ನಮ್ಮ ಕಥೆ/ ಪಾತರದವರು – ಎನ್. ಗಾಯತ್ರಿ

ಪ್ರಧಾನ ಸಂಸ್ಕೃತಿಯ ಸ್ವಾರ್ಥದ ವೇದಿಕೆಯಲ್ಲಿ ಜನ್ಮ ಪಡೆದ ಸಾಮಾಜಿಕ ಪದ್ಧತಿ ‘ಪಾತರದವರು’. ಉತ್ತರ ಕರ್ನಾಟಕದ ಲಿಂಗಪ್ರತಿಷ್ಠೆಯ ಬಿಕ್ಕಟ್ಟಿನಿಂದ ಉಂಟಾಗಿರುವ ಮಹಿಳಾಸಂಬಂಧಿ ಸಮಸ್ಯೆಗಳಲ್ಲಿ ಪಾತರದವರೂ ಸಿಲುಕಿಕೊಂಡಿದ್ದಾರೆ. ಈ ಕುರಿತು ಸಂಶೋಧನೆ ನಡೆಸಿರುವ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ| ಶೈಲಜಾ ಹಿರೇಮಠ ಅವರ ಸಂಶೋಧನೆಯ ಸಂದರ್ಭದಲ್ಲಿ ಕೆಲವು ಪಾತರದವರು ತಮ್ಮ ಬದುಕಿನ ಅನುಭವಗಳನ್ನು ಅವರೊಂದಿಗೆ  ಹಂಚಿಕೊಂಡಿದ್ದಾರೆ. ಆ ಪಾತರದವರ ಜೀವನದ ಹಾಡು ಪಾಡಿನ ಕಥೆ ಇಲ್ಲಿದೆ.

ಪುರುಷರ ಹುಚ್ಚು ಕಾಮನೆಗಳ ಫಲವಾಗಿ ಲೈಂಗಿಕ ದಾಸಿಯರ ಹಲವಾರು ಸ್ವರೂಪಗಳು ನಮ್ಮ ಕಣ್ಣ ಮುಂದೆ ಕಾಣಸಿಗುತ್ತವೆ. ಈ ವೈವಿಧ್ಯಮಯ ಮಾದರಿಗಳು ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಹೇಗೆ ದೈಹಿಕವಾಗಿ ಶೋಷಣೆಗೊಳಗಾಗಿದ್ದಾಳೆ ಎನ್ನುವುದನ್ನು ತೆರೆದು ತೋರಿಸುತ್ತದೆ. ಲೈಂಗಿಕ ದಾಸಿಯರಂತಹ ವ್ಯವಸ್ಥೆಗೆ ಸಮಾಜ ಹಾಗೂ ಧರ್ಮಗಳ ಶಾಸನಬದ್ಧ ಅಧಿಕಾರದ ಒಪ್ಪಿಗೆಯೂ ಇದ್ದು ಈ ಪದ್ಧತಿಗಳು ಬಹುಕಾಲ ಉಳಿದು ಬಂದದ್ದೇ ಅಲ್ಲದೆ, ಈಗ ಶಾಸನದ ಮೂಲಕ ನಿಷೇಧ ತಂದರೂ ಅದರ ಛಾಯೆಗಳು ಪೂರ್ತಿ ನಶಿಸಿಹೋಗಿಲ್ಲ. ಸ್ತ್ರೀಯರ ದೃಷ್ಟಿಯಲ್ಲಿ ಮೈಮಾರುವ ವೃತ್ತಿ ಇದಾಗದಿದ್ದರೂ ಪುರುಷರ ಮೂಲಕ ಅದು ಮೈಮಾರುವ ಮತ್ತು ಅವರು ಭೋಗಿಸುವ ಒಂದು ವಿಕೃತ ವ್ಯವಸ್ಥೆಯಾಗಿ ಮಾರ್ಪಟ್ಟಿರುತ್ತದೆ. ಹೀಗಾಗಿ ಪುರುಷವ್ಯವಸ್ಥೆಯ ಮೂಲಕ ಅದೊಂದು ಶಾಶ್ವತ ವ್ಯವಸ್ಥೆಯಾಗಿ ಉಳಿಯಲು ಬಯಸುತ್ತದೆ.

ಉಂಡಳ್ಳಿಯ ಸೋಮನಾಥ ದೇವಾಲಯದಲ್ಲಿ ಸಂಗೀತ ಸೇವೆಯನ್ನು ಸಲ್ಲಿಸುತ್ತ, ಅಲ್ಲಿಯೇ ವಾಸಿಸುತ್ತಿದ್ದ ಪಾತರದವರನ್ನು ಲಕ್ಷ್ಮೇಶ್ವರದ ಬ್ರಾಹ್ಮಣರು ಒತ್ತಾಯದಿಂದ ಲಕ್ಷ್ಮೇಶ್ವರಕ್ಕೆ ಕರೆತಂದರು. ಈ ದೇವಾಲಯದ ಪಾತರದವಳಾದ ಸೀತಾಸಾನಿಗೆ ಯೌವ್ವನ ಕಳೆದು ವಯಸ್ಸು ಮುಪ್ಪಿನತ್ತ ಧಾವಿಸುತ್ತಿದ್ದಂತೆ ಅವಳ ಹಿರಿಯ ಮಗಳು 15 ವಯಸ್ಸಿನ ಅಲ್ಲಾಸಾನಿಯನ್ನು ಈ ದೇವಾಲಯದ ಪಾತರದವಳಾಗಲು ಅನಿವಾರ್ಯವಾಗಿ ಬಿಟ್ಟುಕೊಡಬೇಕಾಯಿತು. ಮಗಳನ್ನು ಪಾತದಾರದವಳನ್ನಾಗಿಸಲು ಇಷ್ಟವಿಲ್ಲದಿದ್ದರೂ, ಮಾಮ್ಲೇದಾರ ಒತ್ತಡ ತಂದಾಗ ಮಗಳ ಮದುವೆ ಕನಸು ಕಂಡಿದ್ದ ಸೀತಾಸಾನಿಗೆ ಹೊಟ್ಟೆಯಲ್ಲಿ ಬೆಂಕಿ ಹಾಕಿದಂತಾಗುತ್ತದೆ. ನಂತರ ಅವಳ ಮಗಳು ಆನಂದಸಾನಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಉಳಿದ ಮಕ್ಕಳಾದ ಬಚ್ಚಾಸಾನಿ, ಸಣ್ಣ ಸಾಬಾಸಾನಿಯರನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋಗಿ ಗಂಡಾ ಕಟ್ಟಿಸುತ್ತಾರೆ.

“ನನ್ನ ಹೆಸರು ಆನಂದಸಾನಿಯಂತೆ! ನನ್ನವ್ವ ಯಾಕೀ ಹೆಸರನ್ನು ಇಟ್ಟಳು? ನನಗೆ ಎಲ್ಲಿದೆ ಆನಂದ? ಮನತುಂಬ ನೋವೇ ಹೆಪ್ಪುಗಟ್ಟಿದೆ. ನನಗೆ ಮುದ್ದು ಮುದ್ದಾದ ಹೆಣ್ಣು ಮಕ್ಕಳು. ಒಂದಲ್ಲ! ಎರಡಲ್ಲ! ಏಳು! ದೇವರೆ, ನನ್ನ ಹೊಟ್ಟೆಯಿಂದೇಕೆ ಇವರನ್ನು ಹುಟ್ಟಿಸಿದೆ? ಅವಕ್ಕೆ ಮುಂಬರುವ ಕರಾಳ ಬದುಕು ಗೊತ್ತಿಲ್ಲ. ಹೇಳಿದರೂ ಅರ್ಥವಾಗುವುದಿಲ್ಲ. ಛೇ! ಅವರಿಗೇಕೆ ಅರ್ಥವಾಗಬೇಕು? ಅರ್ಥವಾಗಕೂಡದು. ಪರಿಹಾರ? ಅವರ ರೂಪಕ್ಕೇನು ಕೊರತೆ? ನಮ್ಮ ಜನಾಂಗದಲ್ಲಿ ಗಂಡುಗಳಿಲ್ಲವೇನು? ಮದುವೆ ಮಾಡಿದರಾಯಿತು? ಅದು ಅಷ್ಟು ಸುಲಭವಲ್ಲ. ಗೊತ್ತು. ಲಕ್ಷ್ಮೀಶ್ವರದ ಪ್ರಮುಖರ ಹಾಗೂ ಸೋಮನಾಥ ದೇವಸ್ಥಾನದ ಪುರೋಹಿತರ ಕರಾಳ ಕೈಗಳು ಅಡ್ಡಬರುತ್ತವೆ ಎಂಬುದು ಚೆನ್ನಾಗಿ ಗೊತ್ತು. ಅವರ ಹುಟ್ಟಿಗೆ ಕಾರಣನಾದ ಅವರಪ್ಪನೂ ಅದನ್ನು ತಡೆಯಲು ಬರುವುದಿಲ್ಲ. ಅಪ್ಪ ಎಂದು ನನ್ನ ಮಕ್ಕಳು ಹೊರಗಡೆ ಕರೆಯಕೂಡದಂತೆ. ಅವು ಬೆಳೆದಂತೆ ನಾಲ್ಕು ಗೋಡೆಗಳ ಮಧ್ಯೆಯೂ ಕರೆಯಬಾರದಂತೆ. ಅವನನ್ನು ನನ್ನ ಗಂಡನೆಂದು ಬಹಿರಂಗವಾಗಿ ಅನ್ನಕೂಡದಂತೆ. ಯಾಕೆಂದರೆ, ಸಾರ್ವಜನಿಕರೆದುರಿಗೆ ತಾಳಿ ಕಟ್ಟಿಲ್ಲವಲ್ಲ. ಆದರೂ ಇವನಿಗೆ ಕಟ್ಟಿಕೊಂಡ ಹೆಂಡತಿಯಂತೆ ನಿಷ್ಠಳಾಗಿರಬೇಕಂತೆ! ನನ್ನದೂ ಒಂದು ಜೀವನವೇ. ನನ್ನ ಕತ್ತಲು ಬದುಕಿನಂತೆ ಬೆಳದಿಂಗಳ ರೂಪದ ನನ್ನ ಯಾವ ಹೆಣ್ಣುಮಕ್ಕಳೂ ಜೀವನ ಸಾಗಿಸಕೂಡದು.” ಲಕ್ಷ್ಮೇಶ್ವರದ ಅಲ್ಲಾಸಾನಿಯ ಈ ಗೋಳಿನ ಕತೆ ಅವಳ ಬದುಕಿಗೇ ಕೊನೆಗೊಳ್ಳುವುದಿಲ್ಲ. ಅವಳ ಏಳೂ ಹೆಣ್ಣು ಮಕ್ಕಳು ಕಣ್ಣೀರಿನಿಂದ ಪ್ರತಿಭಟಿಸುತ್ತಿದ್ದರೂ ಅಸಹಾಯಕತೆಯಿಂದ ಪಾತರ ಬದುಕನ್ನು ಅಪ್ಪಿಕೊಂಡಿರುತ್ತಾರೆ.

ಆನಂದಸಾನಿಯನ್ನು ಕಂಬಕ್ಕೆ ಕಟ್ಟಿ, ಮಾಮ್ಲೆದಾರರ ಆಜ್ಞೆಯ ಮೇರೆಗೆ ಹುಬ್ಬಳ್ಳಿಯಲ್ಲಿ ಗಂಡಾಕಟ್ಟಿಸಿಕೊಂಡ ಬಚ್ಚಾಸಾನಿ, ಎರಡು ವರ್ಷಗಳವರೆಗೆ ಸಂಗೀತ ಶಿಕ್ಷಣ ಪಡೆದುಕೊಂಡು, ಕರ್ನಾಟಕದಲ್ಲಿ ಸಂಗೀತ ವಿದೂಷಿಯಾಗಿ ಮೆರೆದಳು. ಬಚ್ಚಾಸಾನಿಯಿಂದಲೇ ಲಕ್ಷ್ಮೇಶ್ವರ ಸಂಗೀತಕ್ಕಾಗಿ ಪ್ರಸಿದ್ಧಿಯನ್ನು ಪಡೆಯಿತು. ಮೊಟ್ಟ ಮೊದಲ ಬಾರಿಗೆ ‘ಸ್ತ್ರೀ ಸಂಗೀತ ನಾಟಕ ಮಂಡಳಿ’ಯನ್ನು ಸ್ಥಾಪಿಸಿದ ಶ್ರೇಯಸ್ಸು ಬಚ್ಚಾಸಾನಿಗೆ ಸೇರಬೇಕು. ಅವಳು ನಾಟಕದಲ್ಲಿ ಪುರುಷಪಾತ್ರಗಳನ್ನೇ ಮಾಡುತ್ತಿದ್ದಳು. ಅವಳು ಸ್ತ್ರೀಪಾತ್ರಗಳನ್ನು ಮಾಡಲೇ ಇಲ್ಲ. ಅವಳ ಏಳು ಸೋದರಿಯರೂ ಈ ತಂಡದಲ್ಲಿದ್ದರು. ಬಾಗಿಲು ಕಾಯುವವರಿಂದ ಹಿಡಿದು ನಾಟಕದ ಎಲ್ಲ ಪಾತ್ರಗಳನ್ನು ಸ್ತ್ರೀಯರೇ ನಿಭಾಯಿಸುತ್ತಿದ್ದರು. ಪುರುಷರ ಹಿಡಿತದಲ್ಲಿ ರಂಗಭೂಮಿಯಿದ್ದ ಆ ಕಾಲದಲ್ಲಿ ತನ್ನ ಕುಟುಂಬದವರ ಜೊತೆ ಶಿಷ್ಯಬಳಗವನ್ನು ಕಟ್ಟಿಕೊಂಡು ‘ಸ್ತ್ರೀ ಸಂಗೀತ ನಾಟಕ ಮಂಡಳಿ’ಯಂತಹ ಹೊಸ ಪ್ರಯೋಗವನ್ನು ಮಾಡಿದ ಬಚ್ಚಾಸಾನಿಯ ಸಾಹಸ ಅತ್ಯಂತ ಶ್ಲಾಘನೀಯವಾದುದು.

“ನೃತ್ಯ ಮಾಡಕ್ಕ ಎಷ್ಟು ಸಾಧನಾ ಮಾಡಿನಂತ, ಎಷ್ಟು ತ್ಯಾಗ ಮಾಡಿನಂತ ಈ ಜನಕ್ಕೇನು ಗೊತ್ತೈತಿ? ಅವರಿವರನ್ನು ನೋಡ್ತಾ ತುಟಿ ಪಿಟಿ ಪಿಟಿಸುತ್ತಾ ದೇವರಿಗೆ ಹೇಳುವ ಸ್ತೋತ್ರಕ್ಕಿಂತಲೂ ಆಳವಾದ ತನ್ಮಯತೆಯಿಂದ ಮಾಡುವ ನನ್ನ ನೃತ್ಯವೇ ಶ್ರೇಷ್ಠವಾದುದು. ದೇವ್ರಿಗೆ ನೃತ್ಯ ಸೇವಾ ಮಾಡಿದ್ರೆ ಪುಣ್ಯ ಬರ್ತದ ಅಂತ ಇದs ದೊಡ್ಡ ಮಂದಿ ಹೇಳೂದಿಲ್ಲಾ? ಅವ್ರಿಗೆ ಪುಣ್ಯ ಬ್ಯಾಡಾಗಿದೆಯೇನು?” ಎನ್ನುತ್ತಾಳೆ, ಮಧುಕೇಶ್ವರದ ರಂಗಾಸಾನಿ.

ತಾನು ವಿದ್ಯೆ ಕಲಿತ ಕಷ್ಟವನ್ನು ಬಿಚ್ಚಿ ಹೇಳುವ ಲಕ್ಷ್ಮೇಶ್ವರದ ಅಕ್ಕಾ ತಾಯಿ ಅಲ್ಲಾಸಾನಿಯ ಮಾತುಗಳನ್ನು ಕೇಳಿ: “ ನನಗ ಸಂಗೀತ ಕಲಿಸಿದ ಗುರು ಅಂದ್ರ ನಮ್ಮವ್ವ ಅಲ್ಲಾಸಾನಿನs. ನಸಿಕಿನ್ಯಾಗ ನಾಕ ಗಂಟೇಕ ಸಂಗೀತ ತಾಲೀಮಿಗಂತ ಎಬ್ಬಿಸಿ ಕೂಡಸಾಕಿ. ನನಗರ ಸಕ್ರಿನಿದ್ದಿ ಹತ್ತಿರತಿತ್ತು. ಏಳಲಾಕ ಮನಸಿಲ್ದ ಏನರ ಹಠಾ ಮಾಡಿ ಹೊಡಮಳ್ಳಿ ಮಕ್ಕೊಳಾಕ ಹೋದ್ರ, ನನಗ ಲತ್ತಿ ಏಟಿ ಖಾಯಂ ಅಂತ ತಿಳಿಬೆಕು. ನನಗರ ಆಗ ಎಷ್ಟು ವರ್ಷ ವಯಸ್ಸಾ? ಹೆಚ್ಚೆಂದ್ರ ಏಳವರ್ಷದಾಕಿ ಇದ್ನಿ. ನನಗ ತಿಳಿದ್‍ಹಂಗ ನಾ ನನ್ನ ಏಳವರ್ಷ ವಯಸ್ಸಿನಿಂದ ಹದಿನೆಂಟು ವರ್ಷ ವಯಸ್ಸಿನತನಕ ಒಂದಿನಾರ ಬೆಳಗಾ ಮುಂಜಾನಿ ಚೆಂದಕ ನಿದ್ದಿ ಮಾಡ್ಲಿಲ್ಲಾ. ದೀಪ ಹಚ್ಚು ವ್ಯಾಳೆಕ್ಕೂ ಒಂದೆರಡ ತಾಸ ಕೂಡಿಸಿ ಹಾಡಾಕ ಹಚ್ಚತಿದ್ಲು. ಆ ವ್ಯಾಳೆಕ್ಕ ನನ್ನ ವಾರಿಗಿ ಗೇಳತೇರು ಆಟಕ್ಕ ಕರಿಯಾಕ ಬಂದ್ರೂ ನಮ್ಮವ್ವ ನನ್ನ ಕಳಸ್ತಿರಲಿಲ್ಲ.”

ಬೆಳಗಾಂ ಜಿಲ್ಲೆಯ ಸಂಕೇಶ್ವರದ ಶಂಕರಲಿಂಗ ದೇವಸ್ಥಾನಕ್ಕೆ ಒಲ್ಲದ ಮನಸ್ಸಿನಿಂದ ಸೇವೆ ಸಲ್ಲಿಸಿದ ಗೊಹರ್ ಜಾನ್ ಕಲಾವಂತ ಹಲವಾರು ಸಾಮಾಜಿಕ ಅಪಮಾನಗಳನ್ನು ಎದುರಿಸಿ, ಬದುಕನ್ನು ನೋವಿನಿಂದ ಬಾಳಿದವಳು. ತಾಯಿಯನ್ನು ಚಿಕ್ಕಂದಿನಲ್ಲಿಯೇ ಕಳೆದುಕೊಂಡು ಇಳಿವಯಸ್ಸಿನ ಅಜ್ಜಿ ತಾರಾಸಾನಿಯ ಆಶ್ರಯದಲ್ಲಿ ಬೆಳೆದ ಗೊಹರ್ ಜಾನ್‍ಳ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಗೊಹರ್ ಜಾನ್‍ಗೆ ಐದು ವರ್ಷ ವಯಸ್ಸು ತುಂಬಿದಾಗಲೇ ಅಜ್ಜಿಯ ತಾಲೀಮು ಆರಂಭವಾಯಿತು. ಬಾಲ್ಯದ ಆಟ, ಸ್ವಚ್ಛಂದತೆ ಎಲ್ಲವೂ ದೂರವಾಯಿತು. ಪಂಜರದಲ್ಲಿಯ ಗಿಳಿಮರಿಯಂತೆ ಶಂಕರಲಿಂಗ ದೇವಸ್ಥಾನಕ್ಕೆ ಸೇವೆ ಪ್ರಾರಂಭಿಸಿದಳು. ಒಂಭತ್ತರ ಕಿರಿವಯಸ್ಸಿನಲ್ಲಿ ಅವಳಿಗೆ ಪಾತರದ ವಿಧಿಯೂ ಮುಗಿದು ಹೋಯಿತು. ಹೇಗೋ ಹೋರಾಡಿ ಕಷ್ಟಪಟ್ಟು ಹತ್ತನೆಯ ತರಗತಿ ಪಾಸಾದಳು. ಮನೆಯ ಆರ್ಥಿಕ ಅಡಚಣೆಯನ್ನು ನೀಗುವುದಕ್ಕಾಗಿ ಒಲ್ಲದ ಮನಸ್ಸಿನಿಂದ ದೇವಾಲಯದ ಸೇವೆ ಮುಂದುವರಿಸುತ್ತಿದ್ದಳು.

ಪ್ರತಿವರ್ಷ ಗೌರಿ ಹುಣ್ಣಿಮೆಯಂದು ನಡೆಯುವ ನೀಲಗಂಗಾ ಜಾತ್ರೆಯಲ್ಲಿ ಚತುರ್ಥಿಯಂದು ಪಾತರದವರಿಂದ ರಾತ್ರಿ ಸಂಗೀತ ಸೇವೆ ನಡೆಯುತ್ತದೆ. ಅದಕ್ಕೆ ‘ಪಾನ್ ಸುಪಾರಿ’ ಕಾರ್ಯಕ್ರಮ ಎನ್ನುತ್ತಾರೆ. ನೀಲಗಂಗಾ ದೇವಸ್ಥಾನದ ಹೊರಾಂಗಣದ ಕೆಳಗಡೆಯಲ್ಲಿ , ಗರ್ಭಗುಡಿಗೆ ಎದುರಾಗಿ  ಫಯಾಜ್‍ಳು ಕುಳಿತು ಹಾಡಬೇಕು. ಅಲ್ಲಿ ಅವಳ ಜೊತೆಗೆ ಯಾವ ಮನೆತನಸ್ಥ ಹೆಣ್ಣುಮಕ್ಕಳು ಕುಳಿತುಕೊಳ್ಳುವುದಿಲ್ಲ. ಊರಿನ ಗಣ್ಯರೆಲ್ಲರ ಮುಂದೆ ಕುಳಿತು ಭಯಭಕ್ತಿಯಿಂದ ಫಯಾಜ್ ತನ್ಮಯತೆಯಿಂದ ಹಾಡುತ್ತಿರುವಾಗ ಅವಳು ಅವರೆಲ್ಲರ ದೃಷ್ಟಿಯ ಕೇಂದ್ರಬಿಂದುವಾಗಿರುತ್ತಿದ್ದಳು. ಇದು ತೋರಿಕೆಗೆ ಧಾರ್ಮಿಕ ಕಾರ್ಯಕ್ರಮವಾಗಿ ಕಂಡರೂ ಅದರ ಮುಖ್ಯ ಉದ್ದೇಶ ಊರಿನ ಗಣ್ಯರನ್ನು, ಜನಸಾಮಾನ್ಯರನ್ನು ತೃಪ್ತಿಗೊಳಿಸುವುದೆ ಆಗಿತ್ತು. ಈ ಕಾರ್ಯಕ್ರಮದಲ್ಲಿ ಸಂಗೀತದ ಜೊತೆಗೆ ನೃತ್ಯವೂ ನಡೆಯುತ್ತಿತ್ತು. ಈ ಕಾರ್ಯಕ್ರಮ ಮಧ್ಯರಾತ್ರಿಗೆ ಆರಂಭವಾಗಿ ನಸುಕಿನ ಜಾವದಲ್ಲಿ ಕೊನೆಗೊಳ್ಳುತ್ತಿತ್ತು.

ಸಿಂದಗಿ ನೀಲಗಂಗಮ್ಮ ದೇವಸ್ಥಾನದಲ್ಲಿ ಸಂಗೀತ ಸೇವೆ ಸಲ್ಲಿಸಿದ ಮನ್ನುಮಾ, ಸಂಗೀತದಲ್ಲಿ ಮಹಾನ್ ಸಾಧನೆಯನ್ನು ಸಾಧಿಸಿಯೂ ತೆರೆಮರೆಯಲ್ಲಿ ಉಳಿದುಕೊಳ್ಳಬೇಕಾದ ಕಟುವಾಸ್ತವತೆಯನ್ನು ಬಿಚ್ಚಿಡುವ ವ್ಯಥೆ ಅವಳದು. ಆಕೆಯನ್ನು ಉಪಪತ್ನಿಯಾಗಿಸಿಕೊಂಡವನು ಹಲವರೆದುರಿಗೆ ನೀಡುವ ಸಂಗೀತ ಕಲೆ ಅಸಹ್ಯವೆಂದು ಸಂಗೀತ ಸಾಧನೆಯ ಆಕೆಯ ಹಂಬಲವನ್ನು ಮೊಟಕುಗೊಳಿಸಿದವನು. ಹೊರಗಡೆಯ ನೋಟಕ್ಕೆ ಬಂಧನವಿಲ್ಲದಂತೆ ಕಂಡರೂ ಆಕೆಯ ಪ್ರತಿಭೆಯ ಅಭಿವ್ಯಕ್ತಿಗೆ ಸಂಕೋಲೆಗಳಂತೂ ಇದ್ದವು. ಇವೆಲ್ಲವನ್ನು ಮೀರಿ ಆಕೆ ಬರೋಡಾ, ಗ್ವಾಲಿಯರ್, ಕೊಲ್ಹಾಪುರ ಮುಂತಾದ ಹಲವಾರು ಊರುಗಳಲ್ಲಿನ ಮಹಾರಾಜರ ಎದುರಿಗೆ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಳು.

‘ಗೆಜ್ಜೆ ಪೂಜೆ’ ಅಥವಾ ‘ಗಂಡಾ ಕಟ್ಟುವ’ ಆಚರಣೆಯ ಮೂಲಕ ಕುಣಿತವನ್ನು, ಇಲ್ಲವೆ ಹಾಡುಗಾರಿಕೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡವರನ್ನು ‘ಪಾತರದವರು’ ಎಂದು ಕರೆಯುತ್ತಾರೆ. ಎಲ್ಲಮ್ಮನ ಹೆಸರಲ್ಲಿ ಲೈಂಗಿಕ ಸೇವೆಯನ್ನು ನಿರ್ವಹಿಸುತ್ತಿರುವ ಜೋಗತಿಗಳು ಕೆಳಜಾತಿಗಳಿಗೆ ಸೇರಿದವರಾದರೆ, ಪಾತರದವರು ಮಧ್ಯಜಾತಿಗಳಿಗೆ ಸೇರಿದವರು. ಸ್ಪರ್ಶ, ದರ್ಶನಕ್ಕೆ ಅರ್ಹತೆಯುಳ್ಳ ಮಧ್ಯಮಜಾತಿಯವರೇ ಉನ್ನತ ವರ್ಗದವರ ದೇವಾಲಯದಲ್ಲಿ ಸಂಗೀತ, ನೃತ್ಯ ಸೇವೆಯನ್ನು ಸಲ್ಲಿಸಲರ್ಹವಾಗಿರುತ್ತಾರೆ. ಲೈಂಗಿಕದಾಸಿಯರ ಸಾಂಸ್ಕೃತಿಕ ಪ್ರಸರಣದಲ್ಲಿ  ಈ ರೀತಿ ವಿಭಿನ್ನತೆ ಕಂಡುಬಂದರೂ ಅವರ ಶೋಷಣೆಯ ಮೂಲ ದೇಹವೇ ಆಗಿದೆಯೆಂಬುದು ಈ ಅಧ್ಯಯನಗಳಿಂದ ಕಂಡುಬರುತ್ತದೆ.

ಡಾ| ಶೈಲಜ ಹಿರೇಮಠ ಅವರು ತಮ್ಮ ಕ್ಷೇತ್ರಕಾರ್ಯದ ಭಾಗವಾಗಿ ಹಲವು ಪಾತರದವರ ಸಂದರ್ಶನಗಳನ್ನು ನಡೆಸಿ ಅವರ ಹೃದಯಾಂತರಾಳದಲ್ಲಿ ಗುಪ್ತವಾಗಿ ಹರಿಯುತ್ತಿದ್ದ ನೋವಿನ ಲಯವನ್ನು ಗುರುತಿಸಿದ್ದಾರೆ. ಈ ಮೂಲಕ ಭಾರತೀಯ ಸಂಸ್ಕೃತಿಯಲ್ಲಿನ ವಿಕೃತಿಯನ್ನು ಹೊರಗೆಡುವುತ್ತಾ ಪಾತರದವರ ಬದುಕಿನ ವಿಭಿನ್ನ ಮಾದರಿಗಳನ್ನು ಈ ಕೃತಿಯಲ್ಲಿ ವಿಶ್ಲೇಷಣೆಗೆ ಗುರಿಪಡಿಸಿದ್ದಾರೆ. “ಪಾತರದವರ ಸೇವೆ ನಿಷೇಧಕಾಯ್ದೆಗೆ ಅನುಗುಣವಾಗಿ ‘ಪಾತರ ಪದ್ಧತಿ’ ಹಲವಾರು ಕಡೆ ಸಂಪೂರ್ಣವಾಗಿ ನಿಂತುಹೋಗಿದ್ದರೂ ಇನ್ನು ಕೆಲವು ಕಡೆ ಬಲವಾಗಿ ಉಳಿದುಕೊಂಡು ಬಂದಿದೆ. ಅದಕ್ಕಾಗಿ ಪಾತರದವರನ್ನು ಎಚ್ಚರಗೊಳಿಸುವ ಮೂಲಕ ಸ್ತ್ರೀಯರ ಕುಳಿತಿರುವ ನಿಲುವುಗಳನ್ನು ಬದಲಾಯಿಸುವುದು ನಮ್ಮ ಪ್ರಧಾನ ಕಾಳಜಿಯಾಗಬೇಕು” ಎನ್ನುವ ಈ ಪುಸ್ತಕದ ಕರ್ತೃ ಡಾ| ಶೈಲಜ ಹಿರೇಮಠ ಅವರ ಉದ್ದೇಶ ಮನನೀಯವಾದದು.

ಎನ್. ಗಾಯತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ನಮ್ಮ ಕಥೆ/ ಪಾತರದವರು – ಎನ್. ಗಾಯತ್ರಿ

  • May 6, 2019 at 12:06 pm
    Permalink

    “ಪಾತರದವರು” ಲೇಖನ ಹೃದಯಸ್ಪರ್ಶಿಯಾಗಿತ್ತು…ಉತ್ತರ ಭಾರತದಲ್ಲಿ ಈ ವೃತ್ತಿಯಲ್ಲಿರುವವರನ್ನು “ಬಾಯಿಜಿಗಳು” ಅಂತ ಕರೀತಾರೆ ಅನ್ಸತ್ತೆ. ಅವರ ಬಾಳಿನ ನೋವನ್ನು ಕೇಳಿ ಮನಸ್ಸು ಭಾರವಾಯಿತು…

    Reply

Leave a Reply

Your email address will not be published. Required fields are marked *