ನಮ್ಮ ಕಥೆ/ ಸ್ತ್ರೀವಾದಿಯ ಪಯಣ – ಎನ್. ಗಾಯತ್ರಿ

ಪ್ರಖ್ಯಾತ ಸ್ತ್ರೀವಾದಿ ಮತ್ತು ಅರ್ಥಶಾಸ್ತ್ರಜ್ಞೆ ಡಾ| ದೇವಕಿ ಜೈನ್‍ರವರು ತಮ್ಮ The  Journey of a Southern Feminist ಪುಸ್ತಕದಲ್ಲಿ ತಾನು ಸ್ತ್ರೀವಾದಿ ಹೇಗಾದೆ ಎಂದು ಮತ್ತು ಈ ಸ್ತ್ರೀವಾದಿ ಪಯಣದಲ್ಲಿ ಅವರು ಕಂಡುಂಡ ಅನುಭವಗಳು, ಕ್ರಮಿಸಿದ ಹೆಜ್ಜೆಗಳು ಮತ್ತು ಸಾಧಿಸಿದ ಸವಾಲುಗಳನ್ನು ಕುರಿತು ಮಾತನಾಡುತ್ತಾರೆ. ಅವರ ಬದುಕಿನ ಶ್ರೀಮಂತ ಅನುಭವದ ಈ ಚಿತ್ರಣ ಭಾರತದ ಮಹಿಳಾ ಅಧ್ಯಯನ ಚರಿತ್ರೆಯ ಹಲವು ಆಯಾಮಗಳನ್ನು ಬಿಚ್ಚಿಡುತ್ತದೆ. ಅದರ ಒಂದು ಕಿರು ನೋಟ ಇಲ್ಲಿದೆ.

1963ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಿರಾಂಡ ಹೌಸ್ ಕಾಲೇಜ್‍ಗೆ ಅರ್ಥಶಾಸ್ತ್ರದ ಅಧ್ಯಾಪಕಿಯಾಗಿ ದೇವಕಿ ಜೈನ್ ಸೇರುತ್ತಾರೆ. ಸೇರ್ಪಡೆಯಾದ ಆರು ವರ್ಷ ವೃತ್ತಿ ನಡೆಸಿದಾಗಿನ ಅವರ ಆ ಕಾಲೇಜಿನ ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತಾರೆ. ಅಲ್ಲಿದ್ದ ಮಹಿಳಾ ಅಧ್ಯಾಪಕಿಯರ ಸಂಖ್ಯೆಯೇನೋ ಹೆಚ್ಚಿತ್ತು. ಆ ಮಹಿಳೆಯರಿಗೆ ಕಾಲೇಜಿನಲ್ಲಿ ಪಾಠ ಮಾಡುವುದರ ಜೊತೆಗೆ ಗಂಡ- ಮಕ್ಕಳನ್ನು ನೋಡಿಕೊಳ್ಳಬೇಕಾದ ಗೃಹಕೃತ್ಯದ ಹೊರೆಯೂ ಬಹಳಷ್ಟಿತ್ತು. ಈ ಎರಡು ದುಡಿತಗಳ ನಡುವೆ ಅವರು ಹಂಚಿ ದಣಿದು ಹೋಗಿದ್ದರು.ಅವರಿಗೆ  ಹೆಣ್ಣಿನ ಕಷ್ಟಗಳ ಸ್ವರೂಪವೇ ಅರ್ಥವಾಗಿರಲಿಲ್ಲ. ಆಗಷ್ಟೇ ಅವರು ಆಕ್ಸ್‍ಫರ್ಡ್ ನಿಂದ ಓದು ಮುಗಿಸಿ ಸ್ವತಂತ್ರ ಹಕ್ಕಿಯಂತೆ ಹಿಂತಿರುಗಿದ್ದರು. ಆಗಿನ್ನು ಅವರಿಗೆ ಮದುವೆಯಾಗಿರಲಿಲ್ಲ.

ಕೌಟುಂಬಿಕ ಜವಾಬ್ದಾರಿಗಳಿಲ್ಲದೆ ಒಂಟಿಯಾಗಿದ್ದ ಅವರ ಆ ಯೌವ್ವನದ ದಿನಗಳಲ್ಲಿ ಅವರ ವಿಭಾಗದ ಸ್ಟಾಫ್ ರೂಮಿನಲ್ಲಿ ಕುಳಿತು ಸದಾ ತಮ್ಮ ಪುಟ್ಟ ಮಕ್ಕಳ ಬಗ್ಗೆ ಮಾತನಾಡುತ್ತಿದ್ದ ಆ ಮಹಿಳಾ ಸಹೋದ್ಯೋಗಿಗಳ ಜೊತೆ ಸೇರುವುದಕ್ಕಿಂತ ಹೆಚ್ಚಾಗಿ ಕಾಲೇಜಿನಿಂದ ಹೊರ ನಡೆದು ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಬಳಿಯಲ್ಲಿದ್ದ ಕಾಫಿ ಶಾಪ್‍ನತ್ತ ಹೋಗುತ್ತಿದ್ದರು. ಅಲ್ಲಿ ಅಮರ್ತ್ಯ ಸೇನ್  ಮತ್ತು  ಸುಖಮೋಯ್ ಚಕ್ರವರ್ತಿಯವರು ತಮ್ಮ ಶಿಷ್ಯವೃಂದ (ಹೆಚ್ಚಾಗಿ ಹುಡುಗರು)ದ ಜೊತೆ ಕಾಫಿಯೊಡನೆ ಚರ್ಚೆ ಮಾಡುತ್ತಾ ಕುಳಿತಿರುತ್ತಿದ್ದರು. ಪ್ಯಾರೆಟೋನ ಆಪ್ಟಿಮ್ಯಾಲಿಟಿಯ ಬಗ್ಗೆಯೋ ಅಭಿವೃದ್ಧಿ ಅರ್ಥ ಶಾಸ್ತ್ರದ ಬಗ್ಗೆಯೋ ಅವರು ಆಡುತ್ತಿದ್ದ ಮಾತುಗಳನ್ನು ಕೇಳುವುದು ಅವರಿಗೆ ಬಹು ಹಿತವಾಗಿರುತ್ತಿತ್ತು. ಸ್ಟಾಫ್ ರೂಮಿನ ಗೆಳತಿಯರ ಸಾಂಗತ್ಯಕ್ಕಿಂತ ಅವರಿಗೆ ಈ ಚರ್ಚೆಗಳು ತುಂಬಾ ಪ್ರಿಯವಾಗಿದ್ದವು. ಈ ಹಂತದಲ್ಲಿ ಅವರು ಯಾವುದೇ ರೀತಿಯ ಸ್ತ್ರೀವಾದಿಯಾಗಿರಲಿಲ್ಲ.

1960ರ ದಿನಗಳು… ರಾಜ್ ಮತ್ತು ರೊಮೇಶ್ ಥಾಪರ್ ಇಬ್ಬರೂ ಅವರ ಬೌದ್ಧಿಕ ಪತ್ರಿಕೆ Seminar ತರುತ್ತಿದ್ದರು. ಹೀಗೊಮ್ಮೆ ‘ಭಾರತೀಯ ಮಹಿಳೆ’ಯನ್ನು ಕುರಿತು ಒಂದು ವಿಶೇಷ ಸಂಚಿಕೆಯನ್ನು ತರಲು ನಿರ್ಧರಿಸಿದರು. ಈ ಗುಂಪಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದ, ಆಗಷ್ಟೇ ಪ್ರಾಚೀನ ಭಾರತದ ಚರಿತ್ರಕಾರಳಾಗಿ ಸುದ್ದಿಮಾಡುತ್ತಿದ್ದ ರೊಮಿಲ್ಲಾ ಥಾಪರ್ ದೇವಕಿಯವರನ್ನು  ಈ ಸಂಚಿಕೆಗೆ ಒಂದು ಲೇಖನ ಬರೆಯಲು ಪುಸಲಾಯಿಸಿ ಒತ್ತಾಯಿಸಿದರು. ಅವರು ಏನು ಬರೆಯಬೇಕೆಂದು ದೀರ್ಘವಾಗಿ ಯೋಚಿಸಿದರು.  ಆಗ ಅವರಿಗೆ ಬಾಲ್ಯದ  ಘಟನೆಯೊಂದು ನೆನಪಿಗೆ ಬರುತ್ತದೆ. ಅವರು ಪುಟ್ಟವರಿದ್ದಾಗ ಅವರ ಅಮ್ಮ ಅವರಿಗೆ ಎಣ್ಣೆ ಸ್ನಾನ ಮಾಡಿಸುವಾಗ ಒಂದು ಆಶೀರ್ವಚನವನ್ನು ಹೇಳುತ್ತಿದ್ದಳು. ಪುರಾಣದ ಪಂಚಪತಿವ್ರತೆಯರಾದ ಅಹಲ್ಯ, ತಾರಾ, ಸೀತಾ, ದ್ರೌಪದಿ ಮತ್ತು ಮಂಡೋದರಿಯರಂತೆ ತಮ್ಮ ಹೆಣ್ಣು ಮಕ್ಕಳು ಸ್ತ್ರೀ ಮಾದರಿಯ ಸದ್ಗುಣಗಳನ್ನು ಅನುಸರಿಸುವಂತಾಗಲಿ ಎಂದು ಹಾರೈಸುತ್ತಿದ್ದರು. ಈ ಎಲ್ಲ ಮಹಿಳೆಯರೂ ಒಳ್ಳೆಯ ಮಗಳಾಗಿ, ತಾಯಿಯರಾಗಿ ಪುರುಷಾಧಿಕಾರಕ್ಕೆ ತಮ್ಮನ್ನು ತೆತ್ತುಕೊಂಡವರು. ದೇವಕಿಯವರಿಗೆ ಅವರು ಪಿತೃಪ್ರಾಧಾನ್ಯತೆಯ ದಮನಕ್ಕೊಳಗಾದವರಾಗಿ ಕಾಣುತ್ತಿದ್ದರು. ಆದರೆ ಅವರನ್ನು ಯಾವುದೇ ರೀತಿಯಲ್ಲೂ ಅವರ ಆದರ್ಶದ ಮಾದರಿಗಳನ್ನಾಗಿ ಒಪ್ಪಿಕೊಳ್ಳಲು  ಅವರು ಸಿದ್ಧರಿರಲಿಲ್ಲ. ಆದ್ದರಿಂದ Seminar ಗೆ ಬರೆದ ಲೇಖನದಲ್ಲಿ ಈ ಸಂಪ್ರದಾಯವನ್ನು ಧಿಕ್ಕರಿಸಿ ಸ್ವತಂತ್ರವಾಗಿ ನಿಂತ ಹೊಸ ರೀತಿಯ ಪಂಚಕನ್ಯೆಯರ ಬಗ್ಗೆ ಬರೆದರು. ಆಮ್ರಪಾಲಿ, ಗಾರ್ಗಿ, ಅವ್ವಯ್ಯಾರ್, ಸಾವಿತ್ರಿ, ಸೀತಾ ಮುಂತಾದ ಪುರುಷರೊಂದಿಗೆ ತಮ್ಮನ್ನು ಜೊತೆಗೂಡಿಸಿಕೊಳ್ಳದ ಹೆಣ್ಣುಗಳ ಕುರಿತು ಬರೆದರು.

ಭಾರತ ಸರ್ಕಾರದ ಪ್ರಕಟಣಾ ವಿಭಾಗದ ಸಂಪಾದಕರು 1950ರಲ್ಲಿ ತಾರಾ ಆಲಿ ಬೇಗ್ ಬರೆದ Women of India ಕ್ಕಿಂತ ಭಿನ್ನವಾಗಿ ಆಧುನಿಕ ದೃಷ್ಟಿಕೋನವುಳ್ಳ ಪುಸ್ತಕವನ್ನು ಬರೆಯಲು ಅವರನ್ನು ಕೇಳಿಕೊಂಡರು. ಅಂತರರಾಷ್ಟ್ರೀಯ ಮಹಿಳಾ ವರ್ಷದ ಸಂದರ್ಭಕ್ಕೆ ಈ ಪುಸ್ತಕ ಸಿದ್ಧವಾಗಬೇಕಿತ್ತು. ಅವರು ಈ ವಿಷಯದ ಬಗ್ಗೆ ಹೆಚ್ಚೇನೂ ಯೋಚಿಸಿರಲಿಲ್ಲವಾದರೂ, ಮನೆಯಲ್ಲೇ ಕುಳಿತು ಈ ಕೆಲಸ ಮಾಡಬಹುದೆಂಬ ಕಾರಣಕ್ಕೆ ಈ ಯೋಜನೆಯನ್ನು ಒಪ್ಪಿಕೊಂಡರು. ದೆಹಲಿ ವಿಶ್ವವಿದ್ಯಾಲಯದಲ್ಲಿದ್ದ ವಿದ್ವಾಂಸರಾದ ಆ್ಯಂಡ್ರೆ ಬೆಟೈಲೆ, ವೀಣಾ ದಾಸ್, ಅಶೋಕ್ ರುದ್ರ, ರೊಮಿಲಾ ಥಾಪರ್, ಆಶಿಷ್ ಬೋಸ್ ಮುಂತಾದವರು ಮತ್ತು ಕೆಲವು ಪತ್ರಕರ್ತರನ್ನು ಸಂಪರ್ಕಿಸಿ ಅವರ ವಿವಿಧ ಜ್ಞಾನ ಶಿಸ್ತುಗಳ ಮೂಲಕ ಭಾರತೀಯ ಮಹಿಳೆಯನ್ನು ವಿಶ್ಲೇಷಿಸಿ ಲೇಖನವನ್ನು ಬರೆದುಕೊಡಲು ಕೇಳಿಕೊಂಡರು. ಒಟ್ಟಿನಲ್ಲಿ ಈ ಎಲ್ಲ ಲೇಖನಗಳನ್ನು ಸಂಪಾದಿಸುವ ವೇಳೆಗೆ ಸ್ತ್ರೀತ್ವಕ್ಕೆ ಇರಬೇಕಾದ ಗೌರವವನ್ನು ಅವರಲ್ಲಿ ಹೆಚ್ಚಿಸಿತು. ಸ್ತ್ರೀಪುರುಷರ ನಡುವೆ ಇರುವ ಅಸಮಾನತೆಯ ಬಗೆಗಿನ ಕಾಳಜಿ ಮತ್ತು ಅದಕ್ಕಿಂತ ಹೆಚ್ಚಾಗಿ ಈ ಅಸಮಾನತೆಯ ಬಗ್ಗೆ ಅವರಿಗೆ ಅಪಾರ ಜ್ಞಾನದ ಕೊರತೆ ಇವೆಲ್ಲವನ್ನೂ ಈ ಪಯಣದಲ್ಲಿ ಅವರು ಅರ್ಥಮಾಡಿಕೊಂಡರು.

1975ರಲ್ಲಿ ಭಾರತ ಸರ್ಕಾರದ ವಾರ್ತಾವಿಭಾಗವು ಅಂತರರಾಷ್ಟ್ರೀಯ ಮಹಿಳಾ ವರ್ಷದ ಆಚರಣೆಗೆ ಪೂರಕವಾಗಲೆಂದು ಪ್ರಕಟಿಸಿದ ಈ ಇಂಡಿಯನ್ ವಿಮೆನ್ (Indian Women) ಪುಸ್ತಕದ ಮುನ್ನುಡಿಯಲ್ಲಿ ಅವರು ಹೀಗೆ ಬರೆದಿದ್ದಾರೆ: “ಭಾರತದಲ್ಲಿ ಮಹಿಳೆಯರ ಪಾತ್ರಗಳನ್ನು ಕುರಿತಂತೆ ಚರ್ಚಿಸಲು ಸಿದ್ಧಾಂತವೊಂದರ ಅಗತ್ಯವಿದೆ. ಚಿಂತನಾಕ್ರಮದಲ್ಲಿ ಉದ್ದೇಶಪೂರ್ವಕವಾದ ಅಂತಹ ಪ್ರಯತ್ನವಿಲ್ಲದಿದ್ದರೆ, ಪರ್ಯಾಯ ಮಾರ್ಗಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳದಿದ್ದರೆ, ಭವಿಷ್ಯದ ಬಗ್ಗೆ ಪರ್ಯಾಯ ದೃಷ್ಟಿಯನ್ನು ಬೆಳೆಸಿಕೊಳ್ಳದಿದ್ದರೆ ಅವರ ಗತಚರಿತ್ರೆಯು ಅಳಿಸಿಹೋಗುತ್ತದೆ; ಭವಿಷ್ಯವು ಅನಿಶ್ಚಯವಾಗುತ್ತದೆ.” ಈ ಪುಸ್ತಕವನ್ನು ರಾಷ್ಟ್ರಾಧ್ಯಕ್ಷರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದಲ್ಲದೆ, ಮೆಕ್ಸಿಕೋದಲ್ಲಿ ನಡೆದ ವಿಶ್ವ ಸಮ್ಮೇಳನದಲ್ಲಿ ಭಾರತದ ಅಧಿಕೃತ ದಾಖಲೆಯಾಗಿ ಅದನ್ನು ಮಂಡಿಸಿದರು.

ಈ ಹೊಸದಾಗಿ ಹುಟ್ಟಿದ ಮಹಿಳಾ ಅಧ್ಯಯನದ ಆಸಕ್ತಿಯನ್ನು ನಂತರ   ಬೆಳೆಸಿಕೊಂಡು ಅವರು ಕ್ಷೇತ್ರಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆಗ್ಗೆ ಪ್ರೊಫೆಸರ್ ರಾಜ್ ಕೃಷ್ಣ ಮತ್ತು ಎಲ್.ಸಿ.ಜೈನ್ ಇಬ್ಬರೂ ಸೇರಿ ಇನ್‍ಸ್ಟಿಟ್ಯೂಟ್ ಆಫ್ ಸೋಷಿಯಲ್ ಸ್ಟಡೀಸ್ ರಿಸರ್ಚ್ (ISST) ಸ್ಥಾಪಿಸಿದ್ದರು. ಬಡತನ ನಿರ್ಮೂಲಕ್ಕಾಗಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ನೇಮಕಾತಿ ಮಾಡಿಕೊಳ್ಳಲು ಬೇಕಾದ ಕ್ಷೇತ್ರಕಾರ್ಯವನ್ನು ನಡೆಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ದೇವಕಿ ಜೈನ್‍ರವರು ಈ ಸಂಸ್ಥೆಯ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರಿಸರ್ಚ್‍ನ ನೆರವು ಪಡೆದು ಹಲವಾರು ಸಂಶೋಧನೆಗಳನ್ನು ನಡೆಸಿದರು. ಮಹಿಳೆಯರ ಆರ್ಥಿಕತೆಯ ಕ್ಷೇತ್ರದ ಬಗ್ಗೆ, ಅದರಲ್ಲಿರುವ ಅಸಮಾನತೆಗಳ ಬಗ್ಗೆ, ಆರ್ಥಿಕ ಕ್ಷೇತ್ರದಲ್ಲಿ ಅವರ ಸಾಮಥ್ರ್ಯದ ಬಗ್ಗೆ ಮತ್ತು ಅದನ್ನು ಬಲಪಡಿಸಲು ಅವರಿಗಿರುವ ಶಕ್ತಿಯ ಬಗ್ಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಕ್ಷೇತ್ರ ಕಾರ್ಯ ನಡೆಸಿದರು. ಈ ಎಲ್ಲ ಅಧ್ಯಯನಗಳಿಂದಾಗಿ ಅವರಿಂದ ಹಲವಾರು ಲೇಖನಗಳು, ಪುಸ್ತಕಗಳು ಹೊರಬರಲು ಸಾಧ್ಯವಾಯಿತು. ಮಹಿಳೆಯರ ಅಸಾಧಾರಣ ಸಾಮರ್ಥ್ಯ, ಭಾರತದ ಆರ್ಥಿಕತೆಯಲ್ಲಿ ಅವರ ಪಾತ್ರದ ಆಳ, ಅಗಲಗಳ ಪರಿಚಯವಾಯಿತು.

ಇದರ ಜೊತೆಗೆ, ಭಾರತದ ಇತರ ಭಾಗಗಳಲ್ಲಿ ಮತ್ತು ದೆಹಲಿಯಲ್ಲಿ ಮಹಿಳೆಯರ ಸಾಮರ್ಥ್ಯ, ಅವರನ್ನು ಕುರಿತ ಕಡೆಗಣನೆ, ತಾರತಮ್ಯ ಮುಂತಾದ ವಿಷಯಗಳನ್ನು ಕುರಿತಂತೆ ಹಲವಾರು ಅಧ್ಯಯನಗಳು ನಡೆಯಲಾರಂಭಿಸಿದ್ದವು. ಈ ಎಲ್ಲ ಅಧ್ಯಯನಗಳನ್ನು ಗಂಭೀರವಾಗಿ ಪರಿಗಣಿಸಿದ ಹಲವು ಸ್ತ್ರೀವಾದಿ ಚಿಂತಕರ ಪ್ರಯತ್ನದ ಫಲವಾಗಿ ಹುಟ್ಟಿಕೊಂಡಿದ್ದು ಇಂಡಿಯನ್ ಅಸೋಸಿಯೇಷನ್ ಆಫ್ ವಿಮೆನ್ಸ್ ಸ್ಟಡೀಸ್. ಇದಕ್ಕೆ ಅಂದಿನ ಯು.ಜಿ.ಸಿ. ಚೇರ್ ಪರ್ಸನ್ ಆಗಿದ್ದ ಮಾಧುರಿ ಶಾ ಅವರ ಪೂರ್ಣ ಬೆಂಬಲವೂ ಇತ್ತು. 1982ರಲ್ಲಿ ಆರಂಭವಾದ ಈ ಸಂಸ್ಥೆಯ ಸ್ಥಾಪಕ ಸದಸ್ಯೆಯರಲ್ಲಿ ದೇವಕಿ ಜೈನ್ ಕೂಡ ಒಬ್ಬರು.

ಬಡತನಕ್ಕೆ ಸಂಬಂಧಿಸಿದಂತೆ ಜೆಂಡರ್ ಪರಿಕಲ್ಪನೆಯನ್ನು ಅನಾವರಣಗೊಳಿಸುವುದು ISST ಯ ಬಹುಮುಖ್ಯ ಕಾರ್ಯಕ್ರಮಗಳಾಗಿದ್ದವು. ಈ ಸಂಬಂಧವಾಗಿ ಅಧ್ಯಯನ ಮತ್ತು ಸಂಶೋಧನೆ ನಡೆಸುತ್ತಿದುದರ ಪರಿಣಾಮವಾಗಿ ಅವರಿಗೆ ಮಹಿಳಾ ದಶಕದ ಆಚರಣೆಯ ಸಂದರ್ಭದಲ್ಲಿ ಹಲವಾರು ಸಭೆ, ಸಮ್ಮೇಳನಗಳಿಗೆ ಆಹ್ವಾನಗಳು ಬಂದವು. ಈ ವಿಷಯವನ್ನು ಇನ್ನೂ ಹೆಚ್ಚು ಆಳವಾಗಿ ಚಿಂತಿಸುವ ಅವಕಾಶ ಮತ್ತು ಅಗತ್ಯಗಳು ಕೂಡಿ ಬಂದವು.

ಅವರ ಅಧ್ಯಯನದ ಭಾಗವಾಗಿ ಹಲವಾರು ಯೋಜನೆಗಳನ್ನು ಕುರಿತು ಪರಿಶೀಲನೆ ಮಾಡಲು ನಡೆಸಿದ  ಕ್ಷೇತ್ರಕಾರ್ಯಗಳ ಅನುಭವಗಳು ಮಹಿಳೆಯರನ್ನು ಕುರಿತ ಅವರ ನಂಬಿಕೆ ಮತ್ತು ತಿಳುವಳಿಕೆಯನ್ನು ಗಟ್ಟಿಗೊಳಿಸಿದವು. ಅಲ್ಲದೆ, ಈ ಮಹಿಳೆಯರು ಎಷ್ಟೊಂದು ಹೊಸ ಆವಿಷ್ಕಾರಗಳನ್ನು ಮಾಡಿಕೊಳ್ಳಬಲ್ಲರು, ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಾ, ತಮ್ಮ ಸಾಮಥ್ರ್ಯವನ್ನು ಬಲಪಡಿಸಿಕೊಳ್ಳಬಲ್ಲರು ಎಂಬಂತಹ ಮಾಹಿತಿಗಳು ದೊರೆತವು. ಸಮಾಜದ ಮತ್ತು ಆರ್ಥಿಕತೆಯನ್ನು ಪ್ರಭಾವಿಸುವ ಜಾತಿ, ಭಾಷೆ, ಧರ್ಮ ಮತ್ತು ಪ್ರದೇಶ- ಈ ಎಲ್ಲದರ ಎಲ್ಲೆಗಳನ್ನು ಮೀರಿ ಮಹಿಳೆಯರು ಆರ್ಥಿಕ ಪ್ರಗತಿಯನ್ನು ಸಾಧಿಸಬಲ್ಲರು, ಎಂಬ ಅಂಶ ಹೊರಬಿದ್ದವು. ಆರೋಗ್ಯ ಮತ್ತು ಸಮಾಜ ಕಲ್ಯಾಣ ವಿಭಾಗಗಳು ಅವರನ್ನು ಈ ಹಿನ್ನೆಲೆಯಲ್ಲಿ ಕೇವಲ ಫಲಾನುಭವಿಗಳಾಗಿ ಮಾತ್ರ ನೋಡುತ್ತಿದ್ದವು. ಅವರ ಸಂಘಟನಾ ಸಾಮರ್ಥ್ಯವನ್ನಾಗಲಿ, ನಿರ್ವಹಣಾ ಕೌಶಲವನ್ನಾಗಲಿ ಪ್ರಮುಖವಾಗಿ ಗಮನಿಸಿದ್ದು ಕಡಿಮೆಯೇ.

ಸ್ತ್ರೀವಾದಿ ಚಳುವಳಿಯಲ್ಲಿರುವ ಸೋದರಿಯರೊಂದಿಗೆ ಯಾವಾಗಲೂ ಅವರದೊಂದು ತರ್ಕ ಇದ್ದೇ ಇದೆ: ಪುರುಷರು ನಮ್ಮನ್ನು ಅಂಚಿಗೆ ಸರಿಸಿದ್ದಾರೆ, ಅವರ ಸಿದ್ಧಾಂತಗಳು, ಚಿಂತನೆಗಳು ನಮ್ಮನ್ನು ಹೊರಗಿಟ್ಟಿವೆ-ಎನ್ನುವುದರ ಬಗ್ಗೆ ಅಳುತ್ತಾ ಕೂರುವುದನ್ನು ನಿಲ್ಲಿಸೋಣ. ಮುಂದುವರೆದು, ಮಹಿಳೆಯರೊಂದಿಗೆ ಕೆಲಸ ಮಾಡುತ್ತಾ ಗಳಿಸಿರುವ ಅನುಭವದಿಂದ ದೊರೆತ ಜ್ಞಾನದ ಬಲದಿಂದ ಆ ಎಲ್ಲ ಮಾಹಿತಿಗಳನ್ನೊಳಗೊಂಡ ಹೊಸ ರಚನಾತ್ಮಕ ಸಿದ್ಧಾಂತವನ್ನು ಕಟ್ಟೋಣ. ಈ ಸಂದರ್ಭದಲ್ಲಿ ಅಮರ್ತ್ಯ ಸೇನ್ಅವರ ಮಾತುಗಳನ್ನು ಉದಾಹರಿಸುತ್ತಾರೆ:
“ ಮಹಿಳೆಯರನ್ನು ಹಿತ ಕಾಯಬೇಕಾದ ರೋಗಿಗಳಾಗಿ ನೋಡಬಾರದು. ಬದಲಿಗೆ, ವ್ಯಕ್ತಿಯಾಗಿ ಮತ್ತು ಸಾಮೂಹಿಕವಾಗಿ ಪರಿಣಾಮಕಾರಿ ಕ್ರಿಯಾ ನಿಯೋಗಿಗಳಾಗಿ ಅವರನ್ನು ಕಾಣಬೇಕು. ಅವರ ಪಾತ್ರವನ್ನು ವಿಶೇಷವಾಗಿ ‘ಬಳಕೆದಾರ’ರಂತೆ ಮತ್ತು ‘ಫಲಾಪೇಕ್ಷಿ’ಗಳಂತೆ ಕಾಣುವುದರಾಚೆಗೆ ‘ಬದಲಾವಣೆಯ ಹರಿಕಾರ’ರಾಗಿ ಕಾಣಬೇಕು. ಅವಕಾಶ ಕೊಟ್ಟಲ್ಲಿ ಮಹಿಳೆಯರು ಚಿಂತಿಸಬಲ್ಲರು, ನಿರ್ಣಯಿಸಬಲ್ಲರು, ಪರಿಹರಿಸಬಲ್ಲರು, ಸ್ಪೂರ್ತಿದಾಯಕರಾಗಬಲ್ಲರು, ಪ್ರತಿರೋಧವೊಡ್ಡಬಲ್ಲರು – ಈ ಎಲ್ಲ ಸಾಧನಗಳ ಮೂಲಕ ಹೊಸ ಜಗತ್ತನ್ನು ಪುನರ್ ರೂಪಿಸಬಲ್ಲರು.”

ವಿಶ್ವಸಂಸ್ಥೆಯ ನೇತೃತ್ವದಲ್ಲಿ 1975ರಲ್ಲಿ ಮೆಕ್ಸಿಕೋನಲ್ಲಿ ವಿಶ್ವಸಮ್ಮೇಳನ ಆರಂಭವಾಗಿ, 1985ರಲ್ಲಿ ನೈರೋಬಿಯಲ್ಲಿ, 1995ನಲ್ಲಿ ಬೀಜಿಂಗ್‍ನಲ್ಲಿ ವಿಶ್ವ ಸಮ್ಮೇಳನಗಳು ನಡೆದಾಗ, ಆ ಸಮ್ಮೇಳನಗಳ ಪೂರ್ವಭಾವಿಯಾಗಿ ದೇಶದಲ್ಲಿ ಮತ್ತು ವಿದೇಶದಲ್ಲಿ ನಡೆದ ಸಭೆಗಳಲ್ಲೆಲ್ಲಾ ಭಾಗವಹಿಸಿದ ದೇವಕಿ ಜೈನ್ ಅಲ್ಲಿ ಮಂಡಿಸಲಾಗುವ ಪ್ರಬಂಧಗಳನ್ನು ತಯಾರಿಸುವ ಸಮಿತಿಗಳಲ್ಲಿ ಕೆಲಸ ಮಾಡಿದರು.

ಭಾರತವಷ್ಟೇ ಅಲ್ಲ, ದಕ್ಷಿಣ ಏಷ್ಯಾದ ಆರ್ಥಿಕ ಕ್ಷೇತ್ರದಲ್ಲಿ ಮಹಿಳೆಯ ಸ್ಥಿತಿಗತಿ, ಅವಳ ಕೊಡುಗೆ, ಸಮಸ್ಯೆಗಳು ಮತ್ತು ಯೋಜನೆಗಳನ್ನು ಕುರಿತಂತೆ ಹಲವಾರು ಅಧ್ಯಯನಗಳನ್ನು ಅವರು ತಳಮಟ್ಟದ ಮಹಿಳೆಯರೊಂದಿಗೆ ನಡೆಸಿದಾಗ ಹಲವಾರು ಆಶ್ಚರ್ಯಕರ ಫಲಿತಾಂಶಗಳು ದೊರಕಿದವು. ಅವು ಅಭಿವೃದ್ಧಿ ಮಾದರಿಯ ಪರ್ಯಾಯಗಳನ್ನು ಮುಂದಿಟ್ಟಿತು. ಆಗ ಅವರಿಂದ ಬಂದ ಉಪನ್ಯಾಸ: “ಅಭಿವೃದ್ಧಿಗೆ ಮಹಿಳೆ ಮುಖ್ಯಳೆ? ಮಹಿಳೆ ಅಭಿವೃದ್ಧಿಯ ಹೊಸ ಮಾದರಿಯನ್ನು ಕಟ್ಟಬಲ್ಲಳೆ?” ಇದನ್ನು ಒಂದು ಕುರಿತು ಒಂದು ವಿಸ್ತಾರವಾದ ಉಪನ್ಯಾಸವನ್ನು   ಶ್ರೋತೃಗಳ ಮುಂದೆ ಮಂಡಿಸಿ ಚರ್ಚೆಗೆ ಹಾದಿ ಮಾಡಿಕೊಟ್ಟರು.

ಆರಂಭಿಕ ಹಂತದ ಸ್ತ್ರೀವಾದಿಗಳಲ್ಲೊಬ್ಬರಾದ ಗ್ಲೋರಿಯಾ ಸ್ಟೆಮ್‍ನ ಸ್ನೇಹ ಅವರಿಗೆ ದೊರೆತ ಮೇಲೆ ಸುಮಾರು 1970ರಿಂದ ಅವರು ತಮ್ಮನ್ನು ಸ್ತ್ರೀವಾದಿಯೆಂದೇ ಪರಿಚಯಿಸಿಕೊಳ್ಳತೊಡಗಿದರು. ಈ ದಿಕ್ಕಿನಲ್ಲಿ ಹಲವಾರು ಲೇಖನಗಳನ್ನು ಬರೆಯಲು ಆರಂಭಿಸಿದರು. ಆಗ ಬರೆದ ಪ್ರಮುಖ ಲೇಖನಗಳು ‘ಸ್ತ್ರೀವಾದವೆನ್ನುವುದು ಒಂದು ಜಾಗತಿಕ ಸಿದ್ಧಾಂತವಾಗಬಲ್ಲುದೆ?’(1976) ಮತ್ತು ‘ಸ್ತ್ರೀವಾದಿ ಸಿದ್ಧಾಂತದಲ್ಲಿ ಪ್ರಗತಿ: ಒಂದು ಭಾರತೀಯ ದೃಷ್ಟಿಕೋನ’(1986) ಮುಂತಾದ ಲೇಖನಗಳನ್ನು ಬರೆದರು. ಆಗ ಕೆಲವರು ‘ಸ್ತ್ರೀವಾದವೆನ್ನುವುದು ಪಾಶ್ಚಾತ್ಯ ಕಲ್ಪನೆ’ಎಂಬ ಮಾತನ್ನು ಹೇಳುತ್ತಿದ್ದರು. ಮತ್ತೆ ಕೆಲವರು ನಮ್ಮ ದೇಶದಲ್ಲಿಯೂ ಈ ಪರಿಕಲ್ಪನೆಯ ಉಗಮವನ್ನು ಕುರಿತು ಸಂಶೋಧನೆ ನಡೆಸಿ ಭಾರತದ ‘ದೇಶೀಯ ಸ್ತ್ರೀವಾದ’ವನ್ನು ಅನ್ವೇಷಿಸಿದರು.

ಇಪ್ಪತ್ತೊಂದನೆಯ ಈ ಶತಮಾನದ ಹೊಸ್ತಿಲಲ್ಲಿ ನಿಂತು ನೋಡಿದಾಗ ಭಾರತದಲ್ಲಿ ಮತ್ತು ಅಂತರರಾಷ್ಟ್ರೀಯ ನೆಲೆಯಲ್ಲಿಯೂ ಕೂಡ ಸ್ತ್ರೀವಾದಿಗಳೆಂದು ತಮ್ಮನ್ನು ಕರೆದುಕೊಳ್ಳುವ ಹುಡುಗಿಯರ ಹಾಗು ಮಹಿಳೆಯರ ಸಂಖ್ಯೆಯಲ್ಲಿ ಸ್ಫೋಟವಾಗಿದೆ. ಈ ವಿಷಯವನ್ನು ಕುರಿತಂತೆ ಜಾಲ ತಾಣಗಳು ಬಹುಸಂಖ್ಯೆಯಲ್ಲಿ ಹುಟ್ಟಿಕೊಂಡಿವೆ. ಇವು ಅಧ್ಯಯನದ ವಿಷಯಗಳೂ ಆಗಿ ಸಾಕಷ್ಟು ಜೋರಾಗಿ ಚರ್ಚೆ, ಸಂವಾದ, ಮತ್ತು ಸಂಕಿರಣಗಳ ಮೂಲಕ ಪ್ರಸಾರಗೊಂಡಿವೆ. ಈ ಎಲ್ಲ ಜಾಲತಾಣಗಳ ಬಗ್ಗೆ ಖಚಿತವಾದ ಮಾಹಿತಿಯನ್ನು ಅವರು ಹೊಂದಿದ್ದೇನೆಂದು ಹೇಳುವುದಿಲ್ಲ. ಆದರೂ ಈ ಕಾಲಘಟ್ಟದಲ್ಲಿ ಎಲ್ಲರ ಗಮನಕ್ಕೆ ಬರುತ್ತಿರುವುದು ಮಹಿಳೆಯರ ಮೇಲಿನ ಹಿಂಸೆಯನ್ನು ಕುರಿತ ವಿದ್ಯಮಾನಗಳು. ಮಹಿಳೆಯ ಆರ್ಥಿಕತೆ ಮತ್ತು ರಾಜಕೀಯ ಕುರಿತಂತೆ ನಡೆಯುತ್ತಿರುವ ಚರ್ಚೆಯು ಚಿಕ್ಕ ಚಿಕ್ಕ ವಲಯಗಳಲ್ಲಿ ಮಾತ್ರ. ಅಂತರರಾಷ್ಟ್ರೀಯ ಮಟ್ಟದಲ್ಲೇನೋ ‘ಸ್ತ್ರೀವಾದಿ ಅರ್ಥಶಾಸ್ತ್ರದ ಅಂತರರಾಷ್ಟ್ರೀಯ ಸಂಘ’ವು ಅಸ್ತಿತ್ವಕ್ಕೆ ಬಂದಿದೆ. ಆದರೆ ಭಾರತದಲ್ಲಿ ಸ್ತ್ರೀವಾದಿಗಳು ತಮ್ಮದೇ ಆದ ಈ ನೆಲದ ಬೇರುಗಳಿಂದ ಜ್ಞಾನ ಸಂಪತ್ತಿನ ಖಜಾನೆಗಳನ್ನು ಸೃಷ್ಟಿಸಿಕೊಳ್ಳಬೇಕು. ಈ ಮಾತನ್ನು ಕೆಲವರು ಒಪ್ಪದಿರಬಹುದು. ಏಕೆಂದರೆ, ಈಗಾಗಲೇ ಈ ಕ್ಷೇತ್ರದಲ್ಲಿ ಹಲವಾರು ವಿದ್ವಾಂಸರು, ಬುದ್ಧಿಜೀವಿಗಳು ಚರಿತ್ರೆ, ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರಬಹುದು. ಆದರೂ ಇಂದಿಗೂ ಹೆಣ್ಣಿನ ಬಗ್ಗೆ ದೊಡ್ಡ ಧ್ವನಿಯಲ್ಲಿ ಕೇಳಿಸುವುದು ಅವಳ ‘ದೇಹ’ವನ್ನು ಕುರಿತ ಚರ್ಚೆಯೇ ಹೊರತು, ಅವಳ ‘ಮನಸ್ಸು’ ಕುರಿತದ್ದಲ್ಲ.                                                                                                                                                                                                                                                 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *