲ್ಯ ವಿವಾಹಕ್ಕೆ ಕೊರಳೊಡ್ಡಬೇಕಾಗಿ ಬಂದ ಕರ್ನಾಟಕದ ರಾಮೇಶ್ವರಿ ವರ್ಮ ಈ ಬಂಧನವನ್ನು ಬಿಡಿಸಿಕೊಂಡದ್ದು ಒಂದು ಕುತೂಹಲಕರ ಕಥೆಯೇ ಆಗುತ್ತದೆ. ತನ್ನ ಪಕ್ಕದ ಮನೆಯ ಹುಡುಗನನ್ನು ಬಾಲ್ಯದಲ್ಲೇ ಮದುವೆಯಾದ ಕ್ಯಾಥಿಗೆ ತಾನು ಬಯಸಿದ ದಾಂಪತ್ಯ ಸಿಗಲೇ ಇಲ್ಲ ಎಂದೆನಿಸಿದಾಗ ಅದರಿಂದ ಹೊರಬಂದು ದಕ್ಷಿಣ ಭಾರತದ ಶ್ರೀಮಂತ, ಸಂಪ್ರದಾಯಸ್ಥ ಕುಟುಂಬದ ಶ್ರೀಧರನನ್ನು ಮದುವೆಯಾಗುತ್ತಾರೆ. ಈ ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳಲು ಅವರು ಬಹು ಸಮಯ ತೆಗೆದುಕೊಳ್ಳುವುದಲ್ಲದೆ, ಅವರು ಮದುವೆಯಾದ ವರ್ಷದಲ್ಲೇ ಗಂಡನನ್ನು ಕಳೆದುಕೊಳ್ಳುವುದು ಅತ್ಯಂತ ನೋವಿನ ಸಂಗತಿಯಾಗುತ್ತದೆ. ಮತ್ತೊಬ್ಬ ಮಹಿಳೆ ಶಾಂತಾ ರಾಮೇಶ್ವರರಾವ್. ರಾಮೇಶ್ವರರಾವ್ ಅವರೊಂದಿಗೆ ಸ್ನೇಹವಿದ್ದರೂ, ಅವರು ಅವರನ್ನು ಮದುವೆಯಾಗಲು ಇಚ್ಛಿಸಿದ್ದರೂ , ಅವರು ಮನೆಯವರು ಆಯ್ಕೆ ಮಾಡಿದ ವರನನ್ನೇ ಮದುವೆಯಾಗುತ್ತಾರೆ. ಆದರೆ ಮದುವೆಯಾದ ನಂತರ ಗಂಡನ ಕ್ರೌರ್ಯವನ್ನು ತಾಳಲಾಗದೆ ಅವನಿಂದ ವಿಚ್ಛೇದನ ಪಡೆದು ಮತ್ತೆ ತಾನು ಪ್ರೀತಿಸಿದ ರಾಮೇಶ್ವರರಾವ್ ಅವರನ್ನೇ ಮದುವೆಯಾಗುವ ದಿಟ್ಟತನ ತೋರುತ್ತಾರೆ. ಹೀಗೆ ಎರಡನೇ ವಿವಾಹವಾಗುವ ಈ ಮೂವರು ಮಹಿಳೆಯರು ತಮ್ಮ ಗಂಡಂದಿರ ಪ್ರೀತಿ, ವಿಶ್ವಾಸಗಳನ್ನು ಅನುಭವಿಸುತ್ತಲೇ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದನ್ನು ಕಾಣಬಹುದು. ಹಾಗೆಯೇ ಬದುಕಿನ ಪಯಣದ ಮಧ್ಯದಲ್ಲಿ ಅವರ ಗಂಡಂದಿರು ನಿರ್ಗಮಿಸಿದಾಗ ಎದೆಗುಂದಿದ್ದರೂ ಚೇತರಿಸಿಕೊಂಡು ಜೀವನ ನೌಕೆಯನ್ನು ಮೌಲಿಕವಾಗಿ ನಡೆಸಿಕೊಂಡುಹೋಗುವುದರಲ್ಲಿ ಅವರ ಹೆಚ್ಚುಗಾರಿಕೆಯಿದೆ.
ಲೇಖಕಿ ವಸಂತ ಈ ಕೃತಿಯ ಚೌಕಟ್ಟನ್ನು ರೂಪಿಸಿಕೊಳ್ಳುವಾಗ ಮೂರು ಮಾನದಂಡಗಳನ್ನು ಹಾಕಿಕೊಂಡಿದ್ದಾರೆ. ಮೊದಲನೆಯದಾಗಿ ಈ ಮಹಿಳೆಯರು ಅವರವರ ಕ್ಷೇತ್ರಗಳಲ್ಲಿ ಖ್ಯಾತರಾಗಿರಬೇಕು. ಎರಡನೆಯದು, ಅವರ ಬದುಕಿನ ಅನುಭವಗಳನ್ನು ಲೇಖಕಿಯೊಂದಿಗೆ ಹಂಚಿಕೊಳ್ಳುವ ವಿಶ್ವಾಸ ಹೊಂದಿದವರೂ, ಆಪ್ತರೂ, ಪರಿಚಿತರೂ ಆಗಿರಬೇಕು. ಮೂರನೆಯದು ಅವರ ದೀರ್ಘವಾದ, ಶಕ್ತವಾದ ಮತ್ತು ಅವರ ಬೆಳವಣಿಗೆಯಲ್ಲಿ ಸಹಾಯ ಮಾಡಿದ ಸಂಬಂಧಗಳನ್ನು ಪಡೆದ ಮಹಿಳೆಯರ ನೆನಪುಗಳನ್ನು ಕೆದಕುವುದು. ಇವರಲ್ಲಿ ಮೂವರು ಮಹಿಳೆಯರು ಲೇಖಕಿಯಾಗಿ ಪ್ರಸಿದ್ಧರು. ಒಂದಿಬ್ಬರು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳನ್ನು ಪಡೆದವರು. ಮೂವರು ಮಹಿಳಾ ಅಧ್ಯಯನದ ವಿದ್ವಾಂಸರು, ಸಮಾಜಶಾಸ್ತ್ರಜ್ಞೆಯರು ಮತ್ತು ಅರ್ಥಶಾಸ್ತ್ರಜ್ಞೆಯರು, ಇನ್ನು ಮೂವರು ಮಹಿಳೆಯರ ಅಭಿವೃದ್ಧಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆಯರು. ಒಬ್ಬರು ತನ್ನ ಆಯ್ಕೆಯ ಶಕ್ತಿ ಮತ್ತು ಘನತೆಯನ್ನು ಸ್ಥಾಪಿಸುವ ಗೃಹಿಣಿ ಮತ್ತು ಇನ್ನೊಬ್ಬರು ನೃತ್ಯಕ್ಕಾಗಿ ಒಂದು ಅಕಾಡೆಮಿಯನ್ನು ತೆರೆದ, ಜಗತ್ತಿನಾದ್ಯಂತ ಪ್ರವಾಸ ಮಾಡುತ್ತಾ ನೃತ್ಯ ಮತ್ತು ಹಾಡುಗಾರಿಕೆಯ ಪ್ರದರ್ಶನ ಕೊಟ್ಟವರು. ಲೇಖಕಿಯೇ ಒಪ್ಪಿಕೊಳ್ಳುವಂತೆ ಈ ಕೃತಿಯ ಮಿತಿಯೆಂದರೆ ಈ ಎಲ್ಲಾ ಮಹಿಳೆಯರು ಒಂದು ನಿರ್ದಿಷ್ಟ ವರ್ಗ ಮತ್ತು ಸಮುದಾಯಕ್ಕೆ ಸೇರಿದವರಾದರೂ ಇಲ್ಲಿನ ಸಂದರ್ಶನಗಳಿಗೆ ತಮ್ಮದೇ ಆದ ಒಂದು ಮಹತ್ವವಿದೆ. ಹೆಣ್ಣಿನ ವಿದ್ಯಾಭ್ಯಾಸ ಮತ್ತು ಸ್ವಾವಲಂಬಿತನಗಳು ಮದುವೆ ಮತ್ತು ಕುಟುಂಬ ಸಂಸ್ಥೆಗಳಲ್ಲಿ ತಂದ ಬಹುಮುಖ್ಯ ಬದಲಾವಣೆಗಳ ನೋಟವನ್ನು ಈ ಸಂದರ್ಶನಗಳು ಒದಗಿಸುತ್ತವೆ.
ಇಲ್ಲಿನ ಹನ್ನೆರಡು ಮಹಿಳೆಯರ ಸಂದರ್ಶನವನ್ನು ನಾಲ್ಕು ವಿಭಾಗಗಳಲ್ಲಿ ನೋಡಲಾಗಿದೆ. ಸ್ವಾತಂತ್ರ್ಯ ಚಳುವಳಿಯ ನೇತಾರರನ್ನು ಪ್ರೀತಿಸಿ ಮದುವೆಯಾದ ಶಾರದಾ ಮೋನಿ, ನೀರಾ ದೇಸಾಯಿ ಮತ್ತು ಅಂತಹ ಕುಟುಂಬದ ಹಿನ್ನೆಲೆಯಿಂದ ಬಂದ ರಾಮೇಶ್ವರಿ ವರ್ಮ ಅವರ ಜೀವನದ ಹಾದಿ ಮುಳ್ಳಿನ ಪಯಣವಾಗಿತ್ತು. ಭಾರತದ ಮೊದಲ ಮಹಿಳಾ ವಿಶ್ವವಿದ್ಯಾಲಯವಾದ ಎಸ್.ಎನ್.ಡಿ.ಟಿ.ಯಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ ನೀರಾ ದೇಸಾಯಿ ಅಕೆಡಮಿಕ್ ಶಿಸ್ತುಗಳೊಳಗಿದ್ದ ಮಹಿಳಾ ಅಗೋಚರತೆಯ ಬಗ್ಗೆ ದನಿಯೆತ್ತಿದ ಆರಂಭದ ಮಹಿಳೆಯರಲ್ಲಿ ಒಬ್ಬರು. ಅವರ ‘ವಿಮೆನ್ ಇನ್ ಮಾಡರ್ನ್ ಇಂಡಿಯಾ’ ಮತ್ತು ‘ಫೆಮಿನಿಸಂ ಇನ್ ವೆಸ್ಟರ್ನ್ ಇಂಡಿಯ’ ಪುಸ್ತಕಗಳು ಮಹಿಳಾ ಅಧ್ಯಯನಕ್ಕೆ ಬಹುಮುಖ್ಯ ಆಕರ ಗ್ರಂಥಗಳು. ಕೇರಳದ ಕೊಲ್ಲಾಮ್‍ನಲ್ಲಿ ಹುಟ್ಟಿದ ಕೆ.ಶಾರದಾ ಮೋನಿಯವರು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಮ್.ಲಿಟ್ ಪದವಿ ಮುಗಿಸಿ, ದೆಹಲಿಯ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಯೋಜನಾ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದರು. ಅವರು ಮಹಿಳಾ ಅಧ್ಯಯನಕ್ಕೆ ಸಂಬಂಧಿಸಿದ್ದಂತೆ ದೇಶದ ಪ್ರಮುಖ ಅರ್ಥತಜ್ಞೆ ಮತ್ತು ವಿದ್ವಾಂಸೆ. ಪತ್ರಕರ್ತರಾದ ತಂದೆ ಮತ್ತು ಸಮಾಜಸೇವಕಿಯಾಗಿದ್ದ ತಾಯಿಯವರ ಪ್ರೀತಿಯ ಪುತ್ರಿಯಾದ ಮೈಸೂರಿನ ರಾಮೇಶ್ವರಿ ವರ್ಮ ಮೈಸೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕರು. ‘ಸಮತೆಂತೊ’ ರಂಗತಂಡದ ಸ್ಥಾಪಕರಲ್ಲೊಬ್ಬರಾಗಿರುವ ರಾಮೇಶ್ವರಿಯವರ ಕಾಳಜಿ ರಂಗಭೂಮಿಯೂ ಹೌದು.
‘ಅನುರೂಪದ ಸಾಂಗತ್ಯ – ಅಭಿವೃದ್ಧಿಯ ಜೊತೆ ಮಾನವ ಹಕ್ಕುಗಳ ಬೆಸುಗೆ’ಯೆಂಬ ಶೀರ್ಷಿಕೆಯಡಿ ಕ್ಯಾಥಿ ಶ್ರೀಧರ್, ಕೊಯ್ಲಿ ರಾಯ್ ಮತ್ತು ಇಳಾ ಭಟ್ ಅವರ ಜೀವನಾನುಭವಗಳನ್ನು ಇಲ್ಲಿ ಚರ್ಚಿಸಲಾಗಿದೆ. ಕ್ಯಾಥಿ ಶ್ರೀಧರ್(1934) ರಷ್ಯಾದಿಂದ ವಲಸೆ ಹೋದ ಜ್ಯೂಯಿಷ್ ಕುಟುಂಬಕ್ಕೆ ಸೇರಿದವರು. ಅಮೆರಿಕಾ ಮತ್ತು ಭಾರತದಲ್ಲಿ ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆಸಿದವರು. ಮಾನವ ಹಕ್ಕುಗಳ ಪರವಾಗಿ ಸರ್ಕಾರಿ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಈ ಸಂಬಂಧವಾಗಿ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಕೊಯ್ಲಿ ರಾಯ್ (1947) ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ನ್ಯಾಯಶಾಸ್ತ್ರದಲ್ಲಿ ಸ್ನಾತಕ ಪದವಿ ಹೊಂದಿದ್ದಾರೆ. ‘ಸ್ಕಿಪ್’ ಎಂಬ ವೃತ್ತಿಪರ ಹಾಗೂ ತಾಂತ್ರಿಕ ಸಂಸ್ಥೆಯ ರಾಷ್ಟ್ರೀಯ ಸಂಸ್ಥೆಯಲ್ಲಿ ಪೌರ್ವಾತ್ಯ ಸ್ಥಳೀಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸ್ವಾತಂತ್ರ್ಯ ಚಳುವಳಿಯ ಹಿನ್ನೆಲೆಯಿರುವ ಕುಟುಂಬದಲ್ಲಿ ಹುಟ್ಟಿದ ಇಳಾ ಭಟ್ (1933) ಗಾಂಧಿವಾದಿ ಮತ್ತು ವೃತ್ತಿಯಿಂದ ವಕೀಲೆ. ಸೇವಾ (ಸ್ವಯಂ ಉದ್ಯೋಗಿ ಮಹಿಳೆಯರ ಸಂಘ)ದ ಸ್ಥಾಪಕಿ. ವಿಶ್ವ ಮಹಿಳಾ ಬ್ಯಾಂಕ್‍ನ ಸ್ಥಾಪಕಿಯರಲ್ಲೊಬ್ಬರು. ಅವರ ಸಮುದಾಯ ನಾಯಕತ್ವಕ್ಕಾಗಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದವರು.
‘ಮದುವೆಯ ಚಿತ್ರಗಳು – ಲೇಖನಿ ಎಂಬ ಖಡ್ಗ ಹಾಗೂ ಅರಿವಿನ ಎರಕ’ ಎಂಬ ವಿಭಾಗದಡಿ ಶಾಂತಾ ರಾವ್, ಮೀನಾಕ್ಷಿ ಮುಖರ್ಜಿ, ಅಬ್ಬೂರಿ ಛಾಯಾ ದೇವಿ – ಇವರುಗಳ ಅನುಭವ ಚಿತ್ರಣಗಳು ಸಿಕ್ಕುತ್ತವೆ. ಶಾಂತಾ ರಾಮೇಶ್ವರರಾವ್ ಕನ್ನಡದ ಖ್ಯಾತ ಕವಿ ಪಂಜೆ ಮಂಗೇಶರಾಯರ ಮಗಳು. ರಾಜಾ ರಾಮೇಶ್ವರರಾವ್ ಅವರನ್ನು ಮದುವೆಯಾಗಿದ್ದ ಶಾಂತಾ ಅವರು ‘ವಿದ್ಯಾರಣ್ಯ’ ಎನ್ನುವ ಶಾಲೆಯನ್ನು ಸ್ಥಾಪಿಸಿದ್ದರು. ಮೀನಾಕ್ಷಿ ಮುಖರ್ಜಿ (1937-2009)ಯವರು ಸಾಹಿತ್ಯ ಮತ್ತು ಶಿಕ್ಷಣ ವಲಯದಲ್ಲಿ ಸುಪರಿಚಿತರು. ಭಾರತೀಯ ಇಂಗ್ಲಿಷ್ ಸಾಹಿತ್ಯದಲ್ಲಿ ಪರಿಣತಿಯನ್ನು ಹೊಂದಿದ್ದ ಇವರು ಸಾಹಿತ್ಯ ಅಕಾಡೆಮಿ ಬಹುಮಾನವನ್ನು ಪಡೆದಿದ್ದರು. ಮಕ್ಕಳ ಸಾಹಿತ್ಯದಲ್ಲಿ ಪರಿಣತಿಯನ್ನು ಹೊಂದಿದ್ದರು. ತೆಲುಗಿನ ಪ್ರಖ್ಯಾತ ಲೇಖಕಿ ಅಬ್ಬೂರಿ ಛಾಯಾದೇವಿ (1933)ಯವರು ರಕ್ಷಣಾ ಇಲಾಖೆ ಮತ್ತು ಅಂತರ ರಾಷ್ಟ್ರೀಯ ಅಧ್ಯಯನ ಸಂಸ್ಥೆಗಳಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ, ಕೊನೆಗೆ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಗ್ರಂಥಪಾಲಕ್ರಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ 2005ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಿಕ್ಕಿದೆ. ಅವರು ‘ವನಿತ’ ಮತ್ತು ‘ಕವಿತ’ ಪತ್ರಿಕೆಗಳ ಸಂಪಾದಕರು.
‘ಮನೆ ಮತ್ತು ಜಗತ್ತು – ಸ್ವಾತಂತ್ರ್ಯದ ಗೋಡೆಗಳು’ ಶೀರ್ಷಿಕೆಯಡಿ ಸುತಾಪಾ ಚಕ್ರವರ್ತಿ, ರುಕ್ಮಿಣಿ ಪಾರ್ಥಸರಥಿ ಮತ್ತು ಜಯಲಕ್ಷ್ಮಿ ನಾರಾಯಣ್, ಇವರುಗಳ ಅನುಭವವವನ್ನು ತೆರೆದಿಟ್ಟಿದ್ದಾರೆ. ಸುತಾಪ (1946) ಸ್ವಾತಂತ್ರ್ಯ ಹೋರಾಟಗಾರರ ಸುಧಾರಣಾವಾದಿ ಕುಟುಂಬದಲ್ಲಿ ಹುಟ್ಟಿದವರು. ಪಶ್ಚಿಮ ಬಂಗಾಳದ ಕಾನೂನು ಸೇವಾ ಸಲಹಾ ಸಮಿತಿಯಲ್ಲಿ ಕಾರ್ಯನಿರ್ವಹಿಸಿದವರು. ಮಹಿಳಾ ಕೈದಿಗಳ ಮಕ್ಕಳ ವಿದ್ಯಾಭ್ಯಾಸ ಮತ್ತು ಯೋಗಕ್ಷೇಮವನ್ನು ನೋಡಿಕೊಳ್ಳುವ ಉದ್ದೇಶದಿಂದ ‘ಕೀರ್ತಿಕಾ’ ಎನ್ನುವ ಎನ್.ಜಿ.ಓ ಸ್ಥಾಪಿಸಿದ್ದಾರೆ. ಮಾನವ ಹಕ್ಕುಗಳ ಕಾನೂನು ಸಲಹಾ ಸಂಘಟನೆಯ ಉಪಾಧ್ಯಕ್ಷರಾಗಿದ್ದಾರೆ. ರುಕ್ಮಿಣಿ ಪಾರ್ಥಸಾರಥಿ (1930) ದಕ್ಷಿಣ ಭಾರತದ ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದವರು. ಅವರು ಪೌಷ್ಟಿಕತೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು ಮತ್ತು ಗೃಹಿಣಿಯಾಗಿರಲು ನಿರ್ಧರಿಸಿದರು. ಶಾಸ್ತ್ರೀಯ ಸಂಗೀತ, ನೃತ್ಯ ಹಾಗೂ ಸಾಹಿತ್ಯದಲ್ಲಿ ಆಳವಾದ ಆಸಕ್ತಿಯಿದ್ದ ರುಕ್ಮಿಣಿಯವರ ಬರವಣಿಗೆ ಪುರಾಣ ಮತ್ತು ಇತಿಹಾಸವನ್ನು ಕುರಿತದ್ದಾಗಿದೆ. ಜಯಲಕ್ಷ್ಮಿ ನಾರಾಯಣ್(1927) ದಕ್ಷಿಣ ಭಾರತದ ಸಾಂಪ್ರದಾಯಿಕ ಕುಟುಂಬದಿಂದ ಬಂದವರು. ಕರ್ನಾಟಕ ಸಂಗೀತ ಮತ್ತು ಭರತ ನಾಟ್ಯದಲ್ಲಿ ಪರಿಣಿತರು.ನಟುವಾಂಗ ಕಲಾವಿದರಾಗಿ ಜಗತ್ತನ್ನು ಪ್ರವಾಸ ಮಾಡಿದ ಮೊದಲ ಮಹಿಳೆ ಎಂದೆನಿಸಿಕೊಂಡಿದ್ದಾರೆ.
ಈ ಹನ್ನೆರಡು ಮಹಿಳೆಯರು ತಮ್ಮ ವೃತ್ತಿ, ಜೀವನ ಸಂಗಾತಿಯೊಂದಿಗಿನ ಪ್ರೀತಿ ಮತ್ತು ವ್ಯಥೆಯನ್ನು ಹಂಚಿಕೊಂಡ ಪರಿಯಲ್ಲಿ ಮದುವೆಯೆನ್ನುವ ಸಂಸ್ಥೆಯು ಮಹಿಳೆಯರ ಬದುಕನ್ನು ರೂಪಿಸುವ ಹಲವು ಮಾದರಿಗಳನ್ನು ಕಾಣಬಹುದಾಗಿದೆ. ಮದುವೆಯೆನ್ನುವ ಸಂಸ್ಥೆ ಅದರ ರಚನೆಯಲ್ಲೇ ಹೆಣ್ಣಿನ ಸ್ವಾತಂತ್ರ್ಯ ಮತ್ತು ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಎಂಬ ಅಭಿಪ್ರಾಯವು ಸಾರ್ವತ್ರಿಕ ಸತ್ಯವಲ್ಲವೆಂಬುದನ್ನು ಪ್ರಕಟಿಸುವುದಲ್ಲದೆ, ಮನೆಯಾಚೆಗಿನ ವಿವಿಧ ಆಯಾಮಗಳಿಗೂ ವಿಸ್ತರಿಸಿ ಹೆಣ್ಣಿನ ಬದುಕಿಗೆ ಅರ್ಥ ಕಲ್ಪಿಸಬಲ್ಲುದು ಎಂಬುದನ್ನು ಇಲ್ಲಿನ ಸಂದರ್ಶನಗಳು ವ್ಯಕ್ತಪಡಿಸುತ್ತವೆ.
ವೈಧವ್ಯದ ನೋವನ್ನು ಸ್ವತಃ ಅನುಭವಿಸಬೇಕಾಗಿ ಬಂದ ಈ ಕೃತಿಯ ಲೇಖಕಿ ವಸಂತ ಕಣ್ಣಬಿರನ್ ಈ ವಿಷಯವನ್ನು ನಿರ್ವಹಿಸಿರುವ ರೀತಿ ಅಪಾರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಹಾಗೆಯೇ ಇಂಗ್ಲಿಷಿನ ಈ ಕೃತಿಯನ್ನು ಕನ್ನಡಕ್ಕೆ ಒದಗಿಸಿರುವ ಕನ್ನಡದ ಖ್ಯಾತ ವಿಮರ್ಶಕಿ ಎಂ.ಎಸ್. ಆಶಾದೇವಿ, ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆಯವರೂ ಕೂಡ ಅಭಿನಂದನಾರ್ಹರು.

ಎನ್. ಗಾಯತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *