ನಮ್ಮ ಕಥೆ/ ಲಕ್ಷ್ಮಿಬಾಯಿ ತಿಲಕರ ಸ್ಮೃತಿ ಚಿತ್ರಗಳು – ಎನ್. ಗಾಯತ್ರಿ


“ನನ್ನ ಜೀವನದಲ್ಲಿ ನಾನು ಆತ್ಮಹತ್ಯೆಗೆ ಮೊರೆ ಹೋಗುವ ಹಲವಾರು ಸಂದರ್ಭಗಳು ಬಂದಿವೆ. ಆದರೆ ನಾನೆಂದೂ ಹಾಗೆ ಮಾಡಲಿಲ್ಲ…. ಎಂತಹ ನಿರಾಶೆಯ ಕತ್ತಲಿನಲ್ಲಿಯೂ ನಾನು ತಡವರಿಸುತ್ತಾ , ದಾರಿ ಹುಡುಕಲು ಹೋರಾಟವನ್ನೇ ನಡೆಸಿದ್ದೇನೆ. ಈ ಹಾದಿಯಲ್ಲಿ ನಾನೆಂದೂ ಎಡವದೆ, ಬೀಳದೆ, ಜೀವನವನ್ನು ಕಳೆದುಕೊಂಡಿಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ ನಾನೊಂದು ರಬ್ಬರ್ ಬಾಲ್.” ಹೀಗೆ ಜೀವನ ಪ್ರೀತಿಯನ್ನೂ, ಜೀವನ ಸ್ಥೈರ್ಯವನ್ನು ತನ್ನ ಜೀವನದ ಭಾಗವಾಗಿಸಿಕೊಂಡು ಬದುಕಿದ ಹತ್ತೊಂಭತ್ತನೆಯ ಶತಮಾನದ ಮಹಿಳಾಮಣಿಗಳಲ್ಲಿ ಮಹಾರಾಷ್ಟ್ರದ ನಾಸಿಕದ ಕವಯಿತ್ರಿ ಲಕ್ಷ್ಮಿಬಾಯಿ ತಿಲಕ್ ಒಬ್ಬರು. ಅವರು ಮರಾಠಿಯಲ್ಲಿ ಬರೆದುಕೊಂಡಿರುವ ಅವರ ಆತ್ಮ ಚರಿತ್ರೆ ‘ಸ್ಮೃತಿ ಚಿತ್ರೆ’ ಚಾರಿತ್ರಿಕವಾಗಿಯೂ ಸಾಹಿತ್ಯಿಕವಾಗಿಯೂ ಸಾಮಾಜಿಕವಾಗಿಯೂ ಒಂದು ಗಮನಾರ್ಹ ದಾಖಲೆ.

“ಮಹಾತ್ಮ ಗಾಂಧಿಯವರು ತಮ್ಮ ‘ಸತ್ಯಾನ್ವೇಷಣೆಯ ನನ್ನ ಪ್ರಯೋಗಗಳು’ ಕೃತಿಯಲ್ಲಿ ತೋರಿರುವ ನೇರ ಮತ್ತು ನಿರ್ಭಯತೆಯ ಲಕ್ಷಣಗಳ ರೀತಿಯನ್ನು ಈ ಪುಸ್ತಕದಲ್ಲಿಯೂ ಕಾಣಬಹುದು ಎಂದರೆ ಅದು ಅತಿಶಯೋಕ್ತಿಯೇನೂ ಅಲ್ಲ” ಎಂದ ಮರಾಠಿ ನಾಟಕಕಾರ ಮತ್ತು ಕವಿ ಆಚಾರ್ಯ ಪಿ.ಕೆ. ಅತ್ರೆಯವರ ಮಾತುಗಳು ಈ ಪುಸ್ತಕದ ಮಹತ್ವವನ್ನು ಸೂಚಿಸುತ್ತದೆ.

1868ರಲ್ಲಿ ಲಕ್ಷ್ಮಿಬಾಯಿ ತಿಲಕ ಮಹಾರಾಷ್ಟ್ರದ ನಾಸಿಕದ ಹಳ್ಳಿಯೊಂದರ ಕರ್ಮಠ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದರು. ಅವರಿಗೆ ಹದಿನೇಳು ವರ್ಷ ವಯಸ್ಸಾಗಿದ್ದಾಗ ಅವರಿಗಿಂತ ಹಿರಿಯರಾದ ನಾರಾಯಣ ವಾಮನ ತಿಲಕರನ್ನು ಮದುವೆಯಾದರು. ‘ಸ್ಮೃತಿ ಚಿತ್ರೆ’ಯಲ್ಲಿ ಲಕ್ಷ್ಮೀಬಾಯಿಯವರು ತಮ್ಮ ಗಂಡನೊಂದಿಗಿನ ಸಂಕೀರ್ಣ ಸಂಬಂಧವನ್ನು ವಿವರಿಸುತ್ತಾರೆ. ವಾಮನ ತಿಲಕರಿಗೆ ಅರ್ಥಗಳಿಕೆಯ ವಿಷಯದಲ್ಲಿದ್ದ ತೀವ್ರ ನಿರಾಸಕ್ತಿಯ ಸಂಬಂದವಾಗಿ ಸದಾ ಅವರೊಡನೆ ಜಗಳವಾಡುತ್ತಲೇ ಇದ್ದರು ಮತ್ತು ಅದರಿಂದಾಗಿ ಅವರು ಸದಾ ಬರಿಗೈಯಲ್ಲೇ ಉಳಿಯಬೇಕಾಗಿ ಬಂದದ್ದು ಮತ್ತು ಇಂತಹ ಸಂದರ್ಭಗಳಲ್ಲಿ ಉಂಟಾಗುವ ಮಾತುಕತೆಯಿಂದಾಗಿ ಮಾನಸಿಕ ಕ್ಷೋಭೆಯಾಗುತ್ತಿತ್ತು ಮತ್ತು ಕೋಪಗೊಳ್ಳುತ್ತಿದ್ದರು. ಆದರೆ ಈ ಗಂಡ-ಹೆಂಡಿರ ಸಂಬಂಧದ ಕೇಂದ್ರದಲ್ಲಿದ್ದುದು ಪರಸ್ಪರರ ಬಗ್ಗೆ ಶ್ರದ್ಧೆ, ಸಮಾಜದ ಬಗ್ಗೆ ಕಳಕಳಿ ಮತ್ತು ಜಾತಿ, ವರ್ಗ ಮತ್ತು ಲಿಂಗಬೇಧವಿಲ್ಲದೆ ಎಲ್ಲ ಜೀವಚೈತನ್ಯದಲ್ಲಿ ಒಳಿತು ಕಾಣುವ ವಿಶೇಷ ಗುಣ.

“ನಾನಾನ ಮಡಿವಂತಿಕೆಗೆ ನಮ್ಮ ಮನೆಯವರು ಮಾತ್ರವಲ್ಲ, ನಮ್ಮ ಊರಿಗೆ ಊರೇ ಬೇಸತ್ತು ಹೋಗಿತ್ತು. ಅವರಿಗೆ ಬ್ರಾಹ್ಮಣರಿಂದ ಕೂಡ ಮೈಲಿಗೆಯಾಗುತ್ತಿತ್ತೆಂದರೆ ಇನ್ನು ಇತರರ ಪಾಡೇನು? ಮನೆಯ ಹೆಂಗಸರು ಅರಿಷಿಣ-ಕುಂಕುಮಕ್ಕೆ ಹೋದವರು ಮರಳಿ ಮನೆಗೆ ಬರುವಾಗ ಸ್ನಾನ ಮಾಡಿಯೇ ಗೃಹಪ್ರವೇಶ ಮಾಡಬೇಕಾಗುತ್ತಿತ್ತು. ಅಡಿಗೆ ಮನೆಯಲ್ಲೂ ನಾನಾನ ಚುಚ್ಚು-ನೋಟವಿದ್ದದ್ದೇ. ಒದ್ದೆಯನ್ನುಟ್ಟು, ಅದೂ ಬಲಗೈಯಿಂದಲೇ ಅಡಿಗೆ ಮಾಡಬೇಕಾಗುವುದು. ಇನ್ನೊಂದು ಕೈ ಮುರಿದಂತೆ ಬದಿಗೆ ಜೋಲುತ್ತಿರಬೇಕು. ಈ ಕೆಲಸ ಬೀಳುವುದು ಅಮ್ಮನ ಮೇಲೆಯೇ. ನೆರೆಯವರು ಯಾರಾದರೂ ಮನೆಗೆ ಬಂದರೆ – ನಮ್ಮ ನೆರೆಯಹೊರೆಯರೆಲ್ಲ ಬ್ರಾಹ್ಮಣರೇ ಆಗಿದ್ದರೂ- ಅವರು ತಿರುಗಿ ಹೋಗುವಾಗ ಅವ್ವ ಅವರ ಹಿಂದಿನಿಂದ ನೀರು ಸಿಂಪಡಿಸುತ್ತ ಹೋಗಬೇಕು.”

ಇಂತಹ ಕರ್ಮಠ ಬ್ರಾಹ್ಮಣರ ಮಗಳು ಲಕ್ಷ್ಮೀಬಾಯಿ ತಿಲಕ ಮುಂದೆ ಗಂಡನಿಗಾಗಿ ಕ್ರೈಸ್ತಧರ್ಮಕ್ಕೆ ಮತಾಂತರ ಹೊಂದಿ, ವಿದ್ಯಾವಂತಳಾಗಿ ಕವಯಿತ್ರಿಯೆನಿಸಿಕೊಂಡದ್ದು, ಗಂಡನ ಸಾವಿನ ನಂತರ ಮಗಳು ಮತ್ತು ಸೊಸೆಯನ್ನು ಕರೆದುಕೊಂಡು ಉದ್ಯೋಗವರಸಿ ಕರಾಚಿಗೆ ಹೋದ ಸಾಹಸಮಯ ಆತ್ಮವೃತ್ತಾಂತ ಇಲ್ಲಿದೆ.

ಇನ್ನು ಮದುವೆಯಾದ ನಂತರ ಸಿಕ್ಕ ಗಂಡನೋ ಮನೆಯಲ್ಲಿ ಮಗನಿಗೆ ತಿನ್ನಲು ಏನೂ ಇಲ್ಲ, ಉಪವಾಸವೆಂದು ಅಕ್ಕಿ ತರಲು ಗಂಡನ ಕೈಯಲ್ಲಿ ರೂಪಾಯಿ ಕೊಟ್ಟರೆ ಅಕ್ಕಿಯ ಬದಲು ಮನೆಗೆ ಬಂದದ್ದು ಮಸಿಕುಡಿಕೆ. ಅದರಿಂದ ಕೋಪ ಮಾಡಿಕೊಂಡ ಲಕ್ಷ್ಮಿಬಾಯಿಯ ವರ್ತನೆಗೆ ಗಂಡನೂ ಮುನಿಸಿಕೊಂಡು ಅದನ್ನು ಒಡೆದು ಹಾಕುತ್ತಾರೆ. ಅಂತಹ ಬೇಜವಾಬ್ದಾರಿ ಗಂಡ.

ಮಾವನದು ಇನ್ನೂ ಬೇರೆ ರೀತಿಯ ಹುಚ್ಚು. ಸೊಸೆ ಊಟಕ್ಕೆ ಕುಳಿತಳೋ ಇಲ್ಲವೋ ಮರೆತ ಕೆಲಸಗಳನ್ನು ತೋರಿಸಿ ಅವಳನ್ನು ಅರ್ಧ ಊಟಕ್ಕೆ ಎಬ್ಬಿಸುವುದು, ತನಗೆ ಕಾಯಿಲೆಯೆಂದು ಸುಳ್ಳು ಸುಳ್ಳೇ ಹೆಂಡತಿಗೆ ಪತ್ರ ಬರೆದು, ಮಹಾ ಸಾಧ್ವಿಯಾದ ಹೆಂಡತಿ ಕಲ್ಯಾಣದಿಂದ ಮಾಖೋಡೆಗೆ ನಡೆಯುತ್ತಾ ಬಂದರೆ ಅವಳನ್ನು ಸ್ವಾಗತಿಸುವ ಬದಲು ಅವಳ ಸೊಂಟಕ್ಕೆ ಜೋರಿನಿಂದ ಹೊಡೆಯುವುದು ಮಾಡುತ್ತಾನೆ. ಒಮ್ಮೆ ಅವಳು ಹೊರಗಿನಿಂದ ಹೊತ್ತು ತಂದ ತಲೆಯ ಮೇಲಿದ್ದ ಹಂಡೆಯನ್ನು ಸ್ವಲ್ಪ ಇಳಿಸಬಾರದೆ, ಎಂದು ಕೇಳಿದಾಗ, “ನಾನೇನು ನಿಮ್ಮ ಆಳಲ್ಲ” ಎಂದು ಹೇಳಿ ಹೆಂಡತಿಯ ಕತ್ತು ಹಿಡಿದು ಅವರ ಬೆನ್ನಿಗೆ ಬಲವಾಗಿ ಗುದ್ದುತ್ತಾರೆ. ಅದೂ ಇಬ್ಬರು ಗಂಡು ಮಕ್ಕಳ ಎದುರಿನಲ್ಲಿ. ಬಿದ್ದ ಏಟಿಗೆ ತತ್ತರಿಸುತ್ತಾ ನೋವಿನಿಂದ ‘ರಾಮ, ರಾಮ’ ಎನ್ನುತ್ತಾ ನೆಲಕ್ಕೆ ಬಿದ್ದ ಅವರ ಹೆಂಡತಿ ಹಾಸಿಗೆ ಹಿಡಿದು ಕೆಲವೇ ದಿನಗಳಲ್ಲಿ ಸಾಯುತ್ತಾರೆ.

ಅವಳು ಬದುಕಿನಲ್ಲಿ ಮುಖಾಮುಖಿಯಾಗುವ ಪುರುಷರೆಲ್ಲಾ ಈ ರೀತಿ ಒಬ್ಬರಿಗಿಂತ ಒಬ್ಬರು ವಿಕೃತ ಸ್ವಭಾವದ ಅತಿರೇಕಗಳು. ಲಕ್ಷ್ಮಿಬಾಯಿಯವರು ಜನ್ಮದಾರಭ್ಯ ಇಂಥ ವಿಚಿತ್ರ ಸ್ವಭಾವದ ಜನರೊಡನೆ ಬೆಳೆದರು. ಎಲ್ಲದಕ್ಕಿಂತ ಹೆಚ್ಚಾಗಿ ಪಿತೃಶಾಹಿಯ ಗುಣಗಳೇ ಮೈವೆತ್ತವರು. ಅವಳ ತಂದೆ ಮತ್ತು ಮಾವ ಇಬ್ಬರೂ ಪಿತೃಶಾಹಿಯ ದೌಲತ್ತಿನ ಜೊತೆಗೆ ಬ್ರಾಹ್ಮಣೀಯತೆಯ ಕರ್ಮಠತನವನ್ನು ಮೆರೆದವರು.

ಕ್ರಿಶ್ಚಿಯನ್ ತತ್ವದ ಪ್ರಭಾವ, ಪಾಶ್ಚಾತ್ಯ ಮೌಲ್ಯ ವ್ಯವಸ್ಥೆಯೊಡಗೂಡಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಒತ್ತಾಯದಿಂದ ಬ್ರಿಟಿಷ್ ಭಾರತದಲ್ಲಿ ಎರಡು ರೀತಿಯ ಬದಲಾವಣೆಗಳುಂಟಾದವು. ಒಂದು, ಕೆಲವು ಪ್ರಭಾವಿ ಬ್ರಾಹ್ಮಣರು ವಿದ್ಯಾಭ್ಯಾಸ ಹೊಂದಿ ಕ್ರೈಸ್ತಮತಕ್ಕೆ ಮತಾಂತರಗೊಂಡದ್ದು. ಮತ್ತೊಂದು ಇದಕ್ಕೆ ವಿರುದ್ಧವಾಗಿ ಹಿಂದೂಧರ್ಮವನ್ನು ಬಲಗೊಳಿಸಲು ಹುಟ್ಟಿಕೊಂಡ ಮುಂಬೈಯ ಪರಮಹಂಸ ಮಂಡಲಿ, ಪ್ರಾರ್ಥನಾ ಸಮಾಜ, ಆರ್ಯಸಮಾಜದಂತಹ ಸಂಸ್ಥೆಗಳು. ಆದರೆ ಅಕ್ಷರದ ಹಸಿವಿನಿಂದ ಓದಿ , ಕಲಿತು ಪಂಡಿತನಾಗಿ, ಪಾಶ್ಚಾತ್ಯ ಸಂಸ್ಕೃತಿಗೆ ಆಕರ್ಷಿತನಾಗಿ ಕ್ರೈಸ್ತ ಮತಕ್ಕೆ ಮತಾಂತರ ಹೊಂದಿದ ನಾರಾಯಣ್ ವಾಮನ ತಿಲಕ್ ಅವರ ಪತ್ನಿಯಾದ ಲಕ್ಶ್ಮೀಬಾಯಿಯ ಜೀವನ ಗಾಥೆಯು ಈ ಆತ್ಮಚರಿತ್ರೆಯಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ಈ ಪುಸ್ತಕದಲ್ಲಿ ಅವರು ಗಂಡನ ಧರ್ಮಾಂತರವನ್ನು ಕುರಿತು ಚಿತ್ರಿಸುವ ಭಾಗ ಹೃದಯವಿದ್ರಾವಕವಾದುದು. ಇದರಿಂದಾಗಿ ಅವಳು ಗಂಡನಿಂದ ಐದು ವರ್ಷಗಳ ಕಾಲ ದೂರವಿರಬೇಕಾಗಿ ಬಂತು. ನಂತರ ಅವರ ಪುನರ್ಮಿಲನ ಘಟಿಸಿದಾಗ ನಿದಾನವಾಗಿ ಅವಳಿಗೂ ಹಿಂದೂ ಧರ್ಮದ ಬಗ್ಗೆ ಭ್ರಮ ನಿರಸನವಾಗಿ ಅವಳೂ ಕ್ರಿಸ್ತ ಧರ್ಮಕ್ಕೆ ಮಗನೊಂದಿಗೆ ಮತಾಂತರಗೊಳ್ಳುತ್ತಾಳೆ. 1919ರಲ್ಲಿ ವಾಮನ ತಿಲಕರ ಸಾವಿನ ನಂತರ ಅವಳು ಸ್ವತಂತ್ರಳಾಗಿ ಎದ್ದು ನಿಂತು ಮುಂಬೈಯ ಬಾಲಕಿಯರ ಹಾಸ್ಟೆಲ್‍ನಲ್ಲಿ ಮೇಟ್ರನ್ ಆಗಿ ಕೆಲಸಕ್ಕೆ ಸೇರುತ್ತಾಳೆ. ನಂತರ ಅತ್ಯಂತ ಧೈರ್ಯ ವಹಿಸಿ ಮಗಳು , ಸೊಸೆಯನ್ನು ಮತ್ತು ಅವರ ಪುಟ್ಟ ಮಕ್ಕಳನ್ನೂ ಕರೆದುಕೊಂಡು ಉದ್ಯೋಗವರಸಿ ಕರಾಚಿಗೆ ಹೋಗುತ್ತಾಳೆ.

ಮರಾಠಿ ಸಾಹಿತ್ಯ ಚರಿತ್ರೆಯಲ್ಲಿ ಭದ್ರವಾದ ಸ್ಥಾನ ಗಿಟ್ಟಿಸಿಕೊಂಡ ಈಕೆ ನಿರಕ್ಷರಕುಕ್ಷಿಯಾಗಿದ್ದವಳು. ಬಾಲ್ಯದಲ್ಲಿ ಶಾಲೆಗೆ ಹೋಗಿ ಕಲಿತಿದ್ದಿಲ್ಲ. ಅವರಿಗೆ ಪತಿ ತಿಲಕರೇ ಓದು-ಬರಹ ಕಲಿಸಿದ್ದು. ಆದರೆ ಪುಸ್ತಕ ಪ್ರೀತಿ ಅವರಿಗೆ ಹುಟ್ಟು ಗುಣವಾಗಿತ್ತು. ಕವಿ ಪತಿಯ ಸಹವಾಸ, ವಿಕ್ಷಿಪ್ತ ಕವಿಯೊಡನೆ ದಿನ ಕಳೆಯುವಾಗ ಹೃದಯ ಹುರಿಗೊಂಡು ಅವರ ಕವಿತ್ವ ಶಕ್ತಿ ಜಾಗೃತವಾಯಿತು. ಸ್ವಂತ ದುಃಖವನ್ನು ಮನಸ್ಸಿಗೆ ಹೇಳಿಕೊಳ್ಳುವಾಗ ತಂತಾನೆ ಹೊಂದಿಕೆಯಾಗಿ ಬರುವ ಕವಿತೆಯ ಸಾಲುಗಳನ್ನು ಇದ್ದಿಲು, ಖಡುವಿನ ತುಂಡು, ಇಲ್ಲವಾದರೆ ಮಸಿಕುಡಿಕೆ ಮತ್ತು ಬೆಂಕಿಪೆಟ್ಟಿಗೆಯ ಒಂದು ಕಡ್ಡಿಯ ಸಹಾಯದಿಂದ ಗೋಡೆಯ ಮೇಲೆ ಮತ್ತು ನೆಲದ ಮೇಲೆ ಬರೆಯತೊಡಗಿದರು. ದಿನನಿತ್ಯ ಬದಲಿಸುವ ಅವರ ಗುಳೇಕಾರ ಜೀವನದಲ್ಲಿ ಅವರು ಎಷ್ಟು ಓದಿದರೆಂಬುದು ತಿಳಿದುಬರುವುದಿಲ್ಲ. ಮನೆಯ ಕೆಲಸದ ಹೊರೆ ಮತ್ತು ದಾರಿದ್ರ್ಯದಲ್ಲಿ ಅವರು ಬರೆದದ್ದು ಕಡಿಮೆಯೇ ಇರಬೇಕು. ಆದರೆ ಅವರು ಕ್ರೈಸ್ತಮತಕ್ಕೆ ಧರ್ಮಾಂತರಗೊಂಡ ಮೇಲೆ ಬರವಣಿಗೆಗೆ ಸ್ವಲ್ಪ ಆರಾಮ ಸಿಕ್ಕಿರಬೇಕು. ಅವರು ಸ್ವಂತದ ಬರವಣಿಗೆ ಬಗ್ಗೆ ಒಂದೆಡೆ ಹೀಗೆ ಹೇಳಿಕೊಳ್ಳುತ್ತಾರೆ:
ಆರು ಶಾಸ್ತ್ರಗಳ ಹೆಸರನು ಅರಿತಿಲ್ಲ|
ಆದರೂ ಈ ಜಗದಿ ಶಾಸ್ತ್ರಜ್ಞಳಾನು||
ಶಾಸ್ತ್ರ ವಿಚಾರಗಳನ್ನು ಅವರು ಅರಿತಿಲ್ಲದಿರಬಹುದು. ಆದರೆ ಅವರಿಗೆ ಕಥೆ ಹೇಳುವ ಕಲೆ ಸಿದ್ಧಿಸಿದೆಯೆಂಬುದನ್ನು ಖಂಡಿತ ಗುರುತಿಸಬಹುದು. ಅವರ ಕಥನ ಶೈಲಿಯ ಭಾಷೆಗೊಂದು ನಿದರ್ಶನ.
“ಉಪಕರಣ ತಿಕ್ಕಿಲ್ಲವೆಂದು ಮಾವ ಸಿಟ್ಟಿಗೆದ್ದಿದ್ದಾರೆ, ನಾನಾದರೂ ಏನು ಮಾಡಲಿ? ಉಪಕರಣಗಳು ತಾಮ್ರದವು, ನೀರು ಬಾವಿಯದು – ದಿನಗಳೋ ಮಳೆಗಾಲ!”

ಸಾಹೇಬರು ಊರಿಗೆ ಬಂದರೆಂದು ಕೇಳಿ ಗಾಬರಿಸಿದ ಅವರ ತವರೂರಿನ ಸ್ತ್ರೀಯರು ರಸ್ತೆಯಲ್ಲಿ ಗೊಂದಲಗೆಟ್ಟು ನಡೆದರೆಂಬುದನ್ನು ಅವರು ಬಹು ಸುಂದರವಾಗಿ ವರ್ಣಿಸುತ್ತಾರೆ.

ಧರ್ಮಾಂತರ: ತಿಲಕರು ಕ್ರಿಸ್ತೀಯರಾದಂದಿನಿಂದ ಸ್ವತಃ ಲಕ್ಷ್ಮೀಬಾಯಿ ಕ್ರಿಸ್ತೀಯರಾಗುವವರೆಗಿನ ಕಥಾಭಾಗ ಬಹಳ ಹೃದಯ ವಿದ್ರಾವಕವಾಗಿದೆ. ರೆವರೆಂಡ್ ತಿಲಕರು ಯಾರಿಗೂ ತಿಳಿಸದೆ ಕ್ರಿಸ್ತೀಯರಾದರು. ಆ ದಿನಗಳಲ್ಲಿ ಧರ್ಮಾಂತರವೆಂದರೆ ಜನಕ್ಕೆ ಮೃತ್ಯುವಿಗಿಂತ ಭಯಂಕರವೆನಿಸಿತ್ತು. ಆಪ್ತೇಷ್ಟರಿಗೆ ಆಘಾತವಾಯಿತು. ಲಕ್ಷ್ಮೀಬಾಯಿಯವರಿಗೆ ತತ್‍ಕ್ಷಣ ಮಾನಸಿಕ ಪರಿಣಾಮವಾಗಿ ಭ್ರಮಿಷ್ಟರಾದರು. ತಿಲಕರು ತಮ್ಮಷ್ಟಕ್ಕೆ ತಾವು ಸುಮ್ಮನೆ ಕೂಡುತ್ತಿರಲೂ ಇಲ್ಲ. ತನ್ನ ಹೆಂಡತಿಯನ್ನು ಮತ್ತು ಮಗನನ್ನು ತನ್ನೆಡೆಗೆ ಕಳುಹಿಸಿ ಎಂದು ಕೇಳುತ್ತಾ ಕಾಡುತ್ತಿದ್ದರು. ಸ್ವಧರ್ಮವನ್ನು ಬಿಟ್ಟ ತಿಲಕರೆಡೆಗೆ ಅವರ ಹೆಂಡತಿ ಮತ್ತು ಮಗನನ್ನು ಕಳುಹಿಸಿಕೊಡುವುದಕ್ಕೆ ಅವರ ಆಪ್ತೇಷ್ಟರು ಸಿದ್ಧರಿರಲಿಲ್ಲ. ಲಕ್ಷ್ಮೀಬಾಯಿಯವರಿಗೆ ಧರ್ಮಾಂತರವಾಗುವುದುದಕ್ಕೆ ಮನಸ್ಸಿರಲಿಲ್ಲ.

ಆದರೆ ಧರ್ಮ ಬಿಟ್ಟ ಗಂಡನ ಸ್ಥಿತಿಯಾಗಿ ಅವರ ಸಾಮಾಜಿಕ ಸ್ಥಿತಿ ಶೋಚನೀಯವಾಗಿತ್ತು. ಗಂಡ ಹಿಂದಕ್ಕೆ ಬರಬಹುದೇನೋ ಎಂದು ಕಾದರು. ಆದರೆ ಅದು ಸಾಧ್ಯವಿಲ್ಲ ಎನ್ನುವುದು ಅವರಿಗೆ ಮನವರಿಕೆಯಾದಾಗ, ತಮ್ಮ ಮಗನೊಡನೆ ತಮ್ಮ ಆಯುಷ್ಯ ಕಳೆಯಬೇಕೆಂದು ನಿರ್ಧರಿಸಿದರು. ಹೆಸರಿಗೆ ಮಾತ್ರ ಮುತ್ತೈದೆಯಾಗಿರುವುದಕ್ಕಿಂತ ಡಾಣಾಡಂಗುರವಾದ ವೈಧವ್ಯವೇ ಮೈವೆತ್ತಂತೆ ಅವರು ಬಾಳಬೇಕಾಯಿತು. ಅವರನ್ನು ಸುವಾಸನಿ ಎನ್ನಬೇಕೋ ವಿಧವೆಯೆನ್ನಬೇಕೋ ಎಂದು ಚರ್ಚೆ ನಡೆಯಿತು. ಆಪ್ತೇಷ್ಟರು ತನ್ನನ್ನು ಎಷ್ಟೇ ಚೆನ್ನಾಗಿ ನೋಡಿಕೊಂಡರೂ ಧರ್ಮದ ಪ್ರಶ್ನೆ ಬಂದಾಗ ಅವರ ವರ್ತನೆ ಬೇರೆಯೇ ಆಗುತ್ತದೆ. ಕೊನೆಗೆ ತಾವೇ ಒಂದು ನಿರ್ಧಾರ ತೆಗೆದುಕೊಂಡು ತನ್ನ ಮಗನೊಡನೆ ತಿಲಕರಿದ್ದ ಊರಿಗೆ ಬಂದು ಬೇರೆ ವಾಸ್ತವ್ಯ ಹೂಡುತ್ತಾರೆ. ಗಂಡನೊಡನೆ ಹೊರಟ ಲಕ್ಷ್ಮೀದೇವಿಯನ್ನು ಜನರು ಮತಾಂತರ ಹೊಂದಿದವಳಂತೆಯೇ ಭಾವಿಸುತ್ತಾರೆ. ಧರ್ಮಾಂತರ ಹೊಂದಿದ ಜನಕ್ಕೆ ಸಿಗುವ ಅಸಡ್ಡೆ ಮತ್ತು ಪ್ರೇಮರಹಿತ ನಡವಳಿಕೆಯೇ ಅವರಿಗೆ ಸಿಕ್ಕಿದ್ದು.

ಇದಕ್ಕೆ ಪ್ರತಿಯಾಗಿ ರೆವರೆಂಡ್ ತಿಲಕರೂ ಮತ್ತು ಅವರ ಕ್ರಿಸ್ತೀಯ ಬಾಂಧವರೂ ಲಕ್ಷ್ಮೀಬಾಯಿಯವರ ನಗರ ವಾಸ್ತವ್ಯ ಸುಖರೂಪವಾಗಬೇಕೆಂದು ಪ್ರಯತ್ನಿಸಿದರು. ಇದೆಲ್ಲದರ ಪರಿಣಾಮದಿಂದ ಅವರ ಮನಸ್ಸು ತಮಗರಿಯದೆಯೇ ಧರ್ಮಾಂತರಕ್ಕೆ ಅನುಕೂಲವಾಗಿ ಮಾರ್ಪಟ್ಟಿರಬೇಕು. ಇಂಥದೊಂದು ದ್ವಿಧರ್ಮದ ಕುಟುಂಬದಲ್ಲಿ ಗಂಡನೊಬ್ಬ ಕ್ರಿಸ್ತೀಯನಾಗಿದ್ದು ಹೆಂಡತಿ ಮತ್ತು ಮಗ ಇವರಷ್ಟೇ ಹಿಂದೂಗಳಾಗಿ ಇರುವಂಥ ಅವಸ್ಥೆ ಕೆಲದಿನ ನಡೆದು ಬಂತು. ತಿಲಕರು ನಿರಾಕಾರ ಪರಮೇಶ್ವರನನ್ನು ಪ್ರಾರ್ಥಿಸುತ್ತಿದ್ದರೆ ಲಕ್ಷ್ಮೀಬಾಯಿ ದೇವಿ, ಗಣಪತಿ ಮುಂತಾದ ಎಲ್ಲ ದೇವರ ಪೂಜೆ ಮಾಡುತ್ತಿದ್ದರು. ಅವರು ತಮ್ಮ ಮಡಿ-ಮೈಲಿಗೆಗಳನ್ನು ತಮ್ಮಷ್ಟಕ್ಕೆ ನಡೆಸಿಕೊಂಡು ಬಂದರು.

ಆದರೆ ಪ್ರತಿಯೊಂದು ವಿಷಯಕ್ಕೂ ತಿಲಕರು ಆಗ್ರಹ ಹಿಡಿಯುವ ಸ್ವಭಾವದವರು. ಒಮ್ಮೆ ಮುಸಲ್ಮಾನನೊಬ್ಬ ತಂದ ನೀರನ್ನು ಹೆಂಡತಿ ಕುಡಿಯಬೇಕೆಂದು ಆಗ್ರಹಿಸುತ್ತಾರೆ. ಅದಕ್ಕೆ ಲಕ್ಷ್ಮಿದೇವಿ ಮೊದಲು ಪ್ರತಿಭಟಿಸಿದರೂ ನಂತರ ಗಂಡನ ಹಾದಿಗೇ ಸರಿಯುತ್ತರೆ. ನಾನಿನ್ನು ಜಾತಿ ಬೇಧವನ್ನೂ, ಮಡಿಮೈಲಿಗೆಯನ್ನೂ ಆಚರಿಸುವುದಿಲ್ಲವೆಂದೂ, ಸಂಯಮದಿಂದ ಹೇಳುತ್ತಾರೆ. ಧರ್ಮಾಂತರ ಹೊಂದಿದ ಮೇಲೆ ಮಾರ್ಪಟ್ಟ ಲಕ್ಷ್ಮಿಬಾಯಿಯೆಂದರೆ ಕ್ರಿಸ್ತನ ಪರೋಪಕಾರಿ ತತ್ವವನ್ನು ಆತ್ಮಗತ ಮಾಡಿಕೊಂಡ ಕಲ್ಪನೆ ಮತ್ತು ಪತಿಯನ್ನು ಅನುಸರಿಸುವುದೇ ಹಿತಕರ ಮಾರ್ಗವೆಂಬ ಶ್ರದ್ಧೆ, ಮಾಂಸಾಹಾರವನ್ನು ತ್ಯಜಿಸುವುದು ಒಂದು ಶ್ರೇಷ್ಠ ತತ್ವವಾಗಿದೆ ಎಂಬ ಹಿಂದೂ ಧರ್ಮದ ಯುಗಾನುಯುಗಗಳ ನಂಬಿಕೆ – ಇವುಗಳ ಸಮನ್ವಯದ ಪ್ರತೀಕವಾಗಿ ಕಂಡುಬರುತ್ತಾರೆ.

ಮೊದಲ ಭಾಷಣ: ಲಕ್ಷ್ಮೀಬಾಯಿಯವರ ಮೊದಲ ಸಾರ್ವಜನಿಕ ಭಾಷಣದ ದೃಶ್ಯ ಇಲ್ಲಿ ಮನೋಹರವಾಗಿ ಚಿತ್ರಿತವಾಗಿದೆ. ಅಹಮದ್ ನಗರದಲ್ಲಿ ದೀಪಾವಳಿಗೆ ‘ಐಕ್ಯ ಸಭಾ’ ಎನ್ನುವ ದೊಡ್ಡ ಸಭೆಯೊಂದು ಏರ್ಪಾಡಗಿತ್ತು. ಅದು ಪ್ರತಿ ವರ್ಷ ನಡೆಯುವ ಉತ್ಸವ. ಈ ಕಾರ್ಯಕ್ರಮಕ್ಕೆ ನಗರ, ಸೊಲ್ಲಾಪುರ, ಸಾತಾರೆ ಜಿಲ್ಲೆಗಳಿಂದ ಕ್ರೈಸ್ತ ಬಾಂಧವರು ಬಂದು ಭಾಗವಹಿಸುತ್ತಿದ್ದರು. ಅದೊಂದು ನಗರದ ಹಳೆಯ ದೇವಸ್ಥಾನ. ಕಿಕ್ಕಿರಿದು ತುಂಬಿ ಅದಕ್ಕೊಂದು ಜಾತ್ರೆಯ ಸ್ವರೂಪ ಬರುತ್ತಿತ್ತು. ತಮ್ಮ ಹೆಂಡತಿ ದೊಡ್ಡವಳಾಗಬೇಕೆಂಬ ಆಸೆಯಿದ್ದ ತಿಲಕರು ಅವಳು ಲೇಖಕಿ, ಕವಯಿತ್ರಿ, ಭಾಷಣಕಾರ್ತಿ – ಎಲ್ಲವೂ ಆಗಬೇಕೆಂದು ಆ ದಿಸೆಯಲ್ಲಿ ಪ್ರಯತ್ನಿಸುತ್ತಿದ್ದರು. ಎಂದೂ ಬೇರೆಯವರ ಭಾಷಣವನ್ನು ಕೇಳಲು ಹೋಗದ ಲಕ್ಷ್ಮಿಬಾಯಿಗೆ ಭಾಷಣ ಮಾಡಲು ತಿಲಕರು ಬರೆದುಕೊಟ್ಟಿರುತ್ತಾರೆ. ಅವರ ಪೂರ್ವತಯಾರಿಯೂ ಅದ್ಭುತವಾಗಿರುತ್ತದೆ. ಮೊದಲು ಮೂರು ನಾಲ್ಕು ಭಾಷಣಗಳಾದ ಮೇಲೆ ಲಕ್ಷ್ಮೀಬಾಯಿ ವೇದಿಕೆಯ ಮೇಲೆ ಮಾತನಾಡಲು ಹೋಗುತ್ತಾರೆ. ಆಗಷ್ಟೇ ಕ್ರೈಸ್ತ ಮತಕ್ಕೆ ಸೇರಿದ್ದ ಅವರ ವೇಷಭೂಷಣ ನತ್ತು, ಬುಗಡಿ, ಕುಂಕುಮ, ಕಚ್ಚೆಹಾಕಿದ ಸೀರೆ – ಹೀಗಿತ್ತು. ಅಲ್ಲಿ ನೆರೆದಿದ್ದ ಜನರ ಕಣ್ಣಿಗೆ ಇದೊಂದು ಹೊಸ ನೋಟವೇ. ಜನರ ಮುಂದೆ ನಿಂತ ಹತ್ತು ನಿಮಿಷಗಳಲ್ಲಿ ಒಂಭತ್ತು ನಿಮಿಷಗಳವರೆಗೆ ಅವರ ಬಾಯಿಂದ ಒಂದು ಪದವೂ ಹೊರಡುವುದಿಲ್ಲ. ಜನ ಕಾಯುತ್ತಲೇ ಇದ್ದರು. ಯಾರೋ ನೀರು ತಂದಿಟ್ಟರು. ಮತ್ತಾರೋ ಲವಂಗ ತಂದಿಟ್ಟರು. ನಿಜವೆಂದರೆ, ಅವರಿಗೆ ಗಂಟಲು ಆರಿರಲಿಲ್ಲ. ಕೈಯಲ್ಲಿ ಭಾಷಣದ ಚೀಟಿಯಿತ್ತು. ಆದರೆ ಮಾತೇ ಹೊರಡಲಿಲ್ಲ.

ಅವರ ಪರವಾಗಿ ಡಾ. ಹ್ಯೂಮರು ಕ್ಷಮಾಪಣೆ ಕೇಳಲು ಎದ್ದು ನಿಂತರು. ಕೂಡಲೇ ಲಕ್ಷ್ಮೀಬಾಯಿಗೆ ದಡ ದಡ ಎಂದು ಅಸ್ಖಲಿತವಾಗಿ ತಡೆಯಿಲ್ಲದೆ ಮಾತು ಹೊರಟಿತು. ಆನಂತರ ಅವರು ಹಲವಾರು ಸಭೆಗಳಲ್ಲಿ ಭಾಷಣ ಮಾಡಿದರೂ ಎಂದಿಗೂ ತಡವರಿಸಲಿಲ್ಲ. ಬಾಯಿ ಪಾಠ ಮಾಡಿಕೊಂಡು ಒಪ್ಪಿಸಲಿಲ್ಲ. ಆದರೆ ಅವರ ಸಭಾಕಂಪ ಹೋಗಿಸಿದ್ದಕ್ಕೆ ಮುಖ್ಯವಾಗಿ ಕ್ರೈಸ್ತ ಬಾಂಧವರನ್ನು ನೆನಸುತ್ತಾರೆ. ಅವರ ಮೊದಲ ಭಾಷಣದ ದಿನ ಒಂಭತ್ತು ನಿಮಿಷಗಳವರೆಗೆ ಸಹನೆಯಿಂದ , ಶಾಂತಿಯಿಂದ ಸಭಿಕರು ಕಾದಿದ್ದರಿಂದ ಲಕ್ಷ್ಮೀಬಾಯಿಯವರ ಸಂಕೋಚ ಹೋಯಿತು. ಕ್ರೈಸ್ತ ಸಮಾಜದವರು ಸಭೆಯ ನಡವಳಿಕೆಯನ್ನು ಪಾಲಿಸುವ ಶಿಸ್ತು ಅದ್ಭುತವಾಗಿದೆ. ಅಲ್ಲಿ ಸಹಾನುಭೂತಿಯಿದೆ; ಶಾಂತಸ್ವಭಾವವೂ ಇದೆ, ಎಂದು ಹೇಳುತ್ತಾರೆ.

ಒಮ್ಮೆ ಕ್ರೈಸ್ತ ಮತಕ್ಕೆ ಸೇರಿದ ಮೇಲೆ ಹೆಂಡತಿ ಮುಂದುವರಿಯುವ ರೀತಿ ತಿಲಕರಿಗೆ ದಂಗುಬಡಿಸುತ್ತದೆ. ಒಮ್ಮೆ ಅವರಿಲ್ಲದಾಗ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಭಂಗಿಯವಳ ಮನೆಗೆ ಲಕ್ಷ್ಮೀಬಾಯಿ ಹೋಗುತ್ತಾರೆ. ಅವಳೊಡನೆ ಸಮಾನವಾಗಿ ವರ್ತಿಸುತ್ತಾರೆ. ಅವಳು ಮಾಡಿ ತಂದ ಅಡುಗೆಯನ್ನು ಮನೆಯ ಆಳುಗಳು ತಿನ್ನದಿದ್ದರೂ ಲಕ್ಷ್ಮೀಬಾಯಿ ಮತ್ತು ಅವಳ ಮಕ್ಕಳು ತೆಗೆದುಕೊಂಡು ತಿನ್ನುತ್ತಾರೆ. ಸಮಾಜಕ್ಕೆ ತನ್ನಿಂದ ಏನಾದರೂ ಸೇವೆ ಸಲ್ಲಿಸಬೇಕು ಎಂಬ ಇಚ್ಛೆಯಿಂದ ಮೀರಜ್‍ನಲ್ಲಿ ನರ್ಸಿಂಗ್ ಕಲಿಯಲು ಸೇರುತ್ತಾರೆ. ಆದರೆ ಆ ತರಬೇತಿ ಯಶಸ್ವಿಯಾಗುವುದಿಲ್ಲ.

ನಾರಾಯಣ ವಾಮನ ತಿಲಕರು ಕ್ರಿಸ್ತನ ಮಹಿಮೆಯನ್ನು ಗುಣಗಾನ ಮಾಡುವ ಕ್ರಿಸ್ತಾಯನ ಎಂಬ ಮಹಾಕಾವ್ಯವನ್ನು ಮರಾಠಿಯಲ್ಲಿ ರಚಿಸಲು ಆರಂಭಿಸಿದ್ದರು. ಅದರ ಹತ್ತು ಅಧ್ಯಾಯಗಳನ್ನು ಪೂರೈಸುವಲ್ಲಿ 1919ರಲ್ಲಿ ಅವರು ತೀರಿಕೊಂಡರು. ಲಕ್ಷ್ಮೀಬಾಯಿಯವರು ಈ ಮಹಾಕಾವ್ಯಕ್ಕೆ ಇನ್ನುಳಿದ 64 ಅಧ್ಯಾಯಗಳನ್ನು ಬರೆದು ಪೂರ್ಣಗೊಳಿಸಿದರು. ಕವಿಯಾಗಿ, ಲೇಖಕಿಯಾಗಿ ಹಾಗೂ ಭಾಷಣಕಾರ್ತಿಯಾಗಿ ಪ್ರಸಿದ್ಧರಾದ ಲಕ್ಷ್ಮೀಬಾಯಿ 1933ರಲ್ಲಿ ಕವಿಸಮ್ಮೇಳನದ ಅಧ್ಯಕ್ಷತೆಯನ್ನು 1934ರಲ್ಲಿ ನಾಗಪುರದಲ್ಲಿ ನಡೆದ ಕ್ರಿಸ್ತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುತ್ತಾರೆ.

ಲಕ್ಷ್ಮೀಬಾಯಿ ತಿಲಕ್ ‘ಸ್ಮೃತಿಚಿತ್ರೆ’ಯನ್ನು ಬರೆಯಲು ಆರಂಭಿಸಿದ್ದು 1924ರಲ್ಲಿ. ಏಳು ವರ್ಷಗಳ ನಿರಂತರ ಬರವಣಿಗೆಯನ್ನು ಕೈಗೊಂಡರು. ಈ ಬರವಣಿಗೆಯು ಮೊದಲಿಗೆ ‘ನೆನಪುಗಳು’ ಎನ್ನುವ ಶೀರ್ಷಿಕೆಯಲ್ಲಿ ‘ಸಂಜೀವಿನಿ’ ಎನ್ನುವ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಮೊದಲ ಮೂರು ಭಾಗಗಳು 1934ರಲ್ಲೂ, ನಂತರ ನಾಲ್ಕನೆಯ ಭಾಗವು ಮರಣೋತ್ತರವಾಗಿಯೂ ಪ್ರಕಟವಾಯಿತು. ಈ ಪುಸ್ತಕ ಮೊದಲು ಪ್ರಕಟವಾದಾಗ ಇದಕ್ಕೆ ದಿಢೀರನೆ ಕ್ಲಾಸಿಕ್ ಪಟ್ಟ ಸಿಕ್ಕಿತು. ನಾಲ್ಕು ಭಾಗಗಳಲ್ಲಿ 1934 ರಿಂದ 1936ರಲ್ಲಿ ಪ್ರಕಟವಾಯಿತು. ಇದರಲ್ಲಿ ಲೇಖಕಿಯ ಪ್ರಾಮಾಣಿಕತೆ ಮತ್ತು ಜೀವನದ ಎಲ್ಲ ಕಷ್ಟಗಳನ್ನು ನೆನಪಿಸಿಕೊಳ್ಳುವಾಗಲೂ ಅದು ಗೋಳುಕರೆಯಾಗದೆ, ಅಪಾರ ಹಾಸ್ಯದ ಲೇಪನದಿಂದ ಮೂಡಿ ಬಂದಿರುವುದರಿಂದ ಓದಿಸಿಕೊಳ್ಳುವ ಗುಣ ಪಡೆದಿದೆ.

ಎನ್. ಗಾಯತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *