ನಮ್ಮ ಕಥೆ/ ಸಂಪ್ರದಾಯದ ಕೋಟೆ ಮುರಿದ ಕೋಟೇಶ್ವರಮ್ಮ- ಎನ್.ಗಾಯತ್ರಿ

ಹೋರಾಟಗಳ ನಾಡಾದ ಆಂಧ್ರದಲ್ಲಿ ಮಹಿಳೆಯರು ಆ ಹೋರಾಟಗಳಿಗೆ ಸರ್ವಶಕ್ತಿಯನ್ನು ಒದಗಿಸಿದವರು. ಅಂತಹವರಲ್ಲಿ ಕೊಂಡಪಲ್ಲಿ ಕೋಟೇಶ್ವರಮ್ಮ ಒಬ್ಬರು. ಚಳುವಳಿಯೊಂದರಲ್ಲಿ ಭಾಗಿಯಾಗುವ ಹೆಣ್ಣು ಮಾಡುವ ತ್ಯಾಗದ ಪರಾಕಾಷ್ಠೆಗೆ ಸಂಕೇತವಾದ ಕೋಟೇಶ್ವರಮ್ಮ ಅವರ ರೋಮಾಂಚಕಾರಿ ಜೀವನಗಾಥೆಯು ಅವರ ಆತ್ಮಕಥೆ ‘ಒಂಟಿ ಸೇತುವೆ’ಯಲ್ಲಿ ಬಿಚ್ಚಿಕೊಳ್ಳುತ್ತದೆ. ಇದೀಗ ನೂರರ ವಸಂತಕ್ಕೆ ಕಾಲಿಡುತ್ತಿರುವ ಕೋಟೇಶ್ವರಮ್ಮ ಅವರ ಶತಮಾನೋತ್ಸವದ ಸಂದರ್ಭದಲ್ಲಿ  ಈ ಅಕ್ಷರ ಜ್ಯೋತಿಯ ಮೂಲಕ ಅವರಿಗೆ ನಮ್ಮ ಶುಭಾಶಯಗಳು.

‘ಒಂಟಿ ಸೇತುವೆ’ ಕಾದಂಬರಿ ಎರಡು ನೆಲೆಯಲ್ಲಿ ಮುಖ್ಯವಾದದ್ದು. ಒಂದು, ಇದರಲ್ಲಿ ಆಂಧ್ರದದಲ್ಲಿ ಆರೇಳು ದಶಕಗಳ ಕಾಲ ನಡೆದ ಕ್ರಾಂತಿಕಾರಿ ಹೋರಾಟದ ಒಂದು ವಿರಾಟ್ ಸ್ವರೂಪ ಬಿಚ್ಚಿಕೊಳ್ಳುತ್ತದೆ. ಕೋಟೇಶ್ವರಮ್ಮ ಅವರು ಈ ಅವಧಿಯಲ್ಲಿ ಸುಧಾರಣಾ ಚಳುವಳಿ, ರಾಷ್ಟ್ರೀಯ ಚಳುವಳಿ, ಕಮ್ಯೂನಿಸ್ಟ್ ಚಳುವಳಿ ಹಾಗೂ ನಕ್ಸಲ್ ಬಾರಿ ಚಳುವಳಿಯೆಲ್ಲವಕ್ಕೂ ಸಾಕ್ಷಿಯಾದವರು. ಈ ಹೋರಾಟದ ಅತ್ಯಂತ ಸಣ್ಣ ವಿವರಗಳನ್ನು ಬಿಡದೆ ಪ್ರಸ್ತಾಪಿಸುವ ಲೇಖಕಿ ಆ ಕಾಲದ ಯುಗಧರ್ಮವನ್ನು ನಮಗೆ ದೃಶ್ಯರೂಪದಲ್ಲಿ ಕಾಣಿಸುತ್ತಾರೆ. ಅವರು ಎಲ್ಲ ಚಳುವಳಿಗಳ ಒಳಿತು_ಕೆಡಕುಗಳನ್ನು ಹತ್ತಿರದಿಂದ ಕಂಡವರು. ಮತ್ತೊಂದು, ಆಪ್ತವಾಗಿ ತೆರೆದುಕೊಳ್ಳುವ ಅವರ ಬದುಕಿನ ಹೋರಾಟದ ಚಿತ್ರಣ. ಚಳುವಳಿಗಳಿಂದಾಗಿ ಸಮಾಜದಲ್ಲಿನ ಕೌಟುಂಬಿಕ ಜೀವನ ಹೇಗೆ ಬಳಲುತ್ತದೆ, ಎಂಬುದನ್ನು ಸ್ವತಃ ಅನುಭವಿಸಿ ಬಲ್ಲವರು. ಆದ್ದರಿಂದ ಈ ಹೋರಾಟದ ಕಥೆ ಅವರ ಕಥೆ ಮಾತ್ರವಾಗದೆ, ಆ ಕಾಲದ ಹೋರಾಟದ ಹೆಣ್ಣುಗಳ ಕಷ್ಟ, ಸಾಮರ್ಥ್ಯ ಪರಿಚಯಿಸುವ ವಿಶಾಲವಾದ ಆಯಾಮ ಪಡೆದುಕೊಂಡು ಇದಕ್ಕೊಂದು ಚಾರಿತ್ರಿಕ ಮೌಲ್ಯ ಕೊಟ್ಟಿದೆ.

ಹೋರಾಟಗಳ ನಾಡಾದ ಆಂಧ್ರದ ಕೃಷ್ಣ ಜಿಲ್ಲೆಯ ಪಾಮರುವಿನಲ್ಲಿ, ಅನುಕೂಲಸ್ಥ ಮಧ್ಯಮ ವರ್ಗದ ರೆಡ್ಡಿ ಕುಟುಂಬದಲ್ಲಿ 1919ರಲ್ಲಿ ಹುಟ್ಟಿದ ಕೋಟೇಶ್ವರಮ್ಮನಿಗೆ, ಮನೆಯಲ್ಲಿ ಅವರು ಹುಟ್ಟಿದಂದಿನಿಂದಲೇ ರಾಷ್ಟ್ರೀಯತಾವಾದದ ಪರಿಸರ ದೊರಕಿತ್ತು. ಬಾಲ್ಯದಲ್ಲಿ ಅವರು ಕಂಡ ಸದಾ ಚರಕದಿಂದ ನೂಲು ತೆಗೆಯುತ್ತಾ ಕುಳಿತಿರುತ್ತಿದ್ದ ತಾಯಿ, ಅವರ ಬದುಕಿನ ಕೊನೆಯವರೆಗೂ ಅವರ ಎಲ್ಲ ಹೋರಾಟದ ಚಟುವಟಿಕೆಗಳಿಗೆ ಬೆಂಬಲವಾಗಿ ನಿಂತವರು. ಚಿಕ್ಕವಳಿರುವಾಗ ಸುಶ್ರಾವ್ಯವಾಗಿ ಹಾಡುತ್ತಿದ್ದ ಕೋಟೇಶ್ವರಮ್ಮನ ಸುಮಧುರ ಕಂಠಕ್ಕೆ ತಂದೆ ಹೆಮ್ಮೆ ಪಡುತ್ತಿದ್ದರು. ಅವರಿಗೆ ನಾಲ್ಕೈದು ವರ್ಷವಿದ್ದಾಗಲೇ ಸೋದರ ಮಾವ ವೀರಾರೆಡ್ಡಿಯೊಂದಿಗೆ ಅವರ ಮದುವೆ ನಡೆದುಹೋಗಿತ್ತು. ಮದುವೆಯಾದ ಎರಡು ವರ್ಷಕ್ಕೆ ಅವರ ಗಂಡ ಕ್ಷಯ ರೋಗದಿಂದ ತೀರಿಹೋಗಿದ್ದರು. ಒಟ್ಟಿನಲ್ಲಿ ಅವರಿಗೆ ಆರೇಳು ವರ್ಷ ವಯಸ್ಸಾಗಿದ್ದಾಗಲೇ ಅವರಿಗೆ ವಿಧವೆಯ ಪಟ್ಟ ಬಂದಿತ್ತು.

ಮೊದಲ ಬಾರಿಗೆ ಗಾಂಧಿಯನ್ನು ನೋಡಿದ ದೃಶ್ಯವನ್ನು ಅವರು ಹೃದಯಂಗಮವಾಗಿ ವಿವರಿಸುತ್ತಾರೆ. ಅವರಿನ್ನು ಆಗ ಐದನೆಯ ತರಗತಿಯಲ್ಲಿ ಓದುತ್ತಿದ್ದರು. ಶಾಲೆಯಿಂದ ಮನೆಗೆ ಹೊರಟ್ಟಿದ್ದಂತೆ, ಗಾಂಧಿ ಅವರ ಊರಿಗೆ ಬಂದಿದ್ದರಿಂದ ಒಂದು ಸಾರ್ವಜನಿಕ ಸಭೆ ಏರ್ಪಾಡಾಗಿತ್ತು. ಗಾಂಧಿಯನ್ನು ಸ್ವಾಗತಿಸಲೋಸ್ಕರ ಮಹಿಳೆಯರು ಸಾಲುಗಟ್ಟಿ ನಿಂತಿದ್ದರು. ಅವರೆಲ್ಲಾ ತಮ್ಮ ಮೈಮೇಲಿದ್ದ ಆಭರಣಗಳನ್ನು ಗಾಂಧಿಗೆ ಬಿಚ್ಚಿಕೊಡುತ್ತಿದ್ದರು. ಅದನ್ನು ನೋಡಿದ ಕೋಟೇಶ್ವರಮ್ಮ ತಕ್ಷಣವೇ ಉದ್ವೇಗದಿಂದ ಅವರ ಮೈಮೇಲಿದ್ದ ಸುಲಭವಾಗಿ ಕಳಚಬಹುದಾಗಿದ್ದ ಆಭರಣಗಳನ್ನು ತೆರೆದು ಗಾಂಧಿಗೆ ಕೊಟ್ಟುಬಿಟ್ಟರು. ಹೀಗೆ ಚಿಕ್ಕ ವಯಸ್ಸಿನಲ್ಲಿಯೇ ಗಾಂಧೀಜಿಯವರಿಂದ ಆಶೀರ್ವಾದ ಪಡೆದ ಈಕೆ ನಂತರ ದೊಡ್ಡ ಹೋರಾಟಗಾರ್ತಿಯೇ ಬೆಳೆಯುತ್ತಾರೆ. ಮಹಿಳಾ ಚಳುವಳಿಗಾರರು ಊರಿಗೆ ಬಂದಾಗ ಅವರೊಂದಿಗೆ ಅಸ್ಪೃಶ್ಯತೆಯನ್ನು ವಿರೋಧಿಸುತ್ತಾ, ಹೆಂಡವನ್ನು ವಿರೋಧಿಸುತ್ತಾ, ಖದ್ದರು ಪ್ರಚಾರ, ವಿದೇಶಿ ವಸ್ತು ಬಹಿಷ್ಕಾರದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಾಡುಗಳನ್ನು ಹಾಡುತ್ತಿದ್ದರು. ಅವರ ಮಧುರ ಕಂಠದಿಂದ ದೇಶಭಕ್ತಿಯ ಹಾಡುಗಳನ್ನು ಸಭೆಗಳಲ್ಲಿ ಹಾಡುತ್ತಿದ್ದರು.

ಬುದ್ದಿ ಬರುವುದಕ್ಕಿಂತ ಮುಂಚೆಯೇ ವಿಧವೆಯಾಗಿದ್ದ ಕೋಟೇಶ್ವರಮ್ಮ ಕಮ್ಯುನಿಸ್ಟ್ ಕಾರ್ಯಕರ್ತರಾಗಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರನ್ನು ಮದುವೆಯಾದದ್ದು ಕ್ರಾಂತಿಕಾರಿಗಳಲ್ಲಿ ಉತ್ಸಾಹವನ್ನು, ನೆಂಟರಲ್ಲಿ ದ್ವೇಷವನ್ನು ಒಟ್ಟಿಗೆ ಹುಟ್ಟಿಸಿತು. ಮದುವೆಯ ನಂತರ ಆಕೆಯೂ ಕಮುನಿಸ್ಟ್ ಪಕ್ಷ ಸೇರಿ, ಎರಡು ಬಾರಿ ಪಕ್ಷ ನಿಷೇಧಿಸಲ್ಪಟ್ಟಾಗ ಭೂಗತಳಾಗಿ ಪಡಬಾರದ ಪಾಡು ಪಟ್ಟ ಕೋಟೇಶ್ವರಮ್ಮನ ರೋಮಾಂಚಕಾರಿ ಜೀವನಗಾಥೆ ಇಲ್ಲಿ ಬಿಚ್ಚಿಕೊಳ್ಳುತ್ತೆ. ತೆಲಂಗಾಣ ಹೋರಾಟದ ಕಥೆಯನ್ನು ಕುರಿತು ಈಗಾಗಲೇ ಹಲವಾರು ಪುಸ್ತಕಗಳನ್ನು ಕಮ್ಯುನಿಸ್ಟ್ ನಾಯಕರು ರಚಿಸಿದ್ದಾರೆ. ಆದರೆ ಹೆಣ್ಣಿನ ನೆಲೆಯಿಂದ ರಚಿತವಾದ ಈ ಪುಸ್ತಕದ ವಿಶೇಷವೇನೆಂದರೆ, ಕಮ್ಯುನಿಸ್ಟ್ ಚಳುವಳಿಯ ಅಧ್ಯಯನಕ್ಕೆ ಇಲ್ಲಿ ಲಿಂಗಾಧಾರಿತ ದೃಷ್ಟಿಕೋನವೊಂದು ದಕ್ಕಿದೆ.

ರಾಜ್ಯ ಕಮ್ಯೂನಿಸ್ಟ್ ನಾಯಕರಿಂದ ಮೊದಲಗೊಂಡು ತಾಲ್ಲೂಕು ಮಟ್ಟದ ನಾಯಕರವರೆಗೆ ಎಲ್ಲರೂ ಭೂಗತ ಜೀವನಕ್ಕೆ ನಡೆದರು. ಆಗ ರಹಸ್ಯ ಕಾರ್ಯಾಚರಣೆ ನಡೆಸಲು ನಾಯಕರ ಪತ್ನಿಯರನ್ನು, ಕೆಲವು ಮಹಿಳಾ ಕುಟುಂಬ ಸದಸ್ಯರನ್ನು ಪಕ್ಷವು ಹೋರಾಟಕ್ಕೆ ಇಳಿಸಿತು. ಇಂತಹ ಹೋರಾಟಗಳಲ್ಲಿ ಕೋಟೇಶ್ವರಮ್ಮ ಧೈರ್ಯವಾಗಿ ಮುನ್ನುಗ್ಗಿ ನಡೆದುದಲ್ಲದೆ, ಅವರ ತಾಯಿಯು ಈ ಹೋರಾಟದಲ್ಲಿ ಧುಮುಕಿದರು. ಅವರು ಅಡಗುತಾಣಗಳು, ಸರಿಯಾಗಿ ಊಟ, ನಿದ್ರೆಯಿಲ್ಲದೆ, ಸಣ್ಣ ಮಕ್ಕಳನ್ನು ದೂರವಿಟ್ಟ ಈ ಮಹಾತಾಯಿಯರು ಅನುಭವಿಸಿದ ಸಂಕಟ, ನೋವು- ಎಲ್ಲವೂ ಈ ಆತ್ಮ ಕಥಾನಕದಲ್ಲಿ ಸವಿಸ್ತಾರವಾಗಿ ಚಿತ್ರಿತವಾಗಿದೆ. ಭೂಗತರಾಗಿದ್ದಾಗ, ತಮ್ಮ ಇರವು ಪೊಲೀಸರಿಗೆ  ತಿಳಿಯಬಾರದೆಂದು ಬಸಿರಾದ ಮಹಿಳೆಯರು ತಮ್ಮ ಬಸಿರು ಇಳಿಸಿಕೊಳ್ಳುತ್ತಿದ್ದುದು, ಯಾವುದೋ ಗಂಡಸರಿಗೆ ರಕ್ಷಣೆಗಾಗಿ ಅವರ ಗಂಡಂದಿರಂತೆ, ಮಗಳಂತೆ, ತಾಯಿಯಂತೆ ಪಾತ್ರವಹಿಸಿ ಪ್ರಯಾಣ ಮಾಡುತ್ತಿದ್ದುದು, ಇವೆಲ್ಲಾ ಅಂದಿನ ಕ್ರಾಂತಿಕಾರಿ ಹೆಣ್ಣುಮಕ್ಕಳು ತೆಗೆದುಕೊಳ್ಳುತ್ತಿದ್ದ ರಿಸ್ಕ್‍ಗಳಾಗಿದ್ದವು.

ಪಕ್ಷದ ಮಹಿಳಾ ಸಂಘಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಕೋಟೇಶ್ವರಮ್ಮ ರಾತ್ರಿ ಶಾಲೆಗಳನ್ನು ತೆರೆದು ಶಿಕ್ಷಣ ನೀಡುವುದರೊಂದಿಗೆ ಅಂತರ್ಜಾತೀಯ ವಿವಾಹ, ವಿಧವಾ ವಿವಾಹಗಳನ್ನು ನಡೆಸುವಲ್ಲಿ ಮುಂದಾದರು. ಗುಂಟೂರು ಜಿಲ್ಲೆಯಲ್ಲಿ ಅವರು ರಾಜ್ಯಮಟ್ಟದ ಸಮಾವೇಶವನ್ನು ಏರ್ಪಡಿಸಿದಾಗ ಅದರಲ್ಲಿ ಹಜರಾ ಬೇಗಂರಂತಹ ಹಿರಿಯ ನಾಯಕಿಯರು ಭಾಗವಹಿಸಿದ್ದರು. ಪಕ್ಷ ಪ್ರಕಟಿಸುತ್ತಿದ್ದ “ಆಂಧ್ರ ಮಹಿಳಾ” ಪತ್ರಿಕೆಗೂ ಕೆಲಸ ಮಾಡಿದರು.

ಕೋಟೇಶ್ವರಮ್ಮನ ಹೋರಾಟದ ಬದುಕಿನ ಜೊತೆಗೆ ಅವರ ಕಲಾವಿದೆಯ ವ್ಯಕ್ತಿತ್ವವೂ ಈ ಪುಸ್ತಕದಲ್ಲಿ ಚಿತ್ರಿತವಾಗಿದೆ. ಸಾರ್ವಜನಿಕ ಸಭೆಗಳಲ್ಲಿ ಹಾಡುವುದರ ಮೂಲಕ ರಾಜಕೀಯ ರಂಗ ಪ್ರವೇಶಿಸಿದ ಈಕೆ, ಸಾಹಿತ್ಯ, ಸಾಂಸ್ಕೃತಿಕ ರಂಗದಲ್ಲೂ ತಮ್ಮ ಕ್ರಿಯಾಶೀಲತೆಯನ್ನು ತೋರಿದರು. 1943ರಲ್ಲಿ ಅಭ್ಯುದಯ ರಚಯಿತಲು ಸಂಘಂ( ಪ್ರಗತಿಶೀಲ ಲೇಖಕರ ಸಂಘ) ಹುಟ್ಟಿ ಕಾರ್ಯನಿರ್ವಹಿಸತೊಡಗಿದಾಗ ಮೊದಲಿಗೆ ಗುರುಜಾಡರ ಗೌರವಾರ್ಥ “ಕನ್ಯಾಶುಲ್ಕ” ನಾಟಕದಲ್ಲಿ ಅಭಿನಯಿಸಿದರು. ಅನಂತರ “ಪ್ರಜಾನಾಟ್ಯ ಮಂಡಲಿ” ಹುಟ್ಟಿಕೊಂಡಾಗ ಅದು ಪ್ರದರ್ಶಿಸಿದ ‘ಮುಂದಡಗು’, ‘ಮಾಭೂಮಿ’, ನಾಟಕಗಳಲ್ಲೂ ಕೋಟೇಶ್ವರಮ್ಮ ಅಭಿನಯಿಸಿದರು. ಬರಗಾಲದ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತಹ ‘ಇದೇ ಲೋಕ’ ನಾಟಕದಲ್ಲಿನ ಕೋಟೇಶ್ವರಮ್ಮನ ಅಭಿನಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಯಿತಲ್ಲದೆ, ಸೋವಿಯೆತ್ ದೇಶದ ಪ್ರತಿನಿಧಿಗಳು ಅವರಿಗೆ ಬಹುಮಾನ ಕೊಟ್ಟು ಸನ್ಮಾನಿಸಿದರು.

ಹೋರಾಟದ ಅಜ್ಞಾತವಾಸವೆಲ್ಲಾ ಮುಗಿದ ಮೇಲೆ ಪಕ್ಷ ಬಹಿರಂಗವಾಗಿ ಚಟುವಟಿಕೆ ಆರಂಭಿಸಿದಾಗ ಕೋಟೇಶ್ವರಮ್ಮ ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಂಡರು. 1952ರ ಚುನಾವಣೆಯಲ್ಲಿ ನಡೆದ ಬಿರುಸಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ಇತರ ಮಹಿಳಾ ನಾಯಕರೊಂದಿಗೆ ಕೋಟೇಶ್ವರಮ್ಮ ಕೂಡ ಭಾಗಿಯಾದರು. ಒಮ್ಮೆ ಕಾಮ್ರೇಡ್ ಪಾರ್ವತಿ ಕೃಷ್ಣನ್ ಅವರ ಜೊತೆಗೂಡಿ ಚುನಾವಣಾ ಪ್ರಚಾರ ಕೈಗೊಂಡರು. 1952ರ ಚುನಾವಣೆಯ ವೇದಿಕೆಗಳಲ್ಲಿ ಮೃತವೀರರ ತ್ಯಾಗವನ್ನು ನೆನಪಿಸುವಂತೆಯೇ ಮಹಿಳೆಯರು ಹಾಡುಗಳನ್ನು ಹಾಡುತ್ತಿದ್ದರು. ಈ ಸಂದರ್ಭದಲ್ಲಿ ಹಾಡಲೆಂದೇ ಕೋಟೇಶ್ವರಮ್ಮ ಹಲವಾರು ಗೀತೆಗಳನ್ನು ರಚಿಸಿದರು. ಅವರು ಬರೆದ “ತೆಲಗು ದೇಶವಮ್ಮ ನಮ್ಮದು” ಕವನ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಲ್ಲದೆ, ಅದು ಹೋರಾಟದ ಜನರ ಬಾಯಲ್ಲಿ ಸದಾ ಗುಣುಗುಣಿಸತೊಡಗಿತು.

ಭೂಗತ ಹೋರಾಟದಲ್ಲಿದ್ದಾಗ ಮೃತನಾದ ವೀರಯೋಧನ ಪತ್ನಿಯೊಂದಿಗೆ ಸಂಬಂಧ ಬೆಳೆದು ಪತ್ನಿ ಕೋಟೇಶ್ವರಮ್ಮನಿಂದ ದೂರ ಸರಿದ ಸೀತಾರಾಮಯ್ಯ ಹೋಗುವಾಗ ಮಕ್ಕಳನ್ನು ತನ್ನೊಡನೆ ಕರೆದುಕೊಂಡು ಹೋಗಿ ಪತ್ನಿಯನ್ನು ತಬ್ಬಲಿ ಮಾಡಿದರು. ಆ ಸಂದರ್ಭದಲ್ಲಿ ಎಷ್ಟೇ ದುಃಖ ತುಂಬಿದ್ದರೂ ಜೀವನ ನಿರ್ವಹಣೆಗೆ, ಬದುಕಿಗೊಂದು ಅರ್ಥ ಕಂಡುಕೊಳ್ಳಲು ಬಿಟ್ಟು ಹೋಗಿದ್ದ ಶಿಕ್ಷಣವನ್ನು ಮುಂದುವರೆಸಲು, ದುರ್ಗಾಬಾಯಿ ದೇಶಮುಖ್ ಕಟ್ಟಿದ ಆಂಧ್ರ ಮಹಿಳಾ ಸಭಾದ ಹಾಸ್ಟೆಲ್‍ನಲ್ಲಿದ್ದು ಓದಿ ಮೆಟ್ರಿಕ್‍ನಲ್ಲಿ ತೇರ್ಗಡೆ ಹೊಂದಿದರು. ನಂತರ ಕಾಕಿನಾಡ ಪಾಲಿಟೆಕ್ನಿಕ್ ಹಾಸ್ಟೆಲ್‍ನಲ್ಲಿ ಮೇಟ್ರನ್ ಆಗಿ ಕೆಲಸ ಮಾಡಿ ತಮ್ಮ ಜೀವನ ನಿರ್ವಹಣೆ ಮಾಡಿಕೊಂಡರು. ದುಃಖ ಮರೆಯಲು ಸಾಹಿತ್ಯ ರಚನೆಯೂ ನಡೆದಿತ್ತು. ಅವರ ಮಕ್ಕಳು ಚಂದು ಮತ್ತು ಕರುಣ ಕೂಡ ಕ್ರಾಂತಿಕಾರಿ ಹೋರಾಟದ ಚೈತನ್ಯವನ್ನು ತಮ್ಮಲ್ಲಿ ಬೆಳೆಸಿಕೊಂಡು ತಾಯಿಯ ಕಣ್ಣ ಮುಂದೆಯೇ ತೀರಿಹೋದದ್ದು ಅವರಿಗೆ ಜೀವನದಲ್ಲಿ ಭಾರಿ ಪೆಟ್ಟನ್ನು ಒದಗಿಸಿತು. ಮಕ್ಕಳ ಸಾವಿನ ನಂತರ, ಮೇಟ್ರನ್ ಹುದ್ದೆಯಿಂದ ನಿವೃತ್ತರಾದ ಮೇಲೆ ಹತ್ತು ವರ್ಷಗಳ ಕಾಲ ಹೈದರಾಬಾದ್‍ನಲ್ಲಿ ರಾಜೇಶ್ವರರಾವ್ ಅವರ ಹೆಸರಿನ ವೃದ್ಧಾಶ್ರಮದಲ್ಲಿ ಕಾಲ ಕಳೆದರು.

ಕಮ್ಯೂನಿಸ್ಟ್ ಚಳುವಳಿಗಾಗಿ ತಮ್ಮ ಸಕಲವನ್ನು ಧಾರೆಯೆರೆದ ಕೋಟೇಶ್ವರಮ್ಮ ಪಕ್ಷ ಇಬ್ಭಾಗವಾದಾಗ ಬಹಳ ನೊಂದುಕೊಂಡರು. “ನನ್ನ ದೃಷ್ಟಿಯಲ್ಲಿ ಪಾರ್ಟಿಯೆಂದರೆ ಒಂದೇ ಕಮ್ಯೂನಿಸ್ಟ್ ಪಾರ್ಟಿ. ಸಿ.ಪಿ.ಐ, ಸಿ.ಪಿ.ಎಂ ಎಂದು ಇಬ್ಭಾಗವಾದರೂ ನಾನು ಕಾಕಿನಾಡಾದಿಂದ ಎರಡು ಪಕ್ಷಗಳಿಗೂ ತಲಾ ಹತ್ತು ರೂಪಾಯಿ ಸದಸ್ಯತ್ವ ಶುಲ್ಕವನ್ನು ಕಳಿಸುತ್ತಿದ್ದೆ. ನಂತರ ಸುಂದರಯ್ಯನವರೇ ಕಳುಹಿಸಬೇಡವೆಂದರು. ನೀನು ಪಕ್ಷದವಳಾಗಿ ನಾಲ್ಕು ಜನಕ್ಕೆ ಉಪಯುಕ್ತಳಾದರೆ ಸಾಕೆಂದರು. ನನ್ನ ಬಳಿಗೆ ಇತ್ತಂಡದವರೂ ಬರುತ್ತಿದ್ದರು. ಆದರೆ ಒಂದು ಪಕ್ಷದವರ ಮನೆಗೆ ಹೋದರೆ, ಇನ್ನೊಂದು ಪಕ್ಷದವರಿಗೆ ಕೋಪ ಬರುತ್ತಿದ್ದ ಅದೆಷ್ಟೋ ಸಂದರ್ಭಗಳನ್ನು ಕಂಡೆ. ಆ ಧೋರಣೆ ನನಗಿಷ್ಟವಾಗುತ್ತಿರಲಿಲ್ಲ. ಹೀಗೆ ಮತ್ತೆ ಮತ್ತೆ ಒಡೆಯುತ್ತ ಹೆಚ್ಚೆಚ್ಚು ಪಕ್ಷಗಳಾದರೆ ನಮ್ಮ ಆಶಯಗಳೆಂದೂ ಈಡೇರವು ಅನಿಸುತ್ತಿತ್ತು.” ಹೀಗೆ ಇಂದಿಗೂ ಕೂಡ ಕಮ್ಯುನಿಸ್ಟ್ ಪಕ್ಷಗಳು ಒಂದಾಗುವ ಕನಸನ್ನು ಕಾಣುತ್ತಿದ್ದಾರೆ ಆಕೆ.
“ದೇಶಕ್ಕಾಗಿ, ಕ್ರಾಂತಿಗಾಗಿ ಎರಡೂ ಬದಿಯಲ್ಲಿ ಕರಗಿದ ಮೇಣದ ಬತ್ತಿ ಕೋಟೇಶ್ವರಮ್ಮ” ಎಂದು ಕೋಟೇಶ್ವರಮ್ಮನ ಬದುಕನ್ನು ಕುರಿತಂತೆ ಪಕ್ಷದ ಸಂಗಾತಿಗಳು ಅವರನ್ನು ಕುರಿತು ಪ್ರಶಂಸಿಸಿದ್ದಾರೆ. “ಭೂತ ಭವಿಷ್ಯತ್ತುಗಳಿಗೆ ಆಧಾರವಾಗಿ ನಿಂತು ಅತ್ತ ತಾಯ್ತನಕ್ಕೆ, ಇತ್ತ ಭಾವೀ ಪೀಳಿಗೆಗೆ ಜೀವನವನ್ನು ಸೇತುವೆಯನ್ನಾಗಿ ಮಾಡಿದವರು. ಅದರ ಮೇಲಿಂದ ಅತ್ತಲೊಬ್ಬ, ಇತ್ತಲೊಬ್ಬ ಹೊರಟುಹೋದಾಗ ಒಂಟಿ ಸೇತುವೆಯಾಗಿ ಉಳಿದುಬಿಟ್ಟಳು” ಎಂದು ಅವರನ್ನು ಕುರಿತು ಕವಿ ಸೋಮಸುಂದರ್‍ರವರ ಆಡಿದ ಮಾತುಗಳನ್ನಾಧರಿಸಿ ಕೋಟೇಶ್ವರಮ್ಮ ತಮ್ಮ ಆತ್ಮಕಥೆಗೆ ಒಂಟಿಸೇತುವೆ ಎಂದೇ ನಾಮಕರಣ ಮಾಡಿಕೊಂಡಿದ್ದಾರೆ.

ಸ. ರಘುನಾಥ ಅವರು ಕನ್ನಡಕ್ಕೆ ಅನುವಾದಿಸಿರುವ ಈ ಪುಸ್ತಕವನ್ನು ಓದಿ ರೋಮಾಂಚನಗೊಂಡು ಅವರನ್ನು ಭೇಟಿಯಾಗಬೇಕೆಂದು ಕಳೆದ ಸೆಪ್ಟೆಂಬರ್ 8ರಂದು ವಿಶಾಖಪಟ್ಟಣದ ಅವರ ಮನೆಗೆ ಹೋಗಿದ್ದೆ. ಅವರ ಮನೆಯೊಳಗೆ ಕಾಲಿಡುತ್ತಿದ್ದಂತೆ ಅಲ್ಲಿಯೇ ಹಾಸಿಗೆಯ ಮೇಲೆ ಒರಗಿಕೊಂಡು ನ್ಯೂಸ್ ಪೇಪರ್ ಓದುತ್ತಿದ್ದ ತೊಂಭತ್ತೇಳರ ಅಜ್ಜಿ ದಢಕ್ಕನೆ ಎದ್ದು ಕೂತು ನಮ್ಮನ್ನು ಸ್ವಾಗತಿಸಲು ಸಿದ್ಧರಾದರು. ಆತ್ಮೀಯವಾಗಿ ನಮ್ಮನ್ನು ಸ್ವಾಗತಿಸಿದೊಡನೆ ಕೇಳಿದ ಮೊದಲ ಪ್ರಶ್ನೆ, “ನಿಮಗೆ ಗೌರಿ ಲಂಕೇಶ್ ಗೊತ್ತಾ?” ಹೌದೆಂದು, ಪಕ್ಕದಲ್ಲಿ ನಿಂತಿದ್ದ ಜಿ.ಆರ್. ಅವರನ್ನು ತೋರಿಸಿ, “ಗೌರಿ, ಇವರ ಶಿಷ್ಯೆ” ಎಂದು ಪರಿಚಯಿಸಿದ್ದೇ, ಸ್ವಲ್ಪ ಕಾಲ ನಾವು ಆಡಿದ ಮಾತೆಲ್ಲಾ ‘ಗೌರಿ ಹತ್ಯಾ ಪ್ರಕರಣ’ವನ್ನು ಕುರಿತಾಗಿತ್ತು. ದಿನಕ್ಕೆ ಆರು ಪತ್ರಿಕೆಗಳನ್ನು ಕೂಲಂಕುಷವಾಗಿ ಓದುವ ಈ ಅಜ್ಜಿಯ ಜೀವನೋತ್ಸಾಹ ಕಂಡು ನಿಬ್ಬೆರಗಾದೆ.

ಕೋಟೇಶವರಮ್ಮನವರ ಮನೆಯಲ್ಲಿದ್ದು ಅವರೊಡನೆ ಮಾತನಾಡಿ ನಮ್ಮ ಊರಿಗೆ ಹಿಂತಿರುಗುವಾಗ ಮನಸ್ಸು ತುಂಬಿ ಬಂತು. ಎರಡು ದಿನಗಳ ಕಾಲ ನಾವು ಒಡನಾಡಿದ್ದು ಬರೀ ಒಂದು ವ್ಯಕ್ತಿಯ ಜೊತೆಯಲ್ಲ, ನಮ್ಮ ದೇಶದ ಕಮ್ಯೂನಿಸ್ಟ್ ಚಳುವಳಿಯ ಸ್ಮೃತಿ ಸಂಚಯವನ್ನು ತನ್ನಲ್ಲಿ ಹೊತ್ತ ಜ್ಞಾನ ಭಂಡಾರದ ಜೊತೆಗೆ ಎಂದೆನಿಸಿತು. ಅವರನ್ನು ಕಂಡಾಗ ಕಣ್ಣೆದುರಿಗೇ ಮಕ್ಕಳು, ಗಂಡ ಎಲ್ಲರನ್ನೂ ಕಳೆದುಕೊಂಡರೂ ನಿರಾಶೆಯ ಕೂಪದಲ್ಲಿ ಮುಳುಗದೆ ಮೇಲೆದ್ದು ಪ್ರಜ್ವಲಿಸುವ ಬೆಳಕೊಂದು ಕಂಡ ಅನುಭವವಾಯಿತು. ಅವರ ಆತ್ಮಕಥೆ ‘ಒಂಟಿ ಸೇತುವೆ’ಯ ಕೊನೆಯ ಸಾಲುಗಳು ಅವರ ಈಗಿನ ಸ್ಥಿತಿಯನ್ನು ಬಿಂಬಿಸುವ ಸಾಲುಗಳೂ ಆಗಿವೆ:
“ಒಂಟಿತನ, ಒಬ್ಬಂಟಿಯೆಂದು ಮುದುಡಿ ಕೂರುವುದಿಲ್ಲ
ಅಮಾನುಷ ಘಟನೆಗಳ ಕಂಡು ಕಣ್ಣೀರ ಗೋದಾವರಿಯಾಗುತ್ತಲಿರುವಳು
ತಾರಕಕ್ಕೇರಿದ ಅಂದಿನ ಹೋರಾಟ ಸಂಸ್ಕೃತಿಯ ನೆನೆದು ಸಾಗರವಾಗುತ್ತಲಿರುವಳು
ಅದರಲ್ಲಿ ಹುಟ್ಟಿದ ಆದರ್ಶದ ಮುತ್ತುಗಳನ್ನು
ನಾಳೆಯ ಹಿತಕ್ಕಾಗಿ ಭದ್ರಪಡಿಸಬೇಕೆಂದು ತಪಿಸುತ್ತಲೇ ಇರುವಳು
ಮುಪ್ಪಡರಿದರೂ  ಆ ಮುತ್ತುಗಳ ಅಕ್ಷರಗಳಲ್ಲಿ ಕೋದು ತೃಪ್ತಳಾಗುವಳು.”

ಎನ್. ಗಾಯತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *